ADVERTISEMENT

ಮರಳಿನ ಸಮಾಧಿಗೆ ಬೂಕರ್‌

ಸುಮಂಗಲಾ
Published 28 ಮೇ 2022, 19:30 IST
Last Updated 28 ಮೇ 2022, 19:30 IST
ಗೀತಾಂಜಲಿ ಶ್ರೀ
ಗೀತಾಂಜಲಿ ಶ್ರೀ   

ಬೂಕರ್‌ನ ಹದಿನೇಳು ವರ್ಷಗಳ ಇತಿಹಾಸದಲ್ಲಿ ಹಿಂದಿ ಕಾದಂಬರಿಗೆ ದಕ್ಕಿದ ಮೊತ್ತಮೊದಲ ಪ್ರಶಸ್ತಿ ಇದು, ಗೀತಾಂಜಲಿ, ಬೂಕರ್‌ ಪಡೆದ ಮೊದಲ ಭಾರತೀಯರು ಕೂಡ. ಈ ಕಾದಂಬರಿಯ ಇನ್ನೊಂದು ವಿಶೇಷವೆಂದರೆ ಕಥೆಯ ಕೆಲವು ಭಾಗಗಳನ್ನು ಯಾರಾದರೂ, ಯಾವುದಾದರೂ ವಸ್ತು ನಿರೂಪಿಸಿರುವುದು... ಹಕ್ಕಿ, ಚಿಟ್ಟೆ, ಗೋಡೆ, ಬಾಗಿಲು, ರಸ್ತೆ ಎಲ್ಲವೂ ಕಥೆಯನ್ನು ನಿರೂಪಿಸುತ್ತವೆ. ಅಷ್ಟೇಕೆ ಕಥಾಪಾತ್ರಗಳಲ್ಲಿ ಒಂದಲ್ಲ, ಕಥೆಗೆ ಸೇರಿಯೇ ಇಲ್ಲ, ಆದರೂ ಆ ಕ್ಷಣಕ್ಕೆ ಘಟನೆ ನಡೆದ ಕ್ಷಣಕ್ಕೆ ಅಲ್ಲಿದ್ದೆ ಎಂದು ಕಥೆ ನಿರೂಪಿಸುತ್ತ, ಹೀಗೆ ಸೇರಿಕೊಂಡಿದ್ದಕ್ಕೆ ಮನ್ನಿಸಿ ಎಂದು ಕೇಳುವ ಪಾತ್ರವೂ ಕಾದಂಬರಿಯಲ್ಲಿದೆ.

‘ಇಲ್ಲ, ನಾ ಏಳಲ್ಲ. ನಾನೇಳೋದಿಲ್ಲ’

ಮುದ್ದೆಯಾಗಿದ್ದ ರಗ್ಗಿನೊಳಗಿಂದ ಮುಲುಕಿದ್ದು ಕೇಳಿತು.

ADVERTISEMENT

‘ಇಲ್ಲ, ಈಗಂತೂ ನಾ ಏಳೋದಿಲ್ಲ’

ಈ ಮಾತು ಅವರನ್ನು ಅಲುಗಾಡಿಸಿತು. ಮಕ್ಕಳು ಇನ್ನಷ್ಟು ಒತ್ತಾಯಿಸತೊಡಗಿದರು. ಅವರಿಗೆ ಭಯವಾಯಿತು. ಅವರ ಪ್ರೀತಿಯ ಅಮ್ಮ. ಅಪ್ಪ ತೀರಿಕೊಂಡ, ಜೊತೆಗೆ ಅವಳ ಉಸಿರನ್ನೂ ತೆಗೆದುಕೊಂಡು ಹೋದ.

‘ನಿದ್ರೆ ಮಾಡ್ತಾನೆ ಇರಬೇಡ, ಏಳಮ್ಮ’

‘ನಿದ್ರೆ ಮಾಡ್ತಾನೆ ಇರತಾಳೆ. ಮಲ್ಕೊಂಡೇ ಇರತಾಳೆ. ಕಣ್ಣು ಮುಚ್ಚಿಕೊಂಡು. ಅವರಿಗೆ ಬೆನ್ನು ಹಾಕಿ’ ಪಿಸಿಪಿಸಿ ಮಾತು ಶುರು.

ಅಪ್ಪ ಇದ್ದಾಗ, ಅವರನ್ನು ನೋಡಿಕೊಳ್ಳೋದರಲ್ಲೆ ಮುಳುಗಿದ್ದಳು. ಎಷ್ಟೇ ಸುಸ್ತಾಗಿದ್ದರೂ ಲಗುಬಗೆಯಿಂದ ಓಡಾಡುತ್ತ, ಕೆಲಸ ಮಾಡುತ್ತ, ಜೀವಂತಿಕೆಯಿಂದ ಪುಟಿಯುತ್ತ, ಕಿರಿಕಿರಿ ಮಾಡುತ್ತ, ಸಮಾಧಾನಿಸುತ್ತ, ಉಸಿರಿನ ಮೇಲೆ ಉಸಿರು ತೆಗೆದುಕೊಳ್ಳುತ್ತ ನಿಭಾಯಿಸುತ್ತಿದ್ದಳು.

ಯಾಕಂದ್ರೆ ಎಲ್ಲರ ಉಸಿರು ಅವಳೊಳಗೆ, ಎಲ್ಲರ ಉಸಿರಾಟವೂ ಅವಳ ಎದೆಬಡಿತದಲ್ಲಿತ್ತು.

ಮತ್ತೆ ಈಗ ಹೇಳ್ತಿದಾಳೆ, ‘ನಾ ಏಳಲ್ಲ’ ಅಂತ. ಅವಳ ಬದುಕಿನ ಉದ್ದೇಶವೇ ಅಪ್ಪನಾಗಿದ್ದ. ಅವನು ಹೋಗಿದ್ದೇ ಅದೂ ಹೋಯಿತು.

‘ಇಲ್ಲಮ್ಮಾ’, ಮಕ್ಕಳು ಹಟ ಮಾಡತೊಡಗಿದರು, ‘ಹೊರಗೆ ನೋಡು, ಬಿಸಿಲು ಚೆನ್ನಾಗಿದೆ, ಏಳು, ಅಲ್ಲೇ ಇದೆ ನಿನ್ನ ಕೋಲು, ಏಳು, ತಗೋ ಅದನ್ನು, ಚೂಡಾ ತಿನ್ನು, ಬಟಾಣಿ ಹಾಕಿದಾರೆ. ಬಹುಶಃ ಭೇದಿಯಾಗ್ತಿದೆಯೇನೋ, ಸಾಸಿವೆ ಪುಡಿ ಕೊಡಿ’.

‘ಇಲ್ಲ... ನಾನೇಳಲ್ಲ... ಇಲ್ಲಪ್ಪಾ ಇಲ್ಲ...’ ಅಮ್ಮ ಕುಸುಕುಸು ಮಾಡಿದಳು.

ಪಾಪ, ದಣಿದು ಹೋಗಿದಾಳೆ, ಒಬ್ಬಳೇ ಸೋತು ಹೋಗಿದಾಳೆ. ಅವಳನ್ನ ಎಬ್ಬಿಸಿ, ಮಾತಾಡಿಸಿ, ಅವಳ ಮನಸ್ಸು ತಿರುಗಿಸಿ. ಎಲ್ಲರ ಅನುಕಂಪವು ಗಂಗೆಯ ಹಾಗೆ ಹರಿಯುತ್ತ, ಅಮ್ಮನ್ನ ಬೆನ್ನನ್ನು ತೋಯಿಸಲಾರಂಭಿಸಿತು.

***

ಇದು ಗೀತಾಂಜಲಿ ಶ್ರೀಯವರು ‘ರೆತ್ ಸಮಾಧಿ’ ಕಾದಂಬರಿಯಲ್ಲಿ ಚಿತ್ರಿಸಿದ ಅಜ್ಜಿ. ಭಾರತ ಹಾಗೂ ಅದರ ವಿಭಜನೆಯ ಹಲವು ಪದರದ ಕಥಾನಕವನ್ನು ಹೆಣೆದಿರುವ ‘ರೆತ್ ಸಮಾಧಿ’ ಕಾದಂಬರಿಯನ್ನು ಅಷ್ಟೇ ಸಮರ್ಥವಾಗಿ ಇಂಗ್ಲಿಷಿಗೆ (Tomb of Sand) ಅನುವಾದಿಸಿದವರು ಡೈಸಿ ರಾಕ್‍ವೆಲ್‍.

‘ಈ ಅಜ್ಜಿ ಹಾಸಿಗೆ ಹಿಡಿದಿದ್ದಾಳೆ, ಬದುಕುವ ಇಚ್ಛೆಯೇ ಇಲ್ಲದೇ ಇನ್ನಷ್ಟು ಗೋಡೆಯತ್ತ ಸರಿದು, ಗೋಡೆಯೊಳಗೇ ಸೇರಿಹೋಗುತ್ತಾಳೇನೋ ಎಂಬಂತೆ ಮಲಗಿದ ಅಜ್ಜಿಯ ಚಿತ್ರ ನಿಧಾನಕ್ಕೆ ನನ್ನೊಳಗನ್ನು ಆವರಿಸಿತು. ಕುತೂಹಲ ಹುಟ್ಟಿಸಿತು. ಅವಳಿಗೆ ಬದುಕು ಸಾಕಪ್ಪಾ ಎನ್ನಿಸಿದೆ, ಹಿಂಗಾಗಿ ಎಲ್ಲರಿಗೆ ಬೆನ್ನು ತಿರುಗಿಸಿದ್ದಾಳೆ. ಅಥವಾ ಬದುಕಿನ ಬೇರೊಂದು ಇನ್ನಿಂಗ್ಸ್‌ಗೆ ತನ್ನನ್ನು ತಾನು ಸಜ್ಜುಗೊಳಿಸುತ್ತಿದ್ದಾಳಾ... ಗೋಡೆಯೊಳಗೆ ಮರೆಯಾಗಿಬಿಡುವ ಬಯಕೆಯಿರುವಂತೆ ಕಾಣಿಸಿದರೂ, ಅವಳು ಎಲ್ಲವನ್ನು ಕೊನೆಗಾಣಿಸಲು ಬಯಸಿದ್ದಾಳಾ ಅಥವಾ ಗೋಡೆಯೊಳಗೆ ತೂರಿ, ಇನ್ನೊಂದು ಕಡೆಯಿಂದ ಹೊರಬರೋದಕ್ಕೆ ಬಯಸಿದಾಳಾ?’ ಈ ಪ್ರಶ್ನೆಯ ಜಾಡುಹಿಡಿದು ಹೊರಟ ಗೀತಾಂಜಲಿ ಹಿಂದಿಯಲ್ಲಿ ರಚಿಸಿದ್ದ ರೆತ್‌ ಸಮಾಧಿ ಕಾದಂಬರಿಯನ್ನು ಇದೀಗ
ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಅರಸಿಬಂದಿದೆ.

ಈ ಎಂಬತ್ತು ವರ್ಷದ ಅಜ್ಜಿ, ಗಂಡ ಸತ್ತ ನಂತರ ಖಿನ್ನತೆಗೆ ಜಾರಿದವಳು, ಮನೆ, ಮಕ್ಕಳಿಗೆ ಬೆನ್ನುಮಾಡಿ ಗೋಡೆಗೆ ಮುಖಮಾಡಿದವಳು, ಗೋಡೆಯಿಂದ ತೂರಿಬಂದಳೇನೋ ಎಂಬಂತೆ ಪುಟಿದೇಳುತ್ತಾಳೆ, ಆದರೆ ಅವಳದೀಗ ಬೇರೆಯದೇ ಚಹರೆ. ಎಲ್ಲ ಗಡಿಗಳನು ಮೀರಿದವಳಂತೆ ತನ್ನ ಮೂಲನೆಲೆಯಾಗಿದ್ದ ಪಾಕಿಸ್ತಾನಕ್ಕೆ ಹೋಗುತ್ತಾಳೆ. ಅವಳೊಂದಿಗೆ ಕಾದಂಬರಿಯೂ, ಅಜ್ಜಿ ಮತ್ತು ಅವಳ ಹಲವು ಬಾಂಧವ್ಯಗಳನ್ನು ಶೋಧಿಸುತ್ತ ಹೋಗುತ್ತದೆ.

ಬೂಕರ್‌ನ ಹದಿನೇಳು ವರ್ಷಗಳ ಇತಿಹಾಸದಲ್ಲಿ ಹಿಂದಿ ಕಾದಂಬರಿಗೆ ದಕ್ಕಿದ ಮೊತ್ತಮೊದಲ ಪ್ರಶಸ್ತಿ ಇದು, ಗೀತಾಂಜಲಿ, ಬೂಕರ್‌ ಪಡೆದ ಮೊದಲ ಭಾರತೀಯರು ಕೂಡ. ಈ ಕಾದಂಬರಿಯ ಇನ್ನೊಂದು ವಿಶೇಷವೆಂದರೆ ಕಥೆಯ ಕೆಲವು ಭಾಗಗಳನ್ನು ಯಾರಾದರೂ, ಯಾವುದಾದರೂ ವಸ್ತು ನಿರೂಪಿಸಿರುವುದು... ಹಕ್ಕಿ, ಚಿಟ್ಟೆ, ಗೋಡೆ, ಬಾಗಿಲು, ರಸ್ತೆ ಎಲ್ಲವೂ ಕಥೆಯನ್ನು ನಿರೂಪಿಸುತ್ತವೆ. ಅಷ್ಟೇಕೆ ಕಥಾಪಾತ್ರಗಳಲ್ಲಿ ಒಂದಲ್ಲ, ಕಥೆಗೆ ಸೇರಿಯೇ ಇಲ್ಲ, ಆದರೂ ಆ ಕ್ಷಣಕ್ಕೆ ಘಟನೆ ನಡೆದ ಕ್ಷಣಕ್ಕೆ ಅಲ್ಲಿದ್ದೆ ಎಂದು ಕಥೆ ನಿರೂಪಿಸುತ್ತ, ಹೀಗೆ ಸೇರಿಕೊಂಡಿದ್ದಕ್ಕೆ ಮನ್ನಿಸಿ ಎಂದು ಕೇಳುವ ಪಾತ್ರವೂ ಕಾದಂಬರಿಯಲ್ಲಿದೆ.

ತುಂಬ ಅನನ್ಯವಾದ ನಿರೂಪಣಾ ಶೈಲಿ, ಹಿಂದಿ ಭಾಷೆಯನ್ನು ಮುರಿದು ಕಟ್ಟಿರುವ ವಿಧಾನ, ರೂಪಕಗಳಲ್ಲಿ ಚಿತ್ರವತ್ತಾಗಿ ಕಟ್ಟಿಕೊಟ್ಟಿರುವ ರೀತಿ, ಹಲವು ಪದರಗಳಲ್ಲಿ ಸಾಗುವ ಕಥನವನ್ನು ಹಿಡಿದಿಟ್ಟಿರುವ ಬಿಗಿಯಾದ ಬಂಧ ಮೂಲ ಹಿಂದಿ ಕಾದಂಬರಿಯ ವಿಶೇಷ. ಹಿಂದಿಯ ಪುಟ್ಟ ಪುಟ್ಟ ವಾಕ್ಯಗಳು ನೇರವಾಗಿ ಹೃದಯಕ್ಕೆ ಇಳಿಯುತ್ತವೆ. ಅನುವಾದದಲ್ಲಿ ಆ ಸೊಬಗು ಇಲ್ಲ. ಇಂಗ್ಲಿಷ್‌ನಲ್ಲಿ ಸುಮಾರು 700 ಪುಟಗಳ ಈ ಸುದೀರ್ಘ ಕಾದಂಬರಿ ಸುತ್ತಲ ಜಗತ್ತಿನ ಸಮೃದ್ಧ ಬಹುತ್ವವನ್ನು, ಹಲವಾರು ಸಂಗತಿಗಳು ಏಕತ್ರವಾಗಿ ಬೆರೆತು ಒಂದಾಗಿರುವುದನ್ನು ಹೇಳುತ್ತಲೇ, ದೇಶಗಳ ನಡುವಣ ಗಡಿಗಳ ಭ್ರಮೆಯನ್ನು, ಅಸಂಗತತೆಯನ್ನು ಚಿತ್ರಿಸುತ್ತದೆ.

ತಮಗೆ ಈ ಕಾದಂಬರಿ ಬರೆಯಲು ಮೊದಲು ಸ್ಫೂರ್ತಿಯಾಗಿದ್ದು ಏನು ಎಂಬುದಕ್ಕೆ ಗೀತಾಂಜಲಿ ಹೇಳಿದ್ದು, ‘ಎ.ಕೆ. ರಾಮಾನುಜನ್ ಒಂದು ಕಡೆ ಹೇಳಿದ್ದಾರೆ, ನೀವು ನಿಮ್ಮ ಕವನಗಳನ್ನು ಆರಿಸಿಕೊಂಡು, ಬೆನ್ನಟ್ಟುವುದಿಲ್ಲ. ನೀವೊಂದು ಕಡೆಗಿದ್ದಾಗ, ಅದು ತನ್ನಷ್ಟಕ್ಕೆ ಜರುಗುತ್ತೆ ಅಂತ. ನೀವು ಬರಹಗಾರರಾಗಿದ್ದರೆ, ಎಲ್ಲಾ ಸಮಯದಲ್ಲಿಯೂ ಕಥೆಗಳು ನಿಮ್ಮ ಇಂದ್ರಿಯಗಳನ್ನು ಆವರಿಸಿಕೊಂಡಿರುತ್ತವೆ. ಎಲ್ಲವೂ ಕಥೆಯೇ ಹಾಗೂ ಪ್ರತಿಯೊಂದೂ ಏನೋ ಕಥೆಯನ್ನು ಹೇಳುತ್ತೆ ಅಂತ ನಿಮಗರಿವಾಗುತ್ತದೆ. ನಿಮಗೆ ಅದು ಉಸಿರಾಟದಷ್ಟೇ ಸಹಜವಾಗುತ್ತೆ, ಅಥವಾ ಅದೇ ನಿಮ್ಮ ಉಸಿರಾಗುತ್ತೆ. ಆಮೇಲೆ ನೀವು ಕಾಯ್ತೀರಿ... ನೀವು ಏಕಾಂಗಿಯಾಗಿ, ಸ್ವೀಕರಿಸಲು ಸಿದ್ಧವಾಗಿದ್ದಾಗ ಸ್ಫೂರ್ತಿದೇವತೆ ನಿಮ್ಮೊಳಗನ್ನು ಆವರಿಸಿಕೊಳ್ತಾಳೆ... ಯಾವುದೋ ಸಂಗತಿ ಪ್ರಚೋದಿಸುತ್ತೆ... ಕಥೆ ನಿಧಾನವಾಗಿ, ನಿಶ್ಚಿತವಾಗಿ ಬಿಚ್ಚಿಕೊಳ್ತಾ ಹೋಗುತ್ತೆ’.

ಉತ್ತರಪ್ರದೇಶದ ಮೈನ್‍ಪುರಿಯಲ್ಲಿ 1957ರಲ್ಲಿ ಹುಟ್ಟಿದ ಗೀತಾಂಜಲಿಯವರು ಬೆಳೆದಿದ್ದು ಅದೇ ರಾಜ್ಯದ ವಿವಿಧ ನಗರಗಳಲ್ಲಿ. ತಂದೆ ಸರ್ಕಾರಿ ಅಧಿಕಾರಿ. ಓದಿದ್ದು ಇಂಗ್ಲಿಷ್‌ ಮಾಧ್ಯಮದ ಶಾಲೆಗಳಲ್ಲಾದರೂ ಆ ಕಾಲಕ್ಕೆ ಇಂಗ್ಲಿಷ್‌ನಲ್ಲಿ ಮಕ್ಕಳ ಪುಸ್ತಕಗಳು ಹೆಚ್ಚು ಸಿಗುತ್ತಿರಲಿಲ್ಲವಾದ್ದರಿಂದ ಹಿಂದಿ ಪುಸ್ತಕಗಳನ್ನು ಓದುತ್ತಿದ್ದರು. ಜೊತೆಗೆ ಕಿವಿಯ ಮೇಲೆ ಬೀಳುತ್ತಿದ್ದ ಆಡುನುಡಿಯ ಹಿಂದಿ. ಹೀಗಾಗಿ ಹಿಂದಿಯಲ್ಲೇ ಬರವಣಿಗೆ ಆರಂಭಿಸಿದ ಗೀತಾಂಜಲಿಯವರ ಮೊದಲ ಕಥಾ ಸಂಕಲನ ಅನುಗೂಂಜ್ ಪ್ರಕಟವಾಗಿದ್ದು 1991ರಲ್ಲಿ.

ಉತ್ತರಭಾರತದ ಮಧ್ಯಮ ವರ್ಗದ ಕುಟುಂಬವೊಂದರ ಮೂರು ತಲೆಮಾರುಗಳ ಹೆಂಗಸರು, ಅವರ ಸುತ್ತಲಿರುವ ಗಂಡಸರ ಸುತ್ತ ಹೆಣೆದ ಮೊದಲ ಕಾದಂಬರಿ ‘ಮಾಯಿ’ ತುಂಬ ಪ್ರಸಿದ್ಧವಾಯಿತಲ್ಲದೇ, ಫ್ರೆಂಚ್, ಜರ್ಮನ್, ಸೆರ್ಬಿಯನ್, ಕೊರಿಯನ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದವಾಯಿತು. ಅದರ ಇಂಗ್ಲಿಷ್‌ ಅನುವಾದಕ್ಕೆ ಸಾಹಿತ್ಯಅಕಾಡೆಮಿ ಅನುವಾದ ಪ್ರಶಸ್ತಿಯೂ ದಕ್ಕಿದೆ. 2006ರಲ್ಲಿ ಪ್ರಕಟಗೊಂಡ ಇನ್ನೊಂದು ಕಾದಂಬರಿ ‘ಖಾಲಿ ಜಗಹ್’ ಕೂಡ ಹಲವು ಭಾಷೆಗಳಿಗೆ ಅನುವಾದಗೊಂಡಿದೆ.

ಬೂಕರ್‌ ಎಂಬ ತೂಕದ ಪ್ರಶಸ್ತಿ!

‘ಮ್ಯಾನ್ ಗ್ರೂಪ್‍’ನಿಂದ ಕೊಡಲಾಗುತ್ತಿದ್ದ ಈ ಪ್ರಶಸ್ತಿಯನ್ನು 2005ರಿಂದ 2015ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಇಂಗ್ಲಿಷ್‌ನಲ್ಲಿ ಪ್ರಕಟಿತವಾದ ಅಥವಾ ಇಂಗ್ಲಿಷ್‌ನಲ್ಲಿ ಲಭ್ಯವಿರುವ ಯಾವುದೇ ಲೇಖಕರ ಒಂದು ಕೃತಿಗೆ ಕೊಡುತ್ತಿದ್ದರು. ಈಗ ಪ್ರತಿ ವರ್ಷ ಕೊಡುತ್ತಿದ್ದಾರೆ. ಜಗತ್ತಿನ ಯಾವುದೇ ಭಾಷೆಯಲ್ಲಿ ರಚಿತವಾದ ಸಾಹಿತ್ಯಕೃತಿಯು ಇಂಗ್ಲಿಷ್‌ಗೆ ಅನುವಾದಗೊಂಡು, ಇಂಗ್ಲೆಂಡ್‌ ಹಾಗೂ ಐರ್ಲೆಂಡಿನಲ್ಲಿ ಪ್ರಕಾಶನಗೊಂಡಿರಬೇಕು. ಈ ಪ್ರತಿಷ್ಠಿತ ಪ್ರಶಸ್ತಿಯ ಮೊತ್ತವೂ ಕಡಿಮೆಯೇನಲ್ಲ, 50,000 ಪೌಂಡ್‍ (ಸುಮಾರು 49 ಲಕ್ಷ ರೂಪಾಯಿ) ಹಣವನ್ನು ಮೂಲಲೇಖಕ ಹಾಗೂ ಅನುವಾದಕ ಇಬ್ಬರ ನಡುವೆ ಸಮನಾಗಿ ಹಂಚುತ್ತಾರೆ. ಈ ಸಲದಿಂದ ಶಾರ್ಟ್ ಲಿಸ್ಟ್ ಆಗಿರುವ ಎಲ್ಲಾ ಲೇಖಕರು ಹಾಗೂ ಅನುವಾದಕರು 2,500 ಪೌಂಡ್ ಪಡೆಯುತ್ತಾರೆ.

ಈ ಪ್ರಶಸ್ತಿ ಇಂಗ್ಲಿಷ್‌ ಅನುವಾದಕ್ಕೆ ಬಂದಿದ್ದರೂ, ಅದು ಗೀತಾಂಜಲಿಯವರ ಈವರೆಗಿನ ಸಾಹಿತ್ಯ ಕೃಷಿಯ ಮೇಲೆ ಹೊಸ ಬೆಳಕು ಚೆಲ್ಲಿದಂತೆ, ಮೂಲ ಹಿಂದಿ ಕೃತಿಗೆ ಇನ್ನಷ್ಟು ವಿಶಾಲವಾದ ಓದುಗ ವರ್ಗವನ್ನು ಗಳಿಸಿಕೊಡುತ್ತದೆ. ‘ಈ ಪ್ರಶಸ್ತಿ ನನಗೊಬ್ಬಳಿಗೇ ಬಂದಿದೆ ಎನ್ನಿಸುವುದಿಲ್ಲ, ನಾನು ಒಂದು ಭಾಷೆಯನ್ನು, ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇನೆ. ಇದು ವಿಶೇಷವಾಗಿ ಹಿಂದಿ ಸಾಹಿತ್ಯಕ್ಕೆ ಮತ್ತು ಒಟ್ಟಾರೆಯಾಗಿ ಭಾರತೀಯ ಸಾಹಿತ್ಯಕ್ಕೆ ವಿಶಾಲವೇದಿಕೆಯಲ್ಲಿ ಮನ್ನಣೆ ನೀಡಿದಂತೆ ಅಂತ ನನ್ನ ಅನ್ನಿಸಿಕೆ. ತುಂಬ ಸಮೃದ್ಧ ಪರಂಪರೆಯಿರುವ ಬೃಹತ್ ಸಾಹಿತ್ಯ ಜಗತ್ತನ್ನು ಇನ್ನೂ ನಾವು ಶೋಧಿಸಬೇಕಿದೆ. ನಂಗೆ ಬಂದಿರೋ ಪ್ರಶಸ್ತಿ ಇದಕ್ಕೆ ನಾಂದಿಯಾಗಿದೆ ಅನ್ನೋದು ನಂಗೆ ಖುಷಿಯ ಸಂಗತಿ’ ಎಂದು ನಮ್ರವಾಗಿ ಹೇಳುತ್ತ ಈ ಸಂತಸ ಒಂದು ಜವಾಬ್ದಾರಿಯ ಭಾವನೆಯನ್ನೂ ತುಂಬಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.