ADVERTISEMENT

ಬೇಂದ್ರೆ; ಕಾವ್ಯಸಂಸ್ಕೃತಿಯ ನಿರ್ಮಾಪಕ

125ನೇ ಜನ್ಮದಿನ

ಎನ್.ಎಸ್.ಗುಂಡೂರ
Published 30 ಜನವರಿ 2021, 19:30 IST
Last Updated 30 ಜನವರಿ 2021, 19:30 IST
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಪೇಟಾ ಧರಿಸಿದ ಬೇಂದ್ರೆ
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಪೇಟಾ ಧರಿಸಿದ ಬೇಂದ್ರೆ   

ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ 125ನೆಯ ಜನ್ಮದಿನ ಇಂದು (ಜ. 31). 1896ನೆಯ ಇಸವಿ ಜನವರಿ 31ರಂದು ಧಾರವಾಡದಲ್ಲಿ ಹುಟ್ಟಿದ ಬೇಂದ್ರೆ ಅವರು, ಆಧುನಿಕ ಕನ್ನಡ ಕಾವ್ಯ ಪರಂಪರೆಯನ್ನು ನಿರ್ಮಿಸಿದ ರೂವಾರಿಗಳಲ್ಲಿ ಬಹುಮುಖ್ಯರು. ನಮ್ಮ ಕಾವ್ಯಸಂಸ್ಕೃತಿಯನ್ನು ನಿರ್ಮಿಸಿದವರಲ್ಲೂ ಅವರು ಪ್ರಮುಖರು.

‘ಕಾವ್ಯಸಂಸ್ಕೃತಿ’ ಎಂದರೆ ಸಾಹಿತ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಸಾರ್ವಜನಿಕ ಬದುಕಿನಲ್ಲಿ ಕೈಗೊಳ್ಳುವುದು, ಸಾಹಿತ್ಯ ಸೃಷ್ಟಿಸುವುದು, ಅದಕ್ಕೆ ಬೇಕಾದ ಪರಿಸರವನ್ನು ರೂಪಿಸುವುದು ಇತ್ಯಾದಿ. ಲೋಕಾರೂಢಿಗೆ ‘ಅಂಬಿಕಾತನಯದತ್ತ’ ಎನ್ನುವುದು ಬೇಂದ್ರೆಯವರ ಕಾವ್ಯನಾಮ. ಆದರೆ, ಬೇಂದ್ರೆ ಅವರಿಗೆ ಅದು ಕಾವ್ಯವನ್ನು ಸೃಷ್ಟಿಸುವಂತಹ, ಅವರದೇ ಇನ್ನೊಂದು ವ್ಯಕ್ತಿತ್ವ. ಬೇಂದ್ರೆ ಅವರೇ ತಮ್ಮನ್ನು ತಾವು ಅರಿತಂತೆ ಅವರಲ್ಲಿರುವ ಕವಿಯೇ ಬೇರೆ, ಬೇಂದ್ರೆಯೆಂಬ ಲೋಕವ್ಯವಹಾರದ ಮನುಷ್ಯನೇ ಬೇರೆ. ಅವರಲ್ಲಿರುವ ಅಂಬಿಕಾತನಯದತ್ತ ಕಾವ್ಯೋದ್ಯೋಗವನ್ನು ಕೈಗೊಂಡರೆ, ಐತಿಹಾಸಿಕ ವ್ಯಕ್ತಿ ಬೇಂದ್ರೆ ಸಾರ್ವಜನಿಕ ಬದುಕಿನಲ್ಲಿ ಕಾವ್ಯ ಸಂಸ್ಕೃತಿಯನ್ನು ನಿರ್ಮಿಸುವ ಲೋಕೋಪಯೋಗಿ ಕೆಲಸ ಮಾಡಿದ್ದಾರೆಂದು ಹೇಳಬಹುದು.

ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಬೇಂದ್ರೆಯವರು ಕಾವ್ಯ ರಚಿಸಿದ ಆ ಕಾಲ, ಭರತಖಂಡ ಹೊಸ ರೂಪುರೇಷೆ ಪಡೆಯುತ್ತಿದ್ದ ಕಾಲ. ಯುರೋಪಿನ ವಸಾಹತುಶಾಹಿಯಿಂದ ಉಂಟಾದ ಆಧುನಿಕತೆಯು ನಮ್ಮ ಸಂಸ್ಕೃತಿಯಲ್ಲಿ, ಮುಖ್ಯವಾಗಿ ರಾಜಕೀಯ ವ್ಯವಸ್ಥೆಯಲ್ಲಿ ತಲ್ಲಣಗಳನ್ನು ಉಂಟುಮಾಡಿದ್ದ ಕಾಲ. ಆಧುನಿಕಪೂರ್ವ ಜಗತ್ತು ಆಧುನಿಕತೆಯ ಜೊತೆಗೆ ಸೆಣಸಾಡುತ್ತ, ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ಕಾಲ. ರಾಷ್ಟ್ರವಾಗಲು ಹಂಬಲಿಸುತ್ತಿದ್ದ ಭರತಖಂಡ, ಬಹುಭಾಷಾ ಪರಂಪರೆಗಳನ್ನು ಒಳಗೊಂಡ ತನ್ನ ಹೊಸ ಜಗತ್ತನ್ನು ನಿರ್ಮಾಣ ಮಾಡುವ ತರಾತುರಿಯಲ್ಲಿದ್ದ ಕಾಲ.

ADVERTISEMENT

ಈ ಒತ್ತಡದ ಒಂದು ಮುಖ್ಯವಾದ ಬೇಡಿಕೆಯೆಂದರೆ, ನಮ್ಮ ಸ್ಥಳೀಯ ಭಾಷಾ ಪರಂಪರೆಗಳು ತಮ್ಮನ್ನು ತಾವು ಸಾಂಸ್ಕೃತಿಕವಾಗಿ ಮರು-ಆವಿಷ್ಕಾರಗೊಳಿಸುತ್ತ, ‘ಭಾರತ ರಾಷ್ಟ್ರ’ ನಿಮಾರ್ಣಕ್ಕೆ ಬೇಕಾದ ರಾಜಕೀಯ ಘಟಕಗಳಾಗಬೇಕಾಗಿತ್ತು. ಆದ್ದರಿಂದ ಆಧುನಿಕಪೂರ್ವ ಸಂಪನ್ಮೂಲಗಳನ್ನು ಮೈಗೂಡಿಸಿಕೊಂಡು, ಆಧುನಿಕ ವಸ್ತು ಮತ್ತು ರೂಪಗಳನ್ನು ಸೃಷ್ಟಿಸುವುದು ಸ್ಥಳೀಯ ಭಾಷಾ ಪರಂಪರೆಗಳ ಮುಖ್ಯ ಕೆಲಸವಾಯಿತು.

ಈ ಸಂದರ್ಭದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳಲ್ಲಿ ಕರ್ನಾಟಕ, ಕನ್ನಡತ್ವದ ಪರಿಕಲ್ಪನೆ ಮೊಳಕೆ ಒಡೆದು, ಬೆಳೆಯಲು ಸಾಕಷ್ಟು ಸಿದ್ಧತೆಗಳಾಗಿದ್ದವು. ಅಂತಹ ಕಾಲದಲ್ಲಿ ಕಾವ್ಯಕೃಷಿ ಮಾಡತೊಡಗಿದ ಬೇಂದ್ರೆಯವರ ತಲೆಮಾರಿಗೆ ಇದ್ದ ಪ್ರಮುಖ ಯೋಜನೆಯೆಂದರೆ ಕನ್ನಡದ ಬದುಕಿಗೆ ನವೀನವಾದ ಬೌದ್ಧಿಕ ಆಕಾರವನ್ನು ಕೊಡುವುದು. ಅದು ಆಗಬೇಕಾದದ್ದು ಮುಖ್ಯವಾಗಿ ಭಾಷೆಯನ್ನು ಹದಗೊಳಿಸುವ ಮೂಲಕ. ಈ ಕೆಲಸವನ್ನು ಬೇಂದ್ರೆ ಅವರು ತಮ್ಮ ಸಾಹಿತ್ಯಕೃಷಿಯ ಮೂಲಕ ಕೈಗೊಂಡರು.

ಸಾಂಸ್ಕೃತಿಕ ಅಗತ್ಯವನ್ನು ಪೂರೈಸುತ್ತ, ಆಧುನಿಕ ಕನ್ನಡ ಸಾಹಿತ್ಯಕ್ಕೆ ನಿರ್ದಿಷ್ಟವಾದ ಆಕಾರವನ್ನು ಕೊಟ್ಟಿತು ಬೇಂದ್ರೆ ಕಾವ್ಯ. ಬಿ.ಎಂ.ಶ್ರೀ, ಪಂಜೆ ಮಂಗೇಶರಾಯ, ಹಟ್ಟಿಯಂಗಡಿ ನಾರಾಯಣರಾಯ, ಎಂ. ಗೋವಿಂದ ಪೈ, ಶಾಂತಕವಿ ಮೊದಲಾದವರು ಪ್ರಾರಂಭಿಸಿದ ಆಧುನಿಕ ಬರವಣಿಗೆಯನ್ನು ಮುಂದುವರೆಸಿ, ಹೊಸ ಕಾವ್ಯಪರಂಪರೆಯನ್ನು ಹುಟ್ಟುಹಾಕಿದ್ದು ಬೇಂದ್ರೆ ಕಾವ್ಯದ ಮಹತ್ ಸಾಧನೆ. ಕನ್ನಡವನ್ನು, ವಿಶೇಷವಾಗಿ ಧಾರವಾಡಸೀಮೆಯ ಜನಪದದ ನುಡಿಯನ್ನು ಅವರು ಕಾವ್ಯಬರವಣಿಗೆಯ ನುಡಿಗಟ್ಟಾಗಿ ರೂಪಾಂತರಿಸಿದ್ದು ಐತಿಹಾಸಿಕವಾಗಿ ಮಹತ್ವದ್ದು. ಈ ಅರ್ಥದಲ್ಲಿ ಅಂಬಿಕಾತನಯದತ್ತ ಯುಗಪ್ರವರ್ತಕ ಕವಿಯೇ ಸರಿ.

ಆ ಕಾಲದ ಅವಶ್ಯಕತೆಗೆ ಇಂತಹ ವೈಯಕ್ತಿಕ ಕಾವ್ಯಪ್ರತಿಭೆಯಷ್ಟೇ ಸಾಕಾಗಿರಲಿಲ್ಲ. ಅದು ಇನ್ನೂ ಹೆಚ್ಚಿನದನ್ನು ಬಯಸಿತ್ತು. ಅದೇನೆಂದರೆ ಆಧುನಿಕತೆಯ ಫಲವಾಗಿ ನಮ್ಮಲ್ಲಿ ಹುಟ್ಟಿಕೊಂಡ ‘ಸಾರ್ವಜನಿಕ ತಾಣ’ವನ್ನು (ಪಬ್ಲಿಕ್ ಸ್ಪಿಯರ್) ರೂಪಿಸುವುದು. ಅಂದರೆ ಕನ್ನಡದ ಬಗ್ಗೆ, ಬರವಣಿಗೆಯ ಬಗ್ಗೆ ಸಾರ್ವಜನಿಕವಾಗಿ ತಿಳಿವಳಿಕೆಯನ್ನು ಮೂಡಿಸುವ, ಕಾವ್ಯಪ್ರಿಯರನ್ನು, ಸಹೃದಯರನ್ನು, ಓದುವ-ಬರೆಯುವ ಮನಸ್ಸುಗಳನ್ನು ಬೆಳೆಸುವ ಕೆಲಸ. ಭಾಷಿಕವಾಗಿ, ಶೈಕ್ಷಣಿಕವಾಗಿ ದಯನೀಯ ಸ್ಥಿತಿಯಲ್ಲಿದ್ದ ಧಾರವಾಡ ಸೀಮೆಯಲ್ಲಿ ಇದು ಅತ್ಯವಶ್ಯಕವಾಗಿತ್ತು. ಆಗ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಧಾರವಾಡದ ಜನ ಕನ್ನಡ ಭಾಷಿಕರು ಎಂಬುದು ಬ್ರಿಟಿಷ್‌ ಅಧಿಕಾರಿಗಳಿಗೆ ಎಷ್ಟೋ ದಿನಗಳ ನಂತರ ಗೊತ್ತಾಯಿತಂತೆ. ಅವರು ಧಾರವಾಡವನ್ನು ಮರಾಠಿ ಭಾಷಾವಲಯವೆಂದೇ ತಿಳಿದಿದ್ದರಂತೆ. ಹೀಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋದ ಕನ್ನಡ ನಾಡನ್ನು, ಬೌದ್ಧಿಕ ನಡೆ ಹಾಗೂ ಭಾಷಾ ಅಸ್ಮಿತೆಯಿಂದಲೇ ಒಂದಾಗಿಸಬೇಕಾಗಿತ್ತು.

ಕವಿ ಕಲ್ಪನೆಗೆ ಬಣ್ಣ ತುಂಬಿದ ಸಾಧನಕೇರಿಯ ಕವಿ ನಿವಾಸದ ಅನನ್ಯ ಪರಿಸರ ಚಿತ್ರ: ಬಿ.ಎಂ.ಕೇದಾರನಾಥ

ಸಾರ್ವಜನಿಕ ಜೀವನವನ್ನು ರೂಪಿಸುವ ಹೊಣೆಗಾರಿಕೆಯನ್ನು ಸಾಂಸ್ಕೃತಿಕವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಂತಹ ಸಂಸ್ಥೆಗಳು ಕೈಗೊಂಡರೆ, ಶೈಕ್ಷಣಿಕವಾಗಿ ಶಾಲಾ, ಕಾಲೇಜುಗಳಲ್ಲಿ ಡೆಪ್ಯುಟಿ ಚೆನ್ನಬಸಪ್ಪನಂಥವರು, ರಾಜಕೀಯವಾಗಿ ಆಲೂರು ವೆಂಕಟರಾಯರಂಥವರು ಜೀವಂತವಾಗಿಟ್ಟಿದ್ದರು. ಅದೇ ಕೆಲಸವನ್ನು ಬೇಂದ್ರೆಯವರಂತಹ ಬರಹಗಾರರು ‘ಸಾಹಿತ್ಯ ಸಂಸ್ಕೃತಿ’ ನಿರ್ಮಿಸುವುದರ ಮೂಲಕ ಮುಂದುವರೆಸಿದರು. ಬೇಂದ್ರೆಯವರು ಸಾರ್ವಜನಿಕ ವಲಯದಲ್ಲಿ ಸಹೃದಯರ ಗುಂಪುಗಳನ್ನು ಕಟ್ಟಿದ್ದು, ಸಾಹಿತ್ಯೋತ್ಸವಗಳಲ್ಲಿ ಪಾಲ್ಗೊಂಡಿದ್ದು, ಸಾಹಿತ್ಯ ಪತ್ರಿಕೆಗಳನ್ನು ಹೊರಡಿಸಿದ್ದು, ಪ್ರಕಾಶನಗಳ ಜೊತೆಗೆ ಕೆಲಸ ಮಾಡಿದ್ದು, ತಮ್ಮ ಮಾತುಕತೆಗಳ ಮೂಲಕ ಇತರರಲ್ಲಿ ಸಾಹಿತ್ಯಾಸಕ್ತಿ ಬೆಳೆಸಿದ್ದು ಇತ್ಯಾದಿ ಚಟುವಟಿಕೆಗಳೆಲ್ಲವೂ ಅವರು ಕಾವ್ಯಸಂಸ್ಕೃತಿಯನ್ನು ಬೆಳೆಸಲು ಮಾಡಿದ ಪ್ರಯತ್ನಗಳು.

ಬೇಂದ್ರೆಯವರು ಪುಣೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ-ಸಾಂಸ್ಕೃತಿಕ ಗುಂಪುಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲಿ ‘ಶಾರದಾ ಮಂಡಳ’ ಎಂಬ ಗುಂಪಿನ ಸದಸ್ಯರಾಗಿ, ಚಿಂತಕರ ಚಾವಡಿಯ ಮಹತ್ವವನ್ನು ಅರಿತಿದ್ದರು. ಅವರು ಧಾರವಾಡಕ್ಕೆ ಬಂದು ವಿಕ್ಟೋರಿಯಾ ಹೈಸ್ಕೂಲಿನಲ್ಲಿ ‘ಮಾಸ್ತರ’ ಆದಮೇಲೆ, ವಿದ್ಯಾರ್ಥಿಮಿತ್ರರನ್ನೊಳಗೊಂಡು, 1920ರ ದಶಕದ ಹೊತ್ತಿಗೆ ‘ಗೆಳೆಯರ ಗುಂಪ’ನ್ನು ಕಟ್ಟಿದರು.

ಬೇರೆ ಬೇರೆ ಕಡೆಯಿಂದ ಧಾರವಾಡಕ್ಕೆ ವಿದ್ಯಾಭ್ಯಾಸ ಮಾಡಲು ಬಂದ ಶಿಷ್ಯವರ್ಗ ಈ ಗುಂಪಿನ ಸದಸ್ಯರ ಸಂಖ್ಯೆಯನ್ನು ಬೆಳೆಸಿತು. ಬೆಟಗೇರಿ ಕೃಷ್ಣಶರ್ಮಾ, ವಿ.ಕೃ. ಗೋಕಾಕ, ಜಿ.ಬಿ. ಜೋಶಿ, ರಂ.ಶ್ರೀ. ಮುಗಳಿ, ಶೇ.ಗೋ. ಕುಲಕರ್ಣಿ, ಪ್ರಹ್ಲಾದ ನರೇಗಲ್, ಗೋವಿಂದ ಚುಳಕಿ ಮುಂತಾದವರು ಗುಂಪಿನ ಗೆಳೆಯರಾಗಿ ಸಾಹಿತ್ಯ ಸಂಸ್ಕೃತಿಯನ್ನು ಮೆರೆದಿದ್ದರು.

ಬೇಂದ್ರೆಯವರ ನೇತೃತ್ವದಲ್ಲಿ ಕಾವ್ಯಾಭ್ಯಾಸ ಮಾಡುವುದು, ಕವಿತೆಗಳನ್ನು ವಾಚಿಸುವುದು, ಬರೆಯುವುದು ಗುಂಪಿನ ಹವ್ಯಾಸಗಳಾಗಿದ್ದವು. ಕ್ರಮೇಣ ಈ ಗುಂಪು ಕನ್ನಡದಲ್ಲಿ ಪ್ರಕಟಣೆ ಮಾಡಲು ಪ್ರಾರಂಭಿಸಿತು. 1926ರಲ್ಲಿ ಗುಂಪಿನ ಗೆಳೆಯರೆಲ್ಲರೂ ಸೇರಿ ‘ಹಕ್ಕಿ ಹಾರುತಿದೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ರವೀಂದ್ರನಾಥ ಟ್ಯಾಗೋರ್, ಶ್ರೀ ಅರವಿಂದೊ, ಡಬ್ಲ್ಯು.ಬಿ. ಯೇಟ್ಸ್, ಖಲೀಲ್ ಗಿಬ್ರಾನ್ ಅವರ ಬರವಣಿಗೆಗಳನ್ನು ಬೇಂದ್ರೆಯವರು ಈ ಗುಂಪಿಗೆ ಪರಿಚಯಿಸಿದರು. ‘ಸ್ವಧರ್ಮ’ ಎನ್ನುವ ಪತ್ರಿಕೆಯನ್ನು ಎರಡು ವರ್ಷ ನಡೆಸಿ, ಬಳಿಕ ಆಲೂರು ವೆಂಕಟರಾವರವರು ಹೊರಡಿಸುತ್ತಿದ್ದ ‘ಜಯ ಕರ್ನಾಟಕ’ ಪತ್ರಿಕೆಯ ಹೊಣೆಗಾರಿಕೆಯನ್ನು ಗುಂಪು ನಿಭಾಯಿಸಿತು.

ನಾಡಹಬ್ಬ, ಮಹಾನವಮಿ ಉತ್ಸವ, ಪಂಪೋತ್ಸವ, ವಿದ್ಯಾರಣ್ಯೋತ್ಸವ, ಶಾಂತಕವಿ ಅವರ ಪುಣ್ಯಸ್ಮರಣೆ ಇತ್ಯಾದಿಗಳನ್ನು ಬೇಂದ್ರೆಯವರು ಗೆಳೆಯರ ಜೊತೆಗೂಡಿ ಆಚರಿಸುತ್ತಿದ್ದುದು, ಅವರ ಸಾರ್ವಜನಿಕ ಬದುಕಿನ ಇನ್ನೊಂದು ಮಜಲು. ಅವರನ್ನು ಬೇಂದ್ರೆ ‘ಮಾಸ್ತರ’ ಎಂದು ಸಂಬೋಧಿಸುತ್ತಿದ್ದುದು ಅವರು ಶಿಕ್ಷಕರಾಗಿ ಪಾಠ ಮಾಡುವುದರಾಚೆ, ಕಾವ್ಯದ ರುಚಿ ಹತ್ತಿಸುವ ಮಾಂತ್ರಿಕನಾಗಿದ್ದರಿಂದ ಕೂಡ.

ಕೀರ್ತಿನಾಥ ಕುರ್ತಕೋಟಿ ಅವರು ಒಂದು ಕಡೆ ಉಲ್ಲೇಖಿಸಿರುವಂತೆ, ವಿಜಯನಗರದ 600ನೆಯ ವರ್ಷದ ದಿನಾಚರಣೆಗಾಗಿ ಹೈದರಾಬಾದ್‌ನಲ್ಲಿ ಬೇಂದ್ರೆಯವರು ತಮ್ಮ ಕವಿತೆಗಳನ್ನು ವಾಚನ ಮಾಡಿ ಚಂದಾ ಎತ್ತಿದ್ದರಂತೆ. ಧಾರವಾಡದಲ್ಲಿ ಮುದ್ರಣ ಸಂಸ್ಥೆ, ಸಮಾಜ ಪುಸ್ತಕಾಲಯ, ಮನೋಹರ ಗ್ರಂಥಮಾಲೆಯ ಜೊತೆ ಒಡನಾಟ ಹೊಂದಿ, ಸಾಹಿತ್ಯಿಕ ಸಲಹೆ ಕೊಟ್ಟು, ಮುದ್ರಣ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದ ಶ್ರೇಯಸ್ಸು ಬೇಂದ್ರೆ ಅವರಿಗೆ ಸಲ್ಲುತ್ತದೆ.

ಬೇಂದ್ರೆ ಅವರ ಕಾವ್ಯವನ್ನು ಓದಿ, ಕಾವ್ಯಕೃಷಿ ಮಾಡಿದವರು ಒಂದು ಕಡೆಯಾದರೆ, ಅವರ ಒಡನಾಟದಿಂದ ತಮ್ಮ ಬರವಣಿಗೆಯ ಗತಿಯನ್ನೇ ಬದಲಾಯಿಸಿಕೊಂಡ ಕನ್ನಡದ ಲೇಖಕರು ಇನ್ನೊಂದು ಕಡೆ. ಬೇಂದ್ರೆ ಒಂದು ತರಹದ ‘ಲಿಟರರಿ ಮೆಂಟರ್’ ಆಗಿಯೂ ಸಾರ್ವಜನಿಕ ಸೇವೆ ಮಾಡಿದ್ದಾರೆ.

ಇಂಗ್ಲಿಷಿನ ವ್ಯಾಮೋಹಕ್ಕೊಳಗಾಗಿ, ಇಂಗ್ಲಿಷಿನಲ್ಲಿ ಕಾವ್ಯರಚನೆಗೆ ತೊಡಗಿಕೊಂಡಿದ್ದ ವಿ.ಕೃ. ಗೋಕಾಕರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಲು ಪ್ರಾರಂಭಿಸಿದ್ದು ಬೇಂದ್ರೆ ಅವರ ಒತ್ತಾಸೆಯ ಮೇರೆಗೆ. ಗಿರೀಶ ಕಾರ್ನಾಡರು ಕೂಡ ತಮ್ಮ ಸಾಹಿತ್ಯ ಸಂವೇದನೆಯನ್ನು ಬೆಳೆಸಿಕೊಂಡಿದ್ದು ಬೇಂದ್ರೆಯವರ ಒಡನಾಟದಲ್ಲಿ. ಕುರ್ತಕೋಟಿಯವರು ತಮ್ಮಲ್ಲಿ ಒಬ್ಬ ವಿಮರ್ಶಕ ಜನ್ಮತಾಳಿದ್ದು ಬೇಂದ್ರೆ ಕಾವ್ಯದ ಪ್ರಭಾವ ಹಾಗೂ ಅವರ ಜೊತೆಗಿನ ಒಡನಾಟದಿಂದಲೇ ಎಂದು ಹೇಳಿಕೊಂಡಿದ್ದಾರೆ. ಈಗಿನ ಧಾರವಾಡದಲ್ಲಿರುವ ಲೇಖಕರ ಪೈಕಿ ನಾಡೋಜ ಚನ್ನವೀರ ಕಣವಿ, ಗುರುಲಿಂಗ ಕಾಪಸೆ, ಸಿದ್ಧಲಿಂಗಪಟ್ಟಣಶೆಟ್ಟಿ ಮುಂತಾದವರು ಬೇಂದ್ರೆ ಪರಿಸರದಲ್ಲಿ ಬೆಳೆದವರು.

ಕನ್ನಡದ ಶ್ರೇಷ್ಠ ಕಾವ್ಯವನ್ನು ಸೃಷ್ಟಿಸುವುದರ ಜೊತೆಗೆ ಧಾರವಾಡದಲ್ಲಿರುವ ಈಗಿನ ಕಾವ್ಯಸಂಸ್ಕೃತಿಯನ್ನು ಪೋಷಿಸಿದ ಬೇಂದ್ರೆ ಮನಸ್ಸಿನ ಹಿಂದೆ ಕೆಲಸ ಮಾಡಿದ ಮುಖ್ಯ ಪ್ರೇರಣೆ ಎಂದರೆ ಅವರಿಗಿದ್ದ ಧಾರವಾಡದ ಮೆಲಿದ್ದ ಪ್ರೀತಿ, ಕನ್ನಡ ಕಟ್ಟಬೇಕೆಂಬ ಬದ್ಧತೆ. ಧಾರವಾಡದ ಕನ್ನಡವು ಇಂಥವರನ್ನು ಆ ಕಾಲದಲ್ಲಿ ಹುಡುಕುತ್ತಿದ್ದಂತೆ ಕಾಣುತ್ತದೆ. ಅವರು ಪುಣೆಯನ್ನು ಬಿಟ್ಟು, ಧಾರವಾಡವನ್ನು ಕಾರ್ಯಕ್ಷೇತ್ರ ಮಾಡಿಕೊಂಡಿದ್ದು, ಮರಾಠಿಯನ್ನು ಬಿಟ್ಟು ಕನ್ನಡವನ್ನು ಅಭಿವ್ಯಕ್ತಿಗೆ ಆಯ್ಕೆ ಮಾಡಿಕೊಂಡಿದ್ದು ಸೆಂಟಿಮೆಂಟಿಗಾಗಿ ಅಲ್ಲ. ಕುರ್ತಕೋಟಿಯವರು ಹೇಳುವ ಹಾಗೆ ಮರಾಠಿ ಪ್ರಾಬಲ್ಯದಲ್ಲಿ ಧಾರವಾಡದ ಜನ ತಮ್ಮ ಕನ್ನಡವನ್ನು ಕಳೆದುಕೊಂಡು, ಮರಳಿ ಪಡೆದ ಸಾಹಸದ ಕತೆ ಬೇಂದ್ರೆಯವರ ಕಣ್ಮುಂದೆ ನಡೆದಿತ್ತು. ಅಲ್ಲಿಯ ಜನರ ದೈವ ಪೌರುಷಗಳಲ್ಲಿ ಬೇಂದ್ರೆಯವರಿಗೆ ವಿಶ್ವಾಸವಿತ್ತು. ಹಾಗಾಗಿ ಧಾರವಾಡದ ಅವರ ಸಂಬಂಧ ಕರಳು ಬಳ್ಳಿಯ ಸಂಬಂಧವಾಗಿತ್ತು.

ಯೌವನದ ದಿನಗಳಲ್ಲಿ ಕವಿ ಬೇಂದ್ರೆ

ಜರ್ಮನ್ ಕವಿ ಗಯಟೆ ಹೇಳುವ ಹಾಗೆ ‘ಯಾವ ಕವಿ ತನ್ನ ಭಾಷೆಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುತ್ತಾನೋ ಆ ಕವಿ ಶ್ರೇಷ್ಠ ಕಾವ್ಯವನ್ನು ಸೃಷ್ಟಿಸುತ್ತಾನೆ’. ಬೇಂದ್ರೆ ಕಾವ್ಯದ ಶಕ್ತಿ ಕನ್ನಡ ಭಾಷೆಯನ್ನು ಅವರ ಬಳಸಿದ ಬಗೆಯಲ್ಲಿದೆ. ಕನ್ನಡ ಭಾಷೆಯು ಅವರ ಕಾವ್ಯದ ಶಕ್ತಿ. ಆದುದರಿಂದಲೇ ಅವರ ಕಾವ್ಯವೂ ಕನ್ನಡದ ಶಕ್ತಿಯಾಗಿದೆ.

ಬೇಂದ್ರೆಯವರ ಸಾರ್ವಜನಿಕ ಬದುಕು ಪ್ರಶ್ನಾತೀತವೇನಲ್ಲ. ಶಂಭಾ ಜೋಶಿಯವರ ಜೊತೆಗಿನ ಅವರ ಸಂಬಂಧ, ರೇಲ್ವೆ ಗೇಟ್ ಬಳಿ ಚಂಪಾ ಅವರ ಜೊತೆಗಿನ ಜಗಳ, ಇತ್ಯಾದಿಗಳು ಸಾಹಿತ್ಯ ಸಂಸ್ಕೃತಿಯ ಪ್ರಮುಖ ದಾಖಲೆಗಳಾಗಿವೆ. ಚಂಪಾ ಅವರ ಪ್ರಕಾರ ‘ಬೇಂದ್ರೆ ದೊಡ್ಡ ಕವಿ, ಆದ್ರ ಸಣ್ಣ ಮನಷಾ’. ಹಾಗೆಯೇ ಬೇಂದ್ರೆಯವರ ಸಾಹಿತ್ಯ ಗುಂಪುಗಾರಿಕೆಯನ್ನು ಟೀಕಿಸುತ್ತ, ಹೇಗೆ ಕೆಲವು ವಿದ್ವಾಂಸರು ಉತ್ಪ್ರೇಕ್ಷೆ ಮಾಡಿ, ಬೇಂದ್ರೆ ಕಾವ್ಯವನ್ನು ಪ್ರಚಾರ ಮಾಡಿದ್ದಾರೆಂಬ ವಿಮರ್ಶೆಗಳನ್ನು ನಮ್ಮ ಸಂಸ್ಕೃತಿ ಅಧ್ಯಯನಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಾಗೆಯೇ ಧಾರವಾಡದ ಸಾಹಿತ್ಯ ಸಂಸ್ಕೃತಿಯನ್ನು ಬೇಂದ್ರೆಯೊಬ್ಬರೇ ನಿರ್ಮಿಸಿಲ್ಲ, ಹತ್ತು ಹಲುವು ಬಗೆಗಳಲ್ಲಿ ಇನ್ನುಳಿದವರು ಈ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವುದುನ್ನು ಅಲ್ಲಗಳೆಯುವಂತಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಬೇಕಿವೆ.

ಅದೇನೆ ಇರಲಿ, ಬೇಂದ್ರೆಯವರು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಐತಿಹಾಸಿಕವಾಗಿ ಮಹತ್ವದ ಕೆಲಸ ಮಾಡಿದ್ದಾರೆಂದೇ ಹೇಳಬೇಕು. ತಮ್ಮ ‘ನಾಡೋಜ ಪಂಪ’ (1938) ಎಂಬ ಕೃತಿಯಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರು ಕೃಷಿಲೋಕದ ರೂಪಕ ಬಳಸಿ ಒಬ್ಬ ಮಹಾಕವಿಯ ಕಾರ್ಯವನ್ನು ವಿವರಿಸಿದ್ದು ಬೇಂದ್ರಯವರಿಗೂ ಅನ್ವಯವಾಗುತ್ತದೆ. ಅವರ ಪ್ರಕಾರ ‘ಹಿಂದಿನ ಸಂಸ್ಕೃತಿಯ ನೆಲವನ್ನು ಹದವಡೆಯಿಸಿ ಅಂದಿನ ಸಂಸ್ಕೃತಿಯ ಬೀಜ ಬಿತ್ತಿ, ಮುಂದಿನ ಸಂಸ್ಕೃತಿಯ ಬೆಳೆಯನ್ನು ಬೆಳೆಯಿಸುವ ಉತ್ತಮ ಕೃಷಿಕರೆಂದರೆ ಮಹಾಕವಿಗಳು’. ಗೆಳಯರ ಗುಂಪಿಗೆ ಬೇಂದ್ರಯವರು ಕೊಟ್ಟ ಧ್ಯೇಯವಾಕ್ಯವಂತೂ ಅವರ ಈ ಹಂಬಲವನ್ನೇ ಸೂಚಿಸುತ್ತದೆ: ‘Mine is but a flower’s wish,/ To leave some seeds behind’.

‘ಅಂಬಿಕಾತನಯದತ್ತ’, ‘ಬೇಂದ್ರೆ’ ಬಿತ್ತಿದ ಬೀಜಗಳು ಕನ್ನಡಕ್ಕೆ ಹೂ, ಹಣ್ಣುಗಳನ್ನು ಕೊಡುತ್ತಿವೆ. ಈ ಸಂದರ್ಭದಲ್ಲಿ ನಾವು ಕನ್ನಡ ನಾಡಿಗೆ ಎಂತಹ ಕಾವ್ಯಸಂಸ್ಕೃತಿ ನಿರ್ಮಿಸಬೇಕೆಂದು ಮರು-ಚಿಂತನೆ, ಮರು-ಕಲ್ಪನೆ ಮಾಡಿಕೊಳ್ಳುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.