ADVERTISEMENT

ಲಿಂಗತ್ವ ಅಲ್ಪಸಂಖ್ಯಾತರ ಸ್ಫೂರ್ತಿಯ ಕಥೆ: 'ನೋವು ಮೆಟ್ಟಿ ಬದುಕು ಕಟ್ಟಿ...'

ಮಂಜುಶ್ರೀ ಎಂ.ಕಡಕೋಳ
Published 7 ಜನವರಿ 2023, 19:30 IST
Last Updated 7 ಜನವರಿ 2023, 19:30 IST
ಬೋಬಿ ಕಿನ್ನರ್ (ಚಿತ್ರ: ಟ್ವಿಟ್ಟರ್‌)
ಬೋಬಿ ಕಿನ್ನರ್ (ಚಿತ್ರ: ಟ್ವಿಟ್ಟರ್‌)   

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವವರು, ರೈಲಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಚಪ್ಪಾಳೆ ತಟ್ಟಿ ಗಲಿಬಿಲಿ ಮಾಡುವವರು, ಟೋಲ್‌ಗೇಟ್‌ಗಳಲ್ಲಿ ಕೈ ಅಡ್ಡ ಹಾಕಿ ಬರ್ತೀಯಾ ಅನ್ನುವವರು, ಮಂಗಳ ಕಾರ್ಯಗಳಲ್ಲಿ ನರ್ತಿಸುವವರು... ಹೀಗೆ ನಾನಾ ರೀತಿಯಲ್ಲಿ ಗುರ್ತಿಸಿಕೊಂಡಿರುವವರು ಲಿಂಗತ್ವ ಅಲ್ಪಸಂಖ್ಯಾತರು. ‘ನಮಗೆ ಯಾರ್ ಕೆಲ್ಸ ಕೊಡ್ತಾರೆ? ಕೊಟ್ಟರೂ ಮನುಷ್ಯರಂತೆ ನಡೆಸಿಕೊಳ್ತಾರಾ? ನಿಮ್ಮಂತೆ ಕಾಣ್ತಾರಾ?’ ಅವರು ಕೇಳುವ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗಲಾರದು. ಅದಕ್ಕೆ ಅವರೇ ಉತ್ತರ ಕಂಡುಕೊಳ್ಳುವವರಂತೆ ಲಿಂಗ ಬದಲಾವಣೆಯ ಸತ್ಯವನ್ನು ಒಪ್ಪಿಕೊಂಡೇ, ನೋವನ್ನು ಮೆಟ್ಟಿ ಘನತೆಯ ಬದುಕನ್ನು ಕಟ್ಟಿಕೊಂಡವರು ಅನೇಕರು. ‘ಕಾಯಕವೇ ಕೈಲಾಸ’ ಎಂದು ನಂಬಿಕೊಂಡ ಇವರು ಹಲವರಿಗೆ ಸ್ಫೂರ್ತಿಯಾದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಮಂಜುಶ್ರೀ ಎಂ. ಕಡಕೋಳ.

***

ಸುಲ್ತಾನ್‌ಪುರಿಯ ಅಚ್ಚರಿ ಬೋಬಿ
ಈಚೆಗಷ್ಟೇ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಬಿಜೆಪಿಯ 15 ವರ್ಷಗಳ ದಾಖಲೆ ಮುರಿದದ್ದು ತಿಳಿದಿರುವಂಥದ್ದೇ. ಆದರೆ, ಅದರ ಜೊತೆಗೆ ಎಎಪಿ ಮತ್ತೊಂದು ಅಚ್ಚರಿಯನ್ನೂ ನೀಡಿದೆ. ಮೊದಲ ಬಾರಿಗೆ ಪಕ್ಷದಿಂದ ಟಿಕೆಟ್ ನೀಡಿದ್ದ ಲಿಂಗತ್ವ ಅಲ್ಪಸಂಖ್ಯಾತೆ ಬೋಬಿ ಕಿನ್ನರ್ ಜಯಗಳಿಸಿದ್ದು, ಆ ಸಮುದಾಯದತ್ತ ಕಣ್ಣರಳಿಸುವಂತೆ ಮಾಡಿದೆ.

ADVERTISEMENT

ಲಿಂಗತ್ವ ಅಲ್ಪಸಂಖ್ಯಾತಳು ಎನ್ನುವ ಕಾರಣಕ್ಕಾಗಿ 9ನೇ ತರಗತಿಗೇ ಶಾಲೆ ಬಿಟ್ಟಿದ್ದ ಬೋಬಿ, 15ನೇ ವರ್ಷಕ್ಕೆ ಕುಟುಂಬವನ್ನೂ ತೊರೆದವರು. ಮದುವೆ ಸೇರಿದಂತೆ ಇತರ ಶುಭ ಸಮಾರಂಭಗಳಲ್ಲಿ ನರ್ತಿಸುತ್ತಾ ಹೊಟ್ಟೆಪಾಡು ಸಾಗಿಸುತ್ತಿದ್ದ ಅವರು, ಎನ್‌ಜಿಒವೊಂದರ ಸಂಪರ್ಕಕ್ಕೆ ಬಂದರು. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ ಸೇರಿದ ಬೋಬಿಗೆ ಅಲ್ಲಿ ಅರವಿಂದ ಕೇಜ್ರಿವಾಲ್ ಪರಿಚಯವಾಯಿತು. ಪರಿಚಯ ಎಎಪಿಯೊಂದಿಗೆ ರಾಜಕೀಯ ನಂಟು ಬೆಸೆಯಿತು. ದುಡಿದ ಹಣವನ್ನು ಬಡಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದ ಬೋಬಿ, 2017ರಲ್ಲೇ ಚುನಾವಣೆಗೆ ಸ್ಪರ್ಧಿಸಿದರಾದರೂ ಮೊದಲ ಅನುಭವ ಕಹಿಯಾಗಿಯೇ ಉಳಿಯಿತು. ಧೃತಿಗೆಡೆದ ಬೋಬಿ ತಮ್ಮ ಕ್ಷೇತ್ರ ಸುಲ್ತಾನ್‌ಪುರಿಯ ಅಭಿವೃದ್ಧಿಗೆ ಪಣತೊಟ್ಟರು. ಅದರ ಪ್ರತಿಫಲವೇ ಈ ಬಾರಿಯ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದೊರೆತ ಗೆಲುವು. ಬಡಮಕ್ಕಳಷ್ಟೇ ಅಲ್ಲ ತಮ್ಮ ಸಮುದಾಯದ ಸಂಘಟನೆ ಮತ್ತು ಕಲ್ಯಾಣಕ್ಕಾಗಿ ದುಡಿಯುತ್ತಿರುವ ಬೋಬಿ ತಮ್ಮ ಕ್ಷೇತ್ರದ ಜನರ ನೆಚ್ಚಿನ ನಾಯಕಿಯಾಗಿದ್ದಾರೆ.

ಪ್ರಿನ್ಸಿಪಾಲ್ ಮಾನವಿ
ಪಶ್ಚಿಮ ಬಂಗಾಳದವರಾದ ಮಾನವಿ ಬಂಡೋಪಾಧ್ಯಾಯ ಗಂಡಾಗಿ ಹುಟ್ಟಿ, ಬೆಳೆಯುತ್ತಾ ಹೆಣ್ಣಾದವರು. ಲಿಂಗ ಪರಿವರ್ತನೆಯ ಹಾದಿಯಲ್ಲಿ ಅನುಭವಿಸಿದ ನೋವುಗಳು ಒಂದಲ್ಲ, ಎರಡಲ್ಲ. ಬಾಲ್ಯದಲ್ಲೇ ಸೋದರ ಸಂಬಂಧಿಯೊಬ್ಬರಿಂದ ಲೈಂಗಿಕವಾಗಿ ಶೋಷಣೆಗೊಳಗಾದ ಮಾನವಿ, ತಮ್ಮೊಳಗಿನ ತೊಳಲಾಟಗಳಿಗೆ ಓದಿನ ಮೂಲಕ ಪರಿಹಾರ ಕಂಡುಕೊಂಡವರು. ಮನೋ–ದೈಹಿಕ ಬದಲಾವಣೆಗಳ ನಡುವೆಯೇ ಉನ್ನತ ಶಿಕ್ಷಣ ಪಡೆದು ಶಿಕ್ಷಕ ವೃತ್ತಿಗೆ ಸೇರಿದರೂ ಅಲ್ಲಿಯೂ ಬೆಂಬಿಡದ ನೋವು, ಅವಮಾನ, ಕೀಳರಿಮೆ.

ಎಂ.ಎ ಪಿಎಚ್‌.ಡಿ ಪದವೀಧರರಾದ ಮಾನವಿ, ಪಶ್ಚಿಮ ಬಂಗಾಳದ ಕೃಷ್ಣಗಢದ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಗೆ ಬಡ್ತಿ ಪಡೆದದ್ದು ಕೂಡಾ ಹೋರಾಟದ ಮೂಲಕವೇ. ದೇಶದ ಮೊದಲ ಟ್ರಾನ್ಸ್‌ಜೆಂಡರ್ ಪ್ರಿನ್ಸಿಪಾಲ್ ಎಂದೇ ಗುರುತಾಗಿರುವ ಮಾನವಿ ಉತ್ತಮ ನೃತ್ಯಗಾರ್ತಿ ಕೂಡಾ. ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಕೆಲಕಾಲ ‘ಅಪೂರ್ಣ ಮಾನವ’ ಎಂಬ ಪತ್ರಿಕೆಯನ್ನೂ ಹೊರತಂದಿರುವ ಅವರು, ಸಮುದಾಯದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಎ ಗಿಫ್ಟ್ ಆಫ್ ಗಾಡೆಸ್ಸೆಸ್‌ ಲಕ್ಷ್ಮಿ’ ಹೆಸರಿನಲ್ಲಿ ಆತ್ಮಕಥನವನ್ನು ಬರೆದಿದ್ದಾರೆ.

ಸರ್ಕಾರಿ ಉದ್ಯೋಗದ ಬೆನ್ಹತ್ತಿ....
ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪಡೆದು ಮೊದಲ ಲಿಂಗತ್ವ ಅಲ್ಪಸಂಖ್ಯಾತೆಯಾಗಿರುವ ಮೋನಿಷಾ ಅವರ ಬದುಕು ಅನೇಕರಿಗೆ ಸ್ಫೂರ್ತಿ. ಹೆಣ್ಣಾಗುವ ಆಸೆಯನ್ನು ಅದುಮಿಡಲಾಗದೇ ಶಾಲೆಯ ನಾಟಕಗಳಲ್ಲಿ ಸ್ತ್ರೀಪಾತ್ರ ಮಾಡಿದಾಗ ಮನೆಯವರ ತಿರಸ್ಕಾರಕ್ಕೊಳಗಾದರು. ಇಂದಲ್ಲ ನಾಳೆ ಮಗ ರಾಮು (ಮೂಲಹೆಸರು) ಸರಿಹೋದಾನು ಎಂಬ ಕುಟುಂಬದ ಭರವಸೆ ನಿಜವಾಗಲಿಲ್ಲ. ಎಸ್ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಅಪ್ಪನಿಂದ ಬೆತ್ತದೇಟಿನ ರುಚಿ ಕಂಡು ಮನೆ ಬಿಟ್ಟು ಹೊರಟ ಮೋನಿಷಾ ಸೇರಿದ್ದು ತಮ್ಮದೇ ಸಮುದಾಯದವರಿದ್ದ ಮುಂಬೈಗೆ. ಅಲ್ಲಿ ದುಡಿದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಬಳಿಕ ಬೆಂಗಳೂರಿಗೆ ಹಿಂತಿರುಗಿದಾಗ ಕುಟುಂಬದರಿಂದ ಮತ್ತೆ ತಿರಸ್ಕಾರ. ಉದ್ಯೋಗಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ವಿವಿಧೆಡೆ ಅಲೆದಾಟ. ಅಂದಿನ ಜಿಲ್ಲಾಧಿಕಾರಿ ಶಂಕರ್ ಅವರ ಸಹಾಯದಿಂದ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದ ಮೋನಿಷಾ, ತಾವು ಹುಟ್ಟಿಬೆಳೆದ ಇಂದಿರಾನಗರದ ಸಮೀಪದಲ್ಲಿನ ಕೊಳೆಗೇರಿಯಲ್ಲಿ ಬಟ್ಟೆ ವ್ಯಾಪಾರ ಶುರು ಮಾಡಿದರು.

ಲಿಂಗ ಪರಿವರ್ತನೆಯಾಗಿದ್ದರೂ ಶೈಕ್ಷಣಿಕ ದಾಖಲಾತಿಗಳಲ್ಲಿ ‘ರಾಮು’ ಆಗಿದ್ದ ಮೋನಿಷಾ, ದಾಖಲಾತಿಗಳನ್ನು ಸರಿಪಡಿಸಿಕೊಂಡು ವಿಧಾನಪರಿಷತ್‌ನ ಸಚಿವಾಲಯದಲ್ಲಿ ‘ಡಿ’ ಗ್ರೂಪ್‌ ಹುದ್ದೆಗೆ ಹಾಕಿದ ಅರ್ಜಿಯು ಫಲ ನೀಡಲಿಲ್ಲ. ವಕೀಲರೊಬ್ಬರ ಪರಿಚಯದಿಂದ ಕಾನೂನಾತ್ಮಕವಾಗಿ ತಮ್ಮ ಹಕ್ಕು ಪ್ರತಿಪಾದಿಸಬೇಕೆಂಬ ಅರಿವು ಮೂಡಿದ್ದೇ ತಡ, ಲಿಂಗತ್ವ ಅಲ್ಪಸಂಖ್ಯಾತರಿಗೂ ಸರ್ಕಾರಿ ನೌಕರಿಯಲ್ಲಿ ಮೀಸಲು ನೀಡುವ ಬೇಡಿಕೆಯನ್ನು ಪರಿಗಣಿಸಬೇಕು ಎಂದು 2014ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೆರವಿಗೆ ಬಂತು. ಅದೇ ಸಮಯಕ್ಕೆ ವಿಧಾನಸಭೆಯಲ್ಲಿ ನಟಿ ತಾರಾ ಅನೂರಾಧ ಅವರ ವಾದವೂ ಮೋನಿಷಾ ಅವರಿಗೆ ಬೆಂಬಲ ನೀಡಿತು. ಹೈಕೋರ್ಟ್ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ, ಮೋನಿಷಾ ಅವರಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಿತು. ಪ್ರಸ್ತುತ ನೌಕರಿಯನ್ನು ಕಾಯಂಗೊಳಿಸಿಕೊಂಡ ಮೋನಿಷಾ ತಮ್ಮಂತಿರುವ ಇತರರಿಗೆ ಮಾದರಿಯಾಗಿದ್ದಾರೆ.

ಬಹುರೂಪಿ ಕಲ್ಕಿ
‘ಬಾಲ್ಯದಲ್ಲಿ ತುಂಬಾ ನೋವು ಅನುಭವಿಸಿಬಿಟ್ಟೆ. ಆದರೆ, ಅಪ್ಪ–ಅಮ್ಮ ನನ್ನನ್ನು ನಾನಿರುವಂತೆಯೇ ಒಪ್ಪಿಕೊಂಡರು. ನನ್ನ ಸಮುದಾಯದವರನ್ನು ಅವರ ಹೆತ್ತವರು ಹೀಗೆ ಒಪ್ಪಿಕೊಂಡಿದ್ದರೆ ಇಂದು ಅವರು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿರಲಿಲ್ಲ’ ಎಂದು ಗದ್ಗದಿತವಾಗಿ ನುಡಿಯುತ್ತಾರೆ ಕಲ್ಕಿ ಸುಬ್ರಹ್ಮಣ್ಯ. ಲಿಂಗತ್ವದ ಬದಲಾವಣೆ ಭವಿಷ್ಯಕ್ಕೆ ಮಂಕಾಗಬಾರದು ಎಂಬ ಪ್ರಜ್ಞೆಯಲ್ಲೇ ಬೆಳೆದ ತಮಿಳುನಾಡಿನ ಕಲ್ಕಿ, ಉನ್ನತ ಶಿಕ್ಷಣ ಪಡೆದವರು. ಅಷ್ಟೇ ಅಲ್ಲ, ಉತ್ತಮ ಚಿತ್ರಕಲಾವಿದೆಯೂ ಆದರು. ಲಿಂಗತ್ವ ಅಲ್ಪಸಂಖ್ಯಾತರ ಪರ ಸಂಘಟಿತವಾಗಿ ಕೆಲಸ ಮಾಡುತ್ತಿರುವ ಕಲ್ಕಿ, ತಮಿಳು ಮತ್ತು ಇಂಗ್ಲಿಷಿನಲ್ಲಿ ಕವಿತೆಗಳನ್ನೂ ಬರೆದಿದ್ದಾರೆ.

ಇಂಗ್ಲಿಷಿನಲ್ಲಿ ಐದು, ತಮಿಳಿನಲ್ಲಿ ಒಂದು ಕವನ ಸಂಕಲವನ್ನು ಹೊರತಂದಿದ್ದಾರೆ. ಸಿನಿಮಾಗಳಲ್ಲಿ ತಮ್ಮ ಸಮುದಾಯದವರನ್ನು ತಮಾಷೆಯಾಗಿ ಚಿತ್ರೀಕರಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಕಲ್ಕಿ, ‘ನರ್ತಕಿ’ ಎನ್ನುವ ಆಫ್‌ಬೀಟ್ ಸಿನಿಮಾದಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಮದ್ರಾಸ್‌ ಐಐಟಿ, ಜಿಂದಾಲ್‌ ಗ್ಲೋಬಲ್ ಲಾ ಸ್ಕೂಲ್‌ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ. ‘ವಿ ಆರ್ ನಾಟ್ ಅದರ್ಸ್‌’ ಕೃತಿ ಈಚೆಗಷ್ಟೇ ಬಿಡುಗಡೆಯಾಗಿದೆ. ‘ಸಹೋದರಿ’ ಫೌಂಡೇಷನ್ ಸ್ಥಾಪಿಸಿರುವ ಕಲ್ಕಿ ಅದರ ಮೂಲಕ ತಮ್ಮ ಸಮುದಾಯದವರ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.

ಗಣೇಶನಿಂದ ‘ಗೌರಿ’ಯವರೆಗೆ
‘ತಾಯ್ತನ’ಕ್ಕೆ ಜೈವಿಕ ನೆಲೆಯೊಂದೇ ಕಾರಣವಲ್ಲ ಎಂಬುದನ್ನು ಸಾಬೀತುಪಡಿಸಿದವರು ಮುಂಬೈನ ಗೌರಿ ಸಾವಂತ್. ಗಣೇಶನಾಗಿ ಹುಟ್ಟಿದ ಗೌರಿಗೆ ತಾನು ಅವನಲ್ಲ ಅವಳು ಎಂಬುದು ಅರಿವಿಗೆ ಬಂದದ್ದು ಬಾಲ್ಯದಲ್ಲೇ. ಮಗನಾಗಿ ಹುಟ್ಟಿದ ‘ಗೌರಿ’ಯನ್ನು ಹೆತ್ತಪ್ಪ ಒಪ್ಪಿಕೊಳ್ಳಲಿಲ್ಲ. ಕಿಸೆಯಲ್ಲಿ ಕೇವಲ 60 ರೂಪಾಯಿ ಇಟ್ಟುಕೊಂಡು 17ನೇ ವರ್ಷಕ್ಕೆ ಮನೆ ಬಿಟ್ಟ ಗೌರಿ ಸೇರಿದ್ದು ಮುಂಬೈ ಎಂಬ ಮಹಾನಗರಿಯನ್ನು. ಸೀರೆ ಉಡುವ ಕನಸು ನನಸು ಮಾಡಿಕೊಂಡು ‘ಹಮ್‌ ಸಫರ್’ ಟ್ರಸ್ಟ್‌ನಲ್ಲೇ ಕೆಲಸ ಮಾಡಿಕೊಂಡು ಮೊದಲ ಸಂಬಳವನ್ನೂ ಪಡೆದರು. ತಮ್ಮಂತೆ ಮನೆ ತೊರೆದು ಬರುವವರಿಗೆ ಸ್ಥೈರ್ಯ ತುಂಬಲಿಕ್ಕಾಗಿಯೇ ‘ಸಖಿ ಚಾರ್‌ ಚೌಘಿ’ ಟ್ರಸ್ಟ್ ಸ್ಥಾಪಿಸಿದರು.

‘ಗೌರಿ’ಯಾದ ಮೇಲೆ ತಾಯ್ತನದ ತುಡಿತ ಮತ್ತಷ್ಟು ಹೆಚ್ಚಾಯಿತು. ಭಾವ ಹೆಣ್ಣಾದರೂ ದೇಹ ಗಂಡಾದ್ದರಿಂದ ಜೈವಿಕ ತಾಯ್ತನ ಸಾಧ್ಯವಿರಲಿಲ್ಲ. ಮಗು ದತ್ತು ಪಡೆಯಲು ಕಾನೂನಿನ ನಾನಾ ಸಂಕಷ್ಟ. ಸುದೀರ್ಘ ಹೋರಾಟದ ಬಳಿಕ ಗೆಲುವು ಪಡೆದ ಗೌರಿ ಈಗ ‘ಗಾಯತ್ರಿ’ ಎಂಬ ಮುದ್ದಾದ ಹೆಣ್ಣುಮಗುವಿನ ತಾಯಿ. ಗೌರಿಯ ಹೋರಾಟಕ್ಕೆ ಸರ್ಕಾರದಿಂದಲೂ ಮೆಚ್ಚುಗೆ. ಮಹಾರಾಷ್ಟ್ರ ಚುನಾವಣಾ ಆಯೋಗದ ರಾಯಭಾರಿಯಾಗುವ ಗೌರವ. ತಾಯಿ–ಮಗಳ ಬಾಂಧ‌ವ್ಯ ಸಾರುವ ‘ವಿಕ್ಸ್‌’ ಜಾಹೀರಾತಿನಲ್ಲೂ ಅವಕಾಶ. ಗೌರಿಯ ಜೀವನಗಾಥೆ ಆಧರಿಸಿ ಬರುತ್ತಿರುವ ‘ತಾಲಿ’ (ಚಪ್ಪಾಳೆ) ಬಯೋಪಿಕ್‌ನ ವೆಬ್‌ಸಿರೀಸ್‌ನಲ್ಲಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ‘ಗೌರಿ’ಯಾಗಿ ಕಿರುತೆರೆಗೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.