ADVERTISEMENT

ಅಂಕೋಲಾದ ಮಹಾಲೆ ಗಣಪತಿಗಿದೆ ಸ್ವಾತಂತ್ರ್ಯ ಸಂಗ್ರಾಮದ ನಂಟು!

ಅಂಕೋಲಾದ ‘ಮಹಾಲೆ’ ಮನೆತನದಲ್ಲಿ ಪೂಜಿಸಲಾಗುವ ವಿನಾಯಕನಿಗೆ ವಿಶೇಷ ಮಹತ್ವ

ಸದಾಶಿವ ಎಂ.ಎಸ್‌.
Published 9 ಸೆಪ್ಟೆಂಬರ್ 2021, 15:37 IST
Last Updated 9 ಸೆಪ್ಟೆಂಬರ್ 2021, 15:37 IST
ಅಂಕೋಲಾದ ಕಾಕರಮಠದಲ್ಲಿ ವಸಂತ ಮಹಾಲೆ ಅವರು ತಮ್ಮ ಮನೆಯ ಆವರಣದಲ್ಲಿ ಗಣಪತಿಯ ಮಣ್ಣಿನ ವಿಗ್ರಹ ತಯಾರಿಸುತ್ತಿರುವುದು
ಅಂಕೋಲಾದ ಕಾಕರಮಠದಲ್ಲಿ ವಸಂತ ಮಹಾಲೆ ಅವರು ತಮ್ಮ ಮನೆಯ ಆವರಣದಲ್ಲಿ ಗಣಪತಿಯ ಮಣ್ಣಿನ ವಿಗ್ರಹ ತಯಾರಿಸುತ್ತಿರುವುದು   

ಕಾರವಾರ: ಇಲ್ಲಿ ಗಣಪತಿ ವಿಗ್ರಹ ತಯಾರಿಸಲು ಮಣ್ಣು ಹದ ಮಾಡುವಷ್ಟರಲ್ಲೇ ಹರಕೆಗಳು ಸಲ್ಲಿಕೆಯಾಗುತ್ತವೆ. ದೂರ ಊರುಗಳಿಂದ ಭಕ್ತರು ಬಂದು ಅರಿಕೆ ಮಾಡಿಕೊಳ್ಳುತ್ತಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೂ ಈ ಜಿಲ್ಲೆಗೂ ಇರುವ ನಂಟಿಗೆ ಕೊಂಡಿಯಂತೆ ಉತ್ಸವ ನಡೆಯುತ್ತದೆ...

ಇದು ಅಂಕೋಲಾ ಪಟ್ಟಣದ ಕಾಕರಮಠದಲ್ಲಿ ಪ್ರತಿವರ್ಷ ಚೌತಿ ಹಬ್ಬದ ಸಂದರ್ಭದಲ್ಲಿ ಪೂಜಿಸಲಾಗುವ ‘ಮಹಾಲೆ ಗಣಪತಿ’ಯ ಹೆಗ್ಗಳಿಕೆ. ಮನೆತನವೊಂದರ ಹೆಸರಿನಿಂದಲೇ ಪ್ರಸಿದ್ಧವಾಗಿದ್ದು, ಕುಟುಂಬದ ಕಾರ್ಯಕ್ರಮವಾದರೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತದೆ. ಆದರೆ, ಈ ಬಾರಿಯೂ ಕಾರಣಾಂತರಗಳಿಂದ ಆಚರಣೆಯನ್ನು ಮುಂದೂಡಲಾಗಿದೆ.

1924ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಈ ಗಣೇಶೋತ್ಸವವು ಹೋರಾಟದ ರೂಪರೇಷೆಗಳ ಚರ್ಚೆಗೆ ವೇದಿಕೆಯಾಗಿತ್ತು. ಹೋರಾಟದಲ್ಲಿ ಏನೇನಾಯಿತು ಎಂಬ ಮಾಹಿತಿಗಳು ಹಂಚಿಕೆಯಾಗುತ್ತಿದ್ದವು. ಅಂದು ಆರಂಭವಾದ ಗಣೇಶೋತ್ಸವ ಇಂದಿಗೂ ಮುಂದುವರಿದಿದೆ ಎನ್ನುತ್ತಾರೆ 80 ವರ್ಷ ಪ್ರಾಯದ ವಸಂತ ಮಹಾಲೆ.

ADVERTISEMENT

ಈಗ ಅವರೇ ಉತ್ಸವವನ್ನು ಮುನ್ನಡೆಸುತ್ತಿದ್ದು, ಚೌತಿ ಹಬ್ಬಕ್ಕಿಂತ ಒಂದೂವರೆ ತಿಂಗಳು ಮುಂಚಿತವಾಗಿ ವಿಘ್ನೇಶ್ವರನ ವಿಗ್ರಹ ಸಿದ್ಧಪಡಿಸಲು ಆರಂಭಿಸುತ್ತಾರೆ. ಎಂಟು, ಹತ್ತು ಅಡಿಗಳೆತ್ತರದ ಆರಾಧನಾ ಮೂರ್ತಿಗೆ ಜೀವಂತಿಕೆ ತುಂಬುತ್ತಾರೆ.

‘ಈ ಗಣಪನಿಗೆ ಹರಕೆ ಹೇಳಿಕೊಂಡರೆ ಎಂಥ ಕಠಿಣ ಸವಾಲುಗಳಿದ್ದರೂ ಪರಿಹಾರವಾಗುತ್ತದೆ ಎಂಬುದು ಹಲವರ ನಂಬಿಕೆ. ಹಾಗಾಗಿ ಮೂರ್ತಿ ತಯಾರಿಸುವ ಮೊದಲ ದಿನದಿಂದಲೇ ಭಕ್ತರು ಸಂಪರ್ಕಿಸುತ್ತಾರೆ. ಚೌತಿಯ 11 ದಿನ ಪೂಜೆಗೊಳ್ಳುವಾಗ ಮನೆಯಂಗಳವು ದೇವಸ್ಥಾನದಂತೆ ಬದಲಾಗುತ್ತದೆ. ಹರಕೆಯ ರೂಪದಲ್ಲಿ ಬಂಗಾರದ ಕಿರೀಟ, ಉಂಗುರ, ಸೊಂಟದ ಡಾಬು ಮುಂತಾದವುಗಳನ್ನು ಭಕ್ತರು ಅರ್ಪಿಸಿದ್ದಾರೆ’ ಎಂದು ವಸಂತ ಮಹಾಲೆ ಮುಗುಳ್ನಗುತ್ತಾರೆ.

ಈ ಹಿಂದೆ ಅವರು ರೂಪು ನೀಡಿದ ಗಣಪತಿಯ ವಿಗ್ರಹಗಳನ್ನು ಭದ್ರಾವತಿ, ದಾವಣಗೆರೆ, ಕಾರವಾರದಲ್ಲಿ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪೂಜಿಸಲಾಗುತ್ತಿತ್ತು. ದಶಕಗಳ ಹಿಂದೆ ಭದ್ರಾವತಿಗೆ ಬಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸನ್ಮಾನಿಸಿದ್ದನ್ನು ಅಭಿಮಾನದಿಂದ ಸ್ಮರಿಸುತ್ತಾರೆ. ತಮ್ಮ ತಂದೆ ಪುಂಡಲೀಕ ಮಹಾಲೆ ಅವರ ಕಾಲದಲ್ಲಿ ವಿಗ್ರಹದ ಮೆರವಣಿಗೆಗೆ ಅಂದಿನ ಬ್ರಿಟಿಷ್ ಸರ್ಕಾರವು ಪೊಲೀಸರಿಂದ ವಿಶೇಷ ಭದ್ರತೆ ಒದಗಿಸಿತ್ತು ಎಂದೂ ನೆನಪಿಸಿಕೊಳ್ಳುತ್ತಾರೆ.

ಬಹುಮುಖ ಪ್ರತಿಭೆ:ಅರ್ಥಶಾಸ್ತ್ರದಲ್ಲಿ ಪದವೀಧರರಾಗಿರುವ ವಸಂತ ಮಹಾಲೆ, ಅಜ್ಜ, ತಂದೆಯಿಂದ ಬಳುವಳಿಯಾಗಿ ಬಂದ ಕಲಾ ಸೇವೆಯನ್ನು ವೃತ್ತಿಯಾಗಿ ಸ್ವೀಕರಿಸಿದರು. ಅದಕ್ಕೂ ಮೊದಲು ಶಿಕ್ಷಕರಾಗಿ, ಆರೋಗ್ಯ ಇಲಾಖೆಯಲ್ಲಿ ಮಲೇರಿಯಾ ನಿರ್ಮೂಲನಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ರಂಗಭೂಮಿ, ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. 120ಕ್ಕೂ ಅಧಿಕ ನಾಟಕಗಳಲ್ಲಿ ಪ್ರಮುಖ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ.

‘ತುಘಲಕ್’, ‘ಮನೆ ಮಾಲೀಕ’, ‘ರಕ್ತ ದೀಪ’, ‘ಒಂದು ಕತ್ತೆಯ ಕಥೆ’, ‘ಪೊಲೀಸರಿದ್ದಾರೆ’ ನಾಟಕಗಳು ಹೆಚ್ಚು ಹೆಸರು ತಂದುಕೊಟ್ಟವು. ಕನ್ನಡದಲ್ಲಿ ‘ಅಬಲೆ’ ಎಂಬ ಚಲನಚಿತ್ರದಲ್ಲಿ ಪ್ರಾಣ ಪೂಜಾರ್ ಎಂಬ ಪಾತ್ರವನ್ನು ನಿರ್ವಹಿಸಿದ್ದೆ. ಅದೇ ಸಿನಿಮಾ ಹಿಂದಿಯಲ್ಲಿ ‘ಅಚಲಾ’ ಎಂದು ತೆರೆ ಕಂಡಿತ್ತು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಗಿರೀಶ ಕಾಸರವಳ್ಳಿ ನಿರ್ಮಿಸಿದ ‘ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ’ ಸಾಕ್ಷ್ಯಚಿತ್ರದಲ್ಲಿ ಸತ್ಯಾಗ್ರಹಿಯಾಗಿ ನಟಿಸಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಕೂಡ ಪಾಲ್ಗೊಂಡಿದ್ದಾರೆ. ಅವರ ಬಹುಮುಖ ಪ್ರತಿಭೆಗೆ ಹತ್ತಾರು ಗೌರವಗಳು, ಸನ್ಮಾನಗಳು, ಪ್ರಶಸ್ತಿಗಳು ಪ್ರದಾನವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.