ADVERTISEMENT

PV Web Exclusive | ಕೊರೊನಾ ನೆಪ, ಕ್ಯಾನ್ವಾಸ್ ಜಪ; ಕಲಾವಿದರ ಕಥನ

ರಾಮಕೃಷ್ಣ ಸಿದ್ರಪಾಲ
Published 4 ಸೆಪ್ಟೆಂಬರ್ 2020, 3:13 IST
Last Updated 4 ಸೆಪ್ಟೆಂಬರ್ 2020, 3:13 IST
’ಕಾಲಚಕ್ರ’ ಕಲಾಕೃತಿ ರಚನೆಯಲ್ಲಿ ಕಲಾವಿದ ನೀರ್ನಳ್ಳಿ ಗಣಪತಿ
’ಕಾಲಚಕ್ರ’ ಕಲಾಕೃತಿ ರಚನೆಯಲ್ಲಿ ಕಲಾವಿದ ನೀರ್ನಳ್ಳಿ ಗಣಪತಿ   

ಕೊರೊನಾ ಕಾಲಘಟ್ಟದಲ್ಲಿ ಕಲಾವಿದರು ನಿಜಾರ್ಥದಲ್ಲಿ ಲಾಕ್‌ಡೌನ್‌ ಆಗಿದ್ದರೆ? ಇಲ್ಲ ಒಂದಿಷ್ಟು ಸೃಜನಶೀಲ ಕೃತಿಗಳನ್ನು ಹೊರತಂದರಾ...ಎಂದು ಅಲ್ಲಲ್ಲಿ ಹುಡುಕುತ್ತ ಸಾಗಿದಾಗ ಕಂಡಿದ್ದು ಯಥಾ ಪ್ರಕಾರ ಕಲಾವಿದನ ಎಂದಿನ ಚಿತ್ರಣವೇ! ಕೊರೊನಾ ನೆಪವಷ್ಟೆ! ಕಲಾವಿದ ಕಲಾವಿದನೇ...ಗೀಚುವಿಕೆ, ರೇಖಿಸುವಿಕೆ,ಅಮೂರ್ತಕ್ಕೊಂದು ರೂಪ ಕೊಡುವ ಚಿತ್ರಣವೇ ಎಲ್ಲೆಡೆ...

‘Painting is self-discovery. Every good artist paints what he is’

–Jackson Pollock (American painter)

ADVERTISEMENT

ಕಲಾವಿದರಿಗೆ ಏಕಾಂತ ಹೊಸದಲ್ಲ. ಸಂತೆಯಲ್ಲಿದ್ದೂ ಒಂಟಿಯಾಗಿರುವುದು, ಒಂಟಿಯಾಗಿದ್ದೂ ಸಂತೆಯಲ್ಲಿದ್ದಂತೆ ಕಲ್ಪಿಸಿಕೊಂಡು ಸಂಭ್ರಮಿಸುವುದು ಕಲಾವಿದರ ಜಾಯಮಾನ. ಹಾಗಂತ ಒಳಗೆ ಬಂಧಿಯಾಗಿದ್ದರೆ ಚಡಪಡಿಕೆ; ಹೊರಬಿದ್ದರೆ ಸಂತೆಯಿಂದ ವಿಮುಖರಾಗುವ ಗಡಿಬಿಡಿ...ಅನವರತ ಚಡಪಡಿಕೆಯ ಬದುಕು. ಹೊಸದನ್ನು ಸೃಷ್ಟಿಸುವ, ಸೃಷ್ಟಿಕ್ರಿಯೆಯ ಚಡಪಡಿಕೆಗೆ ಅಂತ್ಯವಾದರೂ ಎಲ್ಲಿ?

ಸದಾ ಸಮುದಾಯದೊಂದಿಗೆ ಗುರುತಿಸಿಕೊಳ್ಳುತ್ತಲೇ ತಮ್ಮೊಳಗಿನ ಸೃಜನಶೀಲತೆಗೊಂದು ಮೂರ್ತರೂಪ ನೀಡುವವರು, ಇಲ್ಲವೇ ನಾಲ್ಕು ಗೋಡೆಯ ನಡುವೆ ಅಂತರ್ಮುಖಿಯಾಗಿ ಕಲಾಕೃತಿ ರಚಿಸಿ; ಬಹಿರ್ಮುಖವಾಗಿ ಅದನ್ನು ಪ್ರದರ್ಶಿಸುವ ಯಾ ಸಮಸ್ತರೊಂದಿಗೆ ಹಂಚಿಕೊಳ್ಳುವ ಹುಕಿಗೆ ಬೀಳುವ ಸೃಜನಶೀಲರುಕೊರೊನಾ ಪೆಂಡಮಿಕ್‌ ಸೃಷ್ಟಿಸಿದ ನಿಜಾರ್ಥದ ಅಡೆತಡೆಯಿಂದ ಚಡಪಡಿಕೆಗೊಳಗಾಗಿದ್ದು/ಆಗುತ್ತಿರುವುದು ವಾಸ್ತವ.

ಮನೆಯಲ್ಲಿಯೇ ಸ್ಟುಡಿಯೊ ಮಾಡಿಕೊಂಡು ಚಿತ್ರಿಸುವ ಕಲಾವಿದರು ಸದಾಕಾಲ ಬಂಧಿಯೇ. ಆದರೆ ಹೊರಗಡೆ ಕಲಾ ಸ್ಟುಡಿಯೊ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಕಲಾತರಗತಿ ತೆಗೆದುಕೊಳ್ಳುತ್ತಿದ್ದ ಕಲಾವಿದರು ತೊಂದರೆಗೀಡಾಗಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ₹2,000 ಧನಸಹಾಯವೇನೋ ನೀಡಿತು. ಆದರೆ ಎಲ್ಲ ಕಲಾವಿದರಿಗೂ ಅದು ತಲುಪಲಿಲ್ಲ. ಕೆಲವೆಡೆ ‘ಆನ್‌ಲೈನ್‌ ಆರ್ಟ್’ ಕ್ಯಾಂಪ್‌ಗಳೂ ನಡೆದವು. ಕಲೆಯನ್ನೇ ನಂಬಿ ಬದುಕುತ್ತಿರುವ ಕಲಾವಿದರು ಸಂಕಷ್ಟದಲ್ಲಿದ್ದಾರೆ.

ಮುಖಾಮುಖಿ ಕಲಾಚರ್ಚೆಗೆ ವೇದಿಕೆ ತಪ್ಪಿದ್ದಕ್ಕೆ, ಕಲಾಗ್ಯಾಲರಿಗಳಿಗೆ ಭೇಟಿ ನೀಡಲಾಗದ್ದಕ್ಕೆ ಮನೆಮಾಡಿದ ಬೇಸರಕ್ಕೆ ಕೊರೊನಾ ವಿರುದ್ಧ ಪ್ಯಾಲೆಟ್‌, ನೈಫ್‌, ಬ್ರಶ್‌ನಿಂದಲೇ ‘ಸೇಡು’ ತೀರಿಸಿಕೊಳ್ಳಲು ಕ್ಯಾನ್ವಾಸ್‌ ಮುಂದೆ ಅಂತರ್ಮುಖಿಗಳಾದ ಕಲಾವಿದರೆಷ್ಟೋ? ಹೀಗಿರುವ ಕೊರೊನಾ ಕಾಲಘಟ್ಟದಲ್ಲಿ ಕಲಾವಿದರು ನಿಜವಾಗಿಯೂ ಲಾಕ್‌ಡೌನ್‌ ಆಗಿದ್ದರೆ? ಇಲ್ಲ ಒಂದಿಷ್ಟು ಸೃಜನಶೀಲ ಕೃತಿಗಳನ್ನು ಹೊರತಂದರಾ...ಎಂದು ಅಲ್ಲಲ್ಲಿ ಹುಡುಕುತ್ತ ಸಾಗಿದಾಗ ಕಂಡಿದ್ದು ಯಥಾ ಪ್ರಕಾರ ಕಲಾವಿದನ ಎಂದಿನ ಚಿತ್ರಣವೇ! ಕೊರೊನಾ ನೆಪವಷ್ಟೆ! ಕಲಾವಿದ ಕಲಾವಿದನೇ...ಗೀಚುವಿಕೆ, ರೇಖಿಸುವಿಕೆ, ಧೇನಿಸುವಿಕೆ, ಅಮೂರ್ತಕ್ಕೊಂದು ರೂಪ ಕೊಡುವ ಚಿತ್ರಣವೇ ಎಲ್ಲೆಡೆ...

‘ಚಿತ್ರಕಲೆ ಸ್ವಯಂ ಅನ್ವೇಷಣೆ. ಕಲಾವಿದ ತಾನು ಏನು ಎನ್ನುವುದನ್ನು ತನ್ನ ಕಲಾಕೃತಿಗಳಲ್ಲಿ ಅಭಿವ್ಯಕ್ತಿಸುತ್ತಾನೆ’ ಎನ್ನುವ ಅಮೆರಿಕನ್‌ ಪೇಂಟರ್‌ ಜಾಕ್ಸನ್‌ ಮಾತು ನೆನಪಿಗೆ ಬಂತು.

ಹಿರಿಯ ಕಲಾವಿದರೊಬ್ಬರು ಎರಡೂವರೆ/ಮೂರು ತಿಂಗಳು ಕುಳಿತು ಬೃಹತ್‌ ಕ್ಯಾನ್ವಾಸ್‌ (15*7 ಅಡಿ) ಮೇಲೆ ’ಕಾಲಚಕ್ರ’ ಚಿತ್ರಿಸಿದರೆ, ಸ್ಟುಡಿಯೊ ಮಾಡಿಕೊಂಡು, ಕಲಾತರಗತಿ ತೆಗೆದುಕೊಳ್ಳುತ್ತಿದ್ದ ಕಲಾವಿದರು ಇದು ಕಷ್ಟಕಾಲ ಎನ್ನುತ್ತಾರೆ. ಇನ್ನೊಬ್ಬ ಕಲಾವಿದರು, ಕಳೆದ ವರ್ಷ ಭಾರಿ ಗಾಳಿ ಮಳೆಗೆ ಕುಸಿದು ಬಿದ್ದಿದ್ದ ಮಣ್ಣಿನ ಮನೆಯನ್ನು ತೆಗೆಸಿಹಾಕಿ, ಹೊಸ ಮನೆ ಕಟ್ಟಿ ನಿಲ್ಲಿಸಿ, ಈಗಷ್ಟೆ ಕ್ಯಾನ್ವಾಸ್‌ಗೆ ಬಣ್ಣ ಹಚ್ಚಲು ಕುಂಚ ಕೈಗೆತ್ತಿಕೊಂಡಿದ್ದಾರೆ. ಲಾಕ್‌ಡೌನ್‌ ಸಮಯ ಒತ್ತಡದ ದೈನಿಕದಿಂದ ಕೊಂಚ ಬಿಡುವು ಸಿಕ್ಕು, ಧಾವಂತ ತಪ್ಪಿಸಿತು ಎನ್ನುವುದು ಮತ್ತೊಬ್ಬ ಕಲಾವಿದೆಯ ಅನಿಸಿಕೆ.

ಮನೆಯೊಳಗಿದ್ದರೂ ಹೊಸದರತ್ತ ತುಡಿಯುತ್ತ, ಬ್ರಶ್‌, ಬಣ್ಣ ಸುರುವಿದ ಪ್ಯಾಲೆಟ್‌ನೊಂದಿಗೆ ತದೇಕಚಿತ್ತರಾಗಿ ಈಸಲ್ ಎದುರು ಕುಳಿತು, ಆಗಷ್ಟೇ ರಟ್ಟಿನ ಕಟ್ಟು ಬಿಚ್ಚಿದ ತಾಜಾ ಕ್ಯಾನ್ವಾಸ್‌ಗೊಂದಿಷ್ಟು ಹೊಸರೂಪ ಕೊಡುವ ಕೆಲಸ ಮಾಡಿದ ಕಲಾವಿದರು ಮಾತಿಗೆ ಸಿಕ್ಕಿದರು.

ಬನ್ನಿ, ‘ಕಲಾಲೋಕ’ದಲ್ಲಿ ಒಂದಿಷ್ಟು ಸುತ್ತಿ ಕಲಾವಿದರ ಅನುಭವ ಕಥನ ತಿಳಿಯೋಣ...

ಕೊರೊನಾ ಕಾಲದಲ್ಲಿ ‘ಕಾಲಚಕ್ರ’...

ಇದು 'ಕಾಲಚಕ್ರ’ ಎಂಬ ವಿಷಯದ ಚಿತ್ರ. 15 *7 ಅಡಿ ಅಳತೆಯ ಕ್ಯಾನ್‌ವಾಸ್‌ನಲ್ಲಿ ಅಕ್ರ್ಯಾಲಿಕ್ ಕಲರ್ ಬಳಸಿ ಮಾಡಿರುವ ಪೇಂಟಿಂಗ್. ಗೋಕರ್ಣದ ಮಹರ್ಷಿ ದೈವರಾತರು ಇದನ್ನು ಕಲ್ಪಿಸಿ, ನೇಪಾಳದಲ್ಲಿ ಉಳಿದು, ಅಲ್ಲಿಯ ಚಿತ್ರಕಾರರ ಸಹಕಾರ ಪಡೆದು ನಿರ್ಮಿಸಿದ ಅದ್ಭುತ ಕಲಾಕೃತಿಯ ಮರು ಸೃಷ್ಟಿ. ಅಲ್ಲಿದ್ದ ಚಿತ್ರ ಜೀ‌ರ್ಣಾವಸ್ಥೆಯಲ್ಲಿದ್ದುದರಿಂದ ನಾನು ಹೊಸದಾಗಿ ಚಿತ್ರಿಸಿದ್ದೇನೆ ಎನ್ನುತ್ತ ’ಕಾಲಚಕ್ರ’ ಕಲಾಕೃತಿ ಬಗ್ಗೆ ವಿವರಿಸಿದವರು ಹಿರಿಯ ಕಲಾವಿದ, ಕಲಾ ಶಿಕ್ಷಕ ಶಿರಸಿಯ ನೀರ್ನಳ್ಳಿ ಗಣಪತಿ ಅವರು.

’ಕಾಲಚಕ್ರ’ದಲ್ಲಿ ಯುಗಗಳು, ಅವತಾರಗಳು, ಎಲ್ಲ ದೇವರುಗಳು, ದೇವಿಯ ಹಲವು ರೂಪಗಳು, ಸೂರ್ಯ- ಚಂದ್ರರು, ಅಷ್ಟ ದಿಕ್ಪಾಲಕರು, ನರರು, ಪಶು-ಪಕ್ಷಿಗಳು ಎಲ್ಲವೂ ಒಂದು ರಥದಲ್ಲಿ ಸಮಾವೇಶವಾಗಿವೆ. ಅದಕ್ಕೆ ‘ವಿಶ್ವರಥ,ಜ್ಯೋತಿ ರಥ, ಶರೀರರಥ’ ಎಂದು ಹೆಸರಿಸಲಾಗಿದೆ. ಕಾಲಚಕ್ರದೊಂದಿಗೆ ಸಮಸ್ತ ದೇವ-ಮಾನವ-ಪಶುಪಕ್ಷಿಗಳ ಬದುಕಿನ ರಥಯಾತ್ರೆ ಈ ಚಿತ್ರದ ಕಲ್ಪನೆ.

ಇಷ್ಟು ದೊಡ್ಡ ಪೇಂಟಿಂಗ್‌ಗೆ ವರ್ಣ ಸಂಯೋಜಿಸಲು ಸುಮಾರು ಎರಡೂವರೆ, ಮೂರು ತಿಂಗಳು ಬೇಕಾದವು. ನಿಜಕ್ಕೂ ಕೊರೊನಾ ಲಾಕ್‌ಡೌನ್ ನನಗೆ ಪ್ರಯೋಜನ ಆಗಿದೆ. ಇಂಥದ್ದೊಂದು ಮಹತ್ಕಾರ್ಯಕ್ಕೆ ಸಹಕಾರಿ ಆಯಿತು. ಈ ಚಿತ್ರವನ್ನು ಗೋಕರ್ಣದ ಅಶೋಕೆ ಎಂಬಲ್ಲಿ ಆಗುತ್ತಿರುವ ‘ಮಹರ್ಷಿ ದೈವರಾತರ ಸ್ಮಾರಕ ಭವನ’ದಲ್ಲಿ ದಲ್ಲಿ ಶಾಶ್ವತವಾಗಿ ಇಡಲಾಗುತ್ತಿದೆ ಎಂದರು.

ಕಲೆಯನ್ನೇ ನಂಬಿದವರಿಗೆ ಕಷ್ಟಕಾಲ...

ಸದಾ ಒತ್ತಡದಿಂದ ದೈನಿಕ ಮಾಡುತ್ತಿದ್ದ ನಮಗೆಲ್ಲ ಆರಂಭಿಕ ದಿನಗಳಲ್ಲಿ ಎಲ್ಲೆಡೆ ‘ಲಾಕ್‌ಡೌನ್’ ಮೌನ ಖುಷಿ ನೀಡಿತ್ತು. ಸ್ಟುಡಿಯೋದಿಂದ ಕಲಾ ಸಾಮಗ್ರಿಗಳನ್ನು ಎತ್ತಿಕೊಂಡು ಮನೆಗೆ ಹೋಗಿ ಅಲ್ಲಿ ಚಿತ್ರ ಬರೆಯಲು ತೊಡಗಿದೆ. ದಿನಕಳೆದಂತೆ ಕಷ್ಟವೆನಿಸತೊಡಗಿದೆ. ಪ್ರತಿದಿನ ಸ್ಟುಡಿಯೋದಲ್ಲಿ ಕುಳಿತು ಪೇಂಟಿಂಗ್ಸ್‌ ರಚಿಸುವುದು, ಮಾರಾಟ, ಕಲಾಸಕ್ತ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳುವುದೆಲ್ಲ ತಪ್ಪಿದೆ. ಕಲೆಯನ್ನೇ ನಂಬಿ ಬದುಕುತ್ತಿರುವ ಕಲಾವಿದರಿಗೆ ಕಷ್ಟವಾಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ಕಲಾವಿದ ಶಂಕರ ಕಡಕುಂಟ್ಲ ಅವರು.

ಒತ್ತಡ ರಹಿತ ಅವಧಿಯಿದು...

ನಿಜ ಹೇಳಬೇಕೆಂದರೆ ಬರಹಗಾರ, ಕಲಾವಿದ ಎಲ್ಲರಿಗೂ ಏಕಾಂತ ಬೇಕೇ ಬೇಕು. ಅಂತಹ ಏಕಾಂತವನ್ನು ಒದಗಿಸಿಕೊಟ್ಟಿದ್ದು ‘ಲಾಕ್‌ಡೌನ್‌’. ಅಷ್ಟಕ್ಕೂ ನಾನಂತೂ ಹೊರಗಡೆ ಓಡಾಟ ಮಾಡುವುದು ಕಡಿಮೆ. ಹೀಗಾಗಿ ನನಗೇನೂ ಲಾಕ್‌ಡೌನ್‌ ನಿಂದ ಕಷ್ಟವಾಗಿಲ್ಲ ಎನ್ನುತ್ತಾರೆ ಹುಬ್ಬಳ್ಳಿಯ ಕಲಾವಿದೆ ಶ್ಯಾಮಲಾ ಗುರುಪ್ರಸಾದ್‌.

ಇನ್ನೊಂದು ಧನಾತ್ಮಕ ಅಂಶವೆಂದರೆ ಈ ಅವಧಿಯಲ್ಲಿ ಹೊಸದಾಗಿ ಕಲಾ ಪ್ರದರ್ಶನ ಮಾಡಬೇಕು, ಇನ್ಯಾರಿಗೋ ಕಲಾಕೃತಿ ಕೊಡಬೇಕು ಎನ್ನುವ ಧಾವಂತ ಇಲ್ಲ. ಹೀಗಾಗಿ ನನ್ನ ಮನಸ್ಸಿಗೆ ಶಾಂತಿ, ಸಮಾಧಾನ ಕೊಟ್ಟಿದೆ. ಎಂದಿನ ಅವಸರದ ಬದುಕು ಇರಲಿಲ್ಲ. ಆದರೆ ನನ್ನೊಬ್ಬನ ಬದುಕನ್ನೇ ನೋಡದೇ ಕಲೆಯನ್ನೇ ನಂಬಿದ ಇತರ ಕಲಾವಿದರ ಬದುಕು ಕಷ್ಟದಲ್ಲಿದೆಯೆಂದು ಕೇಳಿದ್ದೇನೆ. ಅದು ಬೇಸರದ ಸಂಗತಿ.

ವಿಶೇಷವಾಗಿ ಕಲಾ ಗ್ಯಾಲರಿಗಳಿಗೆ ಭೇಟಿ, ಕಲಾವಿದರೊಂದಿಗೆ ಮುಖಾಮುಖಿ ಸಾಧ್ಯವಾಗುತ್ತಿಲ್ಲ ಎನ್ನುವ ಬೇಸರವೊಂದು ಕಾಡುತ್ತಿದೆ. ಜತೆಗೆ ಕಲಾವಿದರಿಗೆ, ಬರಹಗಾರರಿಗೆ ಅಂತಿಮವಾಗಿ ಜನರೊಂದಿಗೆ ಮುಖಾಮುಖಿಯಾಗಬೇಕು ಎನ್ನುವ ಹಂಬಲ ಸಹಜ. ಅದು ಈಗ ಸಾಧ್ಯವಾಗುತ್ತಿಲ್ಲ ಎನ್ನುವುದು ಈಗಿನ ಸಮಸ್ಯೆಯೂ ಹೌದು ಎನ್ನುತ್ತಾರೆ ಅವರು.

250ಕ್ಕೂ ಹೆಚ್ಚು ಇಲಸ್ಟ್ರೇಷನ್‌ ರೇಖಿಸಿದೆ...

ಲಾಕ್‌ಡೌನ್‌ನಿಂದಾಗಿ ಕಲಾಶಿಕ್ಷಣದಿಂದ ನಾವೆಲ್ಲ ಒಂದಿಷ್ಟು ದೂರವಾಗುವಂತಾಗಿತ್ತು. ಆ ಸಂದರ್ಭದಲ್ಲಿ ಕಾಡುತ್ತಿದ್ದ ನಿರ್ವಾತವನ್ನು ತುಂಬಿದ್ದು ಯಕ್ಷಗಾನ ಪುಸ್ತಕವೊಂದಕ್ಕೆ ಇಲಸ್ಟ್ರೇಷನ್‌ (illustration) ಮಾಡಿಕೊಡುವ ಕೆಲಸ. 250ಕ್ಕೂ ಹೆಚ್ಚು ಚಿತ್ರಗಳನ್ನು ರೇಖಿಸಿದೆ. ಅದು ಯಕ್ಷದಿಗ್ಗಜ ’ಶಂಕರನಾರಾಯಣ ಸಾಮಗ’ರ ಜೀವನ ಚರಿತ್ರೆ. ಹೀಗಾಗಿ ಅವರ ಬದುಕಿನ ಅಧ್ಯಯನವೂ ಆಯ್ತು. ಆ ಕಾಲದ ಯಕ್ಷಲೋಕದ ಪರಿಚಯವೂ ಆಯ್ತು ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಹಾಗೂ ವ್ಯಂಗ್ಯಚಿತ್ರಕಾರ ಸತೀಶ್‌ ಯಲ್ಲಾಪುರ ಅವರು.

‘ಧಾರವಾಡದ ಶೈಕ್ಷಣಿಕ ಇಲಾಖೆಯಿಂದ ಕೊರೊನಾ ಜಾಗೃತಿ ಪೋಸ್ಟರ್‌ ರಚನೆ ಮಾಡಿಕೊಟ್ಟೆ. ತದನಂತರ ಕಾದಂಬರಿಗೆ ಮುಖಪುಟ ಮತ್ತು ಒಳಪುಟಗಳ ರೇಖಾಚಿತ್ರ ರಚಿಸಿದೆ. ಈಗ ಇನ್ನಷ್ಟು ಕಾದಂಬರಿಗಳಿಗೆ ರೇಖಿಸುತ್ತಿದ್ದೇನೆ. ಎಸ್ಸೆಸ್ಸೆಲ್ಲಿ ಮತ್ತು ಪಿಯುಸಿ ಪಠ್ಯಪುಸ್ತಕಕ್ಕೆ ಸಂಬಂಧಪಟ್ಟ ನೂರಾರು ರೇಖಾಚಿತ್ರಗಳನ್ನು ಬರೆದೆ’ ಎನ್ನುತ್ತಾರೆ ಅವರು.

ಬಿದ್ದ ಮಣ್ಣಿನ ಮನಿ ತೆಗೆದು ಹೊಸದು ಕಟ್ಟಿದೆ...

'ಕಳೆದ ವರ್ಷದ ಭಾರಿ ಮಳೆ, ನೆರೆಹಾವಳಿಗೆ ವೀರಾಪುರ ಓಣಿಯಲ್ಲಿರುವ ನನ್ನ ಮಣ್ಣಿನ ಮನಿ ಬಿದ್ದ್ ಹೋಗಿತ್ರೀ. ಅದಕ ನನ್ನ ಕ್ಯಾನ್ವಾಸ್‌, ಬಣ್ಣ ಎಲ್ಲ ಸ್ನೇಹಿತರ ಮನ್ಯಾಗ ಇಟ್ಟಿದ್ದೆ. ಬಾಡಿಗಿ ಮನಿ ಚಿಕ್ಕದಿತ್ತು. ಭಾಳ ವರ್ಕ್‌ ಮಾಡ್ಲಿಕ್ಕೂ ಆಗಿಲ್ರೀ. ಒಂದಿಷ್ಟು ಪೋಟ್ರೇಟ್‌ (ಭಾವಚಿತ್ರ) ಬರೆದುಕೊಡುವ ಕೆಲಸ ಇತ್ತು. ಅದನ್ನು ಮಾಡಿದೆ. ಲಾಕ್‌ಡೌನ್‌ ಟೈಂ ಈ ಕೆಲಸಕ್ಕೆ ಬಳಸಿಕೊಂಡೆ. ಇದೊಂಥರಾ ನನಗ ಕಲಾಕೃತಿಯೇ! ‘ಹೊಸದನ್ನು ಕಟ್ಟುವ ಕೆಲಸ’ ಅಂತ ತಿಳಿದೇ ಮಾಡಿದೆ’ ಎಂದು ನಗುತ್ತ ಹೇಳಿದವರು ಹುಬ್ಬಳ್ಳಿಯ ಜಲವರ್ಣ ಕಲಾವಿದ ಗುರುಸಿದ್ದಪ್ಪ ಮಲ್ಲಾಪುರ.

ಒಂದರ್ಥದಲ್ಲಿ ಲಾಕ್‌ಡೌನ್ ಸಂಕಷ್ಟ ಸಾಕಷ್ಟು ಬಿಡುವು ಕೊಡ್ತು. ಈಗಷ್ಟೇ ಬಣ್ಣಗಳ ಡಬ್ಬ, ಕ್ಯಾನ್ವಾಸ್‌, ಈಸಲ್ ಹೊಸ ಮನೆಗೆ ಶಿಫ್ಟ್ ಮಾಡೀನಿ...ಇನ್ನು ಹೆಚ್ಚು ಹೆಚ್ಚು ಪೇಂಟಿಂಗ್ ಕೆಲಸ ಶುರು ನೋಡ್ರಿ ಎಂದರು ಮಲ್ಲಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.