ADVERTISEMENT

ವಾಹ್‌... ಕಾಫಿ!

ಶುಭಶ್ರೀ
Published 3 ಜುಲೈ 2021, 19:30 IST
Last Updated 3 ಜುಲೈ 2021, 19:30 IST
ಫಿಲ್ಟರ್‌ ಕಾಫಿಯ ಸೊಬಗೇ ಬೇರೆ
ಫಿಲ್ಟರ್‌ ಕಾಫಿಯ ಸೊಬಗೇ ಬೇರೆ   

ಮಾಗಿಯ ಚುಮುಚುಮು ಚಳಿ ಮೈನಡುಗಿಸುವಾಗ ಬಿಸಿಬಿಸಿ ಫಿಲ್ಟರ್ ಕಾಫಿ; ಜೊತೆಗೊಂದಿಷ್ಟು ಬಿಸಿ ಬಜ್ಜಿ ಇದ್ದರೆ.. ವಾಹ್ ಸ್ವರ್ಗ ಕೈಗೆ ಎಟುಕಿದಂತೆಯೇ ನನ್ನಂತಹ ಕಾಫಿ ಪ್ರಿಯರಿಗೆ. ಒಂದೊಂದೇ ಗುಟುಕು ಗಂಟಲೊಳಗೆ ಇಳಿದಹಾಗೆಯೇ ಚಳಿ ಗಂಟುಮೂಟೆ ಕಟ್ಟುತ್ತದೆ.

ಕಾಫಿ ಮಾಡುವುದೆಂದರೆ ಹುಡುಗಾಟವೇ? ಅದೊಂದು ತಪಸ್ಸೇ ಸರಿ. ಹದವರಿತ ನುರಿತ ಕೈಗಳು ಮಾತ್ರವೇ ಸ್ವಾದಿಷ್ಟ ಕಾಫಿ ಮಾಡಲು ಸಾಧ್ಯ. ಅದೇ ಹೆಸರಿನ ಗಿಡದ ಬೀಜಗಳನ್ನು ಹುರಿದು ಮಾಡಿದ ಪುಡಿಯನ್ನು ಕೊತಕೊತ ಕುದಿವ ಪಾತ್ರೆಯ ನೀರಿಗೆ ಹಾಕಿ ಅಮ್ಮ ಅದಕ್ಕೆಂದೇ ಮೀಸಲಿಟ್ಟ ಕೋರಾ ಬಟ್ಟೆಯಿಂದ ಬಸಿಯುತ್ತಿದ್ದುದು ಇನ್ನೂ ನೆನಪಿನಲ್ಲಿ ಹಸಿರಾಗಿದೆ. ಮಾಸಲು ಬಿಳಿಯ ಆ ಕೋರಾ ಬಟ್ಟೆ ಕಾಲಕ್ರಮೇಣ ಕಾಫಿಯ ಬಣ್ಣಕ್ಕೇ ತಿರುಗಿರುತ್ತಿತ್ತು. ಆ ಬಟ್ಟೆಯೇ ಒಂದು ಸುವಾಸನೆ. ಇನ್ನು ಕಾಫಿಯನ್ನು ಕೇಳಬೇಕೇ? ಇನ್ನು ಮನೆಯಲ್ಲೇ ಕರೆದ ಹಸುವಿನ ಗಟ್ಟಿ ಹಾಲನ್ನು ಹಿತ್ತಾಳೆ ಪಾತ್ರೆಯಲ್ಲಿ ಕಾಯಿಸಿ, ಕೆನೆಗಟ್ಟುವಾಗ ಸಕ್ಕರೆ ಬೆರೆಸಿ, ಡಿಕಾಕ್ಷನ್ ಬಸಿದ ಪಾತ್ರೆಯೊಳಗೆ ಕುದಿವ ಹಾಲನ್ನು ಹಾಕಿ ಆ ಪಾತ್ರೆಯಿಂದ ಈ ಪಾತ್ರೆಗೆ, ಮತ್ತೆ ಈ ಪಾತ್ರೆಯಿಂದ ಆ ಪಾತ್ರೆಗೆ ಮೊಳದೆತ್ತರದಿಂದ ತೂಗಿ ಬೆರೆಸಿ, ಪಾವಿನಷ್ಟು ದೊಡ್ಡ ಲೋಟಗಳಿಗೆ ನೊರೆನೊರೆಯಾದ ಗಟ್ಟಿ ಕಾಫಿಯನ್ನು ತುಂಬಿಕೊಟ್ಟರೆ ಅದು ವಾತ್ಸಲ್ಯದ ಮಡುವೇನೋ ಎಂಬಂತಿರುತ್ತದೆ. ನಾವೆಲ್ಲ ಖುಷಿಯಿಂದ ಗುಟುಕು ಗುಟುಕಾಗಿ ಹೀರುವಾಗ ಮುಖದಲ್ಲಿ ಕಾಣುವ ಧನ್ಯತೆ... ಓಹ್!

ಕಾಫಿಯಿರದ ನಮ್ಮ ದಿನಚರಿಯನ್ನು ಊಹಿಸಲೂ ಅಸಾಧ್ಯ ಎನಿಸುವಷ್ಟರ ಮಟ್ಟಿಗೆ ನಮ್ಮನ್ನು ಕಾಫಿ ಆವರಿಸಿಕೊಂಡಿದೆ.

ADVERTISEMENT

ಪ್ರಪಂಚದ ಜನಪ್ರಿಯ ಪೇಯಗಳಲ್ಲಿ ಒಂದಾದ ಕಾಫಿ ತನ್ನ ಹುಟ್ಟಿನ ಗುಟ್ಟನ್ನು ಒಂಬತ್ತನೆಯ ಶತಮಾನದಾಚೆಗೆ ಕರೆಯೊಯ್ಯುತ್ತದೆ. ಇಥಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫಿ ಈಜಿಪ್ಟ್ ಮತ್ತು ಯುರೋಪ್‍ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತೆನ್ನುವುದು ಇತಿಹಾಸ. ಕಾಫಿ ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ತಳಿಗಳಲ್ಲಿ ಅರಾಬಿಕ ತನ್ನ ಕಹಿ ಮತ್ತು ವಾಸನೆಯಿಂದಾಗಿ ಹೆಚ್ಚು ಜನಪ್ರಿಯ. 1475ರಲ್ಲಿ ಇಸ್ತಾನ್‍ಬುಲ್ ನಗರದಲ್ಲಿ ಮೊದಲು ‘ಕಾಫಿ ಹೋಟೆಲು’ ಆರಂಭವಾಗಿದ್ದು. ಈಗ ಕಣ್ಣು ಹಾಯಿಸಿದಲ್ಲಿ ಕಾಫಿ ಶಾಪ್‍ಗಳು ಕಾಣಸಿಗುತ್ತವೆ. ಮನೆಗೆ ಬಂದ ಅತಿಥಿಗಳಿಗೆ ಮೊದಲಿಗೆ ಕಾಫಿಯನ್ನು ಕೇಳುವುದು ದಕ್ಷಿಣ ಭಾರತದ ಸಂಸ್ಕೃತಿಯ ಮತ್ತು ಆತಿಥ್ಯದ ಒಂದು ಭಾಗವೇ ಆಗಿಬಿಟ್ಟಿದೆ.

ನಾನೊಂದು ಕಾಫಿ ಕಡಾಯಿ ಅಂತ ಹೇಳಿದೆನೇ? ಇಲ್ಲ ಅಲ್ಲವಾ? ಕಾಫಿ ಕುಡಿಯದೇ ಹೋದರೆ ತಲೆನೋವು ಬರುತ್ತದೆ ಎಂದು ಬಹುತೇಕ ಕಾಫಿ ಕುಡುಕರು ಹೇಳುವುದನ್ನು ಕೇಳಿದ್ದೇವೆ. ಆದರೆ ನನಗೆ ಕಾಫಿ ಪೆಟ್ರೋಲ್ ಇದ್ದ ಹಾಗೆ. ಪೆಟ್ರೋಲ್ ಅಥವಾ ಡೀಸೆಲ್ ಇಲ್ಲದೆ ಗಾಡಿ ಓಡುವುದು ಹೇಗೆ?

ನಿತ್ಯವೂ ಎದ್ದು ದೇವರ ದರ್ಶನ ಮಾಡಿ, ನಿತ್ಯಕರ್ಮ ಮುಗಿದ ತಕ್ಷಣವೇ ಮೊದಲು ಕೈಕಾಲು ಮನಸು ಕಾಫಿಯ ಕಡೆ ದಾಂಗುಡಿ ಇಡುವುದು. ಒಂದು ಕಪ್ಪು ಯಜಮಾನರ ಕೈಲಿ, ಮತ್ತೊಂದು ನನ್ನ ಕೈಲಿ. ನಾ ಅರ್ಧ ಕಾಫಿ ಕುಡಿಯುವುದರೊಳಗೆ ಇವರ ‘ಪತ್ನಿ ಪಾಲು’ ಅರ್ಧ ಕಾಫಿ ನನ್ನ ಲೋಟಕ್ಕೆ ವರ್ಗಾವಣೆಯಾಗುತ್ತದೆ. ಅದೇನೋಪ್ಪಾ ನಾ ಕುಡಿಯುವ ಕಾಫಿ ಅರ್ಧದಷ್ಟರಲ್ಲೇ ತುಸು ಬಿಸಿ ಕಳೆದುಕೊಂಡಿರುತ್ತದೆ. ಇವರು ಅರ್ಧ ಹಾಕಿದಾಗ ಮತ್ತೆ ಬಿಸಿಯಾಗುತ್ತದೆ. ಅದೇನು ಮ್ಯಾಜಿಕ್ಕೋ ಇಪ್ಪತ್ತೇಳು ವರ್ಷವಾದರೂ ಇನ್ನೂ ಅರ್ಥವಾಗಿಲ್ಲ.

ಆಗಾಗ ಒಂದೊಂದು ‘ಕಾಫಿ ಕವಿತೆ’ ನನ್ನ ಲೇಖನಿಯಿಂದ ಜಾರುತ್ತದೆ.

ನೀ ಜತೆ ಇರದೆ ಕಾಫಿ

ತುಟಿಗೆ ರುಚಿಸದು

ನನಸಾಗದ ಕನಸುಗಳು

ಕವಿತೆ ಆಗುವುದು

ಅದಿರಲಿ, ಬೆಳಗಿನ ಕಾಫಿಯ ಮಜ ಮತ್ತಷ್ಟು ಹೆಚ್ಚುವುದು ನಮ್ಮ ಕಾಡುಹರಟೆಯಲ್ಲಿ. ಕೆಲಸಕ್ಕೆ ಹೋಗುವ ನಿನಗೆ ಬೆಳಿಗ್ಗೆ ಬೆಳಿಗ್ಗೆ ಮಾತಾಡಲು ಅಷ್ಟು ಸಮಯ ಹೇಗೆ ಸಿಗುತ್ಯೇ ಎಂದು ಅಚ್ಚರಿಯಿಂದ ನನ್ನ ಕೇಳಿದವರೂ ಇದ್ದಾರೆ. ಏಳಕ್ಕೆ ಕಾಫಿ ಲೋಟ ಹಿಡಿದು ಆಂಡಾಳಮ್ಮನ ಥರ ಚಕ್ಕಳಮಕ್ಕಳ ಹಾಕಿ ಕುಳಿತರೆ ಮುಕ್ಕಾಲು ಗಂಟೆ ಏಳುವುದಿಲ್ಲ. ಜೊತೆಗೆ ನೆಂಚಿಕೆಗೆ ಮುಂದೆ ನೆಲದ ಮೇಲೆ ಹರಡಿದ ನ್ಯೂಸ್‍ಪೇಪರ್, ಎದುರಿನಲ್ಲಿ ಟಿ.ವಿ. ನ್ಯೂಸ್. ಮತ್ತೊಂದು ಕೈಯಲ್ಲಿ ಮೊಬೈಲ್ ತಿವಿಯುತ್ತ ಅವರಿವರ ಗುಡ್ ಮಾರ್ನಿಂಗ್ ಮೆಸೇಜ್ ನೋಡ್ತಾ, ನಾನೂ ಕಳಿಸ್ತಾ ಇಡೀ ಪ್ರಪಂಚ ನನ್ನ ಸುತ್ತಲೇ ಸುತ್ತಿಕೊಂಡಂತೆ ಕುಳಿತು, ಇದರ ಜೊತೆ ಮತ್ತೆಂದೂ ಸಮಯವೇ ಸಿಕ್ಕೋಲ್ಲವೇನೋ ಎಂಬಂತೆ ಎತ್ತರದ ಸೀಟಿನಲ್ಲಿ ವಿರಾಜಮಾನರಾದ ಯಜಮಾನರ ಜೊತೆ ಒಂದು ಸಿಪ್ ಕಾಫಿ, ಒಂದು ಮಾತು, ಒಂದು ಸಿಪ್ಪು, ಒಂದು ಮಾತು. ಹೀಗೆ ಕಾಫಿ ಹೀರುವ ಸಮಯ ಜಾರುತ್ತದೆ. ಕೆಲವೊಮ್ಮೆ ಮಾತು ಜಾಸ್ತಿಯಾದರೂ ವಿರಸಕ್ಕೆ ನಾಂದಿ ಎಂಬ ಮಾತೂ ನಿಜವೇ ಆಗುವುದುಂಟು. ಯಾಕಾದರೂ ಮಾತನಾಡುತ್ತೇವೋ ಅನಿಸಿದರೂ, ನಾಯಿ ಬಾಲ ಡೊಂಕು. ಕೆಲವೊಮ್ಮೆ ಕಾಫಿಯ ಜೊತೆಗಿನ ಮಾತು ಸರಸಕ್ಕೂ ನಾಂದಿ ಹೌದಲ್ಲವೋ.

ಕಾಫಿ ಒಬ್ಬ ಮಾಂತ್ರಿಕ, ಒಂದು ಮಾಂತ್ರಿಕತೆ. ಒಂದು ಕಾಫಿ ಎಷ್ಟೋ ಬೇಸರವನ್ನು ಹೀರಿಬಿಡುತ್ತದೆ, ‘ಒಂದು ಕಪ್ ಕಾಫಿ ಕುಡಿಯೋಣವೇ?’ ಎಂಬ ಮಾತು ಸಂಬಂಧವನ್ನು ಬೆಸೆಯುತ್ತದೆ. ಕಾಫಿಯ ಆಫರ್ ನಿಂದಾಗಿ ಆರಂಭವಾಗುವ ಸ್ನೇಹ ಅನೇಕಬಾರಿ ಆಜೀವಪರ್ಯಂತ ಉಳಿಯುವ ಬಾಂಧವ್ಯದ ನಂಟಾಗಿಬಿಡುತ್ತದೆ.

‘ಬನ್ನಿ ನಮ್ಮನೆಗೆ, ಒಂದು ಕಪ್ ಕಾಫಿ ಕುಡಿಯುತ್ತ ಮಾತಾಡೋಣ’ ಅಥವಾ ಮನೆಯ ಎದುರಿಗೆ ಸಿಕ್ಕವರಿಗೆ ‘ಬನ್ನಿ ಒಳಗೆ ಕಾಫಿ ಕುಡಿದು ಹೋಗುವಿರಂತೆ’ ಎಂಬ ಮಾತುಗಳು ಸರ್ವೇ ಸಾಮಾನ್ಯ. ಒಂದೊಂದು ಹನಿ ಕಾಫಿ ಗಂಟಲೊಳಗೆ ಇಳಿಯುತ್ತಿದ್ದಂತೆ ಒಳಗಿನ ಬೆಚ್ಚನೆಯ ಭಾವಗಳು ಒಂದೊಂದಾಗಿ ಹೊರಬರತೊಡಗುತ್ತದೆ. ಭಾವನೆಗಳನ್ನು ಹೊರಹಾಕಲು ಕಾಫಿ ಒಂದು ನೆಪವಷ್ಟೇ.

ನೇರವಾಗಿ ಹೇಳಲಾಗದ ಯುವಮನಸ್ಸುಗಳ ಪಿಸುಗುಡುವ ಹೃದಯದ ಮಾತನ್ನು ಗುಟುಕರಿಸುವ ಕಾಫಿ ಕೆಲವೊಮ್ಮೆ ಬಸಿಯುತ್ತದೆ.

‘ನಲ್ಲೆ ತೋಳಿನಲಿ ನೀನು

ಹಿಡಿಯಲ್ಲಿ ಬಿಸಿ ಕಾಫಿ ಕಪ್ಪು

ಸ್ವರ್ಗಕ್ಕೆ ಒಂದೇ ಗೇಣು’

ನನ್ನನ್ನು ನಾನೊಂದು ಕಾಫಿ ಕಡಾಯಿ ಎಂದೇ ಕರೆದುಕೊಳ್ಳುತ್ತಿರುತ್ತೇನೆ. ಸುಡು ಬೇಸಿಗೆಯ ಮಟಮಟ ಮಧ್ಯಾಹ್ನವಾದರೂ ಬಿಸಿ ಕಾಫಿ ಬೇಕಾ ಎಂದಾಗಲೇ ಟೆಂಪ್ಟ್ ಆಗುವ ನಾನು ಇನ್ನು ಚಳಿಗಾಲ, ಮಳೆಗಾಲದಲ್ಲಿ ಕಾಫಿಯ ಆಫರ್ ಅನ್ನು ಕಳೆದುಕೊಳ್ಳುತ್ತೇನ್ಯೇ? ಅಸಿಡಿಟಿ ಜಾಸ್ತಿ ಆದಾಗ ಇನ್ನು ಮುಂದೆ ಹೆಚ್ಚು ಕಾಫಿ ಕುಡಿಯಬಾರದು ಎಂದು ಶಪಥ ಮಾಡಿಕೊಂಡಿರುತ್ತೇನೆ. ಪ್ರಿಯತಮೆಯ ಮೇಲೆ ಮುನಿಸಿಕೊಂಡ ಪ್ರಿಯಕರ ಆಕೆಯ ಆದ್ರ್ರ ಮತ್ತು ನಗು ಮುಖ ನೋಡಿದಾಗ ಹೇಗೆ ಮುನಿಸು ಮರೆತು ರಮಿಸುತ್ತಾನೋ, ಹಾಗೆ ಕಾಫಿಯನ್ನು ನೋಡಿದಾಗ ಶಪಥವೆಲ್ಲ ಮರೆತು ಅರಣ್ಯಕಾಂಡ ಮುಗಿದು ಸುಂದರಕಾಂಡ ಆರಂಭವಾಗುತ್ತದೆ. ಮುಗಿಲ ತುಂಬ ಮೇಘರಾಜ ಗರಿಗೆದರುತ್ತ ಇನ್ನೇನು ಧರೆಯನಪ್ಪುವ ಸೂಚನೆಯೆಂಬಂತೆ ತುಂತುರು ಮಳೆ ಬೀಳುವುದೂ, ಫಿಲ್ಟರ್ ಇಂದ ಡಿಕಾಕ್ಷನ್ ಒಂದೊಂದೇ ಹನಿ ಬೀಳುವುದೂ ನನಗೆ ಒಂದೇ ಹರ್ಷ ತರುತ್ತದೆ.

ನಿನ್ನ ನಿರೀಕ್ಷೆಯ ನಡೆಮುಡಿ

ಕಣ್ಣ ತುಂಬೆಲ್ಲ

ನಿನ್ನ ಬರವಿಗೆ ಕಾದು ಕಾದು

ಕಾಫಿ ಬಟ್ಟಲು ಕಾದ ಹೆಂಚು

ಬರುವಿಯೋ ಬಾರದಿರೆಯೋ

ಕಣ್ಣಂಚು ತೇವ ಆಗಾಗ

ನಡುನಡುವೆ ನಡುಗಿ ಬಟ್ಟಲು

ತುಳುಕುತಿದೆ ಕಾಫಿ ಹನಿಹನಿ

ನೀ ಬರದೆ ಇನಿಯ

ಜೊತೆಯಿರದೆ ಸನಿಹ

ಕಾಫಿಯದು

ಸವಿಯಾಗಲಹುದೇ?

ಕಾಫಿ ಒಂದು ಕಾಂತಾ ಸಂಹಿತೆಯಂತೆ. ಕಾಫಿ ಕೊಟ್ಟು ಮಧುರವಾಗಿ ಹೇಳುವುದು, ಕಾಫಿ ಹೀರುತ್ತಾ ನಿಧಾನವಾಗಿ ಕೇಳುವುದು. ಒಂದು ಲೆಸ್ಸು, ಒಂದು ಪ್ಲಸ್ಸು... ಎನ್ನುವ ಶಬ್ದಗಳಿಗೂ ಏನೋ ಒಂದು ಮಧುರತೆ ಇದೆ.

ಕಾಫಿ ಕೇವಲ ಕಾಫಿ(ಪೇಯ)ಯಾಗಷ್ಟೇ ಉಳಿದಿಲ್ಲ. ವೈವಿಧ್ಯತೆಯಿಂದ ದೊಡ್ಡಸ್ತಿಕೆ ಅಳೆವ ಸಾಧನವಾಗಿಯೂ ಮಾರ್ಪಾಟಾಗಿದೆ. ಕೆಲವು ಶಾಪ್‍ಗಳಲ್ಲಿ ಒಂದು ಕಪ್ ಕಾಫಿಗೆ ನೂರಾರು ರೂಪಾಯಿಗಳು. ಆಸನ, ಶಾಪಿನ ಸೊಬಗು, ಲೈಟಿಂಗ್, ಸರ್ವ್ ಮಾಡುವವರ ಡ್ರೆಸ್ಸಿಂಗ್, ಕಾಫಿ ಕಪ್ಪಿನ ಗುಣಮಟ್ಟ, ಕೊಡುವ ಕಾಫಿಯ ಮೇಲೆ ವಿವಿಧ ರೂಪಾಲಂಕಾರ ಹೊಂದಿದ ಕ್ರೀಮ್(ನೊರೆ), ಇದರ ಜೊತೆ ಅಲ್ಲಿ ಕಾಫಿ ಕುಡಿಯುವವರ ಗತ್ತು ಗೈರತ್ತು.... ಎಲ್ಲವೂ ಸೇರಿ ಅದಕ್ಕೆ ಹೊಸತೊಂದು ಆಯಾಮವನ್ನೇ ಸೃಷ್ಟಿಮಾಡಿಬಿಡುತ್ತದೆ.

ಕಾಫಿ ಶಾಪ್ ಗಳು ಕೇವಲ ಕಾಫಿ ಕೊಡುವ, ಕುಡಿಯುವ ಜಾಗಗಳಷ್ಟೇ ಆಗಿ ಉಳಿದಿಲ್ಲ. ತನ್ನತನವ ವಿಸ್ತರಿಸಿ ವ್ಯಾಪಾರ ವಹಿವಾಟಿನ ಒಪ್ಪಂದದ ಸ್ಥಳಗಳಾಗಿ, ಪ್ರೇಮಿಗಳ ಸರಸದ ತಾಣಗಳಾಗಿ, ಪುರುಸೊತ್ತಿರುವವರ ಹರಟೆಕಟ್ಟೆಯಾಗಿ, ಕಷ್ಟ ಸುಖಗಳ ಹಂಚಿಕೆಯ ತಾವುಗಳಾಗಿವೆ.

‘A lot can happen over coffee’ ಎನ್ನುವ ಕಾಫಿ ಡೇ ಕೆಫೆಯವರ ಸ್ಲೋಗನ್ ಬಹುತೇಕರ ಮನದ ಮಾತೂ, ಅನುಭವವೂ.

ಇತ್ತೀಚೆಗೆ ತಣ್ಣನೆಯ (ಕೋಲ್ಡ್ ಕಾಫಿ) ಕಾಫಿಯನ್ನೂ ಕೆಲವರು ಇಷ್ಟಪಟ್ಟು ಕುಡಿಯುತ್ತಾರೆ. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಚಹಾ ಕೂಟವನ್ನು ಆಯೋಜಿಸುವುದು ವ್ಯಾಪಾರದ ಅಭಿವೃದ್ಧಿಯ ದೃಷ್ಟಿಯಿಂದಲೇ. ಹೆಸರಿಗೆ ಚಹಾ ಕೂಟವಾದರೂ ಅದು ಕಾಫಿ ಮತ್ತು ಚಹಾ ಕೂಟವೇ. ತಣ್ಣನೆಯ ಕಾಫಿ ಅಲ್ಲದೆ ಕಪ್ಪು ಕಾಫಿ ಕೂಡ ಬಹಳ ಪ್ರಸಿದ್ಧ.

ನನಗೆ ಹೋಮಿಯೋಪತಿ ವೈದ್ಯರ ಹತ್ತಿರ ಹೋಗುವುದೆಂದರೆ ಅಲರ್ಜಿ. ಅದಕ್ಕೆ ಕಾರಣವನ್ನೂ ಗುಟ್ಟಾಗಿ ನಿಮಗೆ ಹೇಳಿಬಿಡುತ್ತೇನೆ. ಅವರ ಔಷಧಿ ತೆಗೆದುಕೊಳ್ಳಬೇಕಾದರೆ ಕಾಫಿ, ಟೀ ಕುಡಿಯಬಾರದಂತೆ. ಅವರ ಔಷಧಿ ತೆಗೆದುಕೊಂಡರೆ ತಾನೇ ಕಾಫಿ ಟೀ ಕುಡಿಯಬಾರದು; ನಾನು ಅವರ ಔಷಧವನ್ನೇ ಕುಡಿಯಲ್ಲ ಅಂತ ನನಗೆ ನಾನೇ ಒಳಗೆ ಹೇಳಿಕೊಂಡು ಕಾಫಿಯ ಪರ ವಕೀಲಳಂತೆ ಆಡುತ್ತೇನೆ.

ಎಂಡ್ಕುಡುಕರ ಬಗ್ಗೆ ನನಗೆ ಸಹಾನುಭೂತಿ ಇದೆ. ಯಾಕಂದ್ರೆ ನನಗೆ ಕಾಫಿಯನ್ನೇ ಬಿಡಲಾಗುತ್ತಿಲ್ಲ. ಅಂಥಾದ್ರಲ್ಲಿ......

ಅದ್ಸರಿ ನಾ ಕಾಫಿಯನ್ನು ಯಾಕೆ ಬಿಡಬೇಕಾಗಿ ಬರುತ್ತೆ ಹೇಳಿ? ಇದೆ..... ಅದು ಚಾತುರ್ಮಾಸದಲ್ಲಿ. ಚಾತುರ್ಮಾಸದಲ್ಲಿ ನಾಲ್ಕು ಭಾಗ. ಅದರಲ್ಲಿ ಕ್ಷೀರವ್ರತ ಎನ್ನುವ ತಿಂಗಳು ನನಗೆ ನಿಜಕ್ಕೂ ವನವಾಸ. ಕಾಫಿ/ಟೀ ಕುಡಿಯುವಂತಿಲ್ಲ. ಊಟವನ್ನಾದರೂ ಬಿಡಬಹುದು. ಹಾಲು/ಕಾಫಿಯನ್ನು ಬಿಟ್ಟಿರುವುದು ಹೇಗೆ? ವಿರಹ ವೇದನೆಯೆನ್ನುವುದು ಬಹು ಚೆನ್ನಾಗಿ ಅರ್ಥವಾಗುವುದು ಕ್ಷೀರವ್ರತದಲ್ಲಿಯೇ. ಕಾಫಿ ಲೋಟ, ಆ ನೊರೆ ನಾನಿಲ್ಲದೆ ಮಂಕಾಗುತ್ತದೆ.

ನನ್ನ ಹಳೆಯ ಶಾಖೆಯಲ್ಲಿ ಕಾಫಿ ಟೀಂ ಒಂದಿತ್ತು. ಸುಚೇತಾ, ಚೆಲುವರಾಜು, ಮಂಜುಳಾ ಮತ್ತು ನಾನು ಹುಚ್ಚಿಗೆ ಬಿದ್ದವರಂತೆ ಕಾಫಿ ತರಿಸುವುದು, ಕುಡಿಯುವುದು... ಮೂಲೆಯಲ್ಲಿ ಒಂದು ನಂದಿನಿ ಕಾಫಿ ಪಾರ್ಲರ್ ಇತ್ತು. ತುಂಬ ಮಸ್ತ್ ಕಾಫಿ ಮಾಡುತ್ತಿದ್ದರು. ಎರಡು ಬಾರಿ ಅಲ್ಲಿನ ಹುಡುಗರೇ ಇಡೀ ಸಿಬ್ಬಂದಿಗೆ ಕಾಫಿ ತಂದು ಕೊಡುತ್ತಿದ್ದರು. ನಮಗೆ ಬೇಕೆನಿಸಿದಾಗ ಎಕ್ಸ್‌ಟ್ರಾ ಕಾಫಿ ತರಲು ಒಂದು ಸಲ ಸತೀಶನ್ನ ಕಳಿಸುವುದು, ಇನ್ನೊಂದು ಸಲ ಶಿವಳ್ಳಿಯನ್ನು ಕಳಿಸುವುದು, ಮತ್ತೊಂದು ಸಲ ಸ್ವೀಪರ್ ಕಮ್ ಪ್ಯೂನ್ ಶಿವಮ್ಮನನ್ನು ಕಳಿಸುವುದು. ಅದೆಷ್ಟರಮಟ್ಟಿಗೆ ಫೇಮಸ್ ಆಗಿತ್ತೆಂದರೆ ಬ್ಯಾಂಕಿನ ಕೆಲಸಕ್ಕೆಂದು ‘ಶಿವಮ್ಮಾ’ ಅಂತ ಕರೆದರೂ ಆಕೆ ‘ಕಲೆ ಬಂತಾ’ ಅನ್ನುತ್ತಿದ್ದರು. ಮೊದಮೊದಲು ಆ ಪದ ಅರ್ಥ ಆಗದೆ, ಆಕೆ ಏನೋ ಮಾತಾಡಿಕೊಳ್ಳುತ್ತಿದ್ದರೆ ಎಂದು ‘ಕಾಫಿ ತನ್ನೀಮ್ಮಾ’ ಎಂದು ದುಡ್ಡುಕೊಟ್ಟು ಕಳಿಸುತ್ತಿದ್ದೆ. ಆಮೇಲೆಂದೋ ತಿಳಿಯಿತು ಕಲೆ ಎಂಬ ಪದಕ್ಕೆ ಆಕೆಯ ಅರ್ಥದಲ್ಲಿ ಹುಚ್ಚು ಎಂದು. ಒಂದು ಕ್ಷಣ ಅವಾಕ್ಕಾದೆ. ಆಮೇಲೆ ನಿಜಾ ತಾನೇ ಎಂದು ಸುಮ್ಮನೂ ಆದೆ.

ಹುಚ್ಚು ಎಂದಾಕ್ಷಣ ನೆನಪಿಗೆ ಬಂತು. ಕೆಲವು ಹೆಂಗಸರಿಗೆ ಅಡುಗೆಮನೆಯಲ್ಲಿ ಎಣ್ಣೆಯಲ್ಲಿ ಸಾಸಿವೆ ಚಟಪಟ ಸಿಡಿಯುವಾಗ ಸಂಗೀತದ ಸ್ವರಗಳನ್ನು ಆಲಿಸಿದಷ್ಟು ಆನಂದ ಲಭಿಸುತ್ತದೆಯಂತೆ. ನನಗೇನೋ ಡಿಕಾಕ್ಷನ್ನು ಫಿಲ್ಟರಿನಿಂದ ಅಥವಾ ಬಟ್ಟೆಯಿಂದ ಪಾತ್ರೆಗೆ ಇಳಿಯುವಾಗ ಮಾಡುವ ಪಟ್-ಟಪ್ ಸದ್ದು, ಕಾಫಿ ಬೆರೆಸಲು ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಅಳೆದು ಸುರಿದು ಮಾಡುವಾಗ ಸ್ಪುರಿಸುವ ಶಬ್ದ, ಸೊರ್ರ್ ಎಂದು ಕಾಫಿ ಹೀರುವಾಗಿನ ತನ್ಮಯತೆಯ ಸ್ವರ ಎಲ್ಲವೂ ಸಂಗೀತದ ವಿವಿಧ ಮಜಲುಗಳಂತೆ ಕೇಳುತ್ತದೆ, ಮೈಮರೆಸುತ್ತದೆ.

ಈಗೆಲ್ಲ ಡಿಕಾಕ್ಷನ್ ಕೂಡ ಹಾಕುವ ಪ್ರಮೇಯ ಇರದಂತೆ ಇನ್‍ಸ್ಟಂಟ್ ಕಾಫಿಗಳು ಬಂದಿವೆ. ಹಾಲು ಸಕ್ಕರೆಯ ಜೊತೆ ಆ ಪುಡಿಯನ್ನು ಬೆರೆಸಿದರೆ ಆಯಿತು. ಒತ್ತು ಶ್ಯಾವಿಗೆಯ ರುಚಿಗೂ, ಇನ್‍ಸ್ಟಂಟ್ ಶ್ಯಾವಿಗೆಯ ರುಚಿಗೂ ಇರುವ ಅಂತರವೇ ಅನ್ನಿ.

ನಮ್ಮ ಬೀಗರು ಆಗಾಗ ಹೇಳುತ್ತಿರುತ್ತಾರೆ ಅವರ ತವರುಮನೆಯ ಕಾಫಿ ಒಲೆ ನಂದಾದೀಪ ಎಂದು. ಅದರರ್ಥ ಅಷ್ಟು ಸಾರ್ತಿ ಕಾಫಿ ಬೆರೆಸಿ ಬಗ್ಗಿಸಿ ಹೀರುವುದೆಂದೂ, ಬಂದಬಂದವರಿಗೆ ಉಪಚಾರ ಮಾಡುವುದೆಂದೂ ಹೌದು. ಅವರ ತಾಯಿ ಬದುಕಿದ್ದಾಗ ಕಾಫಿ ಪಾತ್ರೆ ಸದಾ ಕರೆಗಟ್ಟಿರುವಂತೆಯೇ ಇರುತ್ತಿತ್ತಂತೆ ಏಕೆಂದರೆ ಸದಾ ಒಲೆಯ ಜೊತೆ ಅದರ ನಂಟು. ಮಾತ್ರವಲ್ಲ ಮನೆಗೆ ಬಂದವರಿಗೆ ಇಲ್ಲ ಎನ್ನದೆ ಉಪಚರಿಸುತ್ತಿದ್ದ ಅದು ಅಕ್ಷಯಪಾತ್ರೆಗಿಂತ ಏನೇನು ಕಮ್ಮಿಯಿರಲಿಲ್ಲವಂತೆ. ಕಾಫಿ ಎಂದರೆ ಸಾಮಾನ್ಯವೇ?

ನನಗೆ ಕಾಫಿ ಎಂದರೆ ಇಷ್ಟ ಎಂದು ತಿಳಿದ ಅನೇಕರು ಅವರ ಮನೆಗೆ ಹೋದಾಗ ಕಾಫಿ ಕುಡಿಯಲು ಬಲವಂತ ಮಾಡುವುದೂ ಇದೆ. ಇಷ್ಟ ಎಂದು ಎಷ್ಟು ಬಾರಿ ಕುಡಿಯಲಾದೀತು. (ವಯಸ್ಸಾಗುತ್ತಾ ಇದೆ ನೋಡಿ. ಕುಡಿಯುವುದನ್ನು ಕಡಿಮೆ ಮಾಡಿದ್ದೀನಿ.....) ಕೆಲವರ ಮನೆಯ ಕಾಫಿ ಆತಿಥ್ಯವನ್ನು ನಿಮಗೆ ನಾ ಹೇಳಲೇಬೇಕು.. ನನ್ನೆದುರಿಗೇ ಹಾಲಿನ ಪ್ಯಾಕೆಟ್ ಓಪನ್ ಮಾಡಿ ಅದಕ್ಕೆ ಒಂದು ಲೋಟ ನೀರು ಹಾಕಿ (ಪ್ಯಾಕೆಟ್ ಹಾಲು ಅಷ್ಟೇನೂ ಗಟ್ಟಿ ಇರಲ್ಲ. ಆದರೂ ಅದಕ್ಕೂ ನೀರು) ಒಲೆಯಮೇಲಿಟ್ಟು ಆ ಕುದಿವ ಹಾಲಿಗೇ ಕಾಫಿಪುಡಿ ಹಾಕಿ ಸಕ್ಕರೆಯನ್ನೂ ಸುರಿದು, ಟೀ ಸೋಸುವ ಸಾಧನದಲ್ಲಿ ಸೋಸಿ ದೊಡ್ಡ ಲೋಟದ ತುಂಬ ತಂದು ಕೊಡುತ್ತಾರೆ. ದೇವದೇವನೇ ನನ್ನ ಕಾಪಾಡಬೇಕು. ಡಿಕಾಕ್ಷನ್ ಹಾಕಿ ಮಾಡುವ ಕಾಫಿಗೂ, ಈ ರೀತಿ ಮಾಡಿ ಕಾಫಿ ಎಂಬ ಹೆಸರಿನಲ್ಲಿ ಕೊಡುವ ಪೇಯಕ್ಕೂ ಇರುವ ವ್ಯತ್ಯಾಸ ಅವರಿಗೆ ಹೇಗೆ ತಾನೇ ಗೊತ್ತಾಗಬೇಕು? ಇನ್ನು ಕೆಲವರ ಮನೆಯಲ್ಲಿ ಸೋಸುವ ಬಟ್ಟೆಯನ್ನು ಎಷ್ಟು ತಿಂಗಳಿಂದ ಒಗೆದಿರುವುದಿಲ್ಲವೋ, ಆ ಚುಂಗುವಾಸನೆಗೆ ಒಳಗಿನದು ಅವರ ಮನೆಯಲ್ಲೇ ಹೊರಗೆ ಬರದಿದ್ದರೆ ಸಾಕು ಎನ್ನುವಷ್ಟರಮಟ್ಟಿಗೆ ಓಕರಿಕೆ ಹುಟ್ಟಿಸುತ್ತದೆ. ಈಚೆಗೆ ನಾನೂ ಬುದ್ಧಿವಂತಳಾಗುತ್ತಿದ್ದೇನೆ. ಹಾಗೆ ಮಾಡುವವರ ಮನೆಯಲ್ಲಿ ಏನೋ ಒಂದು ಸಬೂಬು ಹೇಳಿ ಕಾಫಿಯನ್ನು ತಪ್ಪಿಸಿಕೊಳ್ಳುವುದು, ಸಜೆಯನ್ನು ತಪ್ಪಿಸಿಕೊಂಡಂತೆಯೇ.

ನಮ್ಮಂಥ ಕಾಫಿ ಪ್ರಿಯರು ಕಾಪಿ ಚಟದ ಪರ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಒಂದು ಸದವಕಾಶ ಸಿಕ್ಕೇಬಿಟ್ಟಿತು. ಕಾಫಿ ಆರಾಮಕ್ಕಾಗಿ ಮಾತ್ರವಲ್ಲ ಆರೋಗ್ಯಕ್ಕಾಗಿ ಕೂಡ ಅಂತ ವಾಟ್ಸಪ್ಪಿನಲ್ಲಿ ಇತ್ತೀಚೆಗೆ ಹರಿದಾಡುತ್ತಿದ್ದ ಒಂದು ಸಂಶೋಧನಾತ್ಮಕ ಸಂದೇಶ ಓದಿದೆ.

ಡಾ. ಲೀ ವೆನ್ಲಿಯಾಂಗ್ ಕರೋನಾ ವೈರಸ್ ಬಗ್ಗೆ ಹೇಳುತ್ತಾ ಮೀಥೈಲ್ಕ್ಸಾಂಥೈನ್, ಥಿಯೋಬ್ರೊಮೈನ್ ಮತ್ತು ಥಿಯೋಫಿಲ್ಲೈನ್ ಎಂಬ ರಾಸಾಯನಿಕಗಳು ಈ ವೈರಸ್ ವಿರುದ್ಧ ಮನುಷ್ಯನಲ್ಲಿ ಸರಾಸರಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿವಾರಿಸಬಲ್ಲ ಸಂಯುಕ್ತಗಲನ್ನು ವೃದ್ಧಿಸಲು ಉತ್ತೇಜಿಸುತ್ತದೆ. ಆವು ದಿನನಿತ್ಯ ಬಳಸಿವ ಕಾಫಿ ಈ ಎಲ್ಲ ರಾಸಾಯನಿಕಗಳನ್ನು ಈಗಾಗಲೇ ಹೊಂದಿದೆ. ಚೀನಾದಲ್ಲಿನ ಆಸ್ಪತ್ರೆಯ ಸಿಬ್ಬಂದಿ ದಿನಕ್ಕೆ ಮೂರು ಬಾರಿ ರೋಗಿಗಳಿಗೆ ಕಾಫಿ ಸೇವೆ ನೀಡಲು ಪ್ರಾರಂಭಿಸಿದ ಪರಿಣಾಮ ಸಮುದಾಯ ಸೋಂಕು ಪ್ರಸರಣ ಬಹುತೇಕ ನಿಂತುಹೋಗಿದೆ ಎಂಬುದನ್ನು ಓದಿ ಆಹಾ ಸಂದೇಶವೇ... ಕಾಫಿಗೆ ಜೈ ಎಂದೆ.

ಬರೀ ಕಾಫಿಯ ಬಗ್ಗೆ ಹೇಳಿದರೆ ಸಾಕೇ. ಮನುಷ್ಯನಿಗೆ ಗುಣ ಬಹಳ ಮುಖ್ಯ ನಿಜ. ಆದರೆ ಕಣ್ಸೆಳೆಯುವುದು ರೂಪವೇ. ಹಾಗಾಗಿ ಕಾಫಿಗಿರುವ ಮಾನ್ಯತೆ ಕಾಫಿ ಕಪ್ಪಿಗೂ ಇದೆ. ಹಿಂದೆಲ್ಲ ಹಿತ್ತಾಳೆಯ ಲೋಟದಲ್ಲಿ ಕಾಫಿ ಕೊಡುವ ಪದ್ಧತಿ ಇತ್ತು. ಕ್ರಮೇಣ ಸ್ಟೀಲ್, ಈಗ ಉಪಯೋಗಿಸಿ ಎಸೆವ ಲೋಟಗಳೂ ಬಂದಿವೆ. ಇಷ್ಟರೊಟ್ಟಿಗೆ ಚೈನಾದ ಪ್ರಭಾವದಿಂದ ಈ ಅರವತ್ತೆಪ್ಪತ್ತು ವರ್ಷಗಳಲ್ಲಿ ಪಿಂಗಾಣಿಯ ಕಪ್ಪುಗಳು ತನ್ನ ಪ್ರಾಬಲ್ಯ ಸಾಧಿಸಿವೆ. ಬಗೆಬಗೆಯ ಕಪ್ಪುಗಳು ಕಣ್ಣನ್ನು ಸೆಳೆವ ಹಾಗೆ, ಕಣ್ಣು ಕುಕ್ಕುವ ಹಾಗೂ ಇರುತ್ತವೆ. ಆ ದೇಶದಿಂದ ತಂದ ಕಪ್ಪಿದು, ಈ ದೇಶದ ಸಾಸರ್ ಇದು ಎಂದು ತೋರಿಸಿ ಬೀಗುವವರೂ ಇದ್ದಾರೆ. ಕಾಫಿ ಕಪ್ಪುಗಳನ್ನು (ಅವರವರ ಅಂತಸ್ತಿಗೆ ತಕ್ಕಂತೆ ಬೆಲೆ ಇರುವ) ಉಡುಗೊರೆಯಾಗಿ ನೀಡುವುದುಂಟು. ಕಾಫಿ ಕುಡಿಯುವುದೊಂದು ಹಿತವಾದರೆ, ಕಾಫಿ ಕಪ್ಪುಗಳ ಅಂದ ನೋಡುವುದೇ ಮತ್ತೊಂದು ಬಗೆ.

ಹಿರೆಮಗಳೂರು ಕಣ್ಣನ್ ಅವರು ರಚಿಸಿರುವ ‘ಕಾಫಿ ದೇವನೆ..’ ಕವಿತೆಯನ್ನು ಓದದಿದ್ದರೆ ಕಾಫಿ ಪ್ರಿಯರಿಗೆ ಅನ್ಯಾಯವೆಸಗಿದಂತೆಯೇ ಸರಿ.

ಕಾಫಿ ದೇವನೆ ದೇಹ ಪಾಲನೆ

ತೇ ನಮೋಸ್ತು ನಮೋಸ್ತು ತೇ

ನೀನು ಬಾರದೆ ಬೆಳಗು ಜಾರದೆ

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಹೀರಿ ನಿನ್ನನು ಬೆಳಕ ಕಾಣುವೆ

ತೇ ನಮೋಸ್ತು ನಮೋಸ್ತು ತೇ

ಮುಗಿಸಿ ಬೆಳಗಿನ ಕೆಲಸ ನಡೆಯುವೆ

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ದಿನದ ಕಾಯಕ ಕಾಫಿ ಮಾಯಕ

ತೇ ನಮೋಸ್ತು ನಮೋಸ್ತು ತೇ

ಕುಡಿವ ನಡುವಿನ ಬಿಡುವೆ ಕೆಲಸವೆ

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಉಣುವ ಮೊದಲಲಿ ಉಂಡ ನಂತರ

ತೇ ನಮೋಸ್ತು ನಮೋಸ್ತು ತೇ

ಕಾಫಿ ಕರದಲಿ ಹಗುರ ಶಿರದಲಿ

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಸಂಜೆ ಪಡುವಣ ನೋಟ ಕುಡಿದೆನ

ತೇ ನಮೋಸ್ತು ನಮೋಸ್ತು ತೇ

ಕಾಫಿ ಇರದೆಲೆ ನೋಟ ರುಚಿಸದು

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಮುಗಿಸೆ ಕಾಯಕ ಮನೆಯೆ ಚುಂಬಕ

ತೇ ನಮೋಸ್ತು ನಮೋಸ್ತು ತೇ

ಕಾಫಿ ಹಿಡಿವಳ ಕೋಪ ಮೋಹಕ

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಜಗಳ ಕದನಕು ಶಾಂತಿ ಮಂತ್ರವು

ತೇ ನಮೋಸ್ತು ನಮೋಸ್ತು ತೇ

ತಲೆಯ ನೋವಿಗು ಕಾಫಿ ತಂತ್ರವು

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಕಾಫಿ ಪ್ರಿಯರ ಕಾಫಿ ಪದವಿದು

ತೇ ನಮೋಸ್ತು ನಮೋಸ್ತು ತೇ

ನೀತಿ ಗೀತಿಯ ಪಾಠ ಕೇಳದು

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಬನ್ನಿ ಕುಡಿಯುವ ಕಾಫಿ ಪೇಯವ

ತೇ ನಮೋಸ್ತು ನಮೋಸ್ತು ತೇ

ಕುಡಿಯ ಬರದವ ಪಾಪಿ ಎನ್ನುವ

ತೇ ನಮೋಸ್ತು ನಮೋಸ್ತು ತೇ || ಕಾಫಿ ||

ದೇವಸ್ಥಾನಗಳು ಆಧ್ಯಾತ್ಮದ ಮೊದಲ ಮೆಟ್ಟಿಲು. ಹಾಗೆಯೇ ಕಾಫಿ ಉಪಚಾರದ ಮೊದಲ ಮೆಟ್ಟಿಲು ಎನ್ನಲೇನಡ್ಡಿಯಿಲ್ಲ ನನಗೆ.... ಕಾಫಿಧ್ಯಾನವೂ ಭಗವಂತನನ್ನೇ ತಲುಪುತ್ತದೆ ಎಂದು ನಾ ವಾದಿಸಿದರೆ ಕಾಫಿ ಕುಡಿಯದವರು ನನ್ನನ್ನು ಥಳಿಸದಿದ್ದಾರೆಯೇ? ಕಾಫಿ ದೇವನೇ ದೇಹ ಪಾಲನೆ ತೇ ನಮೋಸ್ತು ತೇ ನಮೋಸ್ತುತೇ...

ಓದಿ ತಲೆನೋವು ಬಂತೇ? ಬನ್ನಿ ಡೋಸ್ ಕಾಫಿ ಕುಡಿಯೋಣ... ಎಲ್ಲ ಸರಿಯಾಗುತ್ತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.