ADVERTISEMENT

ಬಿರುಮಳೆ ಹಾಸಿದ ಸಂಪಿಗೆಯ ಹಾಸಿಗೆ

ಎಚ್.ಎಸ್.ಶಿವಪ್ರಕಾಶ್
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
1970ರ ದಶಕದ ಬೆಂಗಳೂರು ಮಳೆಯ ನೋಟ... ತರಗುಪೇಟೆಯಲ್ಲಿ ಕಂಡಂತೆ. ಬಾಲ್ಯವನ್ನು ಬೆಂಗಳೂರಿನಲ್ಲಿಯೇ ಕಳೆದಿರುವ ಕವಿ ಶಿವಪ್ರಕಾಶ್‌ ಅವರ ನೆನಪುಗಳ ಮಳೆ ಈ ಪೇಟೆಗಳ ಪ್ರಪಂಚದ ಮೇಲೆಯೇ ಸುರಿದಿದೆ
1970ರ ದಶಕದ ಬೆಂಗಳೂರು ಮಳೆಯ ನೋಟ... ತರಗುಪೇಟೆಯಲ್ಲಿ ಕಂಡಂತೆ. ಬಾಲ್ಯವನ್ನು ಬೆಂಗಳೂರಿನಲ್ಲಿಯೇ ಕಳೆದಿರುವ ಕವಿ ಶಿವಪ್ರಕಾಶ್‌ ಅವರ ನೆನಪುಗಳ ಮಳೆ ಈ ಪೇಟೆಗಳ ಪ್ರಪಂಚದ ಮೇಲೆಯೇ ಸುರಿದಿದೆ   

ಮಳೆ ಅಂದ್ರೆ... ಏನು ಅಂತೀರಾ? ನೆನಪುಗಳೂ ಹಂಗೇನೇ; ಮಳೆಯ ಹಾಗೇ ಧೋ ಅಂತ ಬಂದುಬಿಡ್ತಾವೆ. ಬಿಸಿಲು ಇದ್ದಾಗಲೂ ಒಮ್ಮೊಮ್ಮೆ ಮಳೆ ಸುರಿಯುತ್ತೆ ಅಲ್ವಾ? ಅದು ಏಕೆ ಗೊತ್ತಾ? ಕೋತಿಗೂ ನರಿಗೂ ಮದ್ವೆ ಮಾಡ್ತಾ ಇದ್ರೆ ಬಿಸಿಲಿನಲ್ಲಿ ಮಳೆ ಸುರಿಯುತ್ತಂತೆ. ಇದು ನಮ್ಮ ಬಾಲ್ಯ ಕಾಲದ ತಿಳಿವಳಿಕೆ. ಈಗ ನೆನಪಿಸ್ಕೊಂಡ್ರೆ ನಗು ಬರುತ್ತೆ.

ಕಾಟನ್‌ಪೇಟೆ– ಚಿಕ್ಕಪೇಟೆ ಮಧ್ಯೆ ರಂಗಸ್ವಾಮಿ ಗುಡಿ ಇದೆಯಲ್ಲಾ? ಅದರ ಹತ್ರ ನಮ್ಮ ಮನೆ ಇತ್ತು. ನಮ್ಮ ಮನೆಯ ಹಿಂದೆ–ಮುಂದೆ ದೊಡ್ಡ ಹಟ್ಟಿಗಳು ಇದ್ವು. ತುಂಬಾ ದೊಡ್ಡ ಹಟ್ಟಿ ಪ್ರದೇಶ ಅದು. ಎದುರಿಗೆ ಒಂದು ದೊಡ್ಡ ಸಂಪಿಗೆ ಮರ. ಸ್ವಲ್ಪ ದೂರದಲ್ಲೇ ಪಾರಿಜಾತದ ಗಿಡ. ಮಧ್ಯೆ ಬಾಳೆ ಗಿಡಗಳು ಇದ್ವು. ಒಂದು ದೊಡ್ಡ ಮಳೆ ಸುರೀತಂದ್ರೆ ಸಾಕು, ಈ ಸಂಪಿಗೆ, ಪಾರಿಜಾತ ಹೂಗಳೆಲ್ಲಾ ಪಟಪಟ ಉದುರಿ ಭುವಿಗೆ ಹೂವಿನ ಹಾಸಿಗೆ ಹಾಸುತ್ತಿದ್ದವು. ಅತ್ತ ಚಿಕ್ಕ ಲಾಲ್‌ಬಾಗ್‌ನಲ್ಲೂ ಅಷ್ಟೇ ಹುಚ್ಚೆ ಹೂವುಗಳು ಉದುರಿ ಹೂವಿನ ಹೊದಿಕೆ ಹಾಸಿ ಬಿಡುತ್ತಿದ್ವು.

ಒಂದಿನ ಏನಾಯ್ತು ಗೊತ್ತಾ? ಹೀಗೇ ಜೋರಾಗಿ ಮಳೆ ಸುರಿಯಿತು. ಗಾಳಿ ಮಳೆಗೆ ಸಂಪಿಗೆ ಮರದಲ್ಲಿ ಗೂಡು ಕಟ್ಟಿದ್ದ ಗುಬ್ಬಚ್ಚಿ ಗೂಡು ಕೆಳಗೆ ಬಿದ್ದು ಮರಿಗಳು ಸತ್ತು ಹೋದವು. ಸಾಮಾನ್ಯ ವೇಳೆಯಲ್ಲಿ ಆ ಮರದ ಹತ್ತಿರ ಹೋಗುವುದೂ ಸಾಧ್ಯವಿರಲಿಲ್ಲ. ಗುಬ್ಬಚ್ಚಿಗಳು ಪುಟ್ಟ ಕೊಕ್ಕಿನಿಂದ ಕುಕ್ಕಿ ಬಿಡುತ್ತಿದ್ದವು. ಮಳೆಗೆ ಮರಿಗಳ ಸಾವನ್ನು ಕಂಡು ಆ ಗುಬ್ಬಚ್ಚಿಗಳು ಅದೆಷ್ಟು ರೋದಿಸಿದ್ದವೋ... ನಾನೂ ಅತ್ತಿದ್ದೆ. ಅದೇ ಮಳೆಗೆ ಹಟ್ಟಿಯ ಮುಂದೆ ನೆಟ್ಟ ಬಾಳೆಗಿಡಗಳು ಮಗುಚಿಬಿದ್ದದ್ದು ಕೂಡ ಸ್ಮೃತಿಪಟಲದಲ್ಲಿದೆ. ಹೀಗೆ ಅಂದು ಮಳೆ ಸೃಷ್ಟಿಸಿದ ಪಲ್ಲಟಗಳು ಅವೆಷ್ಟೊ...

ADVERTISEMENT

ಜೋರಾಗಿ ಮಳೆ ಬಂದ ದಿನ ನಮ್ಮ ಕೆಂಪೇಗೌಡ ರಸ್ತೇಲಿರೋ ವಸಂತ ಮಹಲ್‌ ಹೋಟೆಲ್‌ಗೆ ದೋಸೆ ತಿನ್ನೋದಿಕ್ಕೆ ಹೋಗ್ತಾ ಇದ್ದೆ. ಗರಿಗರಿಯಾದ ದೋಸೆ ಅದು. ಆ ದಾರಿಯಲ್ಲಿ ತಬೂಬಿಯಾ ಹೂಗಳು ಬಿದ್ದಿರುತ್ತಿದ್ವು. ಒಂಥರಾ ಚಿತ್ತಾರ ಬರೆದ ಹಾಗೆ ಆ ದೃಶ್ಯ.

ಮಳೆಗಾಲದಲ್ಲಿ ನಕ್ಷತ್ರ ಹಣ್ಣು, ಸೀಬೆ ಹಣ್ಣು ಸೇರಿದಂತೆ ಹಲವು ಹಣ್ಣುಗಳು ಸಿಗೋವು. ನಾನು ತುಂಬಾ ಸವಿದಿದ್ದೆ. ಮಳೆಯ ನಡುವೆ ಬರುವ ಗಣೇಶನ ಹಬ್ಬವನ್ನೂ ಆನಂದಿಸಿದ್ದೆ. ಜೋರು ಮಳೆ ಬಂದರೆ ಈ ಸಂಭ್ರಮಕ್ಕೂ ಅಡ್ಡಿಯುಂಟಾಗುತ್ತಿತ್ತು. ಆದರೆ ಅದು ಅಪರೂಪ.

ನಂಗಂತೂ ಮಳೆಯಲ್ಲಿ ನೆನೆಯೋದು ಅಂದ್ರೆ ತುಂಬಾ ಇಷ್ಟ. ಮಳೆ ಬಂದ್ರೆ ಮನೆಯ ಚಾವಣಿ ಹತ್ತಿ ಮಳೇಲಿ ನೆನೀತಾ ಬೆಂಗಳೂರಿನ ನೋಟ ನೋಡುವ ಮಜಾನೇ ಬೇರೆ. ಶಾಲೆಗೆ ಹೋಗುವಾಗಲೂ ಅಷ್ಟೆ. ಮಳೆ ಬಂದರೆ ದಾರಿಯಲ್ಲೆಲ್ಲಾ ಮೊಣಕಾಲೆತ್ತರಕ್ಕೆ ನೀರು. ಆದರೆ, ಅದು ಬಲು ಬೇಗ ಜಾಗ ಖಾಲಿ ಮಾಡ್ತಿತ್ತು. ಈಗಿನಂತೆ ಬೋಟ್‌ನಲ್ಲಿ ಹೋಗುವ ಪ್ರಮೇಯ ಸೃಷ್ಟಿ ಆಗ್ತಿರಲಿಲ್ಲ. ನೀರ ದಾರಿಯಲ್ಲೇ ನನ್ನ ನಡಿಗೆ. ನನ್ನ ನೆನೆಯುವಿಕೆ ನೋಡಿದ ಹಿರಿಯರು ನಂಗೊಂದು ರೈನ್‌ ಕೋಟ್‌ ಕೊಡಿಸಿದ್ರು. ಆಗ್ಲೂ ಅಷ್ಟೆ. ರೈನ್‌ಕೋಟ್‌ ಹಾಕಿಕೊಂಡೂ ಬರೋವಾಗ ನೆನೆದುಕೊಂಡೇ ಬಂದ ಅನುಭೂತಿ ಅನುಭವಿಸಿದ್ದೆ. ಬೇಜಾರು ಅಂದ್ರೆ ನನ್ನ ನೆನೆಯುವಿಕೆಯ ಸಂಭ್ರಮಕ್ಕೆ ಯಾರೂ ಜೊತೆಗಾರರು ಇರುತ್ತಿರಲಿಲ್ಲ. ಅವರೆಲ್ಲಾ ಮಳೆ ಬಂದೊಡನೆ ಮನೆಯೊಳಗೆ ಸೇರಿಬಿಡುತ್ತಿದ್ದರು.

ಮಳೆ ಅಂದೂ ಬಂದರೆ ಹಾಗೆಯೇ ಧೋ ಅಂತ ಬರುತ್ತಿತ್ತು. ಮೋಡ ಕಟ್ಟುವುದನ್ನು ನೋಡೋದೇ ಒಂದು ಅದ್ಭುತ. ಯಾವ ಕ್ಷಣದಲ್ಲೂ ಮಳೆ ಸುರಿಯಬಹುದಲ್ವಾ? ಸಿಡಿಲು, ಮಿಂಚುಗಳ ಸದ್ದೂ ಅಷ್ಟೇ ಆಪ್ಯಾಯಮಾನವೂ ಆತಂಕಕಾರಿಯೂ ಆಗಿರುತ್ತಿತ್ತು. ಸಿಡಿಲು, ಮಿಂಚು ಒಟ್ಟಿಗೆ ಬಂದಾಗ ದೇವರು ಕಾಣಿಸಿಕೊಂಡ ಅನ್ನುವ ಭಾವವನ್ನು ನಮ್ಮ ಹಟ್ಟಿಯಲ್ಲಿ ಅನುಭವಿಸಿದ್ದುಂಟು. ಮಳೆ ಜೋರಾಗಿಯೂ ಇತ್ತು. ತುಂತುರಾಗಿಯೂ ಬರುತ್ತಿತ್ತು. ಎರಡೂ ಮಳೆಗಳಿಗೂ ಅವುಗಳದ್ದೇ ಆದ ಸೊಬಗು ಅದರ ನಡುವೆ ನೆನೆಯುವ ಆನಂದ ಇತ್ತೆನ್ನಿ.

ನೀರು ತುಂಬುವುದು, ರಸ್ತೆ ಮೇಲೆಲ್ಲಾ ಹರಿಯುವುದು ಅಂದೂ ಇತ್ತು. ಆದರೆ ಇಂದಿನಂತಲ್ಲ ಬಿಡಿ. ನಗರ್ತಪೇಟೆ, ಚಾಮರಾಜಪೇಟೆ, ಅವೆನ್ಯೂ ರಸ್ತೆಗಳಲ್ಲಿ ನೀರು ತುಂಬಿ ಹರಿದ ದಿನಗಳನ್ನೂ ನಾನು ನೋಡಿದ್ದೇನೆ.

ಮಳೆ ನನ್ನ ಪ್ರಕಾರ ಪುನರ್‌ಜನ್ಮದ ಸಂಕೇತ. ಅದನ್ನು ಹಿನ್ನೆಲೆ ಆಗಿಟ್ಟುಕೊಂಡೇ ‘ಮಳೆ ಬಿದ್ದ ನೆಲದಲ್ಲಿ’, ‘ಮಳೆಯೇ ಮಂಟಪ’ ಕವನ ಸಂಕಲನಗಳನ್ನು ಪ್ರಕಟಿಸಿದ್ದೇನೆ. ಮದುವೆ ಹೆಣ್ಣು ನಾಟಕ ನೋಡಿದ್ರಲ್ಲಾ? ಅದರಲ್ಲಿ ಕಥೆಗೆ ತಿರುವು ಕೊಡುವುದೇ ಮಳೆ. ಹಾಗಾಗಿ ಮಳೆ ನನ್ನ ಬದುಕಿನ ಎಲ್ಲ ಆಯಾಮಗಳಲ್ಲಿ ಗಟ್ಟಿಯಾದ ಪಾತ್ರ ವಹಿಸಿದೆ.

ಅಂದಿನ ಮಳೆಗಾಲದಲ್ಲಿ ಚಳಿಯೂ ಹಿತವಾಗಿಯೇ ಇತ್ತು. ಮಳೆಯನ್ನು ಆನಂದಿಸಲು ವಿಸ್ತಾರದ ನೋಟ ಸಿಗುತ್ತಿತ್ತು. ಈಗ ಗಗನಚುಂಬಿ ಕಟ್ಟಡಗಳು ಎದ್ದುನಿಂತು ಮಳೆ ನೋಡುವ ಖುಷಿಯನ್ನು ಕಸಿದುಕೊಂಡಿವೆ. ಏಕಪ್ರಕಾರವಾಗಿ ಮಳೆ ಸುರಿಯಲು ತೆರೆದ ಜಾಗಗಳೇ ಇಲ್ಲವೇನೋ ಅನ್ನಿಸುವಂತಾಗಿದೆ. ಋತುಮಾನದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಮಳೆ ಕೂಡ ತನ್ನ ಲಯಬದ್ಧತೆ ಕಳೆದುಕೊಂಡಿದೆ. ಹವೆಯೂ ಸಾಕಷ್ಟು ಬದಲಾಗಿದೆ. ಹಾಗಾಗಿ ಮಳೆ ಹೇಗ್ಹೇಗೋ ಬಂದು ಸುರಿಯುತ್ತಿದೆ. ಮಳೆಯ ಇಂದಿನ ಅವತಾರ ನೋಡುವಾಗ ಸಣ್ಣಗೆ ವಿಷಾದವೂ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.