ADVERTISEMENT

ಗೋಪಿ ಕಾವ್ಯದ ಸಂಕಲನಕ್ಕೀಗ ಐವತ್ತು ವರ್ಷ; ಚಿಂತಾಮಣಿಯಲ್ಲಿ ಬೆಳಗಿದ ಮುಖ

ಗೋಪಿ ಗಾಂಡಲೀನರಿಗೆ 50, ಕವಿಗೆ 75

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 19:30 IST
Last Updated 4 ಸೆಪ್ಟೆಂಬರ್ 2021, 19:30 IST
ಬಿ.ಆರ್. ಲಕ್ಷ್ಮಣರಾವ್
ಬಿ.ಆರ್. ಲಕ್ಷ್ಮಣರಾವ್   

‘ಗೋಪಿ ಮತ್ತು ಗಾಂಡಲೀನ’ ಕನ್ನಡ ಕಾವ್ಯ ಪರಂಪರೆಯ ಒಂದು ತುಂಟ ಅಧ್ಯಾಯ. 1971ರಲ್ಲಿ ಪ್ರಕಟವಾದ ಗೋಪಿ ಕಾವ್ಯದ ಸಂಕಲನಕ್ಕೀಗ ಐವತ್ತು ವರ್ಷ. ಕವಿಗೆ ಎಪ್ಪತ್ತೈದರ ಮಾಯದ ಪ್ರಾಯ (ಸೆ. 9, 1946). ಈ ಯುಗಳ ಸಂಭ್ರಮದ ನೆಪದಲ್ಲಿ ಕವಿಯತ್ತ ಹೊರಳುನೋಟ, ಕಾವ್ಯದ ಇಣುಕುನೋಟ.

***

‘ಪ್ರತೀ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ.’ ವ್ಯಕ್ತಿ ಮತ್ತು ವ್ಯಕ್ತಿತ್ವದ ಚೆಲುವು ಹಾಗೂ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ, ಗೋಪಾಲಕೃಷ್ಣ ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯ ಈ ಸಾಲು ಸನ್ನೆಗೋಲಿನಂತೆ ಒದಗಿಬರುವಂತಹದ್ದು. ಈ ಸಾಲನ್ನು ಕನ್ನಡಿಯಾಗಿಸಿಕೊಂಡು ಕವಿ ಬಿ.ಆರ್‌. ಲಕ್ಷ್ಮಣರಾವ್‌ ಅವರಿಗೆ ಹಿಡಿದರೆ ಕಾಣಿಸುವ ‘ಅಪ್ರತಿಮ ಲೋಕ’ ಎಂತಹದ್ದು?

ADVERTISEMENT

‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯೊಂದಿಗೆ ಬಿಆರ್‌ಎಲ್‌ ಅವರನ್ನು ನೆನಪಿಸಿಕೊಳ್ಳಲಿಕ್ಕೆ ಕಾರಣವಿದೆ. ಬೇಡಿದ್ದೆಲ್ಲ ಕೊಡುವ ಸುರಮಣಿಗೆ ‘ಚಿಂತಾಮಣಿ’ ಎನ್ನುವರಷ್ಟೆ. ಚಿಂತಾಮಣಿ ಎನ್ನುವ ಊರು ಕವಿಯ ಪಾಲಿಗೆ ಸುರಮಣಿಯೇ. ಕವಿ ಮತ್ತು ಕವಿತೆಗೆ ಚಿಂತಾಮಣಿ ಜೀವದ್ರವ್ಯವಾಯಿತು. ಕವಿಯನ್ನು ಹುಡುಕಿಕೊಂಡು ನಾಡಿನ ಖ್ಯಾತನಾಮರು ಚಿಂತಾಮಣಿಗೆ ಬರುವ ಮೂಲಕ ಊರಿನ ವರ್ಚಸ್ಸು ಹೆಚ್ಚಾಯಿತು. ಊರಿನಿಂದ ಕವಿಗೆ ಖ್ಯಾತಿ, ಕವಿಯಿಂದ ಊರಿಗೆ ಕೀರ್ತಿ. ಹೈಸ್ಕೂಲು ಮೇಷ್ಟರಾಗಿ ಪಾಠ ಹೇಳಿದ್ದು, ಟ್ಯುಟೋರಿಯಲ್‌ ಕಟ್ಟಿದ್ದು ಚಿಂತಾಮಣಿಯಲ್ಲಿಯೇ. ಹ್ಞಾಂ, ಬಿಆರ್‌ಎಲ್‌ ಅವರಿಗೆ ಸಂದಿರುವ ಅಭಿನಂದನಾ ಗ್ರಂಥದ ಹೆಸರೂ ‘ಚಿಂತಾಮಣಿ.’ ಈ ನಂಟಿನ ಕಾರಣದಿಂದಾಗಿಯೇ ಚಿಂತಾಮಣಿ ಎಂದಕೂಡಲೇ ಬಿಆರ್‌ಎಲ್‌ ಎನ್ನುವ ಕವಿಯೂ ಅವರ ಕಾವ್ಯಚಿಂತಾಮಣಿಯೂ ಸಾಹಿತ್ಯ ವಿದ್ಯಾರ್ಥಿಗಳಿಗೆ ನೆನಪಾಗುವುದು ಸಹಜ. ಅಡಿಗರಿಗೆ ಚಿಂತಾಮಣಿಯಲ್ಲಿ ಕಂಡ ಮುಖ ಯಾವುದಾದರೂ, ಕನ್ನಡ ಕಾವ್ಯರಸಿಕರಿಗೆ ಚಿಂತಾಮಣಿ ಕಾಣಿಸಿರುವುದು ಬಿಆರ್‌ಎಲ್‌ ಅವರನ್ನೇ.

ಮತ್ತೆ ಅಪ್ರತಿಮಲೋಕದ ಮಾತಿಗೆ ಬರೋಣ. ಬಿಆರ್‌ಎಲ್‌ ಅವರ ಲೋಕ ಎಂತಹದ್ದು? ಅದನ್ನು ಕಾವ್ಯಲೋಕ ಹಾಗೂ ಸ್ನೇಹಲೋಕ ಎಂದು ಬೇರೆಯಾಗಿ ನೋಡಬಹುದೇನೊ.

ಬಿಆರ್‌ಎಲ್‌ ಅವರ ಕಾವ್ಯಲೋಕದಲ್ಲಿ ಇಣುಕುವ ಮುನ್ನ ಅವರ ಪೂರ್ವಾಪರದ ಪ್ರಾಥಮಿಕ ಸಂಗತಿಗಳನ್ನು ತಿಳಿಯಬೇಕು. ಅವರ ಹುಟ್ಟೂರು ಚಿಂತಾಮಣಿಯಲ್ಲ; ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ. ತಂದೆ ರಾಜಾರಾವ್, ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ರಾಜಾರಾಯರಿಗಿದ್ದ ಸಂಗೀತದ ಪರಿಶ್ರಮ ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ಮಗನಿಗೂ ಬಂತು. ಹಾಡುವ ಕೊರಳಿನೊಂದಿಗೆ ಕಾವ್ಯದ ಕರುಳು ತಳಕು ಹಾಕಿಕೊಳ್ಳುವುದಕ್ಕೆ ಹೆಚ್ಚು ಕಾಲ ಬೇಕಾಗಲಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಅವರು ಕಾವ್ಯಕನ್ನಿಕೆಗೆ ಮನಸೋತರು. ಕಾವ್ಯದ ಗೀಳು ಎಷ್ಟಿತ್ತೆಂದರೆ, ವಿದ್ಯಾರ್ಥಿ ದಿನಗಳಲ್ಲಿ ಗೆಳೆಯರಿಗೆ, ತಂಗಿಯರಿಗೆ ಪದ್ಯರೂಪದಲ್ಲೇ ‍ಪತ್ರ ಬರೆಯುತ್ತಿದ್ದರಂತೆ.

ಚಿಂತಾಮಣಿಯಲ್ಲೊಂದು ಕಾಲು, ಬೆಂಗಳೂರಿನಲ್ಲೊಂದು ಕಾಲು ಎನ್ನುವಂತೆ ಬಿಆರ್‌ಎಲ್‌ ಕಾವ್ಯಯಾನ ಆರಂಭವಾಯಿತು. ಚೊಚ್ಚಿಲ ಸಂಕಲನ ‘ಗೋಪಿ ಮತ್ತು ಗಾಂಡಲೀನ’ ಪ್ರಕಟಗೊಂಡಿದ್ದು 1971ರಲ್ಲಿ. ತಾರುಣ್ಯದ ಸಂಭ್ರಮ, ಕಾವು, ಕಸಿವಿಸಿ, ಬಿಚ್ಚು ಮಾತುಗಳೊಂದಿಗೆ ಅಮಾಯಕತೆಯೂ ಸೇರಿಕೊಂಡಿದ್ದ ಗೋಪಿ–ಗಾಂಡಲೀನಳ ಕವಿತೆಗಳು ಬಿಆರ್‌ಎಲ್‌ ಅವರನ್ನು ಕನ್ನಡ ಕಾವ್ಯಲೋಕದಲ್ಲಿ ‘ಪೋಲಿಕವಿ’ ಎನ್ನುವ ಬಿರುದಿನೊಂದಿಗೆ ಯುವತಾರೆಯನ್ನಾಗಿಸಿದವು. ‘ಕವನ ಯಾಕೆ ಚೆನ್ನಾಗುತ್ತದೆಂದರೆ ಬಟ್ಟೆ ಬಿಚ್ಚುವ ಫ್ಯಾಶನಬಲ್ ಸ್ಥಳದಲ್ಲೂ ನೀನು –ಸ್ವಭಾವತಃ ಗೋಪಿಗಿಂತಲೂ ದೊಡ್ಡ ಗಾಂಪನಾಗಿದ್ದರಿಂದ– snobbish ನಿಲುವು ತೆಗೆದುಕೊಳ್ಳುವುದಿಲ್ಲ, ನೀನಾಗಿಯೇ ಉಳಿಯುತ್ತಿ. ಈ ಪದ್ಯದಲ್ಲಿ ನಿನ್ನ ನವ್ಯತೆ ಕೇವಲ ನವ್ಯ–pose ಆಗದೆ ತನ್ನತನ ತೋರಿದೆ; ಇದನ್ನು ಓದಿದಾಗಲೇ ನನಗೆ ನಿನ್ನ ಬೇರೆ ಪದ್ಯಗಳು ಪ್ರಿಯವಾದ ಪಾಪಗಳಂತೆ ಕಾಡತೊಡಗಿದ್ದು’ ಎಂದು ಲಂಕೇಶರು ಮುನ್ನುಡಿಯಲ್ಲಿ ಹೇಳಿರುವ ಮಾತುಗಳು ಬಿಆರ್‌ಎಲ್‌ ಅವರಿಗೆ ದೊರೆತಿರುವ ಅತ್ಯುತ್ತಮ ಪ್ರಮಾಣಪತ್ರಗಳಲ್ಲೊಂದು.

‘ಯುವತಾರೆ’ ಎನ್ನುವ ವಿಶೇಷಣ ‘ಗೋಪಿ ಮತ್ತು ಗಾಂಡಲೀನ’ ಸಂಕಲನಕ್ಕೆ ಸೀಮಿತವಾದುದಲ್ಲ. ನಂತರದ ‘ಟುವಟಾರ’, ‘ಲಿಲ್ಲಿ ಪುಟ್ಟಿಯ ಹಂಬಲ’, ‘ಶಾಂಗ್ರಿ–ಲಾ’, ‘ಅಪರಾಧಂಗಳ ಮನ್ನಿಸೊ’ – ಯಾವ ಸಂಕಲನ ತೆರೆದುನೋಡಿದರೂ ಅಲ್ಲಿ ಕವಿಯ ತಾರುಣ್ಯದ ರುಜುವಿದೆ. ಮರಕ್ಕೆ ಮುಪ್ಪಾದರೂ ಹುಳಿ ಉಳಿಸಿಕೊಂಡ ಹುಣಸೆಯಂತೆ ಬಿಆರ್‌ಎಲ್‌ ತಮ್ಮ ಕಾವ್ಯಕ್ಕೆ ವೃದ್ಧಾಪ್ಯ ಸೋಕದಂತೆ ಎಚ್ಚರವಹಿಸಿರುವುದು ಕನ್ನಡ ಕಾವ್ಯದ ಸೋಜಿಗಗಳಲ್ಲೊಂದು.

ತೇಜಸ್ವಿ ಅವರ ಕ್ಯಾರಿಕೇಚರ್‌ನಲ್ಲಿ ಕ್ಯಾಮೆರಾಕ್ಕೆ ಶಾಶ್ವತಸ್ಥಾನವಷ್ಟೇ. ಆ ಕ್ಯಾಮೆರಾ ಬಿಆರ್‌ಎಲ್‌ ಅವರ ಲಾಂಛನವೂ ಹೌದು. ಎಲ್ಲರ ರಂಗುರಂಗಿನ ಫೋಟೊ ತೆಗೆದು, ಕಪ್ಪುಬಿಳುಪಿನ ನೆಗೆಟಿವ್‌ಗಳನ್ನು ಉಳಿಸಿಕೊಳ್ಳುವ ಪ್ರಸಂಗದ ‘ಫೋಟೊಗ್ರಾಫರ್‌’ ಅವರ ‍ಪ್ರಸಿದ್ಧ ಕವಿತೆ. ‘ಕ್ಯಾಮರಾ ಕಣ್ಣು’ ಸಮಗ್ರ ಕಾವ್ಯದ ಶೀರ್ಷಿಕೆ. ಸಾವಿರ ಬಿಂಬಗಳನ್ನು ಮೂಡಿಸಿಕೊಂಡರೂ, ಪ್ರತೀ ಬಾರಿಯೂ ಹೊಸ ಬಿಂಬಕ್ಕಾಗಿ ತನ್ನನ್ನು ಬರಿದಾಗಿಸಿಕೊಂಡು ನಿಲ್ಲುವ ಕ್ಯಾಮೆರಾಕಣ್ಣು ಕವಿಯದೂ ಹೌದು.

ಕಾವ್ಯಮೋಹಿ ಬಿಆರ್‌ಎಲ್‌ ಕಥೆಗಳನ್ನೂ ಬರೆದಿದ್ದಾರೆ; ವಿಮರ್ಶೆ, ವ್ಯಕ್ತಿಚಿತ್ರ, ಸಾಂದರ್ಭಿಕ ಗದ್ಯವನ್ನೂ ರಚಿಸಿದ್ದಾರೆ. ‘ಕಬ್ಬೆಕ್ಕು’ ಅವರಿಗೆ ಹೆಸರು ತಂದುಕೊಟ್ಟ ಕಥಾಸಂಕಲನ. ಅವರ ಕೆಲವು ಹಾಡುಗಳು ಸಿನಿಮಾಗಳಲ್ಲಿ ಬಳಕೆಯಾಗಿವೆ.

ಕಾವ್ಯದಂತೆಯೇ ಸ್ನೇಹದಲ್ಲೂ ಬಿಆರ್‌ಎಲ್‌, ಅವರೇ ಹೇಳಿಕೊಂಡಿರುವಂತೆ ‘ಅದೃಷ್ಟವಂತರು.’ ಅವರ ಪಾಲಿಗೆ ಲಂಕೇಶರು ಮೇಷ್ಟ್ರೂ ಹೌದು, ಗೆಳೆಯನೂ ಹೌದು. ಅನಂತಮೂರ್ತಿ, ಅಡಿಗರೊಂದಿಗೂ ಈ ಸ್ನೇಹಜೀವಿಗೆ ಸಖ್ಯವಿತ್ತು. ಈಗಿನ ಬಿಆರ್‌ಎಲ್‌ ಅವರ ಮಿತ್ರಮಂಡಲಿಯಂತೂ ಮತ್ತಷ್ಟು ಆಕರ್ಷಕ. ಅಲ್ಲಿ ಹಿರಿಯ ಬರಹಗಾರರೊಂದಿಗೆ ತರುಣ ತರುಣಿಯರೂ ಇದ್ದಾರೆ. ಎಳೆಯ ತಲೆಮಾರಿನೊಂದಿಗೆ ಒಡನಾಡುವ ಮೂಲಕ ತಮ್ಮ ಯೌವನಪಾತ್ರೆಯನ್ನು ಬಿಆರ್‌ಎಲ್‌ ‘ಚಾರ್ಜ್‌’ ಮಾಡಿಕೊಳ್ಳುತ್ತಿರಬೇಕು!

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಪು.ತಿ.ನ. ಕಾವ್ಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಬಿಆರ್‌ಎಲ್‌ ಅವರಿಗೆ ಹಲವು ಗೌರವಗಳು ದೊರೆತಿವೆ. ಆದರೆ, ಅವರು ಜನಮನದಲ್ಲಿ ಹಸಿರಾಗಿರುವುದು ಪ್ರಶಸ್ತಿ ಪ್ರಭಾವಳಿಗಳ ಮೂಲಕವಲ್ಲ; ಕಾವ್ಯದ ಮೂಲಕ. ‘ಪದ್ಯವಂತರಿಗಿದು ಕಾಲವಲ್ಲ’ ಎಂದ ಕವಿ, ಪದ್ಯಗಳ ಮೂಲಕವೇ ಬದುಕು ಮತ್ತು ನೆಮ್ಮದಿ ಕಂಡುಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಗೋಪಿಯ ಹಾಡು ಮತ್ತು ಅಳಲು, ನಿಂಬೇಗಿಡದ ತಾತ್ವಿಕತೆ, ಅಮ್ಮನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಫೋಟೊಗ್ರಾಫರ್‌ನ ವಿಷಾದ, ಗುಂಡಪ್ಪ ವಿಶ್ವನಾಥ್‌ರ ಕ್ರಿಕೆಟ್ಟು – ಹೀಗೆ, ಕವಿಯನ್ನು ನೆನಪಿಸಿಕೊಳ್ಳಲು ಕಾವ್ಯರಸಿಕರಿಗೆ ಸಾಕಷ್ಟು ಸಂಗತಿಗಳಿವೆ.

‘ವಿಮರ್ಶೆಯ ನಿಕಷಕ್ಕೆ ತನ್ನನ್ನು ಒಡ್ಡಿಕೊಳ್ಳದ ಕವಿ ಬೆಳೆಯಲಾರ’ ಎಂದವರು ಬಿಆರ್‌ಎಲ್‌. ಅವರ ನೆಳಲಿನಂತಿರುವ ‘ಗೋಪಿ ಮತ್ತು ಗಾಂಡಲೀನ’ರಿಗೀಗ ಐವತ್ತು ತುಂಬಿದೆ. ಕವಿಗೆ ಎಪ್ಪತ್ತೈದು ತುಂಬಿದ ಸಂಭ್ರಮ. ‘ಕೆಂಪು ಸಾಗರವೀಜಿ, ಕಾಡುಮೇಡು ದಾಟಿ ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು, ಸುಲಭವಲ್ಲ!’ ಎಂದವರು, ಸರಾಗವಾಗಿ ಐದು ದಶಕಗಳಿಂದ ಕಾವ್ಯಸಾಗರದಲ್ಲಿ ಈಜಿಗೆ ಬಿದ್ದಿದ್ದಾರೆ. ಈ ಐವತ್ತರ ಕಾವ್ಯಸಂಭ್ರಮ ಮತ್ತು ಎಪ್ಪತ್ತೈದರ ಕವಿಸಂಭ್ರಮ ಕನ್ನಡ ಸಾಹಿತ್ಯ ಸಂಭ್ರಮವೂ ಹೌದು.

ಯುಗಳ ಸಂಭ್ರಮ
ಸೆ. 11ರಂದು ‘ಬಿ.ಆರ್‌.ಎಲ್‌–75’ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಆ ಸಂದರ್ಭದಲ್ಲಿ ‘ಗೋಪಿ ಮತ್ತು ಗಾಂಡಲೀನ 50’ ಹೊಸ ಆವೃತ್ತಿ ಪ್ರಕಟಗೊಳ್ಳಲಿದೆ. ‘ಬೆಸ್ಟ್‌ ಆಫ್‌ ಬಿಆರ್‌ಎಲ್‌’, ‘ಗೆಳೆಯ ಲಕ್ಷ್ಮಣ’ ಹಾಗೂ ‘ಮನಸು ಬಾವಲಿಯಂತೆ’ (ಅನುವಾದಿಸಿರುವ ಕವಿತೆಗಳು) ಅಂದು ಪ್ರಕಟಗೊಳ್ಳಲಿರುವ ಉಳಿದ ಕೃತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.