ADVERTISEMENT

ಸಾಹಿತ್ಯದ ಸಂಗ... ಮನುಷ್ಯರಾಗೋದು ಹಿಂಗ!

ಶೂದ್ರ ಶ್ರೀನಿವಾಸ್
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಕಲಾಕೃತಿ: ಅಶೋಕ ಶಟಕಾರ
ಕಲಾಕೃತಿ: ಅಶೋಕ ಶಟಕಾರ   

ಮೃದುತ್ವವೆಂಬುದು ಪ್ರೀತಿಯ ಘನವಾದ ರೂಪ. ಸಾಹಿತ್ಯವೆಂಬುದು ಇಂಥ ಮೃದುತ್ವದ ಮೇಲಿನ ನಿರ್ಮಾಣ. ಅದು ಸದಾಕಾಲ ಇನ್ನೊಬ್ಬನಿಗಾಗಿ ಮಿಡಿಯುವ ವಸ್ತು. ಮನುಕುಲದ ಇತಿಹಾಸದಲ್ಲಿ ಮಾನವೀಯ ಅಂತಃಕರಣದ ಹೊನಲೊಂದು ಸದಾ ಹರಿಯುತ್ತಾ ಬಂದಿರುವ ಹಿಂದಿನ ಪ್ರೇರಣೆ ಕೂಡ ಇಂತಹ ಸಾಹಿತ್ಯವೇ ಅಲ್ಲವೇ?

ಸಾಹಿತ್ಯದ ಅಂತರಾತ್ಮ ಅತ್ಯಂತ ವ್ಯಾಪಕವಾದದ್ದು. ಒಟ್ಟು ಮನುಕುಲದ ಬೆಳವಣಿಗೆಗೆ ಎಂತೆಂಥದೋ ಸಾಧ್ಯತೆಗಳನ್ನು ಅದು ದೊರಕಿಸಿಕೊಟ್ಟಿದೆ. ಮನುಷ್ಯ ಮನುಷ್ಯರ ನಡುವೆ, ವಿವಿಧ ಜನಾಂಗಗಳ ಮಧ್ಯೆ ಸಂಬಂಧಗಳ ಬಿಕ್ಕಟ್ಟು ಬಿಗಡಾಯಿಸದಂತೆ ಪರೋಕ್ಷವಾಗಿ ಕೆಲಸ ಮಾಡುತ್ತಿರುವುದು ಕೂಡ ಸಾಹಿತ್ಯವೇ - ಅರ್ಥಾತ್ ಸಾಹಿತ್ಯದ ಕೃತಿಗಳು. ಕೇವಲ ಒಂದು ಭಾಷೆ ಮತ್ತು ಸಂಸ್ಕೃತಿಗೆ ಸೀಮಿತವಾದ ಮಾತು ಇದಲ್ಲ. ಒಟ್ಟು ಜಗತ್ತಿನ ಮಾನವೀಯ ನೆಲೆಗಳಿಗೆ ಸಾಹಿತ್ಯವೇ ವೇದಿಕೆಯಾಗಿದೆ ಎನ್ನುವುದು ಉತ್ಪ್ರೇಕ್ಷಿತವಾದ ಮಾತೇನಲ್ಲ.

ಎಲ್ಲ ಮಹಾಕಾವ್ಯಗಳು ಅತ್ಯಂತ ಪ್ರಮಾಣಬದ್ಧವಾಗಿ ಪ್ರೇರಕ ಶಕ್ತಿಗಳಾಗಿವೆ. ಹಾಗೆಯೇ ಎಲ್ಲ ಭಾಷೆಗಳ ಮಹಾನ್ ಲೇಖಕರು ಪರಕೀಯರು ಅನ್ನಿಸುವುದೇ ಇಲ್ಲ. ಸಾಹಿತ್ಯಕ್ಕೆ ಆ ವಿಧದ ತಾದಾತ್ಮ್ಯವನ್ನು ಉದ್ದೀಪನಗೊಳಿಸುವ ಶಕ್ತಿ ಸಿದ್ಧಿಸಿದೆ. ಮನಃಸ್ಥಿತಿಗಳ ಸಮನ್ವಯ ಪ್ರಕ್ರಿಯೆಗೂ ಅದು ಪ್ರೇರಣಾಶಕ್ತಿಯಾಗಿದೆ. ಜಗತ್ತಿನ ಉದ್ದಗಲಕ್ಕೂ ಬಹುಮುಖೀ ಸಂಸ್ಕೃತಿಗಳ ಹೆಚ್ಚುಗಾರಿಕೆ ಯಾವ ಯಾವ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿಯಲೂ ಬಾಗಿಲು ತೆರೆದಿದೆ. ಇತಿಹಾಸದ ಉದ್ದಕ್ಕೂ ಇಂಥ ಸಾಹಿತ್ಯದ ಹಿನ್ನೆಲೆಯನ್ನು ಹೊಂದಿರುವ ಮಹಾನ್ ವ್ಯಕ್ತಿಗಳು ನಮ್ಮ ಮುಂದೆ ಪ್ರಾತಃಸ್ಮರಣೀಯರಾಗಿ ಸೂತ್ರಪ್ರಾಯರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಇತಿಹಾಸವೇ ಮರೆಗೆ ಸರಿದು ಬಿಡುತ್ತಿತ್ತು.

ADVERTISEMENT

ಜನರ ಕ್ರೌರ್ಯ, ಅನಾಗರಿಕತೆ, ನೀಚತನ ಇನ್ನೂ ಏನೇನೋ ಭೀಕರ ಅವಗುಣಗಳನ್ನು ನೋಡಿಕೊಳ್ಳುವುದಕ್ಕೆ ಸಾಹಿತ್ಯ ಕೈಗನ್ನಡಿಯಾಗಿದೆ. ಇಲ್ಲದಿದ್ದರೆ ಪಾಪಲೇಪಿತ ಮನಸ್ಸು ಮತ್ತಷ್ಟು ಅಧೋಗತಿಗೆ ಇಳಿಯುತ್ತಿತ್ತು. ನರಕಸದೃಶ ನಡಾವಳಿಗಳು ವಿಕೃತರೂಪ ಪಡೆಯುತ್ತಲೇ ಇದ್ದವು. ಅಂಥ ಕಹಿ ನೆನಪುಗಳು ಇತಿಹಾಸದ ಉದ್ದಗಲಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಪಾಚಿ ಕಟ್ಟಿಕೊಂಡಂತೆ. ಅಲ್ಲದೆ, ಆ ನೆನಪುಗಳು ತೊಳೆಯಲಾರದಂತೆ ಕಾಡುತ್ತಲೇ ಇವೆ. ಹೀಗೆ ಕಾಡುವುದರಿಂದಲೇ ಅಂತಹ ಪಾಪಪ್ರಜ್ಞೆಯಿಂದ ನಮ್ಮನ್ನು ಪರೋಕ್ಷವಾಗಿ ಮೃದುಗೊಳಿಸಲು ಸಾಧ್ಯವಾಗುತ್ತಿದೆ. ಅಯ್ಯೋ ಹೀಗೆಲ್ಲಾ ನಡೆದು ಹೋಗಿದೆಯಲ್ಲ ಎಂಬುದು ನಮ್ಮನ್ನು ಬಾಧಿಸುತ್ತಲೇ ಬಂದಿದೆ. ಅದರ ಸೂಕ್ಷ್ಮಗಳನ್ನು ಬಿಡಿಸಿ ವ್ಯಾಖ್ಯಾನಿಸುತ್ತ ಬಂದಿರುವುದು ಸಾಹಿತ್ಯ ಕೃತಿಗಳು.

ಹಾಗೆ ನೋಡಿದರೆ ನಮ್ಮ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣದ ಬಹಳಷ್ಟು ಪಾತ್ರಗಳು ನಿರ್ಣಾಯಕ ಎನ್ನುವ ರೀತಿಯಲ್ಲಿ ಮಾನಸಿಕವಾಗಿ ನಮ್ಮನ್ನು ಬಂಧಿಸಿಟ್ಟಿವೆ. ಬಹುಪಾಲು ಮಂದಿಗೆ ರಾಮ ಮತ್ತು ಕೃಷ್ಣನ ಸ್ಮರಣೆ ನಿರಂತರವಾದದ್ದು. ರಾತ್ರಿ ಹಾಸಿಗೆಗೆ ಹೋಗುವಾಗ, ಬೆಳಿಗ್ಗೆ ಹಾಸಿಗೆ ಬಿಡುವಾಗ ಆ ಸ್ಮರಣೆ ಅವ್ಯಕ್ತ ಚೈತನ್ಯಶೀಲತೆಯನ್ನು ಪಡೆದಿರುತ್ತದೆ. ಯಾಕೆಂದರೆ ರಾಮ ಮತ್ತು ಕೃಷ್ಣ ಮೂಲಭೂತವಾಗಿ ಅತ್ಯಂತ ದುಃಖಿಗಳು. ಆದುದರಿಂದಲೇ ಎಲ್ಲೂ ಭಾವುಕತೆ, ಕೂಗಾಟ ನಮಗೆ ಎದುರಾಗುವುದಿಲ್ಲ. ಎಲ್ಲವನ್ನೂ ತುಂಬಿಕೊಂಡು ಅವರು ಹಸನ್ಮುಖಿಗಳಾಗಿರಲು ಪ್ರಯತ್ನಿಸುವರು. ಸುತ್ತಲೂ ಇದ್ದವರೆಲ್ಲ ಒಂದು ರೀತಿಯಲ್ಲಿ ಎಡಬಿಡಂಗಿಗಳು. ರಾಮ ಮತ್ತು ಕೃಷ್ಣನನ್ನು ಎಳೆದೆಳೆದು ಜಗ್ಗಾಡುತ್ತಾರೆ. ಅಷ್ಟರಮಟ್ಟಿಗೆ ಅವರು ದಂಡಕಾರಣ್ಯದ ದಟ್ಟಣೆಯ ಪಾತ್ರಗಳ ನಡುವೆ ಬದುಕಲೇ ಬೇಕಾಗುತ್ತದೆ.

ದೊಡ್ಡ ಮಹತ್ವ ಇರುವುದರಿಂದಲೇ ಭಾರತದ ಉದ್ದಗಲಕ್ಕೂ ಒಂದಲ್ಲ ಒಂದು ಭಾಷೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಕುರಿತು ಪ್ರತೀ ದಿವಸ ಒಂದಲ್ಲ ಒಂದು ಕೃತಿ ಬರುತ್ತಲೇ ಇರುತ್ತದೆ. ಮನುಷ್ಯನ ಅರಿವಿನ ದಾಹ ಅಷ್ಟರಮಟ್ಟಿಗೆ ತೀವ್ರವಾಗಿದೆ. ಮರಾಠಿಯ ಬಹುಮುಖ್ಯ ಲೇಖಕಿ ಮತ್ತು ಚಿಂತಕಿ ಐರಾವತಿ ಕರ್ವೆಯವರು ‘ಯುಗಾಂತ’ ಎಂಬ ಅಪೂರ್ವ ಕೃತಿಯನ್ನು ಬರೆದಮೇಲೆ ಅದರ ಬಗ್ಗೆ ಎದ್ದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸುತ್ತ: ‘ಪ್ರತಿವರ್ಷ ತನ್ನ ಕುರಿತು ಹತ್ತಾರು ಕೃತಿಗಳನ್ನು ಕರೆಸಿಕೊಳ್ಳುವ ಚೈತನ್ಯ ಮಹಾಭಾರತಕ್ಕಿದೆ’ ಎಂದಿದ್ದರು.

ಮಹಾಭಾರತಕ್ಕೆ ಇಂಥ ಸಾರ್ವಕಾಲಿಕ ಜೀವನ ಸಂಬಂಧಿ ಮೌಲ್ಯ ಇರುವುದರಿಂದಲೇ ಪೀಟರ್ ಬ್ರೂಕ್ ಎಂಬ ಮಹಾನ್ ನಿರ್ದೇಶಕ ಅಷ್ಟೊಂದು ಮೋಹಿತನಾದದ್ದು. ಆತ ಫ್ರಾನ್ಸ್‌ನ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಮಹತ್ವದ ನಿರ್ದೇಶಕ. ಇಂಥ ಮೇಧಾವಿ ತನ್ನ ಬದುಕನ್ನೇ ಮಹಾಭಾರತಕ್ಕಾಗಿ ಮುಡಿಪಿಟ್ಟು ಯುರೋಪಿನ ಗಂಭೀರ ಪ್ರೇಕ್ಷಕರಿಗೆ ಹದಿನಾಲ್ಕು ಗಂಟೆಗಳ ನಾಟಕವನ್ನು ಸಿದ್ಧಪಡಿಸಿ ಎಷ್ಟೋ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ. ಮಹಾಭಾರತದ ಹೆಚ್ಚುಗಾರಿಕೆಯನ್ನು ಅರ್ಥೈಸಿದ. ಭಾರತಕ್ಕೆ ಆ ನಾಟಕವನ್ನು ತಂದಾಗ ಎಂಟು ಗಂಟೆಗಿಳಿಸಿದ್ದ. ಬೆಂಗಳೂರಿನ ಚೌಡಯ್ಯ ಮಂದಿರದಲ್ಲಿ ನಾಟಕ ವೀಕ್ಷಿಸಿದ ಪ್ರಮುಖ ಚಿಂತಕರೆಲ್ಲ ಸಂಭ್ರಮಿಸಿದ್ದರು. ಲಂಕೇಶ್ ಅವರಂತೂ ಎಷ್ಟೊಂದು ಭಾವನಾತ್ಮಕತೆಯಿಂದ ಸ್ಪಂದಿಸಿದ್ದರು. ಈ ಕಾರಣಕ್ಕಾಗಿಯೇ ಅವರು ಒತ್ತಾಯ ಮಾಡಿ ನನ್ನನ್ನು ಬೆಂಗಳೂರು ಸಮೀಪದ ವಿದ್ಯಾನಗರದಲ್ಲಿ ನಡೆದ ಶಿಬಿರಕ್ಕೆ ಕಳಿಸಿದ್ದರು. ಈ ನಾಟಕದ ಮತ್ತೊಂದು ವಿಶೇಷ ಎಂದರೆ ಯಾವ ಪಾತ್ರಕ್ಕೂ ಮೇಕಪ್ ಇರಲಿಲ್ಲ. ಆಯಾ ಪಾತ್ರದ ಸಾಂಸ್ಕೃತಿಕ ಹಿನ್ನೆಲೆಯ ನೆಲೆಯಲ್ಲಿ ಉಡುಪು ಪ್ರಾಧಾನ್ಯ ಪಡೆದಿತ್ತು. ಆದರೆ, ಅದು ಪ್ರಯೋಗದ ದೃಷ್ಟಿಯಿಂದ ದಟ್ಟ ಪ್ರಭಾವವನ್ನು ಬೀರಿತು. ವಿದ್ಯಾನಗರದ ಶಿಬಿರದಲ್ಲಿ ಪೀಟರ್ ಬ್ರೂಕ್‌ನ ಒಂದೊಂದು ಮಾತೂ ಎರಡು ಸಾವಿರ ವರ್ಷಗಳ ಹಿಂದಿನ ವ್ಯಾಸನನ್ನು ಎಷ್ಟೊಂದು ಮಾರ್ಮಿಕವಾಗಿ ವ್ಯಾಖ್ಯಾನಿಸುವ ರೀತಿಯಲ್ಲಿತ್ತು. ಒಂದೊಂದು ಪಾತ್ರದವರೂ ತಮ್ಮ ಅನುಭವವನ್ನು ಎಷ್ಟು ಆಪ್ತವಾಗಿ ತೆರೆದಿಟ್ಟಿದ್ದರು.

ಇಂಥದ್ದೇ ಮಾರ್ಮಿಕವಾದ ಮತ್ತೊಂದು ನೆನಪನ್ನು ಇಲ್ಲಿ ದಾಖಲಿಸಬೇಕು ಅನ್ನಿಸುತ್ತದೆ. ತೆಲುಗಿನ ಅರ್ಥಾತ್ ಭಾರತದ ಚಲನಚಿತ್ರ ಲೋಕದ ಮಹಾನ್ ಕಲಾವಿದರೊಬ್ಬರು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ಅಪೂರ್ವ ಎನ್ನುವ ಒಂದು ಮಾತನ್ನು ಹೇಳಿದ್ದರು: ‘ನಾನು ದೇವರನ್ನು ನಂಬುವುದಿಲ್ಲ. ಆದರೆ, ಈ ವಾಲ್ಮೀಕಿ ಎಂಬ ಮಹಾನುಭಾವ ನಮಗೆ ಜೀವನದುದ್ದಕ್ಕೂ ಆಡಿಸಿಕೊಂಡಿರಿ ಎಂದು ರಾಮನನ್ನು ಕೊಟ್ಟು ಹೋಗಿದ್ದಾನೆ. ಏನು ಮಾಡಿದರೂ ಬಿಡಿಸಿಕೊಳ್ಳಲಾಗದಂತೆ’.

ಪಾಕಿಸ್ತಾನದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಕಥೆಗಾರ ಎನಿಸಿದ ಇಮ್ತಿಯಾಜ್ ಹುಸೇನ್ ಅವರು ಸುಮಾರು ಎರಡು ದಶಕಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಆಹ್ವಾನದ ಮೇಲೆ ಭಾರತಕ್ಕೆ ಬಂದಿದ್ದರು. ಅದೇ ಸಮಯದಲ್ಲಿ ಬೆಂಗಳೂರಿಗೂ ಬಂದಿದ್ದರು. ಆಗ ಅವರು ಸುಮಾರು ಎರಡು ಗಂಟೆಗಳ ಕಾಲ ತಮ್ಮ ಕಥಾಲೋಕದ ಕುರಿತು ಮಾತನಾಡುವಾಗ ಸ್ಮರಣೀಯ ಎನ್ನಬಹುದಾದ ಒಂದು ಮಾತು ಹೇಳಿದರು: ‘ನನ್ನ ಮೇಲೆ ತುಂಬಾ ಪ್ರಭಾವ ಬೀರಿರುವ ಕೃತಿ ತುಳಸೀ ರಾಮಾಯಣ. ಅದರ ಪ್ರಭಾವ ಒಟ್ಟು ನನ್ನೆಲ್ಲ ಕಥೆಗಳಲ್ಲಿ ದಟ್ಟವಾಗಿದೆ. ವಿಭಜನೆಯ ನಂತರ ನಾನು ಪಾಕಿಸ್ತಾನದಲ್ಲಿದ್ದರೂ ಆ ಅಮೂಲ್ಯವಾದ ಪ್ರಭಾವ ನನ್ನನ್ನು ಗಾಢವಾಗಿ ಕಾಡುತ್ತಲೇ ಇದೆ’.

ಈ ರೀತಿಯಲ್ಲಿ ಕಾಡಿಸುವ ಮತ್ತು ಚಿಂತನೆಗೆ ಪ್ರೇರೇಪಿಸುವ ಮಹೋನ್ನತತೆ ರಾಮ ಹಾಗೂ ಕೃಷ್ಣನ ಪಾತ್ರಗಳಿಗೆ ಇದೆ. ಯಾಕೆಂದರೆ ಸಾರ್ವಕಾಲಿಕತೆಯನ್ನು ಪಡೆದಿರುವ ಅಪೂರ್ವ ಸಾಹಿತ್ಯ ಕೃತಿಗಳ ಪ್ರತಿನಿಧಿಗಳು ಅವರು. ಇಂಥ ಚೈತನ್ಯಪೂರ್ಣ ಪಾತ್ರಗಳ ಕುರಿತು ಒಮ್ಮೆ ಯು.ಆರ್.ಅನಂತಮೂರ್ತಿಯವರ ಬಳಿ ಚರ್ಚಿಸುತ್ತಿರುವಾಗ ಅವರು ಟ್ಯಾಗೋರರ ನಾಲ್ಕು ಪಾತ್ರಗಳನ್ನು ಪ್ರಸ್ತಾಪಿಸಿದರು. ‘ಗೌತಮ ಬುದ್ಧ, ರಾಜಾರಾಮ್ ಮೋಹನ್ ರಾಯ್, ವಿದ್ಯಾಸಾಗರ್ ಮತ್ತು ಗಾಂಧೀಜಿ ಈ ನಾಲ್ಕು ಪಾತ್ರಗಳು ಟ್ಯಾಗೋರರ ದಟ್ಟ ಚಿಂತನೆಯ ಮೂಲಕ ಮೂಡಿ ಬಂದಿರುವುದರಿಂದ ಅವು ಮತ್ತೆ ಮತ್ತೆ ಓದಲು ನಮ್ಮನ್ನು ಪ್ರೇರೇಪಿಸುತ್ತಲೇ ಇರುತ್ತವೆ. ಇವುಗಳನ್ನು ಓದಿದ ಮೇಲೆ ಅವರ ‘ತಪೋವನ’ ಎಂಬ ಲೇಖನಕ್ಕೆ ಪ್ರವೇಶ ಮಾಡು’ ಎಂದಿದ್ದರು.

ಯುದ್ಧಕ್ಕೆ ಹೊರಟ ರಾಮ... ನಿಯೋಗಿ ಬುಕ್ಸ್‌ನ ‘ದಿ ರಾಮಾಯಣ’ದ ಚಿತ್ರಕಾರ ಕಂಡಂತೆ

ಕಳೆದ ಎರಡು ದಶಕಗಳಿಂದ ನನ್ನಿಂದ ಎಷ್ಟೋ ಬಾರಿ ಓದಿಸಿಕೊಂಡಿರುವ ಲೇಖ‌ನಗಳಿವು. ಸಾಹಿತ್ಯಿಕವಾಗಿ ಬಲು ದಟ್ಟವಾದ ಲೇಖನಗಳಿವು. ಇವುಗಳ ಮೂಲಕ ಮನುಕುಲದ ಎಂತೆಂಥ ಏಳು ಬೀಳುಗಳು ನಮಗೆ ಮುಖಾಮುಖಿಯಾಗುತ್ತವೆ, ನಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಕ್ಷೀಭೂತವಾಗುತ್ತವೆ. ಹಾಗೆ ನೋಡಿದರೆ ಟ್ಯಾಗೋರರು ತಮ್ಮ ಎಂಬತ್ತನೆಯ ಹುಟ್ಟುಹಬ್ಬದ ನೆಪದಲ್ಲಿ ಶಾಂತಿನಿಕೇತನದಲ್ಲಿ ‘ಕಲ್ಚರಲ್ ಕ್ರೈಸಿಸ್‌’ ಎಂಬ ವಿಷಯ ಕುರಿತು ಮಾಡಿದ ಕೊನೆಯ ಉಪನ್ಯಾಸ ನಮ್ಮ ಮನಸ್ಸನ್ನು ಹಿಡಿದು ಅಲ್ಲಾಡಿಸುವಷ್ಟು ದಟ್ಟವಾಗಿದೆ. ಈ ರೀತಿಯಲ್ಲಿ ನಾವು ಮನೆಯಂಗಳದ ಮಹತ್ವಪೂರ್ಣ ಲೇಖಕರನ್ನು ಪ್ರಾತಃಸ್ಮರಣೀಯರು ಎಂದು ಓದಿಕೊಳ್ಳುವಂತೆ ಜಗತ್ತಿನ ಶ್ರೇಷ್ಠ ಲೇಖಕರನ್ನೂ ಓದಿಕೊಳ್ಳುತ್ತೇವೆ. ಅವ್ಯಕ್ತ ಅನುಭೂತಿಯನ್ನು ಪಡೆಯುತ್ತಾ ಹೋಗುತ್ತೇವೆ.

ನೊಬೆಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಸಾಹಿತಿಗಳು ಮಾಡಿದ ಭಾಷಣಗಳು ಸಾಹಿತ್ಯ ಕೃತಿಗಳಷ್ಟೇ ಚಾರಿತ್ರಿಕವಾದುವು. ಈ ದೃಷ್ಟಿಯಿಂದ ರಷ್ಯಾದ ಸೋಲ್ಜೆನಿಟ್ಸನ್, ಚಿಲಿಯ ಪಾಬ್ಲೊ ನೆರೂಡಾ, ಫ್ರಾನ್ಸ್‌ನ ಆಲ್ಬರ್ಟ್‌ ಕಮೂ ಮುಂತಾದ ಎಷ್ಟೋ ಲೇಖಕರ ನೊಬೆಲ್ ಪ್ರಶಸ್ತಿ ಪಡೆದ ಸಂದರ್ಭದ ಭಾಷಣಗಳೂ ಚಾರಿತ್ರಿಕವಾದಂಥವು. ಅಷ್ಟರಮಟ್ಟಿಗೆ ಇತಿಹಾಸದ, ಸಮಕಾಲೀನ ಸಂದರ್ಭದ ಸಂಗತಿಗಳಿಗೆ ಅವುಗಳು ನಮ್ಮನ್ನು ಮುಖಾಮುಖಿಯಾಗಿಸುತ್ತವೆ.

ಸಾಹಿತ್ಯ ಕೃತಿಗಳ ಕುರಿತು ಐನ್‌ಸ್ಟೀನ್‌ನ ಒಂದು ಮಾತಿದೆ. ಸಾಹಿತ್ಯ ಕೃತಿಗಳ ಓದಿನಿಂದ ವಿಜ್ಞಾನದ ಅರಿವು ಮತ್ತಷ್ಟು ವಿಸ್ತರಿಸಿದೆ ಎಂದು. ಸಾಹಿತ್ಯದ ಓದು ಎಂದರೆ ಪುಸ್ತಕ ಸಂಸ್ಕೃತಿಯನ್ನು ವಿಸ್ತರಿಸುವುದೇ ಆಗಿದೆ.

ಕಮೂವಿನ ‘ಪ್ಲೇಗ್’ ಕಾದಂಬರಿಯ ಕೊನೆಯಲ್ಲಿ ಅರ್ಥಪೂರ್ಣ ಕೆಲವು ಸಾಲುಗಳಿವೆ. ಪ್ಲೇಗ್ ಕಡಿಮೆಯಾಗುವ ಸಂದರ್ಭ. ಬೀದಿಗಳಲ್ಲಿ, ರಸ್ತೆಗಳಲ್ಲಿ, ಮನೆಗಳ ಮುಂದೆ ಇಲಿಗಳು ನಿಧಾನವಾಗಿ ಸಂಭ್ರಮದಿಂದ ಓಡಾಡಲು ಶುರುಮಾಡುವವು. ಜನ ಶುಭಸೂಚಕ ಎಂದು ತಿಳಿದು ಸಂತೋಷವಾಗಿ ಬೀದಿಗಿಳಿಯುವರು. ಆದರೆ, ದಾರ್ಶನಿಕ ವ್ಯಕ್ತಿತ್ವದ ಡಾ.ರಿಯೂ ಯೋಚಿಸುವುದೇ ಬೇರೆ. ಈ ರೋಗ ಪೂರ್ತಿ ಸಾಯುವುದಿಲ್ಲ. ಎಲ್ಲೆಲ್ಲೋ ಅವಿತುಕೊಂಡಿರುತ್ತದೆ. ಯಾವಾಗ ಬೇಕಾದರೂ ದಾಳಿ ಮಾಡಬಹುದು. ಇದು ಪುಸ್ತಕ ಓದುವವರಿಗೆ ಮಾತ್ರ ತಿಳಿಯಲು ಸಾಧ್ಯ. ಯಾಕೆಂದರೆ ಜಗತ್ತಿನಲ್ಲಿ ಅರಿಯುವ ಸಾಧ್ಯತೆ ಇರುವುದು ಪುಸ್ತಕ ಸಂಸ್ಕೃತಿಗೆ ಮಾತ್ರ ಎಂದು.

ಪ್ರಸಿದ್ಧ ಮಕ್ಕಳ ಲೇಖಕ ರಸ್ಕಿನ್ ಬಾಂಡ್ ಅವರ ಉಪನ್ಯಾಸವಿತ್ತು, ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಫೋರಮ್ ಬುಕ್‌ಹೌಸ್‌ನಲ್ಲಿ. ಮಕ್ಕಳು ಕಿಕ್ಕಿರಿದು ತುಂಬಿದ್ದರು. ಅವರ ಪೋಷಕರ ಜೊತೆ ಆಗ ರಸ್ಕಿನ್ ಬಾಂಡ್, ‘ಶಿಕ್ಷಣ ಪಡೆದವರು ವಾರಕ್ಕೆ ಒಂದು ಪುಸ್ತಕ ಓದದೇ ಹೇಗೆ ಇರ್ತಾರೋ ಗೊತ್ತಿಲ್ಲ. ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದಿದ್ದರು. ನೈಪಾಲ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅದೇ ಫೊರಮ್ ಹೌಸ್‌ನಲ್ಲಿ ನಡೆದ ಸಂವಾದದ ನಡುವೆ ಉತ್ತರಿಸುತ್ತ ಅವರು, ‘ನನ್ನ ದೋಷಗಳನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುವುದು ಉತ್ತಮ ಕೃತಿಗಳ ಓದಿನಿಂದ’ ಎಂದಿದ್ದರು. ಅಂದು ಸಭಿಕರ ನಡುವೆ ಪ್ರಸಿದ್ಧ ಚಿಂತಕ, ಲೇಖಕ ರಾಮಚಂದ್ರ ಗುಹಾ ಅವರೂ ಇದ್ದರು.

ನಮ್ಮ ನಿಜಲಿಂಗಪ್ಪ ಅವರು ತುಂಬಾ ಓದುತ್ತಿದ್ದರು. ಒಮ್ಮೆ ಅವರನ್ನು ನೋಡಲು ಜಿ.ಎಸ್.ಶಿವರುದ್ರಪ್ಪ ಮತ್ತು ನಾನು ನೋಡಲು ಹೋದಾಗ ತಮ್ಮ ತೊಂಬತ್ತರ ವಯಸ್ಸಿನಲ್ಲಿ ಓದುತ್ತ ಕೂತಿದ್ದರು, ಮೆಲುದನಿಯಲ್ಲಿ ಸಂಗೀತವನ್ನು ಆಲಿಸುತ್ತ. ಅದರ ಬಗೆಗಿನ ನಮ್ಮ ಪ್ರಶ್ನೆಗೆ ಉತ್ತರಿಸುತ್ತ, ‘ಓದಬೇಕಪ್ಪ, ಓದೇ ನಮ್ಮನ್ನು ಕಾಪಾಡೋದು’ ಎಂದಿದ್ದರು.

ಈ ನೆಲೆಯಲ್ಲಿ ನಮ್ಮ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಕಡಿದಾಳ್ ಮಂಜಪ್ಪ ಮುಂತಾದ ಕೆಲವರು ಪುಸ್ತಕ ಪ್ರೇಮಿಗಳಾಗಿದ್ದರು. ನಮ್ಮ ಹಳೆಯ ತಲೆಮಾರಿನ ಬಹುಪಾಲು ರಾಷ್ಟ್ರೀಯ ನಾಯಕರು ಗಾಢವಾದ ಪುಸ್ತಕ ಪ್ರೇಮಿಗಳಾಗಿದ್ದರು. ಎಲ್ಲಾ ಪಕ್ಷಗಳಲ್ಲೂ ಅಂಥ ನಾಯಕರು ಇದ್ದರು.

ಕಲಾಕೃತಿ: ಅಶೋಕ ಶಟಕಾರ

ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ತಮ್ಮ ಆಪ್ತ ಸಹಾಯಕರಿಗೆ ಸೂಚಿಸಿದ್ದು ತಾವು ಓದಬೇಕಾದ ಅತ್ಯುತ್ತಮ ಹತ್ತು ಪುಸ್ತಕಗಳನ್ನು ಹೆಸರಿಸಿ ಎಂದು. ಈ ಹತ್ತು ಪುಸ್ತಕಗಳಲ್ಲಿ ಗಾಂಧೀಜಿಯವರನ್ನು ಕುರಿತ ಪುಸ್ತಕವೂ ಇತ್ತು. ಇರಲಿ, ಹೀಗೇ ಪ್ರಸ್ತಾಪಿಸುತ್ತ ಹೋಗಬಹುದು, ಮನುಕುಲದ ಕಲ್ಯಾಣವೇ ಮುಖ್ಯ ಎಂಬ ಕಾರಣಕ್ಕಾಗಿ.

ಕೊನೆಗೆ ಪೋಲಿಷ್ ಭಾಷೆಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಓಲ್ಗಾ ತುಕಾಜುಕ್ ಅವರ ಮಾತು ನೆನಪಿಸಿಕೊಳ್ಳುವೆ. ಅದು ಹೀಗಿದೆ: ‘ಮೃದುತ್ವವೆಂಬುದು ಪ್ರೀತಿಯ ಘನವಾದ ರೂಪ. ಅದು ಇನ್ನೊಂದು ಜೀವಿಯ ಆಳವಾದ ಭಾವನಾತ್ಮಕ ಕಾಳಜಿ, ಅದರ ದೌರ್ಬಲ್ಯ, ಯಾತನೆ, ಸ್ವಭಾವಗಳನ್ನು ಕಾಣಬಲ್ಲುದು. ಅದು ವಿಶ್ವವನ್ನು ಪರಸ್ಪರ ಸಂಬಂಧಿತ, ಜೀವಂತ ಮೊತ್ತವಾಗಿ ಕಾಣುವ ಪರಿ. ಸಾಹಿತ್ಯವೆಂಬುದು ಇಂಥ ಮೃದುತ್ವದ ಮೇಲಿನ ನಿರ್ಮಾಣ. ಅದು ಇನ್ನೊಬ್ಬನಿಗಾಗಿ ಮಿಡಿಯುವ ವಸ್ತು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.