ADVERTISEMENT

ನರಜಾತಿಯೊಳಗೆಂತು ಬಂದುದೀ ವೈಷಮ್ಯ?

ಪಂ.ರಾಜೀವ ತಾರಾನಾಥ
Published 12 ಏಪ್ರಿಲ್ 2022, 7:19 IST
Last Updated 12 ಏಪ್ರಿಲ್ 2022, 7:19 IST
ಕಲೆ: ಕರಿಯಪ್ಪ ಹಂಚಿನಮನಿ
ಕಲೆ: ಕರಿಯಪ್ಪ ಹಂಚಿನಮನಿ   

ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅಸಹಿಷ್ಣತೆ ಮೂಗು ತೂರಿಸ್ತಿದೆ... ಕೇರಳದಲ್ಲೀಗ ಅದು ಎದ್ದು ಕಾಣುತ್ತಿದೆ. ಕರ್ನಾಟಕದಲ್ಲೂ ಧರ್ಮದ ಹೆಸರಿನಲ್ಲಿ ಸಾಂಸ್ಕೃತಿಕ ವಾತಾವರಣ ಕದಡಿದೆ. ಜನರ ಮನಸ್ಸು ಬದಲಾಗಬೇಕು ಅಂತ ಹೇಳಬಹುದು, ಹೇಳೋದು ಸುಲಭ, ಆದರೆ ಹಾಗೆ ಆಗೋದು ಕಷ್ಟದ ವಿಚಾರ. ಒಂದು ಸರ್ಕಾರ, ಇನ್ನೊಂದು ಸಾಮಾಜಿಕ ಚಳವಳಿ, ಎರಡರ ಪ್ರಯತ್ನವೂ ಇಲ್ಲಿ ಬೇಕು. ಆದರೆ, ಎಲ್ಲಾ ಕಡೆ ಏನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ನಾವು ಸುಪೀರಿಯರ್, ಬ್ಯಾರೆಯವರು ನಮ್ಮ ವೇಷ ಹಾಕಿದ್ರೂ ಸೈತ ಅವ್ರು ಬ್ಯಾರೆನೆ, ಅವರನ್ನ ಎಲ್ಲಾ ಕಡಿಗೂ ಬಿಡಲಾಗದು ಅನ್ನೋ ಮಾತು, ಈ ದೊಡ್ಡೋರು ಅನ್ನಿಸಿಕೊಂಡೋರ ಬಾಯಲ್ಲಿ, ಮನಸ್ಸಿನಲ್ಲಿ ಬ್ಯಾರೆ ಬ್ಯಾರೆ ರೂಪದಲ್ಲಿ ಬರ್ತಾನೆ ಇರುತ್ತೆ. ಒಂದು ಗುಳಿಗಿ ತಗಂಡುಬಿಟ್ಟರೆ ಸರಿಹೋಗುತ್ತೆ ಅಂತಾರಲ್ಲ, ಇದಕ್ಕೆ ಹಂಗಾಗಲ್ಲ.

ಸಾಮ, ದಾನ, ಭೇದ, ದಂಡ ಇವೆಲ್ಲವನ್ನೂ ಉಪಯೋಗಿಸಬೇಕು. ಯಾಕಂದ್ರೆ ಇದನ್ನು ಮಾಡುತ್ತಿರೋರು ನಮ್ಮವರೇ. ಅವರನ್ನು ಇನ್‍ಫ್ಲುಯೆನ್ಸ್ ಮಾಡಬೇಕು, ಮಾತಾಡಿಸಬೇಕು. ಯಾವುದೋ ಕಾಲದಲ್ಲಿ ಹೀಗಾಯ್ತು, ಪುರಾಣ ಕಾಲದಲ್ಲಿ ಹೀಗಾಯಿತು ಎಂದು ಹೇಳೋದು ತಪ್ಪು. ಇದು ತಪ್ಪು ಎಂದು ಹೇಳೋದು ಸರಳವಾಗಿಯೂ ಬಲವಾಗಿಯೂ ಬರಬೇಕು ಅಷ್ಟೆ. ಹಳೇ ಪುರಾಣ, ವೇದ ಅವೆಲ್ಲ ಬ್ಯಾಡ್ರೀ. ನಮ್ಮ ದೇವಸ್ಥಾನಗಳ ಪೂಜಾವಿಧಾನಗಳು, ನಮ್ಮ ಶಿಲ್ಪ ಇವನ್ನೆಲ್ಲ ನೋಡಬೇಕು ಅಂತ ಭಾಳ ಜನ ಬರ್ತಾರ. ಇದು ನಮ್ಮ ಆಸ್ತಿ, ಅಲ್ಲಿ ನೃತ್ಯ ಮಾಡಬಾರದು ಅಂದುಬಿಟ್ಟರೆ? ತಪ್ಪು, ಅದು ಪೂರ್ಣ ತಪ್ಪು. ಇವೆಲ್ಲಾ ಮಾಡಿಯೂ ಸರಿಯಾಗಲಿಲ್ಲ ಅಂದ್ರೆ ಕಠಿಣವಾಗಿ ಮಾಡಬೇಕು, ಅಂದರೆ ಏನು ಮಾಡಬೇಕು? ಅವರನ್ನ ಶಿಕ್ಷಿಸಬೇಕು, ಜೈಲಿಗೆ ಹಾಕಬೇಕು ಅಥವಾ ಬೇರೆ ವಿಧಾನಗಳಿವೆಯೇ, ನನಗೆ ಗೊತ್ತಿಲ್ಲ. ಈ apartheid ಭಾವನೆಯಿಂದ ಪ್ರತ್ಯೇಕತಾ ಮನೋಭಾವದಿಂದ ಹೊರಗೆಳೆಯುವ ಬೇರೆಬೇರೆ ಪ್ರಯತ್ನ ಮಾಡಬೇಕು. ಪ್ರಯತ್ನ ಮಾಡ್ತಲೇ ಇರಬೇಕು. ನಾವೇನು ಮಾಡ್ತೀವಿ... ಇಂತಹ ಘಟನೆ ನಡೆದಾಗ ಹೋಹೋ ಅಂತ ಎದ್ದುಬಿಡ್ತೀವಿ, ನಾಳೆ ನಾಡಿದ್ದು ಅದು ಯಾರಿಗೂ ನೆನಪಿರೋದಿಲ್ಲ. ಹಂಗಾಗಬಾರದು.

ADVERTISEMENT

ಈ ವಿಷಯ... ಇದೊಂದು ವಿಷಯ ಮಾತ್ರವಲ್ಲ, ಇದು ಕೆಟ್ಟ ವಿಷ, ಇದನ್ನು ಬುಡದಿಂದ ಕಿತ್ತು ಹಾಕಬೇಕು; ಬೇರುಸಹಿತ ಕಿತ್ತು ಹಾಕಬೇಕು. ಅಂದ್ರೆ ಅಲ್ಲಿ ಹಿಂಸೆ ಇರಬಾರದು. ಹ್ಯಾಗೆ ಮಾಡಬೇಕು ಅಂದರೆ... ನೋಡಿ... ನಮ್ಮ ಮನೆಗಳಲ್ಲಿಯೂ ಇಂಥದ್ದು ಆಗುತ್ತೆ. ಅದನ್ನು ಹ್ಯಾಗೆ ನಾವು ಮಾತಾಡಿಕೊಂಡು, ಮಕ್ಕಳಲ್ಲಿ ಹ್ಯಾಗೆ ಸಾಮ, ಬೇಧ ದಾನಗಳಿಂದ ತಿದ್ದುತ್ತೇವೆಯೋ ಹಾಗೆ ತಿದ್ದಬೇಕು. ಸಮಾಜದ ಮುತ್ಸದ್ದಿಗಳು, ಸಮಾಜ ಸುಧಾರಕರು ಮುಂದೆ ಬರಬೇಕು. ಮ್ಯಾಲೆ ಅವರು ಸ್ಪಷ್ಟವಾಗಿ ಯೋಚನೆ ಮಾಡಬೇಕು, ದಿಟ್ಟವಾಗಿ ಮಾತನಾಡಬೇಕು. ಊರೆಲ್ಲ ಕತೆ ಹೇಳ್ಕಂಡು ಬರೆದ್ರೆ, ಅದ್ರಲ್ಲಿ ಚೂಪುತನ ಇರಲ್ಲ.

ಗಾಂಧೀಜಿಯವರು ಚೌರಿ ಚೌರಾದಲ್ಲಿ 1922ರಲ್ಲಿ ಹಾಗೆ ಮಾಡಿದರು. ಅಲ್ಲಿಯೂ ಹಿಂಸೆ ಬಂತು... ನಮ್ಮವರೇ ನಮ್ಮ ಪೊಲೀಸರನ್ನೇ ಕೊಂದರು. ಆವಾಗ ಗಾಂಧೀಜಿ ಉಪವಾಸ ಮಾಡತೀನಿ, ಇದಕ್ಕೆ ನಾನೇ ಪ್ರಾಯಶ್ಚಿತ್ತ ಮಾಡಿಕೋತೀನಿ ಅಂದ್ರು. ಅದರಷ್ಟು ಚೂಪಾದ ಉಪಾಯ ನಾನು ನೋಡಿಲ್ಲ. ಈಗ ನಾವು ಯಾರು ಹಾಗೆ ಮಾಡತೀವಿ? ಅದರಿಂದ ನಾವೇನು ಕಲಿತಿಲ್ಲ. ಗಾಂಧಿಯವರು ಏನೇನು ಮಾಡಿದರು, ಯಾವ್ಯಾವ ರೀತಿಯಲ್ಲಿ ಅದನ್ನು ಹಚ್ಚಿದರು, ಅವರ ವಿಚಾರ ಧಾರೆ... ನಾವು ಮಾಡಲಿಲ್ಲ ಹಂಗೆ. ಗಾಂಧೀಜಿಯ ಆ ಚೂಪುತನ ಬರಬೇಕು. ಮಾತು ಚೂಪಾಗಿರಬೇಕು, ಇದು ಹೀಗೆ, ಇದು ಹೀಗಲ್ಲ ಅಂತ... ಅಷ್ಟೇ ಸಾಕು. ಅದ್ರ ಮೇಲಿನ ಫೋಕಸ್ ಬಿಟ್ಟುಬಿಡಬಾರದು. ಇಂಥದ್ದು ಆಗುವವರೆಗೂ ನಾವು ಬುದ್ಧಿಜೀವಿಗಳು ಇಂಥದ್ದು ಮಾಡತೀವಿ, ಇಂತಿಂಥ ಕೆಲಸ ಮಾಡೋದಿಲ್ಲ, ಈ ಥರಾ ನಿರ್ಧಾರ ಮಾಡಬೇಕು.

ಸಮಾಜವನ್ನು ಇಬ್ಭಾಗವಾಗಿಯೋ, ಇನ್ನೂ ಎಷ್ಟೋ ಭಾಗವಾಗಿಯೋ ಮಾಡೋ ಪ್ರಯತ್ನ ನಡೆದೇ ಇದೆ. ನಾವೆಲ್ಲ ಒಂದೇ ಜನ, ಈ ಭೂಮಿಯಲ್ಲಿ, ಈ ನೀರನ್ನು ಕುಡಿದು, ಈ ಗಾಳಿಯನ್ನು ಉಸಿರಾಡಿ ಬದುಕಿದ್ದೀವಿ. ಈ ಒಂದು ಸಂಸ್ಕೃತಿಯನ್ನು - ಈ ಸಂಸ್ಕೃತಿ ಅನ್ನೋ ಶಬ್ದ ಭಾಳ ಚರ್ವಿತರ್ವಣವಾಗಿದೆ, ನನಗೆ ಅದನ್ನು ಬಳಸೋದಕ್ಕೆ ಇಷ್ಟವಿಲ್ಲ... ನಮ್ಮದು ಇಂಥಾ ಸಂಸ್ಕೃತಿ, ಅಂಥಾ ಸಂಸ್ಕೃತಿ, ಬಿಡಿ ಅದನ್ನು - ಒಟ್ಟಿನಲ್ಲಿ ನಾವೆಲ್ಲ ಅದೇ ಊಟ ಮಾಡ್ತೀವಿ, ಅದೇ ಹವಾ ಸೇವಿಸ್ತೀವಿ... ಅದೇ ನೀರು ಕುಡೀತೀವಿ, ಅವೇ ಅಭ್ಯಾಸಗಳು, ನೋಡಕ್ಕೂ ನಾವೆಲ್ಲ ಒಂದೇ ಥರಾ ಇದೀವಿ. ಅದನ್ನು ಬಿಟ್ಟು ಯಾವುದೋ ಕಾಲದಲ್ಲಿ ಏನೋ ಒಂದು ಆಗಿತ್ತು ಅಂತ ಅದಕ್ಕೆ ಈಗೇನೋ ಮಾಡೋದಕ್ಕೆ ಹೋಗೋದು ಯಾಕೆ?

ನಾವು ಇತಿಹಾಸವನ್ನು ಗಂಭೀರವಾಗಿ ತಗೊಳ್ಳೋದಿಲ್ಲ, ಇತಿಹಾಸದ ತಪ್ಪು ಓದಿನಿಂದ ಅದನ್ನೊಂದು ಆಯುಧ ಮಾಡಿಕೊಳ್ತೀವಿ. ಆಗ ಹಿಂಗಾಗಿತ್ತು, ಅದಕ್ಕೇ ಈಗ ಹಿಂಗೆ ಮಾಡ್ತೀವಿ, ತಪ್ಪು ಅದು. ಇಲ್ಲಿ ಎಷ್ಟೋ ರಾಜ್ಯಗಳಿದ್ದವು, ಎಷ್ಟೋ ರಾಜರುಗಳಿದ್ದರು... ಜಗಳ ಆಡಿದರು, ಸುಖನೂ ಪಟ್ಟರು, ಕುಣಿದರು, ಆಡಿದರು, ಒಮ್ಮೊಮ್ಮೆ ಯುದ್ಧನೂ ಮಾಡಿದರು. ಇದು ಆಗೋದೆ. ಆದರೆ ಈಗಿನ ರೂಪದಲ್ಲಿ, ಈ ಛಿದ್ರ ಅವತಾರದಲ್ಲಿ ಆಗ್ತಾ ಇರಲಿಲ್ಲ.

ಈಗ ಯಾಕೆ ಹೀಗಾಗ್ತಿದೆ ಅಂದರೆ... ನಮ್ಮ ರಾಜಕಾರಣಿಗಳು, ನಮ್ಮ ಕೆಲವು ಬುದ್ಧಿಜೀವಿಗಳು, ಏನೇನೋ ಧೋರಣೆಗಳಿಂದ ಪುಸ್ತಕಗಳನ್ನು ಬರೆದರು, ಅವೆಲ್ಲ ಪೂಜ್ಯ ಪುಸ್ತಕಗಳಾದವು. ಅವನ್ನೇ ಎಲ್ಲಾರೂ ಓದತಾರೆ. ನಮ್ಮದೇ ಪಕ್ಕದ ಮನೆಯ ಜನರಿಗೆ ನೋವು ಕೊಟ್ಟು, ಹಿಂಸೆ ಮಾಡಿ, ಅವರ ಮೇಲೆ ದಬ್ಬಾಳಿಕೆ ಮಾಡಿ ಬದುಕುವುದು ಯಾವ ಸಂಸ್ಕೃತಿಯ ಲಕ್ಷಣವೂ ಅಲ್ಲ.

ಇವನ್ನೆಲ್ಲ ಹ್ಯಾಗೆ ಕಡಿಮೆ ಮಾಡುವುದು - ಇದಕ್ಕೆ ಮದ್ದು ಶಿಕ್ಷಣ. ಅದನ್ನು ಕುಂಠಿತಗೊಳಿಸಬಾರದು, ಅದರಲ್ಲಿ ಏನೇನೋ ಸೇರಿಸಬಾರದು. ನಾವು ಒಂದೇ ಜನ, ಒಂದೇ ಆಗಿರಬೇಕು. ನಾವು ಸ್ವಲ್ಪ ಜಾಗೃತವಾಗಿದ್ದರೆ ಆ ದುಃಖ, ಆ ಹಿಂಸೆ ಅದನ್ನೆಲ್ಲ ತಪ್ಪಿಸಬಹುದು. ಅದು ಸ್ಕೂಲುಗಳಲ್ಲಿ ಬರಬೇಕು, ಮನೆಗಳಲ್ಲಿ ಬರಬೇಕು. ನಾನು ಇನ್ನೂ ಉಗ್ರವಾಗಿ ಮಾತಾಡಬಹುದು, ಆದರೆ ಮಾತಾಡಿ ಉಪಯೋಗವಿಲ್ಲ. ನಾವದನ್ನು ಬದುಕಬೇಕು.

ನಾನು ಹುಟ್ಟಿ ಬೆಳೆದ ತುಂಗಭದ್ರದಲ್ಲಿ ಆಗೆಲ್ಲ ಮೊಹರಂ ಹುಲಿವೇಷ ಇರತಿತ್ತು. ಹುಲಿವೇಷವನ್ನು ಇನ್ನಾರೋ ಧರ್ಮದವರು ಹಾಕತಿದ್ರು. ನಮ್ಮ ಮನೆಯ ಸುತ್ತಲೂ ಹುಲಿವೇಷ ಕುಣಿಯುತ್ತ ಹೋಗತಿತ್ತು. ನಾನು ಭಾಳ ಸಣ್ಣೋನು, ನಿಂತಲ್ಲೇ ಥೈಥೈ ಅನ್ನತಿದ್ದೆ. ನಮ್ಮಪ್ಪ, ಅಮ್ಮ ನೋಡಿ ನಗತಿದ್ದರು. ಹಾಗೆ ಮೊಹರಂ ಹಬ್ಬದಲ್ಲಿ ನಾವು ನೀವು ಎಲ್ಲಾರು ಕುಣಿತಿದ್ದೆವು. ಇಂಥವನ್ನು ಗಮನದಲ್ಲಿಟ್ಟುಕೊಂಡು ಜಾಗೃತವಾಗಿರಬೇಕು. ಅದರಲ್ಲಿ ಯಾರು ಭಾಗವಹಿಸುತ್ತಾರೆ, ಯಾರು ಭಾಗವಹಿಸದೇ ದೂರ ನಿಲ್ಲುತ್ತಾರೆ... ಅದನ್ನು ಸ್ವಲ್ಪ ಗಮನಿಸಿ ನೋಡಿ. ಅದರಿಂದಲೇ ಹಾನಿ, ದುಃಖ ಬೆಳೆದಿದ್ದು. ನಾವು ಎಲ್ಲರೂ ಅದರಲ್ಲಿ ಧುಮುಕಿದೆವಾ... ಇಲ್ಲ. ನಮ್ಮಲ್ಲೇ ಕೆಲವರು ದೂರ ನಿಂತುಕೊಳ್ತೀವಿ, ನಮ್ಮಲ್ಲೇ ನಾವು ಎಂಥದ್ದೋ ಒಂದು ಮಡಿವಂತಿಕೆ ತಂದುಕೊಳ್ಳುತ್ತೀವಿ. ಅದಾಗಬಾರದಿತ್ತು, ಆಗಲೂಬಾರದು.

ಕಲೆಯಿಂದಲೇ ಇಂಥದನ್ನೆಲ್ಲ ಎದುರಿಸಬಹುದು ಎಂಬುದೆಲ್ಲ ಬೊಗಳೆ ಮಾತು. ಡಬ್ಲ್ಯು.ಬಿ. ಯೇಟ್ಸ್ ಕವಿ ಗೊತ್ತಲ್ಲ... ಆತ ತೀರಿಕೊಂಡಾಗ ಇನ್ನೊಬ್ಬ ಕವಿ ಡಬ್ಲ್ಯು.ಎಚ್. ಆಡೆನ್ ಒಂದು ಕವನ ಬರೆದಿದಾನೆ, ಅದರಲ್ಲಿ ಒಂದು ಸಾಲು poetry makes nothing happen ಅಂತ ಬರೆದಿದ್ದಾನೆ. ಕಲೆಯಿಂದ ಏನೂ ನಡೆಯೋದಿಲ್ಲ. ಅದು ನಿಜವೇ. ನೋಡಿ... ಕಲೆಯಿಂದ ಏನೋ ಮಾರ್ಪಾಡು ಮಾಡ್ತೀವಿ ಅನ್ನೋ ವಿಚಾರ ನನಗೂ ಇಷ್ಟ. ಸ್ವಲ್ಪ ಮಟ್ಟಿಗೆ ಆಗಬಹುದು ಅಷ್ಟೆ. ಸಿನಿಮಾದಿಂದ ಸ್ವಲ್ಪ ಮಟ್ಟಿಗೆ ಆಗಬಹುದು.

ನಾವು ಹತ್ತು ಜನರಿದ್ದೇವಾ, ಬಲ ಇದೆಯಾ, ಸರಿ ಹೊಡಿ. ಈ ಥರ ಹಿಂಸೆ, ನೋವು ಎಲ್ಲಾ ಕಡೆಗೆ ಹಬ್ಬಿದೆ, ಬಲಪ್ರಯೋಗಕ್ಕೆ ಯಾವ ರೀತಿಯ ಧರ್ಮ ಪ್ರಜ್ಞೆ ಇಲ್ಲ, ಬಲ ಇದ್ದರೆ ಹೊಡಿ. ಅದು ನಡೀತಾನೆ ಇದೆ. ಅದೇ ಬಲವನ್ನು ಇಡೀ ದೇಶಕ್ಕೆ ಅದರ ಕಹಿ, ಅದರ ನೋವು ಉಪಯೋಗಿಸದೇ, ಅದರಿಂದ ಉಪಯೋಗವಿರುವುದನ್ನು ತೆಗೆದುಕೊಂಡು, ಆ ಬಲವನ್ನು ಇನ್ನೊಂದು ಕಡೆಗೆ ತಿರುಗಿಸಬಹುದು. ಗಾಂಧೀಜಿ ನಮ್ಮೆಲ್ಲರನ್ನೂ ಸ್ವಲ್ಪ ಮಟ್ಟಿಗೆ ಮಹಾತ್ಮರಾಗಿ ಮಾಡಿದ್ದರು, ಅವರು ಬದುಕಿರುವವರೆಗೆ ನಾವೆಲ್ಲ ಟೆಂಪರರಿ ಮಹಾತ್ಮರಾಗಿದ್ದೆವು. ಆದರೆ ಅದು ನಿಲ್ಲಲಿಲ್ಲ. ಕೊನೆಗೆ ಅವರನ್ನೇ ಕೊಂದೆವು. ಅದರಿಂದ ಎಂಥ ನಷ್ಟವಾಯಿತು ನಮಗೆ ಅಂದರೆ... ಅದರ ಫಲವನ್ನೇ ಈಗಲೂ ಉಣ್ತಾ ಇದ್ದೀವಿ. ಹಿಂಸೆಯಲ್ಲಿರೋ ಬಲವನ್ನೇ ಬೇರೆಡೆ ತಿರುಗಿಸಬಹುದು, ಗಾಂಧೀಜಿ ಅದನ್ನು ನಮಗೆ ತೋರಿಸಿದ್ದರು. ನಾವದನ್ನು ಮರೆತಿದ್ದೀವಿ.

ಉಸ್ತಾದ್ ಅಬ್ದುಲ್ ಕರೀಮಖಾನ್ ಎಂಥ ಮಹಾನ್ ಸಂಗೀತಗಾರ... ಅವರ ಹತ್ರ ರಾಮಭಾವು ಕುಂದಗೋಳಕರ್ ಕಲಿತ್ರು - ಅವರ ಇನ್ನೊಂದು ಹೆಸರು ಸವಾಯಿ ಗಂಧರ್ವ. ಅಲ್ಲಿಂದ ಸಂಗೀತ ಹ್ಯಾಗೆ ಹಬ್ಬಿತು ನೋಡಿ... ಗಂಗೂಬಾಯಿ ಹಾನಗಲ್, ವೆಂಕಟರಾವ್ ದೇವದುರ್ಗ, ಭೀಮಸೇನ್ ಜೋಶಿ... ಹಿಂಗೇ ಹಬ್ಬಿಬಿಡ್ತು. ಗುಲಾಮ್ ಅಲಿ ಖಾನ್ ಸಾಹೇಬರ ಬಗ್ಗೆ ನಮ್ಮ ಅಜಯ್‍ ಚಕ್ರವರ್ತಿ ಎಷ್ಟು ಪ್ರಭಾವಿತರಾಗಿದ್ದರು, ಉಸ್ತಾದರ ಮಗನಿಂದಲೂ ಸಂಗೀತ ಕಲಿತರು. ಆಗ್ರಾ ಘರಾಣೆಯ ಉಸ್ತಾದ್ ಫೈಯಾಜ್ ಖಾನ್ ಸಾಹೇಬರಿಂದಲೇ ಕಲೀಬೇಕು ಅಂತ ನಮ್ಮ ಬೆಂಗಳೂರಿಂದ ರಾಮ್ ರಾವ್ ನಾಯಕ್ ಹೋದರು. ಇವರೋ ಬಹಳ ಮಡಿ... ಉಸ್ತಾದರು ಅವರಿಗೆ ಬೇರೆ ಒಲೆ ಹಚ್ಚಿ, ಅಕ್ಕಿ, ಬ್ಯಾಳೆ ಎಲ್ಲ ಕೊಟ್ಟು, ಬೇರೆ ಅಡುಗೆ ಮಾಡಿಕೊಳ್ಳಕ್ಕೆ ವ್ಯವಸ್ಥೆ ಮಾಡಿದ್ರು. ‘ಬೇಗ ಉಂಡು ಪಾಠಕ್ಕೆ ಬಾ’ ಅಂದ್ರು. ಅದನ್ನು ಮರೀಬಾರದು.

ನಮ್ಮ ಗುರುಗಳ ತಂದೆ ಬಾಬಾ ಅಲಾವುದ್ದೀನ್ ಖಾನರು ಮೈಹರಿನಲ್ಲಿರುವ ಶಾರಾದಾ ಮಾತೆ ಮಂದಿರಕ್ಕೆ ಪ್ರತಿದಿನ ಹೋಗ್ತಿದ್ದರು, ಹಂಗೇ ದಿನಕ್ಕೆ ಐದು ಸಲ ನಮಾಜನ್ನೂ ಮಾಡತಿದ್ದರು. ಅವರಿಗಿದ್ದ ಏಕೈಕ ಮುಸ್ಲಿಂ ಶಿಷ್ಯ ಅಂದ್ರೆ ಅವರ ಮಗ ಮಾತ್ರ. ಇನ್ನುಳಿದ ಶಿಷ್ಯರೆಲ್ಲ ಬ್ಯಾರೆಯವ್ರು... ಹಿಂದೂಗಳು, ಬೌದ್ಧರು, ಕ್ರೈಸ್ತರು... ಶ್ರೀಲಂಕಾದಿಂದ ಕೂಡ ಶಿಷ್ಯರು ಬಂದಿದ್ದರು. ಯಾವ ಘರಾಣೆಯವರೂ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಕಲಿಸದ ಕಾಲಘಟ್ಟದಲ್ಲಿ ಅವರು ತಮ್ಮ ಮಗಳು ಅನ್ನಪೂರ್ಣರಿಗೆ ಕಲಿಸಿದರು. ಶರಣ್ ರಾಣಿಗೆ ಕಲಿಸಿದರು. ಧರ್ಮ, ಜಾತಿ, ಲಿಂಗ ಇದನ್ನೇನೂ ನೋಡಲಿಲ್ಲ. ಅವರನ್ನ ತಂಪುಹೊತ್ತಿನಲ್ಲಿ ನೆನಸಿಕೊಳ್ಳಬೇಕು. ನನ್ನ ಗುರುಗಳು ಖಾನ್ ಸಾಹೇಬರು ಮೈಸೂರಿಗೆ ಬಂದಾಗ ಚಾಮುಂಡಿಬೆಟ್ಟಕ್ಕೆ ಹೋಗಿ ದೇವಿ ದರ್ಶನ ತಗಂಡು ಹೋದರು. ನಮ್ಮ ಹಿಂದೂಸ್ತಾನಿ ಸಂಗೀತ ನಮ್ಮೆಲ್ಲರ ಒಟ್ಟುಮೆಯ ಫಲ. ನಾವೆಲ್ಲರೂ ಸೇರಿ ಬೆಳೆಸಿದೀವಿ. ಎಷ್ಟೋ ಉಸ್ತಾದರು, ಗುರುಗಳು ಆ ಜಾತಿ, ಈ ಧರ್ಮ ಅಂತೆಲ್ಲ ಯೋಚನೆ ಮಾಡದೇ ಕಲಿಸಿದರು, ಅದರಲ್ಲೇನೂ ಕಮ್ಮಿ ಮಾಡಲಿಲ್ಲ, ಮ್ಯಾಲ ಎಷ್ಟು ಪ್ರೀತಿ ತೋರಿಸಿದರು.

ಅದೆಲ್ಲ ಎಲ್ಲಿ ಹೋಯಿತು? ಅದನ್ನು ಯಾಕೆ ಹೋಗಗೊಟ್ಟೆವು? ಆ ಕಾಲ ಎಲ್ಲಿ ಹೋಯಿತು? ಇದನ್ನೆಲ್ಲ ನಾವು ಯೋಚನೆ ಮಾಡಬೇಕು. ನಾವು ಸುಮ್ಮನೆ ಖೇದಪಡ್ತಾ ಕೂರೋದಲ್ಲ. ಇದನ್ನು ಬದಲಾಯಿಸಬೇಕು. ಸಂಗೀತ ಮೌಲ್ಯವನ್ನು ಎತ್ತಿಹಿಡಿಯೋ ಮೂಲಕ, ಮಕ್ಕಳಿಗೆ ಸ್ಕೂಲಿನಲ್ಲಿ ಹೇಳಿಕೊಡೋ ಮೂಲಕ ಮಾಡಬೇಕು. ಏನಾದರೂ ತಪ್ಪಿಹೋಗಿದ್ದರೆ ನಾವೆಲ್ಲರೂ ಅದರಲ್ಲಿ ಭಾಗಿಗಳು. ಇದು ಬಹಳ ದುಃಖದ ವಿಚಾರ. ಈ ದುಃಖವನ್ನೇ ಹರಿತವಾಗಿಟ್ಟುಕೊಂಡು, ಅದನ್ನೊಂದು ಬಲ ಮಾಡಿಕೊಂಡು, ನಾವು ಈ ಸ್ಥಿತಿಯನ್ನು ಬದಲಿಸಬೇಕು, ದೇಶವನ್ನು ತಿರುಗಿಸಬೇಕು. ಅಲಾವುದ್ದೀನ್ ಖಾನ್ ಅವರಂತಹ ನಿದರ್ಶನಗಳನ್ನು ನಮ್ಮ ಮನಸ್ಸಿನಲ್ಲಿ, ಬದುಕಿನಲ್ಲಿ ಜಾಗೃತವಾಗಿಟ್ಟಿರಬೇಕು.

ನೋಡಿ... ಈಗ ಇಡೀ ಪ್ರಪಂಚನೇ ನಡಗತಾ ಇದೆ. ಉಕ್ರೇನ್-ರಷ್ಯಾ ಯುದ್ಧ ಏನಾಗುತ್ತೋ ಅಂತ... ಎಂಥ ದೊಡ್ಡ ಸಂಕಷ್ಟ ಇದೆ. ಆದರೆ ನಾವಿಲ್ಲಿ ಹಿಜಾಬು, ಮೈಕು ಇಂಥದನ್ನೇ ದೊಡ್ಡದು ಮಾಡಿಕೊಂಡು ಕಿತ್ತಾಡತಾ ಇದ್ದೀವಿ. ಇಷ್ಟು ವರ್ಷ ಅದು ಸರಿ ಇತ್ತು, ಈಗ ಅಚಾನಕ್ ಯಾಕೆ ಭಾಳ ಕೆಟ್ಟದಾಗಿ ಕಾಣ್ತಿದೆ? ಒಂದು ಕಡೆಯಿಂದ ನೋಡಿದ್ರೆ ಅದು ಭಾಳ ದುಃಖದ ವಿಚಾರ, ಇನ್ನೊಂದು ಕಡೆಯಿಂದ ನೋಡಿದರೆ ಅದು ಭಾಳ ಸ್ಟುಪಿಡ್.

ನೀವು, ನಾನು, ನಮ್ಮಂಥವರು ಮಾತಾಡ್ತೀವಿ...ಬರೀತೀವಿ, ಒಳ್ಳೇದು. ಆದರೆ ಇಷ್ಟೇ ಸಾಲದು, ಇನ್ನೂ ಮುಂದೆ ಹೊಗಬೇಕು. ನಾವೆಲ್ಲ ಒಂದೇ ಎಂಬ ಧೋರಣೆಯನ್ನು, ಆ ಆದರ್ಶವನ್ನು ಮಕ್ಕಳಲ್ಲಿ ಮೊದಲು ಬೆಳಸಬೇಕು. ನಾವೆಲ್ಲರೂ ಮಾಡಬೇಕಿರೋ ಜವಾಬ್ದಾರಿ ಇದು. ನಾವದನ್ನು ಮಾಡಲಿಲ್ಲ ಅಂದರೆ ಈ ದೇಶ ಎಂದೂ ಮುಂದೆ ಬರಲ್ಲ. ಹಿಂಗೇ ಇರುತ್ತೆ. ನಮ್ಮಲ್ಲಿ ಇರೋದನ್ನು ನಾವೇ ಕೈಯಾರ ಹಾಳುಮಾಡ್ತಿದೀವಿ. ಇಂತಹ ಕಿಡಿಗೇಡಿತನದ ಬಗ್ಗೆ ನಮ್ಮ ಜನರನ್ನು ಎಚ್ಚರಿಸಬೇಕಾಗಿರೋದು ನನ್ನ ಮತ್ತು ನಿಮ್ಮ ಕರ್ತವ್ಯ. ನಮ್ಮಲ್ಲಿ ಕೆಲವರು ಮಾಡ್ತಾ ಇದ್ದೀವಿ. ಮೊನ್ನೆ ಇಲ್ಲಿ ನಮ್ಮ ದೇವನೂರ ಮಹಾದೇವರು ಎಷ್ಟು ಛಲೋ ಮಾತಾಡಿದ್ರು. ಆದರೆ ಇಂಥವನ್ನೆಲ್ಲ ಇನ್ನೂ ಮಾಡಬೇಕು.

ನಾವು ಸಮಾಜವನ್ನು ಹಿಂಗೇ ಭಾಗಭಾಗವಾಗಿ ಕಡೀತ ಹೋದರೆ ಏನುಳಿಯುತ್ತೆ? ಒಂದು ನಾಡಿಗೆ ‘ಒಟ್ಟುಮೆ’ ಅಂತ ಏನಿರುತ್ತೆ? ಆ ಒಟ್ಟುಮೆಯನ್ನು ಉಳಿಸಿಕೊಳ್ಳೋದು ಮುಖ್ಯ.

-ಪಂ. ರಾಜೀವ ತಾರಾನಾಥ
ನಿರೂಪಣೆ: ಸುಮಂಗಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.