ADVERTISEMENT

ಮಳೆ ನೆನಪಿನ ಹನಿಗಳು: ಗಾಯಕಿ ಅರ್ಚನಾ ಉಡುಪ ನೆನಪುಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:30 IST
Last Updated 15 ಜುಲೈ 2022, 19:30 IST
ಅರ್ಚನಾ ಉಡುಪ
ಅರ್ಚನಾ ಉಡುಪ   

ಮಳೆಗಾಲದ ಹನಿಗಳು ಒಬ್ಬೊಬ್ಬರಿಗೆ ಒಂದೊಂದು ತರಹ. ಬೆಳ್ಳಿ ತೆರೆಯ ಮೇಲೆ ಮಳೆಯಲ್ಲಿ ನೆನೆದವರು, ತಮ್ಮ ಬದುಕಿನ ಮಳೆಯಲ್ಲಿ ಮಿಂದದ್ದು ಹೇಗೆಲ್ಲಾ ಇದೆ. ಬಣ್ಣ, ಬೆಳಕಿನಾಚೆಯ ನಿಜಮಳೆಯ ಸೊಬಗು, ಬದುಕಿನ ಅರ್ಥ ಕಲಿಸಿದ ಮಳೆಯ ಪಾಠಗಳ ಪುಟ್ಟ ಝರಿ ಇಲ್ಲಿದೆ. ನಿಮ್ಮಲ್ಲೂ ಇಂಥ ಕಥೆಗಳಿರಬಹುದಲ್ವಾ... ಓದುತ್ತಾ ನೆನಪಿಸಿಕೊಳ್ಳಿ

ನನ್ನೂರು ಚಂದದ ಬಿದನೂರು ನಗರದ ನೆನಪಾದೊಡನೆ ಕಣ್ಣೆದುರು ಸಿನಿಮಾದಂತೆ ಪ್ಲೇ ಆಗಲು ಶುರುವಾಗುವುದು ನನ್ನ ಅಚ್ಚುಮೆಚ್ಚಿನ ಮಳೆಗಾಲದ ಸಮಯ.

ನನ್ನ ಬಾಲ್ಯದ 8 ಅಮೂಲ್ಯ ವರ್ಷಗಳನ್ನು ಬಿದನೂರು ನಗರದ ಪರಿಶುದ್ಧ ವಾತಾವರಣದಲ್ಲಿ ಕಳೆಯಲು ಸಾಧ್ಯವಾಗಿದ್ದು ನನ್ನ ಪುಣ್ಯವೇ ಸರಿ. ಪ್ರತಿ ವರ್ಷವೂ ನಾನು ಮಳೆರಾಯನ ಬರುವಿಕೆಗಾಗಿ ಕಾಯುತ್ತಿದ್ದೆ. ಮಲೆನಾಡಿನಲ್ಲಿ ಒಮ್ಮೆ ಮಳೆ ಹಿಡಿಯಿತೆಂದರೆ ಮುಗಿಯಿತು. 24 ಗಂಟೆಯೂ ಧೋ... ಎಂದು ಒಂದೇ ಸಮನೆ ಸುರಿಯುತ್ತಿತ್ತು. ರಾತ್ರಿ ಹೊತ್ತು ನನಗೆ ಲಾಲಿ ಹಾಡಿ ಮಲಗಿಸುತ್ತಿದ್ದದ್ದು ಮಳೆಯೇ. ಬೆಳಿಗ್ಗೆ ಮೆಲ್ಲಗೆ ತಲೆ ಸವರಿ ಎಬ್ಬಿಸುತ್ತಿದ್ದದ್ದೂ ಮಳೆಯೇ. ಎಚ್ಚರವಾದ ಮೇಲೂ ಮಳೆಯ ಲಯಬದ್ಧ ಸಂಗೀತವನ್ನು ಆಲಿಸುತ್ತಾ ರಗ್ಗನ್ನು ಕುತ್ತಿಗೆಯವರೆಗೂ ಎಳೆದುಕೊಂಡು ಬೆಚ್ಚಗೆ ಇನ್ನಷ್ಟು ಹೊತ್ತು ಮಲಗುವುದರಲ್ಲಿರುವ ಮಜವೇ ಬೇರೆ. ಆ ಮೇಲೆ ಅಪ್ಪ ಬಂದು ಮುದ್ದಿಸಿ ಎಬ್ಬಿಸಿ ಸ್ನಾನಕ್ಕೆ ಕಳುಹಿಸುತ್ತಿದ್ದರು.

ADVERTISEMENT

ನನ್ನ ಸ್ನಾನದ್ದೋ ಇನ್ನೊಂದು ಕತೆ. ನಾನು ಸ್ನಾನಕ್ಕೆ ಹೋದೆನೆಂದರೆ ಮನೆಯವರೆಲ್ಲಾ, ‘ಓಹೋ ಆನೆ ಹೊಂಡಕ್ಕೆ ಹೋಯಿತು. ಇನ್ನು ಸದ್ಯಕ್ಕೆ ಆಚೆ ಬರುವುದಿಲ್ಲ ಬಿಡು’ ಎಂದು ತಮಾಷೆ ಮಾಡುತ್ತಿದ್ದರು. ನನ್ನಜ್ಜ ಒಲೆಯೊಳಗೆ ಕಟ್ಟಿಗೆ ತುಂಬಿಸಿ, ಉರಿ ಮಾಡಿ, ದೊಡ್ಡ ಹಂಡೆಯ ತುಂಬಾ ಬಿಸಿಬಿಸಿಯಾದ ನೀರು ತುಂಬಿಸಿ ಇಟ್ಟಿರುತ್ತಿದ್ದರು. ಮೊದಲು ಆ ಒಲೆಯ ಮುಂದೆ ಕುಕ್ಕರುಗಾಲಿನಲ್ಲಿ ಕುಳಿತು, ತೆರೆದ ಹಿತ್ತಲ ಬಾಗಿಲಿನಿಂದ ತೋಟದ ಕಡೆಯಿಂದ ಬರುತ್ತಿದ್ದ ತಣ್ಣನೆ ಗಾಳಿಗೆ ಮೈಯೊಡ್ಡಿ, ಒಲೆಯಲ್ಲಿ ಬೆಂಕಿಯ ನರ್ತನ ನೋಡುತ್ತಾ, ಅದರ ಶಾಖಕ್ಕೆ ಕೈ ನೀಡಿ ಚಳಿ ಕಾಯಿಸುತ್ತಾ ಕೂರುವುದು, ನಂತರ ಅಡುಗೆ ಮನೆಯಿಂದ ಅಮ್ಮ, ‘ಸ್ನಾನಕ್ಕೆ ಹೋದ್ಯೇನೇ...? ಎಂದು ಕೂಗಿದ ಕೂಡಲೇ ಎದ್ದು ಸ್ನಾನದ ಕೋಣೆಗೆ ಹೋದೆನೆಂದರೆ ಮುಗಿಯಿತು. ಹಂಡೆಯ ಬಿಸಿ ನೀರಷ್ಟನ್ನೂ ಖಾಲಿ ಮಾಡಿ ತೃಪ್ತಿಯಾದ ಮೇಲಷ್ಟೇ ಆಚೆ ಬರುತ್ತಿದ್ದೆ.

ಬಿಸಿ ನೀರು ತೋಡಿಕೊಳ್ಳಲೆಂದೇ ಪಕ್ಕದಲ್ಲಿ ತಣ್ಣೀರಿನ ಟ್ಯಾಂಕ್‌ನ ಪಕ್ಕದಲ್ಲಿ ಇನ್ನೊಂದು ಟ್ಯಾಂಕ್‌ ಕಟ್ಟಿಸಿದ್ದರು. ಹಲವಾರು ಬಾರಿ ಅಪ್ಪ ಆ ಟ್ಯಾಂಕ್‌ನ ತುಂಬಾ ಟಬ್‌ನಲ್ಲಿ ತುಂಬಿಸುವಂತೆ ಬಿಸಿ ನೀರು ತುಂಬಿಸಿ ನನ್ನನ್ನೆತ್ತಿಅದರಲ್ಲಿ ಆಟವಾಡಿಕೊಳ್ಳಲೆಂದು ಕೂರಿಸುತ್ತಿದ್ದರು. ಆಗಂತೂ ನನ್ನ ಸಂತೋಷಕ್ಕೆ ಎಣೆಯೇ ಇರುತ್ತಿರಲಿಲ್ಲ. ಜೋರು ಮಳೆಯಲ್ಲಿ ಚಳಿಯಲ್ಲಿ ಬಿಸಿನೀರಿನ ಸ್ನಾನ ಯಾರಿಗಿಷ್ಟ ಇಲ್ಲ ಹೇಳಿ.

ನಮ್ಮದು ದೊಡ್ಡ ತೊಟ್ಟಿ ಮನೆ. ಅಮ್ಮ ಮಾಡಿದ ಬಿಸಿಯಾದ, ರುಚಿಯಾದ ಅಕ್ಕಿ ರೊಟ್ಟಿಯನ್ನೋ ಅಥವಾ ನೀರು ದೋಸೆಯನ್ನೋ ತಟ್ಟೆಗೆ ಹಾಕಿಕೊಂಡು ತೊಟ್ಟಿಯ ಜಗುಲಿಯಲ್ಲಿ ಕುಳಿತಾಗ ಹೆಂಚಿನ ಮಾಡಿನ ನಾಲ್ಕೂ ಕಡೆಗಳಿಂದ ಸಣ್ಣ ಜಲಪಾತದಂತೆ ಮಳೆ ನೀರು ತೊಟ್ಟಿಯಲ್ಲಿ ಬಂದು ಬೀಳುವ ದೃಶ್ಯವನ್ನು ನೋಡುತ್ತಿದ್ದರೆ ತಿನ್ನುವುದೇ ಮರೆತು ಹೋಗುತ್ತಿತ್ತು.

ತೊಟ್ಟಿಯ ನೆಲ, ಮನೆಯ ಮುಂದಿನ ಆವರಣ ಕಟ್ಟೆಯ ಸಂದುಗೊಂದಿಯಲ್ಲೆಲ್ಲಾ ವಿಧವಿಧವಾದ ಸಣ್ಣಪುಟ್ಟ ಗಿಡಗಳು ಬೆಳೆದು ಕಪ್ಪು ಕಲ್ಲಿನ ಆವರಣ ಗೋಡೆಯು ಹಸಿರುಬಣ್ಣದ ಗೋಡೆಯಾಗಿ ಮನಸ್ಸಿಗೆ ಮುದ ನೀಡುತ್ತಿತ್ತು. ಹೀಗೆ ಪಾಚಿಗಟ್ಟಿದ ನೆಲದ ಮೇಲೆ ಅಮ್ಮ ಎಷ್ಟು ಬೇಡವೆಂದರೂ ಕೇಳದೆ ಕುಣಿಯಲು ಹೋಗಿ ಜಾರಿಬಿದ್ದು ಅದೆಷ್ಟು ಸಲ ಮಂಡಿ ಹರಿದು ರಕ್ತ ಸುರಿದಿದೆಯೋ ಲೆಕ್ಕವಿಲ್ಲ. ಈಗ ನೆನಪಾದರೆ ಸಿಕ್ಕಾಪಟ್ಟೆ ನಗು ಬರುತ್ತದೆ.

ಇನ್ನು ಶಾಲೆಯಲ್ಲೋ, ಒದ್ದೆಯಾದ ನೆಲದಮೇಲೆ ಇನ್ನೂ ಒದ್ದೆಯಾಗಿ ಥಂಡಿ ಹಿಡಿದಿರುವ ಮರದ ಮಣೆಯ ಮೇಲೆ ಕುಳಿತು ಪಾಠ ಕಲಿಯುವುದು, ಮತ್ತೆ ಸ್ನೇಹಿತರೊಂದಿಗೆ ಕೆಸರಿನಲ್ಲಿ ಆಟವಾಡಿ ಮನೆಗೆ ಬಂದು ಅಮ್ಮ ಕೊಡುವ ಬೆಲ್ಲ– ಜೀರಿಗೆಯ ಕಷಾಯ ಕುಡಿದು ಕೂಡಲೇ ಹೊಳೆಯ ನೀರಿನಲ್ಲೋ ದೇವಸ್ಥಾನದ ಅಂಗಳದಲ್ಲೋ ಆಡಲು ಓಡುವುದು. ಆಮೇಲೆ ಮನೆಗೆ ಬರುತ್ತಿದ್ದದ್ದೇ ಕತ್ತಲಾದ ಮೇಲೆ ಅಥವಾ ಅಜ್ಜ ಬಂದು ಕರೆದಾಗಲೇ. ನಾನು ಮನೆಯ ಒಳಗೆ ಹೋಗುವುದಕ್ಕೆ ಸರಿಯಾಗಿ ಮೇಯಲು ಹೋಗಿ ಮಳೆಯಲ್ಲಿ ನೆನೆದು ತೊಪ್ಪೆಯಾಗಿದ್ದ ಹಸು ಕರುಗಳೆಲ್ಲಾ ಸಾಲಾಗಿ ಹಿತ್ತಿಲ ಬಾಗಿಲ ಹೊರಗೆ ನಿಂತು ಬಾಗಿಲು ತೆರೆಯುವಂತೆ ಅಂಬಾ ಅಂಬಾ ಎಂದು ಕೂಗುತ್ತಿದ್ದದ್ದು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ.

ಸಂಜೆ ಅಪ್ಪ ಬಂದ ಮೇಲೆ ಮಳೆಯ ಲಯದ ಜೊತೆಗೆ ನನ್ನ ಮತ್ತು ಅಪ್ಪನ ಸಂಗೀತದ ಜುಗಲ್‌ಬಂದಿ ನಿಲ್ಲದೇ ಸಾಗುತ್ತಿತ್ತು. ಕೆಲವು ಘಟನೆಗಳಂತೂ ಕಣ್ಣಿಗೆ ಕಟ್ಟಿದಂತಿವೆ. ಒಂದನ್ನಂತೂ ನೆನೆಸಿಕೊಂಡರೆ ಈಗಲೂ ಮೈ ನವಿರೇಳುತ್ತದೆ.

ಕೆಳದಿಯ ಶಿವಪ್ಪ ನಾಯಕರು ಬಿದನೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲದಲ್ಲಿ ಎಲ್ಲೆಲ್ಲೋ ಚಿನ್ನವನ್ನು ಹೂತಿಟ್ಟಿದ್ದರು ಎನ್ನುವ ವದಂತಿಗಳು ಹರಿದಾಡುತ್ತಿದ್ದವು. ಅದನ್ನು ಹುಡುಕಲೆಂದು ಕೆಲವರು ಹೊಳೆಯ ಇಕ್ಕೆಲಗಳಲ್ಲೆಲ್ಲಾ ಭೂಮಿಯನ್ನು ತೋಡಿ ಆಳವಾದ ಗುಂಡಿಗಳನ್ನು ಮಾಡಿ ನಂತರ ಮುಚ್ಚದೇ ಹಾಗೇ ಬಿಟ್ಟು ಹೋಗಿರುತ್ತಿದ್ದರು. ಒಮ್ಮೆ ನನ್ನ ಮೂರು ವರ್ಷದ ತಮ್ಮನನ್ನು ಕರೆದುಕೊಂಡು ಸ್ನೇಹಿತರೊಂದಿಗೆ ಹೊಳೆಯಲ್ಲಿ ಆಡಲು ಹೋಗಿದ್ದಾಗ ಮಳೆ ನೀರಿನಿಂದ ತುಂಬಿಕೊಂಡಿದ್ದ ಅಂಥ ಒಂದು ಆಳವಾದ ಗುಂಡಿಯೊಳಗೆ ನನ್ನ ತಮ್ಮ ಜಾರಿ ಬಿದ್ದು ಮುಳುಗಿ ಮೇಲೆ ಬರಲಾಗದೇ ಒದ್ದಾಡುತ್ತಿದ್ದ. ಇದನ್ನು ನೋಡಿದ ನನಗೆ ಅದೆಷ್ಟು ಹೆದರಿಕೆಯಾಗಿತ್ತೆಂದರೆ ನನ್ನ ಕೈಕಾಲು ಮರಗಟ್ಟಿ ಹೋಗಿತ್ತು. ನನ್ನ ಸಾಹಸಿ ಸ್ನೇಹಿತೆ ಲಲಿತೆಯು ಅಂದು ಧೈರ್ಯ ಮಾಡಿ ಗುಂಡಿಯಲ್ಲಿ ಇಳಿದು ಅವನನ್ನು ಈಚೆಗೆ ಎಳೆದು ಹಾಕಿರದಿದ್ದರೆ ಏನೇನು ಅನಾಹುತವಾಗಿಬಿಡುತ್ತಿತ್ತೋ... ನೆನೆಸಿಕೊಳ್ಳಲೂ ಭಯವಾಗುತ್ತದೆ.

ಎಷ್ಟೋ ಸಲ ಹೊಳೆಗಳೆಲ್ಲಾ ತುಂಬಿ ಹರಿದು ಸೇತುವೆಗಳೆಲ್ಲಾ ಮುಚ್ಚಿ ಹೋಗಿ ವಾಹನ ಸಂಪರ್ಕ ಸ್ಥಗಿತಗೊಂಡು ಶಾಲೆಗೆ ರಜಾ ಘೋಷಿಸಿಬಿಡುತ್ತಿದ್ದರು. ಆಗಂತೂ ದಿನವಿಡೀ ಮಳೆಯಲ್ಲಿ ಆಟ. ಅಮ್ಮ ಕೆಂಡದಲ್ಲಿ ಸುಟ್ಟು ಕೊಡುತ್ತಿದ್ದ ಹಪ್ಪಳ, ಸಂಡಿಗೆ ಗೇರು ಬೀಜ ಹಲಸಿನ ಬೀಜಗಳನ್ನು ಸವಿಯುತ್ತಾ ಅಪ್ಪ ತಂದು ರಾಶಿ ಹಾಕಿರುತ್ತಿದ್ದ ಚಂದಮಾಮ, ಬಾಲಮಿತ್ರ, ಅಮರ ಚಿತ್ರಕಥೆ ಪುಸ್ತಕಗಳನ್ನು ಓದುತ್ತಾ ಕೂರುವುದೇ ನನ್ನ ಮೆಚ್ಚಿನ ಕಾಯಕವಾಗಿರುತ್ತಿತ್ತು.

ಇಂದು ಎಲ್ಲಿಗೆ ಬೇಕಾದರೂ ಭರ‍್ರ್.. ಎಂದು ಕಾರಿನಲ್ಲಿ ಓಡಾಡುವ ನಾನು 36 ವರ್ಷಗಳ ಹಿಂದೆ ಇದೇ ಹುಚ್ಚು ಮಳೆಯಲ್ಲಿ ಕೆಂಪು ಬಸ್‌ ಹತ್ತಿಕೊಂಡು ಅಪ್ಪನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿಕೊಂಡು ಬೆಂಗಳೂರಿಗೆ ಬಂದಿಳಿದು ಆಕಾಶವಾಣಿಗೆ ಹೋಗಿ ನನ್ನ ಮೊಟ್ಟ ಮೊದಲ ಹಾಡು ಹಾಡಿ ಧ್ವನಿ ಮುದ್ರಿಸಿ ಬಂದಿದ್ದನ್ನು ಮನಸ್ಸು ಮತ್ತೊಮ್ಮೆ ಮಗುವಾಗುತ್ತದೆ. ಮಳೆಯೊಂದಿಗೆ ನನ್ನ ಸಂಗೀತದ ಪ್ರಥಮಗಳು ಅದೆಷ್ಟಿದೆಯಲ್ಲಾ ಎಂದು ಅಚ್ಚರಿಪಡುತ್ತೇನೆ.

ಇವನ್ನೆಲ್ಲಾ ಮರೆಯಲು ಸಾಧ್ಯವೇ ಇಲ್ಲ. ಈಗಲೂ ಮೋಡ ಕವಿದ ಕೂಡಲೇ, ಮಳೆ ಹನಿದ ಕೂಡಲೇ ಮಣ್ಣಿನ ಘಮ ಮೂಗಿಗೆ ಬಡಿದ ಕೂಡಲೇ ಮನಸ್ಸು ನನ್ನೂರಿಗೆ ಓಡುತ್ತದೆ. ಪ್ರತಿ ವರ್ಷವೂ ಮಳೆ ನೋಡಲೆಂದೇ ಊರಿಗೆ ಹೋಗಿ ಜಗುಲಿಯಲ್ಲಿ ಸುಮ್ಮನೆ ಕೂರುತ್ತೇನೆ. ಗಂಟೆಗಟ್ಟಲೆ.

ದೊಡ್ಡ ಊರುಗಳಲ್ಲೆಲ್ಲಾ ಮಳೆ ಸುರಿದರೆ ಜನಜೀವನ ಅಸ್ತವ್ಯಸ್ತ. ಆದರೆ, ನನಗೆ ಮಳೆಯೆಂದರೆ ಸುಂದರ ನೆನಪುಗಳ ಬುತ್ತಿ. ಅದರಲ್ಲೂ ಮಲೆನಾಡಿನ ಗದ್ದೆ– ತೋಟಗಳಿಗೆ ಬೆಟ್ಟ ಗುಡ್ಡಗಳಿಗೆ ಸ್ನಾನ ಮಾಡಿಸಿ ಚೈತನ್ಯ ತುಂಬುವ ಮಳೆಯೆಂದರೆ ಒಂದು ಮಹಾ ದೃಶ್ಯ ಕಾವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.