ADVERTISEMENT

ಡೆಸ್ಡೆಮೋನಾ ರೂಪಕಂ: ಅವಳ ಅಂತರಂಗಕ್ಕೆ ಕನ್ನಡಿ ಹಿಡಿಯುವ ಒಪೆರಾ

ಮಂಜುಶ್ರೀ ಎಂ.ಕಡಕೋಳ
Published 10 ಏಪ್ರಿಲ್ 2021, 19:30 IST
Last Updated 10 ಏಪ್ರಿಲ್ 2021, 19:30 IST
‘ಡೆಸ್ಡೆಮೋನಾ ರೂಪಕಂ’ ಒಪೆರಾದಲ್ಲಿ ಎಂ.ಡಿ. ಪಲ್ಲವಿ ಮತ್ತು ಬಿಂದುಮಾಲಿನಿ
‘ಡೆಸ್ಡೆಮೋನಾ ರೂಪಕಂ’ ಒಪೆರಾದಲ್ಲಿ ಎಂ.ಡಿ. ಪಲ್ಲವಿ ಮತ್ತು ಬಿಂದುಮಾಲಿನಿ   

ಪುರಾಣ, ಇತಿಹಾಸ, ವರ್ತಮಾನ – ಕಾಲ ಯಾವುದೇ ಇರಲಿ, ಹೆಣ್ಣು ತನ್ನ ಪಾವಿತ್ರ್ಯವನ್ನು ಗಂಡಿಗೆ ಸಾಬೀತುಪಡಿಸುತ್ತಲೇ ಇರಬೇಕು. ಜಮದಗ್ನಿಯ ರೇಣುಕೆ, ದುಷ್ಯಂತನ ಶಾಕುಂತಲೆ, ರಾಮನ ಸೀತೆ, ಒಥೆಲೊನ ಡೆಸ್ಡೆಮೋನಾಳಿಂದ ಹಿಡಿದು ವರ್ತಮಾನ ಕಾಲದ ಹೆಣ್ಣುಮಕ್ಕಳವರೆಗೆ ಎಲ್ಲರೂ ಪಾವಿತ್ರ್ಯವೆಂಬ ಅಗ್ನಿಕುಂಡದೊಳಗೆ ಬೇಯುತ್ತಲೇ ಇದ್ದಾರೆ.

ಹೀಗೆ ಕಾಲಾತೀತರಾಗಿ, ದೇಶ, ಭಾಷೆ, ಜನಾಂಗ, ವರ್ಗ, ವರ್ಣಗಳಾಚೆ ಇರುವ ಹೆಣ್ಣುಗಳ ಮನದೊಳಗಿನ ಮೌನಬಿಕ್ಕುಗಳು ಅಗ್ನಿಯೊಳಗೇ ಸುಟ್ಟು ಬೂದಿಯಾಗಿವೆ. ಅಂಥ ಬೂದಿಯೊಳಗೂ ಫೀನಿಕ್ಸ್‌ನಂತೆ ಹಾರಿ ಬರುವ ಅವಳ ಅಂತರಂಗಕ್ಕೆ ಕನ್ನಡಿ ಹಿಡಿಯ ಹೊರಟಿದೆ ಅಭಿಷೇಕ್ ಮಜುಂದಾರ್ ನಿರ್ದೇಶನದ ‘ಡೆಸ್ಡೆಮೋನಾ ರೂಪಕಂ’. ಕನ್ನಡ, ತಮಿಳು, ಇಂಗ್ಲಿಷ್ ಮೂರು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ರೂಪಕಂ’ನ ಪರಿಕಲ್ಪನೆ, ರಂಗಪಠ್ಯ ಇರಾವತಿ ಕಾರ್ಣಿಕ್, ಅಭಿಷೇಕ್, ಎಂ.ಡಿ. ಪಲ್ಲವಿ, ಬಿಂದುಮಾಲಿನಿ, ವೀಣಾ ಅಪ್ಪಯ್ಯ ಮತ್ತು ನಿಖಿಲ್ ನಾಗರಾಜ್ ಅವರದ್ದು. ಪ್ರಸ್ತುತಿ ನಳಂದ ಆರ್ಟ್ಸ್ ಸ್ಟುಡಿಯೊದ್ದು.

ಏನಿದು ಡೆಸ್ಡೆಮೋನಾ ರೂಪಕಂ?

ADVERTISEMENT

‘ಒಥೆಲೊ ನಾಟಕ ನೋಡಿದಾಗಲೆಲ್ಲ ಡೆಸ್ಡೆಮೋನಾಳ ಅಂತರಂಗ ಏನಿರಬಹುದು ಅನ್ನುವ ಪ್ರಶ್ನೆಗಳು ಮೂಡುತ್ತಿದ್ದವು. ಶೇಕ್ಸ್‌ಪಿಯರ್‌ನ ಡೆಸ್ಡೆಮೋನಾ ಹೇಳದೇ ಉಳಿಸಿಹೋದ ಮಾತುಗಳು ಭಿನ್ನ ಸಂಸ್ಕೃತಿಯ ಸ್ತ್ರೀವಾದಕ್ಕೆ ಕನ್ನಡಿ ಹಿಡಿಯುವಂಥವು. ಅಲ್ಲಿಂದ ಶುರುವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಮ್ಮ ತಂಡಕ್ಕೆ ಜತೆಯಾದವರು ಗಾಯಕಿಯರಾದ ಎಂ.ಡಿ. ಪಲ್ಲವಿ, ಬಿಂದುಮಾಲಿನಿ, ವೀಣಾ ಅಪ್ಪಯ್ಯ ಮತ್ತಿತರರು. ಪಾಶ್ಚಾತ್ಯರ ಒಥೆಲೊ–ಡೆಸ್ಡೆಮೋನಾಳಿಂದ ಹಿಡಿದು ಭಾರತೀಯರ ದಶರಥ–ಕೈಕೇಯಿ, ಜಮದಗ್ನಿ–ರೇಣುಕೆಯರು ಕೂಡ ನಮ್ಮ ರೂಪಕದೊಳಗೆ ಬರತೊಡಗಿದರು. ಹೀಗಾಗಿ ಪುರಾಣ, ಇತಿಹಾಸ, ವರ್ತಮಾನದಲ್ಲಿ ಮೌನವಾಗಿರುವ ಹೆಣ್ಣು ದನಿಗಳು ರಂಗದ ಮೇಲೆ ತಮ್ಮ ಅಂತರಂಗವನ್ನು ತೆರೆದಿಡಲು ‘ಡೆಸ್ಡೆಮೋನಾ ರೂಪಕಂ’ ವೇದಿಕೆಯಾಗಿದೆ’ ಎನ್ನುತ್ತಾರೆ ನಿರ್ದೇಶಕ ಅಭಿಷೇಕ್ ಮಜುಂದಾರ್.

‘ಕೈಕೇಯಿ, ರೇಣುಕಾ, ಶಾಕುಂತಲೆ, ಡೆಸ್ಡೆಮೋನಾಳ ಬಗ್ಗೆ ಇದುವರೆಗೆ ಬರೀ ಪುರುಷರೇ ಮಾತನಾಡಿದ್ದಾರೆ. ಆದರೆ ಅವಳೇ ಮಾತನಾಡಿಲ್ಲ. ಅಂತೆಯೇ ಇವರ ತಾಯಂದಿರು ಕೂಡಾ ನೇಪಥ್ಯದಲ್ಲಿ ಉಳಿದು ಮೌನಕ್ಕೆ ಶರಣಾಗಿದ್ದಾರೆ. ಅವರೆಲ್ಲರ ಮನದೊಳಗೆ ಏನಿದ್ದಿರಬಹುದು ಎಂಬುದನ್ನು ಈ ರೂಪಕಂ ಒಪೆರಾ ಮಾದರಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಈ ಎಲ್ಲಾ ಪಾತ್ರಗಳಿಗೆ ಜೀವ ತುಂಬುತ್ತಿರುವವರು ಎಂ.ಡಿ. ಪಲ್ಲವಿ ಮತ್ತು ಬಿಂದುಮಾಲಿನಿ’ ಎನ್ನುತ್ತಾರೆ ಅವರು.

‘ಹೆಣ್ಣುಮಕ್ಕಳಿಗೆ ದನಿಯಿದೆ. ಆದರೆ, ಅದನ್ನು ನಾವು ಯಾವತ್ತೂ ಕೇಳಿಸಿಕೊಂಡಿಲ್ಲ. ಈ ಯೋಚನೆಯೊಂದಿಗೇ ಶೇಕ್ಸ್‌ಪಿಯರ್‌ನ ಒಥೆಲೊ ಹಾಗೂ ಟಿಶಾನಿ ದೋಶಿಯವರ ‘ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದ ವುಡ್ಸ್’ ಅನ್ನು ಮೂಲಪಠ್ಯವಾಗಿಟ್ಟುಕೊಂಡು ‘ಡೆಸ್ಡೆಮೋನಾ ರೂಪಕಂ’ ರೂಪಿಸಿದೆವು. ಇದನ್ನು ಹಲವೆಡೆ ಪ್ರಯೋಗಿಸಬೇಕೆಂಬ ಯೋಜನೆ ಇದೆ. ಇದನ್ನು ದೊಡ್ಡ ವೇದಿಕೆಯಲ್ಲೂ ಸಣ್ಣ ವೇದಿಕೆಯಲ್ಲೂ ಪ್ರದರ್ಶಿಸುವ ರೀತಿಯಲ್ಲಿ ರೂಪಿಸಲಾಗಿದೆ’ ಎಂದು ವಿವರಿಸಿದರು ‘ಡೆಸ್ಡೆಮೋನಾ ರೂಪಕಂ’ನ ನಿರ್ಮಾಪಕಿ ವೀಣಾ ಅಪ್ಪಯ್ಯ.

ಪರದೆಯ ಹಿಂದಿನ ಹೆಣ್ಣು ದನಿಗಳು...

‘ನಾವಿಬ್ಬರೂ (ಪಲ್ಲವಿ–ಬಿಂದುಮಾಲಿನಿ) ಇಲ್ಲಿ ಹೆಣ್ಣು–ಗಂಡು, ಸೂತ್ರಧಾರ, ನಟ ಹೀಗೆ ಹತ್ತು–ಹಲವು ಪಾತ್ರಗಳನ್ನು ನಿಭಾಯಿಸಿದ್ದೇವೆ. ನಿಜಕ್ಕೂ ಇದೊಂದು ಸವಾಲು. ರಂಗದಲ್ಲಿ ಡೆಸ್ಡೆಮೋನಾಳೇ ಕೇಂದ್ರಬಿಂದುವಾದರೂ ಅವಳ ಮೂಲಕ ಬೇರೆ ಬೇರೆ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಮೇಲ್ನೋಟಕ್ಕೆ ಡೆಸ್ಡೆಮೋನಾಳ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ, ಒಥೆಲೊ ನಾಟಕದಲ್ಲಿ ಇದುವರೆಗೆ ಕೇಳದಿರುವ, ಶೇಕ್ಸ್‌ಪಿಯರ್ ಪರದೆಯ ಹಿಂದೆ ಅಡಗಿಸಿಟ್ಟಿರುವ ಹೆಣ್ಣು ದನಿಗಳು ಇಲ್ಲಿ ಕೇಳಿಸುತ್ತವೆ. ಡೆಸ್ಡೆಮೋನಾ, ಒಥೆಲೊನ ತಾಯಂದಿರು, ಕೈಕೇಯಿ–ದಶರಥ, ಜಮದಗ್ನಿ–ರೇಣುಕೆ, ದುಷ್ಯಂತ–ಶಾಕುಂತಲೆ, ಜೋಗತಿಯರು ಮಾತನಾಡುತ್ತಾರೆ. ಒಥೆಲೊದ ಪಠ್ಯವನ್ನೇ ಮೂಲವಾಗಿಟ್ಟುಕೊಂಡು ನಮ್ಮ ಯಕ್ಷಗಾನ, ಹರಿಕಥೆ, ಎಲ್ಲಮ್ಮ ನಾಟಕದಂಥ ಕಲಾಪ್ರಕಾರಗಳನ್ನು ಅಳವಡಿಸಿಕೊಂಡಿರುವುದು ಆಸಕ್ತಿಕರ ಸಂಗತಿ’ ಎಂದು ವಿವರಿಸುತ್ತಾರೆ ಬಿಂದುಮಾಲಿನಿ.

ಇತಿಹಾಸದ ಪ್ರಶ್ನೆಗಳುವರ್ತಮಾನಕ್ಕೂ ಸಲ್ಲುತ್ತವೆ

‘ಒಥೆಲೊ ಪಾಶ್ಚಿಮಾತ್ಯ ದೃಷ್ಟಿಕೋನ ಎನಿಸಿದರೂ ನಮ್ಮ ಸಂಸ್ಕೃತಿಯಲ್ಲಿನ ಹೆಣ್ಣಿನ ಪಾತ್ರಗಳು ಒಡ್ಡುವ ಪ್ರಶ್ನೆಗಳು ಇಲ್ಲಿವೆ. ಇದೊಂದು ರೀತಿಯಲ್ಲಿ ಭಿನ್ನ ಪಯಣ. ಹಲವು ಪಾತ್ರಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಮ್ಮದು. ಈ ರೂಪಕಂನಲ್ಲಿ ಐತಿಹಾಸಿಕ ಪಾತ್ರಗಳು ಕೇಳುವ ಪ್ರಶ್ನೆಗಳು ವರ್ತಮಾನಕ್ಕೂ ಸಲ್ಲುತ್ತವೆ. ಪಲ್ಲವಿ ಮತ್ತು ನಾನು ವೇದಿಕೆಯ ಮೇಲಿದ್ದರೆ, ಹಿನ್ನೆಲೆಯಲ್ಲಿ ಮೂರನೇ ಪಾತ್ರಧಾರಿಯಾಗಿರುವ ಸಂಗೀತದ ಪಾತ್ರ ಮಹತ್ವದ್ದು (ಸಂಗೀತ: ನಿಖಿಲ್ ನಾಗರಾಜ್)’ ಎನ್ನುತ್ತಾರೆ ಅವರು.

‘ನಾವಿಬ್ಬರೂ ಗಾಯಕಿಯರು ಆಗಿರುವುದರಿಂದ ರಂಗದ ಮೇಲೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತದ ಜತೆಗೆ ದೇಸಿ ಸೊಗಡಿನ ಜನಪದ ಸಂಗೀತವೂ ಮೇಳೈಸಿದೆ. ಹರಿಕಥೆ, ಯಕ್ಷಗಾನ, ಎಲ್ಲಮ್ಮ ನಾಟಕದ ಪದಗಳು ಹೀಗೆ ಹಲವು ಕಲಾಪ್ರಕಾರಗಳ ಕೊಲಾಜ್‌ ಇಲ್ಲಿದೆ. ‘ಡೆಸ್ಡೆಮೋನಾ ರೂಪಕಂ’ಗೆ ಸಿದ್ಧಮಾದರಿಯ ರಂಗಪಠ್ಯವಿರಲಿಲ್ಲ. ಒನ್‌ಲೈನ್ ಸ್ಟೋರಿ ಎಳೆಯನ್ನಿಟ್ಟುಕೊಂಡು ಅದನ್ನು ಬೆಳೆಸುತ್ತಾ ಹೋಗಿದ್ದೇವೆ. ಈ ರೀತಿಯ ಪ್ರಯೋಗ ಭಿನ್ನ ಅನುಭವ ನೀಡಿದೆ’ ಎಂದು ಮಾತಿಗೆ ಪೂರ್ಣವಿರಾಮ ಹಾಕಿದರು ಬಿಂದು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.