ADVERTISEMENT

ಸಂಸ್ಕೃತದ ‘ಕಾಂತಶಕ್ತಿ’ ಉಮಾಕಾಂತ ಭಟ್ಟರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:46 IST
Last Updated 25 ಏಪ್ರಿಲ್ 2021, 4:46 IST
ಉಮಾಕಾಂತ‌ ಭಟ್ಟ
ಉಮಾಕಾಂತ‌ ಭಟ್ಟ   

‘ವಿದ್ವತ್ ಸಮ್ಮಾನ’ ಪ್ರಶಸ್ತಿಗೆ ಭಾಜನರಾದ ಉಮಾಕಾಂತ ಭಟ್ಟರು, ಸಂಸ್ಕೃತ ಓದಿದವರಲ್ಲಿ ಕನ್ನಡವನ್ನು ಬಹುಸೊಗಸಾಗಿ ಬಳಸುವ ಕೆಲವೇ ಕೆಲವು ಸಂಸ್ಕೃತ ವಿದ್ವಾಂಸರಲ್ಲಿ ಒಬ್ಬರು. ಯಕ್ಷಗಾನ ತಾಳಮದ್ದಳೆಯಲ್ಲೂ ಅವರದು ಎತ್ತಿದಕೈ...

ಉಮಾಕಾಂತ ಭಟ್ಟರು

ಎಪ್ಪತ್ತರ ದಶಕದ ಮಧ್ಯದಲ್ಲಿ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿಗೆ ಹೆಚ್ಚಿನ ವ್ಯಾಸಂಗಕ್ಕೆಂದು ಬಂದ ಅನೇಕ ಹವ್ಯಕ ಹುಡುಗರಂತೆ ಉತ್ತರ ಕನ್ನಡ ಜಿಲ್ಲೆ, ಶಿರಸಿಯಿಂದ ಒಬ್ಬ ಹವ್ಯಕತರುಣ ಬಂದು ಸೇರಿಕೊಂಡಿದ್ದ. ಬಂದ ಆರಂಭದಲ್ಲಿಯೇ ಪ್ರತಿಭೆಯಲ್ಲಿ, ಸಂಗೀತ-ನಾಟಕ-ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಸಕ್ತಿಯಲ್ಲಿ, ಹಿಡಿದಿದ್ದನ್ನು ಸಾಧಿಸುವ ಛಲದಲ್ಲಿ ತಾನು ಇತರರಿಗಿಂತ ತುಂಬಾ ಭಿನ್ನ ಅನ್ನುವುದನ್ನು ಆಗಲೇ ತೋರಿಸಿಕೊಟ್ಟಿದ್ದ.

ಇ.ಎಸ್.ವರದಾಚಾರ್ಯ, ಸೋ.ರಾಮಸ್ವಾಮಿ ಅಯ್ಯಂಗಾರ್, ರಾಮಭದ್ರಾಚಾರ್ಯರು, ಶ್ರೀನಾಥಾಚಾರ್ಯರು, ತುರುವೆಕರೆ ವಿಶ್ವೇಶ್ವರ ದೀಕ್ಷಿತ್‌, ವೆಂಕಣ್ಣಾಚಾರ್, ರಾಜಶೇಖರ್, ನಾರಾಯಣ ಭಟ್ಟ ಮೊದಲಾದ ಮಹಾಮಹಾ ವಿದ್ವಾಂಸರು ಅಧ್ಯಾಪಕ-ಪ್ರಾಧ್ಯಾಪಕರಾಗಿ ಪಾಠ ಮಾಡುತ್ತಾ ವಿದ್ವತ್ಪರಂಪರೆಗೆ ಕಳೆ ತಂದ ಸುವರ್ಣಕಾಲ ಅದು. ಒಬ್ಬೊಬ್ಬ ವಿದ್ವಾಂಸರೂ ಒಂದೊಂದು ಮೇರು. ಅವರಿಂದ ಪಾಠ ಕೇಳುತ್ತಾ ಶಿಷ್ಯತ್ವ ಪಡೆಯುವುದೇ ಒಂದು ಸೌಭಾಗ್ಯ ಎಂದು ಭಾವಿಸುವ ಕಾಲ. ಅಂಥವರೆಲ್ಲರ ಮೆಚ್ಚುಗೆ, ಪ್ರೀತಿಗೆ ಪಾತ್ರನಾಗಿ, ವಿದ್ವತ್ ಪ್ರಪಂಚದ ಒಂದು ತಾರೆಯಾಗಿ, ಕಳೆದ ವಾರ ನಡೆದ ಶೃಂಗೇರಿ ಜಗದ್ಗುರು ಭಾರತೀತೀರ್ಥರ 71ನೇ ವರ್ಧಂತ್ಯುತ್ಸವದ ಸಂದರ್ಭದಲ್ಲೂ ‘ವಿದ್ವತ್ ಸಮ್ಮಾನ’ ಪ್ರಶಸ್ತಿಗೆ ಭಾಜನರಾದ ಆ ವಿದ್ಯಾರ್ಥಿಯೇ ವಿದ್ವಾನ್ ಉಮಾಕಾಂತ ಭಟ್ಟರು.

ADVERTISEMENT

ಮೇಲುಕೋಟೆ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ 30 ವರ್ಷಗಳ ಕಾಲ ಸಂಸ್ಕೃತ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ನಿವೃತ್ತರಾದ ಅವರು ಈಗಲೂ ದಣಿವರಿಯದ ಕ್ರಿಯಾಶೀಲರು. ಓದು, ಬರಹ, ಆಧ್ಯಯನ, ತಾಳಮದ್ದಳೆ, ಅರ್ಥಗಾರಿಕೆ, ವೇಷಧರಿಸುವಿಕೆ, ಉಪನ್ಯಾಸ, ಪ್ರವಚನ ಮೊದಲಾದ ಸಾರಸ್ವತ ಸೇವೆಗಳು ಅವರ ಜೀವನದ ಅವಿಭಾಜ್ಯ ಅಂಗಗಳೇ ಆಗಿವೆ. ಅಧ್ಯಯನ ಅಧ್ಯಾಪನದಲ್ಲಿ ಅವರು ಎಂದೂ ವಿಶ್ರಾಂತರಾದವರಲ್ಲ. ದೇಹಜೀವನಕ್ಕೆ ಅನ್ನವಸ್ತ್ರಗಳು ಹೇಗೋ ಆತ್ಮಜೀವನಕ್ಕೆ ಸಂಸ್ಕೃತ, ರಾಮಾಯಣ, ಮಹಾಭಾರತ, ಕಲೋಪಾಸನೆ ಹಾಗೆ ಎಂದು ಭಾವಿಸಿದವರು ಅವರು. ಅಂತೆಯೇ ನಡೆದುಕೊಂಡವರು.

ಅವರ ವೈದುಷ್ಯದ ಕಹಳೆ ಕರ್ನಾಟಕದಾದ್ಯಂತ ಮೊಳಗುವುದಕ್ಕೆ ಅವರು ಮಾಡಿದ ಶಾಸ್ತ್ರಾಧ್ಯಯನದ ಪರಿ ಮತ್ತು ಅವರಿಗೆ ಸಿಕ್ಕ ಗುರುಗಳು ಮುಖ್ಯ ಕಾರಣ. ಶ್ರದ್ಧಾಳು, ಮೇಧಾವಿ ಶಿಷ್ಯ ಉಮಾಕಾಂತ ಭಟ್ಟರಿಗೆ ರಾಮಭದ್ರಾಚಾರ್ಯರು ವಿಶ್ವಾಮಿತ್ರನೋಪಾದಿಯಲ್ಲಿ ಸಿಕ್ಕರು. ರಾಮಭದ್ರಾಚಾರ್ಯರು ಎಂದರೆ ಸಜ್ಜನಿಕೆಯ ಮೂರ್ತರೂಪ, ವಿದ್ವತ್ತಿನ ಪ್ರಖರ ಬೆಳಕು. ಅಂತಹವರ ಶಿಷ್ಯತ್ವದಲ್ಲಿ ಉಮಾಕಾಂತ ಭಟ್ಟರು ಬೆಳೆದರು. ಅವರ ಸಾನ್ನಿಧ್ಯದಲ್ಲಿ ಬುದ್ಧಿಜಾಗರ್ಯ, ಮನೋವಿಕಾಸ ಎಲ್ಲವೂ ಉಂಟಾದವು.

‘ಸ್ಕೂಲು-ಕಾಲೇಜುಗಳಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಓದಿದವನಿಗೆ ವಿದ್ಯೆಯಲ್ಲಿ ಒಂದು ನಿಷ್ಕರ್ಷೆಯಾದ ಆಕಾರ ಲಾಭವಾಗುತ್ತದೆ. ಹಾಗಲ್ಲದೆ ಅಲ್ಲೊಂದು ಇಲ್ಲೊಂದು ಹೆಜ್ಜೆಯಿಟ್ಟು ಹಾರೋಣ, ಇಲ್ಲೊಂದು ಹೆಜ್ಜೆಯಿಟ್ಟು ನೆಗೆಯೋಣ ಎಂದರೆ ಅವನ ವಿದ್ಯೆಯಲ್ಲಿ ಸಮಗ್ರತೆಯಿರುವುದಿಲ್ಲ. ಅಲ್ಲಲ್ಲಿ ಬಿರುಕು ಬಿಟ್ಟುಕೊಂಡಿರುತ್ತದೆ’ ಎಂದು ಶಾಸ್ತ್ರೀಯ ಅಧ್ಯಯನದ ಮಹತ್ವವನ್ನು ಸಾರಿದ್ದರು ಡಿ.ವಿ. ಗುಂಡಪ್ಪನವರು. ಅವರ ಈ ಮಾತಿನ ಯಥಾರ್ಥವನ್ನು ಉಮಾಕಾಂತ ಭಟ್ಟರಿಗೂ ಅನ್ವಯಿಸಿ ನೋಡಿದರೆ ಅವೆಲ್ಲವೂ ಅವರಲ್ಲಿ ರೂಪುವಡೆದಿದ್ದು ನಮ್ಮ ಗಮನಕ್ಕೆ ಬರುತ್ತದೆ. ಅವರಿಗೆ ರಾಮಭದ್ರಾಚಾರ್ಯರಿಂದ ಕ್ರಮಬದ್ಧವಾದ ಪಾಠ ದೊರೆಯಿತು. ಪಾಂಙ್ತವಾದ ಶಾಸ್ತ್ರದರ್ಶನ ಆಯಿತು. ಶಾಸ್ತ್ರಗಳ ಬಗ್ಗೆ ಒಂದು ನಿಶ್ಚಿತವಾದ, ಕ್ರಮಬದ್ಧವಾದ ಆಕಾರ ಮೈದಳೆಯಿತು. ಅವರೊಬ್ಬ ಸಂಸ್ಕೃತದ ಘನ ವಿದ್ವಾಂಸ ಎಂಬ ಮನ್ನಣೆಗೆ ಪಾತ್ರರಾಗುವಂತೆ ಮಾಡಿತು.

ಉಮಾಕಾಂತ ಭಟ್ಟರು ಸಂಸ್ಕೃತವನ್ನು, ಆ ಭಾಷೆಯನ್ನು, ವ್ಯಾಕರಣ, ತರ್ಕ, ಅಲಂಕಾರ ಮೊದಲಾದ ಶಾಸ್ತ್ರಗಳನ್ನು ಅದೆಷ್ಟು ಪ್ರೀತಿಸಿದರು ಎಂದರೆ ಅವು ತನ್ನ ಮೈಯ ಚರ್ಮ, ಮೂಳೆ ಮಾಂಸಗಳೋ ಅನ್ನುವಂತೆ ಪ್ರೀತಿಸಿದರು. ಶಾಸ್ತ್ರ-ಕಾವ್ಯಗಳಲ್ಲಿ ಬರುವ ಶಬ್ದಗಳೇ ಇರಲಿ, ವಾಕ್ಯಗಳೇ ಇರಲಿ ಅವುಗಳ ಹಿನ್ನೆಲೆ ಏನು? ಅಂತರಾರ್ಥ ಏನು? ಇತಿಹಾಸ ಏನು? ಪೌರಾಣಿಕ ಹಿನ್ನೆಲೆ ಏನು? ಅವು ಕೊಡುವ ಸಂದೇಶ ಏನು? ಅವು ಮನುಷ್ಯನನ್ನು ಹೇಗೆ ಎತ್ತರಿಸಬಲ್ಲವು ಅನ್ನುವುದನ್ನು ಚಿಕಿತ್ಸಕ ದೃಷ್ಟಿಯಿಂದ ನೋಡತೊಡಗಿದರು. ಅದರ ಫಲವೇ ಅವರಿಂದ ‘ಸದಾತನ’ ಕೃತಿ ಉದ್ಭವಗೊಂಡಿತು. ಇದೊಂದು ಪ್ರಬಂಧ ಸಂಕಲನ. ಬೇರೆ ಬೇರೆ ಪತ್ರಿಕೆಗಳಿಗೆ ಬರೆದ ಲೇಖನಗಳ ಗುಚ್ಛ. ಆದರೆ ಅವು ಯಾವುವೂ ಲಘು ಲೇಖನಗಳಲ್ಲ, ಗಂಭೀರ ಬರಹಗಳು.

‘ಸದಾತನ’ದಲ್ಲಿ ಬಂದಿರುವ ‘ಸಂಸ್ಕಾರ’ ಎಂಬ ಪದವನ್ನೇ ತೆಗೆದುಕೊಂಡರೂ ಸಾಕು. ನಮ್ಮ ಪ್ರಾಚೀನ ಸಂಸ್ಕೃತಿಯ ಪರಿಚಯದೊಂದಿಗೆ, ಆ ಪದದ ಹಾಸು-ಬೀಸು, ಭಟ್ಟರ ವಿದ್ವತ್ತಿನ ಹೊಳಪು, ಅವರ ಪರಿಶೀಲನಗುಣ, ಶಬ್ದಗರ್ಭದಲ್ಲಿ ಅಡಗಿರುವ ರೋಚಕ ಇತಿಹಾಸ ಎಲ್ಲವೂ ಅನಾವರಣಗೊಳ್ಳುತ್ತವೆ. ‘ಸಂಸ್ಕಾರ’ ಪದದ ಬಗ್ಗೆ ಅವರು, ‘ಪರಿಷ್ಕಾರ ಮತ್ತು ಸಂಸ್ಕಾರಗಳು ಈ ಲೋಕದ ಬದುಕನ್ನು ವಿಕಾಸದ ಹಾದಿಯಲ್ಲಿ ಕೊಂಡೊಯ್ಯುವ ಪರಿಕರಗಳು. ವಿಶ್ವಸಾಹಿತ್ಯದಲ್ಲಿ ‘ಸಂಸ್ಕಾರ’ ಎಂಬ ಪದಕ್ಕೆ ಸರಿದೊರೆಯಾಗಬಲ್ಲ ಇನ್ನೊಂದು ಪದ ಹುಟ್ಟಿಲ್ಲ’ ಅನ್ನುತ್ತಲೇ ಓದುಗನ ಕುತೂಹಲವನ್ನು ಕೆರಳಿಸುವ ಅವರ ವಿಷಯಮಂಡನೆಯೇ ಅತ್ಯಂತ ಚೇತೋಹಾರಿಯಾದುದು; ಮುದಕೊಡುವಂಥಾದ್ದು. ‘ಸಂಪರಿಭ್ಯಾಂ ಕರೋತೌ ಭೂಷಣೇ’ ಎಂಬ ಪಾಣಿನಿಯ ವ್ಯಾಕರಣದ ಹಿನ್ನೆಲೆಯಲ್ಲಿ ‘ಸಂಸ್ಕಾರ’ ಶಬ್ದದ ವ್ಯುತ್ಪತ್ತಿಯನ್ನು ಹೊರಗೆಡಹಿದ್ದಾರೆ. ಆ ಕೃತಿಯ ಪುಟ ಐದರಲ್ಲಿ ಅದು ವಿಸ್ತಾರವಾಗಿ ಬಂದಿದೆ. ‘ಸಂಸ್ಕಾರಪದವು ಶುದ್ಧೀಕರಣ, ಗುಣಾಧಾನ ಮತ್ತು ಗುಣವರ್ಧನ ಎಂಬ ಮೂರು ಅಂಶಗಳನ್ನು ಒಳಗೊಂಡಿದೆ’ ಎಂದು ಅದರ ಇನ್ನೊಂದು ಮಜಲನ್ನು, ವ್ಯಾಪ್ತಿಯನ್ನು ಮನಗಾಣಿಸುವ ಅವರ ಪರಿ ನಿಜಕ್ಕೂ ರೋಚಕವಾದುದು.

ಮೇಲಿನದು ಶಬ್ದವ್ಯುತ್ಪತ್ತಿಯ ಮಾತಾದರೆ ನಮ್ಮ ಕುಟುಂಬ ಸಂಸ್ಕೃತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನುವುದನ್ನು ‘ಪಂಚತಂತ್ರ’ ಮತ್ತು ‘ಮನು’ವಿನ ಮಾತಿನ ಮೂಲಕ ಕಟ್ಟಿಕೊಡುವ ಉಮಾಕಾಂತ ಭಟ್ಟರು ತಮ್ಮ ವ್ಯಾಸಂಗದ ಹರಹನ್ನೂ ಪರಿಚಯಿಸುತ್ತಾರೆ. ‘ಅಭ್ಯುತ್ಥಾನ’ ಮತ್ತು ‘ಅಭಿವಾದನ’ ಎಂಬ ಎರಡು ಶಬ್ದಗಳನ್ನು ಇಟ್ಟುಕೊಂಡು ಐದೂವರೆ ಪುಟಗಳಷ್ಟು ವಿಸ್ತರಿಸುವ ಅವರ ವಿದ್ವತ್ ಬಲ ಮತ್ತು ಕಾವ್ಯಪರಿಣತಿ ನಿಜಕ್ಕೂ ಪ್ರಶಂಸಾರ್ಹವಾದುದು. ಅದರ ವಿವರಣೆಗೆ ಇದು ಜಾಗವಲ್ಲ. ಅದನ್ನು ಓದಿಯೇ ಸವಿಯಬೇಕು. (‘ಸದಾತನ’ ಪುಟ ಸಂ-10-15.) ಇಂತಹ ಸೊಗಸಾದ ಶಬ್ದವ್ಯುತ್ಪತ್ತಿಗಳು ‘ಸದಾತನ’ದ ಪುಟಪುಟಗಳಲ್ಲಿ ಅಡಿಕಿರಿದಿವೆ.

ಸಂಸ್ಕೃತ ಓದಿದವರಲ್ಲಿ ಕನ್ನಡವನ್ನು ಬಹುಸೊಗಸಾಗಿ ಬಳಸುವ ಕೆಲವೇ ಕೆಲವು ಸಂಸ್ಕೃತ ವಿದ್ವಾಂಸರಲ್ಲಿ ಉಮಾಕಾಂತ ಭಟ್ಟರು ಒಬ್ಬರು. ತಪ್ಪಿಲ್ಲದೆ ಶುದ್ಧವಾಗಿ, ಆಕರ್ಷಕವಾಗಿ ಬಳಸುವ ಮತ್ತು ಕನ್ನಡದ ಬನಿಯನ್ನು ಯಥಾವತ್ತು ಕಟ್ಟಿಕೊಡುವ ಅವರ ಕನ್ನಡದ ಭಾಷಾಪಾಕ ಅನಿತರ ಸಾಧಾರಣವಾದುದು.

ಉಮಾಕಾಂತ ಭಟ್ಟರ ವಿದ್ವತ್ತಿಗೆ ಸಂದ ಗೌರವಕ್ಕಾಗಿ ಅವರ 60ನೇ ವರ್ಷ ವಯಸ್ಸಿಗೆ ಎರಡು ಅಭಿನಂದನ ಪುಸ್ತಕಗಳು ಬಂದಿವೆ. ಒಂದು ‘ಅನ್ವೀಕ್ಷಾ’ ಇನ್ನೊಂದು ‘ಕಾಂತಶಕ್ತಿ’. ಮೊದಲನೆಯ ಪುಸ್ತಕ ‘ಅನ್ವೀಕ್ಷಾ’ದ ಎಲ್ಲಾ ಲೇಖನಗಳೂ ಸಂಸ್ಕೃತದಲ್ಲಿ ಇವೆ. ‘ವ್ಯಕ್ತಿ’ ಮತ್ತು ‘ರುಚಿ’ ಎಂಬ ಎರಡು ಭಾಗಗಳು ಇದ್ದು ಮೊದಲನೆಯ ಭಾಗದಲ್ಲಿ ಮೂರ್ನಾಲ್ಕು ಲೇಖನಗಳಲ್ಲೇ ಉಮಾಕಾಂತ ಭಟ್ಟರ ವ್ಯಕ್ತಿ ಪರಿಚಯ ಮುಗಿದುಹೋಗುತ್ತದೆ. ಇನ್ನೊಂದು ಭಾಗ ‘ರುಚಿ’ಯಲ್ಲಿ ನಾಡಿನ ಅನೇಕ ಸಂಸ್ಕೃತ ವಿದ್ವಾಂಸರು ಬೇರೆ ಬೇರೆ ಶಾಸ್ತ್ರಗಳ ಕುರಿತು ಲೇಖನ ಬರೆದಿದ್ದಾರೆ. ಪದ್ಯಗಳೂ ಇವೆ. ಎರಡನೆಯ ಪುಸ್ತಕ ‘ಕಾಂತಶಕ್ತಿ’ಯಲ್ಲೂ ‘ವ್ಯಕ್ತಿ’ ಮತ್ತು ‘ಅಭಿವ್ಯಕ್ತಿ’ ಎಂಬ ಎರಡು ಭಾಗಗಳಿದ್ದು ಲೇಖನಗಳು ಕನ್ನಡದಲ್ಲಿ ಇವೆ. ಸಂಸ್ಕೃತ ಮತ್ತು ಕನ್ನಡದ ಕೆಲವು ಕಾವ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಈ ಪುಸ್ತಕ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಬಾಗಿಲನ್ನು ತೆರೆದಿದೆ.

ಉಮಾಕಾಂತ ಭಟ್ಟರಿಗೆ ಬಹು ಪ್ರಖ್ಯಾತಿಯನ್ನು ತಂದುಕೊಟ್ಟ ಮತ್ತೊಂದು ಕ್ಷೇತ್ರ ಯಕ್ಷಗಾನ ತಾಳಮದ್ದಳೆ. ತಾಳಮದ್ದಳೆ ಅರ್ಥಧಾರಿಯಾಗಿ ಅವರು ನೀಡಿದ ಕೊಡುಗೆ ಒಂದು ಮೈಲುಗಲ್ಲನ್ನೇ ಸ್ಥಾಪಿಸಿದೆ. ಸಂಸ್ಕೃತ ಶಬ್ದವ್ಯುತ್ಪತ್ತಿಯ ಜಾಡೇ ತಾಳಮದ್ದಳೆಯಲ್ಲೂ ಕಂಡುಬರುತ್ತದೆ. ಯಕ್ಷಗಾನ ಆವರಣ ನಿರ್ಮಾಣಕ್ಕೆ ಬೇಕಾದ ಅತ್ಯಾಕರ್ಷಕ ಶ್ರುತಿಬದ್ಧತೆ, ಪರಿಣಾಮಕ್ಕೆ ಬೇಕಾದ ಆಯ್ದ ಪ್ರಭಾವಶೀಲ ಶಬ್ದಗಳು, ಪದೇ ಪದೇ ಮಿಂಚುವ ರೂಪಕಭಾಷೆ, ಎದುರು ಅರ್ಥಧಾರಿಗಳನ್ನು ತಬ್ಬಿಬ್ಬುಗೊಳಿಸುವ ಮಾಯಕ ಶಬ್ದಜಾಲ, ಪ್ರೇಕ್ಷಕರ ಹತ್ತಿರಕ್ಕೆ ಹೋಗುವುದಕ್ಕಿಂತ ಅವರೇ ತನ್ನ ದಾರಿಗೆ ಬರಲಿ, ತನ್ನ ಅರ್ಥದ ಗಮ್ಯವನ್ನು ಮುಟ್ಟಿಕೊಳ್ಳಲಿ ಎಂಬ ಧಾರ್ಷ್ಟ್ಯ ಮನೋಭಾವ ಅವರ ಅರ್ಥದಲ್ಲಿ ಎದ್ದುಕಾಣುವ ಪ್ರಮುಖ ಅಂಶಗಳು.

ಮಡದಿ ಸುನಂದಾ, ಇಬ್ಬರು ಗಂಡುಮಕ್ಕಳ ಅವರ ಸಂಸಾರ ತೃಪ್ತಸಂಸಾರ. ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಉಮಾಕಾಂತ ಭಟ್ಟರು 25ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.