ADVERTISEMENT

ಕಲೆ: ಕತೆ ಹೇಳುತಾವ ಪಟಚಿತ್ರಗಳು

ಮಂದಾಕಿನಿ
Published 18 ಸೆಪ್ಟೆಂಬರ್ 2021, 19:30 IST
Last Updated 18 ಸೆಪ್ಟೆಂಬರ್ 2021, 19:30 IST
ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಅಪೀಂದ್ರ ಸೇನ್‌
ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಅಪೀಂದ್ರ ಸೇನ್‌   

ಅದು ಗೋಪಿಕೆಯರ ನಡುವೆ ಇರುವ ಕೃಷ್ಣನ ಒಂದು ವರ್ಣಚಿತ್ರ. ಸುತ್ತಲೂ ರಂಗೋಲಿ ರೀತಿಯಲ್ಲಿ ಕೃಷ್ಣನ 20 ಪುಟ್ಟ ಚಿತ್ರಗಳು. ಈ ಎಲ್ಲದರಲ್ಲೂ ಕೃಷ್ಣನ ಭಂಗಿ ಒಂದೇ ರೀತಿ ಇದ್ದರೂ ಬಣ್ಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ. ಇದಕ್ಕೆ ಚೌಕಾಕಾರದ ಚೌಕಟ್ಟು. ಅಕ್ಕ–ಪಕ್ಕದ ಚೌಕಟ್ಟು ಕೇವಲ ಹೂವಿನ ಬಳ್ಳಿ, ಮೇಲೆ–ಕೆಳಗೆ ಸಣ್ಣ ಚೌಕಾಕಾರದ ತಲಾ ನಾಲ್ಕು ಜಾಗಗಳಲ್ಲಿ ಶ್ರೀಕೃಷ್ಣನ ಲೀಲೆಯ ಪ್ರಸಂಗಗಳ ಚಿತ್ರಣ, ಇದರ ಮೇಲೆ ಹೂವಿನಬಳ್ಳಿಯ ಅಲಂಕಾರ.

ಹತ್ತಿರದಿಂದ ಈ ವರ್ಣಚಿತ್ರದ ವಿವರ ನೋಡಿದವರು ಅಬ್ಬಾ..! ಎಂದು ಉದ್ಗರಿಸದೆ ಇರಲು ಸಾಧ್ಯವೇ ಇಲ್ಲ, ಅಷ್ಟರ ಮಟ್ಟಿಗೆ ಕುಶಲ ಕಲೆಗಾರಿಕೆ. ಒಂದು ವರ್ಣಚಿತ್ರದಲ್ಲಿ ಅಷ್ಟೊಂದು ಮಾಹಿತಿ, ವಿವರಣೆ. ಎದ್ದು ಕಾಣುವ ಬಣ್ಣದಲ್ಲಿ ಆಕರ್ಷಕ ವಿನ್ಯಾಸದೊಂದಿಗೆ ಮೂಡುವ ಈ ಚಿತ್ರಗಳಿಗೆ ವೀಕ್ಷಕ ಎಷ್ಟೇ ದೂರದಲ್ಲಿದ್ದರೂ ಮರುಳಾಗಲೇ ಬೇಕು. ಚಿತ್ರವೇ ಕತೆಯನ್ನೂ ಹೇಳುವ ವಿಧಾನ– ಇದು ಒಡಿಶಾ ರಾಜ್ಯದ ಪುರಾತನ ಮತ್ತು ಸಾಂಪ್ರದಾಯಿಕ ಕಲೆ ಪಟಚಿತ್ರದ ಹೆಗ್ಗಳಿಕೆ. ಪಟ ಎಂದರೆ ಬಟ್ಟೆ. ಬಟ್ಟೆ ಮೇಲೆ ಬಿಡಿಸುವ ವರ್ಣಚಿತ್ರಗಳ ಗುಚ್ಛವೇ ಪಟಚಿತ್ರ. ವರ್ಣಚಿತ್ರ ದೃಶ್ಯಗಳ ಮೂಲಕ ಕತೆಗಳನ್ನು ಬಿಂಬಿಸುವ ವಿಶಿಷ್ಟ ಪ್ರಕಾರ.

‘ಒಡಿಶಾದ ಪಟಚಿತ್ರ ಕಲಾಪ್ರಕಾರದ ಆರಂಭಕ್ಕೆ ಪುರಿಯ ಜಗನ್ನಾಥನೇ ಸ್ಫೂರ್ತಿಯ ಸೆಲೆ. ಹಲವು ಶತಮಾನಗಳ ಹಿಂದಿನ ಪ್ರಾಚೀನ ಕಲೆ ಇದು. ಜಗನ್ನಾಥ ಮಂದಿರದ ಜತೆಗೇ ಈ ಕಲೆಯ ಉಗಮವೂ ಬೆಸೆದುಕೊಂಡಿದೆ’ ಎಂಬುದು ಆ ರಾಜ್ಯದ ಪಟಚಿತ್ರ ಕಲಾವಿದ ಅಪೀಂದ್ರ ಸ್ವೇನ್‌ ಅವರ ವಿವರಣೆ.

ADVERTISEMENT

ಪುರಿ ಜಿಲ್ಲೆಯಲ್ಲಿರುವ ರಘುರಾಜ್‌ಪುರಗ್ರಾಮದ ಬಹುತೇಕ ಕುಟುಂಬದವರಿಗೆ ಪಟಚಿತ್ರ ರೂಪಿಸುವುದೇ ಕಾಯಕ. ದೇಶ, ವಿದೇಶಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ಪಟಚಿತ್ರ ಖರೀದಿಸುವ ಗ್ರಾಹಕರೂ ಆಗಿದ್ದಾರೆ. ಈ ಗ್ರಾಮವನ್ನು ಪಟಚಿತ್ರ ಕಲೆಯ ಜನ್ಮಸ್ಥಳವೆಂದೂ ಹೇಳಲಾಗುತ್ತದೆ. ಪಾರಂಪರಿಕ ಗ್ರಾಮವಾಗಿ ಕೂಡ ಇದು ವಿಶ್ವದ ಗಮನ ಸೆಳೆದಿದೆ. ಈ ಗ್ರಾಮದವರೇ ಆಗಿರುವ ಅಪೀಂದ್ರ ಅವರಿಗೆ ಇದು ಹೆಮ್ಮೆಯ ವಿಷಯ.

ಇತ್ತೀಚೆಗೆ ಬೆಂಗಳೂರಿನಲ್ಲಿ ದಸ್ತಕಾರ್‌ ಮೇಳದಲ್ಲಿ ಭಾಗವಹಿಸಿದ್ದ ಅವರು ಪಟಚಿತ್ರ ಕಲೆಯ ವೈಶಿಷ್ಟ್ಯವನ್ನು ವಿವರಿಸಿದ್ದು ಹೀಗೆ:

ಪಟಚಿತ್ರಗಳಲ್ಲಿ ನೈಸರ್ಗಿಕ ಬಣ್ಣಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಈ ಚಿತ್ರ ಬಿಡಿಸುವವರು ಒಡಿಶಾದಲ್ಲಿ ‘ಚಿತ್ರಕಾರರು’ ಎಂದೇ ಪ್ರಸಿದ್ಧಿ. ಗೋಡೆಗಳು, ತಾಳೆಗರಿಗಳ ಮೇಲೂ ಇಂಥದ್ದೇ ವರ್ಣಚಿತ್ರವನ್ನು ಬಿಡಿಸಲಾಗುತ್ತದೆ.

ವೈಷ್ಣವ ಪಂಥದ ನಂಬಿಕೆ ಮತ್ತು ಸಿದ್ಧಾಂತಗಳ ಸುತ್ತಲೇ ಪಟಚಿತ್ರದ ಮೂಲ ಕತೆಗಳು ಚಿತ್ರಿತವಾಗುತ್ತವೆ. ವಿಷ್ಣುವಿನ ಅವತಾರವೇ ಆಗಿರುವ ಜಗನ್ನಾಥ ಅಲ್ಲದೆ ರಾಧಾ–ಕೃಷ್ಣ, ಬಾಲಭದ್ರ ಮತ್ತು ಸುಭದ್ರ, ವಿಷ್ಣುವಿನ ಹತ್ತು ಅವತಾರಗಳು, ಗಣೇಶ, ಶಿವ– ಇತ್ಯಾದಿ ದೇವತೆಗಳಿಗೆ ಸಂಬಂಧಿಸಿದ ಕಥಾನಕಗಳು, ರಾಮಾಯಣ, ಮಹಾಭಾರತದ ದೃಶ್ಯಾವಳಿಗಳೂ ಮೂಡಿಬರುತ್ತವೆ. ಪೌರಾಣಿಕ ಪ್ರಸಂಗಗಳ ಈ ಪಟಚಿತ್ರಗಳನ್ನು ನೋಡುತ್ತಿದ್ದಂತೆಯೇ ಕತೆಯೂ ಕಣ್ಣಿಗೆ ಕಟ್ಟುತ್ತದೆ.

ಪ್ರತಿ ಪಟಚಿತ್ರಕ್ಕೆ ಆಲಂಕಾರಿಕ ಚೌಕಟ್ಟು ಇರುತ್ತದೆ. ವರ್ಣಚಿತ್ರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವುದು ಕಪ್ಪು, ಕೆಂಪು, ಹಳದಿ, ಕಿತ್ತಳೆ, ನೀಲಿ, ನೇರಳೆ ಬಣ್ಣಗಳೇ.

ಪುರಿ, ಕೊನಾರ್ಕ್‌ ಮತ್ತು ಭುವನೇಶ್ವರದ ಕೆಲವೆಡೆ ಗೋಡೆಗಳ ಮೇಲೆ ಮೂಡಿಬಂದಿರುವ ಚಿತ್ರಗಳಲ್ಲಿಯೂ ಈ ಕಲೆಯ ಹೊಳಹುಗಳು ಕಾಣಸಿಗುತ್ತವೆ. ದೇವಾಲಯದಲ್ಲಿ ವಿಧಿಯುಕ್ತ ಆಚರಣೆಗಳ ಸಂದರ್ಭದಲ್ಲಿ ಕೆಲವೊಮ್ಮೆ ದೇವರ ಮೂರ್ತಿಗಳಿಗೆ ಬದಲಾಗಿ ಪಟಚಿತ್ರಗಳನ್ನು ಬಳಸುವ ಪದ್ಧತಿಯೇ ಇವುಗಳಿಗಿರುವ ಮಹತ್ವವನ್ನೂ ಸಾರುತ್ತದೆ ಎಂಬ ಅಭಿಮಾನ ಕಲಾವಿದರದ್ದು.


ಕತೆಹೇಳುವಪಟಚಿತ್ರಗಳು

ಪಟಚಿತ್ರದ ತಯಾರಿ: ಸೀಮೆಸುಣ್ಣ ಮತ್ತು ಹುಣಸೆಬೀಜದ ಪುಡಿಯಿಂದ ಮಾಡಿದ ಅಂಟಿನ ಮಿಶ್ರಣವನ್ನು ಕಾಟನ್‌ ಬಟ್ಟೆ ಮೇಲೆ ಮೊದಲು ಲೇಪಿಸುತ್ತಾರೆ. ಇದು ಒಣಗಿದ ನಂತರ ವಿಶೇಷ ರೀತಿಯ ಕಲ್ಲಿನಿಂದ ಬಟ್ಟೆಯ ಮೇಲೆ ಉಜ್ಜುತ್ತಾರೆ. ಕ್ಯಾನ್‌ವಾಸ್‌ ಸಿದ್ಧವಾಗುತ್ತದೆ. ಚಿತ್ರಕಾರರು ಇದರ ಮೇಲೆ ನೈಸರ್ಗಿಕ ಬಣ್ಣದಿಂದ ಚಿತ್ರ ಬಿಡಿಸುತ್ತಾರೆ. ಪೆನ್ಸಿಲ್‌ನಿಂದ ಗೆರೆಗಳನ್ನು ಮೂಡಿಸದೆ ನೇರವಾಗಿ ಬ್ರಶ್‌ ಬಳಸುವಷ್ಟು ಪರಿಣತರು ಈ ಚಿತ್ರಕಾರರು.

ಮನೆಮಂದಿಯೆಲ್ಲಾ ಪಟಚಿತ್ರದ ತಯಾರಿಯಲ್ಲಿ ತೊಡಗುತ್ತಾರೆ. ಚಿತ್ರ ಪೂರ್ಣಗೊಂಡ ಬಳಿಕ ಬಟ್ಟೆಯ ಹಿಂಬದಿಯನ್ನು ಸ್ವಲ್ಪ ಶಾಖಕ್ಕೆ ಒಡ್ಡಲಾಗುತ್ತದೆ. ವಾತಾವರಣದಿಂದ ಆಗಬಹುದಾದ ಹಾನಿಯಿಂದ ಸಂರಕ್ಷಿಸಲು ಅದರ ಮೇಲ್ಭಾಗಕ್ಕೆ ಮೆರುಗೆಣ್ಣೆ ಸವರಲಾಗುತ್ತದೆ. ಇದರಿಂದಾಗಿ ಈ ಚಿತ್ರಗಳು ವರ್ಷಾನುಗಟ್ಟಲೆ ಮಾಸದೆ ಉಳಿಯುತ್ತವೆ.

ಮೂಲ ಆಶಯವನ್ನು ಉಳಿಸಿಕೊಂಡೇ ಪಟಚಿತ್ರ ಕಲಾವಿದರು ಇಂದು ತಮ್ಮ ಕಲೆಯನ್ನು ಇತರ ವಸ್ತು ಮತ್ತು ಮಾಧ್ಯಮಗಳಿಗೆ ವಿಸ್ತರಿಸಿ ಹೊಸರೂಪ ನೀಡಿದ್ದಾರೆ. ಅಪೀಂದ್ರ ಅವರೂ ಇದಕ್ಕೆ ಹೊರತಾಗಿಲ್ಲ. ‘ಮರ, ಅಲ್ಯೂಮಿನಿಯಂ, ಚರ್ಮದ ಉತ್ಪನ್ನಗಳು, ಸ್ಟೀಲ್‌– ಹೀಗೆ ಎಲ್ಲಾ ವಿಧದ ವಸ್ತುಗಳ ಮೇಲೆಯೂ ಈ ವರ್ಣಚಿತ್ರಗಳನ್ನು ಮೂಡಿಸಿದ್ದೇನೆ. ವಾಲ್‌ ಹ್ಯಾಂಗಿಂಗ್ಸ್‌ ರೀತಿಯ ಶೋ–ಪೀಸ್‌ಗಳು, ಬಾಟಲ್‌, ಬ್ಯಾಗ್‌, ಸೀರೆ, ಫ್ಯಾನ್‌, ಪೆನ್‌ಸ್ಟ್ಯಾಂಡ್‌, ಬುಕ್‌ಮಾರ್ಕ್‌ ಮೇಲೆ ಕೂಡ ಈ ಕಲೆ ಮೈದಳೆದಿದೆ. ಆದರೆ ಇಲ್ಲಿ ಎಲ್ಲಾ ಕಡೆಯೂ ಪೌರಾಣಿಕ ಪ್ರಸಂಗವೇ ಇರುತ್ತದೆ ಎಂದೇನೂ ಇಲ್ಲ. ವಿವಿಧ ವಸ್ತುವಿಷಯಗಳ ಚಿತ್ರಣ ಪಟಚಿತ್ರದ ಮಾದರಿಯಲ್ಲೇ ಇರುತ್ತದೆ’ ಎಂದು ವಿವರಿಸುತ್ತಾರೆ.

ಏಕೆ ಹೀಗೆ ಎಂದು ಕೇಳಿದರೆ, ‘ಸಾಂಪ್ರದಾಯಿಕ ಪಟಚಿತ್ರವನ್ನು ಕೊಠಡಿಯಲ್ಲಿ ಒಂದು ಕಡೆ ಇಡಲು ಮಾತ್ರ ಸಾಧ್ಯ. ಇದು ಹೆಚ್ಚು ಜನರ ಗಮನ ಸೆಳೆಯುವುದಿಲ್ಲ. ಆದರೆ ನಾವು ನಿತ್ಯ ಬಳಸುವ ಇತರೆ ವಸ್ತುಗಳ ಮೇಲೆಯೂ ಈ ರೀತಿ ಕಲೆ ಮೂಡಿದರೆ ಹೆಚ್ಚು ಗಮನ ಮತ್ತು ಪ್ರಚಾರ ಪಡೆಯಲು ಸಾಧ್ಯ. ಈಗ ಟಸ್ಸರ್‌ ಸಿಲ್ಕ್‌ನಂತಹ ಬಟ್ಟೆ ಮೇಲೂ ಪಟಚಿತ್ರ ರೂಪಿಸುತ್ತಿದ್ದೇವೆ‘ ಎನ್ನುತ್ತಾರೆ.

‘ವರ್ಣಚಿತ್ರ ಬಿಡಿಸುವಾಗಲೂ ಹೊಸತನ ಇರಬೇಕು. ಕೃಷ್ಣ ಗೋಪಿಕಾ ಸ್ತ್ರೀಯರೊಂದಿಗೆ ಇರುವ ಚಿತ್ರ ಎಂದಷ್ಟೇ ಮೇಲ್ನೋಟಕ್ಕೆ ಕಾಣುವ ಚಿತ್ರದಲ್ಲಿ ಗೋಪಿಕಾ ಸ್ತ್ರೀಯರ ಸಮೂಹವೇ ಆನೆಯ ರೂಪವಾಗಿಯೂ ಕಾಣುವ ರೀತಿ ಮಾಡಲಾಗುತ್ತದೆ. ಗೋಪಿಕೆಯರೊಂದಿಗೆ ಕೃಷ್ಣ ಇರುವಂತೆ ತಕ್ಷಣಕ್ಕೆ ಕಂಡರೂ ಅದೇ ಸಮಯದಲ್ಲಿ ಆನೆಯ ಮೇಲೂ ಆಸೀನನಾಗಿರುತ್ತಾನೆ. ಇದು ವೀಕ್ಷಕರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂಬುದು ಅವರ ಅನುಭವ.

‘ಪ್ರತಿದಿನ 8ರಿಂದ 9ಗಂಟೆಯವರೆಗೆ ಕೆಲಸ ಮಾಡಬೇಕು. ಸತತ ಪರಿಶ್ರಮ, ತಾಳ್ಮೆ ಮತ್ತು ಧ್ಯಾನಸ್ಥ ಮನಸ್ಥಿತಿ ಬೇಡುವ ಕೆಲಸ ಇದು. ಕಾಲಕ್ಕೆ ತಕ್ಕಂತೆ ಕೆಲಸದಲ್ಲಿ ಮಾಡಿಕೊಂಡ ಕೆಲ ಮಾರ್ಪಾಡುಗಳು ಈ ಕಲೆಯನ್ನು ಮುಂದುವರಿಸಿಕೊಂಡು ಹೋಗಲು ನೆರವಾಗಿವೆ’ ಎಂದು 30 ವರ್ಷಗಳಿಂದ ಇದರಲ್ಲಿ ತೊಡಗಿಕೊಂಡಿರುವ ಹಿಂದಿನ ಗುಟ್ಟನ್ನು ಬಹಿರಂಗಪಡಿಸುತ್ತಾರೆ.

ಹಾಂಕಾಂಗ್‌, ಸಿಂಗಪುರ, ಶ್ರೀಲಂಕಾ, ಮಾಲ್ಡೀವ್ಸ್‌ಗೂ ತೆರಳಿ ಪಟಚಿತ್ರ ಕಲೆಯ ಸೊಬಗನ್ನು ವಿದೇಶಿಯರಿಗೆ ಪರಿಚಯಿಸಿರುವ ಇವರು, ಪಾರಂಪರಿಕವಾಗಿ ಬಂದಿರುವ ಈ ಅಪೂರ್ವ ಕಲೆಯನ್ನು 4ನೇ ತರಗತಿಯಲ್ಲಿದ್ದಾಗಲೇ ನೆಚ್ಚಿಕೊಂಡಿದ್ದಾಗಿ ಹೇಳುತ್ತಾರೆ . ಈಗ ಇವರ ಇಬ್ಬರು ಮಕ್ಕಳು, ಪತ್ನಿ, ಅಣ್ಣ–ಅತ್ತಿಗೆ ಎಲ್ಲರೂ ಪಟಚಿತ್ರವನ್ನು ರೂಪಿಸುವವರೇ. ಇವುಗಳ ಕನಿಷ್ಠ ದರ ₹ 10ರಿಂದ ಗರಿಷ್ಠ ದರ ₹ 1.20 ಲಕ್ಷದವರೆಗೆ ಇದೆ. ಅಂತೆಯೇ ಒಂದು ಪಟಚಿತ್ರವನ್ನು ಒಂದು ದಿನದಿಂದ ಹಿಡಿದು ಆರು ತಿಂಗಳು, ವರ್ಷದವರೆಗೂ ರೂಪಿಸಿದ್ದೂ ಇದೆಯಂತೆ. ಇಂತಹ ವಿಶೇಷ ಕಲಾಪ್ರಕಾರ ಅಳಿಯದಿರಲು ಚಿತ್ರಕಾರರಿಗೆ ಬೇಕು ನಿರಂತರ ಪ್ರೋತ್ಸಾಹ ಎಂಬುದು ಇವರ ಆಶಯ.

ಪಟಚಿತ್ರ ಸೇರಿದಂತೆ ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳು ಜಾಗತಿಕವಾಗಿಯೂ ಈಗ ಮನ್ನಣೆ ಪಡೆದುಕೊಂಡಿವೆ. ಪ್ರಾಚೀನ ಸಂಸ್ಕೃತಿ, ಜನಜೀವನ ಅರಿಯಲು ನೆರವಾಗುತ್ತಿವೆ.

ಸಂಪರ್ಕ: 09938620662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.