ADVERTISEMENT

ವಿಶಿಷ್ಟ ಸಂಪ್ರದಾಯದ ದುರುಗ ಮುರುಗಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 5:53 IST
Last Updated 27 ಫೆಬ್ರುವರಿ 2021, 5:53 IST
ಬೀದರ್‌ನಲ್ಲಿ ವಿಶಿಷ್ಟ ವಾದ್ಯ ಬಾರಿಸುತ್ತಿರುವ ದುರ್ಗಮರಗಿ ಮಹಿಳೆಯರು
ಬೀದರ್‌ನಲ್ಲಿ ವಿಶಿಷ್ಟ ವಾದ್ಯ ಬಾರಿಸುತ್ತಿರುವ ದುರ್ಗಮರಗಿ ಮಹಿಳೆಯರು   

ಬೀದರ್‌: ತಲೆಮೇಲೆ ಮರಗಮ್ಮನ ಮೂರ್ತಿಯನ್ನು ಹೊತ್ತು ಡೋಲಿನಾಕಾರದ ವಾದ್ಯವನ್ನು ಭಾರಿಸುವ ಹೆಣ್ಣುಮಗಳು ‘ಮರಗಮ್ಮ ಬಂದಾಳ್ರೆಯವ್ವಾ, ದಾನ ಮಾಡ್ರಿ’ ಎಂಬ ಧ್ವನಿಯೊಂದಿಗೆ ಮನೆ ಮನೆಗೆ ಸಾಗುತ್ತಾರೆ. ಜೊತೆಗೆ ಕೈಯಲ್ಲಿ ಬಾರಕೋಲು ಹಿಡಿದು ಅಬ್ಬರಿಸುವ ಪೋತರಾಜ ತನ್ನದೇ ಅವತಾರದಲ್ಲಿ ಚಾಟಿ ಬೀಸುತ್ತ ಎದುರಾದವರಲ್ಲಿ ಬೇಡುತ್ತ, ಕೆಲವೊಮ್ಮೆ ಆ ಬಾರಕೋಲಿನಿಂದ ತನ್ನ ಶರೀರವನ್ನು ದಂಡಿಸಿಕೊಂಡು ಭಿಕ್ಷೆ ಅರಸುವ ಅಲೆಮಾರಿ ಜನಾಂಗದವರೇ ದುರುಗ ಮುರುಗಿಯರು.

ಕೆಲ ಕಡೆ ಇವರನ್ನು ಬುರ ಬುರ ಪೋಚಮ್ಮನವರೆಂದೂ, ಮರಗಮ್ಮದವರೆಂದೂ ಸಹ ಕರೆಯುತ್ತಾರೆ. ವಿಶಿಷ್ಟ ಜನಪದ ಕಲೆ, ಮರಗಮ್ಮನ ರೂಪದ ಈ ದೇವತೆ ಒಂದು ಕಡೆ ನೆಲೆ ನಿಲ್ಲುವವಳಲ್ಲ, ಊರೂರು ಸುತ್ತುವವಳು. ತಮ್ಮ ದೇವತೆಯನ್ನು ಪೆಟ್ಟಿಗೆಯಲ್ಲಿಟ್ಟು, ಅದನ್ನು ಹೊತ್ತ ಸ್ತ್ರೀ ‘ಉರುಮೆ’ ಅಥವಾ ‘ಅರೆ’ ವಾದ್ಯದ ಬಾರಿಸುತ್ತಿರುತ್ತಾಳೆ. ಆ ಬಡಿತಕ್ಕೆ ತಕ್ಕಂತೆ ಅವಳೊಂದಿಗಿನ ಪೋತರಾಜನ ವೇಷದ ಪುರುಷ ಕುಣಿಯುತ್ತ ಗತ್ತಿನಿಂದ ಹೆಜ್ಜೆ ಹಾಕುತ್ತಾನೆ. ಅವನು ಒಂದೆರಡು ಬಾರಿ ಚಾವಟಿಯಿಂದ ತನ್ನ ಬರಿಮೈಗೆ ಹೊಡೆದುಕೊಂಡು ದೇವರನ್ನು ಹೊಗಳುತ್ತಾನೆ. ಸ್ತುತಿ ಮಾಡುತ್ತ ಚಾವಟಿ ಏಟು ಹೊಡೆದುಕೊಳ್ಳುವ ಈ ‘ಪೋತರಾಜ’ ಬೀದಿಯಲ್ಲಿ ತನ್ನ ವೇಷವನ್ನು ಮೆರೆಯುತ್ತಾನೆ.

ಜನರು ಈ ದುರಗ ಮುರಗಿಯರು ಮನೆಮುಂದೆ ಬಂದಾಗ ಭಕ್ತಿಯಿಂದ ಮೊರದಲ್ಲಿ ದವಸ ಧಾನ್ಯಗಳು, ಜೋಳ, ಕಾಳುಗಳನ್ನು ದೇವತೆಗೆ ಅರ್ಪಿಸುತ್ತಾರೆ. ಪೋತರಾಜ ಅವರ ಮೊರಕ್ಕೆ ಭಂಡಾರ ಹಚ್ಚಿ ಮರಳಿ ಕೊಡುತ್ತಾನೆ. ಆ ಭಂಡಾರವನ್ನು ನಂತರ ಮನೆ ಮಕ್ಕಳಿಗೆಲ್ಲಾ ಹಚ್ಚುವ ಪರಂಪರೆಯಿದೆ. ಆಗಾಗ ಬರುವ ಈ ಬುರ ಬುರ ಪೋಚಮ್ಮನವರಿಗೆ ಕೆಲವರು ಹರಕೆ ಹೊರವುದೂ ಉಂಟು. ಅಂಥವರು ಆ ದೇವಿಗೆ ಕಾಲು ಕಡಗ, ಗೆಜ್ಜೆ, ಚೈನು, ಕಣ್ಣು, ಡಾಬು, ತೋಳಬಂದಿ ಮುಂತಾದ ಒಡವೆಗಳನ್ನು ಅರ್ಪಿಸುತ್ತಾರೆ.

ಮರಗಮ್ಮ ಆಗಾಗ ಊರಿಗೆ, ಮನೆಗೆ ಬಂದು ಹೋಗುವುದರಿಂದ ರೋಗ ರುಜಿನಗಳು ದೂರವಾಗುತ್ತವೆ ಎಂದು ಜನ ನಂಬುತ್ತಾರೆ. ಊರ ಇತರ ಗ್ರಾಮದೇವತೆಗಳ ಜಾತ್ರೆಗಳಲ್ಲೂ ಊರಮ್ಮನನ್ನು ಒಂದು ಗೊತ್ತಾದ ಸ್ಥಳದಲ್ಲಿಟ್ಟು ಪೂಜಿಸುವ ಪದ್ಧತಿಯಿರುತ್ತದೆ. ಇವರ ವೇಷಭೂಷಣಗಳು ವಿಚಿತ್ರವಾಗಿರುತ್ತವೆ. ಮುಖಕ್ಕೆ ಅರಿಶಿಣ, ಹಣೆಗೆ ದೊಡ್ಡ ಬೊಟ್ಟಿನಾಕಾರದ ಕುಂಕುಮ, ಕಣ್ಣಿಗೆ ಕಾಡಿಗೆ, ಪೊದೆ ಮೀಸೆ, ಎದೆಗೂ ಅರಿಶಿಣ ಕುಂಕುಮ ಭಂಡಾರದ ಲೇಪನ, ಕೈ ರೆಟ್ಟಿಗೆ ಬೆಳ್ಳಿಯ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಪೊದೆಗೆಜ್ಜೆ, ಸಾಮಾನ್ಯವಾಗಿ ಕೆಂಪು ಸೀರೆಯನ್ನೇ ನಿರಿಗೆಯಾಗಿ ಕಚ್ಚೆಯ ರೀತಿ ಕಟ್ಟಿದ ಕಾಸೆ, ಕೈಯಲ್ಲಿ ಚಾವಟಿ ಹಿಡಿದ ವೇಷವಿರುತ್ತದೆ. ಅವನೊಂದಿಗೆ ಹೆಣ್ಣುಮಗಳು ಸಾಧಾರಣವಾಗಿ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ವಿವಿಧ ಬೆಳ್ಳಿಯ ಒಡವೆಗಳಿರುತ್ತವೆ. ಒಂದು ಕಡೆ ಭಿಕ್ಷೆ ಸಂಗ್ರಹಿಸುವ ಚೀಲ ಕುತ್ತಿಗೆಗೆ ನೇತು ಹಾಕಿಕೊಂಡಿರುತ್ತಾಳೆ.

ADVERTISEMENT

ದುರ್ಗಮರಗಿಯರು ಬಾರಿಸುವ ವಾದ್ಯವು ಇನ್ನೊಂದು ಕಡೆಯಿರುತ್ತದೆ. ವಾದ್ಯವನ್ನು ಒಂದು ಕಡೆಯಿಂದ ‘ದರ್ರಬುರ್ರ’ ಎಂಬ ಶಬ್ದ ಬಂದರೆ ಬಡಿಯುವ ಕಡೆಯಿಂದ ‘ಢಮ ಢಮ್ಮಿ ಢಮದಮ್ಮಿ’ ಎಂಬ ಶಬ್ದ ಬರುತ್ತದೆ. ಈ ಶಬ್ದ ಜನರ ಕಿವಿಗೆ ಬಂದ ತಕ್ಷಣ ಮರಗಮ್ಮ ಬಂದಳೆಂದು ಜನರು ಭಾವಿಸುತ್ತಾರೆ.

ಇವರು ಒಂದೆಡೆ ನೆಲೆ ನಿಲ್ಲದೆ ಅಲೆಮಾರಿಗಳಾಗಿ ವಿಶಿಷ್ಟ ಸಂದರ್ಭಗಳಲ್ಲಿ ದೇವಿಯ ಪ್ರತಿರೂಪವನ್ನು ಹೊತ್ತು ಬರುತ್ತಿದ್ದರು. ಈಗ ಅಲೆಮಾರಿಗಳಾಗಿರುವ ಇವರು ಅಲ್ಲಲ್ಲಿ ಕಾಯಂ ವಾಸಿಗಳಾಗಿ ಮಾರ್ಪಟ್ಟಿರುವುದರಿಂದ ದೇವಿಯನ್ನು ಹೊತ್ತು ತಿರುಗುವ ಹಾಗೂ ಪೋತರಾಜರು ಬರುವುದು ವಿರಳವಾಗಿದೆ. ಹಬ್ಬ, ಜಾತ್ರೆ, ದೀಪಾವಳಿಯಂತಹ ವಿಶಿಷ್ಟ ದಿನಗಳು, ಅಂಗಡಿ ಮುಂಗಟ್ಟುಗಳ ಪೂಜೆಯ ಸಂದರ್ಭದಲ್ಲಿ ಮಾತ್ರ ಕಾಣಿಸುತ್ತಿದ್ದಾರೆ.


ಡಾ.ರಾಮಚಂದ್ರ ಗಣಾಪೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.