ADVERTISEMENT

PV Web Exclusive | ಒಂದು ಎಕರೆಯಲ್ಲಿ 673 ಮಾವಿನ ಮರಗಳು...!

‘ನಿಖರ ಕೃಷಿ’ – ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ ಮಾವು ಕೃಷಿ

ಗಾಣಧಾಳು ಶ್ರೀಕಂಠ
Published 15 ಅಕ್ಟೋಬರ್ 2020, 4:41 IST
Last Updated 15 ಅಕ್ಟೋಬರ್ 2020, 4:41 IST
ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ ಬೆಳೆದ ಮಾವಿನ ತೋಟ
ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ ಬೆಳೆದ ಮಾವಿನ ತೋಟ   
""
""
""
""
""

ತೋಟಗಾರಿಕೆಯಲ್ಲಿ ಹಣ್ಣಿನ ಮರಗಳನ್ನು ಒತ್ತೊತ್ತಾಗಿ ಬೆಳೆಸುವ ‘ಹೈಡೆನ್ಸಿಟಿ ಕೃಷಿ ಪದ್ಧತಿ‘ ಅಲ್ಲಲ್ಲಿ ಚಾಲ್ತಿಯಲ್ಲಿದೆ. ಇಲ್ಲೊಬ್ಬರು ನಿವೃತ್ತ ವಿಜ್ಞಾನಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಅಲ್ಟ್ರಾ ಹೈಡೆನ್ಸಿಟಿ‘ ಪದ್ಧತಿಯಲ್ಲಿ ಒಂದು ಎಕರೆಯಲ್ಲಿ 673 ಮಾವಿನ ಮರಗಳನ್ನು ಬೆಳೆಸಿದ್ದಾರೆ. ಅಷ್ಟೇ ಅಲ್ಲ, ಕಾಯಿಗಳಿಗೆ ‘ಫ್ರೂಟ್‌ ಬ್ಯಾಗ್‌‘ ತೊಡಿಸಿದ್ದಾರೆ. ಮಾವಿನ ಕೃಷಿಯಲ್ಲಿ ಇದೊಂದು ಹೊಸ ಪ್ರಯತ್ನ.

***

ಒಂದು ಎಕರೆಯಲ್ಲಿ ಎಷ್ಟು ಮಾವಿನ ಮರಗಳನ್ನು ಬೆಳೆಸಬಹುದು?

ADVERTISEMENT

ಅರವತ್ತು, ಎಪ್ಪತ್ತು, ನೂರು, ನೂರೈವತ್ತು, ಇನ್ನೂರು... ನೋ... ನೋ... ಇದಕ್ಕಿಂತ ಹೆಚ್ಚು ಮರಗಳನ್ನು ಬೆಳೆಸಲು ಸಾಧ್ಯವಿಲ್ಲ, ಅಂತೀರಾ?

‘ಖಂಡಿತಾ ಸಾಧ್ಯವಿದೆ. ಬರೀ ಇನ್ನೂರಲ್ಲ, ಆರನೂರಕ್ಕೂ ಹೆಚ್ಚು ಮಾವಿನ ಮರಗಳನ್ನು ಬೆಳೆಸಬಹುದು‘ ಎನ್ನುತ್ತಾರೆ ನಿವೃತ್ತ ವಿಜ್ಞಾನಿ ಡಾ.ಪಿ.ಚೌಡಪ್ಪ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪದ ಕಮಲೂರಿನಲ್ಲಿನ ತಮ್ಮ ಜಮೀನಿನಲ್ಲಿ ಎಕರೆಗೆ 673 ಮಾವಿನ ಮರಗಳಂತೆ, 10 ಎಕರೆಯಲ್ಲಿ ಮಾವಿನ ಕೃಷಿ ಮಾಡುತ್ತಿದ್ದಾರೆ. ಅತಿ ಒತ್ತೊತ್ತಾಗಿ ಮಾವಿನ ಮರಗಳನ್ನು ಬೆಳೆಸುವ ಈ ವಿಧಾನಕ್ಕೆ ‘ಅಲ್ಟ್ರಾ ಹೈಡೆನ್ಸಿಟಿ ತಂತ್ರಜ್ಞಾನ‘ ಎನ್ನುತ್ತಾರೆ ಅವರು. ಸದ್ಯ ಅವರ ಮಾವಿನ ತೋಟದಲ್ಲಿ ಕೇಸರ, ಆಲ್ಫಾನ್ಸೊ ತಳಿಗಳಿವೆ. ಇದೇ ಜಮೀನಿನ ಸ್ವಲ್ಪ ಭಾಗದಲ್ಲಿ ಇದೇ ವಿಧಾನದಲ್ಲಿ ಗೋಡಂಬಿ ಮರಗಳನ್ನು ಬೆಳೆಸಿದ್ದಾರೆ.

2015ರಿಂದ ಆರಂಭವಾದ ಈ ಹೊಸ ಪದ್ಧತಿಯ ಮಾವಿನ ಕೃಷಿ, ಕಳೆದ ವರ್ಷದಿಂದ ಫಲ ಕೊಡಲು ಆರಂಭಿಸಿದೆ.ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದ ಅವರು ಕೆಲವು ತಿಂಗಳ ಹಿಂದೆ ನಿವೃತ್ತಿಯಾದರು. ಈಗ ಪೂರ್ಣ ಪ್ರಮಾಣದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಲಿನ ನಡುವೆ ಅಂತರ

ಹೀಗಿದೆ ವಿನ್ಯಾಸ..

ಸಾಮಾನ್ಯ ಪದ್ಧತಿಯಲ್ಲಿ ಸಾಲಿನಿಂದ ಸಾಲಿಗೆ 8 ಮೀಟರ್ ಮತ್ತು ಗಿಡದಿಂದ ಗಿಡಕ್ಕೆ 10 ಮೀಟರ್ ಅಂತರದಲ್ಲಿ ಎಕರೆಗೆ 60 ರಿಂದ 70 ಮಾವಿನ ಗಿಡಗಳನ್ನು ಬೆಳೆಸುವುದು ವಾಡಿಕೆ. 5 ಮೀ X 5 ಮೀ ಅಂತರದಲ್ಲಿ ಒಂದು ಎಕರೆಗೆ 200 ಗಿಡಗಳು, 2 ಮೀ X 4 ಮೀ ಅಂತರದಲ್ಲಿ 500 ಮಾವಿನ ಗಿಡಗಳನ್ನು ಕೂರಿಸುವರೂದ್ದಾರೆ. ಈ ತಂತ್ರಜ್ಞಾನಕ್ಕೆ ಹೈಡೆನ್ಸಿಟಿ ಪದ್ಧತಿ ಎನ್ನುತ್ತಾರೆ.ಕೊಯಮತ್ತೂರು ಭಾಗದಲ್ಲಿ ಕಂಪನಿಯೊಂದು ಹೈಡೆನ್ಸಿಟಿ ವಿಧಾನದಲ್ಲಿ ಮಾವು ಬೆಳೆಸಿದ್ದನ್ನು ನೋಡಿದ್ದೆ. ಚೌಡಪ್ಪ ಅವರು ಇನ್ನೊಂದು ಹೆಜ್ಜೆ ಮುಂದಿಟ್ಟು 3 ಮೀಟರ್ X 2 ಮೀಟರ್ ಅಳತೆಯಲ್ಲಿ ಒಂದು ಎಕರೆಯಲ್ಲಿ 673 ಮಾವಿನ ಮರಗಳನ್ನು ಬೆಳೆಸಿದ್ದಾರೆ.

ಮೊದಲ ವರ್ಷ...

ಮೊದಲ ವರ್ಷ, ಗಿಡ ನಾಟಿ ಮಾಡಿದಾಗಿನಿಂದ ಮರವಾಗುವವರೆಗೂ ಮೂರು ಹಂತಗಳಲ್ಲಿ ಪ್ರೂನಿಂಗ್ (ರೆಂಬೆಗಳನ್ನು ಸವರುವುದು) ಮಾಡಿದ್ದಾರೆ. ಗಿಡ ನಾಟಿ ಮಾಡಿದ ಎರಡು ತಿಂಗಳಿನಿಂದ ಆರಂಭವಾದ ಪ್ರೂನಿಂಗ್‌, ಎರಡು – ಮೂರು ತಿಂಗಳಿಗೊಮ್ಮೆ, ಕೊಂಬೆಗಳ ಬಲಿಯುವಿಕೆ ಗಮನಿಸಿ, ಮೂರು ಹಂತಗಳಲ್ಲಿ (ಪ್ರೈಮರಿ, ಸೆಕೆಂಡರಿ ಮತ್ತು ಟರ್ಶಿಯರಿ) ರೆಂಬೆಗಳನ್ನು ಕತ್ತರಿಸಿದ್ದಾರೆ. ರೆಂಬೆ ಸವರುವ ಈ ಕ್ರಮ ಗಮನಿಸಿದರೆ, ಕೌಶಲದ ಅಗತ್ಯವಿದೆ ಎಂದು ಎನ್ನಿಸುತ್ತದೆ.

ಈಪ್ರೂನಿಂಗ್ ಅವಧಿಯಲ್ಲಿ ಪ್ರತಿ ಮರಕ್ಕೆ ಹನಿನೀರಾವರಿ ಪದ್ಧತಿ‌ ಮೂಲಕ ಒಂದು ವಾರಕ್ಕೆ ಪ್ರತಿ ಗಿಡಕ್ಕೆ 12 ಲೀಟರ್‌ ನೀರು ಪೂರೈಕೆ. ನಂತರ ವೆಂಚುರಿ ಬಳಸಿ, ಪ್ರತಿ ಎಕರೆಗೆಡ್ರಿಪ್‌ ಮೂಲಕವೇ 1 ಕೆ.ಜಿ ಯೂರಿಯಾ, ಅರ್ಧ ಲೀಟರ್ ಫಾಸ್ಪಾರಿಕ್ ಆಸಿಡ್ ಮತ್ತು ಅರ್ಧ ಕೆ.ಜಿ ಮ್ಯೂರೇಟ್‌ಪೊಟ್ಯಾಷ್ ಗೊಬ್ಬರಗಳನ್ನು ಉಣಿಸಿದ್ದಾರೆ. ಇದನ್ನು ಫರ್ಟಿಗೇಷನ್‌ ಎನ್ನುತ್ತಾರೆ. ‘ಅಲ್ಟ್ರಾ ಹೆಡೆನ್ಸಿಟಿಯಲ್ಲಿ ಪ್ರೂನಿಂಗ್ ಹಾಗೂ ಫರ್ಟಿಗೇಷನ್ ಬಹಳ ಪ್ರಮುಖವಾದ ಪ್ರಕ್ರಿಯೆ‘ ಎನ್ನುತ್ತಾರೆ ಚೌಡಪ್ಪ. ಇದು ಪ್ರತಿ ವರ್ಷ ಪ್ರತಿ ಗಿಡಕ್ಕೆ ಮಾಡಬೇಕಾದ ಆರೈಕೆ. ಈ ಪೋಷಣೆ, ನಿರ್ವಹಣೆಯಲ್ಲಿ ಬೆಳೆದ ಗಿಡಗಳು ಎರಡು ವರ್ಷಗಳಲ್ಲಿ ಮರಗಳಾದವು. ಅವುಗಳ ಕೆನಾಪಿಯೂ(ಮರದ ಮೇಲ್ಭಾಗ/ನೆತ್ತಿ) ದೊಡ್ಡದಾಯಿತು. ಕೆನಾಪಿ ವಿಸ್ತಾರವಾದಂತೆ ಹಾಗೂ ಕಾಂಡ ಎತ್ತರಕ್ಕೆ ಬೆಳೆದಂತೆ, ಮೇಲ್ಭಾಗವನ್ನು ಕತ್ತರಿಸುತ್ತಾ, ಏಳು ಅಡಿಗಳಿಗಿಂತ ಎತ್ತರ ಬೆಳೆಯದಂತೆ ನಿಯಂತ್ರಿಸಿದರು.

ಮಾವಿನ ಕಾಯಿಗಳಿಗೆ ‘ಫ್ರೂಟ್ ಬ್ಯಾಗ್‘ ತೊಡಿಸಿರುವ ದೃಶ್ಯ

ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಗಿಡದ ಸುತ್ತ (ಕಾಂಡದಿಂದ 20 ಸೆಂ.ಮೀ ದೂರದಲ್ಲಿ) ನಾಲ್ಕು ಚಿಕ್ಕ ಗುಂಡಿಗಳನ್ನು ಮಾಡಿ, ಪ್ರತಿ ಗುಂಡಿಗೆ ಅರ್ಧ ಲೀಟರ್‌ನಂತೆ, 2 ಲೀಟರ್ ಪಾಕ್ಲೊಬುಟ್ರೊಜೋಲ್‌ ದ್ರಾವಣ ಪೂರೈಕೆ ಮಾಡಿದರು(ಒಂದು ಸಾವಿರ ಲೀಟರ್ ನೀರಿಗೆ 2 ಲೀಟರ್‌ಪಾಕ್ಲೊಬುಟ್ರೊಜೋಲ್‌ ದ್ರಾವಣ ಬೆರೆಸಿದ ಮಿಶ್ರಣ). ಇದು ಮರಗಳು ಎತ್ತರವಾಗಿ ಬೆಳೆಯುವುದನ್ನು ನಿಯಂತ್ರಿಸುತ್ತದೆ ಎಂಬುದು ಅವರ ವೈಜ್ಞಾನಿಕ ವಿವರಣೆ.

ಎರಡನೇ ವರ್ಷಕ್ಕೇ ಫಸಲು..

ಪ್ರತಿ ವರ್ಷದ ಈ ಆರೈಕೆ, ನಿರ್ವಹಣೆಯಿಂದಾಗಿ, ಎರಡನೇ ವರ್ಷದಲ್ಲಿ ಡಿಸೆಂಬರ್‌ನಲ್ಲಿ ಮಾವಿನ ಮರಗಳಲ್ಲಿ ಹೂವು ಆರಂಭವಾಯಿತು. ಫೆಬ್ರುವರಿ ಹೊತ್ತಿಗೆ ಕಾಯಿ ಕಚ್ಚಲು ಶುರುವಾದವು. ಈ ಸಮಯದಲ್ಲಿ ಪ್ರತಿ ಮರಕ್ಕೆ ಆರಂಭದಲ್ಲಿ ಮೂರು ತಿಂಗಳ ಕಾಲ ನೀಡಿದ ಪ್ರಮಾಣದಲ್ಲೇ ಗೊಬ್ಬರ, ನೀರು ಪೂರೈಕೆ ಮಾಡಿದರು. ಏಪ್ರಿಲ್‌ ಹೊತ್ತಿಗೆ ಕೆಲವು ಮರಗಳಲ್ಲಿ ಕಾಯಿಗಳು ಕಾಣಿಸಿಕೊಂಡವು. ಮೊದಲ ಫಸಲು ಶುರುವಾಯಿತು. ಆದರೆ ಆ ವರ್ಷ ಫಸಲನ್ನು ಮಾರುಕಟ್ಟೆಗೆ ಕಳುಹಿಸಲಿಲ್ಲ. ಮುಂದಿನ ವರ್ಷ ಇದೇ ಆರೈಕೆ, ನಿರ್ವಹಣೆ ಪ್ರಕ್ರಿಯೆ ಮುಂದುವರಿಸಿದರು. ಮೂರನೇ ವರ್ಷದಿಂದ ಎಲ್ಲ ಮರಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಮರಗಳಲ್ಲಿ ಕಾಯಿ ಬಿಡಲಾರಂಭಿಸಿದವು.

ಪ್ರತಿ ಮರದಿಂದ 10 ಕೆ.ಜಿ. ಇಳುವರಿ ದೊರೆತಿದೆ.ಸಾಂಪ್ರದಾಯಿಕ ಮಾವಿನ ಕೃಷಿಗೆ ಹೋಲಿಸಿದರೆ, ಈ ವಿಧಾನದಲ್ಲಿ ಪ್ರತಿ ಮರದಿಂದ ಸಿಗುವ ಇಳುವರಿ ಕಡಿಮೆ. ಎಕರೆವಾರು ಇಳುವರಿ, ಗುಣಮಟ್ಟದ ಫಸಲಿಗೆ ದೊರೆಯುವ ಉತ್ತಮ ಬೆಲೆ, ಕೀಟ–ರೋಗ ಮುಕ್ತ ಫಸಲು.. ಇವೆಲ್ಲ ಲೆಕ್ಕ ಹಾಕಿದರೆ, ಲಾಭವೇ ಹೆಚ್ಚು ಎನ್ನುವುದು ಅವರ ಅನುಭವದ ನುಡಿ.

ಕಳೆದ ವರ್ಷದಿಂದ ಫಸಲು ಮಾರಾಟ ಶುರುಮಾಡಿದ್ದಾರೆ. ‘ಬಿಗ್‌ ಬಾಸ್ಕೆಟ್‘‌ ಕಂಪನಿಯವರು ತೋಟಕ್ಕೆ ಬಂದು ಹಣ್ಣನ್ನು ಖರೀದಿ ಮಾಡಿದ್ದಾರೆ. ಆನ್‌ಲೈನ್‌ನಲ್ಲೂ ಮಾರಾಟ ಮಾಡಿದ್ದಾರೆ. ‘ತೋಟದ ಬಳಿಯಲ್ಲೇ ಕೆ.ಜಿ ಮಾವಿನ ಹಣ್ಣಿಗೆ ₹60ರಂತೆ ಮಾರಾಟ ಮಾಡಿದ್ದೇನೆ. ಪ್ರತಿ ಎಕರೆಗೆ ₹1 ಲಕ್ಷ ಖರ್ಚು ಕಳೆದು ₹2.50 ಲಕ್ಷ ಆದಾಯ ಬಂದಿದೆ‘ ಎಂದು ಅವರು ಲೆಕ್ಕ ಕೊಡುತ್ತಾರೆ.

ಕಳೆದ ಬಾರಿ ಮಾರಾಟವಾದ ಚೌಡಪ್ಪ ಅವರ ತೋಟದ ಮಾವಿನ ಹಣ್ಣುಗಳು

ಪ್ರತಿ ಮರದಲ್ಲಿ ಐವತ್ತೇ ಕಾಯಿ..

ಸಾಮಾನ್ಯವಾಗಿ, ಮಾವಿನ ಮರದಲ್ಲಿ ಕಾಯಿಗಳು ತೊನೆದಾಡುತ್ತಿದ್ದರೆ, ಬೆಳೆಗಾರರಿಗೆ ಖುಷಿ ಅಲ್ವಾ?. ಆದರೆ ಚೌಡಪ್ಪ ಅವರು ಮಾತ್ರ, ಪ್ರತಿ ಮರದಲ್ಲಿ 50ಕ್ಕಿಂತ ಹೆಚ್ಚು ಕಾಯಿಗಳು ಬಿಡುವುದಿಲ್ಲ. ‘ಅರೆ, ಹೆಚ್ಚು ಕಾಯಿಬಿಟ್ಟರೆ ನಷ್ಟವೇನು‘ ಅಂತ ಕೇಳಿದರೆ, ‘ಹೆಚ್ಚು ಕಾಯಿ ಬಿಟ್ಟರೆ, ಮರಗಳು ಭಾರ ತಡೆಯುವುದಿಲ್ಲ. ಕಾಯಿಗಳ ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ.ಹೀಗಾಗಿ ಹೀಚಾಗುವ ಹಂತದಲ್ಲೇ ಹೆಚ್ಚುವರಿ ಕಾಯಿಗಳನ್ನು ತೆಗೆಸುತ್ತೇನೆ. ಇದರಿಂದ ಕಾಯಿಗಳ ಆಕಾರ, ಗಾತ್ರ ಒಂದೇ ರೀತಿಯಿರುತ್ತವೆ. ಇಂಥ ಫಲಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ‘ ಎಂದು ಹೇಳುತ್ತಾರೆ ಚೌಡಪ್ಪ.

‘ಅವಧಿಗೆ ಮುನ್ನವೇ ಮಾವನ್ನು ಮಾರುಕಟ್ಟೆಗೆ ತರುವುದಕ್ಕಾಗಿ ಬೇಗ ಪ್ರೂನಿಂಗ್ ಕೆಲಸ ಆರಂಭಿಸುತ್ತೇನೆ. ಇದರಿಂದ ಡಿಸೆಂಬರ್‌ನಲ್ಲಿ ಹೂ ಬಿಟ್ಟು, ಏಪ್ರಿಲ್‌ನಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ಹೀಗಾಗಿ ನನಗೆ ಮೊದಲ ವರ್ಷ ಉತ್ತಮ ಬೆಲೆ ಸಿಕ್ಕಿತು. ಪ್ರತಿ ವರ್ಷ ಇದೇ ವಿಧಾನ ಅನುಸರಿಸುತ್ತೇನೆ‘ ಎನ್ನುತ್ತಾ ತಾವು ಅನುಸರಿಸಿದ ತಂತ್ರವನ್ನು ವಿವರಿಸಿದರು ಚೌಡಪ್ಪ.

ಇಷ್ಟು ಒತ್ತೊತ್ತಾಗಿ ಮಾವಿನ ಮರಗಳನ್ನು ಬೆಳೆದಿದ್ದರೂ ಕಾಯಿಗಳ ಗಾತ್ರ, ಬಣ್ಣ, ಆಕಾರ ಸೇರಿದಂತೆ ಯಾವುದೇ ಗುಣದಲ್ಲೂ ವ್ಯತ್ಯಾಸವಾಗಿಲ್ಲ. ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದ ಹಣ್ಣುಗಳಿಗೆ ಹೋಲಿಸಿದರೆ, ಈ ವಿಧಾನದಲ್ಲಿ ಬೆಳೆದಿರುವ ಹಣ್ಣುಗಳ ರುಚಿ ಬಹಳ ಚೆನ್ನಾಗಿವೆ ಎನ್ನುವುದು ಗ್ರಾಹಕರ ಅಭಿಪ್ರಾಯ.

ಹೊಸ ಪ್ರಯತ್ನ, ಮಾರುಕಟ್ಟೆ ತಂತ್ರ...

ಚೌಡಪ್ಪ

ಅಲ್ಟ್ರಾ ಹೈಡೆನ್ಸಿಟಿಯಲ್ಲಿ ಒತ್ತೊತ್ತಾಗಿ ಮಾವಿನ ಮರಗಳನ್ನು ಬೆಳೆಸಿರುವ ಇವರು, ಕೆಲವು ಮರಗಳಲ್ಲಿರುವ ಕಾಯಿಗಳಿಗೆ ಹಣ್ಣಿನ ಚೀಲವನ್ನು (ಫ್ರೂಟ್ ಬ್ಯಾಗ್‌) ತೊಡಿಸಿದ್ದಾರೆ. ಹೀಗೆ ರಕ್ಷಣೆಯಲ್ಲಿ ಬೆಳೆದ ಹಣ್ಣುಗಳ ಬಣ್ಣ, ಗಾತ್ರ ಮತ್ತು ಆಕಾರ ಉತ್ತಮವಾಗಿದ್ದು, ಹೆಚ್ಚಿನ ಬೆಲೆಗೆ ಮಾರಾಟವಾಗಿವೆ.‘ಇಂಥ ಹಣ್ಣುಗಳಿಗಾಗಿ ಪ್ರತ್ಯೇಕ ಗ್ರಾಹಕರಿದ್ದಾರೆ. ಬೆಲೆ ಹೆಚ್ಚಾದರೂ ಖರೀದಿ ಮಾಡುತ್ತಾರೆ. ಹೀಗಾಗಿ ಆಯ್ದ ಮರಗಳಲ್ಲಿನ ಕಾಯಿಗಳಿಗೆ ಈ ರೀತಿ ಕವರ್ ತೊಡಿಸಿದ್ದೇನೆ‘ ಎಂದರು ಚೌಡಪ್ಪ.

ಮರಗಳಲ್ಲಿ ಕಾಯಿಗಳು ನಿಂಬೆ ಹಣ್ಣಿನ ಗಾತ್ರದಲ್ಲಿದ್ದಾಗ ಫ್ರೂಟ್‌ ಬ್ಯಾಗ್‌ ಕಟ್ಟುತ್ತಾರಂತೆ. ಮಾರುಕಟ್ಟೆಯಲ್ಲಿ ಈ ಕವರ್ ಲಭ್ಯವಿದೆ. ಇದರಿಂದ ಫ್ರೂಟ್‌ ಫ್ಲೈ ಸೇರಿದಂತೆ ಹಣ್ಣುಗಳನ್ನು ಕೀಟ ಬಾಧೆಯಿಂದ ರಕ್ಷಿಸಬಹುದು ಎಂಬುದು ಅವರ ಅಭಿಪ್ರಾಯ.

ಒಟ್ಟಾರೆ, ಅಲ್ಟ್ರಾ ಹೈಡೆನ್ಸಿಟಿ ಮಾವಿನ ಕೃಷಿಯ ಯಶಸ್ಸು, ನಿಯಮಿತವಾದ ಪ್ರೂನಿಂಗ್ (ರೆಂಬೆ ಸವರುವುದು), ಫರ್ಟಿಗೇಷನ್ ಮೂಲಕ ಗೊಬ್ಬರ ಪೂರೈಕೆ, ಕೀಟ–ರೋಗ ನಿರ್ವಹಣೆ ಮತ್ತು ನಿರಂತರವಾದ ಆರೈಕೆಯಂತಹ ನಿಮಯಗಳನ್ನು ಕಡ್ಡಾಯವಾಗಿ ಪಾಲಿಸುವುದರಲ್ಲಿದೆ. ಇಲ್ಲದಿದ್ದರೆ, ಈ ಪದ್ಧತಿಯಲ್ಲಿ ಕೃಷಿ ಯಶಸ್ವಿಯಾಗುವುದಿಲ್ಲ ಎನ್ನುವುದು ಚೌಡಪ್ಪ ಅವರ ಅಭಿಮತ.

***

ಒಂದಷ್ಟು ಗಮನಿಸಬೇಕಾದ ಅಂಶಗಳು

‌ಪ್ರತಿ ವರ್ಷ ಮರಗಳನ್ನು ಪ್ರೂನಿಂಗ್ ಮಾಡಬೇಕು. ಪ್ರತಿ ಬಾರಿ ಪ್ರೂನ್ ಮಾಡುವಾಗ, ಕತ್ತರಿಸುವ ರೆಂಬೆಗಳನ್ನು ಗಮನಿಸಬೇಕು. ಇದು ಅಲ್ಟ್ರಾ ಹೈಡೆನ್ಸಿಟಿ ಮಾವಿನ ಕೃಷಿಯಲ್ಲಿ ಪ್ರಮುಖಚಟುವಟಿಕೆ. ಚೌಡಪ್ಪ ಅವರು ಪ್ರತಿ ವರ್ಷ ಜೂನ್‌ ತಿಂಗಳ ಮೊದಲ ವಾರದಲ್ಲಿ ಪ್ರೂನಿಂಗ್ ಶುರು ಮಾಡುತ್ತಾರೆ. ಆಗಸ್ಟ್‌ ಅಂತ್ಯಕ್ಕೆ ಗಿಡಗಳಿಗೆ ಹೂವು ಬಿಟ್ಟು, ಕಾಯಿ ಕಚ್ಚಲು ಬೇಕಾದ ಪರಿಪಕ್ವತೆ ಬಂದಿರುತ್ತದೆ.

ಪ್ರೂನ್ ಮಾಡುವ ಅವಧಿಯಲ್ಲಿ ವಾರಕ್ಕೊಮ್ಮೆ ಪ್ರತಿ ಮರಕ್ಕೆ 12 ಲೀಟರ್ ನೀರು, ಫರ್ಟಿಗೇಷನ್ ಕಡ್ಡಾಯ. ಫೆಬ್ರುವರಿಯಲ್ಲಿ ಕಾಯಿ ಕಚ್ಚಲು ಆರಂಭವದಾಗಿನಿಂದ ಮುಂದಿನ ಮೂರು ತಿಂಗಳವರೆಗೆ, ಪ್ರತಿ ದಿನ, ಪ್ರತಿ ಮರಕ್ಕೆ 12 ಲೀಟರ್ ನೀರು ಹಾಗೂ ವಾರಕ್ಕೊಮ್ಮೆ ಮೇಲೆ ಹೇಳಿದ ಫರ್ಟಿಗೇಷನ್‌ ಪುನರಾವರ್ತನೆ. ‘ಒಂದು ವರ್ಷದಲ್ಲಿ ಪ್ರತಿ ಎಕರೆಗೆ 24 ಕೆ.ಜಿ ಯೂರಿಯಾ, 6 ಲೀಟರ್ ಫಾಸ್ಪಾರಿಕ್ ಆಸಿಡ್ ಮತ್ತು 24 ಕೆ.ಜಿ ಪೊಟ್ಯಾಷ್ ಗಿಡಗಳಿಗೆ ಪೂರೈಸಿದಂತಾಗುತ್ತದೆ‘ – ಇದು ಚೌಡಪ್ಪ ಅವರ ಲೆಕ್ಕಾಚಾರ.

‘ಎಲ್ಲರಿಗೂ ಪ್ರೂನಿಂಗ್‌ ಕೌಶಲ ಇರಬೇಕಲ್ಲವಾ, ಗೊತ್ತಿಲ್ಲದವರು ಹೇಗೆ ರೆಂಬೆಗಳನ್ನು ಸವರುತ್ತಾರೆ. ಅದನ್ನು ಗುರುತಿಸುವ ಬಗೆ ಹೇಗೆ‘ ಅಂತ ಕೇಳಿದರೆ, ‘ಮರ / ಗಿಡದ ಬೆಳವಣಿಗೆ ಗಮನಿಸುತ್ತಿದ್ದರೆ, ಯಾವ ರೆಂಬೆಗಳನ್ನು ಕತ್ತರಿಸಬೇಕೆಂದು ತಿಳಿಯುತ್ತದೆ. ಒಮ್ಮೊಮ್ಮೆ ರೆಂಬೆಗಳೇ ಆ ದಾರಿ ತೋರುತ್ತವೆ‘ ಎನ್ನುತ್ತಾರೆ ಅವರು.

ಪ್ರಸ್ತುತ ಬಳಸುತ್ತಿರುವ ರಸಗೊಬ್ಬರ ಮತ್ತು ರಾಸಾಯನಿಕ ಔಷಧಗಳಿಗೆ ಪರ್ಯಾಯವಾಗಿ ಸಾವಯವ / ಜೈವಿಕ ಗೊಬ್ಬರ, ಔಷಧಗಳನ್ನು ಬಳಸಬಹುದೇ ? ಎಂಬ ಪ್ರಶ್ನೆಗೆ ಚೌಡಪ್ಪ ಅವರು ಹೀಗೆ ವಿವರಣೆ ನೀಡುತ್ತಾರೆ;

‘ಸದ್ಯ ಬಳಕೆ ಮಾಡುತ್ತಿರುವ ಒಳಸುರಿಗಳೆಲ್ಲ ಸಾಮಾನ್ಯ ಪ್ರಮಾಣದಲ್ಲಿವೆ. ಈ ಒಳಸುರಿಗಳ ಜತೆಗೆ ಜೂನ್‌ನಲ್ಲಿ ಮಾವಿನ ಮರಗಳ ನಡುವೆ ಅಂತರ ಬೆಳೆಯಾಗಿ ಅಲಸಂದೆ ಬೆಳೆಸುತ್ತೇವೆ. ಅದನ್ನೂ ಆಗಸ್ಟ್‌ನಲ್ಲಿ ಉಳುಮೆ ಮೂಲಕ ಭೂಮಿಗೆ ಹರಗಿಸುತ್ತೇವೆ. ಇದು ಹೆಚ್ಚುವರಿ ಸಾರಜನಕವನ್ನು ಮಣ್ಣಿಗೆ ಪೂರೈಸುತ್ತದೆ. ಪ್ರತಿ ವರ್ಷ ನಡೆಯುವ ಪ್ರಕ್ರಿಯೆ ಇದು. ಮುಂದಿನ ದಿನಗಳಲ್ಲಿ ಡ್ರಿಪ್ ಮೂಲಕ ಟ್ರೈಕೊಡರ್ಮಾ ಕೊಡುವ ಯೋಚನೆ ಇದೆ‘ ಎಂದು ವಿವರಿಸುತ್ತಾರೆ ಚೌಡಪ್ಪ.

ಕುಬ್ಜ ಗಿಡದಲ್ಲಿ ಜೋತು ಬಿದ್ದಿವರುವ ಮಾವಿನ ಕಾಯಿಗಳು

‘ಅಲ್ಟ್ರಾ ಹೈಡೆನ್ಸಿಟಿ‘ ಉಪಯೋಗಳು

ಎಲ್ಲ ಸರಿ, ‘ಅಲ್ಟ್ರಾ ಹೈಡೆನ್ಸಿಟಿ‘ಯಿಂದ ಏನು ಉಪಯೋಗ?– ಈ ಪ್ರಶ್ನೆಗೆ ವಿಜ್ಞಾನಿ ಚೌಡಪ್ಪ ಅವರು ಹೇಳಿದ್ದಿಷ್ಟು.

* ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ ಮರಗಳು ಎತ್ತರ ಬೆಳೆಯುವುದಿಲ್ಲ. ಇದರಿಂದಔಷಧ ಸಿಂಪಡಣೆ ಸೇರಿದಂತೆ ಹಲವು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲ. ಪ್ರತಿ ಮರವೂ ಕಣ್ಣಿನ ನೋಟಕ್ಕೆ ಕಾಣುತ್ತಿರುತ್ತದೆ.

* ಮರಗಳ ಎತ್ತರ ಕಡಿಮೆ ಇರುವುದರಿಂದ ಕಾಯಿಗಳನ್ನು ಕೊಯ್ಲು ಮಾಡುವುದು ಸುಲಭ. ಅಷ್ಟೇ ಅಲ್ಲ, ಕಾಯಿಗಳಿಗೆ ಒಂದಿನಿತೂ ಗಾಯವಾಗದಂತೆ ಎಚ್ಚರಿಕೆಯಿಂದ ಕೈಯಿಂದಲೇ ಕೊಯ್ಯಬಹುದು. ಕೊಯ್ಲು ಮಾಡಲು ಕಾರ್ಮಿಕರ ಅಗತ್ಯವಿರುವುದಿಲ್ಲ. ಮನೆಯವರೇ ಈ ಕೆಲಸದಲ್ಲಿ ಭಾಗಿಯಾಗಬಹುದು. ಖರ್ಚು ಉಳಿಸಬಹುದು.

* ಎಚ್ಚರಿಕೆಯಿಂದ ಕಾಯಿಗಳನ್ನು ಕೊಯ್ದು, ಬುಟ್ಟಿಗಳಲ್ಲಿ ಜೋಡಿಸುವುದರಿಂದ ಹಾಳಾಗುವ ಹಣ್ಣುಗಳ ಪ್ರಮಾಣ ಕಡಿಮೆಯಾಗುತ್ತದೆ.

* ನಿಖರ ಕೃಷಿ (ಅಗತ್ಯವಿದ್ದಷ್ಟು ನೀರು, ಪೋಷಕಾಂಶವನ್ನು ನೇರವಾಗಿ ಗಿಡಗಳಿಗೆ ಪೂರೈಸುವುದು) ಪದ್ಧತಿಯಲ್ಲಿ ನೀರು, ಗೊಬ್ಬರ, ಔಷಧಗಳನ್ನು ನೀಡುವುದರಿಂದ ಹೆಚ್ಚು ಖರ್ಚು ಇರುವುದಿಲ್ಲ.

* ಮರಗಳ ರೆಂಬೆಗಳನ್ನು ಸವರವುದಕ್ಕೆ ಇಬ್ಬರು ಕಾರ್ಮಿಕರು ಬೇಕಾಗುತ್ತಾರೆ. ಗೊಬ್ಬರ, ನೀರು ಎಲ್ಲವೂ ಡ್ರಿಪ್ ಮೂಲಕ ಕೊಡುವುದರಿಂದ ಕಾರ್ಮಿಕರ ಅಗತ್ಯ ಕಡಿಮೆ.

* ಮರಗಳ ನಡುವಿರುವ ಜಾಗದಲ್ಲಿ ಅಲಸಂಡೆಯಂತಹ ದ್ವಿದಳ ಧಾನ್ಯ ಬೆಳೆ ಬೆಳೆಯಬಹುದು. ಈ ಬೆಳೆಯಲ್ಲಿ ಕಾಳು ಕೊಯ್ದುಕೊಂಡು, ಉಳಿದ ಬೆಳೆಯುಳಿಕೆಯನ್ನು ಭೂಮಿಗೆ ಹರಗಿಸಿದರೆ, ಮಣ್ಣಿಗೆ ಉತ್ತಮ ಗೊಬ್ಬರವಾಗುತ್ತದೆ.

* ಅಲ್ಟ್ರಾ ಹೈಡೆನ್ಸಿಟಿ ವಿಧಾನದಲ್ಲಿ ಮಾವು ಅಷ್ಟೇ ಅಲ್ಲ, ಸೀಬೆ, ಗೋಡಂಬಿ, ಹಲಸುವಿನಂತಹ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು.

ಮಾವಿನ ತೋಟ ಎಲ್ಲಿದೆ ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಿಂದ 10 ಕಿ.ಮೀ ದೂರದಲ್ಲಿರುವ (ಹಿಂದೂಪುರ ರಸ್ತೆ) ಕಮಲೂರಿನಲ್ಲಿದೆ. ಅಲ್ಟ್ರಾ ಹೈಡೆನ್ಸಿಟಿ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9446535932

ಚಿತ್ರಗಳು: ಡಾ.ಪಿ.ಚೌಡಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.