ADVERTISEMENT

ತುಕ್ಕು ಹಿಡಿಯುತ್ತಿದೆ ಉಕ್ಕಿನ ನಗರ!

ಗುರು ಪಿ.ಎಸ್‌
Published 19 ಫೆಬ್ರುವರಿ 2023, 2:49 IST
Last Updated 19 ಫೆಬ್ರುವರಿ 2023, 2:49 IST
ಕ್ರೀಡಾಂಗಣದ ಬೋರ್ಡ್‌ನಂತೆಯೇ ಭದ್ರಾವತಿಯ ಕನಸುಗಳಿಗೂ ಈಗ ತುಕ್ಕು ಹಿಡಿದಿದೆ –ಚಿತ್ರಗಳು: ಎಸ್‌. ಪ್ರಶಾಂತ್
ಕ್ರೀಡಾಂಗಣದ ಬೋರ್ಡ್‌ನಂತೆಯೇ ಭದ್ರಾವತಿಯ ಕನಸುಗಳಿಗೂ ಈಗ ತುಕ್ಕು ಹಿಡಿದಿದೆ –ಚಿತ್ರಗಳು: ಎಸ್‌. ಪ್ರಶಾಂತ್   

ಒಂದುಕಾಲಕ್ಕೆ ವೈಭವದಿಂದ ಮೆರೆದ ಊರು ಭದ್ರಾವತಿ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುತ್ತದೆ ಎನ್ನುವ ಸುದ್ದಿ ಈ ಊರನ್ನು ಬರಸಿಡಿಲಿನಂತೆ ಬಡಿದಿದೆ. ಊರಿನ ವೈಭವಕ್ಕೂ ತುಕ್ಕು ಹಿಡಿದಿದೆ...

**

‘ಯಾವುದೇ ಕಾರಣಕ್ಕೂ ಈ ಕಾರ್ಖಾನೆಯನ್ನು ಮುಚ್ಚುವುದಾಗಲಿ, ಖಾಸಗಿಯವರಿಗೆ ವಹಿಸುವುದಾಗಲಿ ಮಾಡುವುದು ಬೇಡ. ಇದು ನಮ್ಮ ಆಸ್ತಿ, ನಮ್ಮ ಸಂಸ್ಥಾನವೇ ಇದನ್ನು ನಡೆಸಬೇಕು’

ADVERTISEMENT

105 ವರ್ಷಗಳ ಹಿಂದೆ, ಸರ್‌ ಎಂ. ವಿಶ್ವೇಶ್ವರಯ್ಯನವರು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ, ಇವತ್ತಿನ ವಿಐಎಸ್‌ಎಲ್‌ ಕುರಿತು ಹೇಳಿದ ಮಾತಿದು.

ಕೆಮ್ಮಣ್ಣುಗುಂಡಿ ಮತ್ತು ಕುದುರೆಮುಖದಲ್ಲಿ ಕಬ್ಬಿಣದ ಅದಿರಿನ ಗಣಿ ಇರುವುದು ದೃಢವಾದಾಗ, ರಾಜ್ಯಕ್ಕೆ ಬೇಕಾದ ಬೀಡುಕಬ್ಬಿಣ ತಯಾರಿಸುವ ಉದ್ದೇಶದಿಂದ ಕಾರ್ಖಾನೆ ಸ್ಥಾಪಿಸಲು ಮಹಾರಾಜರು ಆಯ್ಕೆ ಮಾಡಿಕೊಂಡಿದ್ದ ಸ್ಥಳ ಭದ್ರಾವತಿ.

ಈ ಬಗ್ಗೆ ರಾಜರು ಬ್ರಿಟಿಷರಿಂದ ವರದಿ ಕೇಳಿದ್ದಾಗ, ಮೈಕಲ್ ಎಂಬ ಅಧಿಕಾರಿ, ‘ಭದ್ರಾವತಿಯಲ್ಲಿ ಕಾರ್ಖಾನೆ ಸ್ಥಾಪಿಸಿ ತಯಾರಿಸುವ ಉಕ್ಕಿನ ವೆಚ್ಚ, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಉಕ್ಕಿನ ಬೆಲೆಗಿಂತ ಹೆಚ್ಚಾಗುತ್ತದೆ. ಹಾಗಾಗಿ, ಈ ಕಾರ್ಖಾನೆಗೆ ನಾವೇ ಬಂಡವಾಳ ತೊಡಗಿಸಿ, ನಾವೇ ಆರಂಭ ಮಾಡಿದರೆ ನಮಗೆ (ಸರ್ಕಾರಕ್ಕೆ) ನಷ್ಟ ನಿಶ್ಚಿತ. ಕಾರ್ಖಾನೆ ಪ್ರಾರಂಭ ಮಾಡಲೇಬೇಕೆಂದಿದ್ದರೆ ಅದನ್ನು ಖಾಸಗಿಯವರಿಗೆ ಕೊಟ್ಟುಬಿಡೋಣ. ಆಗ, ಮೈಸೂರು ರಾಜ್ಯಕ್ಕೆ ಇಂತಿಷ್ಟು ಆದಾಯವಾದರೂ ಬರುತ್ತೆ’ ಎಂದು ಸಲಹೆ ನೀಡುತ್ತಾರೆ.

ವಿಶ್ವೇಶ್ವರಯ್ಯನವರಿಗೆ ಈ ವಿಷಯ ಹೇಳುತ್ತಾರೆ ಮಹಾರಾಜರು. ಆಗಷ್ಟೇ, ಮೈಸೂರು ದಿವಾನರಾಗಿ ಕರ್ತವ್ಯ ಪೂರ್ಣಗೊಳಿಸಿ, ಮಹಾರಾಷ್ಟ್ರ ಸರ್ಕಾರದ ಕನ್ಸಲ್ಟಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವೇಶ್ವರಯ್ಯನವರು, ತಾವೇ ವ್ಯವಸ್ಥಾಪಕರಾಗಿ ಬಂದು, ಕಾರ್ಖಾನೆಯನ್ನು ಮುನ್ನಡೆಸುವುದಾಗಿ ಹೇಳುತ್ತಾರೆ.

‘ದಿವಾನರಾಗಿದ್ದವರು ಒಂದು ಕಂಪನಿಯ ಎಂ.ಡಿ. ಆಗಿ ಬರುವುದು ಬೇಡ, ನಾನೇ ನಿಮಗೆ ಹಿಂಬಡ್ತಿ ನೀಡಿದಂತಾಗುತ್ತದೆ, ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ’ ಎಂದ ಮಹಾರಾಜರಿಗೆ, ‘ನಮ್ಮ ಸಂಸ್ಥಾನಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ನಾನು ಪದವಿ, ಪ್ರತಿಷ್ಠೆ ನೋಡುವುದಿಲ್ಲ’ ಎಂದವರೇ, ಪುಣೆಯಿಂದ ಭದ್ರಾವತಿಗೆ ತಮ್ಮ ಕಚೇರಿಯನ್ನು ಸ್ಥಳಾಂತರಿಸುತ್ತಾರೆ. ಮಹಾರಾಷ್ಟ್ರ ಸರ್ಕಾರದ ಕೆಲಸ ಮಾಡುತ್ತಲೇ, ಈ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಮುಂದುವರಿಯುತ್ತಾರೆ. ಆರೇ ವರ್ಷಗಳಲ್ಲಿ ಲಾಭದ ಹಳಿಗೂ ಬರುತ್ತದೆ ಕಾರ್ಖಾನೆ.

1918ರಲ್ಲಿ ಕಾರ್ಯಾರಂಭ ಮಾಡಿದ ಮೈಸೂರು ಐರನ್ ವರ್ಕ್ಸ್‌, 1923ರಲ್ಲಿ ಉತ್ಪಾದನೆ ಆರಂಭಿಸುತ್ತದೆ. ಮುಂದೆ ವಿಶ್ವೇಶ್ವರಯ್ಯನವರ ಹೆಸರನ್ನೇ ಹೊಂದಿದ ಕಂಪನಿ, ತಾನೂ ಬೆಳೆದು, ನಗರವನ್ನೂ ಬೆಳೆಸುತ್ತಾ ಹೋಗುತ್ತದೆ. ಇಂತಹ ಇತಿಹಾಸ ಹೊಂದಿದ, ಈಗ ಶತಮಾನದ ಸಂಭ್ರಮದಲ್ಲಿರಬೇಕಾದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (ವಿಐಎಸ್‌ಎಲ್‌) ಮುಚ್ಚುವುದಾಗಿ ಕೇಂದ್ರಸರ್ಕಾರ 2023ರ ಫೆ.13ರಂದು ರಾಜ್ಯಸಭೆಯಲ್ಲಿ ಘೋಷಿಸಿದೆ.

***

ಕಾರ್ಖಾನೆಯ ಕಾರ್ಮಿಕರ ವಸತಿಗೃಹಕ್ಕೆ ಒದಗಿದ ಗತಿ

ಅಭಿವೃದ್ಧಿಯ ಉತ್ತುಂಗದಲ್ಲಿದ್ದ ಕಂಪನಿಯು, ವಿನಾಶದ ಹಾದಿ ಹಿಡಿದಿದ್ದು ಹೇಗೆ ಎಂದು ತಿಳಿಯಲು ಭದ್ರಾವತಿಗೆ ಕಾಲಿಟ್ಟಾಗ ಕಂಡಿದ್ದು ಹಲವು ಕಥೆ, ಹಲವರ ವ್ಯಥೆ.

ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ರಾಜ್ಯ, ದೇಶದ ಪ್ರಗತಿಗೆ ಕೊಡುಗೆ ನೀಡುತ್ತಾ ಬಂತು ವಿಐಎಸ್‌ಎಲ್. ಕಾರ್ಖಾನೆಯ ಹಿಂದೆಯೇ ನದಿ ಇರುವ ಏಕೈಕ ಕಾರ್ಖಾನೆ ಎಂಬ ಗರಿಮೆಯೊಂದಿಗೆ, ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಕಂಪನಿ ಎಂಬ ಹೆಗ್ಗಳಿಕೆಯನ್ನೂ ಪಡೆಯಿತು.

1949ರ ನಂತರ ಜೋಗದಿಂದ ನಿರಂತರ ಜಲವಿದ್ಯುತ್‌ ಸಿಗಲು ಆರಂಭವಾದ ಮೇಲೆ, ಕಾರ್ಖಾನೆಯ ಉತ್ಪಾದನೆಯೂ ಹೆಚ್ಚಾಯಿತು. ಆಗ ತಾನೆ, ಸ್ವತಂತ್ರ ಪಡೆದ ಉತ್ಸಾಹದಲ್ಲಿದ್ದ ದೇಶದ ರಕ್ಷಣಾ ವಲಯವನ್ನೂ ವಿಐಎಸ್‌ಎಲ್‌ ಉತ್ಪನ್ನಗಳು ಪ್ರವೇಶಿಸತೊಡಗಿದವು.

ಶಿವಮೊಗ್ಗ ಜಿಲ್ಲೆಯು ಫೌಂಡ್ರಿ ಪ್ರಾಡಕ್ಟ್ಸ್‌ಗೆ ಪ್ರಪಂಚದಲ್ಲಿಯೇ ಹೆಸರುವಾಸಿಯಾಯಿತು. ಕಂಪನಿಯ ವ್ಯಾಪ್ತಿಯ ಜಾಗದಲ್ಲಿ ಶಾಲಾ–ಕಾಲೇಜುಗಳು, ಆಸ್ಪತ್ರೆ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು. ಕಾರ್ಮಿಕರ ಮಕ್ಕಳಿಗೆ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ಸಿಗತೊಡಗಿತು. ಕಂಪನಿಯು ರಜತ ಮಹೋತ್ಸವದ ಸಂಭ್ರಮದಲ್ಲಿದ್ದಾಗ ವಿಐಎಸ್‌ಎಲ್‌ ಕ್ರೀಡಾಂಗಣವೂ ನಿರ್ಮಾಣವಾಯಿತು, ಅಲ್ಲಿ ರಣಜಿ ಕ್ರಿಕೆಟ್‌ ಪಂದ್ಯವನ್ನು ಕೂಡ ನಡೆಸಲಾಯಿತು. ಹೀಗೆ, ಅಕ್ಕ–ಪಕ್ಕದ ಜಿಲ್ಲೆ, ರಾಜ್ಯಗಳು ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಬೆಳೆಯಿತು ಭದ್ರಾವತಿ.

ಸುಮಾರು 17 ಸಾವಿರ ಕಾಯಂ ನೌಕರರು, ಐದು ಸಾವಿರ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಒಂದು ಲಕ್ಷಕ್ಕೂ ಹೆಚ್ಚು ಜನ ಕಾರ್ಖಾನೆಯನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅವಲಂಬಿಸಿದ್ದರು.

ಈ ನಡುವೆ, 1936ರ ವೇಳೆಗೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿಯೇ ಭದ್ರಾವತಿಯಲ್ಲಿ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಕೂಡ ತಲೆ ಎತ್ತಿತು. ಭದ್ರಾವತಿಯ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸ ತೊಡಗಿದವು ವಿಐಎಸ್‌ಎಲ್‌ ಮತ್ತು ಎಂಪಿಎಂ.

ಈಗ, ಎಂಪಿಎಂ 2017ರಲ್ಲಿಯೇ ಸ್ಥಗಿತಗೊಂಡಿದೆ. ವಿಐಎಸ್‌ಎಲ್‌ ಮುಚ್ಚುವ ಹಾದಿಯಲ್ಲಿದೆ. ಇದಕ್ಕಾರು ಕಾರಣ ಎಂದು ಕೇಳಿದರೆ, ಸ್ಥಳೀಯ ರಾಜಕಾರಣಿಗಳು, ‘ಚರ್ಚಾಸ್ಪರ್ಧೆ’ಗೆ ನಿಂತಂತೆ ವಾದ ಮಂಡಿಸುತ್ತಾ ಸಾಗುತ್ತಾರೆ.

1983ರವರೆಗೂ ವಿಐಎಸ್‌ಎಲ್‌ನ್ನು ರಾಜ್ಯಸರ್ಕಾರ ಲಾಭದಾಯಕವಾಗಿಯೇ ನಡೆಸಿಕೊಂಡು ಬಂತು. ಕಾಲಕ್ಕೆ ತಕ್ಕಂತೆ ತಾಂತ್ರಿಕವಾಗಿ ‘ಅಪ್‌ಡೇಟ್‌’ ಆಗದಿರುವುದು, ಹಳೆಯ ಯಂತ್ರಗಳು, ಅದಿರು ಕೊರತೆಯಿಂದ ಉತ್ಪಾದನೆ ಕ್ಷೀಣಿಸುತ್ತಿದೆ ಎಂಬ ಕಾರಣಗಳನ್ನು ಮುಂದುಮಾಡಿ 1983–84ರಲ್ಲಿ, ಕಾರ್ಖಾನೆಯ ಶೇ 60ರಷ್ಟು ಪಾಲನ್ನು ಭಾರತೀಯ ಉಕ್ಕು ಪ್ರಾಧಿಕಾರ (ಸೇಲ್‌)ಗೆ ನೀಡಲಾಗುತ್ತದೆ. ಆಗ, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಜನತಾ ಪಕ್ಷದ ರಾಮಕೃಷ್ಣ ಹೆಗ್ಡೆ. ಕಾಂಗ್ರೆಸ್‌ನ ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದರು.

ನಷ್ಟದಲ್ಲಿರುವ ಕಂಪನಿ ನಿಭಾಯಿಸಲು ರಾಜ್ಯಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂಬ ಕಾರಣ ನೀಡಿ ಮತ್ತು ₹650 ಕೋಟಿ ಬಂಡವಾಳ ತೊಡಗಿಸುವ ಸೇಲ್‌ನ ಭರವಸೆಯ ಆಧಾರದ ಮೇಲೆ, ಆಗಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಉಳಿದ
ಶೇ 40ರಷ್ಟು ಪಾಲನ್ನೂ ಸೇಲ್‌ಗೆ ನೀಡುತ್ತಾರೆ.

ಇನ್ನು, ‘ಆಡಳಿತ’ ಮಾಡುವುದಷ್ಟೇ ಸರ್ಕಾರದ ಕೆಲಸ, ‘ಬಿಸಿನೆಸ್‌’ ಮಾಡುವುದಲ್ಲ ಎಂಬ ಕಲ್ಪನೆಯಡಿ, ಸಾರ್ವಜನಿಕ ಆಸ್ತಿ ನಿರ್ವಹಣೆ ಮತ್ತು ಬಂಡವಾಳ ಹಿಂತೆಗೆತ ಇಲಾಖೆ (ದೀಪಂ) ರೂಪಿಸಿದ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ನಷ್ಟದಲ್ಲಿರುವ ಸರ್ಕಾರಿ ಸಂಸ್ಥೆಗಳನ್ನು ‘ಡಿಸ್‌ಇನ್ವೆಸ್ಟ್‌ಮೆಂಟ್‌’ ಪಟ್ಟಿಗೆ ತಂದಿತು. ಆ ಪಟ್ಟಿಯಲ್ಲಿ ವಿಐಎಸ್‌ಎಲ್‌ ಕೂಡ ಇತ್ತು.

ಮುಂದೆ, ಜಾಗತಿಕ ಟೆಂಡರ್‌ನಲ್ಲಿ ಕೂಡ ಯಾರೂ ವಿಎಐಎಸ್‌ನಲ್ಲಿ ಬಂಡವಾಳ ಹೂಡಲು ಮುಂದೆ ಬರಲಿಲ್ಲ. ಪರಿಣಾಮ, ಇದನ್ನು ಮುಚ್ಚುವ ನಿರ್ಧಾರ ಪ್ರಕಟಿಸಿದೆ ಸೇಲ್.

***

ಕಾರ್ಖಾನೆಯ ಒಳಗೆ ದ್ರವ ರೂಪಿ ಕಬ್ಬಿಣ ಸುರಿಯುತ್ತಿರುವ ಪರಿ

ವಿಐಎಸ್‌ಎಲ್‌ನಲ್ಲಿ ಸದ್ಯ, 1,500 ಗುತ್ತಿಗೆ ಕಾರ್ಮಿಕರಿದ್ದರೆ, ಕಾಯಂ ನೌಕರರ ಸಂಖ್ಯೆ 200 ಮಾತ್ರ. ಕಾರ್ಮಿಕರಿಗೆ ಕೊಟ್ಟಿದ್ದ ಮನೆಗಳು ಶಿಥಿಲವಾಗಿವೆ. ಶಾಲಾ–ಕಾಲೇಜುಗಳು ಮುಚ್ಚುತ್ತಿವೆ. ವಿಐಎಸ್‌ಎಲ್‌ ಆಸ್ಪತ್ರೆಯಲ್ಲಿ ಹೆಚ್ಚು ವೈದ್ಯರಿಲ್ಲ, ಚಿಕಿತ್ಸೆ ಸಿಗುವುದಿಲ್ಲ, ಔಷಧಿಯೂ ಇಲ್ಲ.

ಕೆಲಸ ಹೋದರೆ ಮಕ್ಕಳ ಗತಿಯೇನು, ವಯಸ್ಸಾದ ಹೆತ್ತವರನ್ನ ನೋಡಿಕೊಳ್ಳುವುದೆಂತು ಎಂಬ ಚಿಂತೆ ಗುತ್ತಿಗೆ ಕಾರ್ಮಿಕರದ್ದಾದರೆ, ಶಿಥಿಲ ಮನೆಯನ್ನೂ ಕಿತ್ತುಕೊಂಡರೆ ಗತಿಯೇನು ಎಂಬ ಆತಂಕ ನಿವೃತ್ತ ನೌಕರರದ್ದು. ಕೆಲಸ ಇದ್ದರೆ ಜೀವನ ಸಲೀಸು ಎಂಬ ಕಾರಣಕ್ಕೆ, ಸ್ವಯಂ ನಿವೃತ್ತಿಯನ್ನೂ ಪಡೆಯದೇ (ವಿಆರ್‌ಎಸ್‌) ಮುಂದುವರಿದು, ಈಗ ಕೆಲಸವನ್ನೇ ಕಳೆದುಕೊಂಡಿರುವ ಎಂಪಿಎಂ ನೌಕರರ ಬದುಕು ಇನ್ನೂ ನರಕ.

***

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ

ಶಿವಮೊಗ್ಗ ಜಿಲ್ಲೆಯಲ್ಲೀಗ ಈ ಕಾರ್ಖಾನೆಗಳೇ ಪ್ರಮುಖ ಚುನಾವಣಾ ವಿಷಯ. ಶೇ 100ರಷ್ಟೂ ಪಾಲನ್ನು ಸೇಲ್‌ಗೆ ವಹಿಸಿದ ಕಾಂಗ್ರೆಸ್‌–ಜನತಾದಳ ಸರ್ಕಾರಗಳ ನಿರ್ಧಾರವೇ ಕಾರ್ಖಾನೆಯ ಈ ಸ್ಥಿತಿಗೆ ಕಾರಣ ಎಂದು ಬಿಜೆಪಿ ಹೇಳಿದರೆ, 2013ರಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರ, ಬಳ್ಳಾರಿಯ ರಮಣದುರ್ಗದಲ್ಲಿ 150 ಎಕರೆ ಗಣಿಯನ್ನು ಕಾರ್ಖಾನೆಗೆ ನೀಡಿದೆ. ಆದರೆ, ಕೇಂದ್ರದಿಂದ ಅಗತ್ಯ ಬಂಡವಾಳ ತರದಿರುವುದು ಬಿಜೆಪಿ ನಾಯಕರ ಅಸಮರ್ಥತೆಗೆ ಸಾಕ್ಷಿ ಎನ್ನುವುದು ಕಾಂಗ್ರೆಸ್ ಆರೋಪ. ಮುಖ್ಯಮಂತ್ರಿಯಾಗಿದ್ದಾಗ ಸೇಲ್‌ ವಶಕ್ಕೆ ಕಾರ್ಖಾನೆ ನೀಡಿದ ದೇವೇಗೌಡರು, ನಂತರ ಪ್ರಧಾನಿಯಾದ 11 ತಿಂಗಳ ಅವಧಿಯಲ್ಲಿ ಸೇಲ್‌ನಿಂದ ₹650 ಕೋಟಿ ಬಂಡವಾಳವನ್ನು ತರುವ ಪ್ರಯತ್ನವನ್ನೇಕೆ ಮಾಡಲಿಲ್ಲ ಎಂದು ಪ್ರಶ್ನಿಸುತ್ತದೆ ಬಿಜೆಪಿ.

ದೇವೇಗೌಡರು ಕಾರ್ಖಾನೆಯನ್ನು ಸೇಲ್‌ಗೆ ವಹಿಸಿದ್ದರಿಂದಲೇ ಅದು ಇನ್ನೂ ಉಸಿರಾಡುತ್ತಿದೆ. ಇಲ್ಲದಿದ್ದರೆ ಎಂಪಿಎಂಗಿಂತಲೂ ಮುಂಚೆಯೇ ವಿಐಎಸ್‌ಎಲ್‌ ಮುಚ್ಚುತ್ತಿತ್ತು ಎಂಬ ಅಭಿಪ್ರಾಯ ಕಾರ್ಖಾನೆಯ ಕೆಲವು ನಿವೃತ್ತ ನೌಕರರದ್ದು.

ಆದರೆ, ಅತ್ತ ಇದೇ ಡಿಸ್‌ಇನ್ವೆಸ್ಟ್‌ಮೆಂಟ್‌ ಪಟ್ಟಿಯಲ್ಲಿದ್ದ ರೂರ್ಕೆರಾ, ದುರ್ಗಾಪುರ, ಬೊಕಾರೊ, ಸೇಲಂನಲ್ಲಿನ ಇಂತಹ ಕಾರ್ಖಾನೆಗಳು ₹1,500 ಕೋಟಿಯಿಂದ ₹2,000 ಕೋಟಿಯವರೆಗೆ ಬಂಡವಾಳ ಪಡೆಯುತ್ತವೆ. ಆದರೆ, ವಿಐಎಸ್‌ಎಲ್‌ಗೆ ಕಳೆದ 20 ವರ್ಷಗಳಲ್ಲಿ ಸೇಲ್ ಕೊಟ್ಟಿರುವುದು ₹157 ಕೋಟಿ ಮಾತ್ರ.

ಪ್ರತಿವರ್ಷ ಸೇಲ್‌ ಬಜೆಟ್‌ ಮಂಡಿಸುವಾಗ, ವಿಐಎಸ್‌ಎಲ್‌ಗಾದ ಅನ್ಯಾಯವನ್ನು ನಮ್ಮ ಜನಪ್ರತಿನಿಧಿಗಳು ಗಟ್ಟಿಯಾಗಿ ಪ್ರಶ್ನಿಸದಿರುವುದು, ಕಂಪನಿಯ ಮಹತ್ವವನ್ನು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡದಿರುವುದು, ಬಂಡವಾಳ ಹೂಡಲಾಗದಿದ್ದರೆ ನಮ್ಮ ಕಂಪನಿಯನ್ನು ನಮಗೆ ವಾಪಸ್‌ ಆದರೂ ಕೊಡಿ ಎಂದು ಕೇಳದಿರುವುದು ನಮ್ಮ ಈ ಪರಿಸ್ಥಿತಿಗೆ ಕಾರಣ ಎಂದು ದೂರುವ ಸ್ಥಳೀಯರು, ‘30 ವರ್ಷಗಳಲ್ಲಿ ಬಿಜೆಪಿ,ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳೂ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿವೆ. ಈ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಮೂರೂ ಪಕ್ಷಗಳಿಗೆ ಬುದ್ಧಿ ಕಲಿಸುತ್ತೇವೆ’ ಎಂದು ‘ಬಡವರ ಸಿಟ್ಟನ್ನು’ ಹೊರ ಹಾಕಿದರು.

‘ವಿಶ್ವೇಶ್ವರಯ್ಯನವರು ಮಹಾರಾಜರಿಗೆ ಹೇಳಿದಂತೆ, ಇದು ನಮ್ಮ ಆಸ್ತಿ, ನಾವೇ ಮುನ್ನಡೆಸುತ್ತೇವೆ ಕೊಡಿ ಎಂದು ಪ್ರಧಾನಿಯವರ ಮುಂದೆ ಪಟ್ಟು ಹಿಡಿದು ಕೇಳುವ, ಇದೊಂದು ‘ಪಾರಂಪರಿಕ ಸ್ಥಳ’ ಎಂದು ಪರಿಗಣಿಸಿಯಾದರೂ ಕಾರ್ಖಾನೆಯನ್ನು ಉಳಿಸಿ ಎಂದು ಒತ್ತಾಯಿಸುವ ಸಮರ್ಥರು ನಮಗೆ ಬೇಕಿದೆ. ಬಿಯಾಂಡ್ ಬೆಂಗಳೂರು, ವಿಷನ್‌ ಕರ್ನಾಟಕ ಎಂಬ ಯೋಜನೆಗಳನ್ನು ಘೋಷಿಸುತ್ತಿರುವವರಿಗೆ ಭದ್ರಾವತಿಯ ಗತವೈಭವವನ್ನು ಕಣ್ಣ ಮುಂದೆ ತರಬೇಕಿದೆ’ ಎಂದ ಹಿರಿಯರೊಬ್ಬರು, ‘ವಿಶ್ವೇಶ್ವರಯ್ಯನವರಂಥ ರಾಜನೀತಿಜ್ಞರನ್ನು ಈಗಿನ ರಾಜಕಾರಣಿಗಳಲ್ಲಿ ಕಾಣಲಾದೀತೆ’ ಎಂದೂ ಪ್ರಶ್ನಿಸಿದರು.

ಈ ಮಾತು ಸಾಗಿದ್ದಾಗಲೇ ಹಿರಿಯರೊಬ್ಬರು, ‘ಭದ್ರಾವತಿ ಮೇಲೆ ಯಾರ ಕಣ್ಣು ಬಿತ್ತೋ ಏನೋ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬ ನಿವೃತ್ತ ನೌಕರ, ‘ಭದ್ರಾವತಿಯ ಮೇಲಲ್ಲ. ಕಾರ್ಖಾನೆಯ ಜಾಗ, ನೀರು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನಿರಂತರವಾಗಿ ಸಿಗುವ ವಿದ್ಯುತ್‌ ಮೇಲೆ ಕಣ್ಣು ಬಿದ್ದಿದೆ. ಮುಂದೆ ಯಾರ ಒಡೆತನದ ಕಾರ್ಖಾನೆಯನ್ನು ಈ ವಿದ್ಯುತ್‌ ಬೆಳಗುತ್ತದೋ, ಏನೋ’ ಎಂದು ನಕ್ಕರು. ಬೇಸರ ತುಂಬಿದ ಹುಸಿ ನಗೆಯೊಂದಿಗೆ ನಾನೂ ಹಿಂದಿರುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.