ADVERTISEMENT

PV Web Exclusive | ಶುರುವಾಗಿದೆ ಕಲಾವಿದರ ಯೂಟ್ಯೂಬ್‌ ಪಾಠ

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ ಅವರ ಹೊಸ ಯೋಜನೆ

ಸ್ಮಿತಾ ಶಿರೂರ
Published 13 ಅಕ್ಟೋಬರ್ 2020, 1:44 IST
Last Updated 13 ಅಕ್ಟೋಬರ್ 2020, 1:44 IST
ಮಣ್ಣಿನಲ್ಲಿ ಕುವೆಂಪು ಅವರ ಭಾವಶಿಲ್ಪ ರಚಿಸುತ್ತಿರುವ ಕಲಾವಿದ ರವೀಂದ್ರ ಅರಳಗುಪ್ಪಿ.
ಮಣ್ಣಿನಲ್ಲಿ ಕುವೆಂಪು ಅವರ ಭಾವಶಿಲ್ಪ ರಚಿಸುತ್ತಿರುವ ಕಲಾವಿದ ರವೀಂದ್ರ ಅರಳಗುಪ್ಪಿ.   
""

ದಾವಣಗೆರೆಯ ಕುಂದವಾಡ ಕೆರೆಯ ದಂಡೆಯ ಮೇಲೆ ನಡೆದು ಹೊರಟಾಗ ಅಂದು ಅಚ್ಚರಿ ಕಾದಿತ್ತು. ಒಂದೆಡೆ ಭಿತ್ತಿಪತ್ರ ಹಾಗೂ ಭಿತ್ತಿಚಿತ್ರಗಳ ಸಾಲು ಕಂಡುಬಂತು. ಕ್ಯಾನ್ಸರ್‌ ಹಾಗೂ ಕೋವಿಡ್‌ ಬಗ್ಗೆ ಎಚ್ಚರಿಸುವ ನುಡಿಗಳಿರುವ ಚಿತ್ರಗಳು ಅಲ್ಲಿ ಇದ್ದವು.

ಸಮಾಜದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸದಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಲ್ಲಿಯ ದೃಶ್ಯ ಕಲಾವಿದ ರವೀಂದ್ರ ಅರಳಗುಪ್ಪಿ ಲಾಕ್‌ಡೌನ್‌ ಹಾಗೂ ಕೋವಿಡ್‌ ಸಂದರ್ಭದಲ್ಲಿಯೂ ತಮ್ಮ ಕಲೆಯ ಅಭಿವ್ಯಕ್ತಿಯನ್ನು ಸಮಾಜಕ್ಕಾಗಿ ಬಳಸುತ್ತಿದ್ದಾರೆ. ಅವರು ಹಾಗೂ ಅವರ ಮಗಳಿಗೂ ಕೋವಿಡ್‌ ಬಂದುಹೋದ ನಂತರ ಅವರ ಆಲೋಚನೆ ಇನ್ನಷ್ಟು ಸಮಾಜಕ್ಕಾಗಿ ತುಡಿಯುವಂತೆ ಮಾಡಿದೆ.

‘ಕೊರೊನಾ ಜನಜೀವನವನ್ನು, ಬದುಕುವ ದಿಕ್ಕನ್ನೂ ಬಹಳಷ್ಟು ಬದಲಾಯಿಸಿದೆ. ನನ್ನನ್ನೂ ಇದು ಆಲೋಚನೆಗೆ ಹಚ್ಚಿತು. ಚಿತ್ರಕಲಾವಿದನಾಗಿಯೂ ಈ ದಿನಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೆಲವು ವಿಶೇಷ ಯೋಜನೆಗಳನ್ನು ಹಾಕಿಕೊಂಡೆ’ ಎಂದು ರವೀಂದ್ರ ಅರಳಗುಪ್ಪಿ ತಿಳಿಸಿದರು.

ADVERTISEMENT
ಕಾಗದದ ಪಲ್ಪ್‌ನಿಂದ ಮಾಡಲಾದ ಕೋಸ್ಟರ್‌ ಮ್ಯಾಟ್‌ಗಳು.

ಕಾಗದ ಮರುಬಳಕೆ ಮಾಡಿ ಕಲಾಕೃತಿ: ರದ್ದಿ ಪತ್ರಿಕೆಗಳು, ಬೇಡವಾದ ಕಾಗದಗಳನ್ನು ಸಂಗ್ರಹಿಸಿ ಉಪಯೋಗಿಸಿದರೆ ಪರಿಸರ ಸ್ವಚ್ಛವಾಗುತ್ತದೆ ಎಂಬ ಆಲೋಚನೆಯಿಂದ ಅವುಗಳಿಂದ ಸುಂದರ ಕಲಾಕೃತಿಗಳನ್ನು ಮಾಡುವ ಕಾರ್ಯವನ್ನೂ ರವೀಂದ್ರ ಅವರು ಆರಂಭಿಸಿದ್ದಾರೆ. ದಿನಪತ್ರಿಕೆಗಳು, ಬೇಡವಾದ ಕಾಗದವನ್ನು ಚಿಕ್ಕದಾಗಿ ಕತ್ತರಿಸಿ ಪಲ್ಪ್‌ ತಯಾರಿಸಿ ಹೂದಾನಿ, ಚಾಪೆ, ಕಸದ ಬುಟ್ಟಿ, ಆಕಾಶ ಬುಟ್ಟಿ, ಹಣ್ಣಿನ ಬುಟ್ಟಿಗಳು, ಮುಖವಾಡ, ನಾಟಕಗಳಲ್ಲಿ ಬಳಸಲಾಗುವ ಕತ್ತಿ, ಗುರಾಣಿ, ಗದೆ, ಕಿರೀಟ, ಕಂಬ... ಹೀಗೆ ಹಲವು ವಸ್ತುಗಳನ್ನು ತಯಾರಿಸಿದ್ದಾರೆ.

ಚಹಾ ಲೋಟದ ಕೆಳಗೆ, ಬಿಸಿ ಪಾತ್ರೆಗಳ ಕೆಳಗೆ ಇಡಲು ಬಳಸುವ ಸುಂದರ ಕೋಸ್ಟರ್‌ ಮ್ಯಾಟ್‌ಗಳನ್ನು ಈಚೆಗೆ ತಯಾರಿಸಿದ್ದಾರೆ. ಅದರ ಮೇಲೆ ಮೂಡಿರುವ ಸುಂದರ ಚಿತ್ತಾರಗಳು ‘ಕಸದಿಂದ ರಸ’ ಎಂಬ ಮಾತಿಗೆ ಇನ್ನಷ್ಟು ತೂಕ ತಂದಿವೆ.

‘ಕಲಾ ಅಭಿವ್ಯಕ್ತಿಗೂ, ಕರಕುಶಲ ವಸ್ತುಗಳಿಗೂ ಪರಿಸರಸ್ನೇಹಿ ವಸ್ತುಗಳನ್ನೇ ಬಳಸುತ್ತಿದ್ದೇನೆ. ಕ್ರಾಫ್ಟ್‌ಗಳಿಗೆ ಪಿಒಪಿ, ಥರ್ಮಕೋಲ್‌, ಪ್ಲಾಸ್ಟಿಕ್‌ ಬಳಸುವುದನ್ನು ಬಿಟ್ಟಿದ್ದೆ. ಆದರೆ ಈಚೆಗೆ ಗಾಡಿಯೊಂದರಲ್ಲಿ ಲೋಡ್‌ ಜೊತೆ ಬಂದಿದ್ದ ಬಹಳಷ್ಟು ಥರ್ಮಕೋಲ್‌ ಅನ್ನು ಹಾಗೆಯೇ ಬಿಸಾಡುವುದು ಕಂಡು ಅದರಿಂದ ಪರಿಸರಕ್ಕೆ ಹಾನಿ ಎಂದರಿತು, ಅವುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೇನೆ. ಅದನ್ನು ಸಹ ಮರುಬಳಕೆ ಮಾಡಿ ಬಳಸಲು ಯೋಗ್ಯವಾದ ಅಥವಾ ಕಲಾಕೃತಿಗಳನ್ನು ಮಾಡಲು ಯೋಜಿಸಿದ್ದೇನೆ’ ಎಂದು ರವೀಂದ್ರ ಅರಳಗುಪ್ಪಿ ತಿಳಿಸಿದರು.

ಯೂಟ್ಯೂಬ್‌ ಚಾನಲ್ ಆರಂಭಿಸಿ ಕಿರುಚಿತ್ರ ಬಿಡುಗಡೆ: ಕೋವಿಡ್‌ ಲಾಕ್‌ಡೌನ್‌ ಇದ್ದ ಆರಂಭದ ದಿನಗಳಲ್ಲಿ ಚಿತ್ರಕಲೆ ಹಾಗೂ ಇನ್‌ಸ್ಟಾಲೇಷನ್‌ ಕಲಾಕೃತಿಗಳಿಂದ ಜಾಗೃತಿ ಕಾರ್ಯ ಆರಂಭಿಸಿದರು. ಮೇ 4ರಂದು ಯೂಟ್ಯೂಬ್‌ ಚಾನಲ್‌ ಶುರುಮಾಡಿದರು. ಅದರಲ್ಲಿ ಚಿತ್ರಕಲೆ, ಮೇಕ್‌ ಅಪ್‌ ಕಲೆ, ಕಿರುಚಿತ್ರ, ಶಿಲ್ಪಕಲೆಗಳ ಬಗ್ಗೆ 5 ನಿಮಿಷಗಳ ಕಿರುಚಿತ್ರಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ.

‘ನಾ ಮಾಡಿಲ್ಲಾ...’ ಎಂಬ ಪ್ರಥಮ ಕಿರುಚಿತ್ರ ಆರಂಭದಲ್ಲಿ ಬಿಡುಗಡೆಗೊಂಡಿದೆ. ನಂತರ ಮೈಮ್‌ ಮೇಕ್‌ಅಪ್‌ ಹೇಗೆ ಎಂಬ ಬಗ್ಗೆ ಕಿರುಚಿತ್ರ ಮೂಡಿಬಂದಿದೆ. ಮಣ್ಣಿನಲ್ಲಿ ರಾಧಾಕೃಷ್ಣನ್‌ ಅವರ ಭಾವಶಿಲ್ಪ ತಯಾರಿಸುವ ಕಲೆಯ ಬಗ್ಗೆ ಸೆ. 5 ಶಿಕ್ಷಕರ ದಿನಾಚರಣೆಯಂದು ವಿಡಿಯೊ ಸಮೇತ ವಿವರಣೆ ಇದೆ. ಕಲಾ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ವಿನಿಮಯ ಇದರಲ್ಲಿ ಮೂಡಿಬರುತ್ತಿರುವುದರಿಂದ ವೀಕ್ಷಕರಿಂದ, ಕಲಾಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪರಿಚಯ: ಹಿರೇಕೆರೂರು ತಾಲ್ಲೂಕಿನ ಅಣಜಿ ಗ್ರಾಮದವರಾದ ಇವರು ನೆಲೆಸಿರುವುದು ದಾವಣಗೆರೆ ನಗರದಲ್ಲಿ. ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ‘ಸಂಕಲನ ಕಲಾ ಕೇಂದ್ರ’ವನ್ನು ಸ್ಥಾಪಿಸಿರುವ ಅವರು ಮಕ್ಕಳಿಗೆ ಚಿತ್ರಕಲಾ ತರಗತಿಗಳನ್ನು ನಡೆಸುತ್ತಾರೆ. ಪ್ರತಿವರ್ಷ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಚಿತ್ರ ಕಲಾವಿದೆ ಪತ್ನಿ ಉಷಾ ಸಹ ಇವರ ಕಲಾ ಹಾಗೂ ಸಮಾಜ ಸೇವಾ ಚಟುವಟಿಕೆಗಳಿಗೆ ಕೈಜೋಡಿಸಿದ್ದಾರೆ. ‌

ಜ್ವಲಂತ ಸಮಸ್ಯೆಗಳ ಬಗ್ಗೆ ಆಕರ್ಷಕ ಪೋಸ್ಟರ್‌ಗಳನ್ನು ತಯಾರಿಸುವುದನ್ನು ರವೀಂದ್ರ ಅವರ ಮೊದಲಿನಿಂದಲೂ ಮಾಡುತ್ತಿದ್ದಾರೆ. ‘ಸಂಕಲನ’ ಕೇಂದ್ರದಿಂದ ನಡೆಸಿದ ‘ಸಂಕಲನದ ನಡಿಗೆ ಶಾಲೆಗಳ ಕಡೆಗೆ’ ಕಾರ್ಯಕ್ರಮಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಾವಣಗೆರೆಗೆ ಯುನಿವರ್ಸಿಟಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ 5 ವರ್ಷಗಳ ಬಿಎಫ್ಎ ಶಿಕ್ಷಣ, ಕಲಬುರ್ಗಿಯಲ್ಲಿ ಎಂಎಫ್ಎ ಶಿಕ್ಷಣವನ್ನು ಪಡೆದಿದ್ದಾರೆ. 18 ವರ್ಷಗಳ ಕಾಲ ವಿವಿಧ ಶಾಲೆ-ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ, ಅತಿಥಿ ಉಪನ್ಯಾಸಕರಾಗಿ ರಾಜ್ಯದಾದ್ಯಂತ ಕೆಲಸ ಮಾಡಿದ್ದಾರೆ. ಹವ್ಯಾಸಿ ನಾಟಕಗಳಲ್ಲಿ, ಸೌಂದರ್ಯ (ಸಿನಿಮಾ), ಕಾದಂಬರಿ, ಅಪ್ಪ (ಧಾರಾವಾಹಿ), ಪ್ರೇರಣಾ (ಡಾಕ್ಯುಮೆಂಟರಿ), ಮಠ (ಸಾಕ್ಷ್ಯಚಿತ್ರ) ಗಳಲ್ಲಿ ನಟಿಸಿದ್ದಾರೆ. ಚಿತ್ರಕಲೆ ಹಾಗೂ ನಾಟಕ ಕಲೆ ಎರಡರಲ್ಲೂ ನೂರಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಕಳೆದ ಫೆಬ್ರುವರಿಯಲ್ಲಿ ನೇಮಕಗೊಂಡಿರುವ ರವೀಂದ್ರ ಅರಳಗುಪ್ಪಿ ತಮ್ಮ ಕಲೆಯೊಂದಿಗೆ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ.

ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಗೊಂಡಿರುವ ಕಿರುಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.