ADVERTISEMENT

ನಿಜ ಹೂವಿಗೆ ಸಮ ಘಮವಿಲ್ಲದ ಕುಸುಮ

ಅಭಿಲಾಷ ಬಿ.ಸಿ.
Published 17 ಫೆಬ್ರುವರಿ 2019, 19:30 IST
Last Updated 17 ಫೆಬ್ರುವರಿ 2019, 19:30 IST
   

ಬಿಳಿ ಹಾಗೂ ಕೆಂಪು ಬಣ್ಣದ ಗೌನ್‌ ತೊಟ್ಟಿದ್ದ ವಧುವಿನದು ಅಡಿಯಿಂದ ಮುಡಿಯವರೆಗೂ ಮ್ಯಾಚಿಂಗ್ ಉಡುಪು. ಇದಕ್ಕೆ ಮುಕುಟಪ್ರಾಯವಾಗಿ ಹೆರಳನ್ನು ಸಿಂಗರಿಸಿದ್ದ ಸಂಪಿಗೆ, ಸುಗಂಧರಾಜ, ಮಲ್ಲಿಗೆ, ಗುಲಾಬಿ ಹೂವುಗಳ ದಂಡೆ. ಅದರಲ್ಲೇನು ವಿಶೇಷ ಅಂತೀರಾ?

ಸಹಜ ಹೂಗಳಿಗೂ ಸಡ್ಡು ಹೊಡೆಯುವಂತಿದ್ದಅವು ಘಮವಿಲ್ಲದಕೃತಕ ಕೇಶ ಕುಸುಮಗಳು!

ಸ್ನೇಹಿತೆಯ ಮದುವೆ ಆರತಕ್ಷತೆ ಸಮಾರಂಭದ ಪ್ರಾರಂಭದಲ್ಲಿ ವಧುವಿನ ಮುಡಿಯಲ್ಲಿದ್ದ ಈ ಕೃತಕ ಕುಸುಮಗಳು ಮರುದಿನದ ಸಮಾರಂಭದಲ್ಲಿ ಅವಳ ಆಪ್ತೆಯ ಕೇಶಶೈಲಿಯಲ್ಲಿ ನಗುತ್ತಿದ್ದವು.

ADVERTISEMENT

ಸುರುಳಿ ಕೂದಲ ಚೆಲುವೆಯ ಮುಡಿಯಲ್ಲೂ ಅರಳಿದ್ದ ಕೆಂಗುಲಾಬಿ. ಪದರ ಪದರವಾಗಿ ಹರಡಿಕೊಂಡ ಕಪ್ಪು ಕೇಶರಾಶಿಯ ಆ ಸುಂದರಿಯ ಪ್ರತಿ ಕೂದಲಿಗೂ ಒಂದೊಂದು ರಂಗು. ಆ ರಂಗಿಗೆ ಹೊಂದಿಕೆಯಾಗುವ ಪುಟ್ಟ, ಪುಟ್ಟ ಹೂವುಗಳು.

ನೀಳ ಕೇಶರಾಶಿಯ ಲಲನೆಯ ಮುಂಗುರುಳ ನಡುವಿಗೆ ಕೃತಕ ಪುಷ್ಪಗಳ ಬೈತಲೆ ಬೊಟ್ಟು. ಮಂಡಿಯುದ್ದದ ಜಡೆಯ ಹೆಂಗಸು ಮುಡಿದದ್ದು ಉಡುಗೆಗೆ ಒಪ್ಪುವ ಬಹು ಬಣ್ಣಗಳಿಂದ ವಿನ್ಯಾಸಗೊಂಡ ಹೂವಿನ ದಂಡೆ. ಜಡೆಯುದ್ದಕ್ಕೂ ಬಂಗಾರ ವರ್ಣದ ಹೂವುಗಳಿಂದ ತಯಾರಿಸಿದ್ದ ಜಡೆ ಬಿಲ್ಲೆಗಳು.

ಕಿವಿಯೋಲೆಗಳು, ಸರ, ತೋಳಬಂದಿಗಳು, ಉಂಗುರ, ಸೊಂಟದಪಟ್ಟಿ, ಮುಂದಲೆ ಬೊಟ್ಟು... ಎಲ್ಲದಕ್ಕೂ ಕೃತಕ ಹೂವಿನ ಬಳಕೆ!

ಹೌದು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಈ ಕೃತಕ ಕುಸುಮಗಳು ಮದುವೆ ಸಮಾರಂಭದ ಥೀಮ್‌ಗಳೇ ಆಗಿ ಹೋಗಿವೆ. ಆರತಕ್ಷತೆ, ಅರಿಶಿಣ ಶಾಸ್ತ್ರ, ಮೆಹಂದಿಯಂತಹ ಕಾರ್ಯಕ್ರಮಗಳಲ್ಲಿ ಈ ರೀತಿಯ ಕೃತಕ ಹೂವುಗಳನ್ನು ಥೀಮ್‌ ಆಗಿಸಿಕೊಂಡು, ಸಮಾರಂಭಕ್ಕೆ ಬರುವ ಸ್ನೇಹಿತರು, ಸಂಬಂಧಿಕರು ಇದೇ ಥೀಮ್ ಆಧರಿಸಿ ಕೃತಕ ಕುಸುಮಗಳಿಂದಲೇ ಕೇಶವನ್ನು ಅಲಂಕರಿಸುವುದರ ಜೊತೆಗೆ ಹೂವಿನ ಆಭರಣಗಳನ್ನು ಧರಿಸುವ ಟ್ರೆಂಡ್‌ ಹೆಚ್ಚುತ್ತಿದೆ.

ಪಾಕಿಸ್ತಾನದಿಂದ...

‘ಕೃತಕ ಹೂಗಳ ಈ ಫ್ಯಾಷನ್‌ ಮೊದಲ ಆರಂಭವಾಗಿದ್ದು ಪಾಕಿಸ್ತಾನದಲ್ಲಿ. ನಂತರ ಉತ್ತರ ಭಾರತದಲ್ಲಿ ಜನಪ್ರಿಯವಾಗಿ ಸದ್ಯ ದಕ್ಷಿಣ ಭಾರತಕ್ಕೂ ಲಗ್ಗೆ ಇಟ್ಟಿದೆ. ಸಣ್ಣ ಸಮಾರಂಭಗಳಲ್ಲಿಯೂ ಇವುಗಳು ಬಳಕೆಯಾಗುತ್ತಿವೆ. ಮದ್ಯವಯಸ್ಸಿನ ಮಹಿಳೆಯರು ಈ ಫ್ಯಾಷನ್‌ನನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಕೃತಕ ಹೂಗಳ ಥೀಮ್‌ ಆಧರಿಸಿದ ಸಮಾರಂಭದಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿಯೂ ಕೃತಕ ಹೂಗಳನ್ನು ನೀಡುತ್ತಿದ್ದಾರೆ’ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್ ಜಹೀನಾ ಮುಜಾಹಿದ್‌.

ಮದುವೆಯ ಮೂಹೂರ್ತ ಕಾರ್ಯಕ್ರಮದಲ್ಲಿ ಕೆಲವರು ಈ ಬಗೆಯ ಕೃತಕ ಹೂವುಗಳನ್ನು ಇಷ್ಟಪಡುವುದಿಲ್ಲ. ಆದಾಗ್ಯೂ ಹಗುರವಾಗಿರುವ ಕಾರಣ ವಧುವಿನ ಮೊಗ್ಗಿನ ಜಡೆಗೆ ಬಳಸುತ್ತಿದ್ದಾರೆ. ಆದರೆ ಮೆಹಂದಿ, ಆರತಕ್ಷತೆಯ ಸಮಾರಂಭದಲ್ಲಿ ಇವುಗಳ ಬಳಕೆ ಸರ್ವೇ ಸಾಮಾನ್ಯ. ನೈಸರ್ಗಿಕ ಹೂಗಳನ್ನೇ ತೆಗೆದುಕೊಂಡು ಕೆಲ ರಾಸಾಯನಿಕಗಳು, ಸಾವಯವ ವರ್ಣಗಳನ್ನು ಬಳಸಿ ಇವುಗಳನ್ನು ತಯಾರಿಸುತ್ತಾರೆ ಎಂದು ಅವರು ಮಾಹಿತಿ ನೀಡುತ್ತಾರೆ.

ಮಲ್ಲೆಹೂವ ದಂಡೆ, ಮೊಗ್ಗಿನ ಜಡೆ...

ಹೆಚ್ಚಾಗಿ ಮಲ್ಲಿಗೆ, ಚೆಂಡು ಹೂವು, ಸೇವಂತಿಗೆ, ಗುಲಾಬಿ ಈ ಹೂವುಗಳು ಹಾಗೂ ದಳಗಳನ್ನು ಬಳಸಿ ಈ ಕೃತಕ ಹೂವುಗಳನ್ನು ತಯಾರಿಸಲಾಗುತ್ತದೆ.

ಮಣಬಾರದ ಮೊಗ್ಗಿನ ಜಡೆಹೊತ್ತ ವಧು ಕತ್ತು ತಿರುಗಿಸುವುದು ಹೇಗೆ ಎಂದು ಚಿಂತಿಸುವವರಿಗೆ ಈ ಕೃತಕ ಮಲ್ಲಿಗೆ ದಂಡೆ ವರದಾನದಂತಿದೆ.

ಸಮಾರಂಭಕ್ಕೆ ಧರಿಸಬೇಕಾದ ಉಡುಪಿಗೆ ಎಲ್ಲವೂ ಮ್ಯಾಚಿಂಗ್‌ ಆಗಿದೆ. ಆದರೆ ಹೂವು ಮಾತ್ರ ಸಿಕ್ಕಿಲ್ಲ ಎಂದು ಕೊರಗುವವರಿಗೂ ಈ ಕೃತಕ ಪುಷ್ಪ ಪರ್ಯಾಯದಂತಿದೆ. ಏಕೆಂದರೆ ಉಡುಪಿನ ಎಲ್ಲ ಬಣ್ಣಗಳಲ್ಲಿಯೂ ಈ ಹೂವುಗಳು ಲಭ್ಯವಿದೆ. ಆಭರಣಗಳೆಂದರೆ ಬರಿಯ ಬಂಗಾರ, ಬೆಳ್ಳಿ, ‌ಪ್ಲಾಟಿನಂ, ವಜ್ರದ ಬಣ್ಣಗಳು ಮಾತ್ರ ಎನ್ನುವವರು ಈ ಹೂವಿನ ಆಭರಣಗಳನ್ನು ಧರಿಸಿ ಸಂಭ್ರಮಿಸಬಹುದು.

ಮದುವೆ ಸಮಾರಂಭಗಳೆಂದರೆ, ಹೂವು, ಗಂಧ, ಅಕ್ಷತೆಗಳ ಘಮವಿಲ್ಲದಿದ್ದರೆ ಹೇಗೆ ಎಂದು ಗೊಣಗುವ ಅಗತ್ಯವೂ ಇಲ್ಲ. ಏಕೆಂದರೆ ಈ ಕೃತಕ ಕುಸುಮಗಳ ತಯಾರಿಕೆಯಲ್ಲಿ ಸಾವಯವ ಸುಗಂಧ ದ್ರವ್ಯವನ್ನು ಸಿಂಪಡಿಸಲಾಗಿರುತ್ತದೆ. ಹಾಗಾಗಿ ಎಂದೂ ಮಾಸದ ಸುವಾಸನೆಯನ್ನೂ ಬೀರುತ್ತವೆ.

ಈ ಕೃತಕ ಕುಸುಮಗಳ ಬೆಲೆ ₹ 200 ರಿಂದ ₹ 3000 ಸಾವಿರದವರೆಗೂ ಇದೆ. ಒಮ್ಮೆ ಖರೀದಿಸಿದರೆ ವರ್ಷಾನುಗಟ್ಟಲೆ ಬಳಸಬಹುದು ಎನ್ನುವುದು ಈ ಬಗೆಯ ಪುಷ್ಪಗಳ ಜನಪ್ರಿಯತೆಗೆ ಮತ್ತೊಂದು ಕಾರಣ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.