ADVERTISEMENT

ಸಾಹಿತ್ಯ ಸಾಧನೆ | ಭೀಮಾತೀರದ ‘ಬೆರಗು’

ನಿಂಗಪ್ಪ ಮುದೇನೂರು
Published 28 ಆಗಸ್ಟ್ 2021, 20:30 IST
Last Updated 28 ಆಗಸ್ಟ್ 2021, 20:30 IST
   

ಕನ್ನಡನಾಡಿನ ಎಷ್ಟೊಂದು ನದಿಗಳಿಗೆ ಪಾವಿತ್ರ್ಯದ ಚಹರೆಯಿದೆ. ಕ್ರಿ.ಶ. 9ನೇ ಶತಮಾನದ ಕವಿ ಶ್ರೀವಿಜಯ ನಾಡಿನ ಕುರಿತು ಅಭಿಮಾನದಿಂದ ಮಾತನಾಡುತ್ತಾ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂದಿದ್ದು ನಮ್ಮ ಬಹುತೇಕ ಕವಿಗಳಿಗೆ, ಸಿನಿಮಾ ಸಾಹಿತಿಗಳಿಗೆ ವರವಾಯಿತು. ತಮಿಳು ಸಂಗಂ ಸಾಹಿತ್ಯ, ಕನ್ನಡದ ಕಾವ್ಯ ಜಗತ್ತು ಕಾವೇರಿಯನ್ನು ಸಾಂಸ್ಕೃತಿಕ ಮನೆಮಗಳಂತೆ ಬಿಂಬಿಸಿದವು.

ಇತ್ತ ತುಂಗಭದ್ರೆಯೂ ಅಷ್ಟೆ. ‘ಗಂಗಾ ಸ್ನಾನ ತುಂಗಾ ಪಾನ’ ಎನ್ನುವ ಗಾದೆಯ ಬದುಕು ಮೇಳೈಸಿ ಹಂಪೆಯ ಹರಿಹರನಿಂದ, ದಾಸರ ಸಂಕೀರ್ತನೆಗಳಿಂದ ಹಲವು ಮಹಾತ್ಮೆಗಳಿಗೆ ಒಳಗಾಯಿತು. ಅಷ್ಟೇ ಏಕೆ, ತುಂಗಭದ್ರೆಯ ಕುರಿತು ಹಲವು ಕಾವ್ಯ, ಕಥೆ, ಕಾದಂಬರಿಗಳೇ ರಚನೆಗೊಂಡವು. ನಮ್ಮ ಕೃಷ್ಣೆ, ಗೋದಾವರಿಯರೂ ಕನ್ನಡ, ತೆಲುಗು ಬಾಂಧವ್ಯದಲ್ಲಿ ನಳನಳಿಸಿ ನಮ್ಮ ಬುರ್‍ರಾಕಥಾ ಈರಮ್ಮನೊಡಲ ಕಥನ ಕಾವ್ಯಗಳಲ್ಲಿ ಪ್ರಸ್ತಾಪಗೊಂಡು ಜೀವಸೆಲೆಯಾಗಿ ಹರಿದು ಬಂದರು. ಇಂದಿಗೂ ಕಾವೇರಿ, ತುಂಗಭದ್ರೆ, ನೇತ್ರಾವತಿ, ಕೃಷ್ಣೆ, ಗೋದಾವರಿಯರು, ಗಂಗೆ, ಯಮುನೆ, ಸರಸ್ವತಿಯರು ಹರಸುತ್ತಲೇ ಬಂದಿದ್ದಾರೆ ನಾಡವರನ್ನು, ಈ ದೇಸಿಗರನ್ನು. ಇದು ಭೌತಿಕ ಚಹರೆ ಅಷ್ಟೇ ಅಲ್ಲ, ಸಾಹಿತ್ಯ ಸಂಸ್ಕೃತಿಗಳನ್ನು ಸಂಗಮಿಸುವ ಪರಿಯೂ ಹೌದು. ನಾಗರಿಕತೆಯ ಬದುಕಾಗಲೀ ಮನುಷ್ಯ ಪಾತಳಿಯ ಜೀವಸಂಕುಲವಾಗಲೀ ಬದುಕಿ ಬಾಳಿದ್ದು, ಕಾಲಸಂಘರ್ಷಗಳ ನಡುವೆ ಸಮತೆಯ ಹಾಡ ಕಟ್ಟಿದ್ದು ಇಲ್ಲಿಯೇ.

ಅದೇ ಕನ್ನಡ ನಾಡಿನಲ್ಲಿಯೇ ಬದುಕಿ, ಕನ್ನಡ-ಮರಾಠಿ ಬಾಂಧವ್ಯ ಮೂಡಿಸಿರುವ ಗಡಿನಾಡಿನ ಈ ಚೆಲುವೆ ಭೀಮೆಯ ಒಡಲಿನ ಕುರಿತು ಸಂತಸದ ಹಾಡುಗಳಿಗಿಂತ ದುಃಖ ದುರಂತದ ಕಥೆಗಳೇ ಮೂಡಿನಿಂತಿವೆ! ಭೀಮಾ ತೀರದಲ್ಲಿ, ಭೀಮಾ ತೀರದ ಹಂತಕರು ಎಂದೆಲ್ಲ ಮನುಷ್ಯ ಬಾಳಿನ ಪ್ರೇಮವನ್ನೇ ‘ರಕ್ಕಸ’ ರೂಪದಲ್ಲಿ ಚಿತ್ರಿಸಿದ ಬರವಣಿಗೆಗಳು ಬಂದದ್ದು, ಸಿನಿಮಾಗಳು ಬಂದದ್ದು ನಾಡಿನ ದುರ್ದೈವವೆಂದೇ ಭಾವಿಸಬಹುದು. ಬಡತನ, ಮನುಷ್ಯಸಹಜ ದೌರ್ಬಲ್ಯ, ಸಾಮಾಜಿಕ, ಸಾಮುದಾಯಿಕ ಸಂಗತಿಗಳಿಗೆ ಫ್ಯೂಡಲ್ ಮನೋಭಾವ ಬೆರೆತು ಒಂದೆರಡು ತಲೆಮಾರುಗಳನ್ನೇ ಪಾಪದ ಕೂಪಕ್ಕೆ ತಳ್ಳುವ ಕಾರ್ಯಗಳು ಆತ್ಯಂತಿಕವಾಗಿ ನಡೆದ ಕಾಲಮಾನವೂ ನಮ್ಮ ಕಣ್ಣಮುಂದೆ ಹಾದು ಹೋಯಿತು.

ADVERTISEMENT

ಸಾಹಿತ್ಯದ ಉಪಾಸಕರಾದ ಮಧುರಚೆನ್ನರು ಭೀಮಾ ತೀರದಲ್ಲೇ ಬಾಳಿದ್ದರು. ಇದೇ ನೆಲದಲ್ಲಿ ಜನಿಸಿದ ಸಿಂಪಿ ಲಿಂಗಣ್ಣ, ಗಲಗಲಿ, ರಾನಡೆ, ಜನಪದ ಗೀಗೀಪದದ ಗಾರುಡಿಗ, ಆಶುಕವಿ ಕಡಣಿ ಕಲ್ಲಪ್ಪ, ಲಾವಣಿಕಾರ ಖಾಜಾಬಾಯಿ ಅವರಂತಹವರು ನಾಡಿನ ಸಂಸ್ಕೃತಿಯನ್ನು ಬೆಳಗಿದ್ದು ಕಡಿಮೆ ಸಾಧನೆಯೇ? ಇಲ್ಲಿನ ಸಾಹಿತ್ಯದ ಸಾಧಕರಾದ ಶಂಕರ ಬೈಚಬಾಳ ಅವರನ್ನು, ನಮ್ಮ ಸಿದ್ಧರಾಮ ಉಪ್ಪಿನ ಅವರನ್ನು ಕೇಳಿದರೆ, ಇಲ್ಲಿ ಜನಪದ ರಹಸ್ಯಗಳ ಆಗರವೇ ಇದೆ ಎಂದು ಹೇಳುವುದು ಯಾವ ಅತಿಶಯೋಕ್ತಿಯೂ ಅಲ್ಲ.

ಸ್ವಾತಂತ್ರ್ಯ ಹೋರಾಟಕ್ಕೆ, ಹಲವು ಸಂತರ ಜೀವನಕ್ಕೆ, ಮಕ್ಕಳ ಸಾಹಿತ್ಯದ ಕಣಜಕ್ಕೆ, ಚರಿತ್ರೆ ಶೋಧಿಸುವ ಸಂಶೋಧಕರಿಗೆ, ಹಲವು ವಿದ್ವತ್‌ ಪ್ರತಿಭೆಗಳಿಗೆ ಈ ನೆಲ ದಿವ್ಯ ಸೋಪಾನವಾದರೂ ಇಲ್ಲಿ ಕೆಂಪುರಕ್ತದ ಕಲೆಗಳನ್ನು ಸೃಷ್ಟಿಸಿದ ಅಕ್ಷರಗಳೇ ಜನಪ್ರಿಯಗೊಂಡ ಕಾರಣಕ್ಕೆ ಇಲ್ಲೊಂದು ಅಂಧಕಾರದ ಸುರಂಗವೇ ನಿರ್ಮಾಣವಾಯ್ತು. ಒಂದು ಯುವ ತಲೆಮಾರು ವಿಸ್ಮೃತಿಗೆ ಜಾರುವ ಅಪಾಯಕ್ಕೀಡಾಯ್ತು. ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ನಾಡನ್ನು ವಿಶಿಷ್ಟವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಜೀವಂತಗೊಳಿಸಿದ ಈ ನೆಲದ ಚರಿತ್ರೆಗೆ ಸಣ್ಣ ಊನವಾದದ್ದನ್ನು ನಾವ್ಯಾರೂ ಮರೆತಿಲ್ಲ. ಆಯಿತು, ಗಾಯಗೊಂಡ ತಕ್ಷಣ ಅದನ್ನು ಮಾಯಿಸಲು ಏನೆಲ್ಲಾ ಕಾರ್ಯ, ಸಂಗತಿಗಳು ಜರುಗಿದವು. ‘ಬತ್ತಿರುವ ಭೂಮಿ, ಬಿಕ್ಕುತ್ತಿರುವ ರೈತ’ನೆಂದೋ, ‘ಬತ್ತುತ್ತಿರುವ ಭೀಮೆ, ಉಕ್ಕುತ್ತಿರುವ ವೇದನೆ’ಯೆಂದೋ ನೈಸರ್ಗಿಕವಾಗಿ ಹಾಡಿಕೊಂಡಿದ್ದವರಿಗೆ ಆಗ ಬರಸಿಡಿಲಂತೆ ಬಂದೊದಗಿತ್ತು ಭೀಮಾತೀರದಲ್ಲಿ ಕೊಲೆಗಿಲೆ, ಭೀಮಾ ತೀರದ ಹಂತಕರು. ಇದಿಷ್ಟೇ ಈ ನಾಡಿನ, ಈ ನೆಲದ ಸದ್ಯದ ಇತಿಹಾಸ ಎಂದ ಮಹನೀಯರಿಗೆ ಉತ್ತರವಾಗಿ ಭೀಮಾತೀರದ ಜನಪದ ರಶ್ಮಿಗಳೇ ಕಣ್ಣಮುಂದೆ ಹಾದು ಬಂದವು.

ನಾವು ಬರೆಯಬೇಕಾದ ಚರಿತ್ರೆ, ಸಾಂಸ್ಕೃತಿಕ ನಕ್ಷೆ, ವಿವರಣೆಯುಳ್ಳ ಇತಿಹಾಸ ಸಾಗಬೇಕಾದುದು, ನಮ್ಮ ಪೂರ್ವಸೂರಿ ಕವಿರಾಜಮಾರ್ಗಕಾರ ಶ್ರೀವಿಜಯ ಹೇಳಿಕೊಟ್ಟ ವಿವೇಕದ ಬೆಳಕಿನಲ್ಲಿ. ಈ ನೆಲದ ಅಂತಹ ವಿವೇಕದ ಕಾರ್ಯವನ್ನು ಛಲದಿಂದ ಮುನ್ನಡೆಸುತ್ತಿರುವ ಯುವಕ ರಮೇಶ ಕತ್ತಿ. ಭೀಮೆಯ ಒಡಲಿನಿಂದಲೇ ಹರಡಿನಿಂತ ಸಮತೆ ಹೂವಿನಂತಹ ಸಹೃದಯ ಬರಹಗಾರನೀತ. ಕಾವ್ಯ ಬರೆಯಲು ಶ್ರೀವಿಜಯನಿಗೆ ನೃಪತುಂಗನ ಆಸರೆ,
ಒಪ್ಪಿಗೆಯಿತ್ತು. ಆದರೆ, ಈ ಯುವಕ
ನಿಗೆ ತನ್ನ ಸುತ್ತಲಿನ ಪರಿಸರವೇ ಪ್ರೇರಣೆ ಮತ್ತು ಬದುಕು. ಆತನನ್ನು ಕೇಳಿದರೆ ಮುಗ್ಧತೆಯ ಭಾವದಿಂದ ಹೇಳಿದ್ದು, ಸ್ಮರಿಸಿದ್ದು ತನ್ನ ದೊಡ್ಡಪ್ಪ ಶಿವಾನಂದ ಮಾಸ್ತರರನ್ನು. ಈಗ ಪುಟ್ಟ ಬೋಧಿಮರದಂತೆ ಬಿಳಲಾಗಿ ತುಂಬುತ್ತಿರುವ ಈ ‘ಬೆರಗು ಪ್ರಕಾಶ’ನದ ಹುಟ್ಟು-ಪ್ರೇರಣೆಯ ಹಿಂದೆ ಏನೆಲ್ಲಾ ಬದುಕಿನ ಸ್ವಾರಸ್ಯಕರ ಕತೆಗಳಿವೆ.

ದೊಡ್ಡಪ್ಪ, ಮನೆ ಪರಿಸರದಲ್ಲಿ ಹಳಗನ್ನಡ ಕಾವ್ಯ ಓದುತ್ತಿದ್ದದ್ದು, ಭಾಮಿನಿ ಷಟ್ಪದಿಯಲ್ಲಿ ಕೆಂಭಾವಿ ಭೋಗಣ್ಣ, ಪುಂಡ ಲಿಂಗೇಶ್ವರ ಪುರಾಣ ಬರೆದದ್ದು, ಸತ್ಯವಾನ ಸಾವಿತ್ರಿ ನಾಟಕವನ್ನು ಬರೆದು ಆಡಿಸಿದ ಪ್ರೇರಣೆ ಒಂದೆಡೆಯಾದರೆ, 1996ರ ಸಿಂದಗಿ ತಾಲ್ಲೂಕು ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ರಾಜ್ಯ ಮಟ್ಟದಲ್ಲಿ ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಹ ಮತ್ತು ಪ್ರಕಾಶನದಂತಹ ಪುಸ್ತಕ ಸಂಸ್ಕೃತಿಯ ಪ್ರೀತಿಗೆ ವಿವೇಕದ ದಾರಿ ತೆರೆದಿದ್ದು ಇನ್ನೊಂದೆಡೆ.

ಬೆರಗು ಪ್ರಕಾಶನ ಹುಟ್ಟುಹಾಕಿ, ಇಂತಹ ದುರಿತ ಕಾಲಮಾನದಲ್ಲಿ ಆತ ಪ್ರಕಟಿಸಿದ ಕೃತಿಗಳ ಸಂಖ್ಯೆ ಬರೋಬ್ಬರಿ ಐವತ್ತು! ಒಂದು ವಿಶ್ವವಿದ್ಯಾಲಯವೋ ಅಕಾಡೆಮಿಯೋ ಪ್ರಾಧಿಕಾರವೋ ಮಾಡಬಹುದಾದ ಕೆಲಸವನ್ನು ದಣಿವರಿಯದ ಈ ಪಯಣಿಗ ನಾಲ್ಕೇ ವರ್ಷಗಳಲ್ಲಿ ಐವತ್ತು ವೈವಿಧ್ಯಮಯ ಕೃತಿಗಳನ್ನು ಪ್ರಕಟಿಸುವ ಮೂಲಕ ಹಲವು ಕನ್ನಡಂಗಳ ಚೆಲುವನ್ನು ಬಿತ್ತಿದಾತ. ನಾಡಿನ ಬಹುಶ್ರುತ ಲೇಖಕರನ್ನು ಒಟ್ಟಾಗಿಸುವ ಪ್ರೀತಿಯ ಕಾರ್ಯವನ್ನು ಮಾಡಿದಾತ. ಈತ ಮಾಡಿದ ಮೊದಲ ಕಾರ್ಯ ನೆಲದ ಧೀಮಂತಿಕೆಯನ್ನು ಸಾಹಿತ್ಯಿಕವಾಗಿ ಎತ್ತರಿಸಿದ್ದು. ಈಗ ಬಿಡುಗಡೆಗೊಳ್ಳುತ್ತಿರುವ ಇಪ್ಪತ್ತೆಂಟು ಕೃತಿಗಳಲ್ಲಿ ಹಲವು ಈ ನೆಲದ ಅಂತಃಸತ್ವದ ಸ್ಮೃತಿ ಬರಹಗಳಿವೆ. ತನ್ನ ದೊಡ್ಡಪ್ಪನ ಕಾವ್ಯವನ್ನೂ ಆತ ಪ್ರಕಟಿಸುವುದನ್ನು ಮರೆತಿಲ್ಲ.

ಯಾರ ಸ್ಮರಣೆಯಲ್ಲಿ ಈ ಪ್ರಕಾಶನ ಸಂಸ್ಥೆ ಬೆಳೆಯಿತೋ, ಅದೇ ನಾಡಿನ ಬಹುದೊಡ್ಡ ಸಂಶೋಧಕ, ವಚನ ಸಾಹಿತ್ಯಕ್ಕೆ ತಾತ್ವಿಕ ಸಂಶೋಧನೆಯ ರೂಪ ನೀಡಿ ನಮ್ಮಿಂದ ಮರೆಯಾದ ಇದೇ ಮಣ್ಣಿನ ಫಲವತ್ತಾದ ಬನಿ, ಹಿರಿಯಜೀವ ಡಾ. ಎಂ. ಎಂ. ಕಲಬುರ್ಗಿಯವರ ನೆನಪಿನಲ್ಲಿ ಪ್ರತೀ ವರ್ಷ ಮಾಡುವ ಈ ಶ್ರಮದಾಯಕ ಕಾರ್ಯಕ್ಕೆ ಈಗ ನಾಡೇ ಬೆರಗಾಗಿದೆ. ಗೀಗಿ ಗಾರುಡಿಗ ಕಡಣಿ ಕಲ್ಲಪ್ಪನ ಕುರಿತಾದ ಕೃತಿಯನ್ನು ರಮೇಶ ಮೊದಲು ಪ್ರಕಟಿಸುವ ಮೂಲಕ ತನ್ನದೂ ಒಂದು ಬೀಜರೂಪಿ ಪ್ರಕಾಶನ ಆರಂಭವಾಯಿತು ಎಂಬ ಆತ್ಮವಿಶ್ವಾಸ ತಂದುಕೊಂಡ. ಪ್ರಕಾಶನ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿರುವುದು ಆತನ ಪತ್ನಿ ವಿಜಯಲಕ್ಷ್ಮಿ. ಆಕೆ ಸಾಹಿತ್ಯದ ನಿಜವಾದ ಪರಿಚಾರಿಕೆ ಎಂದರೆ ತಪ್ಪಾಗಲಿಕ್ಕಿಲ್ಲ.

ನೆಲದ ಮರೆಯ ನಿಧಾನದಂತೆ ಆರಂಭವಾದ ಈ ಸಾಹಿತ್ಯಯಾನ, ನಾವು ನಮ್ಮ ಸಾಧಕರೆಂದು ತನ್ನ ನೆಲಮೂಲ ಸಂಸ್ಕೃತಿಯ ಚಹರೆಗಳನ್ನು ಗುರುತಿಸುವ ಬಹುದೊಡ್ಡ ಪ್ರಯತ್ನ ಮಾಡಿದ್ದು ಪ್ರಾದೇಶಿಕತೆಯ ದೃಷ್ಟಿಯಿಂದ ಮಹತ್ವದ್ದು ಮತ್ತು ಇದು ನಾಡಿನ ಅಭಿಮಾನದ ದ್ಯೋತಕ. ನಮ್ಮ ರಾಜಕಾರಣ ಎಷ್ಟೇ ಗಡಿಗಳನ್ನು, ತಾಲ್ಲೂಕುಗಳನ್ನು, ಜಿಲ್ಲೆಗಳನ್ನು ಪ್ರಾದೇಶಿಕವಾಗಿ ವಿಭಾಗಿಸಿದರೂ ಜನಪದ ಮೂಲ ಸ್ಥಳನಾಮಗಳನ್ನೇ ಪಲ್ಲಟಿಸಿದರೂ ಅದರ ಜೀವ ಬೇರುಗಳ ತಂತುಗಳನ್ನು ಕಡಿಯಲಾಗದು. ಕತ್ತಿಯಂತಹ ನವತರುಣರು ಇದನ್ನು ಸಾಂಸ್ಕೃತಿಕವಾಗಿ ಬೆಸೆಯಬಲ್ಲರು. ಮಾರ್ಗದರ್ಶಕ ಎಚ್.ಟಿ. ಪೋತೆ ಹಾಗೂ ಸಿದ್ಧರಾಮ ಉಪ್ಪಿನ ಅವರಂತಹ ಹಿರಿಯರ ಚೈತನ್ಯವನ್ನು ಜೊತೆಗಿಟ್ಟುಕೊಂಡು ಏಕಲವ್ಯನಂತೆ ಸಾಗುವ ಇವರ ಪರಿಯೇ ನನಗಂತೂ ವಿಸ್ಮಯ!

ಈಗ ಒಂದೇ ಸೂರಿನಡಿ ನಾಡಿನ ಇಪ್ಪತ್ತೆಂಟು ಕೃತಿಗಳು ಬೆಳಕು ಕಾಣುತ್ತಿವೆ. ಹೂಲಿ ಶೇಖರ, ಸಂಗಮೇಶ ಉಪಾಸೆ, ಪುಂಡಲೀಕ ಕಲ್ಲಿಗನೂರು, ಶಂಕರ ಬೈಚಬಾಳ, ರಾಜಕುಮಾರ ಬಡಿಗೇರ, ಉಪ್ಪಿನ ಮುಂತಾದ ಹಿರಿಯರ ಕೃತಿಗಳಿಂದ ಹಿಡಿದು, ಕಿರಿಯ ಬರಹಗಾರ ಮಂಜುನಾಥನವರೆಗೆ ಈ ಸಾಹಿತ್ಯದ ಸುಗಂಧ ಹರಡಿ ನಿಂತಿದೆ. ಜೊತೆಗೆ ಹಲವು ಲೇಖಕರ ಚೊಚ್ಚಲ ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯದ ಮುಖ್ಯವಾಹಿನಿಗೆ ಅವರನ್ನು ಕರೆತರುವ ಕೈಂಕರ್ಯವಂತೂ ಇನ್ನಷ್ಟು ಶ್ಲಾಘನೀಯ.

ಪುಸ್ತಕ ಪ್ರಕಾಶನವು ಪುಸ್ತಕದ ಉದ್ಯಮವಾದ ಈ ಹೊತ್ತಿನಲ್ಲಿ ಇದನ್ನೆಲ್ಲ ಪ್ರಾಣವಾಯುವಿನಂತೆ ಕಾಪಾಡುವ ಶಕ್ತಿ ಖಂಡಿತ ರಮೇಶ ಅವರಂಥ ಯುವ ಗೆಳೆಯರಿಗಿದೆ. ವಿಜಯಲಕ್ಷ್ಮಿ ಅವರಂತಹ ಛಲಗಾತಿ ಹೆಣ್ಣು ಮಗಳಿಗಿದೆ. ನಾಡಿನ ಲೇಖಕರನ್ನು ತನ್ನ ಪ್ರದೇಶಕ್ಕೆ ಆಹ್ವಾನಿಸಿ, ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಅವರನ್ನು ಸನ್ಮಾನಿಸಿ, ಅವರವರ ಕೃತಿಗಳ ಮೂಲಕ ಅವರನ್ನು ಬೀಳ್ಕೊಡುವ ಈ ಕಾರ್ಯ ಸಾಹಿತ್ಯದ ತವರ ಪ್ರೀತಿಯಂತಹ ಕಾರ್ಯ. ಆಗಸ್ಟ್ 30ರಂದು ಕಡಣಿಯಲ್ಲಿ ಒಂದು ಮರೆಯಲಾಗದ ಸಾಹಿತ್ಯದ ಸಾಂಸ್ಕೃತಿಕ ಹಬ್ಬ. ಕೋವಿಡ್‌ನಂತಹ ಸಂಕಷ್ಟದ ಕಾಲದ ನೋವನ್ನು ಈ ಸಾಹಿತ್ಯದ ಗೆಳೆಯ, ಕನ್ನಡದ ಹಿತೈಷಿ ಕಡಿಮೆ ಮಾಡಬಲ್ಲ ಎಂಬುದಕ್ಕೆ ಈ ನುಡಿತೇರ ಯಾನವೇ ಸಾಕ್ಷಿ.

ಬೆರಗು ಸಾಹಿತ್ಯ ಪ್ರಶಸ್ತಿ ಮೂಡಿಸಿದ ಸಂಚಲನ ಕೂಡ ದೊಡ್ಡದು. ಈ ವರ್ಷ ಧೀರೇಂದ್ರ ನಾಗರಹಳ್ಳಿಯವರ ‘ಹಳ್ಳದ ದಂಡೆ ಮತ್ತು ಕಳ್ಳಿ ಸಾಲು’ ಎಂಬ ಕಥಾ ಸಂಕಲನಕ್ಕೆ ಈ ಪ್ರಶಸ್ತಿ ದೊರೆತಿದೆ. ಬೆರಗು ಪ್ರಕಾಶನ ಈಗ ರಮೇಶ್, ವಿಜಯಲಕ್ಷ್ಮಿ ಅವರದಲ್ಲ. ಇದು ಈ ನಾಡಿನದು, ಈ ಪ್ರಕಾಶನದ ಪ್ರೀತಿ, ಅಭಿಮಾನ ಕಟ್ಟಿಕೊಂಡಿರುವ ಲೇಖಕರದು. ಇದನ್ನು ಕರುಳರಿತು ಬಾಳಿಸಬೇಕಾದಂಥವರು ಅವರೇ. ಈ ಬೆರಗು ಬೆಳೆಯಬೇಕು. ನಾಡಿನ ತುಂಬಾ ಸಾಹಿತ್ಯದ ಬೆರಗನ್ನು ಮೂಡಿಸುವ ಕೆಲಸವನ್ನು ಮುಂದುವರಿಸಬೇಕು ಎಂಬುದಷ್ಟೇ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.