ADVERTISEMENT

PV Web Exclusive: ಪದ್ಮಶ್ರೀ ಪುರಸ್ಕೃತರಾದ ಜೋಗತಿ ನೃತ್ಯಗಾತಿ ಮಂಜಮ್ಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಜನವರಿ 2021, 9:27 IST
Last Updated 26 ಜನವರಿ 2021, 9:27 IST
ಮಂಜಮ್ಮ ಜೋಗತಿ
ಮಂಜಮ್ಮ ಜೋಗತಿ   

ಹೊಸಪೇಟೆ: ಜೋಗತಿ ನೃತ್ಯದ ಮೂಲಕ ಮನೆ ಮಾತಾಗಿರುವ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ಅವರು ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

2019ರಿಂದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಅವರ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಇದರೊಂದಿಗೆ ಜೋಗತಿ ನೃತ್ಯಕ್ಕೂ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.

ಮಂಜಮ್ಮ ಅವರು ಜಾನಪದ ಅಕಾಡೆಮಿ ಸದಸ್ಯರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜ್ಯ ಸೇರಿದಂತೆ ಪರರಾಜ್ಯಗಳಲ್ಲಿ ಜೋಗತಿ ನೃತ್ಯವನ್ನು ಪ್ರದರ್ಶಿಸಿ, ಅದರ ಹಿರಿಮೆಯನ್ನು ಹೆಚ್ಚಿಸಲು ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ADVERTISEMENT

ಮಂಜಮ್ಮ ಅವರು ಮೂಲತಃ ಬಳ್ಳಾರಿ ತಾಲ್ಲೂಕಿನ ಕಲ್ಲುಕಂಬ ಗ್ರಾಮದವರು. ತಾಲ್ಲೂಕಿನ ಮರಿಯಮ್ಮನಹಳ್ಳಿಯ ಕಾಳಮ್ಮ ಜೋಗತಿ ಅವರಿಂದ ಪ್ರಭಾವಿತರಾಗಿ ಜೋಗತಿ ಕಲೆ ಮೈಗೂಡಿಸಿಕೊಂಡರು. ಈಗ ಮರಿಯಮ್ಮನಹಳ್ಳಿಯಲ್ಲೇ ವಾಸವಾಗಿದ್ದಾರೆ.

ಇವರು ಮಾಡಿದ್ದೇನು?:

ಅನೇಕ ಕಾರಣಗಳಿಂದ ತಾತ್ಸಾರಕ್ಕೆ ಒಳಗಾಗಿರುವ ತೃತೀಯ ಲಿಂಗಿಗಳನ್ನು ಸಂಘಟಿಸಿ, ಅವರ ತಂಡ ಕಟ್ಟಿಕೊಂಡು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಜೋಗತಿ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅದರ ವಿಶೇಷ ಮನದಟ್ಟು ಮಾಡಿಕೊಡಲು ಯಶಸ್ವಿಯಾಗಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿ ಜಾನಪದಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿದರೆ ಅದರಲ್ಲಿ ಜೋಗತಿ ನೃತ್ಯಕ್ಕೆ ಪ್ರಾಧಾನ್ಯತೆ ಸಿಗುತ್ತಿದೆ. ಇದು ಇವರ ಶ್ರಮಕ್ಕೆ ಸಂದ ಗೌರವ ಎನ್ನಬಹುದು.

ರಂಗಭೂಮಿ, ಚಲನಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇವರ ಅಭಿನಯದ ‘ರೇಣುಕಾದೇವಿ ಚರಿತ್ರೆ’ ಸಾವಿರ ಪ್ರದರ್ಶನ ಕಂಡು ಇತಿಹಾಸ ಬರೆದಿದೆ. ‘ಮೋಹಿನಿಭಸ್ಮಾಸುರ’, ‘ಹೇಮರೆಡ್ಡಿ ಮಲ್ಲಮ್ಮ’, ‘ಕೀಚಕನವಧೆ’, ‘ಗೋಕರ್ಣದ ಗೌಡಶಾನಿ’, ‘ಗಿರಿಜಾ ಕಲ್ಯಾಣ’ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಇವರ ಸೆಳೆತ ಹೆಚ್ಚು ಇದ್ದದ್ದು ಜೋಗತಿ ನೃತ್ಯದ ಕಡೆಗೆ. ಅದರಲ್ಲೇ ಹೆಚ್ಚು ತೊಡಗಿಸಿಕೊಂಡು, ಇತರೆ ತೃತೀಯ ಲಿಂಗಿಗಳು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು.

ಪಠ್ಯದಲ್ಲೂ ಜಾಗ:

ಲೇಖಕ ಡಾ. ಚಂದ್ರಪ್ಪ ಸೊಬಟಿ ಬರೆದ ಮಂಜಮ್ಮ ಜೋಗತಿ ಎಂಬ ಆತ್ಮಕಥನದಲ್ಲಿನ ಕೆಲವು ಭಾಗಗಳನ್ನು ಆಯ್ದುಕೊಂಡು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪದವಿ ಐದನೇ ಸೆಮಿಸ್ಟರ್‌ನ ಪಠ್ಯದಲ್ಲಿ ಇವರ ವಿಷಯ ಸೇರಿಸಿದೆ. ಇವರ ಆತ್ಮಕಥನ ತೆಲುಗು ಮಾಸ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟಗೊಂಡಿದೆ.

ಯುವ ಲೇಖಕ ಅರುಣ್‌ ಜೋಳದಕೂಡ್ಲಿಗಿ ನಿರೂಪಿಸಿರುವ ‘ನಡುವೆ ಸುಳಿವ ಹೆಣ್ಣು’ ಇವರ ಆತ್ಮಕಥನ ಜ. 31ರಂದು ಬಿಡುಗಡೆಯಾಗಲಿದೆ. ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ, ಜಾನಪದ ಲೋಕ, ತಾಯಮ್ಮ ಮಲ್ಲಯ್ಯ ದತ್ತಿ, ಟಿ.ಆರ್.ಟಿ., ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.

*
ಪದ್ಮಶ್ರೀ ಪ್ರಶಸ್ತಿ ನನಗೆ ಬರುತ್ತದೆ ಎಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ವಿಷಯ ಗೊತ್ತಾಗಿ ಬಹಳ ಖುಷಿಯಾಗಿದೆ.
–ಮಂಜಮ್ಮ ಜೋಗತಿ

ಕಾರ್ಯಕ್ರಮವೊಂದರಲ್ಲಿ ಬಿ.ಮಂಜಮ್ಮ ಜೋಗತಿ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.