ADVERTISEMENT

ಮಣ್ಣು ಬಣ್ಣಗಳ ಘಮ

ಎಸ್‌.ಸುಕೃತ
Published 14 ಆಗಸ್ಟ್ 2021, 19:30 IST
Last Updated 14 ಆಗಸ್ಟ್ 2021, 19:30 IST
ಹಂಪಿಯಲ್ಲಿ ಕಂಡ ಬಸವಣ್ಣ
ಹಂಪಿಯಲ್ಲಿ ಕಂಡ ಬಸವಣ್ಣ   

ಅವು ಮರಗಳೇ ಹೌದೇ? ಗೊತ್ತಿಲ್ಲ. ಏಕೆಂದರೆ, ಅವುಗಳಿಗೆ ಎಲೆಯೇ ಇಲ್ಲ. ಆ ಆಕೃತಿಗಳು ನೀರಿನ ಧಾರೆಗಳೂ ಇರಬಹುದು ಅಥವಾ ನೀಲಿ ಬಣ್ಣದ ಇನ್ನೇನಾದರೂ ಆಗಿರಬಹುದು. ಭೂಮಿ–ಆಕಾಶದ ನಡುವೆ ನಂಟು ಬೆಸೆವ ರೇಖೆಗಳು; ವಿಧ ವಿಧ ಬಣ್ಣಗಳು. ಮಳೆಬಿದ್ದ ಭೂಮಿ ಹಸಿರಾದಂತೆ ಕ್ಯಾನ್ವಾಸ್‌ ತುಂಬಾ ಬಣ್ಣದ ಮೆರುಗು...

ಚಿತ್ರಕಲಾವಿದ ಗಣೇಶ್‌ ಪಿ. ದೊಡ್ಡಮನಿ ಅವರ ಇಂಥ ಅಮೂರ್ತ ಚಿತ್ರಗಳ ಪ್ರದರ್ಶನವು ಬೆಂಗಳೂರಿನಲ್ಲಿ ನಡೆಯುತ್ತಿದೆ. ಎಂಕೆಎಫ್‌ ಮ್ಯೂಸಿಯಂ ಆಫ್‌ ಆರ್ಟ್ (ಮಂಜುಶ್ರೀ ಕೈತಾನ್‌ ಫೌಂಡೇಶನ್‌) ಈ ಪ್ರದರ್ಶನ ಏರ್ಪಡಿಸಿದ್ದು, ಆಗಸ್ಟ್‌ 30ರವರೆಗೂ ನಡೆಯಲಿದೆ. ‘ನೆಲದ ಪ್ರಜ್ಞೆ’ (A Sense of the Land) ಎನ್ನುವುದು ಈ ಪ್ರದರ್ಶನದ ವಿಷಯ.

‘ಮಳೆ ಬಿದ್ದಾಗ ಭೂಮಿಯಿಂದ ಏಳುವ ಮಣ್ಣಿನ ವಾಸನೆ ಮತ್ತು ಪ್ರಕೃತಿಯ ಸಂಭ್ರಮ ಎಂತಹ ಕಲಾವಿದನನ್ನೂ ಸೆಳೆಯುತ್ತದೆ. ಹಾಗೆಯೇ ನನ್ನನ್ನೂ ಸೆಳೆದಿದೆ; ಬೆರಗು ಮೂಡಿಸಿದೆ. ಈ ಕುರಿತು ಕಳೆದ ನಾಲ್ಕು ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಗಣೇಶ್‌. ತೈಲವರ್ಣ ಚಿತ್ರದಲ್ಲಿ ಹೆಚ್ಚು ಕೆಲಸ ಮಾಡಿರುವ ಈ ಕಲಾವಿದ, ಕಲಾಕೃತಿಗಳು ನೋಡುಗನನ್ನು ಆಕರ್ಷಿಸುವಂತಿರಬೇಕು ಎಂದು ಬಯಸುತ್ತಾರೆ. ‘ಇವು ಅಮೂರ್ತ ಚಿತ್ರಗಳು ಎನಿಸಿದರೂ ನನ್ನ ಸುತ್ತಮುತ್ತ ಇರುವ ವಸ್ತುಗಳೇ ಈ ಚಿತ್ರಗಳ ಮೂಲ ದ್ರವ್ಯಗಳು. ಮಣ್ಣಿನ ಘಮವನ್ನು ಬಣ್ಣಗಳ ಮೂಲಕ ಅನುಭವಿಸುವಂತೆ ಮಾಡುವ ಪ್ರಯತ್ನವಿದು’ ಎನ್ನುತ್ತಾರೆ ಅವರು.

ADVERTISEMENT

ಗಣೇಶ್‌ ಪಿ. ದೊಡ್ಡಮನಿ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಈ ಅಮೂರ್ತ ಚಿತ್ರಕಲಾವಿದ ದಾವಣಗೆರೆಯಲ್ಲಿ ಚಿತ್ರಕಲೆಯ ಆರಂಭಿಕ ಪಾಠ ಕಲಿತವರು. ನಂತರ ಕಲಬುರ್ಗಿಯಲ್ಲಿ ಬಿಎಫ್‌ಎ ಹಾಗೂ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಎಂಎಫ್‌ಎ ಪದವಿ ಪಡೆದಿದ್ದಾರೆ. ಬೆಂಗಳೂರು ಸದ್ಯಕ್ಕೆ ಅವರ ಕಾರ್ಯಸ್ಥಾನ.

ಅಮೂರ್ತ ಕಲೆ... ಅವರವರ ಭಾವಕ್ಕೆ ಅವರವರ ಭಕುತಿಗೆ

‘ಚಿತ್ರಗಳು ಮನುಷ್ಯನಿಗೆ ಅನಿವಾರ್ಯವಲ್ಲ’ ಎನ್ನುವುದು ಗಣೇಶ್‌ ಅವರ ಖಡಕ್‌ ಮಾತು. ‘ಊಟಕ್ಕೆ, ಬಟ್ಟೆಗೆ ಕೊರತೆ ಇಲ್ಲದೆ ಉತ್ತಮ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವವರು ನಮ್ಮ ಚಿತ್ರಗಳ ಗ್ರಾಹಕರು. ಕಲೆಗಳಲ್ಲಿ ಆಸಕ್ತಿ ಇರುವ ಸ್ಥಿತಿವಂತರು, ತಮ್ಮ ಗೋಡೆಗಳನ್ನು ನೋಡಿದಾಗ ಖಾಲಿ ಎನಿಸಿ, ಪೇಂಟಿಂಗ್ಸ್‌ ತಂದು ಇಡಬೇಕು ಎಂದು ಯೋಚಿಸಿ ಪ್ರದರ್ಶನಗಳಿಗೆ ಬಂದು ಸಾವಿರ, ಲಕ್ಷ ರೂಪಾಯಿ ಕೊಟ್ಟು ಕೊಂಡು ಹೋಗುತ್ತಾರೆ. ಆದರೆ, ಈಗ ದುಡಿಮೆ ಇಲ್ಲದೆ ಕಳೆದ ಒಂದೂವರೆ ವರ್ಷದಿಂದ ಕಲಾವಿದರ ಬದುಕು ದುಸ್ತರವಾಗಿದೆ’ ಎಂದು ಸದ್ಯದ ಸ್ಥಿತಿಯನ್ನು ವಿಶ್ಲೇಷಿಸುತ್ತಾರೆ. ಈಗ ಆಯೋಜನೆಗೊಂಡಿರುವ ಪ್ರದರ್ಶನದಲ್ಲಿಯೂ ಗಣೇಶ್‌ ಅವರಿಗೆ ದೊಡ್ಡ ಮೊತ್ತದ ಆದಾಯ ಬರುವ ನಿರೀಕ್ಷೆಯೇನೂ ಇಲ್ಲ.

‘ರಾಷ್ಟ್ರದಾದ್ಯಂತ ಹಲವು ಆರ್ಟ್‌ ಗ್ಯಾಲರಿಗಳು ಬಾಡಿಗೆ ಕಟ್ಟಲಾಗದೆ ಮುಚ್ಚಿಹೋಗಿವೆ. ಅಂಥ ಗ್ಯಾಲರಿಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶನ ಮಾಡುತ್ತಿದ್ದ ಕಲಾವಿದರ ಬದುಕು ಕಷ್ಟಕ್ಕೆ ಬಿದ್ದಿದೆ. ಬಣ್ಣ ಖರೀದಿಸಲು ಸಾಮರ್ಥ್ಯವಿರುವ ಕಲಾವಿದರು ಮಾರಾಟವಾಗದಿದ್ದರೂ ಪರವಾಗಿಲ್ಲ ಎಂದು ಚಿತ್ರಗಳನ್ನು ರಚಿಸುತ್ತಿದ್ದಾರೆ. ಅಂಥವರ ಬದುಕು ಹೇಗೋ ನಡೆಯುತ್ತಿದೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ, ಸರ್ಕಾರಿ ನೌಕರಿಯಲ್ಲಿದ್ದೆ. ಪೂರ್ತಿ ಸಮಯ ಚಿತ್ರಗಳಿಗೇ ಕೊಡಬೇಕು ಎನ್ನುವ ದೃಷ್ಟಿಯಿಂದ ಕೆಲಸ ಬಿಟ್ಟೆ. ಚಿತ್ರಗಳ ದುಡಿಮೆಯಿಂದಲೇ ಸುಖ ಇತ್ತು. ಆದರೆ, ಕೊರೊನಾ ನೆಮ್ಮದಿ ಕಿತ್ತುಕೊಂಡಿತು. ಅನಿಮೇಷನ್‌ ಗೊತ್ತಿದ್ದರಿಂದ ನನಗೆ ಒಂದು ಕಂಪನಿಯಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಸಿಕ್ಕಿತು, ಬದುಕಿದೆ. ಬಡ ಕಲಾವಿದರ ಪಾಡೇನು ಎಂಬ ಪ್ರಶ್ನೆಯನ್ನು ಅವರು ಮುಂದಿಡುತ್ತಾರೆ.

ಧ್ಯಾನದ ದಿವ್ಯ ಕ್ಷಣ

ಕಲಾವಿದರ ಸಂಕಷ್ಟವನ್ನು ಬಿಚ್ಚಿಡಲು ಅವರು ಮತ್ತೊಂದು ಉದಾಹರಣೆಯನ್ನು ಕೊಡುತ್ತಾರೆ. ‘ಇಂಥ ಕಷ್ಟದ ಸಮಯದಲ್ಲೂ ಕೆಲವರು ಹಣ ಮಾಡಲು ಮುಂದಾದರು. ಕಲಾವಿದರಿಂದ ಕಡಿಮೆ ಬೆಲೆಗೆ ಚಿತ್ರಗಳನ್ನು ಖರೀದಿಸುವುದು. ನಂತರ ಸಮಯ ನೋಡಿ ಅದನ್ನು ಹೆಚ್ಚಿನ ಬೆಲೆಗೆ ಮಾರುವುದು. ದುಡ್ಡಿನ ತುರ್ತು ಅಗತ್ಯ ಇದ್ದ ಹಲವರು ಬಹಳ ಕಡಿಮೆ ಬೆಲೆಗೆ ತಮ್ಮ ಕಲಾಕೃತಿಗಳನ್ನು ಇಂಥ ಮಧ್ಯವರ್ತಿಗಳಿಗೆ ಮಾರಿದರು’ ಎಂದು ವಾಸ್ತವ ಚಿತ್ರಣಕ್ಕೆ ಕನ್ನಡಿ ಹಿಡಿಯುತ್ತಾರೆ.

ಈ ಎಲ್ಲದರ ಮಧ್ಯೆ ಲಾಕ್‌ಡೌನ್‌ ಕೆಲವರಿಗೆ ವರವೂ ಆಯಿತು ಎನ್ನುತ್ತಾರೆ ಗಣೇಶ್‌. ‘ಚಿತ್ರಕಲೆಯ ಕಲಿಕೆಯ ಹಂತದಲ್ಲಿದ್ದವರಿಗೆ ಇದೊಂದು ಅವಕಾಶವಾಗಿ ಪರಿಣಮಿಸಿತು. ಚಿತ್ರಕಲೆ ಕುರಿತ ವೆಬಿನಾರ್‌ಗಳು, ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಭಾಷಣಗಳನ್ನು ಲೈವ್‌ ಆಗಿ ಕೇಳುವ ಮತ್ತು ಭಾಗವಹಿಸುವ ಅವಕಾಶ ಸಿಕ್ಕಿತು. ವಿದ್ಯಾರ್ಥಿಗಳಿಗೆ ಚಿತ್ರ ಕಲಿಕೆಗೆ ಬೇಕಾದ ಧ್ಯಾನ ಮತ್ತು ಅಭ್ಯಾಸ ಎರಡಕ್ಕೂ ಬಹಳಷ್ಟು ಸಮಯ ಸಿಕ್ಕಿದೆ’ ಎನ್ನುವುದು ಅವರ ವಿವರಣೆ.

–ಗಣೇಶ್‌ ದೊಡ್ಡಮನಿ

‘ಕೊರೊನಾ ಅಲೆಗಳು ಬರುತ್ತಲೇ ಇರುತ್ತವೆ. ಇದರಿಂದ ಕಲಾವಿದರಿಗೆ ಆಗಿರುವ ತೊಂದರೆ ಬಗ್ಗೆಯೂ ಗಮನಹರಿಸಬೇಕಿದೆ. ಲಾಕ್‌ಡೌನ್‌ ಸಮಯದಲ್ಲೂ ಆನ್‌ಲೈನ್‌ ಮೂಲಕ ಕಲಾಕೃತಿಗಳ ಮಾರಾಟ ನಡೆದಿದೆ. ಚದುರಿದಂತೆ ಇದ್ದ ನಾವು, ಚಿತ್ರಕಲಾವಿದರೆಲ್ಲ ಸಾಮಾಜಿಕ ಮಾಧ್ಯಮದ ಮೂಲಕ ಒಂದಾಗಿದ್ದೇವೆ, ಹೆಚ್ಚು ಹತ್ತಿರವಾಗಿದ್ದೇವೆ. ಕಲಾವಿದರಿಂದ ನೇರವಾಗಿ ಖರೀದಿ ಮಾಡಲು ಆನ್‌ಲೈನ್‌ ವೇದಿಕೆಗ್ರಾಹಕರಿಗೆ ಸಹಾಯ ಮಾಡಿದೆ. ಲಾಕ್‌ಡೌನ್‌ಗಿಂತ ಮೊದಲು ಇದ್ದ ಸ್ಥಿತಿಗೆ ಎಲ್ಲವೂ ಮರಳಬಹುದು ಎನ್ನುವುದು ಕಷ್ಟ. ಆದರೆ, ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುವುದಂತೂ ಖಚಿತ. ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಜಾಣ್ಮೆಯನ್ನು ತೋರಬೇಕು’ ಎನ್ನುತ್ತಾರೆ ಗಣೇಶ್‌.

‘ಕೊರೊನಾ ಸಾಂಕ್ರಾಮಿಕವು ನಮ್ಮೆಲ್ಲರ ಬದುಕನ್ನು ಕಷ್ಟವಾಗಿಸಿದೆ. ಎಂತಹ ಕಷ್ಟದ ಸಮಯದಲ್ಲೂ ತಮ್ಮ ಕಲೆಗಳ ಮೂಲಕ ಸಾಂತ್ವನ ಹೇಳುತ್ತಿದ್ದ ಕಲಾವಿದರ ಸ್ಥಿತಿ ಹೇಳತೀರದಂತಾಗಿದೆ. ಚಿತ್ರಕಲೆಯೂ ಇದ‌ಕ್ಕೆ ಹೊರತಲ್ಲ. ನನಗೆ ಗೊತ್ತಿದ್ದ ಎಷ್ಟೋ ಕಲಾವಿದರು ತುತ್ತು ಅನ್ನಕ್ಕಾಗಿ ದಿನಸಿ ಅಂಗಡಿಗಳಲ್ಲಿ ಪೊಟ್ಟಣ ಕಟ್ಟುವ ಕೆಲಸಕ್ಕೆ ಸೇರಿಕೊಂಡಿದ್ದನ್ನು, ಕೂಲಿ ಕೆಲಸಕ್ಕೆ ಹೋಗಿದ್ದನ್ನು ನಾನು ನೋಡಿದ್ದೇನೆ. ಹಾಗಾಗಿ, ಈ ಪ್ರದರ್ಶನದಿಂದ ಬರುವ ಆದಾಯದಲ್ಲಿ ಶೇ 50ರಷ್ಟನ್ನು ಇಂಥ ಕಲಾವಿದರ ನೆರವಿಗೆ ನೀಡುತ್ತೇನೆ’ ಎಂದು ಗಣೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.