ADVERTISEMENT

ನೂರರ ನೆನಪು: ಎಕ್ಕುಂಡಿ ಅವರೊಳಗೊಂದು ಬೆಳ್ಳಕ್ಕಿ ಇತ್ತು

Published 17 ಡಿಸೆಂಬರ್ 2022, 19:31 IST
Last Updated 17 ಡಿಸೆಂಬರ್ 2022, 19:31 IST
ಸುಬ್ಬಣ್ಣ ರಂಗನಾಥ ಎಕ್ಕುಂಡಿ  –ಚಿತ್ರ: ಎ.ಎನ್. ಮುಕುಂದ್
ಸುಬ್ಬಣ್ಣ ರಂಗನಾಥ ಎಕ್ಕುಂಡಿ –ಚಿತ್ರ: ಎ.ಎನ್. ಮುಕುಂದ್   

ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ಕನ್ನಡ ಕಂಡ ಬಹುಮುಖ್ಯ ಕವಿ. ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಎಕ್ಕುಂಡಿಯವರ ಜನ್ಮ ಶತಮಾನೋತ್ಸವವನ್ನು ಇಂದು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಕುಲದ ಕವಿ ಎಂದೇ ಹೆಸರಾಗಿದ್ದ ಕಥನ ಕವಿ ಸು.ರಂ. ಎಕ್ಕುಂಡಿ ಅವರ ಬಗೆಗಿನ ಆಪ್ತ ನೋಟವೊಂದು ಇಲ್ಲಿದೆ.

ದಶಕಗಳ ಕಾಲ ಕಾಂಕ್ರೀಟ್ ನಗರಿಯಲ್ಲಿ ಬೆಳೆದ ನನಗೆ ಕಡಲ ನಗರಿ ಇನ್ನಿಲ್ಲದಂತೆ ಆಕರ್ಷಿಸಿತ್ತು. ಅಲ್ಲಿ ಕಣ್ಣು ಹಾಯಿಸುವಷ್ಟು ದೂರಕ್ಕೂ ಹರಡಿಕೊಂಡಿದ್ದ ಹಸಿರು ಗದ್ದೆಗಳು, ಹರಿವ ತೊರೆ, ತೆಂಗು ಕಂಗುಗಳ ನಡುವೆ ಇದ್ದ ಮನೆಯನ್ನೇ ವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ಇಂತಹ ಮನೆಗೆ ಒಮ್ಮೆ ದಿಢೀರನೆ ಸು.ರಂ. ಎಕ್ಕುಂಡಿಯವರು ಬಂದರು.

ಮನೆಯ ಅಂಗಳದಲ್ಲಿ ಚಾಮರ ಬೀಸುತ್ತಿದ್ದ ತೆಂಗಿನ ಮರಗಳ ಕೆಳಗೆ ಮಾತನಾಡುತ್ತಾ ನಾವೆಲ್ಲಾ ಕುಳಿತಿದ್ದೆವು. ಆಗಲೇ ಒಂದು ಹಿಂಡು ಬೆಳ್ಳಕ್ಕಿಗಳು ಎಲ್ಲಿಂದಲೋ ಹಾರಿಬಂದು ನಮ್ಮ ಮನೆ ಎದುರಿಗಿನ ಗದ್ದೆಗಳಿಗೆ ಇಳಿದವು. ತೊರೆಯಲ್ಲಿದ್ದ ಮೀನುಗಳ ಮೇಲೆ ಒಂದು ಕಣ್ಣಿಟ್ಟೇ ಮಿಂಚುಳ್ಳಿಗಳೂ ಹಾರಿ ಬಂದು ಸೇತುವೆಯ ಮೇಲೆ ಕುಳಿತವು. ಒಂದರೆಕ್ಷಣ ಅಷ್ಟೆ. ಮೀನು ಬೇಟೆಯಾಡಿದ ಮಿಂಚುಳ್ಳಿಗಳು ಎಕ್ಕುಂಡಿಯವರು ಕುಳಿತಿದ್ದ ಎದುರಿನ ಹಲಸಿನ ಮರದ ಟೊಂಗೆಯ ಮೇಲೆ ಊಟಕ್ಕೆ ಕುಳಿತೇಬಿಟ್ಟವು.

ADVERTISEMENT

ಅಷ್ಟೂ ಕಾಲ ಎಕ್ಕುಂಡಿ ಅವರು ತಮ್ಮ ಕಣ್ಣುಗಳನ್ನು ಅರಳಿಸಿ, ಬೊಚ್ಚು ಬಾಯನ್ನು ಅದಷ್ಟೂ ಅಗಲವಾಗಿಸಿ ಕಳೆದುಹೋಗಿಬಿಟ್ಟಿದ್ದರು. ನನಗೆ ಆ ವೇಳೆಗೆ ಬೆಳ್ಳಕ್ಕಿಗಳಿಗೂ ಎಕ್ಕುಂಡಿಯವರಿಗೂ ಇದ್ದ ನಂಟು ಗೊತ್ತಿತ್ತು.

ಹಾಗೆ ನೋಡಿದರೆ ಎಕ್ಕುಂಡಿಯವರು ನನಗೆ ಪರಿಚಯವಾದದ್ದೇ ಬೆಳ್ಳಕ್ಕಿಯ ಮೂಲಕ. ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ ಒಮ್ಮೆ ನಾಡಿನ ಗಣ್ಯ ಸಾಹಿತಿಗಳನ್ನು ನಿಮ್ಮ ಮನವ ಕಾಡುತ್ತಿರುವ ವಿಷಯವೇನು ಎಂದು ಕೇಳಿತ್ತು.

ಆಗ ಎಕ್ಕುಂಡಿಯವರು ಬೆಳ್ಳಕ್ಕಿಗಳನ್ನು ನೋಡುವ ಮನಸ್ಸನ್ನು, ಗಂಜಿಯ ಮಡಕೆಗಳು ಕಿತ್ತುಕೊಳ್ಳುತ್ತಿವೆ ಎಂದು ನಿಡುಸುಯ್ದಿದ್ದರು. ಅವರು ಬಂಕಿಕೊಡ್ಲದಲ್ಲಿರುವಾಗ ನಡೆದ ಘಟನೆ ಅದು. ಗದ್ದೆಯಲ್ಲಿ ಕೆಲಸ ಮಾಡುವ ತಂದೆಗಾಗಿ ಗಂಜಿ ಹೊತ್ತೊಯ್ಯುತ್ತಿದ್ದ ಹುಡುಗಿಯೊಬ್ಬಳು ಬೆಳ್ಳಕ್ಕಿ ಹಿಂಡನ್ನು ನೋಡುತ್ತಾ ಮೈ ಮರೆತುಬಿಡುತ್ತಾಳೆ. ಹಸಿವೆ ಹೆಚ್ಚಾದ ತಂದೆ ಮಗಳನ್ನು ಮಗೂ ಗಂಜಿಯ ಮಡಕೆ ಎಲ್ಲಿ ಎಂದು ಗದರಿಸುತ್ತಾನೆ. ಮಗು ತಬ್ಬಿಬ್ಬಾಗಿ ಬೆಳ್ಳಕ್ಕಿಗಳ ಲೋಕದಿಂದ ವಾಸ್ತವಕ್ಕೆ ಇಳಿಯುತ್ತದೆ.

ಎಕ್ಕುಂಡಿ ಕೇಳುತ್ತಾರೆ- ‘ಈ ಗಂಜಿಯ ಮಡಕೆಯೇ ಕೊಕ್ಕರೆಗಳನ್ನೂ ನುಂಗುತ್ತದೆ. ಮಗುವಿನ ಮನಸ್ಸನ್ನೂ ನುಂಗುತ್ತದೆ. ಅಂದಿನಿಂದಲೂ ಈ ಸಮಸ್ಯೆ ನನ್ನನ್ನು ಕಾಡುತ್ತಿದೆ. ನಮ್ಮ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಗಂಜಿಯ ಮಡಕೆಗಾಗಿ ಕೊಕ್ಕರೆ ಬೆಳ್ಳಕ್ಕಿಗಳನ್ನು ತೊರೆಯಲೇಬೇಕೆ’ ಎಂದು.

ಎಕ್ಕುಂಡಿ ಅವರೇ ಒಂದು ಬೆಳ್ಳಕ್ಕಿಯ ಹಾಗೆ ಎಂದು ನನಗೆ ಎಷ್ಟೋ ಬಾರಿ ಅನಿಸಿದ್ದುಂಟು. ಕಲಬುರ್ಗಿಯ ಮಣೂರ ಮೂಲದ ಎಕ್ಕುಂಡಿಯವರು, ಹುಟ್ಟಿ ಬೆಳೆದದ್ದು ರಾಣೇಬೆನ್ನೂರಿನಲ್ಲಿ. ತಮ್ಮ ಓದು ಮುಗಿದ ನಂತರ ಒಮ್ಮೆ ಗೆಳೆಯರೊಂದಿಗೆ ಗೋಕರ್ಣಕ್ಕೆ ಹೋದರು. ಮೊದಲ ಬಾರಿಗೆ ಕಡಲು, ತೆಂಗು, ಬೆಳ್ಳಕ್ಕಿ ನೋಡಿದ ಎಕ್ಕುಂಡಿಯವರು ನಂತರ ಅಲ್ಲಿಂದ ವಾಪಸ್ ಬಂದದ್ದು 35 ವರ್ಷಗಳ ದೀರ್ಘ ಕಾಲದ ನಂತರ. ಕಡಲಿಗೆ, ಅಲ್ಲಿನ ಹಾಲಕ್ಕಿ ಸಮುದಾಯಕ್ಕೆ, ಗುಮಟೆ ಪಾಂಗು ಹಾಡು ಕುಣಿತಕ್ಕೆ, ಬೆಳ್ಳಕ್ಕಿಗಳಿಗೆ ಮನಸೋತ ಎಕ್ಕುಂಡಿ ಬಂಕಿಕೊಡ್ಲದ ಆನಂದಾಶ್ರಮ ಶಾಲೆಯಲ್ಲಿಯೇ ಶಿಕ್ಷಕರಾಗಿ ಕೆಲಸ ಮಾಡಿದರು.

ಅಷ್ಟು ದೀರ್ಘ ವರ್ಷಗಳ ನಂತರ ಅವರು ಬೆಂಗಳೂರಿಗೆ ಬಂದಾಗ ನಾನು ಅವರ ಮನೆಯ ಬಾಗಿಲು ತಟ್ಟಿದ್ದೆ. ಇಬ್ಬರೂ ಮಾತನಾಡುತ್ತಾ ಕುಳಿತಿದ್ದಾಗ ಹೊರಗೆ ವಿಮಾನ ಹಾರಿದ ಶಬ್ದವಾಯಿತು. ಬುಡು ಬುಡು ಅಂಗಳಕ್ಕೆ ಓಡಿದವರೇ ವಿಮಾನ ಚುಕ್ಕಿ ಗಾತ್ರವಾಗಿ ಮರೆಯಾಗುವವರೆಗೂ ಅದನ್ನೇ ನೋಡುತ್ತಾ ನಿಂತಿದ್ದರು. ನಗೆ ತುಳುಕಿಸುತ್ತಾ ಒಳಬಂದ ಅವರು ಅದು ಈಗ ನನಗಿರುವ ಬೆಳ್ಳಕ್ಕಿ ಎಂದರು. ಆದರೆ ಅವರ ಒಳಗಣ್ಣು ಕಂಡ ನನಗೆ ಈಗಿರುವ ಕಾಂಕ್ರೀಟ್ ಕಾಡಿನಿಂದ ಮತ್ತೆ ಬಂಕಿಕೊಡ್ಲಕ್ಕೆ ಹಾರಲು ಸಜ್ಜಾಗಿ ನಿಂತಿರುವ ಬೆಳ್ಳಕ್ಕಿಯಂತೆ ಅವರು ನನಗೆ ಕಂಡಿದ್ದರು.

ಎಕ್ಕುಂಡಿ ಯಾವಾಗಲೂ ಹೇಳುತ್ತಿದ್ದರು. ನನ್ನ ಮನೆ ಬಡತನವನ್ನೇ ಉಂಡುಟ್ಟಿತ್ತು ಎಂದು. ಹಾಗಿರುವಾಗ ಒಂದು ದಿನ ಎಂದೂ ಹಾಡದ ತಾಯಿ ತಮ್ಮಷ್ಟಕ್ಕೆ ತಾವೇ ಒಂದು ಹಾಡನ್ನು ಹಾಡಿದರು. ನನ್ನ ತಾಯಿ ಅಕಸ್ಮಾತ್ ಆಗಿ ಹಾಡಿದ ಆ ಒಂದು ಹಾಡಿನಿಂದ ನಾನು ಈ ಜಗತ್ತನ್ನು ನೋಡುವ ಕಿಟಕಿಯನ್ನು ರೂಪಿಸಿಕೊಂಡೆ ಎಂದು.

ನನಗೆ ಅಂದಿನಿಂದಲೂ ಎಕ್ಕುಂಡಿಯವರು ರೂಪಿಸಿಕೊಂಡ ಕಿಟಕಿಯಿಂದ ಕಂಡಿರಬಹುದಾದ ಸಂಗತಿಗಳ ಬಗ್ಗೆ ಅದಮ್ಯ ಕುತೂಹಲ. ಅವರ ಕವಿತೆಗಳ ಕಿಟಕಿಯಲ್ಲಿ ಒಮ್ಮೆ ಇಣುಕಿ ನೋಡಿ ಅರೆ! ಎಷ್ಟೊಂದು ಜನ, ಎಷ್ಟೊಂದು ಸಂಗತಿಗಳು! ಅಲ್ಲಿ ಕಾರ್ಲ್ ಮಾರ್ಕ್ಸ್ ಆತನ ಹೆಂಡತಿ ಹೆಲೆನ್, ಗೆಳೆಯ ಎಂಗೆಲ್ಸ್, ಮಧ್ವ ಮುನಿ, ದಾಸಿಮಯ್ಯ, ಪುರಂದರ ದಾಸರು, ನಾಗಿ, ಏಸುಕ್ರಿಸ್ತ ಜಾಬಾಲ, ರಂತಿದೇವ, ಚಿನ್ನಮ್ಮನ ಕಂದ, ಎಸೆದ ಬ್ರೆಡ್ಡಿನ ತುಂಡನ್ನು ಆಯಲು ತೊಟ್ಟಿಯೊಳಗೆ ಇಳಿಯುವ ದುಡಿಯುವ ಕಸುವಿರುವ ಹಸಿದ ಕೈಗಳು, ಉಳ್ಳವರ ಎದೆಯಿಂದ ಬಂದಂಥ ಬೆಣಚು ಕಲ್ಲುಗಳ ಮೇಲೆ ಕಾಲಿಟ್ಟು ಗಾಯಗೊಂಡ ಕೂಲಿಕಾರರು, ಹಾಲೆಂದೇ ಹಿಟ್ಟು ನೀರು ಕುಡಿದ ಅಶ್ವತ್ಥಾಮ, ವಿಷಾದ ಬಟ್ಟಲಿಗೆ ಬಲಿಯಾದ ಸಾಕ್ರೆಟಿಸ್...

ಎಕ್ಕುಂಡಿಯವರ ಕವಿತೆಯ ಕಿಟಕಿಗೆ ನಾನು ಅಂದಿನಿಂದಲೂ ಆತುಕೊಂಡೇ ಇದ್ದೇನೆ. ಎಕ್ಕುಂಡಿಯವರನ್ನು ನನ್ನ ಮನೆಯಂಗಳದಿಂದ ಇಳಿಸಿಕೊಂಡು ಆ ಗದ್ದೆ ಬದುವಿನ ಮೇಲೆ ನಡೆಯುತ್ತಾ ಅಲ್ಲಿನ ವಿಶ್ವವಿದ್ಯಾಲಯ, ಕಾಲೇಜು, ಆಕಾಶವಾಣಿಗೆ ಕರೆದೊಯ್ದೆ. ಎಕ್ಕುಂಡಿ ಅವರು ತಮ್ಮ ಕವಿತೆಗಳ ಬಗ್ಗೆ ಮಾತನಾಡಿದ್ದೇ ಇಲ್ಲ ಎನ್ನುವಷ್ಟು ಅಪರೂಪ. ಆದರೆ ಎಕ್ಕುಂಡಿಯವರು ಆ ಬಾರಿ ತಮ್ಮ ಕವಿತೆಗಳು ಬಕುಲದ ಹೂಗಳಂತೆ ಅರಳಿದ್ದರ ಬಗ್ಗೆ ಮಾತೇ ಮಾತಾಡಿದರು.

ಅಷ್ಟು ದಿನ ಮಾತನಾಡದೆ ಹೋದದ್ದರ ಬಗ್ಗೆಯೂ ಮಾತನಾಡಿದರು. ನನ್ನೊಳಗೆ ನಾನು ಇಳಿಯಲು ಅಂಜುವುದಕ್ಕೆ ಕಾರಣಗಳಿವೆ. ನೆನಪು ಎನ್ನುವುದು ಗಣಿ ಕಾರ್ಮಿಕರನ್ನು ಗಣಿಯಾಳಕ್ಕೆ ಕರೆದೊಯ್ಯಲು ಇರುವ ತೊಟ್ಟಿಲುಗಳ ಹಾಗೆ. ಅವರು ಇಳಿದ ಗಣಿ ಚಿನ್ನದ್ದಿರಬಹುದು. ಆದರೆ ಅವರ ಬಡತನ ತಪ್ಪಿರುವುದಿಲ್ಲ. ಹಾಗೆ ನನ್ನೊಳಗೆ ನಾನು ಇಳಿದಾಗ ನನ್ನನ್ನು ಮೊದಲು ಮುತ್ತಿಕೊಳ್ಳುವುದೇ ನನ್ನ ಬದುಕಿನ ಅಧೀರ ಆರಂಭ ಎಂದು ತಮ್ಮ ಬದುಕಿನ ಅನೇಕ ಸಂಗತಿಗಳನ್ನು ಅದೇ ಮೊದಲ ಬಾರಿಗೆಂಬಂತೆ ಮಾತನಾಡುತ್ತಾ ಹೋದರು. ಹಾಗೆ ಹೇಳುವಾಗ ಒಮ್ಮೆ ಅವರು ಬದುಕಿಗೆ ಒಂದು ಕಿಟಕಿ ಇರಬೇಕು ಎಂದು ಒಬ್ಬ ಆಂಗ್ಲ ಲೇಖಕಿ ಹೇಳಿದ್ದಾಳೆ. ಆದರೆ ನಾನೋ ವಾಸ್ತವದೊಂದಿಗೆ ಹೋರಾಡುವ ಬಲದ ಸಂಗ್ರಹ ಅಸಾಧ್ಯವಿದ್ದರೂ ಗೆಳೆಯರ ಒಡನಾಟದ ಪ್ರೀತಿಯ ಪ್ರಪಂಚದಲ್ಲಿ ಬಂದುದೆಲ್ಲವನ್ನೂ ಬರಮಾಡಿಕೊಳ್ಳುವ ತೆರೆದ ಬಾಗಿಲನ್ನೇ ಹೊಂದಿದ್ದೆ ಎಂದು ಸಂಭ್ರಮಿಸಿದ್ದರು.

ಹಾಗೆ ಅವರು ಹೇಳಿದ ಕೆಲವೇ ವಾರಗಳ ಮೊದಲು ಅವರ ‘ಬಕುಲದ ಹೂವುಗಳು’ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಘೋಷಣೆಯಾಗಿತ್ತು. ಎಕ್ಕುಂಡಿಯವರ ಕಾವ್ಯದ ಬಗ್ಗೆ ಬಂದ ವಿಮರ್ಶೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆ ಕೊರಗನ್ನು ಬಕುಲದ ಹೂವುಗಳು ಬಗ್ಗೆ ಬಂದ ಲೇಖನಗಳು ಸ್ವಲ್ಪವಾದರೂ ನೀಗಿಸಿದ್ದವು. ನಾನು ಎಕ್ಕುಂಡಿಯವರ ಬಗ್ಗೆ ಅದುವರೆಗೂ ಬಂದ ಲೇಖನಗಳನ್ನೆಲ್ಲ ಒಟ್ಟುಗೂಡಿಸಿ ‘ಎಕ್ಕುಂಡಿ ನಮನ’ವನ್ನು ಸಂಪಾದಿಸಲು ಹೊರಟೆ. ಎಕ್ಕುಂಡಿಯವರನ್ನು ಮೇಲಿಂದ ಮೇಲೆ ಭೇಟಿ ಮಾಡಿ ಚರ್ಚಿಸಿದೆ. ಪುಸ್ತಕ ಬೋಳಂತಕೋಡಿ ಈಶ್ವರ ಭಟ್ಟರ ಪುತ್ತೂರು ಕರ್ನಾಟಕ ಸಂಘದಿಂದ ಸಿದ್ಧವಾಯಿತು. ಅದರ ಬಿಡುಗಡೆಗೆ ಕರೆಯಲು ಹೋಗಬೇಕೆನ್ನುವಷ್ಟರಲ್ಲಿ ಅವರು ಇಲ್ಲವಾದ ಸುದ್ದಿ ತಲುಪಿತು. ಎಕ್ಕುಂಡಿಯವರ ಅಭಿನಂದನಾ ಗ್ರಂಥವಾಗಬೇಕಿದ್ದ ‘ಎಕ್ಕುಂಡಿ ನಮನ’ ಅವರ ಸ್ಮರಣೆಯ ಗ್ರಂಥವಾಯಿತು.

ಕಡಲ ತಡಿಯಲ್ಲಿ ನಿಂತು ಹಾರುತ್ತಿದ್ದ ಬೆಳ್ಳಕ್ಕಿಯನ್ನೂ, ಅಬ್ಬರಿಸುತ್ತಿದ್ದ ಸಮುದ್ರವನ್ನೂ ಒಟ್ಟೊಟ್ಟಿಗೆ ಕಣ್ತುಂಬಿಕೊಳ್ಳುತ್ತಿದ್ದ ಎಕ್ಕುಂಡಿ ಕಡಲಿನ ಅಪಾರ ಹಾಗೂ ಆಗಸದ ಅನಂತತೆ ಎರಡಕ್ಕೂ ಬೆರಗಾಗಿ ನಿಂತಿದ್ದರು. ಆಗಲೇ ಅವರು ನನ್ನ ಕಿವಿಯಲ್ಲಿ ‘ನನ್ನ ಕಾವ್ಯಕ್ಕೆ ಬೆಳ್ಳಕ್ಕಿಗಳ ರೆಕ್ಕೆಗಳಿವೆ’ ಎಂದಿದ್ದು. ಆ ಮಾತು ಅಂದಿನಿಂದ ಇಂದಿನವರೆಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.