ADVERTISEMENT

PV Web Exclusive: ಹಬ್ಬಗಳಿಗೆ ರಂಗು ತುಂಬುವ ರಂಗೋಲಿ

ಸ್ಮಿತಾ ಶಿರೂರ
Published 3 ನವೆಂಬರ್ 2020, 5:29 IST
Last Updated 3 ನವೆಂಬರ್ 2020, 5:29 IST
ಕಲಬುರ್ಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ರಂಗೋಲಿ ಬಿಡಿಸುತ್ತಿರುವುದು (ಸಾಂದರ್ಭಿಕ ಚಿತ್ರ).                                                                                                     ಚಿತ್ರ/ ಪ್ರಶಾಂತ್‌ ಎಚ್‌.ಜಿ.
ಕಲಬುರ್ಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ರಂಗೋಲಿ ಬಿಡಿಸುತ್ತಿರುವುದು (ಸಾಂದರ್ಭಿಕ ಚಿತ್ರ).                                                                                                     ಚಿತ್ರ/ ಪ್ರಶಾಂತ್‌ ಎಚ್‌.ಜಿ.   
""
""

ಬೆಳಿಗ್ಗೆ ಎದ್ದು ಬಾಗಿಲು ತೆರೆದು ಸೂರ್ಯ ದರ್ಶನಕ್ಕೆ ಬಂದು ನಿಂತಾಗ ಕಂಡಿದ್ದು, ಸೂರ್ಯೋದಯಕ್ಕೂ ಮುಂಚೆಯೇ ಎದ್ದು ಮನೆಗಳೆದುರು ರಂಗೋಲಿ ಹಾಕುತ್ತಿದ್ದ ಮಹಿಳೆಯರು. ಬಹುತೇಕ ಹೆಣ್ಣುಮಕ್ಕಳ ದಿನಚರಿ ಆರಂಭವಾಗುವುದೇ ರಂಗೋಲಿಯ ಚುಕ್ಕೆ ಇಡುವುದರಿಂದ. ಹಾಲು ತರಲು ಹೊರಟರೆ ಸಾಲಾಗಿ ಇರುವ ಮನೆಗಳೆದುರು ಕಾಣುವುದು ಒಂದಕ್ಕಿಂತ ಒಂದು ಚಂದದ ಎಳೆ ರಂಗೋಲಿಯ ವಿನ್ಯಾಸಗಳು.

ಹಬ್ಬಗಳಿಗೂ–ರಂಗೋಲಿಗೂ–ಮಹಿಳೆಗೂ ಅವಿನಾಭಾವ ಸಂಬಂಧ. ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗವೂ ಹೌದು. ಬಹುತೇಕ ಮಹಿಳೆಯರು ಪ್ರತಿದಿನ ರಂಗೋಲಿ ಇಡುತ್ತಾರಾದರೂ, ಹಬ್ಬಗಳಲ್ಲಿ ಶೇಡಿ, ಕೆಮ್ಮಣ್ಣು, ಬಣ್ಣ, ಹೂ, ಧಾನ್ಯ ಹೀಗೆ ಹಲವು ಪದಾರ್ಥಗಳು ಅಂದಗಾಣಿಸಲು ಬರುತ್ತವೆ. ವಿವಾಹ, ಮುಂಜಿ, ಸೀಮಂತ, ಜನ್ಮದಿನ, ಮಗುವಿಗೆ ಹೆಸರು ಇಡುವ ಕಾರ್ಯಕ್ರಮ, ದೇವಾಲಯಗಳ ಉತ್ಸವಗಳು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭೆ–ಸಮಾರಂಭಗಳಲ್ಲೂ ರಂಗೋಲಿ ಇದ್ದರಷ್ಟೇ ಕಳೆ ಬಂದಂತೆ.

ದುಷ್ಟಶಕ್ತಿಗಳನ್ನು ದೂರವಿಡಲು, ಶುಭ ಸಂಕೇತವಾಗಿ, ಕೃಷಿ ಭೂಮಿ ಫಲವತ್ತಾಗುವಂತೆ, ಮನೆ ಸಂಪದ್ಭರಿತವಾಗುವಂತೆ ಆಶಿಸಲು ರಂಗೋಲಿಗಳನ್ನು ರಚಿಸಲಾಗುತ್ತದೆ ಎಂಬುದು ಪ್ರತೀತಿ. ಹೀಗಾಗಿ ಇವುಗಳನ್ನು ಸಕಾರಾತ್ಮಕ ಚಿಂತನೆಯ ಸಂಕೇತಗಳು ಎನ್ನಬಹುದು.

ADVERTISEMENT

ಮನೆಯೆದುರಿನ ರಂಗೋಲಿ ಎಂಬುದು ಮನೆಯೊಡತಿಯ ಅಂದಿನ ಮನಸ್ಥಿತಿಯನ್ನು ಬಿಂಬಿಸುತ್ತದೆ. ಸುಂದರ ದೊಡ್ಡ ರಂಗೋಲಿ ಮೂಡಿದೆ ಎಂದರೆ ಅಂದು ಆ ಮನೆಯ ಹುಡುಗಿಯೋ, ಅಮ್ಮನೋ ಖುಷಿಯಿಂದ ಇದ್ದಾರೆ ಎನ್ನಬಹುದು. ಅವರಿಗೆ ಅಂದು ಸಾಕಷ್ಟು ಸಮಯವಿದೆ ಎಂದೂ ಅರ್ಥ ಮಾಡಿಕೊಳ್ಳಬಹುದು. ಚಿಕ್ಕ ರಂಗೋಲಿಯಿದೆ ಎಂದರೆ ಅವಸರದಲ್ಲಿ ಎರಡೆಳೆ ಎಳೆದು ಹೋಗಿರಬಹುದು!

ನವಗ್ರಹ ಮಂಡಲ (ರಚನೆ–ರವಿಕಿರಣ ಭಟ್‌, ಗೋಕರ್ಣ)

ಕೆಲವರಿಗೆ ರಂಗೋಲಿಯೆಂದರೆ ಎಷ್ಟು ಆಸ್ಥೆ ಎಂದರೆ ಹಿಂದಿನ ದಿನವೇ ಅಂತರ್ಜಾಲದಲ್ಲೋ, ಪುಸ್ತಕದಲ್ಲೋ ಹುಡುಕಿ ಸುಂದರ ವಿನ್ಯಾಸವನ್ನು ರೂಢಿಸಿಕೊಂಡು ಮರುದಿನ ಅದನ್ನು ಮನೆಯೆದುರು ಹಾಕುತ್ತಾರೆ. ಸುಂದರ ಚುಕ್ಕಿ ರಂಗೋಲಿಯೋ, ಫ್ರೀಹ್ಯಾಂಡ್‌ ವಿನ್ಯಾಸವೋ ಕಂಡರೆ ಅದನ್ನು ತಕ್ಷಣ ತಮ್ಮ ನೋಟ್‌ಬುಕ್‌ನಲ್ಲಿ ಬಿಡಿಸಿಟ್ಟುಕೊಳ್ಳುವವರೇನೂ ಕಡಿಮೆಯಿಲ್ಲ. ತಾವೇ ಸ್ವತಃ ಹೊಸ ವಿನ್ಯಾಸಗಳನ್ನು ರಚಿಸಿ ಸಂತಸ ಪಡುವವರೂ ಇದ್ದಾರೆ. ಪರಂಪರಾಗತವಾಗಿ ಬಂದ ಕೆಲವು ರಂಗೋಲಿ ವಿನ್ಯಾಸಗಳು ಇಂದು ಬಹುವಿಧಗಳಾಗಿ ಬೆಳೆದಿವೆ. ಯಾವುದೇ ತರಬೇತಿಯಿಲ್ಲದೆಯೂ ಕೇವಲ ಆಸಕ್ತಿಯೊಂದರಿಂದಲೇ ರೂಢಿಸಿಕೊಳ್ಳಬಹುದಾದ ಈ ಕಲೆ ಮನೆ ಮನೆಗಳಲ್ಲೂ ಇರುವ ಕಲಾಪ್ರಕಾರ. ಬಡವ–ಶ್ರೀಮಂತರೆನ್ನದೇ ಎಲ್ಲರಿಗೂ ತಲೆಮಾರುಗಳಿಂದ ರಂಗೋಲಿ ಕಲೆ ದಾಟುತ್ತ ಬಂದಿದೆ.

ದೀಪಾವಳಿ ಆಗಮನ ಸಾರುವ ಹಸೆ ರಂಗೋಲಿ

‘ಶೇಡಿ–ಕೆಮ್ಮಣ್ಣು’ ಬೇಕೇ ಎಂದು ಕೂಗುತ್ತ ಬಂದರೆಂದರೆ ದೀಪಾವಳಿ ಬಂತೆಂದೇ ಅರ್ಥ. ಬಾವಿ, ಬಾಗಿಲು, ಹೊಸ್ತಿಲು, ದೇವರಮನೆ, ಅಡುಗೆಮನೆ, ಕೊಟ್ಟಿಗೆಯ ಬಳಿ ಎಲ್ಲೆಲ್ಲಿ ಬಳಿಯಬಹುದೋ ಅಲ್ಲೆಲ್ಲ ಕೆಮ್ಮಣ್ಣು ಬಳಿದು, ಶೇಡಿಯಿಂದ ಹಸೆ ರಂಗೋಲಿ ಇಕ್ಕಿದಾಗಲೇ ದೀಪಾವಳಿಯ ಸೊಬಗು ಅರಳುವುದು.
ದೇಶದಾದ್ಯಂತ ರಂಗೋಲಿಯ ರಂಗು ಆವರಿಸಿದ್ದರೂ ಅದಕ್ಕೆ ಬೇರೇ ಬೇರೆ ರಾಜ್ಯಗಳಲ್ಲಿ ಇರುವ ಹೆಸರು ಬೇರೆ. ಅಲ್ಲಿ ಬಳಕೆಯಾಗುವ ಸಲಕರಣೆಗಳು, ಪದಾರ್ಥಗಳೂ ಭಿನ್ನ. ಕೆಲವು ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಕ್ಕೆ ನಿರ್ದಿಷ್ಟ ವಿನ್ಯಾಸವೂ ಇವೆ.

ಅಕ್ಕಿ ಹಿಟ್ಟಿನ ಪೇಸ್ಟ್‌ ತಯಾರಿಸಿ ಅದರಿಂದ ನೆಲ–ಗೋಡೆಗಳಿಗೆ ಚಿತ್ತಾರ ಬಿಡಿಸುವ ‘ಅಲ್ಪನಾ’ ಬಂಗಾಳ ಭಾಗದ ರಂಗೋಲಿ. ಬಹಳ ಹಿಂದಿನಿಂದಲೇ ದುಷ್ಟ ಶಕ್ತಿಗಳನ್ನು ದೂರವಿಡಲು ಕೃಷಿಕರು ಇದನ್ನು ಬಳಸಿದ್ದನ್ನು ಗುರುತಿಸಲಾಗಿದೆ. ಉತ್ತರಾಖಂಡದಲ್ಲಿ ರಂಗೋಲಿ ಎನ್ನುವುದು ‘ಐಪನ್‌’ ಎಂದಾಗಿದೆ. ಪೂಜಾ ವೇದಿಕೆ, ಮನೆಯ ಬಾಗಿಲಿನ ಎದುರು, ತುಳಸಿ ಕಟ್ಟೆಯ ಎದುರು ಹೆಚ್ಚಾಗಿ ಇವುಗಳನ್ನು ಬಿಡಿಸಲಾಗುತ್ತದೆ. ಈ ರಂಗೋಲಿಯಲ್ಲಿ ಚುಕ್ಕೆಗಳಿಗೆ ಹಾಗೂ ಸ್ವಸ್ತಿಕ್‌ ಚಿಹ್ನೆಗಳಿಗೆ ವಿಶೇಷ ಮಹತ್ವವಿದೆ. ಅಂತ್ಯಸಂಸ್ಕಾರದ ಸಂದರ್ಭಕ್ಕೆಂದೇ ಬಿಡಿಸುವ ರಂಗೋಲಿಗಳೂ ಇವರಲ್ಲಿವೆ! ಲಕ್ಷ್ಮೀ ಪಾದ ಹಾಗೂ ಲಕ್ಷ್ಮೀ ಪೀಠ ಚಿಹ್ನೆಗಳನ್ನು ಇಲ್ಲಿ ದೀಪಾವಳಿಯ ಸಂದರ್ಭದಲ್ಲಿ ರಚಿಸಲಾಗುತ್ತದೆ. ಸಾಂಪ್ರದಾಯಿಕ ರಂಗೋಲಿಯನ್ನು ನೆಲ ಹಾಗೂ ಗೋಡೆಗಳ ಮೇಲೆ ಬಿಡಿಸುತ್ತಾರಾದರೂ, ಈಚೆಗೆ ಈ ಚಿತ್ತಾರಗಳನ್ನು ಬಟ್ಟೆಗಳು, ಆಭರಣ ಪೆಟ್ಟಿಗೆ, ವಿವಿಧ ಪುಸ್ತಕಗಳು, ಆಲಂಕಾರಿಕ ಹೂಜಿಗಳ ಮೇಲೆ ಕಾಣಬಹುದು. ಒಡಿಶಾದಲ್ಲಿ ಇದೇ ಕಲೆಯನ್ನು ‘ಝೋಟಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲಿ ವಿನ್ಯಾಸಗಳು, ಸಂದರ್ಭಗಳೂ ಭಿನ್ನವಾಗುತ್ತವೆ. ‘ಮಂದನಾ’ ಎಂದು ರಾಜಸ್ಥಾನದ ರಂಗೋಲಿಯ ಹೆಸರು.

ಬಿಹಾರದಲ್ಲಿ ರಂಗೋಲಿ ಕಲೆಯನ್ನು ‘ಅರಿಪನ್‌’ ಎನ್ನಲಾಗಿದ್ದು, ಇದು ಬಹುತೇಕ ಮಧುಬನಿ ಕಲೆಗೆ ಹತ್ತಿರ. ಇದರಲ್ಲೂ ಅಕ್ಕಿ ಹಿಟ್ಟಿನ ಪೇಸ್ಟ್‌ ಹಾಗೂ ನೈಸರ್ಗಿಕ ಬಣ್ಣಗಳ ಬಳಕೆಗೆ ಒತ್ತು ನೀಡಲಾಗಿದೆ. ದೀಪಾವಳಿಗಾಗಿಯೇ ವಿಶೇಷ ರಂಗೋಲಿ ಸಹ ಇವರಲ್ಲಿದೆ.

ಸಗಣಿಯಿಂದ ನೆಲವನ್ನು ಸಾರಿಸಿ ಅದರ ಮೇಲೆ ರಂಗೋಲಿ ಬರೆಯುವುದು ಆಂಧ್ರಪ್ರದೇಶದಲ್ಲಿ ರೂಢಿಯಲ್ಲಿದೆ. ಇದನ್ನು ಇಲ್ಲಿ ‘ಮುಗ್ಗು’ ಎನ್ನಲಾಗುತ್ತದೆ. ಸೀಮೆಸುಣ್ಣದ ಪುಡಿ ರಂಗೋಲಿ ಬಿಡಿಸಲು ಹೆಚ್ಚು ಬಳಕೆಯಾಗುತ್ತದೆ. ದೀಪಾವಳಿ, ಸಂಕ್ರಾಂತಿ, ನವರಾತ್ರಿ, ಗಣೇಶನ ಹಬ್ಬ, ವರಮಹಾಲಕ್ಷ್ಮೀ ವ್ರತ ಹೀಗೆ ವಿವಿಧ ಹಬಬ್, ಪೂಜೆಗಳಿಗೆ ವಿಶೇಷ ರಂಗೋಲಿಗಳು ಇವೆ. ಕರ್ನಾಟಕದಲ್ಲಿ ಹಲವು ಮಾದರಿಗಳನ್ನು ಅನುಸರಿಸಲಾಗುತ್ತದೆ.

ಸರ್ವತೋಭದ್ರ ಮಂಡಲ (ರಚನೆ– ರವಿಕಿರಣ ಭಟ್‌, ಗೋಕರ್ಣ)

ತಮಿಳುನಾಡು ಹಾಗೂ ಕೇರಳಗಳಲ್ಲಿ ‘ಕೋಲಂ’ ಎಂದರೆ ರಂಗೋಲಿ. ಸುಣ್ಣದ ಕಲ್ಲಿನ ಪುಡಿ ಹಾಗೂ ಕೆಂಪು ಮಣ್ಣಿನ ಪುಡಿಯನ್ನು ಬಳಸಲಾಗುತ್ತದೆ. ಅಕ್ಕಿಹಿಟ್ಟಿನಿಂದ ಚಿತ್ತಾರ ಬಿಡಿಸುವ ಪದ್ಧತಿಯೂ ಇಲ್ಲಿದೆ. ಅಕ್ಕಿಹಿಟ್ಟಿನಿಂದ ರಂಗೋಲಿ ಬರೆದರೆ ಅವು ಸಂಜೆಯಾಗುವುದರೊಳಗೆ ಇರುವೆ ಹಾಗೂ ಹಕ್ಕಿಗಳ ಪಾಲಾಗಿರುತ್ತವೆ. ಆದರೆ ‍ಪುಟ್ಟ ಜೀವಿಗಳಿಗೆ ಆಹಾರ ಸಿಗಲಿ ಎಂಬ ದೃಷ್ಟಿಯಿಂದ ದಿನವೂ ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಬರೆಯುವ ಅನ್ನಪೂರ್ಣೆಯರೂ ನಮ್ಮಲ್ಲಿ ಇದ್ದಾರೆ. ರಂಗೋಲಿ ಪುಡಿ ಮುಗಿದಿದ್ದರೆ ಗೋಧಿ ಹಿಟ್ಟಿನಿಂದಲೂ ಸುಂದರವಾಗಿ ರಂಗೋಲಿ ಚಿತ್ತಾರ ಮೂಡಿಸಬಹುದು.

ಮಂಡಲ ರಂಗೋಲಿಗಳು

ಸಾಮಾನ್ಯವಾಗಿ ರಂಗೋಲಿ ಎಂದರೆ ಬಹುತೇಕ ಮಹಿಳೆಯರದ್ದೇ ಪಾರುಪತ್ಯ. ಕೆಲವು ಸ್ಪರ್ಧೆಗಳಲ್ಲಿ, ರಂಗೋಲಿ ಭಾವಚಿತ್ರಗಳನ್ನು ಬಿಡಿಸುವಲ್ಲಿ ಮಾತ್ರ ಪುರುಷರ ಹಾಜರಿ ಕಾಣಿಸುತ್ತದೆ. ಆದರೆ ಪೂಜೆ, ಹೋಮ–ಹವನಗಳಲ್ಲಿ ಮಾತ್ರ ಪುರುಷರೇ ಮಂಡಲ ರಂಗೋಲಿಗಳನ್ನು ಹಾಕುವುದನ್ನು ಕಾಣಬಹುದು.

‘ದೇವ–ದೇವಿಯರ ಪೂಜೆಗಳಲ್ಲಿ ರಂಗೋಲಿಯದ್ದು ಪ್ರಧಾನ ಪಾತ್ರ. ಹೋಮ–ಹವನಗಳಲ್ಲೂ ಮಂಡಲ ರಂಗೋಲಿಗೇ ಪ್ರಥಮ ಪೂಜೆ ಸಲ್ಲುತ್ತದೆ. ಪೂಜಾ ವಿಧಿವಿಧಾನಗಳಲ್ಲಿ ರಂಗೋಲಿಯೆಂದರೆ ದೇವರ ಪೀಠ ಎಂಬ ಅರ್ಥ ಇರುತ್ತದೆ. ಬೇರೆ ಬೇರೆ ಪೂಜೆಗಳಿಗೆ ಬೇರೆ ಬೇರೆ ಮಂಡಲಗಳನ್ನು ಗುರುತಿಸಲಾಗಿದೆ’ ಎಂದು ಗೋಕರ್ಣದ ಭಂಡಿಕೇರಿ ಮಠದ ರವಿಕಿರಣ ಭಟ್‌ ವಿವರಿಸಿದರು.

‘ಇದು ಚುಕ್ಕೆ ರಂಗೋಲಿ ಹಾಗೂ ನಿತ್ಯವೂ ಮನೆಯ ಎದುರು ಹಾಕುವಂಥ ವಿನ್ಯಾಸಗಳಲ್ಲ. ಚುಕ್ಕೆ, ರೇಖೆ, ವೃತ್ತ, ಚೌಕ, ಆಯತ, ತ್ರಿಕೋನ, ಷಟ್‌ಕೋನದಂಥ ರೇಖಾಗಣಿತದಲ್ಲಿ ಬರುವ ವಿವಿಧ ಆಕೃತಿಗಳು, ಹೂದಳಗಳು, ಸರ್ಪದ ಹೆಡೆ ಹೀಗೆ ಕೆಲವು ಸಾಂಕೇತಿಕ ಚಿತ್ರಗಳು ಇಲ್ಲಿ ಬಳಕೆಯಾಗುತ್ತವೆ. ಪ್ರತಿ ಆಕೃತಿಗೂ ಅರ್ಥವಿರುತ್ತದೆ. ‘ಮಂಡಲ ದರ್ಶನ’ ಎಂಬ ಪುಸ್ತಕವು ವಿವಿಧ ಪೂಜೆಗಳಿಗೆ ಬಳಸುವ ಮಂಡಲ ರಂಗೋಲಿಗಳ ಬಗ್ಗೆ ವಿವರಣೆ– ಮಾರ್ಗದರ್ಶನ ನೀಡುತ್ತದೆ. ದೊಡ್ಡ ಮಂಡಲಗಳ ರಚನೆಗೆ ಒಂದರಿಂದ ಒಂದೂವರೆ ಗಂಟೆ ಸಮಯ ಅಗತ್ಯ. ಚಿಕ್ಕ ಮಂಡಲಗಳು ಇದ್ದಾಗ 10 ನಿಮಿಷಗಳಲ್ಲಿ ಮುಗಿಸಬಹುದು’ ಎನ್ನುತ್ತಾರವರು.

‘ಗಣಪತಿ ಮಂಡಲ ಎಂಬುದು ಸಾಮಾನ್ಯರಿಗೂ ಗೊತ್ತಿರುವ ರಂಗೋಲಿ. ನಾಗಮಂಡಲ (ಆಶ್ಲೇಷಾ ಬಲಿ ಪೂಜೆ ಮಂಡಲ), ಎಲ್ಲ ಪ್ರಧಾನ ದೇವತೆಗಳಿಗಾಗಿ ಬಿಡಿಸಬಹುದಾದ ಸರ್ವತೋಭದ್ರ ಮಂಡಲ (ಬ್ರಹ್ಮಾದಿ ಮಂಡಲ), ದುರ್ಗಾ ಮಂಡಲ, ಸುದರ್ಶನ ಮಂಡಲ, ನವಗ್ರಹ ಮಂಡಲ... ಹೀಗೆ ಕೆಲವು ಪ್ರಮುಖ ಮಂಡಲಗಳನ್ನು ಹೆಸರಿಸಬಹುದು. ಮಂಡಲಗಳ ರಚನೆಗೆ ಸಾಧ್ಯವಾದಷ್ಟೂ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಅರಿಸಿಣ, ಕುಂಕುಮ, ಅಕ್ಕಿ, ವಿವಿಧ ಬಣ್ಣದ ಧಾನ್ಯಗಳನ್ನು ಬಳಸಲಾಗುತ್ತದೆ. ಲಭ್ಯವಿಲ್ಲದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ರಂಗೋಲಿ ಪುಡಿ ಬಳಸಲಾಗುತ್ತದೆ. ಅಕ್ಕಿಗೆ ಬಣ್ಣಗಳನ್ನು ಹಾಕಿ ಅದರಲ್ಲಿ ಮಂಡಲಗಳನ್ನು ರಚಿಸುವ ವಿಧಾನ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ’ ಎಂದು ರವಿಕಿರಣ ಭಟ್‌ ತಿಳಿಸಿದರು.

ಹೂಗಳ ದಳಗಳಿಂದ ರಚಿಸುವ ರಂಗೋಲಿ ಕೇರಳದ ಓಣಂ ಹಬ್ಬದಿಂದಾಗಿ ಹೆಚ್ಚಾಗಿ ಪ್ರಚಲಿತಕ್ಕೆ ಬಂದಿದೆ. ಪೂಕಳಂ ಎಂದು ಕರೆಯಲಾಗುವ ಈ ರಂಗೋಲಿ ಒಣಂ ಹಬ್ಬದ ಹೆಗ್ಗುರುತು. ಒಣಂ ಆಚರಿಸದವರೂ ಹಬ್ಬಗಳಲ್ಲಿ ಹೂದಳಗಳ ವಿನ್ಯಾಸ ಮಾಡಿ ಖುಷಿ ಪಡುತ್ತಾರೆ. ವಿವಿಧ ಬಣ್ಣಗಳ ಹೂಗಳ ದಳಗಳನ್ನು ಕಿತ್ತು, ಅವುಗಳ ಬಣ್ಣಗಳಿಗನುಗುಣವಾಗಿ ವಿಂಗಡಿಸಿ ವಿನ್ಯಾಸಗಳಲ್ಲಿ ಭರ್ತಿ ಮಾಡುವ ಈ ರಂಗೋಲಿ ಮಕ್ಕಳಿಗೂ ಅಚ್ಚುಮೆಚ್ಚು. ಹಬ್ಬಕ್ಕೆ ರಾಶಿ–ರಾಶಿ ಹೂ ತರುವವರು ಪೂಜೆಯೆಲ್ಲ ಮುಗಿದ ನಂತರ ಅಳಿದುಳಿದ ಹೂಗಳನ್ನು ಬಳಸಿ ಪೂಕಳಂ ಮಾಡಿ ನೋಡಬಹುದು.

ಆಧುನಿಕ ವಿಧಾನಗಳು

ಆಧುನಿಕ ಯುಗದಲ್ಲೂ ರಂಗೋಲಿಯ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಈಗಲೂ ಪ್ರತಿ ಮನೆಯೆದುರು ರಂಗೋಲಿ ಕಂಗೊಳಿಸುತ್ತಿರುತ್ತದೆ. ಹೊಸ್ತಿಲಿನ ಮೇಲೆ ಸ್ವಸ್ತಿಕ, ಎಲೆಗಳು, ಹೂಗಳು ರಾರಾಜಿಸುತ್ತಿರುತ್ತವೆ. ಪರಂಪರಾಗತ ಶೈಲಿಯೂ ಉಳಿದಿದೆ. ನವನವೀನ ಮಾದರಿಗಳೂ ಬಂದು ಸೇರಿಕೊಂಡಿವೆ. ರಂಗೋಲಿ ಇಡುವ ವಿಧಾನಗಳಿಗಂತೂ ಲೆಕ್ಕವಿಲ್ಲ. ಹಳ್ಳಿಗಳಿಂದ ಹಿಡಿದು ದಿಲ್ಲಿಯವರೆಗೂ ರಂಗೋಲಿ ಸ್ಪರ್ಧೆಗಳಿದ್ದರೆ ಪಾಲ್ಗೊಳ್ಳಲು ಮಹಿಳೆ–ಪುರುಷ–ಮಕ್ಕಳು ಮುಗಿಬೀಳುತ್ತಾರೆ. ಬೆಂಗಳೂರು ಹಾಗೂ ಕೆಲವು ನಗರಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಪೌರಕಾರ್ಮಿಕರು ನಗರದಾದ್ಯಂತ ರಂಗೋಲಿ ಇಟ್ಟು ಜಾಗೃತಿ ಮೂಡಿಸಿದ ನಂತರ ‘ರಂಗೋಲಿ’ ಸ್ವಚ್ಛತೆಯ ಪಾಠವನ್ನೂ ಹೇಳುತ್ತದೆ ಎಂದು ಸಾಬೀತಾಗಿದೆ.

ದೀಪಾವಳಿ ಹತ್ತಿರದಲ್ಲಿದೆ. ಹೀಗಾಗಿ ಹಬ್ಬಕ್ಕೆ ಈ ಬಾರಿ ಎಂಥ ರಂಗೋಲಿ ಹಾಕಲಿ ಎಂದು ಈಗಲೇ ತಲೆಕೆಡಿಸಿಕೊಳ್ಳಲು ಅಡ್ಡಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.