ADVERTISEMENT

ಪರಿಸರ ಜಾಗೃತಿ: 7 ವರ್ಷದ ಬಾಲಕಿಗೆ ಪ್ರಶಸ್ತಿ

ಆಸ್ಟ್ರೇಲಿಯಾದ ಗ್ಲೋಬಲ್‌ ಪೀಸ್‌ ಇಂಡೆಕ್ಸ್‌ ಇನ್‌ಸ್ಟಿಟ್ಯೂಷನ್ ನೀಡುವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:45 IST
Last Updated 17 ಸೆಪ್ಟೆಂಬರ್ 2019, 19:45 IST
ಲಿಸಿ
ಲಿಸಿ   

ಬೆಂಗಳೂರು: ಶುದ್ಧ ಗಾಳಿ ಸಿಗದೆ, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ಸಾಧ್ಯವಾಗದಂತೆ ಜೀವಜಲ ಮಲಿನವಾಗುತ್ತಿದೆ. ಮರಗಳ ಮಾರಣಹೋಮ, ಅರಣ್ಯ ನಾಶದಿಂದ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಬದುಕಲು ಸಾಧ್ಯವೆ? ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ ಈ ಬಾಲಕಿ.

ಮಣಿಪುರ ರಾಜ್ಯದ ಲಿಸಿಪ್ರಿಯಾ ಕಂಗುಜಮ್‌ಗೆ ಇನ್ನೂ ಏಳು ವರ್ಷ. ಆದರೆ, ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಾ ವಿಶ್ವದ ಗಮನ ಸೆಳೆಯುತ್ತಿದ್ದಾಳೆ. ಈ ಪುಟಾಣಿಯ ಸಾಧನೆಗೆ 2019ರ ‘ವರ್ಲ್ಡ್‌ ಚಿಲ್ಡ್ರನ್‌ ಪೀಸ್‌ ಪ್ರೈಜ್‌’ ಕೂಡ ಅರಸಿಕೊಂಡು ಬಂದಿದೆ.

ಶಾಂತಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಆಸ್ಟ್ರೇಲಿಯಾದ ಗ್ಲೋಬಲ್‌ ಪೀಸ್‌ ಇಂಡೆಕ್ಸ್‌ ಇನ್‌ಸ್ಟಿಟ್ಯೂಷನ್ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಿದೆ. ಈಚೆಗಷ್ಟೇ ಮಾಲ್ದೀವ್ಸ್ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಬಾಲಕಿ ಮಾಡಿದ್ದೇನು?
ಭಾರತ ಸರ್ಕಾರ ಮತ್ತು ಸಾರ್ಕ್‌ ಸದಸ್ಯ ರಾಷ್ಟ್ರಗಳಿಗೆ ತಾಪಮಾನ ನಿಯಂತ್ರಣ ಕಾನೂನು ಜಾರಿಗೆ ತರುವಂತೆ ನಿರಂತರವಾಗಿ ಮನವಿ ಮಾಡುತ್ತಿದ್ದಾಳೆ. ಬಿಸಿಲು, ಮಳೆಯೆಂಬುದನ್ನೂ ಲೆಕ್ಕಿಸದೇ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಪ್ರತಿಭಟಿಸುತ್ತಿದ್ದಾಳೆ. ಹೀಗಾಗಿಯೇ ತಾಪಮಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಶ್ವದ ಅತಿ ಕಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾಳೆ. ಈಚೆಗಷ್ಟೇ ದೆಹಲಿಯಲ್ಲಿರುವ ಸಂಸತ್ ಭವನದ ಮುಂದೆಯೂ ಪ್ರತಿಭಟನೆ ಮಾಡಿದ್ದಳು.

ಈವರೆಗೆ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾಳೆ. ತನ್ನ ಸ್ನೇಹಿತರೊಂದಿಗೆ ಕೂಡಿ ಹಲವು ಸಮುದ್ರ ತೀರಗಳನ್ನು ಸ್ವಚ್ಛಗೊಳಿಸಿದ್ದಾಳೆ. ‘ಉಪನ್ಯಾಸ ನೀಡಲು ವಿವಿಧ ದೇಶಗಳಿಗೆ ಹೋಗುತ್ತಿರುವುದರಿಂದ ಹಾಜರಾತಿ ಕಡಿಮೆ ಆಗುತ್ತಿದೆ. ನಿತ್ಯ ಓದದಿದ್ದರೆ, ಬರೆಯದಿದ್ದರೆ ಮೆದುಳು ಕೆಲಸ ಮಾಡುವುದಿಲ್ಲ. ಶಿಕ್ಷಣವಿದ್ದರೆ ಸಾಧನೆ ಮಾಡುವುದು’ ಸುಲಭ ಎಂದು ಹೇಳುತ್ತಾಳೆ.

ಪ್ರಸ್ತುತ ಸಿಂಗಪುರ, ಥಾಯ್ಲೆಂಡ್, ಮಾಲ್ದೀವ್ಸ್‌, ಅಂಗೋಲಾ ಮತ್ತು ಅಮೆರಿಕ ದೇಶಗಳಲ್ಲಿ ಜಾಗತಿಕ ತಾಪಮಾನದ ಕುರಿತು ಚರ್ಚೆ ಮಾಡುತ್ತಿದ್ದಾಳೆ. ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಪುನರ್ಬಳಕೆ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದಾಳೆ.

‘ಇರುವುದೊಂದೇ ಭೂಮಿ. ವನ್ಯ ಸಂಪತ್ತು, ನೀರು, ಗಾಳಿಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ’ ಎಂದು ಪ್ರತಿ ಉಪನ್ಯಾಸದಲ್ಲೂ ಒತ್ತಿ ಹೇಳುತ್ತಿದ್ದಾಳೆ. ಹೀಗಾಗಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹಲವು ದೇಶಗಳು ಉಪನ್ಯಾಸ ನೀಡಲು ಆಹ್ವಾನಿಸುತ್ತಿವೆ. 2019ರ ಅಮೆರಿಕ ತಾಪಮಾನ ಶೃಂಗಸಭೆಗೂ ಆಹ್ವಾನ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.