ADVERTISEMENT

ಮದುವೆ ಔತಣಕೂಟದಲ್ಲಿ ಮದುಮಕ್ಕಳ ಯಕ್ಷಗಾನ

ಕರಾವಳಿ, ಮಲೆನಾಡಿನ ಮನೆ ಮನೆಗಳಲ್ಲೂ ಶುಭ ಸಮಾರಂಭಕ್ಕೆ ಯಕ್ಷಗಾನ ಇರಲೇಬೇಕು!

ಅವಿನಾಶ್ ಬಿ.
Published 4 ಸೆಪ್ಟೆಂಬರ್ 2020, 4:53 IST
Last Updated 4 ಸೆಪ್ಟೆಂಬರ್ 2020, 4:53 IST
ವಧು ಅನುಜ್ಞಾ ಯಕ್ಷಗಾನ ನಾಟ್ಯಕ್ಕೆ ವರ ಸುಹಾಸ್ ಚೆಂಡೆ ಸಾಥ್
ವಧು ಅನುಜ್ಞಾ ಯಕ್ಷಗಾನ ನಾಟ್ಯಕ್ಕೆ ವರ ಸುಹಾಸ್ ಚೆಂಡೆ ಸಾಥ್   

ಸಾಹಿತ್ಯ, ಸಂಗೀತ, ನಾಟ್ಯ, ವಾಗ್ವೈಭವ, ವೇಷಭೂಷಣ - ಇವೆಲ್ಲವುಗಳನ್ನೂ ಒಳಗೊಂಡಿರುವ ಹೆಮ್ಮೆಯ ಪರಿಪೂರ್ಣ ಕಲೆ ಯಕ್ಷಗಾನವು ಕರಾವಳಿ ಮಂದಿ, ಮಲೆನಾಡಿಗರ ಉಸಿರಲ್ಲಿ ಉಸಿರಾಗಿಬಿಟ್ಟಿದೆ. ಈ ಭಾಗದ ಯಾವುದೇ ಮನೆಯಲ್ಲಿ ಯಕ್ಷಗಾನವನ್ನು ಆಸ್ವಾದಿಸದವರಿಲ್ಲ ಎಂಬಷ್ಟರ ಮಟ್ಟಿಗೆ ಅದು ಜೀವನಾಡಿಯಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಜಾತಿ-ಮತ ಭೇದವೂ ಇಲ್ಲ. ಶಿಕ್ಷಣಾವಕಾಶವಿಲ್ಲದೆಯೂ ಯಕ್ಷಗಾನ ಕಲೆಯನ್ನು ಇಷ್ಟೆತ್ತರಕ್ಕೇರಿಸಿದ ಅಂದಿನ ಹಿರಿಯರ ಜೊತೆಗೆ, ಸುಶಿಕ್ಷಿತ ಹೊಸ ಪೀಳಿಗೆಯೂ ಕೈಜೋಡಿಸುತ್ತಿದೆ.

ಈ ಕಾರಣಕ್ಕಾಗಿಯೇ ಕರಾವಳಿಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಯಕ್ಷಗಾನ ತರಗತಿಗಳನ್ನು ಪಾಠ್ಯೇತರ ಚಟುವಟಿಕೆಯಾಗಿ, ತರಗತಿಯ ನಂತರದ ಅವಧಿಯಲ್ಲಿ ಕಲಿಸಲಾಗುತ್ತಿದೆ. ಯುವ ಜನರೂ ಅದರತ್ತ ಆಕರ್ಷಿತರಾಗುತ್ತಿರುವ ಕಾರಣದಿಂದಾಗಿ ಯಕ್ಷಗಾನವೆಂಬ ಪಾರಂಪರಿಕ ಕಲೆಯೊಂದು ರಾಜ್ಯದ ಇನ್ಯಾವುದೇ ಕಲೆಗಿಂತ ವೇಗವಾಗಿ ಬೆಳೆಯುತ್ತಿದೆ.

ಕರಾವಳಿಯ ಮಣ್ಣಿನಲ್ಲೇ ಯಕ್ಷಗಾನದ ಸೊಗಡಿದೆ ಎಂಬುದಕ್ಕೂ ಕಾರಣವಿದೆ. ಇಲ್ಲಿನ ಹಳ್ಳಿ ಹಳ್ಳಿಗಳಲ್ಲಿಯೂ, ಮದುವೆ, ಗೃಹ ಪ್ರವೇಶ, ಬ್ರಹ್ಮೋಪದೇಶ, ಶ್ರಾದ್ಧ ಮುಂತಾದ ಯಾವುದೇ ಕಾರ್ಯಕ್ರಮಗಳು ನಡೆಯಲಿ, ಆ ಊರಮಂದಿ ಅಥವಾ ಬಂಧು ಬಳಗದವರು ಸೇರಿ, ಇದ್ದಲ್ಲೇ ಒಂದು ಯಕ್ಷಗಾನ ತಾಳಮದ್ದಳೆ ಕೂಟವನ್ನು ಏರ್ಪಡಿಸುವುದು ಒಂದು ರೀತಿಯ ಸಂಪ್ರದಾಯವೇ ಆಗಿದೆ. ಕೆಲವರು ಹೊರಗಿನಿಂದ ಕಲಾವಿದರನ್ನು ಕರೆಸಿಯೂ ಯಕ್ಷಗಾನ, ತಾಳಮದ್ದಳೆ ಅಥವಾ ಗಾಯನ ವೈಭವವನ್ನು ಏರ್ಪಡಿಸುತ್ತಾರೆ. ಕರಾವಳಿಯ ಜನರಿಗೆ ಪೌರಾಣಿಕ ಜ್ಞಾನದ ಜೊತೆಗೆ ಸಂಸ್ಕಾರ ಬೆಳೆಯಲು ಕಾರಣವಾಗಿರುವುದು ಕಲೆಯ ಬಗೆಗಿನ ಈ ಪರಿಯ ಆಕರ್ಷಣೆಯಿಂದಾಗಿಯೇ.

ADVERTISEMENT

ಈ ಪರಂಪರೆಯು ಒಂದು ಹೆಜ್ಜೆ ಮುಂದೆ ಹೋಗಿದೆ. ಮನೆಯವರಷ್ಟೇ ಅಲ್ಲದೆ, ಮದುವೆ ಮನೆಯಲ್ಲಿ ಮದುಮಕ್ಕಳೇ ಯಕ್ಷಗಾನದ ಹಾಡುಗಾರಿಕೆ, ಚೆಂಡೆ-ಮದ್ದಳೆ ವಾದನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕಳೆದ ತಿಂಗಳು ಯುವ ಮದ್ದಳೆವಾದಕರಾದ ಕೌಶಿಕ್ ರಾವ್ ಪುತ್ತಿಗೆ ಹಾಗೂ ಭಾಗವತಿಕೆಯಲ್ಲಿ ಹೆಸರು ಮಾಡಿರುವ ಅಮೃತಾ ಅಡಿಗ ಅವರ ವಿವಾಹವು ಈ ಕಲಾ ದಂಪತಿಯ ಯಕ್ಷಗಾನ ಪ್ರೇಮಕ್ಕೆ ಸಾಕ್ಷಿಯಾಯಿತು. ಔತಣಕೂಟದಲ್ಲಿ ಮದುಮಗಳು ಅಮೃತಾ ಹಾಡಿಗೆ ಮದುಮಗ ಕೌಶಿಕ್ ಮದ್ದಳೆ ಹಾಗೂ ಸೋದರ ಕೌಶಲ್ ಚೆಂಡೆ ನುಡಿಸುವ ವಿಡಿಯೊ ವಾಟ್ಸ್ಆ್ಯಪ್, ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು.

ಇದೀಗ ಮದುವೆ ಮನೆಗೆ ಹೊಸದಾಗಿ ಸೇರ್ಪಡೆಯೆಂದರೆ, ಮದುಮಗಳಿಂದ ಯಕ್ಷಗಾನದ ನಾಟ್ಯ. ಬೆಂಗಳೂರಿನಲ್ಲಿ ಸ್ಯಾಮ್‌ಸಂಗ್ ಕಂಪನಿಯ ಉದ್ಯೋಗಿ ಸುಹಾಸ್ ಕೆರ್ಮುಣ್ಣಾಯ ಮತ್ತು ಕಟೀಲಿನ ಅನುಜ್ಞಾ ಭಟ್ ಅವರ ವಿವಾಹವು ಆಗಸ್ಟ್ 30ರಂದು ನಡೆದಿತ್ತು. ಆ.31ರಂದು ದಕ್ಷಿಣ ಕನ್ನಡದ ಗುರುವಾಯನಕೆರೆ ಸಮೀಪದ ಮದ್ದಡ್ಕದ ಬಳಿಯ ಮೈರಾರು ಮನೆಯಲ್ಲಿ ಗಾನವೈಭವ ಏರ್ಪಡಿಸಲಾಗಿತ್ತು.

ಯಕ್ಷಗಾನ ರಂಗದ ಹೆಸರಾಂತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ಕಕ್ಯೆಪದವು, ಮಹೇಶ್ ಕನ್ಯಾಡಿ ಹಾಗೂ ಕಾವ್ಯಶ್ರೀ ಅಜೇರು ಅವರ ಯಕ್ಷಗಾನದ ಹಾಡುಗಳಿಗೆ, ಕೃಷ್ಣಪ್ರಕಾಶ್ ಉಳಿತ್ತಾಯ, ಶಿತಿಕಂಠ ಭಟ್ ಉಜಿರೆ ಹಾಗೂ ಚಂದ್ರಶೇಖರ ಆಚಾರ್ಯ, ಗುರುವಾಯನಕೆರೆ ಅವರ ಚೆಂಡೆ-ಮದ್ದಳೆ ಸಹಯೋಗವಿತ್ತು.

ಮದುಮಕ್ಕಳಿಬ್ಬರಿಗೂ ಯಕ್ಷಗಾನದಲ್ಲಿ ಬಿಟ್ಟಿರಲಾರದ ನಂಟು. ಅನುಜ್ಞಾ ಕಟೀಲು ಮಕ್ಕಳ ಮೇಳದಲ್ಲಿ ವೇಷ ಹಾಕಿ ಹೆಸರು ಮಾಡಿದವರು. ಭರತನಾಟ್ಯದಲ್ಲೂ ಸೀನಿಯರ್ ಪರೀಕ್ಷೆ ಆಗಿದ್ದು, ಸಿಎ ಓದುತ್ತಿದ್ದಾರೆ. ಸುಹಾಸ್ ಯಕ್ಷಗಾನದ ಚೆಂಡೆ-ಮದ್ದಳೆಯಲ್ಲಷ್ಟೇ ಅಲ್ಲದೆ, ದೇವಸ್ಥಾನಗಳಲ್ಲಿ ದೇವರ ಬಲಿ ಉತ್ಸವಕ್ಕೆ ಚೆಂಡೆ ನುಡಿಸಿಯೂ ಅನುಭವ ಇರುವವರು. ಇನ್ನೇನು, ಬಂಧುಗಳ ಒತ್ತಾಯಕ್ಕೆ ಸ್ಪಂದಿಸಿದರು. ದೇವೀ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಶುಂಭ ದಾನವನನ್ನು ಸಂಹರಿಸಲು ದೇವಿಯು ಯೋಜನೆ ರೂಪಿಸುವ ಸನ್ನಿವೇಶದ 'ಎಂದು ಯೋಚಿಸಿ ಮಹಾಮಾಯೆ' ಎಂಬ ಪದಕ್ಕೆ ಅನುಜ್ಞಾ ಹೆಜ್ಜೆ ಹಾಕಿ, ನೃತ್ಯ, ಅಭಿನಯಗಳೊಂದಿಗೆ ರಂಜಿಸಿದರೆ, ಮದುಮಗ ಸುಹಾಸ್ ಚೆಂಡೆ ನುಡಿಸಿದರು. ಗಾನ ವೈಭವ ಕಾರ್ಯಕ್ರಮದಲ್ಲಿ ಪುಟ್ಟದಾಗಿ ಏರ್ಪಟ್ಟ ನಾಟ್ಯ ವೈಭವವೂ ಸ್ಮರಣೀಯವಾಗುಳಿಯಿತು.

ಈ ಸುಂದರ ಸನ್ನಿವೇಶದ ವಿಡಿಯೊ ಈಗ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರಜಾವಾಣಿ ಜೊತೆ ಮಾತನಾಡಿದ ಸುಹಾಸ್, ಕೋವಿಡ್ ಸಂಕಷ್ಟ ಕಾಲದಲ್ಲಿ ಯಕ್ಷಗಾನ ಪ್ರದರ್ಶನಗಳೂ ನಿಂತು ಹೋಗಿದ್ದವು. ಹೀಗಾಗಿ, ಬಂಧುಗಳಿಗೆ ಕೊಂಚ ಮನತಣಿಸುವ ಯೋಜನೆ ಹೊಳೆದು, ಕಲಾವಿದರನ್ನು ಕರೆಸಿ ಗಾನವೈಭವ ಏರ್ಪಡಿಸುವ ಕನಸು ಮೂಡಿತು. ಮೂರೇ ದಿನಗಳಲ್ಲಿ ಕಾರ್ಯಕ್ರಮ ನಿಗದಿ ಮಾಡಿದೆವು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.