ADVERTISEMENT

ಅಂಬೇಡ್ಕರ್‌ ಜನ್ಮದಿನ– ಭೀಮದರ್ಶನ: ಸಂವಿಧಾನ ಶಿಲ್ಪಿ ಕುರಿತ ಲೇಖನಗಳು

ಪ್ರಜಾವಾಣಿ ವಿಶೇಷ
Published 13 ಏಪ್ರಿಲ್ 2022, 19:45 IST
Last Updated 13 ಏಪ್ರಿಲ್ 2022, 19:45 IST
ಅಂಬೇಡ್ಕರ್‌
ಅಂಬೇಡ್ಕರ್‌   

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಚಿಂತನೆಗಳು ಸದಾ ಪ್ರೇರಣಾದಾಯಿ. ಕಠೋರ ಜಾತಿ ವ್ಯವಸ್ಥೆಯಡಿ ಸಿಲುಕಿದ್ದ ಶೋಷಿತರಿಗೆ ಹೊಸ ಬೆಳಕನ್ನು ತೋರಿಸಿದ ಅವರು ಅಮರಚೇತನ. ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನೇ ಬದಲಾಯಿಸುವ, ಸಾಮರಸ್ಯ ಕದಡುವ ಮಾತುಗಳು ಏರುಮುಖವಾಗುತ್ತಿವೆ. ಈ ಹೊತ್ತಿನಲ್ಲಿ ಅವರ ಆಲೋಚನೆಯಲ್ಲಿರುವ ಸರ್ವಹಿತದ ಭಾವಕೋಶವನ್ನು, ಸಹಿಷ್ಣುತೆ, ವಾತ್ಸಲ್ಯ, ಮಮತೆಯ ನುಡಿಯರಿವನ್ನು ಪರಿಚಯಿಸುವ ಯತ್ನ ಇಲ್ಲಿದೆ...

*************

ದಿಗಿಲುತಂದಿದೆ ಮುಬಾರಕ್‌ನ ಪ್ರಶ್ನೆ

ADVERTISEMENT

ಮೊನ್ನೆ ಶಾಲೆಗೆ ಬೇಸಿಗೆ ರಜೆ ಕೊಡುವಾಗ, ‘ಏಪ್ರಿಲ್ ಹದಿನಾಲ್ಕನೇ ತಾರೀಖು ಅಂಬೇಡ್ಕರ್ ಜಯಂತಿ ಇರೋದ್ರಿಂದ ನೀವೆಲ್ಲ ರಜೆ ಇದ್ರುನೆ ಬರಬೇಕು’ ಎಂದು ಹೇಳಿದೆ. ತಕ್ಷಣ ಏಳನೇ ಕ್ಲಾಸ್ ಮುಬಾರಕ್ ‘ಸರ್ ಅವತ್ತೆ ನನ್ನ ಬರ್ತ್‌ಡೇನು’ ಅಂದ. ‘ಹೊ ನೋಡೊ, ಎಂಥ ದಿನ ಹುಟ್ಟಿದಿಯ. ನೀನು ಅವರಂಗೆ ಓದಿ ಗ್ರೇಟ್ ಆಗ್ಬೇಕು’ ಅಂದೆ. ಆ ಮಾತು ಕೇಳಿ ಅವನ ಮುಖದಲ್ಲಿ ಉತ್ಸಾಹ ಪುಟಿದಂತಾಯಿತು. ಹಿಂದೊಮ್ಮೆ ಮೂಲಭೂತ ಹಕ್ಕುಗಳ ಪಾಠ ಮಾಡುವಾಗ ಇದೇ ಮುಬಾರಕ್‍ನ ಉದಾಹರಣೆ ಕೊಟ್ಟುಕೊಂಡು, ‘ಇವರ ತಾತ ಕಡ್ಳೆಕಾಯಿ ವ್ಯಾಪಾರ ಮಾಡುತ್ತೆ, ಇಲ್ಲಿ ಸಾಕಾತು ಅಂತ ಮುಂದೊಂದು ದಿನ ಡೆಲ್ಲಿಗೋದ್ರೆ ಅಲ್ಲು ಕೂಡ ಇದೆ ವ್ಯಾಪಾರ ಮಾಡಬಹುದು. ನೀನು ಯಾಕಯ್ಯ ಇಲ್ಲಿಗೆ ಬಂದಿದಿಯ ಅಂತ ಯಾರೂ ಕೇಳಂಗಿಲ್ಲ’ ಎಂದು ಹೇಳಿದ್ದೆ. ಭಾರತದ ಯಾವುದೇ ಭಾಗದಲ್ಲಿ ವಾಸ ಮಾಡುವ ಮತ್ತು ನೆಲಸುವ ಹಕ್ಕನ್ನ ನಮ್ಮ ಸಂವಿಧಾನ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ನಮಗೆ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದೆ. ಈ ಮಾತುಗಳನ್ನು ಕಣ್ಣರಳಿಸಿಕೊಂಡು ಎದೆಗಿಳಿಸಿಕೊಂಡಿದ್ದ.

ವಿವಿಧತೆಯಲ್ಲಿ ಏಕತೆ ಪಾಠ ಮಾಡುವಾಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭಾವೈಕ್ಯವನ್ನು ಮೈದುಂಬಿಕೊಂಡಂತೆ ನಮ್ಮದು ಬಹುತ್ವದ ಭಾರತ, ಇಲ್ಲಿ ಬಹು ಭಾಷೆಗಳಿವೆ. ಆಚರಣೆಗಳು, ಸಂಪ್ರದಾಯಗಳು, ಉಡುಗೆ ತೊಡುಗೆ, ಆಹಾರ ಎಲ್ಲವೂ ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿವೆ. ಈ ಎಲ್ಲಾ ವೈವಿಧ್ಯದ ನಡುವೆ ನಾವೆಲ್ಲ ಭಾರತೀಯರು ಎಂಬ ಏಕತಾಭಾವ ನಮ್ಮದಾಗಿದೆ. ಇತರ ದೇಶಗಳಂತೆ ಯಾವೊಂದು ಧರ್ಮವನ್ನೂ ನಮ್ಮ ಸಂವಿಧಾನ ಅಧಿಕೃತಗೊಳಿಸಿಕೊಂಡಿಲ್ಲ. ಸರ್ವಧರ್ಮ ಸಮಭಾವ ಮತ್ತು ಸಹಬಾಳ್ವೆ ನಮ್ಮ ದೇಶದ ಹೆಮ್ಮೆ ಎಂದು ಹೇಳಿದ್ದೆ.

ಬರೀ ಹೇಳಿದರೆ ಸಾಲದು ನಮ್ಮ ಬೋಧನೆ ಚಟುವಟಿಕಾಧಾರಿತ ಆಗಿದ್ದರೆ ಕಲಿಕೆ ಶಾಶ್ವತವಾಗಿರುತ್ತೆ ಎಂದು ಶಿಕ್ಷಣ ಇಲಾಖೆ ವಿನೂತನ ಪ್ರಯೋಗಗಳನ್ನುತಂದಿದೆ.ಮಕ್ಕಳಿಗೆ ತಮ್ಮ ಮನೆಯಲ್ಲಿ ಆಚರಿಸುವ ಹಬ್ಬಗಳು ಮತ್ತು ಅಂದು ತಯಾರಿಸುವ ವಿಶೇಷ ಆಹಾರಗಳ ಪಟ್ಟಿ ಮಾಡಿರೆಂದು ಮಾಡಿಸಿ, ಪ್ರತಿಯೊಬ್ಬರಿಂದಲೂ ಅವರು ಬರೆದದ್ದನ್ನು ಹೇಳಿಸಿದ್ದೆ. ಹಿಂದೂ ಹುಡುಗರು ಪಾಯಸ, ಒಬ್ಬಟ್ಟು ಇತ್ಯಾದಿ ಹೇಳಿದಂತೆಯೇ ಮುಸ್ಲಿಂ ಹುಡುಗರು ರಂಜಾನ್‍ಗೆ ಬಿರಿಯಾನಿ ಎಂದು ಬರೆದಿದ್ದರು. ಕಾಲೊನಿಯ ಪರಮೇಶ ತಾನು ಬರೆದದ್ದನ್ನು ಹೇಳಲು ಅಂಜಿಕೊಳ್ಳುತ್ತಿರುವಾಗ, ‘ಪರವಾಗಿಲ್ಲ ನೀನು ಏನು ಬರೆದಿದ್ದೀಯೋ ಹೇಳು. ನಮ್ಮ ಸಂವಿಧಾನ ಎಲ್ಲದ್ದಕ್ಕೂ ಅವಕಾಶ ಕೊಟ್ಟಿದೆ’ ಎಂದು ಹುರಿದುಂಬಿಸಿದೆ. ಆತ ತಡವರಿಸುತ್ತ ‘ವರ್ಷತೊಡಕಿಗೆ ದನದ ಬಾಡು’ ಎಂದು ಹೇಳಿದ್ದ. ಇತರ ಹುಡುಗರು ಗೊಳ್ ಎಂದು ನಗಲು ಮುಂದಾದಾಗ ತಡೆದು ನಮ್ಮ ಸಂವಿಧಾನ ಎಲ್ಲರಿಗೂ ಮಾಡಿಕೊಟ್ಟಿರುವ ಅವಕಾಶವನ್ನು ವಿವರಿಸಿ ಅವರ ಬಾಯಿ ಮುಚ್ಚಿಸಿದ್ದೆ.

ನನಗೆ ದಿಗಿಲಾಗುತ್ತಿರುವುದು ಏನೆಂದರೆ ಧಾರವಾಡದಲ್ಲಿ ನಬೀಸಾಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿರುವುದನ್ನು ಮುಬಾರಕ್‌ ನೋಡಿ, ‘ಸರ್, ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯಿಂದ, ಸ್ವಾತಂತ್ರ್ಯದಿಂದ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ ಎಂದಿರಿ, ಈಗ ನಮ್ಮ ವ್ಯಾಪಾರಕ್ಕೆ ನಮ್ಮ ಊರುಗಳಲ್ಲೇ ಅವಕಾಶವಿಲ್ಲ’ ಎಂದು ಕೇಳಿಬಿಟ್ಟರೆ? ಅಂತೆಯೇ ಕಾಲೊನಿಯ ಪರಮೇಶನೇನಾದರೂ ಗೋಮಾಂಸ ನಿಷೇಧದ ವಿಕಾರಗಳನ್ನು ಟಿವಿ ಚಾನಲ್‍ಗಳ ಹರುಕು ಬಾಯಿಗಳು ಸಂಭ್ರಮಿಸುತ್ತ ಕಾರುವುದನ್ನು ನೋಡಿ, ‘ಸರ್, ಅಂದು ನಾನು ಸುಮ್ಮನಿದ್ದಾಗ ಸಂವಿಧಾನ ಎಲ್ಲರ ಆಹಾರಕ್ಕೂ ಅವಕಾಶಕೊಟ್ಟಿದೆ ಜೋರಾಗಿ ಹೇಳು ಎಂದು ಹೇಳಿಸಿ, ನನ್ನ ಆಹಾರವನ್ನ ಬೀದಿಗೆ ತಂದಿರಿ, ಇಂದು ಅದು ನಿಷೇಧವಾಯಿತು ಎಂದಮೇಲೆ ತಿನ್ನುವ ನನ್ನನ್ನು ಬೊಟ್ಟು ಮಾಡಿ ಅಣಕಿಸುತ್ತಾರಲ್ಲ’ ಎಂಬ ನೈತಿಕ ಪ್ರಶ್ನೆಯೊಂದನ್ನು ಎತ್ತಿದರೆ ಪಾಠದ ಮೂಲಕ ನಾನು ಇದುವರೆಗೂ ಹೇಳಿದ್ದು ಸುಳ್ಳು, ನಾನೂ ಒಬ್ಬ ಡೋಂಗಿ ಬಾಬಾ ಎಂದಾಗುತ್ತದಲ್ಲ.

ಕಳೆದ ವರ್ಷದ ಪಠ್ಯದಲ್ಲಿ ನಾಲ್ಕು ಆಂಗ್ಲೊ ಮೈಸೂರು ಯುದ್ಧಗಳು ಹಾಗೂ ಟಿಪ್ಪು ಕೊಡುಗೆಗಳನ್ನು ಕೊಂಡಾಡಿದ್ದ ಹುಸೇನ್, ‘ಈ ವರ್ಷ ಅವು ಇಲ್ಲವಾಗಿರುವುದನ್ನ ಹುಡುಕಿ ಸರ್. ಹುಟ್ಟಿನಿಂದ ಒಂದು ದೇಶದ ಪೌರತ್ವ ಸಿಗುತ್ತದೆ ಎಂದಿದ್ದಿರಿ, ತಾತ ಮುತ್ತಾತನ ಕಾಲದಿಂದಲೂ ಇಲ್ಲೇ ಹುಟ್ಟಿ ಬೆಳೆದ ನಮ್ಮನ್ನ ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರಲ್ಲ’ ಎಂದು ಕೇಳಿಬಿಟ್ಟರೆ? ಒಂದು ಕ್ಷಣ ಹೀಗೆಲ್ಲ ನನ್ನ ಅಂತಃಕರಣದ ಕಾಲ್ಪನಿಕ ಪಾತ್ರಗಳು ಬೀದಿಗಿಳಿದು ಅಟ್ಟಾಡಿಸಿದಂತಾದುದು ಸುಳ್ಳಲ್ಲ. ಆದರೆ ಅವು ಕೇಳಲಿ ಬಿಡಲಿ ಇಂದಿನ ಅಂಬೇಡ್ಕರ್ ಜಯಂತಿ ಭಾಷಣದಲ್ಲಿ ಹುಟ್ಟಿನಿಂದ ಪೌರತ್ವ ಬರುವುದರ ಜೊತೆಗೆ, 1948 ಜುಲೈ 19ನೇ ತಾರೀಖಿನ ನಂತರ ಬೇರೆಡೆಯಿಂದ ವಲಸೆ ಬಂದಾಗ್ಯು ಒಂದು ದೇಶದಲ್ಲಿ ಇಂತಿಷ್ಟು ಅವಧಿ ನೆಲೆಸಿದ್ದು ಸ್ವಇಚ್ಛೆಯಿಂದ ಅರ್ಜಿ ಸಲ್ಲಿಸಿ ಪೌರತ್ವವನ್ನು ಪಡೆಯಬಹುದೆಂಬುದನ್ನ ಒತ್ತಿ ಹೇಳಿ, ಅವನಲ್ಲಿರುವ ಅಳುಕನ್ನು ಅಧೀರತೆಯನ್ನು ದೂರವಾಗಿಸಬೇಕು ಅಂದುಕೊಳ್ಳುತ್ತಿದ್ದೇನೆ.

ಸರ್ಕಾರ, ಕೋರ್ಟು, ಅಧಿಕಾರ ಎಲ್ಲವೂ ಬರುವುದು ಸಂವಿಧಾನದ ಅಡಿಯಲ್ಲೆ. ಅಧಿಕಾರ ಈ ವರ್ಷ ಇರುತ್ತೆ ಮುಂದೆ ಯಾರದೋ ಪಾಲಾಗುತ್ತೊ! ಅದನ್ನು ನಿರ್ಧರಿಸುವ ಪವಿತ್ರವಾದ ಮತದಾನದ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ ಎಂದು ಹೇಳುತ್ತ, ಬಾಬಾ ಸಾಹೇಬರ ಮಾತಾದ ‘ನಾನು ಬರೆದಿರುವ ಸಂವಿಧಾನ ಬಹಳ ಉತ್ತಮವಾದುದು ಎಂದು ಎಲ್ಲರೂ ಹೇಳುತ್ತಿದ್ದಾರೆ, ಆದರೆ ಅದು ಯಥಾವತ್ ಜಾರಿಯಾಗುತ್ತದೆ ಎಂಬ ನಂಬಿಕೆ ನನ್ನಲ್ಲಿ ಉಳಿದಿಲ್ಲ. ಅದು ಯಥಾವತ್ ಜಾರಿಯಾದಲ್ಲಿ ಕೇವಲ ಇಪ್ಪತ್ತು ವರ್ಷದಲ್ಲೇ ಪ್ರಬುದ್ಧ ಭಾರತ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದನ್ನು ಜಾರಿಗೊಳಿಸುವ ಜಾಗದಲ್ಲಿ ವಿರೋಧಿಗಳಿದ್ದರೆ ಅದು ಸಂವಿಧಾನದ ವಿಫಲತೆಯಲ್ಲ’ ಎಂಬ ಮಾತುಗಳನ್ನು ನೆನಪಿಸಿಕೊಳ್ಳುತ್ತೇನೆ. ಮುಬಾರಕ್‌, ಹುಸೇನ್‌ ಅವರಂಥವರೂ ನೆಮ್ಮದಿಯಿಂದ, ಧೈರ್ಯದಿಂದ ಬದುಕುವ ವಾತಾವರಣವನ್ನು ಅವರಿಗೆ ಅಂಬೇಡ್ಕರರ ಸಂವಿಧಾನ ನಿರ್ಮಿಸಿಕೊಡಲಿ ಎಂದು ಹಾರೈಸುತ್ತೇನೆ.

ಲೇಖಕ:ಗುರುಪ್ರಸಾದ್ ಕಂಟಲಗೆರೆ, ಶಿಕ್ಷಕ

**********

ನೀಲಿ ಬಾನ ಕೆಂಪು ಸೂರ್ಯ

ಭಾರತದ ನೆಲಗುಣ ಎಂದಿಗೂ ದ್ವೇಷದ ವಿಷಕ್ಕೆ ತನ್ನನ್ನು ತೆರೆದುಕೊಂಡಿಲ್ಲ ಅಥವಾ ಒಗ್ಗಿಲ್ಲ. ಅಂಥ ಸಂದರ್ಭ ಬಂದಾಗೆಲ್ಲ ನೆಲಮೂಲಕ್ಕೆ ಬಹುಳಗಳನ್ನೇ ಸಾರವಾಗಿ ಹಿಡಿದುಕೊಂಡಿದೆ. ಅದರ ರಕ್ಷಣೆಯೇ ಇಂದಿನ ಸವಾಲು. ಅಂದರೆ, ಬಹುಳಗಳ ಕೇಂದ್ರ ಭಾರತದ ಮತ್ತು ಅದರೊಳಗೆ ವಾಸಿಸುವವರೆಲ್ಲರ ಪ್ರೀತಿಯ ಬಾಹುಬಂಧಿಯಾಗಿ ಸಂರಕ್ಷಿಸಲಿಕ್ಕೆಂದೇ ಡಾ. ಅಂಬೇಡ್ಕರ್ ಸಂವಿಧಾನದ ಪೀಠಿಕೆಯಲ್ಲಿ ಯಾವ ಧರ್ಮವನ್ನೂ ಉಲ್ಲೇಖಿಸದೇ ಎಲ್ಲರ ಮಾನವ ಘನತೆಯನ್ನು ಎತ್ತಿ ಹಿಡಿದರು. ಕಲಂ 15, 17ನ್ನೂ ಒಳಗೊಂಡು ಎಲ್ಲರಿಗೂ ಸಂವಿಧಾನಾತ್ಮಕವಾಗಿ ರಕ್ಷಣೆಯ ಹಕ್ಕುಗಳನ್ನು ಸೇರಿಸಿದರು.

ಮುಸ್ಲಿಂ ದ್ವೇಷದ ಹಲವು ಚರ್ಚೆಗಳು ಅವರ ಸಮ್ಮುಖದಲ್ಲಿ ನಡೆದಿವೆ. ದಲಿತ ದ್ವೇಷಿಯಾದ ದಾಳಿಕೋರ ಸನಾತನವಾದಿಗಳ ವಿಚಾರ ಅವರ ಮುಂದೆ ಬಂದಿತ್ತು. ಮಾತ್ರವಲ್ಲ, ಹೆಣ್ಣನ್ನು ತುಚ್ಛವಾಗಿಸುವ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಅನೇಕ ವಿಚಾರಗಳಿಗೆ ಡಾ. ಅಂಬೇಡ್ಕರ್ ವಿಚಾರ ಪ್ರಚೋದಕ ಉತ್ತರ ನೀಡಿದ್ದಾರೆ. ಅದಕ್ಕೆಂದೇ ಭಾರತದಲ್ಲಿ ಸನಾತನವಾದಿಗಳು ಮತ್ತು ಹಿಂದುತ್ವ ಫ್ಯಾಸಿಸ್ಟ್‌ರು ಅಂದಿನಿಂದ ಇಂದಿನವರೆಗೆ, ಸಂವಿಧಾನವನ್ನು ಸುಡುತ್ತಲೇ ಬಂದಿದ್ದಾರೆ.ಜೊತೆಗೆ ಡಾ. ಅಂಬೇಡ್ಕರ್ ಅವರನ್ನು ರಾಜಕೀಯ ಮತ್ತು ಓಟಿನ ಕಾರಣಕ್ಕೆ ದೂರವಿಡದೇ ಹಲವು ಸುಳ್ಳುಗಳನ್ನು ಆವಾಹಿಸಿಕೊಂಡು ತಮ್ಮ ಬ್ಯಾನರಿನ ಭಾಗವಾಗಿಯೂ ಮಾಡಿಕೊಂಡಿದ್ದಾರೆ. ಆಗೆಲ್ಲ ಅವರು, ಅಂಬೇಡ್ಕರ್ ಅವರಿಗೆ ಸಾಂಸ್ಕೃತಿಕ ರಾಷ್ಟ್ರವಾದದಲ್ಲಿ ನಂಬಿಕೆ ಇತ್ತು. ಅವರಿಗೆ ಎರಡು ರಾಷ್ಟ್ರ ಸಿದ್ಧಾಂತದಲ್ಲಿ ನಂಬಿಕೆ ಇತ್ತು. ಅವರೊಬ್ಬ ಮುಸ್ಲಿಂ ದ್ವೇಷಿಯಾಗಿದ್ದರು, ಮುಸ್ಲಿಮರನ್ನು ಭಯೋತ್ಪಾದಕ ಎಂದು ಅಂಬೇಡ್ಕರ್ ಅವರೇ ಕರೆದಿದ್ದರು ಎಂಬಿತ್ಯಾದಿಯಾಗಿ ಹಲುಬುತ್ತಲೇ ಬಂದಿದ್ದಾರೆ.

ಆದರೆ ಡಾ. ಅಂಬೇಡ್ಕರ್ ಇಂಥ ಸಂದರ್ಭವನ್ನು ಗಮನದಲ್ಲಿಟ್ಟೇ ಹೇಳಿರುವುದೇನೆಂದರೆ, ‘ಧರ್ಮ ಮನುಷ್ಯನಿಗಾಗಿ ಹೊರತು ಧರ್ಮಕ್ಕಾಗಿ ಮನುಷ್ಯ ಅಲ್ಲ’. ಇಷ್ಟರಲ್ಲೇ ನಾವು ತಿಳಿಯಬೇಕಾದುದು, ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರ ಧರ್ಮಗಳ ಚೌಕಟ್ಟುಗಳಾಚೆ ಬಹುತ್ವ ಭಾರತವೇ ನಮ್ಮೊಳಗೆ ನೆಲೆಸಿರುವವರೆಗೆ ಭಾರತಕ್ಕೆ ಯಾವ ಅಪಾಯವೂ ಬರುವುದಿಲ್ಲ. ಅಂಬೇಡ್ಕರ್ ಚಿಂತನೆಗಳಲ್ಲಿ ಭಾರತದ ಇಂದಿನ ಸಮಸ್ಯೆಗಳಿಗೆ ಪರಿಹಾರಗಳು ದೊರೆಯುತ್ತವೆ. ಹಾಗಾಗಿ ಅವರು, ಈಗ ಕೇವಲ ಪ್ರತಿಮೆಯಲ್ಲ.. ನೀಲಿ ಬಾನ ಕೆಂಪು ಸೂರ್ಯ.

ಭಾರತದಾದ್ಯಂತ ಸೌಹಾರ್ದ, ದ್ವೇಷ ರಹಿತ ವಾತಾವರಣ ನೆಲೆ ನಿಲ್ಲಲು ಚಾರ್ವಾಕ, ಲೋಕಾಯತ, ಬುದ್ಧ, ಬಸವ, ಗಾಂಧಿ, ಮಾರ್ಕ್ಸ್, ಪೆರಿಯಾರ್, ಪುಲೆ, ಭಗತ್ ಸಿಂಗ್, ಇ.ಎಂ.ಎಸ್, ಅಂಬೇಡ್ಕರ್ ಎಲ್ಲರ ಅಧ್ಯಯನಕ್ಕೆ ಒತ್ತು ನೀಡಿ ಸುವಿಚಾರಗಳ ಅನ್ವಯ ಮಾಡಿಕೊಳ್ಳಬೇಕಿದೆ. ಸಂವಿಧಾನ ಓದು, ಪ್ರಗತಿಪರ ಸಾಹಿತ್ಯ ಓದು, ಜೀವನದ ಎಲ್ಲಾ ಹಂತದಲ್ಲಿ ಯಾರನ್ನೂ ದ್ವೇಷಿಸದ ಎಚ್ಚರ ಹಾಗೂ ಅದನ್ನು ಭಾರತದ ಜನತೆಯ ಪ್ರಜ್ಞೆಯ ಭಾಗವಾಗಿಸುವುದಕ್ಕೆ ನಮ್ಮೆಲ್ಲರ ಕೆಲಸ ಸಾಗಬೇಕು. ದ್ವೇಷ ಅಳಿಯಬೇಕು; ಪ್ರೀತಿ ಹಬ್ಬಬೇಕು.

ಲೇಖಕಿ:ಯಮುನಾ ಗಾಂವ್ಕರ್, ಸಾಮಾಜಿಕ ಹೋರಾಟಗಾರ್ತಿ

*********

ಮುಸ್ಲಿಮರ ಹಿತವನ್ನೂ ಬಯಸಿದ್ದರು

ಅಂಬೇಡ್ಕರ್ ಅವರು ರಾಜಕೀಯ ಸಂಘಟ ನಾತ್ಮಕ ದೃಷ್ಟಿಯಿಂದ ಪರಿಶಿಷ್ಟಜಾತಿಗಳನ್ನು ಹಿಂದೂ ಎಂದು ಒಪ್ಪದೆ, ಮುಸ್ಲಿಂ ಮತ್ತು ಪರಿಶಿಷ್ಟ ಜಾತಿಗಳನ್ನು ಒಟ್ಟಾಗಿಯೇ `ಅಲ್ಪಸಂಖ್ಯಾತರು’ ಎಂದು ಭಾವಿಸಿದ್ದರು. ಇದಕ್ಕೆ ಅನೇಕ ಕಡೆಗಳಲ್ಲಿ ಉಲ್ಲೇಖಗಳಿವೆ. 1922 ಫೆ 10 ರಂದು ರುಸ್ತುಂ ಜೆ ವಕೀಲ ಅವರು ಗ್ರಾಮ ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ದೊರೆಯಬೇಕೆಂಬ ತಿದ್ದುಪಡಿ ತಂದರು. ಇದಕ್ಕೆ ಮಹಮದ್ ಸುಲೇಮಾನ್ ಕಾಸಮ್ ಮಿಥಾ ಅವರು ‘ಜಿಲ್ಲಾಧಿಕಾರಿಗಳು ಗ್ರಾಮಪಂಚಾಯ್ತಿಗಳಿಗೆ ಸಂದರ್ಭಾನುಸಾರ ಒಬ್ಬ ಮುಸ್ಲಿಂ ಸದಸ್ಯರನ್ನೋ ಅಥವಾ ಒಬ್ಬ ದಲಿತ ವರ್ಗದ ಸದಸ್ಯರನ್ನೋ ನಾಮಕರಣ ಮಾಡಬೇಕು’ ಎಂದು ಮಂಡಿಸುತ್ತಾರೆ. ಮಿಥಾ ಅವರ ಈ ತಿದ್ದುಪಡಿಯನ್ನು ಅಂಬೇಡ್ಕರ್ ಅನುಮೋದಿಸುತ್ತಾರೆ.

ಇನ್ನು, ಪ್ರತ್ಯೇಕ ಕರ್ನಾಟಕ ಪ್ರಾಂತ ರಚನೆಯ ಚರ್ಚೆಯಲ್ಲಿ ಸದನಕ್ಕೆ ಎಷ್ಟು ಜನ ಸದಸ್ಯರು ಬರಬೇಕೆನ್ನುವಾಗ, ಅಂಬೇಡ್ಕರ್ ‘ನಾನು ಅಲ್ಪಸಂಖ್ಯಾತರ ಸದಸ್ಯನಾಗಿರುವೆ, ಆದುದರಿಂದ ಅಲ್ಪ ಸಂಖ್ಯಾತರ ದೃಷ್ಟಿಯಿಂದ ಎಲ್ಲಾ ಸಂಗತಿಗಳನ್ನು ನೋಡುವೆ. ಗೊತ್ತುವಳಿಯ ಪರವಾಗಿದ್ದವರು ಮುಸ್ಲಿಂ ಹಾಗೂ ಹರಿಜನರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದಾಗಿ ಹೇಳಿದ್ದು ಕೇಳಿ ಆನಂದವಾಯಿತು’ ಎನ್ನುತ್ತಾರೆ. ಮುಂದುವರಿದು 1939 ಅಕ್ಟೋಬರ್ 26 ರಂದು ನಡೆದ ಮುಂಬೈ ವಿಧಾನಸಭಾ ಚರ್ಚೆಯಲ್ಲಿ ಯುದ್ಧದಲ್ಲಿ ಭಾಗವಹಿಸುವ ಕುರಿತು ಮಾತಾಡ್ತಾ ‘ಈ ನಾಡಿನಲ್ಲಿ ಯಾವಾಗಲೂ ಹಿಂದೂಗಳು ಬಹುಸಂಖ್ಯಾತ- ರಾಗಿಯೇ ಇರುತ್ತಾರೆ. ಮುಸ್ಲಿಮರು ಹಾಗೂ ಅನುಸೂಚಿತ (ಪರಿಶಿಷ್ಟ) ಜಾತಿಗಳು ಯಾವಾಗಲೂ ಅಲ್ಪಸಂಖ್ಯಾತರಾಗಿಯೇ ಉಳಿದಿರುತ್ತಾರೆ’ ಎನ್ನುತ್ತಾರೆ. ಇಂತಹ ಚರ್ಚೆಗಳನ್ನು ಗಮನಿಸಿದರೆ ಅಂಬೇಡ್ಕರ್ ಅವರು ಅಲ್ಪಸಂಖ್ಯಾತರೆಂದರೆ ‘ಮುಸ್ಲಿಮರು ಮತ್ತು ಅನುಸೂಚಿತ ಪರಿಶಿಷ್ಟ ಜಾತಿಗಳು’ ಎಂದೇ ಭಾವಿಸಿದ್ದರು. ಹೀಗಿರುವಾಗ ಅಂಬೇಡ್ಕರ್ ಅವರು ಮುಸ್ಲಿಮರ ವಿರುದ್ಧವಾಗಿದ್ದರು ಎನ್ನುವುದು ಅರ್ಧಸತ್ಯವಲ್ಲವೇ?

ಲೇಖಕ: ಅರುಣ್ ಜೋಳದಕೂಡ್ಲಿಗಿ, ಸಾಹಿತಿ

*********

ಇಷ್ಟಕ್ಕೂ ‘ಬಹುಜನ’ ಸಮುದಾಯವೆಂದರೆ...

ಬದಲಾವಣೆಯ ಮಾತುಗಳು ಈಗ ಎಲ್ಲಾ ಕಡೆ ಕೇಳಿ ಬರುತ್ತಿವೆ‌. ಒಂದು ಸಮುದಾಯದ ಪ್ರತಿಗಾಮಿ ವ್ಯಕ್ತಿ, ಇನ್ನೊಂದು ಸಮುದಾಯದ ವಿಷಯದಲ್ಲಿ ಅತ್ಯಂತ ಪ್ರಗತಿಪರನೆಂದು ತೋರಿಸಿಕೊಳ್ಳುತ್ತಿರುವ ಸಂದರ್ಭವಿದು. ಉದಾಹರಣೆಗೆ, ಮಠ-ದೇವಸ್ಥಾನದಲ್ಲಿ ದಲಿತರಿಗೆ ಇನ್ನೂ ಪ್ರವೇಶ ಸಿಕ್ಕಿಲ್ಲ ಅಂದ್ರೆ ಸಾಕು ಮಸೀದಿಯ ಒಳಗೆ ಯಾವಾಗ ಹೆಣ್ಣು ಮಕ್ಕಳನ್ನು ಬಿಟ್ಕೊಳ್ಳುತ್ತೀರಿ ಸರ್? ಎಂದೋ, ಕನ್ನಡದ ಮೇಲೆ ಅನಗತ್ಯವಾದ ಹಿಂದಿ ಹೇರಿಕೆ ಯಾಕೆ ಅಂತೆ ಪ್ರಶ್ನೆ ಮಾಡಿದರೆ, ಮುಸ್ಲಿಮರಿಗೆ ಮಾತ್ರ ಯಾಕೆ ಉರ್ದು ಶಾಲೆ ಸಾರ್? ಎಂದೋ ಪ್ರಶ್ನೆ ಬರುತ್ತದೆ. ಮೀಸಲಾತಿಯ ವಿಷಯಕ್ಕೆ ಬಂದಾಗ ಮಹಾನ್ ಸಮಾನತೆಯನ್ನು ಬೋಧಿಸುವ ವ್ಯಕ್ತಿ, ಒಂದೇ ದೇಶ ಒಂದೇ ನಾಗರಿಕ ಕಾನೂನು ಅಂತಾರೆಯೇ ಹೊರತು ಅಪ್ಪಿ ತಪ್ಪಿ ಅವನ ಬಾಯಿಯಿಂದ ‘ಒಂದು ದೇಶ- ಒಂದು ಶಿಕ್ಷಣ ವ್ಯವಸ್ಥೆ’ ಎಂಬುದಾಗಲಿ ಅಥವಾ ‘ಒಂದು ದೇಶ - ಒಂದು ಆರೋಗ್ಯ’ ಎಂಬುದಾಗಲಿ ಬರುವುದಿಲ್ಲ. ವಿಪರ್ಯಾಸವೆಂದರೆ ಸಂವಿಧಾನದ ಕುರಿತು ಕಿಂಚಿತ್ತೂ ಗೌರವವಿಲ್ಲದ ವ್ಯಕ್ತಿಗಳು ಇವೆಲ್ಲದರ ಸಮರ್ಥನೆಗೆ ಸಂವಿಧಾನವನ್ನೇ ಪದೇ ಪದೇ ಎಳೆದು ತರುತ್ತಾರೆ. ಯಾಕೆ ಹೀಗೆ ಫ್ಯಾಸಿಸಂ ತನ್ನ ಅಧಿಕಾರ ಉಳಿಸಿಕೊಳ್ಳಲು ಒಂದು ನಿರ್ದಿಷ್ಟ ಸಮುದಾಯವನ್ನು ಬಲಿಪಶು ಮಾಡುತ್ತದೆ ಎಂಬುದನ್ನು ತಿಳಿದುಕೊಂಡರೆ, ನಮ್ಮ ಇವತ್ತಿನ ಬಹುತೇಕ ಸಂಘಟಿತ ಹಿಂಸೆಗೆ ಉತ್ತರ ಸಿಗುತ್ತದೆ.

ಯಾವುದೇ ಬಗೆಯ ಅಭಿವೃದ್ಧಿ ಎಂಬುದು ಹೆಸರಿನಲ್ಲಿ ಮಾತ್ರ ಉಳಿದಾಗ, ದೇಶದ ಜಿಡಿಪಿ ಪಾತಾಳ ಕಂಡು ನಿರುದ್ಯೋಗ ತಾಂಡವವಾಡುತ್ತಿರುವಾಗ ಯಾವುದೇ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲಲು ಇರುವ ಸರಳತಂತ್ರಗಳೆಂದರೆ ಜಾತಿ, ಧರ್ಮ, ದೇಶಭಕ್ತಿ ಹಾಗೂ ಗಡಿ-ಯುದ್ಧದಂತಹ ಭಾವನಾತ್ಮಕ ಸಂಗತಿಗಳು. ಬಣ್ಣದ ಹೆಸರಿನಲ್ಲಿ ಜನರನ್ನು ಒಡೆಯುವ, ತಿನ್ನುವ ಆಹಾರ ಮತ್ತು ತೊಡುವ ಬಟ್ಟೆಯ ವಿಚಾರವಾಗಿ ಒಬ್ಬರ ಮೇಲೆ‌ ಇನ್ನೊಬ್ಬರನ್ನು ಎತ್ತಿ ಕಟ್ಟುವ, ಯುವಕರ ಮನಸ್ಸಿನಲ್ಲಿ ವಿಷವನ್ನೇ ಬಿತ್ತಿ ಬೆಳೆಯುವ ಅಗ್ಗದ ಈ ರಾಜಾಕಾರಣ ಒಂದಲ್ಲ ಒಂದು ದಿನ ಎಲ್ಲರನ್ನೂ ಬಲಿ ತೆಗೆದುಕೊಳ್ಳುವುದು ಖಂಡಿತ. ಪಾತ್ರಧಾರಿಗಳು ಬದಲಾಗಿರಬಹುದು, ಆದರೆ ನಾಟಕ ಮಾತ್ರ ಅದೇ ನಡೆದಿದೆ. ಇದನ್ನು ನಾವೀಗಾಗಾಗಲೇ ಕಾಶ್ಮೀರದಲ್ಲಿ ನೋಡಿದ್ದೇವೆ. ಗುಜಾರಾತ್‌ನಲ್ಲಿ ಅನುಭವಿಸಿದ್ದೇವೆ, ಈಗ ಕರ್ನಾಟಕದಲ್ಲಿ ಪ್ರಯೋಗಿಸುತ್ತಿದ್ದೇವೆ ಅಷ್ಟೆ. ಕುವೆಂಪು ಕನಸಿನ ‘ಸರ್ವ ಜನಾಂಗದ ಶಾಂತಿಯ ತೋಟ’ದ ಎಲ್ಲಾ ಪ್ರಬುದ್ಧ ಮತದಾರರ ಹೆಗಲ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ. ಇಸ್ಲಾಂ ಹಾಗೂ ಹಿಂದುತ್ವದ ಕೆಲವು ಜೀವವಿರೋಧಿ ಮತಾಂಧ ತರ್ಕಗಳಿಗೆ ಹೃದಯ-ಮಿದುಳು ಅಡವಿಟ್ಟು ಕೇವಲ ಹೇಲರಿಬಿಯಂತೆ ಬಳಕೆಯಾಗುತ್ತಿರುವ ‘ಅಹಿಂದ’ ಸಮುದಾಯದ ಯುವಕ, ಯುವತಿಯರಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ‘ಶಿಕ್ಷಣ-ಸಂಘಟನೆ-ಹೋರಾಟ’ ಎಂಬ ಬೀಜ ಮಂತ್ರವೇ ಪಾಠವಾಗಬೇಕಿದೆ. ಬಹುತ್ವ ಭಾರತದ ಕನಸು ನನಸಾಗಲು ಇದೊಂದೇ ಸದ್ಯಕ್ಕೆ ನನಗೆ ಹೊಳೆಯುತ್ತಿರುವ ಏಕೈಕ ಪ್ರಜಾಸತ್ತಾತ್ಮಕ ವಿಮೋಚನಾ ಮಾರ್ಗವಾಗಿದೆ.

ಇಷ್ಟಕ್ಕೂ ‘ಬಹುಜನ’ ಸಮುದಾಯವೆಂದರೆ ಯಾರು?

ವೈದಿಕರ ಕಾಲದಲ್ಲಿ ಬೌದ್ಧರಾದವರು

ಬಸವಣ್ಣನ‌ ಕಾಲದಲ್ಲಿ ಲಿಂಗಾಯತರಾದವರು

ಮೊಗಲರರ ಕಾಲದಲ್ಲಿ ಮುಸಲ್ಮಾನರಾದವರು

ಬ್ರಿಟಿಷರ ಕಾಲದಲ್ಲಿ ಕ್ರಿಶ್ಚಿಯನ್ನರರಾದವರು- ಎಂಬ ಕಟು ಸತ್ಯವನ್ನು ರಾಜಕೀಯವಾಗಿಯಾದರೂ ನಾವೀಗ ಅರಿತುಕೊಳ್ಳಲೇ ಬೇಕಾಗಿದೆ!

ಲೇಖಕ: ಆರಿಫ್ ರಾಜಾ, ಕವಿ

*******

ಸಂವಿಧಾನವೆಂಬ ಕನಸಿನ ಸಸಿ

ಅಂಬೇಡ್ಕರರು ಹೆಗಲು ಕೊಟ್ಟು ಶ್ರಮಿಸಿದ್ದು ಸಂವಿಧಾನ ರಚಿಸಲಷ್ಟೇ ಅಲ್ಲ, ಶಾಂತಿಯ ನೆರಳನೀಯುವ, ಸಮೃದ್ಧಿಯ ತಂಗಾಳಿ ಕೊಡುವ, ಎಲ್ಲ ಸಂವಿಧಾನಗಳ ಸತ್ವವ ಹೀರಿ ಭಾರತ ಬಲವಾದ ಹೆಮ್ಮರವಾಗುವ ಕನಸನ್ನು ನೆಡಲು. ಆ ಸಸಿಗೆ ಸಾಂವಿಧಾನಿಕ ನೈತಿಕತೆಯ ನೀರೆರೆಯಬೇಕಿತ್ತು ನಾವು. ಅವರೇ ಹೇಳಿದಂತೆ, ಆ ನೀರು ಧಾರಾಳವಾಗಿ ಸಿಕ್ಕುವಂಥದ್ದಾಗಿರಲಿಲ್ಲ. ಜಾತಿ, ಅಂತಸ್ತು, ಲಿಂಗ, ಭಾಷೆಯ ಅಸಮಾನತೆಯ ಪದರುಗಳ ಅಡಿಯಲ್ಲೆಲ್ಲೋ ಅಡಗಿದ್ದ ಆ ನೀರನ್ನು, ಶಿಕ್ಷಣದ ಹತಾರ ಬಳಸಿ ತೆಗೆಯಬೇಕಿತ್ತು ನಾವು. ಭಕ್ತಿ-ವ್ಯಕ್ತಿ ಪೂಜೆಗಳ ಬಿರುಬಿಸಿಲುಗಳಿಂದ ಭವ್ಯ ಭಾರತದಕನಸಿನಸಸಿಯ ಕಾಪಾಡಬೇಕೆಂಬ ಕಿವಿಮಾತ ಕೇಳಬೇಕಿತ್ತು ನಾವು. ಆ ಕನಸಲ್ಲಿ ಎಲ್ಲ ಸರಿ ಇತ್ತೆಂದಲ್ಲ, ಆದರೆ ಹೊಸ ಬೆಳಕಿಗೆ ತೆರೆದುಕೊಳ್ಳುವ, ಸಮಾನತೆಯ ದಿಕ್ಕಿ ನತ್ತ ಬೆಳೆಯುವ ಅವಕಾಶವಿತ್ತು. ಸಂವಿಧಾನವಿನ್ನೂಸಸಿ, ಬೆಳೆಸುವವವರ ಮೇಲೆ ಸಸಿಯ ಬೆಳವಣಿಗೆ ಆತುಕೊಂಡಿರು ವುದೆಂಬ ಅವರ ಮಾತಿನ ಮರ್ಮ ಅರ್ಥವಾಗಿಲ್ಲ ನಮಗಿನ್ನೂ.

ಅರಿವಾಗಿದ್ದರೆ ನಮ್ಮವನೆಂಬ ಪದಕ್ಕೆ ವಿಶಾಲವಾದ ಅರ್ಥವಿರುತ್ತಿತ್ತು, ಚುಕ್ಕಾಣಿ ಹಿಡಿಯುವವರು ಕುಟಿಲರಲ್ಲ, ಸಮರ್ಥರಾಗುತ್ತಿದ್ದರು. ವ್ಯಕ್ತಿಗಳಿಗಿಂತ ವ್ಯವಸ್ಥೆಗಳು ಬಲವಾಗಿರುತ್ತಿದ್ದವು. ಭಾರತ ಒಕ್ಕೂಟವೆನ್ನುವುದು ನೆನಪಿರುತ್ತಿತ್ತು ಎಲ್ಲರಿಗೂ. ಒಂದೋ ಮೀಸಲಾತಿ ಇನ್ನೂ ಬೇಕೆಂಬ ಅರಿವು ಎಲ್ಲರಲ್ಲೂ ಇರುತ್ತಿತ್ತು ಅಥವಾ ಅದರ ಅಗತ್ಯವೇ ಇಲ್ಲದ ಹಂತವನ್ನು ಸಮಾಜ ತಲುಪಿಯಾಗುತ್ತಿತ್ತು. ಮತಗಳು- ಬಣ್ಣಗಳು- ಉಣ್ಣುವ ಊಟ- ಆಡುವ ನುಡಿ, ವಿಕೃತಿಯ ವಿಜೃಂಭಣೆಯಾಗಿಯಲ್ಲ ಸಂಸ್ಕೃತಿಯ ಸಂಕೇತಗಳಾಗಿ ಉಳಿದಿರುತ್ತಿದ್ದವು.

ಲೇಖಕಿ:ಮೈತ್ರೇಯಿ ಹೆಗಡೆ,ವಕೀಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.