ADVERTISEMENT

ಸಾಮಾಜಿಕ ಕ್ರಾಂತಿ: ಕನಸು ಬಿತ್ತುವ ಅಜ್ಜಿ ಮನೆ

ಆರ್.ಜಿತೇಂದ್ರ
Published 7 ಆಗಸ್ಟ್ 2021, 19:30 IST
Last Updated 7 ಆಗಸ್ಟ್ 2021, 19:30 IST
‘ಅಜ್ಜಿ ಮನೆ’ ಮುಂದೆ ಸಬಿಹಾ ಹಷ್ಮಿ–ಚಿತ್ರ: ದೊಡ್ಡಬಾಣಗೆರೆ ಮಾರಣ್ಣ
‘ಅಜ್ಜಿ ಮನೆ’ ಮುಂದೆ ಸಬಿಹಾ ಹಷ್ಮಿ–ಚಿತ್ರ: ದೊಡ್ಡಬಾಣಗೆರೆ ಮಾರಣ್ಣ   

ದೂರದ ದೆಹಲಿಯಿಂದ ಬೆಂಗಳೂರು ಪಕ್ಕದ ಈ ಪುಟ್ಟ ಹಳ್ಳಿಗೆ ಬಂದು ನೆಲೆಸಿರುವ ಸಬಿಹಾ ಅವರು, ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಯಲ್ಲಿ ತೊಡಗಿದವರು. ಊರಿನವರ ಪಾಲಿಗೆ ಪ್ರೀತಿಯ ‘ಅಜ್ಜಿ’ ಎನಿಸಿರುವ ಈ ವಿಶ್ರಾಂತ ಕಲಾ ಶಿಕ್ಷಕಿ ಮಕ್ಕಳಿಗಾಗಿ ‘ಅಜ್ಜಿಯ ಕಲಿಕಾ ಕೇಂದ್ರ’ ನಿರ್ಮಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಅಲ್ಲಿ ಮಕ್ಕಳ ಕಲರವ ಕೇಳಲು ತುದಿಗಾಲ ಮೇಲೆ ನಿಂತಿದ್ದಾರೆ...

***

ಜ್ಯೋತಿಪಾಳ್ಯದ ಈ ಮನೆ ಸುತ್ತಲಿನ ಮಕ್ಕಳಿಗೆ ‘ಅಜ್ಜಿ ಮನೆ’ ಎಂತಲೇ ಪ್ರಸಿದ್ಧಿ. ತಮ್ಮ ಅಜ್ಜಿಯ ಮನೆಗೆ ಬಂದಷ್ಟೇ ಖುಷಿಯಾಗಿ ಇಲ್ಲಿಗೆ ಬರುವ ಮಕ್ಕಳು ಇಲ್ಲಿ ಹೊತ್ತು ಕಳೆದು ಹೋಗುತ್ತಾರೆ. ಮಾತ್ರವಲ್ಲ, ಬದುಕಿಗೆ ಬೇಕಾದ ಪಾಠಗಳನ್ನೂ ಈ ಮನೆ ಅವರಿಗೆ ಕಲಿಸಿಕೊಡುತ್ತಿದೆ.

ADVERTISEMENT

ಹೀಗೆ ಮಕ್ಕಳ ಬಾಯಲ್ಲಿ ‘ಅಜ್ಜಿ’ ಎಂತಲೇ ಹೆಸರಾದವರು ನಿವೃತ್ತ ಕಲಾ ಶಿಕ್ಷಕಿ ಸಬಿಹಾ ಹಷ್ಮಿ. ದೆಹಲಿಯಿಂದ ಬೆಂಗಳೂರಿಗೆ ನೆಲೆ ಬದಲಿಸಿಕೊಂಡ ಸಬಿಹಾ ಕಡೆಗೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಜ್ಯೋತಿಪಾಳ್ಯದಲ್ಲಿ ಜಮೀನು ಕೊಂಡು ಇಲ್ಲಿಯೇ ಬಿಡಾರ ಹೂಡಿದ್ದಾರೆ. ಸ್ವಚ್ಛ ಪರಿಸರದಲ್ಲಿ ಜೀವನ ನಡೆಸುವ ಆಶಯದ ಜೊತೆಗೆ ಸುತ್ತಲಿನವರ ಬದುಕನ್ನೂ ಹಸನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಹೆಣ್ಣು ಮಕ್ಕಳ ಏಳ್ಗೆಗೆ ಸದ್ದಿಲ್ಲದೇ ಶ್ರಮಿಸುತ್ತಿದ್ದಾರೆ. ಇದೀಗ ‘ಅಜ್ಜಿ ಕಲಿಕಾ ಕೇಂದ್ರ’ ಕಟ್ಟುವ ಮೂಲಕ ತಾವು ಮಾಡುತ್ತಿರುವ ಸಮಾಜ ಸೇವೆಗೊಂದು ಮೂರ್ತರೂಪ ಕೊಡಲು ಹೊರಟಿದ್ದಾರೆ.

2012ರಲ್ಲಿ ಜ್ಯೋತಿಪಾಳ್ಯದ ಜಮೀನಿಗೆ ಬಂದ ಸಬಿಹಾ ಇಲ್ಲಿ ಪುಟ್ಟದೊಂದು ಮನೆ ಕಟ್ಟಿಕೊಂಡು ವಾಸಕ್ಕೆ ಆರಂಭಿಸಿದರು. ಕಲಾ ಶಿಕ್ಷಕಿಯೂ ಆದ ಅವರು ತಮ್ಮ ವ್ಯಕ್ತಿತ್ವದಿಂದ ಸುತ್ತಲಿನ ಮಕ್ಕಳನ್ನೂ ಆಕರ್ಷಿಸಿದರು. ಹಸು ಮೇಯಿಸಲು ಬಂದವರ ಕೈಗೆ ಬಣ್ಣದ ಬ್ರಶ್‌ ಕೊಟ್ಟು ಚಿತ್ತಾರ ಬಿಡಿಸುವ ಕಲೆ ಹೇಳಿಕೊಟ್ಟರು. ಓದಲು ಪುಸ್ತಕ ನೀಡಿದರು. ಪಾಠ ಕಲಿಯಲು ಬಂದ ಮಕ್ಕಳ ಬಾಯಲ್ಲಿ ‘ಅಜ್ಜಿ’ ಎಂದೇ ಗುರುತಿಸಿಕೊಂಡರು.

ಸಬಿಹಾ ಮೂಲತಃ ಉತ್ತರ ಪ್ರದೇಶದ ಅಲಿಗಡದವರು. ದೆಹಲಿಯಲ್ಲಿ ಲಲಿತ ಕಲೆ ವಿಷಯದಲ್ಲಿ ಪದವಿ ಮುಗಿಸಿ ಅಲ್ಲಿಯೇ ಕಲಾ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಅಂದಿನಿಂದಲೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡು ನಾನಾ ಕಾರ್ಯಗಳಲ್ಲಿ ಕೈ ಜೋಡಿಸುತ್ತಾ ಬಂದ ಅವರು ಕಲಿಕೆಯ ವಿಷಯದಲ್ಲಿ ಹೆಣ್ಣುಮಕ್ಕಳಿಗೆ ಆಗುತ್ತಿರುವ ಅನ್ಯಾಯ ಗುರುತಿಸಿ, ಅದನ್ನು ಸರಿಪಡಿಸಲು ಶ್ರಮಿಸುತ್ತಿರುವವರು.

‘ಅಜ್ಜಿ’ ಹೊಲದ ಮೊದಲ ಬೆಳೆಯನ್ನು ಸ್ವಚ್ಛಗೊಳಿಸಲು ಊರಿನ ಮಹಿಳೆಯರು ಸಬಿಹಾ ಹಷ್ಮಿ ಅವರಿಗೆ ನೆರವಾದಾಗ...

2007ರಲ್ಲಿ ಸ್ವಯಂ ನಿವೃತ್ತಿ ಪಡೆದು ಮಗನ ಜೊತೆ ಬೆಂಗಳೂರಿಗೆ ಬಂದ ಸಬಿಹಾ ‘ಪೂರ್ಣ’ ಕಲಿಕಾ ಕೇಂದ್ರದಲ್ಲಿ ಕಲಾ ಶಿಕ್ಷಕಿಯಾಗಿ ಮತ್ತೆ ಸೇವೆ ಆರಂಭಿಸಿದರು. ಈ ನಡುವೆ, ನಗರದ ಜಂಜಾಟದಿಂದ ದೂರ ಇರುವ ನಿರ್ಧಾರಕ್ಕೆ ಬಂದು ಜಮೀನು ಹುಡುಕುತ್ತಾ ಕಡೆಗೆ ಜ್ಯೋತಿಪಾಳ್ಯದಲ್ಲಿ ನೆಲೆ ಕಂಡುಕೊಂಡರು.

ಸಬಿಹಾ ಅವರ ಮಾರ್ಗದರ್ಶನ ಜ್ಯೋತಿ‍ಪಾಳ್ಯದ ಮಕ್ಕಳ ಬದುಕನ್ನು ಬದಲಿಸಿದೆ. ಅದರಲ್ಲೂ ಅನೇಕ ಹೆಣ್ಣುಮಕ್ಕಳು ತಮ್ಮ ಕನಸು ನನಸಾಗಿಸಿಕೊಳ್ಳಲು ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಅರ್ಧಕ್ಕೆ ಓದು ಮೊಟಕುಗೊಳಿಸಿ, ಎಳೆಯ ವಯಸ್ಸಿನಲ್ಲೇ ಸಂಸಾರದ ನೊಗ ಹೊರಲು ಸಿದ್ಧರಾಗುತ್ತಿದ್ದ ಹುಡುಗಿಯರು ಇಂದು ಕಾಲೇಜಿನ ಮೆಟ್ಟಿಲು ಹತ್ತಿ, ತಮ್ಮಿಷ್ಟದ ಉದ್ಯೋಗ ಹಿಡಿದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗಿದೆ.

ಜ್ಯೋತಿಪಾಳ್ಯದವರೇ ಆದ ಪಲ್ಲವಿಗೆ ಕಾಲೇಜು ಮೆಟ್ಟಿಲು ಹತ್ತುವುದೇ ದುಸ್ತರವಾಗಿದ್ದ ಹೊತ್ತಿನಲ್ಲಿ ಸಬಿಹಾ ಅವರು, ಆಕೆಯ ಕೈ ಹಿಡಿದು ನಡೆಸಿದ್ದಾರೆ. ಇದರಿಂದಾಗಿ ಇಂದು ಆಕೆ ಪದವಿ ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗದೊಂದಿಗೆ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಇದೇ ಗ್ರಾಮದ ಮತ್ತೊಬ್ಬ ಯುವತಿ ಸುಷ್ಮಾ ಪಿಯುಸಿ ನಂತರ ಮುಂದೇನು ಎಂದು ಕೈಕಟ್ಟಿ ಕುಳಿತಾಗ, ಆಕೆಗೆ ಕರಕುಶಲ ಕಲೆ ಹೇಳಿಕೊಟ್ಟು ತನ್ನ ಸಂಪಾದನೆಯಿಂದಲೇ ಶಿಕ್ಷಣ ಪೂರೈಸಲು ನೆರವಾಗಿದ್ದಾರೆ. ಇಂದು ಸುಷ್ಮಾ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿರುವ ಜೊತೆಗೆ ಬೆಂಗಳೂರಿನಲ್ಲಿ ತಮ್ಮದೇ ಆದ ಕಸೂತಿ ಕಲೆಯ ಅಂಗಡಿ ಹೊಂದಿದ್ದಾರೆ.

ವಾರದಲ್ಲಿ ಕಚೇರಿ ಕೆಲಸ ಹಾಗೂ ವಾರಾಂತ್ಯದಲ್ಲಿ ತಮ್ಮ ಅಂಗಡಿಯಲ್ಲಿ ಸಂಪಾದನೆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

‘ಜ್ಯೋತಿಪಾಳ್ಯಕ್ಕೆ ಬಂದ ಆರಂಭದಲ್ಲಿ ಇಲ್ಲಿನ ಅಸಹಾಯಕ ಹೆಣ್ಣುಮಕ್ಕಳ ಸ್ಥಿತಿ ಕಂಡು ಸ್ವಂತ ಹಣ ಹಾಗೂ ದಾನಿಗಳ ನೆರವಿನಿಂದ ಅನೇಕ ಮಕ್ಕಳ ಶಾಲಾ ಶುಲ್ಕ ಕಟ್ಟಿದೆವು. ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಸಾಮಗ್ರಿಗಳನ್ನೂ ಕೊಡಿಸಿದೆವು. ಆದರೆ ಇಷ್ಟೇ ಆದರೆ ಸಾಲದು ಎನ್ನಿಸಿತು. ಹೀಗಾಗಿ ಹುಡುಗಿಯರಿಗೆ ಹೊಲಿಗೆ, ಕಸೂತಿ, ಕರಕುಶಲ ಕಲೆಯ ಪಾಠ ಆರಂಭಿಸಿದೆ. ಹಳೆಯ ಬಟ್ಟೆ, ದಿನಪತ್ರಿಕೆ, ರಟ್ಟುಗಳನ್ನು ಬಳಸಿಕೊಂಡು ಚೆಂದನೆಯ ಬ್ಯಾಗುಗಳು, ಬಾಕ್ಸ್‌ಗಳು ಮೊದಲಾದ ದಿನೋಪಯೋಗಿ ಸಾಮಗ್ರಿ ತಯಾರಿಸುವುದನ್ನು ಕಲಿಸಿಕೊಟ್ಟೆ. ಹೀಗೆ ತಯಾರಾದವುಗಳನ್ನು ಬೆಂಗಳೂರು ಮೊದಲಾದ ಕಡೆಗಳಲ್ಲಿ ನಡೆಯುವ ವಸ್ತುಪ್ರದರ್ಶನದಲ್ಲಿ ಮಾರಾಟ ಮಾಡಿದೆವು. ಇದರಿಂದ ಬಂದ ಹಣವೆಲ್ಲ ವಿದ್ಯಾರ್ಥಿನಿಯರ ಹೆಸರಿನ ‘ಗೋಲಕ’ ಸೇರಿತು. ಅದೇ ಹಣದಿಂದ ಮಕ್ಕಳು ಶಾಲೆಯ ಶುಲ್ಕ ಕಟ್ಟುವುದು ಸಾಧ್ಯವಾಯಿತು. ಇದರಿಂದ ಪ್ರೇರೇಪಣೆಗೊಂಡು ಇನ್ನಷ್ಟು ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ‘ಅಜ್ಜಿ ಮನೆ’ಯತ್ತ ಮುಖ ಮಾಡಿದರು’ ಎಂದು ತಮ್ಮ ಕಾರ್ಯದ ಬಗ್ಗೆ ವಿವರಿಸುತ್ತಾರೆ ಸಬಿಹಾ.

ಸಬಿಹಾ ಹಷ್ಮಿ

‘ಅಜ್ಜಿ ನಮ್ಮೂರಿನ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನನ್ನೂ ಒಳಗೊಂಡು ಅನೇಕ ಕುಟುಂಬಗಳಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೆರವು ನೀಡಿದ್ದಾರೆ. ಇದರಿಂದ ನಮ್ಮೂರಿನ ಹುಡುಗಿಯರು ಕಾಲೇಜು ಮೆಟ್ಟಿಲು ಹತ್ತಿ ಸ್ವಾವಲಂಬಿ ಆಗಲು ಸಾಧ್ಯವಾಗಿದೆ’ ಎನ್ನುತ್ತಾರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ.

ಗ್ರಾಮೀಣ ಮಹಿಳೆಯರ ಅನೇಕ ಸಮಸ್ಯೆಗಳಿಗೆ ಸಬಿಹಾ ಸ್ಪಂದಿಸುತ್ತಿದ್ದಾರೆ. ತಮ್ಮ ಸಹವರ್ತಿಗಳ ಜೊತೆಗೂಡಿ ಸುತ್ತಲಿನ ಮನೆಗಳಿಗೆ ಭೇಟಿನೀಡಿ ಮಕ್ಕಳಿಗೆ ಬಾಲ್ಯವಿವಾಹ ಮಾಡದಂತೆ ತಿಳಿವಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದುದನ್ನು ಕಂಡು ದಾನಿಗಳ ನೆರವಿನಿಂದ ತಮ್ಮ ಮನೆಯಲ್ಲೇ ಮಕ್ಕಳಿಗೆ ನಿತ್ಯ ಹಾಲು ನೀಡಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ ಕೊಡಿಸಿದ್ದಾರೆ.

ಕೋವಿಡ್ ಕಾರಣಕ್ಕೆ ಶಾಲೆಗಳು ಬಂದ್ ಆದಾಗ, ಇಲ್ಲಿನ ಮಕ್ಕಳು ಮೊಬೈಲ್ ಹಿಡಿದು ಸೀದಾ ಅಜ್ಜಿ ಮನೆಗೆ ಬಂದಿದ್ದಾರೆ. ಆನ್‌ಲೈನ್ ಕಲಿಕೆಗೆ ಬೇಕಾದ ಅಂತರ್ಜಾಲ ಸಂಪರ್ಕದ ಜೊತೆಗೆ ಅವರಿಗೆ ಅಗತ್ಯ ಮಾರ್ಗದರ್ಶನವೂ ಇಲ್ಲಿ ಸಿಕ್ಕಿದೆ. 72ರ ಇಳಿ ವಯಸ್ಸಿನಲ್ಲೂ ಸಬಿಹಾ ಅವರ ಉತ್ಸಾಹ ಮಾತ್ರ ಕುಗ್ಗಿಲ್ಲ. ಆರೋಗ್ಯದ ಸಮಸ್ಯೆ ನಡುವೆಯೂ ಮಕ್ಕಳಿಗಾಗಿ ಇನ್ನಷ್ಟು ಕೆಲಸ ಮಾಡಬೇಕು ಎನ್ನುವ ಕನಸು ಹೊತ್ತಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯ ಮೂಲಕ ಆರೋಗ್ಯಕರ ಜೀವನ ನಡೆಸುವ ಆಶಯ ಅವರದ್ದು.

ಸಬಿಹಾ ಅವರ ಸಂಪರ್ಕಕ್ಕೆ:99006 90411 ಅಥವಾ sabihashmi@yahoo.com.

ಕಲಿಕಾ ಕೇಂದ್ರ ನಿರ್ಮಾಣಕ್ಕೆ ಮುನ್ನುಡಿ
ಗ್ರಾಮೀಣ ಮಕ್ಕಳಿಗೆ ಉತ್ತಮ ಕಲಿಕೆ ವಾತಾವರಣ ನಿರ್ಮಿಸುವ ಜೊತೆಗೆ ವಿವಿಧ ತರಬೇತಿ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿ ಆಗಿಸುವ ಆಶಯ ಹೊತ್ತು ಜ್ಯೋತಿಪಾಳ್ಯದ ಹದ್ದಿನಕಲ್ಲು ಬೆಟ್ಟದ ತಪ್ಪಲಿನಲ್ಲಿ ‘ಅಜ್ಜಿಯ ಕಲಿಕಾ ಕೇಂದ್ರ’ ತಲೆ ಎತ್ತುತ್ತಿದೆ. ಈಗಾಗಲೇ ಇದರ ನಿರ್ಮಾಣ ಕಾಮಗಾರಿಯೂ ಆರಂಭ ಆಗಿದೆ. ಸುಸಜ್ಜಿತ ಗ್ರಂಥಾಲಯ ಹಾಗೂ ಸಂಶೋಧನಾ ಕೇಂದ್ರ ಇಲ್ಲಿರಲಿದೆ. ಜೊತೆಗೆ ಮಕ್ಕಳು ಹಾಗೂ ಯುವಜನರಿಗೆ ಕಂಪ್ಯೂಟರ್ ತರಬೇತಿ, ಚಿತ್ರಕಲೆ, ಕಸೂತಿ, ಕುಂಬಾರಿಕೆ ಮೊದಲಾದ ತರಬೇತಿ ನೀಡಲು ಯೋಜಿಸಲಾಗಿದೆ. ಮುಂದೆ ಇದನ್ನು ಕಲಾವಿದರ ವೇದಿಕೆಯಾಗಿಯೂ ರೂಪಿಸುವ ಆಶಯ ಸಬಿಹಾ ಅವರದ್ದು.

ಸಬಿಹಾ ತಮ್ಮ ಉಳಿತಾಯದ ಹಣದ ಜೊತೆಗೆ ದಾನಿಗಳ ನೆರವಿನಿಂದ ಇದನ್ನು ನಿರ್ಮಿಸುತ್ತಿದ್ದಾರೆ. ಅವರ ಸಹೋದರಿ ಶಬನಂ ಹಷ್ಮಿ ಈ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ. ಶೈಲೇಶ್‌ ಎಂಬ ಉತ್ಸಾಹಿ ವಾಸ್ತುಶಿಲ್ಪಿ ಇದರ ವಿನ್ಯಾಸ ಹಾಗೂ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.