ADVERTISEMENT

ಯಕ್ಷಗಾನ‌ದಲ್ಲಿ ವಿಜೃಂಭಿಸಿದ ‘ಭಗತ‌ ಸಿಂಹ‌’

ಕ್ರಾಂತಿಕಾರಿ ಭಗತ್ ಸಿಂಗ್‌ನ ಕಥನವನ್ನು ಯಕ್ಷರಂಗಕ್ಕಿಳಿಸಿ ಯಶಸ್ವಿ ಪ್ರಯೋಗ

ಬಾಲಚಂದ್ರ ಎಚ್.
Published 21 ಆಗಸ್ಟ್ 2020, 19:30 IST
Last Updated 21 ಆಗಸ್ಟ್ 2020, 19:30 IST
ಕ್ರಾಂತಿ ಸೂರ್ಯ ಭಗತ ಸಿಂಹ ಯಕ್ಷಗಾನ ಪ್ರಸಂಗದ ದೃಶ್ಯ
ಕ್ರಾಂತಿ ಸೂರ್ಯ ಭಗತ ಸಿಂಹ ಯಕ್ಷಗಾನ ಪ್ರಸಂಗದ ದೃಶ್ಯ   

ಐತಿಹಾಸಿಕ ಪ್ರಸಂಗಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕಥನವನ್ನು ಯಕ್ಷಗಾನಕ್ಕೆ ಒಗ್ಗಿಸುವುದು ಸವಾಲಿನ ಕೆಲಸ. ಮೂಲ ಕಥನಕ್ಕೆ ಸ್ವಲ್ಪವೂ ಚ್ಯುತಿ ಬಾರದಂತೆ ರಂಗಸ್ಥಳದ ಮೇಲೆ ತರುವುದು ಕಲಾವಿದರಿಗಿರುವ ಬಹುದೊಡ್ಡ ಸವಾಲು. ಈ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ ಉಡುಪಿ ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು.

ಸ್ವಾತಂತ್ರ್ಯ ಹೋರಾಟಗಾರರ ಜೀವನ, ಆದರ್ಶಗಳು ಯುವಕರಿಗೆ ತಲುಪಬೇಕು ಎಂಬ ಉದ್ದೇಶದಿಂದ ಭಗತ್ ಸಿಂಗ್ ಅವರ ಕಥನಕ್ಕೆ ಕರಾವಳಿಯ ಗಂಡುಕಲೆ ಯಕ್ಷಗಾನದ ರೂಪ ಕೊಟ್ಟಿದ್ದಾರೆ. ಕ್ರಾಂತಿಕಾರಿ ಭಗತ್ ಸಿಂಗ್ ತೆಂಕುತಿಟ್ಟು ಯಕ್ಷಗಾನದಲ್ಲಿ ‘ಕ್ರಾಂತಿ ಸೂರ್ಯ ಭಗತ ಸಿಂಹ’ನಾಗಿ ವಿಜೃಂಭಿಸಿದ್ದಾನೆ.

ಯಕ್ಷ ಸುಮನಸ ಸಂಸ್ಥೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವ ದಿನದಂದು ಬ್ರಹ್ಮಾವರದ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರದರ್ಶನಗೊಂಡ ಯಕ್ಷಗಾನ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲಿ ಪ್ರಸಾರವಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.

ADVERTISEMENT

19 ವೇಷಗಳು,105 ಪದ್ಯಗಳು ಹಾಗೂ25 ದೃಶ್ಯವನ್ನೊಳಗೊಂಡ5 ತಾಸಿನ ಯಕ್ಷಗಾನ ಪ್ರಸಂಗ ಯಕ್ಷಾಭಿಮಾನಿಗಳ ಮನಗೆದ್ದಿದ್ದು,ಮತ್ತಷ್ಟು ಹೋರಾಟಗಾರರ ಪ್ರಸಂಗಗಳನ್ನು ಯಕ್ಷಗಾನಕ್ಕೆ ತರುವಂತೆ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಹುರಿದುಂಬಿಸಿದ್ದಾರೆ.

ಭಗತ ಸಿಂಹ ಕಥನವನ್ನು ಯಕ್ಷಗಾನಕ್ಕೆ ಒಗ್ಗಿಸುವಾಗ ಬಹಳಷ್ಟು ಸವಾಲುಗಳಿದ್ದವು. ಆಂಗ್ಲ ವೇಷ, ಸಂಭಾಷಣೆ ಹಾಗೂ ಬ್ರಿಟಿಷರ ಹೆಸರುಗಳನ್ನು ಯಕ್ಷಗಾನೀಯ ಪರಿಭಾಷೆಗೆ ಬದಲಿಸುವುದು ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಕಲಾವಿದರು ಸಾಕಷ್ಟು ಪೂರ್ವ ತಯಾರಿ ನಡೆಸಬೇಕಾಯಿತು. ಭಗತ್‌ ಸಿಂಗ್‌ ಅವರ ಕುರಿತ ಹಲವು ಪುಸ್ತಕಗಳನ್ನು ಅಧ್ಯಯನ ಮಾಡಬೇಕಾಯಿತು ಎಂದರು ಪ್ರಸಂಗ ರಚನೆಕಾರ ಪ್ರಸಾದ್ ಕುಮಾರ್ ಮೊಗೆಬೆಟ್ಟು.

ಮೂಲ ಕಥನದಲ್ಲಿ ಬರುವ ‘ಕಾಕೋರಿ ರೈಲು ದುರಂತ’ ಪದವನ್ನು ‘ಉಗಿಬಂಡಿ ದುರಂತ’ ಎಂತಲೂ, ‘ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ’ವನ್ನು ‘ಸಭಾಸದನದಲ್ಲಿ ಸಿಡಿಮದ್ದು ಸಿಡಿಸಲಾಯಿತು’ ಎಂತಲೂ, ಬ್ರಿಟಿಷ್ ಅಧಿಕಾರಿ ಸ್ಯಾಂಡರ್‌ ಎಂಬುವನ ಹೆಸರನ್ನು ಸ್ಯಾಂಡರ, ಸ್ಕಾಟ್ ಎಂಬುವನ ಹೆಸರನ್ನು ಸ್ಕಾಟ, ಡಯಾರ್‌ ಎಂಬುವನ ಹೆಸರನ್ನು ಡಯಾರ, ಹೀಗೆ, ಸಾಧ್ಯವಾದಷ್ಟು ಆಂಗ್ಲ ಪದಗಳನ್ನು ಯಕ್ಷಗಾನದ ಚೌಕಟ್ಟಿಗೆ ಬದಲಿಸಲಾಗಿದೆ.

ಬ್ರಿಟಿಷ್ ಅಧಿಕಾರಿಗಳ ವೇಷಭೂಷಣವನ್ನು ಪೌರಾಣಿಕ ಕಥಾಪ್ರಸಂಗಗಳಲ್ಲಿ ಬರುವ ಕಂಸ ಹಾಗೂ ಇತರ ಖಳರಂತೆ ಬದಲಿಸಲಾಗಿದೆ. ಯಕ್ಷಗಾನದ ಮಡಿವಂತಿಕೆಯ ಚೌಕಟ್ಟು ಮೀರದೆ, ಪಾತ್ರಗಳನ್ನು ಕಟ್ಟಿಕೊಡಲಾಗಿದೆ ಎಂದರು ಪ್ರಸಾದ್ ಮೊಗೆಬೆಟ್ಟು.

‘ಕ್ರಾಂತಿಕಾರಿ ಭಗತ ಸಿಂಹ’ 27ನೇ ಪ್ರಸಂಗವಾಗಿದ್ದು, ಮುಂದೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರ ಕಥನಗಳನ್ನು ರಂಗಸ್ಥಳಕ್ಕೆ ತರುವ ಹಾಗೂ ಯಕ್ಷಗಾನದ ಸಂವಿಧಾನಕ್ಕೆ ತಕ್ಕಂತೆ ಬದಲಿಸುವ ಉದ್ದೇಶವಿದೆ ಎಂದರು.

ಪಾತ್ರಧಾರಿಗಳ ಪರಿಚಯ

ಭಗತ ಸಿಂಹ: ವಿಶ್ವನಾಥ್ ಪೂಜಾರಿ ಎನ್ನಾರು

ಚಂದ್ರಶೇಖರ ಆಜಾದ್: ಸುಜಯೀಂದ್ರ ಹಂದೆ ಕೋಟ

ಬಾಲ ಭಗತ್ ಸಿಂಗ್‌: ಸಾತ್ವಿಕ್‌

ಸುಖದೇವ್‌: ಶ್ರೀಕಾಂತ್ ಭಟ್ ವಡ್ಡರ್ಸೆ

ರಾಜಗುರು: ಸ್ಫೂರ್ತಿ ಭಟ್‌

ಕಿಶನ್‌ ಸಿಂಹ: ವೆಂಕಟೇಶ್‌ ಕ್ರಮಧಾರಿ

ವಿದ್ಯಾವತಿ ಕೌರ್: ಹೇಮಂತ್ ಕುಮಾರ್‌

ರಾಂ ಪ್ರಸಾದ್‌ ಬಿಸ್ಮಿಲ್ಲ: ಪ್ರಸಾದ್ ಬಿಲ್ಲವ

ಅರ್ಜುನ್ ಸಿಂಹ–ಮಹೇಂದ್ರ ಆಚಾರ್ ಹೆರಂಜೆ

ಸ್ಯಾಂಡರ್:‌ ಶರತ್ ಪಡುಕೆರೆ

ಜನರಲ್ ಡಯಾರ್: ರಾಘವೇಂದ್ರ ಪೇತ್ರಿ

ಸ್ಕಾಟ್‌: ಶಿವರಾಜ್‌

ಅಷ್ಫಕ್‌ವುಲ್ಲಾ ಖಾನ್: ಆದರ್ಶ‌ ಮಣೂರು

ಚನನ್ ಸಿಂಗ್ ಮತ್ತು ಜಟ್ಟಿ: ವಿಘ್ನೇಶ್ ದೇವಾಡಿಗ

ಪ್ರಾಣನಾಥ ಮೆಹ್ತ: ರಾಮಚಂದ್ರ ಐತಾಳ್‌‌

-------------

ಪ್ರಸಂಗ: ಪ್ರಸಾದ್ ಕುಮಾರ್ ಮೊಗಬೆಟ್ಟು

ಹಿಮ್ಮೇಳ: ಹೆರಂಜಾಲು ಗೋಪಾಲ ಗಾಣಿಗ, ಪ್ರಸಾದ್ ಕುಮಾರ್ ಮೊಗೆಬೆಟ್ಟು

ಮದ್ದಳೆ: ರಾಘವೇಂದ್ರ ಹೆಗಡೆ

ಚಂಡೆ: ಕೋಟ ಶಿವಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.