ADVERTISEMENT

ಮದ್ದಳೆ ಇನ್ನು ಹಾಗೆ ಝೇಂಕರಿಸದು...

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 19:45 IST
Last Updated 24 ಅಕ್ಟೋಬರ್ 2020, 19:45 IST
ಬಾಳ ಮುಸ್ಸಂಜೆಯಲ್ಲಿ ಗೋಪಾಲರಾಯರು ಚಿತ್ರ: ನಾಗರಾಜ್ ವಾರಂಬಳ್ಳಿ
ಬಾಳ ಮುಸ್ಸಂಜೆಯಲ್ಲಿ ಗೋಪಾಲರಾಯರು ಚಿತ್ರ: ನಾಗರಾಜ್ ವಾರಂಬಳ್ಳಿ   
""

ಅಂದು ಸಂಜೆ ಕಾಜಾರಗುತ್ತು ತಂಡದ ಮಂದಿ ಮುಖಕ್ಕೆ ಬಣ್ಣ ಬಳಿದುಕೊಳ್ಳುವ ತಾಲೀಮಿನಲ್ಲಿದ್ದರು. ಮನೆಯೇ (ಯಾವುದೇ ಅನುದಾನವಿಲ್ಲದ) ಗುರುಕುಲ. ಗುರುಗಳು ಭಾಗವತರಲ್ಲಿ ‘ಪದ’ ಹೇಳಿರೆಂದರು. ಪಟ್ಟಶಿಷ್ಯ ಕಡೆಕಾರು ಅನಂತಪದ್ಮನಾಭ ಭಟ್ಟರು ಯಕ್ಷಗಾನದ ಪ್ರಸಿದ್ಧ ಸ್ತುತಿ ‘ಗಜಮುಖದವಗೆ’ ಹಾಡಿದರು. ಮದ್ದಳೆ ಅದೇ ಝೇಂಕಾರದೊಂದಿಗೆ ಮೊಳಗಿತು. ಪದ ‘ಕರದೊಳು ಪರಶು’ ಎಂದು ನಡೆದಾಗ ಮದ್ದಳೆ ಠೇಂಕರಿಸಿ ಪದ್ಧತಿಯಂತೆ ನಿಲುಗಡೆಗೊಂಡಿತು. ಮತ್ತೆ ಎರಡೇ ದಿನಗಳಲ್ಲಿ ಗುರು ಹಿರಿಯಡಕ ಗೋಪಾಲರಾಯರು ತಮ್ಮ ಆಯುಸ್ಸನ್ನು ಒಂದು ಶತಮಾನ, ಹತ್ತು ತಿಂಗಳು ಮತ್ತು ಎರಡು ದಿನಗಳಿಗೆ ಪರಿಮಿತಗೊಳಿಸಿ, ಅಕ್ಟೋಬರ್‌ 17ರಂದು ರಾತ್ರಿ 8.30ರ ವೇಳೆಗೆ ವಾರ್ಧಕ್ಯದ ಸಹ್ಯ ಅಂತಿಮ ಕ್ಷಣವನ್ನೂ ಬಳಸಿಕೊಂಡು ವಿದಾಯ ಪಡೆದರು. ಇನ್ನು ಆ ಮದ್ದಳೆ ಯಾರಿಗೂ ಆ ಬಗೆಯ ಝೇಂಕಾರದ ನಾದವನ್ನು ಬಿಟ್ಟುಕೊಡದು. ಹೀಗೆ ಶತಮಾನದ ಮದ್ದಳೆ ನಿನಾದದ ರೀತಿಯೊಂದರ ಅಲೆಯಡಗಿತು.

ಕರ್ನಾಟಕದ ಕಲಾಲೋಕದ ಕೈಬೆರಳೆಣಿಕೆಯ ವಿರಳ ವಿದ್ಯಾಸಂಪತ್ತಿದ್ದ ಹಿರಿಯರವರು. ಅತ್ಯಂತ ಕಠಿಣ ರೀತಿಯ ಜೀವನಶೈಲಿಯಿರುವ ಯಕ್ಷಗಾನ ಕಲಾವಿದನೂ ಶತಾಯುಷಿ ಆಗಬಲ್ಲ ಎಂದು ತೋರಿಸಿಕೊಟ್ಟ ಮೊದಲಿಗ ಅವರು.

ಹೀಗೆ ಸಮಾಪನಗೊಂಡಿರುವುದು ಒಬ್ಬ ವ್ಯಕ್ತಿಯ ಜೀವನ ಮಾತ್ರವಲ್ಲ. ಒಂದು ಶತಮಾನದ ಯಕ್ಷಗಾನದ ಬಡಗುತಿಟ್ಟಿನ ರಂಗಚರಿತ್ರೆಯ ಒಂದು ಉಜ್ವಲ ಅಧ್ಯಾಯ ಕೂಡ. ಈ ಅವಧಿಯಲ್ಲಿ ಈ ರಂಗದ ಭಾಗವತಿಕೆಯ ತಾರೆಗಳಾದ ಮಾರ್ವಿ ಶ್ರೀನಿವಾಸ ಉಪ್ಪೂರರು, ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಕೋಟ ಶ್ರೀನಿವಾಸ ನಾಯಕ್, ಗುಂಡ್ಮಿ ರಾಮಚಂದ್ರ ನಾವಡ, ಗೋರ್ಪಾಡಿ ವಿಠಲ ಪಾಟೀಲ ಮೊದಲಾದ ಅಭಿಜಾತ ಕಲಾಕಾರರ ಗಾಯನಕ್ಕೆ ಮದ್ದಳೆಯ ನಾದದ ಹೊನಲು ಹರಿಸಿ ಪೋಷಿಸಿದ ಗೋಪಾಲರಾಯರು ಶತಮಾನದ ಮದ್ದಳೆ ನಾದವಾಗಿ ಗುರುತುಗೊಂಡವರು.

ADVERTISEMENT

ಅವರ ಕಸುಬಿನ ಯೌವನದ ಕಾಲವೆಂದರೆ ಸ್ಪರ್ಧೆಯ ಜೋಡಾಟದ ಜಿದ್ದಿಗೆ ಪ್ರಾಧಾನ್ಯ ಇದ್ದ ಕಾಲ. ಇದಿರು ಮೇಳಗಳ ಮದ್ದಳೆಗಾರರ ತಂತ್ರ, ವ್ಯೂಹಾತ್ಮಕ ಸವಾಲುಗಳನ್ನು ಸ್ವೀಕರಿಸಿ ಮದ್ದಳೆಗಾರ ಗೋಪಾಲರಾಯರು ಗುಟ್ಟು ಬಿಟ್ಟುಕೊಡದೆ ಆಟದ ಸ್ಪರ್ಧೆಯ ಕಾವು ತುರೀಯಕ್ಕೆ ತಲುಪಿದ ವೇಳೆಗೆ 30 ಇಂಚು ಉದ್ದದ ಮದ್ದಳೆಯ ಜಾಗದಲ್ಲಿ ಹತ್ತು ಅಂಗುಲ (12.5 ಇಂಚು) ಉದ್ದದ ಮದ್ದಳೆ ಹೊರತೆಗೆದರು. ಕಂಡರೆ ನಗೆ ಬರಿಸಿದ ಆ ಕಿರಿದು ಮದ್ದಳೆ ರಾಯರ ಹಸ್ತದಿಂದ ಠಣ್ಣೆಂದು ಠೇಂಕರಿಸತೊಡಗಿದಾಗ ಇದಿರು ರಂಗಸ್ಥಳದ ಮದ್ದಳೆ, ಪದಗಳ ಸದ್ದಡಗಿಹೋಗಿತ್ತು. ಇವರ ಭಾಗವತ ಶೇಷಗಿರಿ ಕಿಣಿಯರಿಗಂತೂ ತನ್ನ ಕಂಠಗುಣಕ್ಕೆ ಪ್ರಶಸ್ತ ವಾದ್ಯ ಅದೆಂದು ಹರುಷವಾತು. ಅಲ್ಲಿಂದ ಈಚೆಗೆ ಸುಮಾರು 80 ವರ್ಷಗಳಿಂದ ಬಡಗುತಿಟ್ಟಿನ ಆಟದಲ್ಲಿ ಅರ್ಧ ರಾತ್ರಿವರೆಗೆ ಉದ್ದದ ಇಳಿಮದ್ದಳೆ, ಆನಂತರ ಏರುಮದ್ದಳೆ ಬಳಕೆ ಪದ್ಧತಿಯಾಯಿತು. ಹಾಗೆ ಏರುಮದ್ದಳೆಯ ಜನಕನೆಂದು ರಾಯರು ಗುರುತುಗೊಂಡರು.

1950ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ಣಾರ್ಜುನ ಪ್ರದರ್ಶನದ ಚಿತ್ರ. ಎಡದಿಂದ – ಹಿರಿಯಡಕ ಗೋಪಾಲರಾಯರು, ಹಾರಾಡಿ ಸಂಜೀವ ಗಾಣಿಗ(ಶಲ್ಯ), ಹಾರಾಡಿ ರಾಮ ಗಾಣಿಗ(ಕರ್ಣ), ಭಾಗವತ ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್‌, ಬಿರ್ತಿ ಬಾಲಕೃಷ್ಣ(ಕೃಷ್ಣ), ಹಾರಾಡಿ ಕೃಷ್ಣ ಗಾಣಿಗ (ಅರ್ಜುನ)

ಅವರನ್ನು ಕರೆಯುವುದು ‘ಮದ್ದಳೆಗಾರರೇ’ ಎಂದೇ ಆಗಿದ್ದರೂ ಅವರ ವ್ಯಕ್ತಿತ್ವ ಅಷ್ಟಕ್ಕೆ ಸೀಮಿತವಾಗಿರಲಿಲ್ಲ. ವೇಷಧಾರಿಯಾಗಿ ವೃತ್ತಿರಂಗವನ್ನು ಪ್ರವೇಶಿಸಿದ ರಾಯರು ಅನೇಕ ನರ್ತನಪ್ರವೀಣರನ್ನು ಕುಣಿಸಿಯೂ ನಾಟ್ಯದ ಸೊಬಗನ್ನು ತಮ್ಮ ಒಳಗು ಮಾಡಿಕೊಂಡವರು. ವಾದನ, ಹಾಡಿಕೆ, ಕುಣಿತ, ಆಟದ ಸಂಭಾಷಣೆಯ ಆಶುಭಾಷಣ ರೀತಿ, ವೇಷಭೂಷಣ, ಮುಖಬರಹ ಎಲ್ಲವನ್ನೂ ನಿಖರವಾಗಿ ಕಲಿಸಬಲ್ಲವರೂ ಆಗಿದ್ದರು.

ಹಿರಿಯಡಕ, ಪೆರ್ಡೂರು, ಅಮೃತೇಶ್ವರಿ, ಮಂದರ್ತಿ ಈ ನಾಲ್ಕು ‘ಗಜಮೇಳ’ಗಳಲ್ಲಿ 33 ವಾರ್ಷಿಕ ತಿರುಗಾಟಗಳನ್ನು ಮುಗಿಸಿದ ರಾಯರು ತಮ್ಮ 48ನೇ ವಯಸ್ಸಿಗೇ ವೃತ್ತಿಪರ ತಿರುಗಾಟದಿಂದ ವಿರಮಿಸಿದರು. ಇನ್ನೂ ಇಪ್ಪತ್ತು ವರ್ಷಗಳ ಕಾಲ ತಿರುಗಾಟ ಮುಂದುವರಿಸುವ ದೇಹದ ಕಸುವು ಅವರಲ್ಲಿತ್ತು. ಆದರೆ, ಆ ವೇಳೆಗೆ ಮೇಳದಲ್ಲಿ ಪರಿಪೂರ್ಣ ಕಲಾವಿದರ ಸಂಖ್ಯೆ ಕ್ಷೀಣಿಸತೊಡಗಿ ಹೊಸಬರು ಗುರುಸ್ಥಾನದ ಭಾಗವತರನ್ನೇ ಪ್ರಶ್ನಿಸತೊಡಗಿದರು. ಭಾಗವತರನ್ನು ಪ್ರಶ್ನಿಸುವುದೆಂದರೆ ಹಿಮ್ಮೇಳದವರಿಗೂ ಅವಮಾನವೇ. ಆ ವೇಳೆಗಾಗಲೇ ವಾಣಿಜ್ಯಪರತೆ ಕಲಾವಿದನ ಕಸುಬಿಗೆ ತಗುಲಿದುದೂ ಕಾರಣ. ಇನ್ನಷ್ಟು ಅವಮಾನ ಒದಗುವ ಮೊದಲೇ ನಿರ್ಗಮಿಸುವುದು ಒಳಿತೆಂದು 1967ರಲ್ಲಿ ಹೊರಬಂದರು.

ಯಕ್ಷಗಾನ ಕಲಾಲೋಕದ ಪ್ರಸಿದ್ಧಿ ಗೋಪಾಲರಾಯರ ಆಯುರ್ವೇದ ವೈದ್ಯ ವೃತ್ತಿಯ ಖ್ಯಾತಿಯನ್ನು ನುಂಗಿ ಹಾಕಿತ್ತು. ಮೇಳದಲ್ಲಿ ಇರುವಾಗಲೇ ಅವರ ವೈಯಕ್ತಿಕ ಜೋಳಿಗೆಯಲ್ಲಿ ಘೃತ, ಭಸ್ಮ, ಗುಳಿಗೆ ಇತ್ಯಾದಿ ಔಷಧಗಳ ಕಿರು ಸಂಗ್ರಹ ಇರುತ್ತಿತ್ತು. ಮೇಳದ ಮದ್ದಳೆಗಾರರು ವೈದ್ಯರೆಂಬುದು ಪ್ರಚಾರವಾದಂತೆ ಪರಿಸರದ ಬಡರೋಗಿಗಳು ಇವರಿಂದ ಸಹಾಯ ಕೇಳಿ ಬರುತ್ತಿದ್ದರು. ಈ ವಿದ್ಯೆ ಅವರಿಗೆ ಪಿತ್ರಾರ್ಜಿತ. ಅವರ ತಂದೆ ವೈದ್ಯರಾಗಿದ್ದರು. ಅಪಸ್ಮಾರ ಮತ್ತು ಪಕ್ಷವಾತಗಳಿಗೆ ಅವರಲ್ಲಿ ರಾಮಬಾಣದಂಥ ಔಷಧ ಪ್ರಯೋಗಗಳಿದ್ದವು. ಅಲೋಪಥಿ ವೈದ್ಯರಾದ ಡಾ.ಚಂದಪ್ಪ ಹೆಗ್ಡೆ ಅವರು ಆ ಬಗೆ ಕಾಯಿಲೆಯಿಂದ ತಮ್ಮಲ್ಲಿಗೆ ಬರುವವರನ್ನು ಗೋಪಾಲರಾಯರಲ್ಲಿಗೆ ಕಳುಹಿಸಿಕೊಡುತ್ತಿದ್ದರು. ಮೇಳದ ತಿರುಗಾಟದ ನಿಲುಗಡೆ ಬಳಿಕ ಪೂರ್ಣಪ್ರಮಾಣದ ವೈದ್ಯರಾಗಿ ಮುಂಬರಿದರು. ಈ ಹಂತದಲ್ಲಿ ಡಾ.ಶಿವರಾಮ ಕಾರಂತರು ಯಕ್ಷಗಾನ ಚಟುವಟಿಕೆಯಲ್ಲಿ ಇವರ ಸಹಯೋಗವನ್ನು ಬಯಸಿದರು.

ಕಾರಂತರ ಕುಣಿತಕ್ಕೆ ಗೋಪಾಲರಾಯರ ಮದ್ದಳೆವಾದನ ಉತ್ತಮ ಹೊಂದಾಣಿಕೆಯಾಗಿತ್ತು. ಜತೆಗೆ ಮಳೆಗಾಲದ ತಾಳಮದ್ದಳೆಗಳಲ್ಲೂ, ಹರಿಕೀರ್ತನೆಯ ತಬಲಾ ಸಾಥಿ ನೆರವಿನಲ್ಲೂ ಅವರು ನಾದಲಯ ನಿರಂತರತೆಯನ್ನು ಕಾಯ್ದುಕೊಂಡರು. ವ್ಯಾಯಾಮಶಾಲೆಯ ತಾಲೀಮು, ಯೋಗ ಇವು ಅವರ ಆರೋಗ್ಯದ ಸ್ಥಿರತೆಗೆ ಕಾರಣ. ಅಲ್ಲಲ್ಲಿ ಹವ್ಯಾಸಿ ಕಲಾವಿದರ ತಂಡಗಳನ್ನೂ ಅವರು ತರಬೇತುಗೊಳಿಸಿದರು. ಕಾರಂತರ ಸೂಚನೆ ಮೇರೆಗೆ ಅಮೆರಿಕದ ಕಲಾವಿದೆ ಮಾರ್ತಾ ಆ‍್ಯಶ್ಟನ್‌ ಇವರ ಶಿಷ್ಯೆಯಾಗಿ ಯಕ್ಷಗಾನ ವೇಷಗಾರಿಕೆ ಕಲಿತರು. ಇವರ ಮಾರ್ಗದರ್ಶನದಲ್ಲಿ ಮಾರ್ತಾ ಬರೆದ ಪರಿಚಯಾತ್ಮಕ ಮಹಾನಿಬಂಧ ಯಕ್ಷಗಾನದ ಪ್ರಥಮ ಪಿಎಚ್‌.ಡಿ ಪದವಿಯನ್ನು ಆಕೆಗೆ ಒದಗಿಸಿತು.

ಮಾರ್ತಾ ಸಂಘಟನೆ ಮತ್ತು ಗೋಪಾಲರಾಯರ ಬೆಂಬಲದೊಂದಿಗೆ ಮೊದಲ ಬಾರಿಗೆ ಯಕ್ಷಗಾನದ ವೃತ್ತಿಪರ ತಂಡವೊಂದು ಅಮೆರಿಕಕ್ಕೆ ಹೋಗಿ ಪ್ರದರ್ಶನಗಳ ಸರಣಿಯೊಂದನ್ನು ನಡೆಸಿತು. ಇದರ ವಿಶೇಷ ಎಂದರೆ ಎಲ್ಲ ಕಲಾವಿದರೂ ಸಂಪ್ರದಾಯನಿಷ್ಠರು. ಹಳೆಗಾಲದಂತೆ ಶ್ರುತಿಗೆ ಪುಂಗಿಯನ್ನೇ ಬಳಸಲಾಯಿತು. ಇದರಿಂದೆಲ್ಲ ಗೋಪಾಲರಾಯರ ಪ್ರಸಿದ್ಧಿ ಹೆಚ್ಚು ಹಬ್ಬಿತು.

ಉಡುಪಿ ಎಂಜಿಎಂ ಕಾಲೇಜಿನ ಅಧೀನದಲ್ಲಿ ಯಕ್ಷಗಾನ ಕೇಂದ್ರ ತೆರೆದಾಗ ಶಿಕ್ಷಕ ವರ್ಗದಲ್ಲಿ ಮಟ್ಟಾಡಿ ವೀರಭದ್ರ ನಾಯಕರ ಜತೆಯಲ್ಲಿ ಇವರು ಮತ್ತು ಭಾಗವತ ನೀಲಾವರ ರಾಮಕೃಷ್ಣಯ್ಯ ನೇಮಕಗೊಂಡರು. ಮೊದಲ ಬಾರಿಗೆ ಯಕ್ಷಗಾನದ ಪಠ್ಯಕ್ರಮ ರೂಪದಲ್ಲಿ ಈ ಮೂವರ ಪಾತ್ರ ಹಿರಿದು. ಕಾರಂತರು ಈ ಕೇಂದ್ರವನ್ನು ತಮ್ಮ ಪ್ರಯೋಗದ ಬುನಾದಿಯನ್ನಾಗಿಯೂ ಮಾಡಿದರು. ಮಾತಿಲ್ಲದ ಯಕ್ಷಗಾನ ಬ್ಯಾಲೆಯನ್ನು ಇಲ್ಲೇ ತರಬೇತಿಗೊಳಿಸಿ ದೇಶದ ಮೂಲೆಮೂಲೆಗೆ ಒಯ್ದರು.
ಕಾರಂತರ ಒಡನಾಟದಿಂದ ರಾಯರು ತಮ್ಮ ವಾದನ ವಿಧಾನಕ್ಕೆ ಭಾವಸ್ಪರ್ಶದ ವೈವಿಧ್ಯವನ್ನು ತಂದುಕೊಂಡರು. ಮಾರ್ತಾ ಅಮೆರಿಕಕ್ಕೆ ಕರೆದೊಯ್ದು ಇವರಿಂದ ಪ್ರಾತ್ಯಕ್ಷಿಕೋಪನ್ಯಾಸ ಸರಣಿ ಏರ್ಪಡಿಸಿದ್ದರು. ಗುರು– ಶಿಷ್ಯರು ಹೀಗಿರಬೇಕು ಎನ್ನುವಂತಾಯಿತು. ಮಣಿಪಾಲದ ಸಿಂಡಿಕೇಟ್‌ ಬ್ಯಾಂಕಿನ ಉದ್ಯೋಗಿ ಮಹಿಳೆಯರು ಮೂಕಾಂಬಿಕಾ ವಾರಂಬಳ್ಳಿ ಅವರ ನೇತೃತ್ವದಲ್ಲಿ ಸಂಘಟಿತರಾದಾಗ ಗೋಪಾಲರಾಯರು ಅವರಿಗೆ ಬಡಗುತಿಟ್ಟಿನ ತರಬೇತಿ ನೀಡಿದರು. ಬಡಗುತಿಟ್ಟಿನ ಪ್ರಥಮ ಮಹಿಳಾ ತಂಡ ಇದೇ.

ಇದೆಲ್ಲ ಏನಿದ್ದರೂ ತಾವು 1930ರ ದಶಕದಲ್ಲಿ ಕಂಡು ಆನಂದಿಸಿದ ರಂಗಪದ್ಧತಿಯ ಪುನಾರಚನೆಯ ಅವರ ಆಸೆ ಫಲಿಸದ ಅತೃಪ್ತಿ ಅವರಲ್ಲಿತ್ತು. ಓಂತಿಬೆಟ್ಟಿನ ಈಗಿನ ನಿವಾಸಕ್ಕೆ ಬದಲಿಸಿದ ಬಳಿಕ ಪುತ್ರ ರಾಮಮೂರ್ತಿ ರಾವ್‌ ಸಹಿತ ಕಾಜಾರಗುತ್ತು ಪರಿಸರದ ಯುವಕರನ್ನು ಯಕ್ಷಗಾನ ನಾಟ್ಯದಲ್ಲಿ ಪಳಗಿಸಿ ಆಟವಾಡಿಸಿ ತಾನೇ ಮದ್ದಳೆ ವಾದನ ನಡೆಸಿದರು. ಪದ, ಮದ್ದಳೆ, ಚೆಂಡೆಗಳಿಗೂ ಅವರು ಶಿಷ್ಯರನ್ನು ತರಬೇತಿಗೊಳಿಸಿದರು. ಈ ಲೇಖಕ ಅವರಿಂದ ಪಡೆದ ಮಾಹಿತಿ ಸ್ವಲ್ಪವಲ್ಲ, ಯಕ್ಷಗಾನ ‘ಹಿಮ್ಮೇಳ’ದ ಮೇಲಿನ ಅಧ್ಯಯನದಲ್ಲಿ ನನಗೆ ಅವರಿಂದ ಬಂದ ಮಾಹಿತಿ ಅಪರಿಮಿತ.

ಅವರು 1980ರ ದಶಕದಲ್ಲಿ ಮಂದರ್ತಿ ಮೇಳದ ಹರಕೆಯ ಆಟವನ್ನು ದೀವಟಿಗೆ ಬೆಳಕಿನಲ್ಲಿ ಏರ್ಪಡಿಸಿದ್ದು ನನಗೆ ಹೊಸ ದೃಷ್ಟಿಯನ್ನು ಒದಗಿಸಿತು. 1995ರಲ್ಲಿ ಅವರ ಮಾರ್ಗದರ್ಶನದಲ್ಲಿ, ರಂಗ ಇಪ್ಪತ್ತನೆ ಶತಮಾನದಲ್ಲಿ ಮೂಲೆಗೊತ್ತಿದ ಹಲವು ಅಂಶಗಳ, ಪುನಾರಚನೆ ಮಾಡಿದೆ. ಅವರಿಗದು ಅತ್ಯಂತ ಮೆಚ್ಚಿನದಾಯಿತು. ತಾವೂ ನಮ್ಮೊಂದಿಗೆ ಕೂಡಿ ನಿಂತುಕೊಂಡೇ (ಆ ಹಿರಿವಯಸ್ಸಿನಲ್ಲೂ) ಮದ್ದಳೆ ಬಾರಿಸಿದರು. ನನ್ನ ಕನಸಿನಂತೆ ಬಡಗುತಿಟ್ಟಿನಲ್ಲಿ ಅರ್ಧನಾರಿ ವೇಷದ ಪುನಾರಚನೆಗೆ ಅವರು ಬೆಂಬಲವಾದರಲ್ಲದೆ ತಾವೇ ಹಾಡು–ವಾದನಗಳ ವಿನ್ಯಾಸ ನಾಟ್ಯ ಸಂಯೋಜನೆ ಏರ್ಪಡಿಸಿ ರಾಮಮೂರ್ತಿಯವರನ್ನು ಅದರಲ್ಲಿ ಪಳಗಿಸಿದರು.

ಪ್ರೊ.ಕು.ಶಿ. ಹರಿದಾಸ ಭಟ್ಟರ ಪ್ರೇರಣೆಯಲ್ಲಿ ನಾನು ಗೋಪಾಲರಾಯರೊಂದಿಗೆ ಅನೇಕ ವರ್ಷಗಳ ನಿರಂತರ ಸಂವಾದದಿಂದ ಅವರ ವೃತ್ತಿಜೀವನ ಮತ್ತು ನಿಜ ಜೀವನದ ನೆನಪುಗಳನ್ನು ಸಂಗ್ರಹಿಸಿ ‘ಮದ್ದಳೆಯ ಮಾಯಾಲೋಕ’ ಹೆಸರಿನ ಪುಸ್ತಕ ಹೊರತಂದೆ. ಅದನ್ನು 1997ರಲ್ಲಿ ಎಂಜಿಎಂ ಕಾಲೇಜಿನಲ್ಲಿ ಕು.ಶಿ. ನೇತೃತ್ವದ ಆರ್‌ಆರ್‌ಸಿ ಅದನ್ನು ಪ್ರಕಟಿಸಿತು. ಅದರಲ್ಲಿ ಸೇರದಿದ್ದ ಅವರ ರಂಗಾನುಭವವನ್ನು ಸಂಗ್ರಹಿಸಿ 2018ರಲ್ಲಿ ಅವರ ಶತಮಾನ ಸಂಭ್ರಮದ ವೇಳೆಗೆ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ ಪ್ರಕಟಿಸಿದ ‘ರಂಗವಿದ್ಯೆಯ ಹೊಲಬು’ ಗ್ರಂಥ ತಂದೆ. ಈ ಎರಡು ಗ್ರಂಥಗಳು ಮುಂದಿನ ತಲೆಮಾರುಗಳಿಗೆ ಅತ್ಯಮೂಲ್ಯ ರಂಗ ಚರಿತ್ರೆಯಾಗಿ ಒದಗಲಿವೆ.

ಸರಳ ಜೀವನ, ಉನ್ನತ ಚಿಂತನ ಎಂಬ ಗಾಂಧೀಮಾರ್ಗದ ನಿಷ್ಠ ಅನುಯಾಯಿ ಆಗಿದ್ದ ಗೋಪಾಲಗುರು ಹಣಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಪ್ರಾಧಾನ್ಯವಿತ್ತವರು. ಅವರು ದುಂಬಾಲು ಬೀಳದೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ರಜತೋತ್ಸವ ಪ್ರಶಸ್ತಿ, ‘ಜಾನಪದಶ್ರೀ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಮತ್ತು ಕರಾವಳಿ ಆದ್ಯಂತ ಅನೇಕ ಸಂಸ್ಮರಣ ಪ್ರಶಸ್ತಿಗಳು ಅವರಿಗೆ ಬಂದು ಹರುಷ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.