ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿದ ಯಕ್ಷಗಾನ ಕಲಿಕೆ

ಸುಮನಾ ಕೆ
Published 14 ಜುಲೈ 2020, 9:13 IST
Last Updated 14 ಜುಲೈ 2020, 9:13 IST
ಯಕ್ಷಗಾನ
ಯಕ್ಷಗಾನ   

ದೇಶದಲ್ಲಿ ಕೊರೊನಾ ಭೀತಿ ಹಾಗೂ ಲಾಕ್‌ಡೌನ್‌ ಜಾರಿಯಾದ ದಿನದಿಂದವರ್ಕ್‌ ಫ್ರಮ್‌ ಹೋಂ ಕಲ್ಚರ್‌ ಶುರುವಾಗಿದೆ. ಇದು ಸಾಫ್ಟ್‌ವೇರ್‌ ಕೆಲಸಕ್ಕೆ ಮಾತ್ರ ಸೀಮಿತವಾಗಿಲ್ಲ. ಕಚೇರಿ, ಶಾಲೆ, ಕಾಲೇಜುಗಳ ಜತೆ‌ ನೃತ್ಯ, ಸಂಗೀತ, ಯೋಗ ಶಾಲೆಗಳು ಆನ್‌ಲೈನ್‌ ಮೊರೆ ಹೋಗಿವೆ.

ಕರಾವಳಿಯ ಜನಪ್ರಿಯ ಕಲೆಯಾದ ಯಕ್ಷಗಾನವೂ ಆನ್‌ಲೈನ್‌ನಿಂದ ಹೊರತಾಗಿಲ್ಲ. ದಕ್ಷಿಣ ಮತ್ತು ಉತ್ತರ ಕನ್ನಡ ಸೇರಿದಂತೆ ಬೆಂಗಳೂರಿನಲ್ಲಿರುವ ಯಕ್ಷಗಾನ ತರಬೇತಿ ಕೇಂದ್ರಗಳು ಆನ್‌ಲೈನ್‌ ಕ್ಲಾಸ್‌ ಮೊರೆಹೋಗಿವೆ. ವಿಶೇಷವೆಂದರೆ ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಯಕ್ಷಗಾನ ಕಲಿಯುವ ಆಸಕ್ತರ ಸಂಖ್ಯೆಯೂ ಹೆಚ್ಚಾಗಿದೆ.

ಯಕ್ಷಗಾನ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ರಾಜಧಾನಿ ಬೆಂಗಳೂರಿನಲ್ಲೂ ಯಕ್ಷಗಾನ ತರಬೇತಿ ನೀಡುವ ಹಲವು ಕೇಂದ್ರ ಮತ್ತುಅನೇಕ ಯಕ್ಷಗಾನ ಕಲಾವಿದರ ತಂಡಗಳಿವೆ. ಲಾಕ್‌ಡೌನ್‌ ಅವಧಿಯಲ್ಲಿ ನಗರದಲ್ಲಿ 10ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ತೆಂಕುತಿಟ್ಟು ಹಾಗೂ ಬಡಗುತಿಟ್ಟು ಆನ್‌ಲೈನ್‌ ತರಗತಿ ನಡೆಸುತ್ತಿದ್ದಾರೆ.

ADVERTISEMENT

ಈ ಹಿಂದೆ ಯಕ್ಷಗಾನ ಕಲಿತು ಅರ್ಧಕ್ಕೆ ಬಿಟ್ಟವರು. ವಿಧ್ಯಾಭ್ಯಾಸ ಮತ್ತು ಉದ್ಯೋಗದ ಕಾರಣ ಯಕ್ಷಗಾನ ಕಲಿಕೆ ಮುಂದುವರಿಸಲಾಗದವರು,ಯಕ್ಷಗಾನದಲ್ಲಿ ಆಸಕ್ತಿ ಇರುವವರು, ಆಟ ನೋಡಲು ಊರೂರು ಸುತ್ತುತ್ತಿದ್ದವರು, ಚಿಕ್ಕಂದಿನಲ್ಲಿ ಯಕ್ಷಗಾನ ಕಲಿಯಲು ಆಗದವರು ಈಗ ಆನ್‌ಲೈನ್‌ ಕ್ಲಾಸ್‌ ಸೇರಿಕೊಂಡಿದ್ದಾರೆ ಎನ್ನುತ್ತಾರೆ ಯಕ್ಷಗಾನ ಶಿಕ್ಷಕರು.

ಕರಾವಳಿಯವರು ಮಾತ್ರವಲ್ಲ, ದೇಶ, ವಿದೇಶ ಮತ್ತು ರಾಜ್ಯದ ಬೇರೆ ಬೇರೆ ಭಾಗದ ಜನರು ಸಹ ಆನ್‌ಲೈನ್‌ ಮೂಲಕ ಯಕ್ಷಗಾನ ಕಲಿಯಲು ಉತ್ಸಾಹ ತೋರುತ್ತಿರುವುದು ಶಿಕ್ಷಕರ ಖುಷಿಯನ್ನು ಹೆಚ್ಚಿಸಿದೆ.

‘ಮಾರ್ಚ್ ಅಂತ್ಯಕ್ಕೆ ಜಾರಿಯಾದ ಲಾಕ್‌ಡೌನ್‌ ಎಲ್ಲಾ ಉದ್ಯಮ ಮತ್ತು ವಿದ್ಯಮಾನಗಳ ರೂಪುರೇಷೆಯನ್ನು ಬದಲಿಸಿತು. ಯಕ್ಷಗಾನ ಕಲಿಕಾ ಕ್ಷೇತ್ರವೂ ಈ ಪ್ರಭಾವದಿಂದ ತಪ್ಪಿಸಿಕೊಳ್ಳಲಿಲ್ಲ. ವಾರ ಪೂರ್ತಿ, ವಾರಾಂತ್ಯದಲ್ಲಿ ನಡೆಯುತ್ತಿದ್ದ ಎಲ್ಲಾ ತರಗತಿಗಳೂ ನಿಂತು ಹೋದವು. ಆ ಸಮಯದಲ್ಲೇ ಈ ಆನ್‍ ಲೈನ್ ತರಗತಿಗಳ ಯೋಚನೆ ಮೊಳಕೆಯೊಡೆದಿದ್ದು. ಪ್ರಯೋಗ ಆರಂಭಿಸಿ ಯಶಸ್ವಿಯಾದ ಬಳಿಕ, ಜರ್ಮನಿ, ಅರಬ್‌ ರಾಷ್ಟ್ರಗಳು ಸೇರಿ ಪ್ರಪಂಚದಾದ್ಯಂತ ಹರಡಿಕೊಂಡಿರುವ ಯಕ್ಷಗಾನ ಆಸಕ್ತರು ಆನ್‌ಲೈನ್‌ ಮೂಲಕ ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ. ತರಗತಿಯಿಂದ ತರಗತಿಗೆ ಕಲಿಕಾಸ್ತರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳುತ್ತಾರೆ ಕಳೆದ 18 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿರುವ ಕಲಾವಿದ, ಯಕ್ಷಗಾನ ಶಿಕ್ಷಕ ಪ್ರಸಾದ್‌ ಚೇರ್ಕಾಡಿ.

ಬಹುತೇಕ ಯಕ್ಷಗಾನ ತರಬೇತಿ ಶಾಲೆಗಳು ಹೊಸಬರಿಗೆ ಮೂರು ತಿಂಗಳ ಯಕ್ಷಗಾನ ಬೇಸಿಕ್‌ ಕೋರ್ಸ್‌ ಆರಂಭಿಸಿದ್ದಾರೆ. ಇಲ್ಲಿ ಭಾಗವತಿಕೆ, ನಾಟ್ಯ, ಚೆಂಡೆ ಹಾಗೂ ಮುಖವರ್ಣಿಕೆ ಬಗ್ಗೆ ಹೇಳಿಕೊಡಲಾಗುತ್ತದೆ.

ಪ್ರಸಾದ್‌ ಚೇರ್ಕಾಡಿ ಅವರು ಭಾಗವತಿಕೆಯಲ್ಲಿ ತೆಂಕುತಿಟ್ಟು ಯಕ್ಷಗಾನ ಪೂರ್ವರಂಗದ ಪರಿಚಯ, ನಾಟ್ಯದಲ್ಲಿ ತೆಂಕುತಿಟ್ಟು ಪ್ರಾಥಮಿಕ ತಾಳ ಮತ್ತು ಪ್ರಸಂಗಾಭ್ಯಾಸದ ಪರಿಚಯ ಮಾಡಿಕೊಡುತ್ತಿದ್ದಾರೆ. ಯಕ್ಷಗಾನದ ಪಠ್ಯ, ಪದ್ಯ ಕನ್ನಡದಲ್ಲೇ ಇರುತ್ತದೆ. ಆದರೆ,ಕನ್ನಡ, ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಪಾಠಗಳು ನಡೆಯುತ್ತಿವೆ.

ದೊಡ್ಡಕಲ್ಲಸಂದ್ರದ ಸಂಕೃತಿ ಯಕ್ಷಗಾನ ತರಬೇತಿ ಕೇಂದ್ರ ಆನ್‌ಲೈನ್‌ ತರಗತಿಗಾಗಿಯೇ ವಿಶೇಷವಾಗಿ ಪಿಡಿಎಫ್‌ ಫೈಲ್‌ ನೋಟ್ಸ್‌, ರೆಕಾರ್ಡೆಡ್‌ ವಿಡಿಯೊ ಸಿದ್ಧಪಡಿಸಿಕೊಂಡಿದೆ. ‘ಇಲ್ಲಿ ವಾರಕ್ಕೆ ಎರಡು ದಿನ ಆನ್‌ಲೈನ್‌ ಕ್ಲಾಸ್‌ಗಳನ್ನು ಯಕ್ಷಗಾನ ಕ್ಷೇತ್ರದ ಪರಿಣಿತ ಕಲಾವಿದರು ನಡೆಸಿಕೊಡುತ್ತಾರೆ. ಒಂದು ವೇಳೆ ಆನ್‌ಲೈನ್‌ ಕ್ಲಾಸ್‌ ಮಿಸ್‌ ಮಾಡಿಕೊಂಡರೂ ನಂತರ ವಿಡಿಯೊ ಮೂಲಕ ಅದನ್ನು ನೋಡಿ ಕಲಿಯಬಹುದು’ ಎನ್ನುತ್ತಾರೆ ಕೇಂದ್ರದ ಮುಖ್ಯಸ್ಥ ಸತೀಶ್‌ ಅಗ್ಪಲ.

‘ಲಾಕ್‌ಡೌನ್‌ ನಂತರ ಎರಡು ಬ್ಯಾಚ್‌ ಮುಗಿದವು. ಈಗ ಮೂರನೇ ಬ್ಯಾಚ್‌ನಲ್ಲಿ 65 ಜನ ಕಲಿಯುತ್ತಿದ್ದಾರೆ. ಇಲ್ಲಿ ಯಕ್ಷಗಾನ ಬೇಸಿಕ್‌ ಹೇಳಿಕೊಡಲಾಗುತ್ತಿದೆ. ನೇರ ತರಗತಿಗೆ ಬಂದು ಕಲಿಯುವವರಿಗಿಂತ ಆನ್‌ಲೈನ್‌ ಮೂಲಕ ಕಲಿಯುವವರ ಸಂಖ್ಯೆ ಈಗ ದುಪ್ಪಟ್ಟಾಗಿದೆ. ನೇರ ತರಗತಿಗಳಿಗೆ ಆರಂಭದಲ್ಲಿ100 ಜನ ಬಂದರೆ ಕೊನೆ ತನಕ ಉಳಿಯುವವರು 20–30 ಜನ ಅಷ್ಟೇ. ಆದರೆ ಆನ್‌ಲೈನ್‌ನಲ್ಲಿ 85–90 ಜನರು ಕೊನೆತನಕವೂ ಇರುತ್ತಾರೆ. ಟ್ರಾಫಿಕ್‌ ಕಾಟ, ಸಮಯದ ಉಳಿತಾಯವೂ ಇದಕ್ಕೆ ಕಾರಣವಿರಬಹುದು’ ಎನ್ನುತ್ತಾರೆ ಸತೀಶ್.

ನಾಟ್ಯ ಹೇಳಿಕೊಡಲು ಬೇರೆ ಟೆಕ್ನಿಕ್‌

ಯಕ್ಷಗಾನದಲ್ಲಿ ನಾಟ್ಯ ಆಕರ್ಷಣೀಯವಾದದ್ದು. ಆನ್‌ಲೈನ್‌ನಲ್ಲಿ ಇದನ್ನು ಹೇಳಿಕೊಡುವುದು ಸ್ವಲ್ಪ ಕಷ್ಟ. ವಿಡಿಯೊ ರೆಕಾರ್ಡ್‌ ಮಾಡಿ ಹಂತಹಂತವಾಗಿ ಹೇಳಿಕೊಡುವುದು, ಕ್ಯಾಮೆರಾ ಆ್ಯಂಗಲ್‌ ಬದಲಾವಣೆ ಮಾಡಿ ಹೆಜ್ಜೆ ಕಲಿಸಿಕೊಡುವಂತಹ ಕೆಲ ಟೆಕ್ನಿಕ್‌ಗಳನ್ನು ಬಳಸುತ್ತೇವೆ ಎನ್ನುತ್ತಾರೆ ಯಕ್ಷಗಾನ ಶಿಕ್ಷಕರು.

ರಂಗಭೂಮಿ ನಟರಿಂದಲೂ ಯಕ್ಷಗಾನ ಕಲಿಕೆ

ಬೆಂಗಳೂರು ನಗರದ ಸುಮಾರು ರಂಗಭೂಮಿ ಕಲಾವಿದರೂ ಯಕ್ಷಗಾನದಿಂದಲೂ ಪ್ರೇರಣೆಗೊಂಡಿದ್ದಾರೆ. ಯಕ್ಷಗಾನ ನೋಡಿದವರು, ಅದರ ಬಗ್ಗೆ ತಿಳಿದುಕೊಂಡ ರಂಗನಟರು ಯಕ್ಷಗಾನ ಕಲಿಯಲು ಆನ್‌ಲೈನ್‌ ತರಗತಿಗೆ ಬರುತ್ತಾರೆ ಎನ್ನುತ್ತಾರೆ ಪ್ರಸಾದ್‌ ಚೇರ್ಕಾಡಿ.

ಭವಿಷ್ಯದಲ್ಲೂ ಆನ್‌ಲೈನ್‌ ತರಗತಿ

ಕೊರೊನಾ ಸಾಂಕ್ರಾಮಿಕ ಭಯ ಮುಗಿದ ನಂತರವೂ ಆನ್‌ಲೈನ್‌ನಲ್ಲಿ ತರಗತಿಗಳನ್ನು ಮುಂದುವರಿಸುವ ಯೋಚನೆ ಯಕ್ಷಗಾನ ಶಿಕ್ಷಕರದ್ದು. ವಾರಪೂರ್ತಿ ಆನ್‌ಲೈನ್‌ ತರಗತಿ ನಡೆಸಿ, ವಾರಕ್ಕೊಂದು ದಿನ ನೇರ ತರಗತಿ ನಡೆಸುವ ಆಲೋಚನೆಯೂ ಇದೆ ಎನ್ನುತ್ತಾರೆ ಸತೀಶ್‌ ಅಗ್ಪಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.