ADVERTISEMENT

ಪಿವಿಎನ್‌- ಸಹಮತದ ಸಾಧಕ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 19:30 IST
Last Updated 26 ಜೂನ್ 2021, 19:30 IST
ಕಲೆ: ಪ್ರಕಾಶ್ ಶೆಟ್ಟಿ
ಕಲೆ: ಪ್ರಕಾಶ್ ಶೆಟ್ಟಿ   

‘ಪಿವಿ’ ಎಂದೇ ತವರು ರಾಜ್ಯ ತೆಲಂಗಾಣದಲ್ಲಿ (ಆಗಿನ ಆಂಧ್ರ ಪ್ರದೇಶ) ಜನಪ್ರಿಯರಾಗಿದ್ದ ಪಾಮುಲಪರ್ತಿ ವೆಂಕಟ ನರಸಿಂಹ ರಾವ್‌ ಅವರು 1991ರ ಆ ಬೇಸಗೆಯ ಹೊತ್ತಿಗೆ ರಾಜಕೀಯ ನಿವೃತ್ತಿಯ ಅಂಚಿನಲ್ಲಿದ್ದರು. ಚಿಂತಕರ ಚಾವಡಿಯೊಂದನ್ನು ಆರಂಭಿಸುವುದು ಮತ್ತು ಉಳಿದ ಸಮಯವನ್ನು ‍ಪ್ರಾರ್ಥನೆಗೆ ಮೀಸಲಿಡುವುದರ ಬಗ್ಗೆ ಯೋಚಿಸುತ್ತಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿ ಹುದ್ದೆಗೆ ಬನ್ನಿ ಎಂಬ ಕರೆ ಬಂದಿತ್ತು. ಆಗ ಅವರಿಗೆ 70 ವರ್ಷ ವಯಸ್ಸು. ಇದೇ 28ರಂದು ನರಸಿಂಹ ರಾವ್‌ ಅವರ ಜನ್ಮಶತಮಾನೋತ್ಸವ. ಭಾರತದ ಆಚರಣೆ ಕೇಂದ್ರಿತ ಪರಂಪ‍ರೆಯಿಂದಾಗಿ ಈ ವಾರ ಪೂರ್ತಿ ರಾವ್‌ ಅವರು ಸುದ್ದಿಯಲ್ಲಿರಬಹುದು. ಭಾರತದ ಅತ್ಯುನ್ನತ ಪುರಸ್ಕಾರವಾದ ‘ಭಾರತ ರತ್ನ’ ನೀಡಿ ರಾವ್‌ ಅವರನ್ನು ಗೌರವಿಸಿ ಎಂದು ತೆಲಂಗಾಣ ಸರ್ಕಾರವು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಈಗಾಗಲೇ ಮನವಿ ಮಾಡಿದೆ.

ನರಸಿಂಹ ರಾವ್‌ ಅವರ ಅವಧಿಯ ಮಹತ್ವದ ಬಗ್ಗೆ ರಾಜಕೀಯ ವಿಶ್ಲೇಷಕರು, ಅರ್ಥಶಾಸ್ತ್ರಜ್ಞರು ಮತ್ತು ರಾಜತಾಂತ್ರಿಕರು ಚರ್ಚೆ ಮುಂದುವರಿಸಿದ್ದಾರೆ. 1947ರ ಬಳಿಕ 1991 ಭಾರತದ ಸಮಕಾಲೀನ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದುದು ಎಂಬ ಬಗ್ಗೆ ವ್ಯಾಪಕವಾದ ಸಮ್ಮತಿ ಇದೆ. ‘1991: ಹೌ ನರಸಿಂಹ ರಾವ್‌ ಮೇಡ್‌ ಹಿಸ್ಟರಿ’ ಕೃತಿಯಲ್ಲಿ ನಾನು ಪ್ರತಿಪಾದಿಸಿದಂತೆ, ಆ ವರ್ಷವು ವ್ಯಕ್ತಿಯ ಹೆಸರನ್ನು ಚಿರಸ್ಥಾಯಿಯಾಗಿಸಿದರೆ ವ್ಯಕ್ತಿಯು ವರ್ಷವನ್ನು ಸ್ಮರಣೀಯವಾಗಿಸಿದರು. ‘ಸಮಾಜಗಳು ಸಮಯದ ನಿರ್ದಿಷ್ಟ ಕ್ಷಣವನ್ನು ‘ಮೈಲುಗಲ್ಲು’ ಎಂದು ಗುರುತಿಸುವುದು ಆ ಕ್ಷಣವನ್ನು ಎಲ್ಲರೂ ಅನುಭವಿಸಿದ್ದಾರೆ ಅಥವಾ ಅದು ಎಲ್ಲರ ಅನುಭವಕ್ಕೆ ಬಂದಿದೆ ಎಂಬ ಕಾರಣಕ್ಕೆ ಅಲ್ಲ. ಬದಲಿಗೆ, ನಿರ್ದಿಷ್ಟ ಘಟನೆ ಅಥವಾ ವರ್ಷವು ಚಾರಿತ್ರಿಕ ಮೈಲುಗಲ್ಲು ಎಂಬ ಬಗ್ಗೆ ತರುವಾಯದಲ್ಲಿ ಮೂಡುವ ಸಾಮಾಜಿಕ ಸಹಮತದಿಂದಾಗಿ’ ಎಂಬುದು ಇತಿಹಾಸಕಾರ ಎರಿಕ್‌ ಹಾಬ್ಸ್‌ಬಾಮ್‌ನ ಪ್ರಸಿದ್ಧ ಹೇಳಿಕೆ. 1991 ಪಲ್ಲಟವೊಂದು ಸಾಧ್ಯವಾದ ವರ್ಷ ಎಂಬ ವಿಚಾರದಲ್ಲಿ ಸಹಮತ ಇದೆ.

ಭಾರತವು ತನ್ನ ಆರ್ಥಿಕ ನೀತಿಯ ದಿಕ್ಕನ್ನು ಬದಲಿಸಿತು ಎಂಬುದಷ್ಟೇ ಇದಕ್ಕೆ ಕಾರಣವಲ್ಲ; ಶೀತಲ ಸಮರವು ಕೊನೆಗೊಂಡು, ಸೋವಿಯತ್‌ ಒಕ್ಕೂಟದ ಅಂತಃಸ್ಫೋಟದ ನಂತರದ ಜಗತ್ತನ್ನು ನೋಡುವ ಬಗೆಯನ್ನೇ ಭಾರತವು ಮರುರೂಪಿಸಿಕೊಂಡಿತು. ದೇಶೀಯವಾಗಿ ಆರ್ಥಿಕ ನೀತಿ ಮತ್ತು ಜಾಗತಿಕವಾಗಿ ವಿದೇಶಾಂಗ ನೀತಿಯಲ್ಲಿನ ಪಲ್ಲಟವು ‘ನೆಹರೂ ಯುಗ’ ಎಂಬ ಒಂದು ಯುಗವನ್ನು ಕೊನೆಗೊಳಿಸಿ ನೆಹರೂ ಉತ್ತರ ಯುಗಕ್ಕೆ ನಾಂದಿ ಹಾಡಿತು. ನಾನು ಹಾಗೆ ಏಕೆ ಹೇಳುತ್ತೇನೆ ಎಂಬುದನ್ನು ನನ್ನ ಪುಸ್ತಕದಲ್ಲಿ ವಿವರಿಸಿದ್ದೇನೆ. ಈ ಎರಡೂ ಪಲ್ಲಟಗಳಿಗೆ ನರಸಿಂಹ ರಾವ್‌ ಅವರು ರಾಜಕೀಯ ನಾಯಕತ್ವ ಕೊಟ್ಟರು. ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್‌ ಅವರು ಮೊದಲನೆಯದರ ರೂವಾರಿಯಾದರೆ, ವಿದೇಶಾಂಗ ಕಾರ್ಯದರ್ಶಿ ಜೆ.ಎನ್. ದೀಕ್ಷಿತ್‌ ಅವರ ನೇತೃತ್ವದ ರಾಜತಾಂತ್ರಿಕರ ತಂಡವು ಎರಡನೆಯದನ್ನು ಜಾರಿಗೆ ತಂದು ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿತು.

ADVERTISEMENT

ತೆಲಂಗಾಣ ಸರ್ಕಾರವು ರಾವ್‌ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುವುದಕ್ಕಾಗಿ ಸ್ಮರಣ ಸಂಚಿಕೆಯೊಂದನ್ನು ಪ್ರಕಟಿಸಲಿದೆ. ಅದನ್ನು ಸಂಪಾದಿಸುವ ಸೌಭಾಗ್ಯ ನನ್ನದಾಗಿದೆ. ಭಾರತದ ಆರ್ಥಿಕ, ವಿದೇಶಾಂಗ ಮತ್ತು ರಕ್ಷಣಾ ನೀತಿಯಲ್ಲಿನ ಪಲ್ಲಟಕ್ಕೆ ರಾವ್‌ ಅವರ ಕೊಡುಗೆಯ ಬಗ್ಗೆ ಅವರ ಸಮಕಾಲೀನರಾಗಿದ್ದ ಹಲವರು ನೆನಪು ಮಾಡಿಕೊಂಡಿದ್ದಾರೆ. ಅತ್ಯಂತ ಅನಿರೀಕ್ಷಿತವಾದ ಹೊಣೆಗಾರಿಕೆಯನ್ನು ರಾವ್‌ ಅವರು ನಿರ್ವಹಿಸಿದರು ಎಂಬುದೇ ರಾವ್‌ ಅವರ ಕೊಡುಗೆಯ ಪ್ರಮುಖ ಅಂಶ; ಅಯಾಚಿತವಾಗಿ ಬಂದ ಐತಿಹಾಸಿಕ ಅವಕಾಶವನ್ನು ರಾವ್‌ ಅವರು ಅತ್ಯುತ್ತಮವಾಗಿ ಬಳಕೆ ಮಾಡಿದರು ಮತ್ತು ಐತಿಹಾಸಿಕ ಛಾಪು ಮೂಡಿಸುವುದಕ್ಕೆ ಇದು ಅವರಿಗೆ ಅವಕಾಶವನ್ನು ಒದಗಿಸಿತು.

‘ಪ್ರಾಮಾಣಿಕತೆ ಮತ್ತು ಸ್ಪಷ್ಟ ಗುರಿಯ ನಿದರ್ಶನದಂತೆ ರಾವ್‌ ಇದ್ದರು. ಅವರು ನೇರ ಮತ್ತು ಸ್ಪಷ್ಟವಾಗಿದ್ದರು. ಸಮೃದ್ಧ ಮತ್ತು ಚಲನಶೀಲ ಭಾರತದ ಬಗ್ಗೆ ಸಮಗ್ರ ದೃಷ್ಟಿಕೋನ ಹೊಂದಿದ್ದರು’ ಎಂದು ಆಗ ಸಿಂಗಪುರದ ಪ್ರಧಾನಿಯಾಗಿದ್ದ ಗೊಹ್‌ ಚೊಕ್‌ ಟಾಂಗ್‌ ಅವರು ರಾವ್ ಅವರನ್ನು ನೆನಪಿಸಿಕೊಂಡಿದ್ದಾರೆ. ‘ಅವರೊಬ್ಬ ಬುದ್ಧಿವಂತ ನಾಯಕ. ರಾಜಕೀಯವಾಗಿ ದೂರಗಾಮಿ ನೋಟ ಹೊಂದಿದ್ದರು ಮತ್ತು ವಾಸ್ತವವಾದಿಯಾಗಿದ್ದ ಅವರದ್ದು ಎಲ್ಲರೂ ಇಷ್ಟಪಡುವ ವ್ಯಕ್ತಿತ್ವ’ ಎಂದು ನೆನಪಿಸಿಕೊಂಡವರು ಬ್ರಿಟನ್‌ನ ಮಾಜಿ ಪ್ರಧಾನಿ ಜಾನ್‌ ಮೇಜರ್‌.

ಸ್ಪಷ್ಟ ಗುರಿ ಮತ್ತು ದೃಷ್ಟಿಕೋನದೊಂದಿಗೆ ವಾಸ್ತವಿಕ ಹಾಗೂ ಮೃದು ಧೋರಣೆ, ಎಲ್ಲರೂ ಮೆಚ್ಚುವ ವ್ಯಕ್ತಿತ್ವ, ಸಹಮತದ ರಾಜಕೀಯ ಶೈಲಿಯಿಂದಾಗಿ ನರಸಿಂಹ ರಾವ್‌ ಅವರ ಮೇಲೆ ಎಷ್ಟು ನಿರೀಕ್ಷೆ ಇರಿಸಲಾಗಿತ್ತೋ ಅದಕ್ಕಿಂತ ಬಹಳ ಹೆಚ್ಚಿನದನ್ನು ಸಾಧಿಸಲು ಅವರಿಗೆ ಸಾಧ್ಯವಾಯಿತು. ತಮ್ಮ ಕಾಲದ ರಾಜಕೀಯದಲ್ಲಿ ರಾವ್‌ ಅವರು ಎರಡು ಬಹುದೊಡ್ಡ ತೊಡಕುಗಳನ್ನು ಎದುರಿಸಬೇಕಿತ್ತು– ಮೊದಲನೆಯದಾಗಿ, ಕಾಂಗ್ರೆಸ್‌ ಸಂಸದೀಯ ಪಕ್ಷದ ಮೇಲೆ ಅವರಿಗೆ ಸ್ವತಂತ್ರವಾದ ನಿಯಂತ್ರಣ ಇರಲಿಲ್ಲ; ಎರಡು, ಅವರು ದಕ್ಷಿಣ ಭಾರತದಿಂದ ಬಂದ ಮೊದಲನೆಯ ಪ್ರಧಾನಿ ಆಗಿದ್ದರು. ದೆಹಲಿ ದರ್ಬಾರ್‌ ನಿಯಂತ್ರಣವುಅಲ್ಲಿಯವರೆಗೆ ನೆಹರೂ–ಗಾಂಧಿ ಕುಟುಂಬದ ಅಧೀನದಲ್ಲಿತ್ತು ಮತ್ತು ರಾಜಕೀಯ ಅಧಿಕಾರವು ಉತ್ತರ ಭಾರತದ ರಾಜಕಾರಣಿಗಳಲ್ಲಿ ಕೇಂದ್ರೀಕೃತವಾಗಿತ್ತು. ಈ ಎಲ್ಲ ತೊಡಕುಗಳನ್ನು ದಾಟಿದ ರಾವ್‌ ಅವರು ನೆಹರೂ ಕುಟುಂಬದ ಹೊರಗಿನ ಮತ್ತು ಪ್ರಧಾನಿಯಾಗಿ ಐದು ವರ್ಷದ ಅವಧಿ ಪೂರ್ಣಗೊಳಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡರು. ಲೋಕಸಭೆಗೆ 1996ರಲ್ಲಿ ನಡೆದ ಚುನಾವಣೆಯಲ್ಲಿ ‍ಪಕ್ಷದ ಸೋಲಿನ ಬಳಿಕ ಪ್ರಧಾನಿ ಹುದ್ದೆಗೆ ರಾವ್‌ ಅವರು ದಕ್ಷಿಣ ಭಾರತದ ವ್ಯಕ್ತಿಗೆ ಬೆಂಬಲ ನೀಡಿದ್ದರು ಎಂಬುದೂ ಗಮನಾರ್ಹ. ಕರ್ನಾಟಕದ ಎಚ್‌.ಡಿ.ದೇವೇಗೌಡ ಅವರು ರಾವ್‌ ಅವರ ಉತ್ತರಾಧಿಕಾರಿಯಾದರು.

1991ರ ನಂತರದ ಮೂರು ದಶಕಗಳಲ್ಲಿ ಕೇಂದ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿವಿಧ ರೀತಿಯ ಮೈತ್ರಿಕೂಟಗಳು ಅಧಿಕಾರಕ್ಕೆ ಬಂದರೂ ನರಸಿಂಹ ರಾವ್‌ ಅವರ ಅವಧಿಯಲ್ಲಿ ಪರಿವರ್ತನೆಗೊಂಡ ನೀತಿಯ ವಿಚಾರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ ಎಂಬದು ಆಗಿನ ಪಲ್ಲಟದ ಮಹತ್ವ ಏನು ಎಂಬುದನ್ನು ಸೂಚಿಸುತ್ತದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಶತಮಾನೋತ್ಸವ ಸಂಚಿಕೆಗೆ ಬರೆದ ಲೇಖನದಲ್ಲಿ ನರಸಿಂಹ ರಾವ್‌ ಅವರ ತಾಳ್ಮೆ ಸ್ವಭಾವ ಮತ್ತು ಗಾಢವಾದ ರಾಜಕೀಯ ಪರಿಣತಿಯನ್ನು ನೆನಪಿಸಿಕೊಂಡಿದ್ದಾರೆ. ಚರ್ಚೆ ಮತ್ತು ಸಂವಾದಕ್ಕೆ ಸದಾ ಮುಕ್ತವಾಗಿದ್ದ ಅವರ ಮನೋಭಾವವು ಅವರ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಸಹಮತ ರೂಪಿಸುವುದಕ್ಕಾಗಿ ವಿರೋಧ ಪಕ್ಷಗಳ ಜತೆಗೆ ಸುಲಲಿತವಾಗಿ ಕೆಲಸ ಮಾಡುವುದಕ್ಕೆ ಹೇಗೆ ನೆರವಾಯಿತು ಎಂಬುದನ್ನೂ ಸಿಂಗ್‌ ಸ್ಮರಿಸಿದ್ದಾರೆ.

ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಹಲವು ರಾಜಕೀಯ ನಾಯಕರು ಅಧಿಕಾರಕ್ಕೆ ಹಾತೊರೆಯುತ್ತಿರುವುದು, ಅದಕ್ಕಾಗಿ ಗುದ್ದಾಡುವುದು ಮತ್ತು ಅದನ್ನು ಪಡೆದುಕೊಳ್ಳುವುದನ್ನು ಕಾಣಬಹುದು. ಆದರೆ, ಆ ಅಧಿಕಾರವನ್ನು ಸಮಾಜ ಮತ್ತು ದೇಶದ ಒಳಿತಿಗೆ ಹೇಗೆ ಬಳಸಿಕೊಳ್ಳಬೇಕು ಎಂಬ ತಿಳಿವಳಿಕೆ ಅವರಲ್ಲಿ ಇಲ್ಲ. ನರಸಿಂಹ ರಾವ್ ಅವರು ಜನಪ್ರಿಯ ಅಥವಾ ಜನಾಕರ್ಷಕ ರಾಜಕೀಯ ನಾಯಕ ಆಗಿರಲಿಲ್ಲ. ಅವರಿಗೆ ಅಧಿಕಾರ ಅಯಾಚಿತವಾಗಿ ಬಂತು ಮತ್ತು ಅದನ್ನು ಅವರು ಪಕ್ಷದೊಳಗಿನ ಹಲವು ಗುಂಪುಗಳ ಜತೆಗೆ ಹಂಚಿಕೊಳ್ಳಬೇಕಿತ್ತು. ಹಾಗಿದ್ದರೂ, ಪ್ರಧಾನಿಯಾಗಿ ದತ್ತವಾದ ಸಾಂಸ್ಥಿಕ ಅಧಿಕಾರವನ್ನು ದೇಶವನ್ನು ಹೊಸ ದಿಕ್ಕಿನತ್ತ ಹೊರಳಿಸುವುದಕ್ಕಾಗಿ ಅವರು ಅತ್ಯುತ್ತಮವಾಗಿ ಮತ್ತು ಅತ್ಯಂತ ದಕ್ಷವಾಗಿ ಬಳಸಿಕೊಂಡರು. ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆ, ದೊಡ್ಡ ಶಕ್ತಿಯಾಗಿ ಬೆಳೆಯುವತ್ತ ಭಾರತ ಎಂಬುದಕ್ಕೆ ರಾವ್ ಅವಧಿಯಲ್ಲಿ ದೊಡ್ಡ ಒತ್ತು ಸಿಕ್ಕಿತು.

ನಂತರದ ಎರಡು ದಶಕಗಳಲ್ಲಿ ಮತ್ತಿಬ್ಬರು ಸಮರ್ಥ ಉತ್ತರಾಧಿಕಾರಿಗಳಾದ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ನಾಯಕತ್ವದಲ್ಲಿ ಹೆಚ್ಚಿನ ದರದ ಆರ್ಥಿಕ ಪ್ರಗತಿ ದಾಖಲಾಯಿತು; ಬಡತನ ಇಳಿಕೆಯಾಯಿತು ಮತ್ತು ಅಭಿವೃದ್ಧಿಶೀಲ ಪ್ರಜಾತಂತ್ರವಾಗಿ ಜಾಗತಿಕ ಭರವಸೆಯ ಸಂಕೇತವೂ ಆಯಿತು. ಆದರೆ, ಈ ಭರವಸೆಯ ಪರಂಪರೆಗೆ ಬೆದರಿಕೆ ಎದುರಾಗಿದೆ– ಅರ್ಥ ವ್ಯವಸ್ಥೆಯು ಮುಗ್ಗರಿಸಿ, ರಾಜಕೀಯ ಮತ್ತು ಸಾಮಾಜಿಕ ವಿಭಜನೆಯು ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ, ಬಡತನ ಮತ್ತು ನಿರುದ್ಯೋಗ ಮತ್ತೆ ಏರಿಕೆಯಾಗಿದೆ. ಮತ್ತೆ ಬದಲಾವಣೆಯು ಸಾಧ್ಯವಿದೆ; ಅದನ್ನು ಸಾಧಿಸಿಬೇಕಿದ್ದರೆ, ನರಸಿಂಹ ರಾವ್‌ ಅವರೊಂದಿಗೆ ತಳಕು ಹಾಕಿಕೊಂಡಿರುವ ಸಹಮತ ಮತ್ತು ಎಲ್ಲರನ್ನೂ ಒಳಗೊಳ್ಳುವ ರಾಜಕಾರಣಕ್ಕೆ ಮರಳುವ ಅಗತ್ಯ ಇದೆ.

ಲೇಖಕ: ರಾಜಕೀಯ ವಿಶ್ಲೇಷಕ, ‘1991: ಹೌ ಪಿ.ವಿ. ನರಸಿಂಹರಾವ್‌ ಮೇಡ್‌ ಹಿಸ್ಟರಿ’ ಕೃತಿಯ ಕರ್ತೃ

ಕನ್ನಡಕ್ಕೆ: ಹಮೀದ್‌ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.