ADVERTISEMENT

PV Web Exclusive l ಬೆಳ್ಗಲ್ಲು : ಭಾಷೆ ಎಂಬ ಒಡಲ ನೂಲು...

ಪದ್ಮನಾಭ ಭಟ್ಟ‌
Published 6 ಸೆಪ್ಟೆಂಬರ್ 2020, 5:11 IST
Last Updated 6 ಸೆಪ್ಟೆಂಬರ್ 2020, 5:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನನ್ನ ತಂದೆ, ತಾನು ಹುಟ್ಟಿ ಬೆಳೆದ ಊರನ್ನು, ಅವರ ಮೂವತ್ತೈದನೇ ವಯಸ್ಸಿನ ಆಸುಪಾಸಿನಲ್ಲಿ ಬಿಟ್ಟುಬರಬೇಕಾಯ್ತು. ಅವರಷ್ಟೇ ಅಲ್ಲ, ಇಡೀ ಊರು, ಸುತ್ತಲಿನ ಹತ್ತೂರಿನ ಜನರೂ ವಲಸೆ ಹೋಗಬೇಕಾಯ್ತು. ಕಾಳಿನದಿಗೆ ಕೊಡಸಳ್ಳಿ ಎಂಬಲ್ಲಿ ಅಣೆಕಟ್ಟು ಕಟ್ಟಿದ ಪರಿಣಾಮವಾಗಿ ಆ ಊರುಗಳೆಲ್ಲ ಪೂರ್ತಿ ಮುಳುಗಡೆಯಾಗಿಹೋದವು.

ತನ್ನ ಹುಟ್ಟೂರಿನಿಂದ ಬಂದು ಮತ್ತೊಂದೂರಿನಲ್ಲಿ ನೆಲೆಸಿದ ಹದಿನೈದು ಇಪ್ಪತ್ತು ವರ್ಷಗಳ ನಂತರವೂ ಅವರಿಗೆ ಹುಟ್ಟೂರಿನ ಕನಸುಗಳೇ ಬೀಳುತ್ತಿದ್ದವಂತೆ. ಊರಿನ ವಸಂತಿ ಕೆರೆ, ನೆಟ್ಟಿ ಹಾಕುವ ಗದ್ದೆ, ದಣಪೆ, ಅಡಿಕೆ ತೋಟ, ಈಜಲು ಕಲಿತ ಕಾಳಿನದಿ, ಶಾಲೆಗೆ ಹೋಗುವ ದಾರಿ, ಅಲ್ಲಿನ ಗಡಿ ಪಂಚಾಯ್ತಿ, ಊರ ರಾಜಕೀಯ, ಹದಿವಯಸ್ಸಿನಲ್ಲಿ ನಿಗೂಢವಾಗಿ ಕಣ್ಮರೆಯಾದ ಗೆಳೆಯ... ಹೀಗೆ ವಾಸ್ತವದಲ್ಲಿ ಇಲ್ಲದ ಪ್ರಪಂಚ, ವ್ಯಕ್ತಿಗಳೆಲ್ಲ ಅವರ ಕನಸಿನಲ್ಲಿ ಜೀವತಳೆಯುತ್ತಿದ್ದವು. ‘ನಾನು ಎರಡು ಜಗತ್ತಿನಲ್ಲಿ ಬದುಕ್ತಿದ್ದೇನೆ. ಬೆಳಿಗ್ಗೆ ಕಣ್ತೆರೆದರೆ ಇಲ್ಲಿನ ಮನೆ, ತೋಟ, ಊರಿನಲ್ಲಿ ಬದುಕ್ತೇನೆ. ರಾತ್ರಿ ಕಣ್ಮುಚ್ಚಿದರೆ ನಾನು ಬಿಟ್ಟು ಬಂದ ಹುಟ್ಟೂರಿನಲ್ಲಿ ಬದುಕ್ತೇನೆ’ ಎಂದು ತಮಾಷೆಯಾಗಿ ಹೇಳ್ತಿದ್ದರು. ಆದರೆ ಆ ತಮಾಷೆಯ ಆಳದಲ್ಲಿ ಬೇರು ಕತ್ತರಿಸಿ ಮತ್ತೊಂದು ಕಡೆ ನೆಟ್ಟ ಗಿಡದ ಆಳವಾದ ಸಂಕಟವೂ, ವಿಷಾದವೂ ಇರುತ್ತಿದ್ದದ್ದು ನಮಗಾಗ ಗಮನಕ್ಕೆ ಬರುತ್ತಿರಲಿಲ್ಲ.

ಹುಟ್ಟೂರನ್ನು ಬಿಟ್ಟುಬಂದು ಮತ್ತೊಂದು ಊರಿನಲ್ಲಿ ನೆಲೆಯಾದರೂ, ತನ್ನದೇ ಮನೆ, ತೋಟ ಮಾಡಿಕೊಂಡು ತೋಟದ ಫಲ ಉಣ್ಣಲು ತೊಡಗಿದ ಮೇಲೂ ಅಪ್ಪನ ಮನಸ್ಸು, ತಾನಿದ್ದ ಊರನ್ನು ‘ನನ್ನ ಊರು’ ಎಂದು ಪೂರ್ತಿಯಾಗಿ ಒಪ್ಪಿಕೊಂಡಂತಿರಲಿಲ್ಲ. ಅದಕ್ಕೆ ತಕ್ಕ ಹಾಗೆ ಊರೂ ಅವರನ್ನು ತುಸು ‘ಬೇರೆ’ಯಾಗಿಯೇ ನೋಡುತ್ತಿತ್ತು. ಆ ಪರಕೀಯ ಭಾವ ವ್ಯಕ್ತವಾಗುತ್ತಿದ್ದದ್ದು ಮುಖ್ಯವಾಗಿ ಭಾಷೆಯ ಮೂಲಕ. ಅಪ್ಪನ ಹುಟ್ಟೂರಿನ ಭಾಷೆ, ಆಮೇಲೆ ವಲಸೆ ಬಂದ ಊರಿನ ಭಾಷೆ ಬೇರೆ ಬೇರೆಯೇನೂ ಆಗಿರಲಿಲ್ಲ. ಎರಡೂ ಊರುಗಳಲ್ಲಿ ಬಹುಸಂಖ್ಯಾತರು ಹವ್ಯಕ ಬ್ರಾಹ್ಮಣರು ಮತ್ತು ಹವ್ಯಕಕನ್ನಡವೇ ಬಳಕೆಯಲ್ಲಿದ್ದ ಭಾಷೆ. ಆದರೂ ಎರಡೂ ಊರಿನ ಹವಿಗನ್ನಡಗಳ ಕೆಲವು ಶಬ್ದಗಳಲ್ಲಿ ತುಸುವೇ ವ್ಯತ್ಯಾಸ. ಈ ವ್ಯತ್ಯಾಸವೇ ಅವರನ್ನು ಊರಿನಲ್ಲಿ ‘ಪರಕೀಯ’ ಭಾವ ಹುಟ್ಟಿಸುತ್ತಿತ್ತು. ಬೆಳಿಗ್ಗೆ ಎದ್ದು, ರಾತ್ರಿ ತನಗೆ ಬಿದ್ದ ಕನಸಿನ ಬಗ್ಗೆ ಹೇಳಿಕೊಳ್ಳವಾಗ ಅವನ ಮುಖ–ಮಾತಿನಲ್ಲಿ ವಿಶೇಷ ಹೊಳಪು ಇರುತ್ತಿತ್ತು. ಆದರೆ ಊರಿನ ಯಾರ ಮನೆಯ ಕಾರ್ಯಕ್ಕೋ ಮತ್ತೊಂದಕ್ಕೋ ಹೋಗಿಬಂದಾಗ ಅಲ್ಲಿ ನಡೆದ ಘಟನೆಗಳ ಬಗ್ಗೆ ವಿವರಿಸುವಾಗ ಆ ಹೊಳಪು ಇರುತ್ತಿರಲಿಲ್ಲ.

ADVERTISEMENT

***

ಭಾಷೆ ಎಂಬುದು ಸಂಪೂರ್ಣವಾಗಿ ಬೆಳೆದು ನಿಂತ ಪ್ರತಿಮೆಯಲ್ಲ. ಹಾಗೆ ಬೆಳೆದು ‘ನಿಂತ’ ಭಾಷೆ ದಿನನಿತ್ಯದ ಬದುಕಿನ ವ್ಯಾಪಾರದ ಪಾಲಿಗೆ ಸತ್ತಿರುತ್ತದೆ. ಕನ್ನಡ ನಮ್ಮ ಭಾಷೆ, ನಾವು ಕನ್ನಡಿಗರು ಎನ್ನುವಾಗ ನಮ್ಮ ಮನಸ್ಸಿನೊಳಗೆ ಕನ್ನಡ ಧ್ವಜದ ಬಣ್ಣಗಳೋ, ಬಿಕೆಎಸ್‌ ವರ್ಮ ಅವರು ರಚಿಸಿದ ಭುವನೇಶ್ವರಿಯ ಚಿತ್ರವೋ, ಅಥವಾ ಕನ್ನಡದ ‘ಕ’ ಎಂಬ ಅಕ್ಷರಗಳೋ ಮೂಡಿನಿಲ್ಲಬಹುದು. ಆದರೆ ಯಾವುದೇ ಭಾಷೆ ಹೀಗೆ ಒಂದು ಅಥವಾ ಒಂದಿಷ್ಟು ಸಾಮಾನ್ಯ ಸಂಕೇತಗಳಲ್ಲಿ ಪ್ರತಿನಿಧಿಸುವಷ್ಟು ಸ್ಪಷ್ಟವಾಗಿ ಇರುವುದಿಲ್ಲ. ಯಾಕೆಂದರೆ ಪ್ರತಿಭಾಷೆಯೂ ಆಯಾ ಪರಿಸರದ ಜೊತೆಗಿನ ಸಾವಯವ ಸಂಬಂಧದಲ್ಲಿಯೇ ರೂಪುತಳೆಯುತ್ತಿರುತ್ತದೆ. ಅದರ ಒಂದೊಂದು ಶಬ್ದಕ್ಕೂ ತನ್ನದೇ ಆದ ಸ್ಮೃತಿಕೋಶವಿರುತ್ತದೆ. ‘ಕನ್ನಡ ನಾಡು’ ಎನ್ನುವಾಗ ಅದು ನಮ್ಮ ಮನಸ್ಸಿನಲ್ಲಿ ಇಡೀ ಕನ್ನಡ ನಾಡನ್ನು ಸಂಕೇತಿಸುವ ಮೂರ್ತ ಸಂಕೇತ ಅಥವಾ ಬಿಂಬವನನ್ನು ಮೂಡಿಸುವುದಿಲ್ಲ. ಇನ್ನು ಭಾಷೆಯ ವಿಷಯಕ್ಕೆ ಬಂದರೆ ಇದು ಇನ್ನೂ ಸಂಕೀರ್ಣ. ‘ಕನ್ನಡ ಭಾಷೆ’ ಎನ್ನುವಾಗ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಇನ್ನಷ್ಟು ಅಮೂರ್ತವಾಗಿರುತ್ತದೆ.

ಶಾಲೆಗೆ ಹೋಗುವ ಸಮಯದಲ್ಲಿ ‘ನಮ್ಮ ಕನ್ನಡ’ಕ್ಕೆ ಎರಡು ಕವಲಿತ್ತು. ಶಾಲೆಯಲ್ಲಿ ಶಿಷ್ಟ ಕನ್ನಡ (ಅದೂ ಅಲ್ಲಿನ ಶಿಷ್ಟ ಕನ್ನಡವಷ್ಟೆ!)ವನ್ನು ಶಾಲೆ ಭಾಷೆ ಎಂತಲೂ, ಮನೆಯಲ್ಲಿ ಮಾತಾಡುತ್ತಿದ್ದ ಹವ್ಯಕ ಕನ್ನಡವನ್ನು ಮನೆ ಭಾಷೆ ಅಂತಲೂ ಕರೆಯುತ್ತಿದ್ದೆವು. ಆಗೀಗ ಇದು ಓವರ್‌ಲ್ಯಾಪ್‌ ಆದಾಗ ಅದು ಜೋಕಿನ ವಿಷಯವಾಗುತ್ತಿತ್ತು.

ಮಜಾ ಅಂದರೆ ಈ ಹವ್ಯಕ ಕನ್ನಡವೂ ‘ಒಂದೇ’ ಆಗಿಲ್ಲ. ಉತ್ತರ ಕನ್ನಡದ ಸಾಗರದ ಹವ್ಯಕ ಕನ್ನಡಕ್ಕೂ ಸಿದ್ದಾಪುರದ ಹವ್ಯಕ ಕನ್ನಡಕ್ಕೂ ವ್ಯತ್ಯಾಸವಿದೆ. ಸಿದ್ದಾಪುರದಿಂದ ಶಿರಸಿಯ ಹವ್ಯಕ ಕನ್ನಡಕ್ಕೆ, ಶಿರಸಿಯಿಂದ ಯಲ್ಲಾಪುರ ಹವ್ಯಕ ಕನ್ನಡಕ್ಕೆ ವ್ಯತ್ಯಾಸವಿದೆ. ‘ಬಂದಿತು’ ಎಂಬ ಶಬ್ದವನ್ನು ‘ಬಂತು’, ‘ಬಂಚು’, ‘ಬಂಜು’ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿ ಉಚ್ಛರಿಸುತ್ತಾರೆ. ತಿಂಡಿಯ ಹೆಸರುಗಳು, ಕೆಲವು ವಸ್ತು–ಕ್ರಿಯೆಗಳ ಹೆಸರುಗಳಲ್ಲಿಯೂ ಇದೇ ಬಗೆಯ ವ್ಯತ್ಯಾಸಗಳಿವೆ. ಮಜಾ ಎಂದರೆ ಎಲ್ಲರೂ ‘ತಮ್ಮ ಉಚ್ಛರಣೆಯೇ ಸರಿಯಾದದ್ದು, ಉಳಿದವರದ್ದು ಅಪಭ್ರಂಶ’ ಎಂದೇ ಹೆಮ್ಮೆ ಪಡುತ್ತಿರುತ್ತಾರೆ!

ಪ್ರಾದೇಶಿಕತೆಯೊಂದಿಗಿನ ಅನುದಿನದ ಸಂಬಂಧದಲ್ಲಿ ಹುಟ್ಟಿಕೊಂಡ ಇಂಥ ವ್ಯತ್ಯಾಸಗಳು ವಿಚಿತ್ರ ರೀತಿಯಲ್ಲಿ ಸೇರಿಕೊಂಡೇ ಒಂದು ಭಾಷೆ ಜೀವತಳೆಯುತ್ತಿರುತ್ತದೆ. ಆ ಭಾಷೆ ಕನ್ನಡವೇ, ಅದರ ಉಪಭಾಷೆಯೇ, ಅದು ಶ್ರೇಷ್ಠವೇ, ಕನಿಷ್ಠವೇ ಎಂಬೆಲ್ಲ ಚರ್ಚೆಗಳು ರಾಜಕೀಯ, ಸಾಂಸ್ಕೃತಿಕ ರಾಜಕೀಯ ಅಥವಾ ಸಾಮಾಜಿಕ ನ್ಯಾಯಗಳಂಥ ‘ಇನ್ನೊಂದು’ ವಲಯದಲ್ಲಿ ನಡೆಯುತ್ತವೆಯೇ ಹೊರತು, ಆಯಾ ಭಾಷೆ ಬಳಸುವವರ ಖಾಸಗಿ ಬದುಕಿನಲ್ಲಲ್ಲ. ಬಹುಶಃ ಇದೇ ಕಾರಣದಿಂದಲೇ ನಾವು ಕನ್ನಡ ನಾಡಿನಲ್ಲಿಯೇ ಇದ್ದವರಾದರೂ, ಕನ್ನಡ ಭಾಷೆಯನ್ನೇ ಮಾತಾಡುವವರೇ ಆದರೂ ‘ಕನ್ನಡಿಗರು’ ಎಂಬ ಶಬ್ದ ಕೇಳಿದ ತಕ್ಷಣ ಅದು ನಮಗಲ್ಲ, ಬೇರೆ ಯಾರಿಗೋ ಹೇಳುತ್ತಿರುವ ಮಾತು ಎಂದು ಅನಿಸುತ್ತಿರುತ್ತದೆ ಅಥವಾ ಅದೊಂದು ಕೃತಕವಾದ ವೇಷ ಅನಿಸಿಬಿಡುತ್ತದೆ.

ನಮ್ಮ ಭಾಷೆ ಬದುಕಿನಿಂದ ಬೇರೆಯಾಗಿ, ಒಂದು ‘ರಕ್ಷಿಸಬೇಕಾದ ವಸ್ತು’ವಾಗಿ ಇರುವುದಿಲ್ಲ. ಅದು ಬದುಕಿನ ಭಾಗವಾಗಿ, ಒಂದು ರೀತಿಯಲ್ಲಿ ಬದುಕೇ ಆಗಿ ತನ್ನಷ್ಟಕ್ಕೆ ತಾನು ಇರುತ್ತದಷ್ಟೆ. ನಮ್ಮ ಭಾಷೆ ನಮ್ಮ ಬದುಕಿನಿಂದ ಬೇರಾದರೆ ಅದನ್ನು ಯಾವ ಪಡೆ, ಸೇನೆ, ವೇದಿಕೆಗಳೂ ರಕ್ಷಿಸಲಾರವು.

ಯಾವ ಗಂಡ ಹೆಂಡತಿಯೂ ಪರಸ್ಪರ ಪ್ರೇಮ ಸಲ್ಲಾಪದಲ್ಲಿ ಅಥವಾ ಜಗಳದಲ್ಲಿ ಭಾಷೆಯನ್ನು ಬಳಸುವಾಗ ‘ಇದು ನನ್ನ ಭಾಷೆ, ನನ್ನ ಮಾತೃಭಾಷೆ’ ಎಂಬ ಹೆಮ್ಮೆಯಿಂದಲೇನೂ ಬಳಸುತ್ತಿರುವುದಿಲ್ಲವಲ್ಲ. ಹಾಗೆ ನೋಡಿದರೆ ಭಾಷೆಯನ್ನು ಬಳಸುತ್ತಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲದೇ ಅದನ್ನು ಬಳಸುತ್ತಿರುತ್ತಾರೆ.

ಗಂಡ, ಹೆಂಡತಿಗೆ ಕೋಪದಲ್ಲಿ ‘ನಿನ್ನಂಥ ತಿರಸಟ್ಟು ಬೇರೆ ಯಾರೂ ಇಲ್ಲ’ ಎಂದು ಬೈಯುತ್ತಾನೆ ಎಂದಿಟ್ಟುಕೊಳ್ಳಿ. ಆ ಸಾಲಿನಲ್ಲಿನ ‘ತಿರಸಟ್ಟು’ ಎಂಬ ಶಬ್ದ ಹೆಂಡತಿಯ ಮನಸಲ್ಲಿ ಕೋಪವುಕ್ಕಿಸಬೇಕಾದರೆ ಆ ಶಬ್ದ ಬಳಸುವಾಗ ಗಂಡನ ಮನಸಲ್ಲಿದ್ದ ಧ್ವನಿಯೇ ಹೆಂಡತಿಯ ಮನಸಲ್ಲಿಯೂ ಹುಟ್ಟಬೇಕು. ಹುಂಬ, ಅಧಿಕಪ್ರಸಂಗಿ, ವಿವೇಚನಾಹೀನ ಹೀಗೆ ಅದಕ್ಕೆ ಹತ್ತಿರ ಹತ್ತಿರ ಅರ್ಥ ಕೊಡುವ ಯಾವ ಶಬ್ದವೂ ಹೆಂಡತಿಯ ಮನಸಲ್ಲಿ ‘ತಿರಸಟ್ಟು’ ಎಂಬ ಶಬ್ದ ಹುಟ್ಟಿಸಿದ ಭಾವವನ್ನು ಹುಟ್ಟಿಸುವುದಿಲ್ಲ. ಆ ಶಬ್ದ ಅವಳಲ್ಲಿ ತನ್ನ ಅನುಭವದಲ್ಲಿ ಹಿಂದೆ ಕೇಳಿದ, ಬಳಸಿದ ಸಂದರ್ಭಗಳನ್ನೆಲ್ಲ ನೆನಪಿಸಿ ಒಂದು ಇಮೇಜ್ ಅನ್ನು ಹುಟ್ಟಿಸುತ್ತದೆ. ಆ ಇಮೇಜ್‌ಗೆ ಗಂಡ ತನ್ನನ್ನು ಹೋಲಿಸುತ್ತಿದ್ದಾನೆ ಎಂದು ಕೋಪವುಕ್ಕಿ, ‘ನಿಮಗೆ ಸರಿಯಾಗಿ ಜುಟ್ಟು ಹಿಡಿದು ಅಲ್ಲಾಡಿಸುವ ಹೆಂಡತಿ ಸಿಗಬೇಕಿತ್ತು. ಆಗ ಬುದ್ಧಿ ಬರ್ತಿತ್ತು’ ಎಂದು ಮರುಮಾತು ಎಸೆಯುತ್ತಾಳೆ. ಇಲ್ಲಿಯೂ ಅಷ್ಟೇ, ‘ಜುಟ್ಟು ಹಿಡಿದು ಅಲ್ಲಾಡಿಸುವ’ ಎಂಬುದು ತನ್ನ ಅಕ್ಷರಶಃ ಅರ್ಥವನ್ನು ಮೀರಿ ಬೇರೆಯದೇ ಧ್ವನಿಯನ್ನು ಹೊರಡಿಸುತ್ತಿರುತ್ತದೆ. ನೇರ ಶಬ್ದಗಳಾದ ‘ಹಿಡಿತದಲ್ಲಿಟ್ಟುಕ್ಕೊಳ್ಳುವ’, ‘ಅಧೀನದಲ್ಲಿರಿಸಿಕೊಳ್ಳುವ’, ‘ನಿಯಂತ್ರಿಸುವ’, ‘ಆಳುವ’ ಎಂಬ ಯಾವ ಶಬ್ದಗಳೂ ಹೊರಡಿಸದ ವಿಶೇಷ ವ್ಯಂಗ್ಯಧ್ವನಿ ‘ಜುಟ್ಟು ಹಿಡಿದು ಅಲ್ಲಾಡಿಸುವ’ ಎಂಬ ಮಾತಿನಲ್ಲಿದೆ. ವಿಶೇಷವೆಂದರೆ ಈ ಎರಡೂ ಶಬ್ದಗಳು ಆಯಾ ಪರಿಸರದಲ್ಲಿನ ಸಂದರ್ಭಗಳಲ್ಲಿ ಮಾತ್ರ ಈ ಅರ್ಥವನ್ನು ಹೊರಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಯಾಕೆಂದರೆ ಅವು ಆ ಪರಿಸರ ಮತ್ತು ಅಲ್ಲಿನ ಜೀವನವಿಧಾನದೊಟ್ಟಿಗಿನ ಭಾಷೆಯ ಆಳವಾದ ಸಂಬಂಧದಲ್ಲಿಯೇ ಜೀವತಳೆದವು.

ಹೀಗೆ ಆ ಗಂಡ ಹೆಂಡತಿ ಜಗಳದಲ್ಲಿ ಭಾಷೆ ಬಳಸುವಿಕೆಯಲ್ಲಿ ನೂರು, ಸಾವಿರ ವರ್ಷಗಳ ಸ್ಮೃತಿ ಸಂಚಯಗಳನ್ನು ಗೊತ್ತಿಲ್ಲದೆಯೇ ವಿನಿಮಯ ಮಾಡಿಕೊಳ್ಳುತ್ತಿರುತ್ತಾರೆ. ಅದನ್ನು ಹಿಗ್ಗಿಸುತ್ತ ಕುಗ್ಗಿಸುತ್ತ ಜೀರ್ಣೋದ್ಧಾರಗೊಳಿಸುತ್ತಿರುತ್ತಾರೆ. ಇಲ್ಲಿ ಭಾಷೆ ಬರಿ ಸಂವಹನದ ಸಲಕರಣೆಯಾಗಿಯಷ್ಟೇ ಅಲ್ಲ, ಸ್ಮೃತಿಸಾತತ್ಯದ ಜೀವಂತ ಸರಪಳಿಯಾಗಿಯೂ ಕೆಲಸ ಮಾಡುತ್ತಿರುತ್ತದೆ. ಎಲ್ಲ ಸಮುದಾಯಗಳ ಭಾಷೆಗಳ ಮಟ್ಟಿಗೂ ಇದು ಸತ್ಯ.

ಭಾಷೆಯಲ್ಲಿನ ಈ ಸ್ಮೃತಿ ಸಂಚಯದ ಶಕ್ತಿ ನಮಗೆ ಅರಿವಾಗುವುದು ಅನುವಾದದ ಪ್ರಕ್ರಿಯೆಯಲ್ಲಿ. ‘ಜುಟ್ಟು ಹಿಡಿದು ಅಲ್ಲಾಡಿಸುವುದು’ ಎಂಬುದನ್ನು ಇನ್ನೊಂದು ಭಾಷೆಗೆ ಅಕ್ಷರಶಃ ಅನುವಾದಿಸಿದರೆ ಅದು ಬರಿಯ ಅಸ್ಥಿಪಂಜರವಿಟ್ಟು ಮನುಷ್ಯನೆಂದು ಹೇಳುವಷ್ಟೇ ಕೆಟ್ಟದಾಗಿರುತ್ತದೆ. ಯಾಕೆಂದರೆ ಈ ಅನುವಾದದ ಪ್ರಕ್ರಿಯೆಯಲ್ಲಿ ಮೂಲಭಾಷೆಯಲ್ಲಿ ಶಬ್ದ ಹಿಡಿದಿಟ್ಟುಕೊಂಡಿದ್ದ ಸ್ಮೃತಿಸಂಚಯ ನಷ್ಟವಾಗಿರುತ್ತದೆ. ಹಾಗಾಗಿ ಈ ಭಾಷೆಯಲ್ಲಿ ಈ ಮಾತು ಕೇಳಿದಾಗ ನಮ್ಮ ಮನಸಲ್ಲಿ ಒಂದು ಇಮೇಜ್ ಹುಟ್ಟಿಕೊಳ್ಳುತ್ತದಲ್ಲ, ಅದು ಅನುವಾದದಲ್ಲಿ ಘಟಿಸುವುದೇ ಇಲ್ಲ ಅಥವಾ ತೀರಾ ದುರ್ಬಲವಾದ ಅಸ್ಪಷ್ಟವಾದ ಚಿತ್ರವೊಂದು ಮೂಡುತ್ತದೆ. ಬಳಕೆಯಾಗುವ ಬದುಕಿನಿಂದ ಭಾಷೆಯನ್ನು ಬೇರ್ಪಡಿಸಿದಾಗ ಅದು ಇಮೇಜ್ ಸೃಷ್ಟಿಸುವ ಮಂತ್ರಶಕ್ತಿಯನ್ನು ಕಳೆದುಕೊಂಡುಬಿಡುತ್ತದೆ.

ಡಬ್ಬಿಂಗ್‌ ಅನ್ನೂ ನಾವು ಇದೇ ಆಯಾಮದಲ್ಲಿ ನೋಡಿದರೆ ಅದರ ಅಪಾಯಗಳುಸ್ಪಷ್ಟವಾಗುತ್ತವೆ. ಮೇಲೆ ಹೇಳಿದಂತೆ ಭಾಷೆಯ ಒಂದು ಶಬ್ದ, ನುಡಿಗಟ್ಟು, ಹೆಸರು, ಅದರ ಧಾಟಿ, ಮುಖಭಾವ ಎಲ್ಲವೂ ನಮ್ಮ ಮನಸ್ಸಿನಲ್ಲಿ, ಅದಕ್ಕೆ ತತ್ಸಮಾನವಾದ ಹಳೆಯ ಅನುಭವಗಳನ್ನು ಶೋಧಿಸಿ ಒಂದು ಇಮೇಜ್ ಅನ್ನು ಸೃಷ್ಟಿಸುತ್ತಿರುತ್ತದೆ. ಆ ಇಮೇಜ್ ನಾವು ಬೆಳೆದ, ಬದುಕುತ್ತಿರುವ ಪರಿಸರದಿಂದ ನೇರವಾಗಿ ಸೃಷ್ಟಿಯಾಗುವ ಇಮೇಜ್ ಆಗಿರುತ್ತದೆ. ನಮ್ಮ ಸಂಭಾಷಣೆಯಲ್ಲಿ ಅಂಥದ್ದೇ ಒಂದಿಷ್ಟು ಇಮೇಜ್‌ಗಳು ಸೃಷ್ಟಿಗೊಳ್ಳುತ್ತ ಒಂದು ಮಾನಸಿಕ ಪರಿಸರ ನಿರ್ಮಾಣವಾಗುತ್ತಿರುತ್ತದೆ. ಅದರ ಮೂಲಕವೇ ನಾವು ಸಂವಹಿಸುತ್ತಿರುತ್ತೇವೆ. ನಮ್ಮ ಭಾಷೆಯ ಸಿನಿಮಾ ನೋಡುವಾಗಲೂ ಅಷ್ಟೆ, ತೆರೆಯ ಮೇಲೆ ಮೂಡುತ್ತಿರುವ ದೃಶ್ಯಕ್ಕೂ, ಅಲ್ಲಿನ ಪಾತ್ರಗಳು ಆಡುತ್ತಿರುವ ಸಂಭಾಷಣೆಗಳಿಗೂ ಒಂದು ಸಾವಯವ ಸಂಬಂಧ ಇರುತ್ತದೆ; ಇರಬೇಕು. ಆದರೆ ಡಬ್ಬಿಂಗ್ ವಿಷಯದಲ್ಲಿ ಹಾಗಾಗುವುದಿಲ್ಲ.

ತುಂಬ ಜನರು ‘ಡಬ್ಬಿಂಗ್ ಸಿನಿಮಾ ನೋಡೂದು ಹಿಂಸೆ. ಅಲ್ಲಿ ಡೈಲಾಗ್‌ಗೆ ಲಿಪ್‌ ಸಿಂಕ್ ಆಗ್ತಾನೇ ಇರಲ್ಲ’ ಅನ್ನುತ್ತಿರುತ್ತಾರೆ. ಅದು ಮೇಲ್ನೋಟಕ್ಕೆ ಕಾಣುವ ತೊಡಕಷ್ಟೆ. ತಂತ್ರಜ್ಞಾನದ ಸಮರ್ಥ ಬಳಕೆಯಿಂದ ನಿವಾರಣೆ ಮಾಡಬಹುದಾದ ಸಮಸ್ಯೆ. ಹಾಗಾದರೆ ಸಂಭಾಷಣೆಗೆ ಲಿಪ್ ಸಿಂಕ್ ಆದರೆ ಆ ಡಬ್ಬಿಂಗ್ ಸಿನಿಮಾ ಮೂಲ ಸಿನಿಮಾ ನೋಡಿದಷ್ಟು ಖುಷಿ ಕೊಡುತ್ತದೆಯೇ? ಖಂಡಿತ ಇಲ್ಲ. ಯಾಕೆಂದರೆ ಇಲ್ಲಿ ಕೇಳುವ ಸಂಭಾಷಣೆ ಕನ್ನಡದ್ದು. ಆ ಸಂಭಾಷಣೆಯನ್ನು ಕೇಳಿದಾಗ ನಮ್ಮ ಮನಸಲ್ಲಿ ಮೂಡುವ ಇಮೇಜ್ ಕೂಡ ಕನ್ನಡದ್ದು. ಆದರೆ ಆ ಸಂಭಾಷಣೆಯಲ್ಲಿ ತೆರೆಯ ಮೇಲೆ ಮೂಡುವ ಇಮೇಜ್‌ಗಳು ಮಾತ್ರ ಉತ್ತರ ಭಾರತದ ಯಾವುದೋ ಪ್ರದೇಶದ್ದಾಗಿರುತ್ತದೆ. ಹಾಗಾಗಿ ಇಲ್ಲಿ ಸಿಂಕ್ ಆಗದೆ ಇರುವುದು ಲಿಪ್ ಅಷ್ಟೇ ಅಲ್ಲ, ಲೈಫ್ ಕೂಡ!

‘ಡಬ್ಬಿಂಗ್ ಕನ್ನಡಪರ’ ಎಂಬ ಹೊಸ ಘೋಷವಾಕ್ಯ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ಕೇಳಿಸುತ್ತಿದೆ. ಈ ದೃಷ್ಟಿಯಿಂದ ನೋಡಿದರೆ ಡಬ್ಬಿಂಗ್ ಕನ್ನಡವಷ್ಟೇ ಅಲ್ಲ, ಯಾವ ಭಾಷೆಯ ಪರವೂ ಆಗಲಾರದು. ‘ನಮ್ಮ ಮಕ್ಕಳು ಜಗತ್ತಿನ ಜ್ಞಾನವನ್ನು ಕನ್ನಡದಲ್ಲಿಯೇ ನೋಡುವುದು ಬೇಡವೇ?’ ಎಂಬ ಭಾವುಕ ಪ್ರಶ್ನೆಗಳನ್ನು ಕೇಳುವವರಿಗೆ, ಭಾಷೆ ಮತ್ತು ಬದುಕಿನ ನಡುವಿನ ಕೊಂಡಿಯನ್ನೇ ಕತ್ತರಿಸಿದ ಕೃತಕ ಜ್ಞಾನವನ್ನೇ ನಿಜವೆಂದು ನಂಬಿ, ‘ಭಾಷೆಯ ಮೂಲಕ ನೋಡುವ’ ದೃಷ್ಟಿಯನ್ನೇ ಕಳೆದುಕೊಳ್ಳುತ್ತಾರೆ ಎಂಬ ಅರಿವು ಇದ್ದಂತಿಲ್ಲ. ಮಾತೃಭಾಷೆಯನ್ನು ಹೊರತಾದ ಇನ್ನೊಂದು ಭಾಷೆಯಲ್ಲಿ ಮಗು ಪ್ರಾಥಮಿಕ ಶಿಕ್ಷಣವನ್ನು ಕಲಿತಾಗಲೂ ಇಂಥದ್ದೇ ಸಮಸ್ಯೆ ಎದುರಾಗುತ್ತದೆ. ‘ಜೋಳದ ರೊಟ್ಟಿ ಊಟ’ ಎಂಬ ಮಾತು ಕೇಳಿದಾಗ ಮನಸಲ್ಲಿ ‘ತಂದೂರಿ ರೋಟಿ - ಸಬ್ಜಿ’ಯ ಚಿತ್ರ ಮೂಡುವಂತಾದರೆ ಅದಕ್ಕಿಂತ ದುರಂತ ಬೇಕೇ? ಭಾಷೆಗೂ ಬದುಕಿಗೂ ನಡುವಿನ ಕೊಂಡಿ ಕತ್ತರಿಸಿದ ಮಕ್ಕಳ ಮಾನಸಿಕತೆ ಮತ್ತು ಭವಿಷ್ಯದ ಸಂಕಟಗಳು ಏನು ಎಂಬುದು ಇನ್ನೊಂದೇ ಚರ್ಚೆಯ ವಿಷಯವಾದೀತು.

ಜೇಡ ತನ್ನ ಜಾಲವನ್ನು ತನ್ನೊಡಲಿನಿಂದಲೇ ತೆಗೆದ ನೂಲಿನಿಂದ ಕಟ್ಟುತ್ತದಂತೆ. ಭಾಷೆಯೂ ನಮ್ಮ ಒಡಲ ನೂಲಿದ್ದಂತೆ. ನಮ್ಮ ಒಡಲು, ನೂಲನ್ನು ಸೃಷ್ಟಿಸುವ ಶಕ್ತಿ ಕಳೆದುಕೊಂಡರೆ ಏನಾಗಬಹುದು? ಮುಂದಿನ ಪೀಳಿಗೆಯೇ ಈ ಪ್ರಶ್ನೆಗೆ ಜ್ವಲಂತ ಉದಾಹರಣೆಯಾಗಿ ನಿಲ್ಲುವ ಎಲ್ಲ ಅಪಾಯಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.