ADVERTISEMENT

ಹಳತಿನ ಲೆಕ್ಕಾಚಾರ, ಹೊಸತಿನ ನಿರೀಕ್ಷೆ...

ಎಸ್.ರಶ್ಮಿ
Published 30 ಡಿಸೆಂಬರ್ 2022, 19:30 IST
Last Updated 30 ಡಿಸೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ಯಾಲೆಂಡರ್‌ ಬದಲಾದರೂ ಚಿಗುರಿದ ಕನಸಿನ ಬಳ್ಳಿಗಳು ಹಾಗೇ ಹಬ್ಬಿಕೊಂಡಿರುತ್ತವೆ. ಆ ಬಳ್ಳಿಯಲ್ಲಿ ಹೂವು ಚಿಗುರುವವರೆಗೂ ಕಾಯಬೇಕು. ಕಾಯುವಿಕೆಗಿಂತ ಅನ್ಯ ತಪವೊಂದಿಲ್ಲ. ಹಾಗೆಯೇ ಕಳೆದು ಹೋದದ್ದನ್ನು ಹವಣಿಸುತ್ತ, ಹೊಸ ತಿರುವಿನ ನಿರೀಕ್ಷೆಯಲ್ಲಿ ಹೊಸ ವರುಷವನ್ನು ಎದುರುಗೊಳ್ಳೋಣ.

ಈ ಡಿಸೆಂಬರ್‌ ಮಾಸದ ಚಳಿ ಮತ್ತು ಇಳಿಗತ್ತಲೆಯನ್ನು ಅನುಭವವೇ ಚಂದ. ಇದ್ದಕ್ಕಿದ್ದಂತೆ ಗಾಢ ಕಪ್ಪು ಬಣ್ಣದಲ್ಲಿ ವಜ್ರದಂತೆ ಹೊಳೆಯುವ ತಾರೆಗಳನ್ನು ನೋಡುವಾಗ, ಈ ವರ್ಷ ಕಳೆದದ್ದು ಹೇಗೆ ಎಂಬ ಯೋಚನೆ ಬಾರದೇ ಇರದು.

ಇದ್ದಕ್ಕಿದ್ದಂತೆ ಹಿಂದಿನ ವರ್ಷದ ಸಂಭ್ರಮಾಚರಣೆ ನೆನಪಾಗುತ್ತಲೇ ಕಣ್‌ಗಳು ತುಂಬಿ ಬರುತ್ತವೆ. ಆ ಸಂಭ್ರಮಾಚರಣೆಯ ಹಿಂದೆಯೇ ಈ ವರ್ಷದಲ್ಲಿ ಕಳೆದುಕೊಂಡವರ ನೆನಪಾಗುತ್ತದೆ. ಅವರು ಸಂಬಂಧಿಗಳೋ, ಸ್ನೇಹಿತರೋ... ಬದುಕಿಗೆ ವಿದಾಯ ಹೇಳಿದವರನ್ನು ನೆನೆದಾಗಲೆಲ್ಲ.. ಕರಾಳ ವರ್ಷ ಇದು ಎಂದೆನಿಸದೇ ಇರದು.

ADVERTISEMENT

ಹೋದವರೆಲ್ಲ ಹೋದರು. ಇದ್ದವರಿಗೆ ಅದೆಷ್ಟು ಆಸೆ, ಈ ಜೀವ ಶಾಶ್ವತ ಎಂಬಂತೆ ಮನಸು ಲೆಕ್ಕದಲ್ಲಿ ತೊಡಗುತ್ತದೆ. ವರ್ಷದ ಗಳಿಕೆ ಅತಿ ಹೆಚ್ಚು ಇತ್ತು ಎಂದು ಹಿಗ್ಗುವುದರಲ್ಲಿಯೇ ಕಳೆದಿದ್ದು ಎಷ್ಟು? ಆಸ್ಪತ್ರೆಗೆ ಅದೆಷ್ಟು ಹಣ ಸುರಿದೆವು? ಎಷ್ಟು ಬಳಲಿದ್ವಿ, ಉಳಿದವರು ಹೇಗಿದ್ದಾರೆ? ಅವರಿಗಿಂತ ನಮ್ಮ ಬದುಕು ಪರವಾ ಇಲ್ಲ ಎಂಬ ಅಲ್ಪ ಸಮಾಧಾನದಲ್ಲಿದ್ದಾಗಲೇ, ಉಳಿಕೆಯ ಗಂಟು ಅದೆಲ್ಲಿ ಕರಗಿತು? ಆ ಗಂಟಿಗೆ ಅದೆಷ್ಟು ಪುಡಿಗಾಸು ಸೇರಿಸಲು ಸಾಧ್ಯವಾಯ್ತು...? ಈ ಪ್ರಶ್ನೆಗಳ ಬೆನ್ನಟ್ಟಿ ಹೋಗುವಾಗಲೇ ಹಿಂದಿನ ವರ್ಷ ಯಾವ ಸಮಾರಂಭಗಳಿಗೆ ಎಲ್ಲೆಲ್ಲಿ ಹೋಗಿ ಬಂದೆವು? ರಜಾ ಪ್ರವಾಸಗಳು ಹೇಗಿದ್ದವು? ಸಮಾರಂಭಗಳಲ್ಲಿ ಯಾರ ಒಡವೆ, ಯಾವ ಸೀರೆ ನಮ್ಮ ಬಯಕೆಯ ಪಟ್ಟಿಗೆ ಬಂದಿತು? ಬಯಕೆಯ ಪಟ್ಟಿಯಿಂದ ಬೇಡಿಕೆಯ ಪಟ್ಟಿಗೆ ಜಿಗಿದಿದ್ದು ಯಾವಾಗ.. ಈ ಯೋಚನೆ ಬರುವಾಗ ತುಟಿ ಮೇಲೊಂದು ಸಣ್ಣ ನಗೆ.

ಜೊತೆಜೊತೆಗೆ ಹಳತಾದ ವಸ್ತುಗಳ ಪಟ್ಟಿ.. ಆಗಾಗ ನೀರು ಸೋರುವ ಫ್ರಿಜ್ಜು ಈ ಸಲವಾದರೂ ಬದಲಿಸಲೇಬೇಕು, ಟಾಪ್‌ ಲೋಡಿಂಗ್‌ ಇದ್ದ ಮಷೀನು ಫ್ರಂಟ್‌ಲೋಡಿಗೆ ಬದಲಿಸಬೇಕು. ಈ ನಡುವೆ ಬಟ್ಟೆಯಿಂದ ವಾಷಿಂಗ್‌ ಪೌಡರ್‌ನ ಮಧುರ ಸುವಾಸನೆ ಬರುತ್ತದೆಯಷ್ಟೆ.. ಕೊಳೆ ಹೋಗುವುದೇ ಇಲ್ಲ ಎಂಬ ದೂರಿಗೂ ಕಿವಿಯಾಗುತ್ತೇವೆ. ಅದೆಷ್ಟು ವರ್ಷಗಳಿಂದ ಫ್ಯಾನು ಒಂದರಿಂದ ನಾಲ್ಕರವರೆಗೆ ತಿರುಗಿಸಿಯೇ ಸೆಕೆ ನಿರ್ವಹಿಸುತ್ತೇವೆ. ಈಗೀಗಲಂತೂ ಒಂದೇ ದಿನದಲ್ಲಿ ಸರ್ವ ಋತುಗಳೂ ಕಾಣುತ್ತಿವೆ.. ಕಾಡುತ್ತಿವೆ.. ಈ ಸಲವಾದರೂ ಕಂತಿನಲ್ಲಾದರೂ ಸರಿ, ಒಂದು ಎಸಿ ತೆಗೆದುಕೊಳ್ಳಲೇಬೇಕು. ಎನ್ನುವಾಗಲೇ ಮನೆಯ ಕನಸು ಮತ್ತೆ ಹೆಡೆಯೆತ್ತುತ್ತದೆ. ಸ್ವಂತದ್ದೊಂದು ಮನೆಯಿದ್ದರೆ...

ಈ ‘ರೆ’ ಎಂಬ ಮಾತು ಬಂದಾಕ್ಷಣ ಕನಸುಗಳು ಗರಿಗೆದರುತ್ತವೆ. ಸ್ವಂತದ್ದೊಂದು ಮನೆ ಇರಲಿ, ಗಾಳಿ ಬೆಳಕು ದಂಡಿಯಾಗಿ ಬರಲಿ, ಈಗೆಲ್ಲ ಸೌರಶಕ್ತಿಯ ಮನೆಗಳಿವೆ. ಒಮ್ಮೆ ಖರ್ಚು ಮಾಡಿದರೆ ಜೀವನಪೂರ್ತಿ ಆತ್ಮನಿರ್ಭರ ಆಗ್ತೀವೇನೊ. ಹಂಗೆನೆ ಮಳೆ ನೀರು ಸಂಗ್ರಹ ಮಾಡಿಕೊಳ್ಳಬೇಕು. ನೀರು, ವಿದ್ಯುತ್‌ ಎರಡೂ ಸಿಕ್ಕರೆ... ತಿಂಗಳ ಖರ್ಚಿನಲ್ಲಿ ಅದೆಷ್ಟು ಉಳಿತಾಯವಾಗಬಹುದು... ಅರೆರೆ... ಇನ್ನೆಷ್ಟು ವರ್ಷ ಸರ್ವಿಸ್‌ ಉಳಿದಿದೆ? ಸಾಲ ಎಷ್ಟಾಗಬಹುದು? ಕಂತು ತುಂಬುವುದು ಹೇಗೆ? ಬಾಡಿಗೆಯನ್ನೇ ಕಂತಾಗಿ ಬದಲಾಗಬಹುದು.. ಮತ್ತೆ ಈ ಗಾಳಿಪಟದ ಸೂತ್ರವೂ ಕಿತ್ತು ಹೋಗುತ್ತದೆ.

ಕಣ್ಮುಂದೆ ಮಕ್ಕಳ ಶಿಕ್ಷಣದ ಗಾಳಿಪಟ.. ಓಹ್‌.. ಈ ವರ್ಷ ಇಷ್ಟು ಖರ್ಚು ಬರಬಹುದು.. ಎಂಬತ್ತು ಸಾವಿರ ಶುಲ್ಕವಾದರೆ ಒಟ್ಟು ಒಂದು ಕಾಲು ಲಕ್ಷದಷ್ಟು ಖರ್ಚು ಬರಬಹುದು. ಈ ಸಲವಾದರೂ ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳಿಗೆ ಕಳುಹಿಸಬೇಕು, ಖರ್ಚಿಗೆ ಅದೆಷ್ಟು ಕೊಡಬೇಕು? ಯಾವ ಚೀಟಿ ಎಲ್ಲಿ ಮುಗಿಯಬಹುದು? ಯಾವಾಗ ಮುಗಿಯಬಹುದು? ಕ್ಯಾಲೆಂಡರ್‌ನ ಹಿಂಬದಿಯಲ್ಲಿ, ಸೈಡಿನಲ್ಲಿ ಬರೆದ ಲೆಕ್ಕಾಚಾರಕ್ಕೆ ಕೊನೆ ಇದೆಯೇ?

ಕ್ಯಾಲೆಂಡರ್‌ ಬದಲಾಗುತ್ತದೆ. ಕನಸುಗಳು ಬದಲಾಗುವುದಿಲ್ಲ. ನಿರೀಕ್ಷೆಗಳೂ ಬದಲಾಗುವುದಿಲ್ಲ. ಕೆಲವು ಬಯಕೆಗಳು ಸಾಕಾರವಾಗುವಾಗ, ಹಾಸಿಗೆ ಇದ್ದಷ್ಟು ಕಾಲು ಚಾಚುವುದಲ್ಲ, ಕೆಲವೊಮ್ಮೆ ಮುದುರಿ, ಭ್ರೂಣಾಕಾರದಲ್ಲಿ ಮಲಗುತ್ತೇವೆ. ಕನಸೊಂದು ಮಗುವಿನಂತೆ ಮುಲುಗುತ್ತಿರುತ್ತದೆ... ಅಲ್ಲಲ್ಲಿಯೇ..

ಇಷ್ಟೆಲ್ಲ ಲೆಕ್ಕ ಹಾಕಿದಾಗಲೂ ಚಂದದ ಸೀರೆ ಕಂಡಾಗ, ಆತ್ಮೀಯರಿಗೆ ಉಡುಗೊರೆ ಕೊಳ್ಳುವಾಗ ಎರಡೇ ಎರಡು ಸಾಲುಗಳು ನೆನಪಾಗುತ್ತವೆ. ನಾವು ಉಂಡಷ್ಟೇ ನಮ್ಮದು. ನಾವು ಉಟ್ಟಿದ್ದಷ್ಟೇ ನಮಗೆ ದಕ್ಕಿದ್ದು. ಉಳಿದದ್ದು ಯಾವುದೂ ನಮಗಾಗಿ ಅಲ್ಲ. ನಾವು ನಮಗಾಗಿ ಬದುಕುವುದೇ ಇಲ್ಲ.. ಇಂಥದ್ದೊಂದು ಜ್ಞಾನೋದಯವಾದಾಗ ವಾರ್ಷಿಕ ರೆಸ್ಯುಲುಷನ್‌ಗಳತ್ತ ಗಮನ ಹೊರಳುವುದು..

ಈ ಸಲ ವಾಕ್‌ ಮಾಡಲೇಬೇಕು. ತೂಕ ಇಳಿಸಿಕೊಳ್ಳಲೇ ಬೇಕು. ಸರ್‌ ಸಲಾಮತ್‌ ತೊ ಪಗಡಿ ಹಜಾರ್‌ ಜೀವ ಗಟ್ಟಿ ಇರಬೇಕು. ಅದಕ್ಕಾಗಿಯೇ ಆರೋಗ್ಯಕ್ಕೆ ಹೆಚ್ಚು ಗಮನ ಕೊಡಬೇಕು. ಆರೋಗ್ಯಕರವಾಗಿರುವುದನ್ನೇ ಸೇವಿಸಬೇಕು. ಗಾಣದೆಣ್ಣೆಯನ್ನೇ ತರಬೇಕು. ಕರಿದಿದ್ದು ತಿನ್ನಲೇ ಬಾರದು. ಎಲ್ಲವೂ ವರ್ಜ್ಯ. ಇನ್ಮೇಲೆ ಏನಿದ್ದರೂ ಮೊಳಕೆ ಕಾಳು, ವಾಕು.

ವಾಕಿಗೆ ಒಳ್ಳೆಯ ಶೂ ತೊಗೊಬೇಕು. ಜೊತೆಗೊಂದು ನಾಯಿ ಇದ್ದರೆ ಚಂದ. ಅದೊಂದು ಅಭ್ಯಾಸವಾಗಿ ಬದಲಾಗುವುದು. ನಾಯಿಗೊಂದು ಗೂಡು ಇರಬೇಕು. ಮನೆ ಮಾಲೀಕರು ಒಪ್ಪುವರೊ? ಅಪಾರ್ಟ್‌ಮೆಂಟ್‌ನಲ್ಲಿ ಸಾಕಬಹುದೆ? ಛೆ... ಚಂದದ ಮನೆಯೊಂದಿರಬೇಕು... ಮತ್ತೆ ಲೆಕ್ಕಾಚಾರ ಶುರುವಾಗುತ್ತದೆ...

ಹೊಸತೊಂದು ಕ್ಯಾಲೆಂಡರ್‌ ತರುವಾಗ ತಿಥಿ, ಜ್ಯೋತಿಷ್ಯ ಇರುವುದರ ಜೊತೆಗೆ ಸೈಡಿಗೆ ಚೂರು ಜಾಗ ಇರಬೇಕು, ಲೆಕ್ಕ ಬರೆಯಲು, ಚಿತ್ರಗಳಿರಬಾರದು, ದಿನಾಂಕದ ಬದಿ ಬಿಳಿ ಸ್ಥಳ ಹೆಚ್ಚಿರಬೇಕು. ಹಾಲು ಬರದಿದ್ದರೆ, ಪೇಪರ್‌ ಬರದಿದ್ದರೆ ಮಾರ್ಕ್‌ ಮಾಡಲು ಅನುಕೂಲವಾಗುವಂತಿರಬೇಕು..

ಹೀಗೆ ಪುಟ್ಟದೊಂದು ಸಂಚಿಯಲ್ಲಿ, ಖರ್ಚಿಗೊಂದು ದೊಡ್ಡ ಪಾಕೀಟು ಇರಿಸಿ, ಕನಸುಗಳಿಗೆ ಸಣ್ಣಸಣ್ಣ ಜಾಗಗಳಿರಿಸಿ, ಹೇಗಿದ್ದರೂ ಮುಂದಿನವರ್ಷದಿಂದ ಆರೋಗ್ಯಕರ ಊಟ ಮಾಡುವುದರಿಂದ ಕೊನೆಯ ದಿನಕ್ಕೆ ಚೀಸ್‌ ಕೇಕ್‌, ಬಾಳೆಕಾಯಿ ಉಪ್ಪೇರಿ, ಚಿಪ್ಸುಗಳ ಪಟ್ಟಿ ಸಿದ್ಧಪಡಿಸಲು ತಯಾರಾಗುತ್ತೇವೆ.

ಡಿ.31ರ ಅರ್ಧ ರಾತ್ರಿಯಲ್ಲಿ ಕಳುಹಿಸಲು ಚಂದದ ಸಂದೇಶವನ್ನೊ, ಕವಿತೆಯನ್ನೊ ಹುಡುಕಬೇಕು ಹೀಗೆಲ್ಲ ಹಲವು ತಯಾರಿಯೊಡನೆ ಹಳೆಯ ವರ್ಷವನ್ನು ಬೀಳ್ಕೊಡುತ್ತೇವೆ.

ಹೊಸ ವರ್ಷದ ಬೆಳಗು, ಹಲವಾರು ಹೊಸ ನಿರ್ಧಾರ, ಕನಸುಗಳೊಂದಿಗೆ ಹೂನಗೆ ನಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.