ADVERTISEMENT

ಬೊಂಬೆಯಾಟಕ್ಕೆ ಆಧುನಿಕತೆಯ ಮೆರಗು

ಅನುಪಮಾ ಹೊಸಕೆರೆಯಿಂದ 10 ಸಾವಿರ ಗೊಂಬೆಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:38 IST
Last Updated 11 ಅಕ್ಟೋಬರ್ 2021, 19:38 IST
ಪುರಾಣದ ಕಥೆ ಹೇಳುವ ಬೊಂಬೆಗಳು--–ಪ್ರಜಾವಾಣಿ ಚಿತ್ರ
ಪುರಾಣದ ಕಥೆ ಹೇಳುವ ಬೊಂಬೆಗಳು--–ಪ್ರಜಾವಾಣಿ ಚಿತ್ರ   

ಬೆಂಗಳೂರು: ಸೂತ್ರದ ಬೊಂಬೆಯಾಟಕ್ಕೆ ಆಧುನಿಕ ಸ್ಪರ್ಶ ನೀಡಿ, ಜಾನಪದ ಕಂಪನ್ನು ವಿದೇಶಗಳಲ್ಲಿ ಪಸರಿಸಿದವರು ನಗರದ ಧಾತು ಸಂಸ್ಥೆಯ ಅನುಪಮಾ ಹೊಸಕೆರೆ. ಬೊಂಬೆಗಳ ಕುಣಿತಕ್ಕೆ ಹೊಸ ಸೊಬಗು ನೀಡಿರುವ ಅನುಪಮಾ ದಸರಾ ವೇಳೆ ಬೊಂಬೆ ಪ್ರದರ್ಶನ ನಡೆಸುತ್ತ ಕಲಾಸಕ್ತರ ಮನಗೆದ್ದಿದ್ದಾರೆ.

30 ವರ್ಷಗಳಿಂದ ಸೂತ್ರದ ಬೊಂಬೆಯಾಟದಲ್ಲಿ ಅನೇಕ ಹೊಸ ಪ್ರಯೋಗಗಳನ್ನ ಮಾಡುತ್ತಾ ಬಂದಿರುವ ಅವರು, ಈ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.ಕೃಷ್ಣನ ಅವತಾರ, ರಾಮಸೀತಾ ಕಲ್ಯಾಣದ ಪ್ರಸಂಗದ ಗೊಂಬೆಗಳು ಈ ಬಾರಿಯ ವಿಶೇಷ.

‘ಅಪರೂಪದ ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಆರು ವರ್ಷಗಳ ಹಿಂದೆ ಧಾತು ಸಂಸ್ಥೆಯನ್ನು ಹುಟ್ಟು ಹಾಕಿದೆ. ಸಂಸ್ಥೆಯ ಮೂಲಕ ಪ್ರತಿ ವರ್ಷ ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ ಆಯೋಜಿಸುತ್ತಿದ್ದೆವು.ಆದರೆ ಈ ಬಾರಿ ಕೋವಿಡ್ ಇರುವ ಕಾರಣ ಸಾಮಾಜಿಕ ಜಾಲತಾಣದ ಮೂಲಕ ಉತ್ಸವವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದೇವೆ. ಪ್ರಾಚೀನ ಕಲೆಗೆ ಆಧುನಿಕ ಸ್ಪರ್ಶ ನೀಡಿದ್ದೇವೆ’ ಎಂದು ಅನುಪಮಾ ಹೇಳಿದರು.

ADVERTISEMENT

ಬೊಂಬೆಯಾಟದ ಜೊತೆಗೆ ಸೂತ್ರದ ಬೊಂಬೆ, ಸಲಾಕಿ ಬೊಂಬೆಗಳ ಬಗ್ಗೆ ಕಮ್ಮಟ, ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ರಾಮಾಯಣ, ಮಹಾಭಾರತದ ಒಂದು ಭಾಗವನ್ನು ಆಯ್ಕೆ ಮಾಡಿ ಬೊಂಬೆಗಳ ಮೂಲಕ ಜನರಿಗೆ ವಿವರಿಸುವ ಪ್ರಯತ್ನವನ್ನು ಅನುಪಮಾ ಮಾಡಿದ್ದಾರೆ.ಈ ಕಲೆಗೆ ಸಲ್ಲಿಸಿರುವ ಕೊಡುಗೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ.

400 ವರ್ಷಗಳ ಇತಿಹಾಸ:‘ಬೊಂಬೆಯಾಟದ ಮೂಲ ಭಾರತ. ಸುಮಾರು 400 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದ ವಿದೇಶಿಯರ ಮೂಲಕ, ಪ್ರಪಂಚದ ಇತರೆ ರಾಷ್ಟ್ರಗಳಿಗೂ ಈ ಕಲೆ ಪಸರಿಸಿತು.ಈಗ ಬೇರೆ ಬೇರೆ ದೇಶಗಳಲ್ಲಿ ಬೊಂಬೆಯಾಟದ ವಿಧಾನಗಳು ವಿಭಿನ್ನವಾಗಿವೆ.ಆದರೆ, ವಿದೇಶಿಗರು ಈಗಲೂ ನಮ್ಮ ಸೂತ್ರದ ಬೊಂಬೆಯಾಟವನ್ನು ಆಸಕ್ತಿಯಿಂದ ನೋಡುತ್ತಾರೆ. ಆಧುನಿಕತೆಯ ಭರದಲ್ಲಿ ಈ ಕಲೆ ನಶಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಅವರು ಕಳಕಳಿ ವ್ಯಕ್ತಪಡಿಸುತ್ತಾರೆ.

‘ಬೊಂಬೆಯಾಟ ಎಂದರೆ ಮನರಂಜನೆ ಮಾತ್ರವಲ್ಲ.ಇದು ಜೀವನ ಮೌಲ್ಯಗಳನ್ನೂ ಬಿತ್ತುತ್ತದೆ. ಜೀವನದಲ್ಲಿನ ಏರಿಳಿತಗಳನ್ನು, ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎಂಬ ಸಂದೇಶಗಳನ್ನು ಗೊಂಬೆಗಳ ಮೂಲಕ ಅರಿಯಬಹುದು ಎಂದು ಅವರು ಹೇಳುತ್ತಾರೆ.

ಅನುಪಮಾ ಅವರ ಗೊಂಬೆಗಳ ಪ್ರದರ್ಶನವನ್ನು ಈ ಬಾರಿಜೂಮ್, ಇನ್‌ಸ್ಟಾಗ್ರಾಮ್‌ ವೀಕ್ಷಿಸಬಹುದು. ಅಲ್ಲದೆ, ಅವರ ವೆಬ್‌ಸೈಟ್‌ www.dhaatupuppets.org ನಲ್ಲಿಯೂ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.