ADVERTISEMENT

ಕ್ರಿಕೆಟ್ ಪರಿಚಾರಕನ ಕಪೋತ ಪ್ರೇಮ

ಗಿರೀಶದೊಡ್ಡಮನಿ
Published 1 ಅಕ್ಟೋಬರ್ 2022, 19:30 IST
Last Updated 1 ಅಕ್ಟೋಬರ್ 2022, 19:30 IST
ಬೆಂಗಳೂರಿನ ವಿ. ಶಂಕರ್ ಅವರ ಮನೆಯಲ್ಲಿರುವ ತಮ್ಮ ಗೂಡುಗಳಲ್ಲಿ ಪಾರಿವಾಳಗಳು –ಪ್ರಜಾವಾಣಿ ಚಿತ್ರ/ರಂಜು ಪಿ.
ಬೆಂಗಳೂರಿನ ವಿ. ಶಂಕರ್ ಅವರ ಮನೆಯಲ್ಲಿರುವ ತಮ್ಮ ಗೂಡುಗಳಲ್ಲಿ ಪಾರಿವಾಳಗಳು –ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರಿನ ಹೆಣ್ಣೂರು ಗಾರ್ಡನ್‌ ಬಡಾವಣೆಯಲ್ಲಿರುವ ತಮ್ಮ ಎರಡಂತಸ್ತಿನ ಮನೆಯ ಮಹಡಿಯ ಮೇಲೆ ನಿಂತಿದ್ದ ವಿ. ಶಂಕರ್ ಬೊಗಸೆಯಲ್ಲಿದ್ದ ‘ರೆಡ್‌ ರಾಕೆಟ್‌’ ತನ್ನ ಬೂದುಬಣ್ಣದ ತಲೆಯನ್ನು ಕೊಂಕಿಸುತ್ತ, ಪಿಳಿಪಿಳಿ ಕಣ್ಣು ಮಿಣುಕಿಸುತ್ತಿತ್ತು. ಬಿಳಿ–ಕಂದು ಮಿಶ್ರಿತ ರೆಕ್ಕೆಗಳನ್ನು ಪಟಪಟನೆ ಬಡಿದು ಹಾರಿಹೋಗಲು ಹವಣಿಸುತ್ತಿತ್ತು. ‘ಇದಕ್ಕೀಗ ಬರೀ ಮೂರು ವರ್ಷ ತುಂಬಿದೆ. ಆದರೆ, ಇದು ಅಂತಿಂಥ ಪಾರಿವಾಳವಲ್ಲ. ಕಾವೇರಿನಾಡಿಗೂ ದೆಹಲಿಯ ಯಮುನೆಗೂ ನಂಟು ಬೆಸೆಯುವಂತಹ ಸಾಧನೆ ಮಾಡಿದೆ’ ಎಂದು ಹೇಳುತ್ತಲೇ ಶಂಕರ್ ರೋಚಕ ಕತೆಯನ್ನು ಬಿಚ್ಚಿಟ್ಟರು.

2022ರ ಏಪ್ರಿಲ್ 15ರಂದು ನವದೆಹಲಿಯ ಯಮುನಾ ನದಿಯ ಸಿಗ್ನೇಚರ್ ಬ್ರಿಡ್ಜ್‌ ಮೇಲಿನ ಮುಂಜಾವಿನ ಮಂಜು ಸರಿದುಹೋಗುವ ಧಾವಂತದಲ್ಲಿತ್ತು.ಅದೇ ಹೊತ್ತಿಗೆ ಸೇತುವೆಯ ಮೇಲಿನ ವಿಶಾಲ ಆವರಣದಲ್ಲಿಟ್ಟಿದ್ದ ಎರಡು ಆಯತಾಕಾರದ ಪಂಜರದಂತಹ ಪೆಟ್ಟಿಗೆಗಳಿದ್ದವು. ಅದರಿಂದ ಗುಟರ್‌ ಗೂ..ಗುಟರ್..ಗೂ ಕಲರವ ಬೆಳಗಿನ ನೀರವ ವಾತಾವರಣಕ್ಕೆ ಉಲ್ಲಾಸ ತುಂಬುತ್ತಿತ್ತು. ಆ ಪೆಟ್ಟಿಗೆಗಳಲ್ಲಿದ್ದ 26 ಪಾರಿವಾಳಗಳು ಆಗಸಕ್ಕೆ ಲಗ್ಗೆ ಹಾಕಲು ಸಿದ್ಧವಾಗಿದ್ದವು. ಅಲ್ಲಿದ್ದ ಇಬ್ಬರು ‘ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್’ ಎಂದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದ ಬ್ಯಾನರ್‌ಗಳನ್ನು ಹಿಡಿದು ನಿಂತಿದ್ದರು.

ಮತ್ತೊಬ್ಬ ವ್ಯಕ್ತಿ ಪಂಜರಗಳ ಬಾಗಿಲು ತೆರೆದರು. ಕತ್ತು ಕೊಂಕಿಸುತ್ತ ಹೊರಬಂದ ಪಾರಿವಾಳಗಳು ಒಂದೊಂದಾಗಿ ನಭದತ್ತ ಹಾರಿದವು. ಅಲ್ಲಿದ್ದವರ ಕೈಗಳಲ್ಲಿದ್ದ ಮೊಬೈಲ್‌ ಆ್ಯಪ್‌ಗಳಲ್ಲಿ ಸಮಯ ದಾಖಲಾಯಿತು. ಇದಾಗಿ ಒಂಬತ್ತು ದಿನಗಳ ನಂತರ (ಏ.24) ಹೆಣ್ಣೂರು ಗಾರ್ಡನ್‌ನಲ್ಲಿರುವ ತನ್ನ ಮಾಲೀಕ ಶಂಕರ್‌ ಮನೆಯ ಮಹಡಿಯಲ್ಲಿ ರೆಡ್‌ ರಾಕೆಟ್‌ ಪ್ರತ್ಯಕ್ಷವಾಗಿತ್ತು. ತನ್ನ ಮುದ್ದು ಪಾರಿವಾಳವನ್ನು ಕೈಗೆತ್ತಿಕೊಂಡ ಅವರು ಅದರ ರೆಕ್ಕೆಗಳನ್ನು ಅಗಲಿಸಿ ನೋಡಿದರು. ಅದರ ಮೇಲಿದ್ದ ಮುದ್ರೆಯನ್ನು ಓದಿದರು. ಕಾಲುಗಳಿಗೆ ಕಟ್ಟಿದ್ದ ಪುಟ್ಟ ರಬ್ಬರ್ ಉಂಗುರವನ್ನು ಬಿಚ್ಚಿದರು. ಅದರೊಳಗಿದ್ದ ರಹಸ್ಯ ಸಂಖ್ಯೆಯನ್ನು ಹೊರತೆಗೆದು ಮೊಬೈಲ್‌ನಲ್ಲಿ ಫೋಟೊ ತೆಗೆದು ಆ್ಯಪ್‌ಗೆ ದಾಖಲಿಸಿದರು. ಕೆಲ ಹೊತ್ತಿನ ನಂತರ ಅತ್ತಣಿಂದ ಬಂದ ಉತ್ತರದಿಂದ ಶಂಕರ್ ಆನಂದ ಮುಗಿಲುಮುಟ್ಟಿತು.

ADVERTISEMENT

ರೆಡ್ ರಾಕೆಟ್‌ 1,741 ಕಿಲೋಮೀಟರ್ ದೂರವನ್ನು ಕ್ರಮಿಸಿ ತನ್ನ ಸ್ವಸ್ಥಾನಕ್ಕೆ ಮರಳಿತ್ತು. ಜೊತೆಗೆ ಪಾರಿವಾಳದ ರೇಸ್‌ನಲ್ಲಿ ದಾಖಲೆಯನ್ನೂ ಬರೆದಿತ್ತು.

‘ಪಕ್ಷಿಗಳಿಗೆ ಜಿಪಿಎಸ್ (ಜಾಗತಿಕ ಸ್ಥಾನೀಕರಣ ವ್ಯವಸ್ಥೆ) ಸೌಲಭ್ಯವನ್ನು ಪ್ರಕೃತಿಯು ದಯಪಾಲಿಸಿದೆ. ಮನುಷ್ಯರಿಗೆ ಅದಕ್ಕಾಗಿ ತಂತ್ರಜ್ಞಾನ ಆಧಾರಿತ ಗ್ಯಾಜೆಟ್‌ಗಳು ಬೇಕು. ಆದರೆ, ಪಕ್ಷಿಗಳು ಹಾಗಲ್ಲ. ಅದರಲ್ಲೂ ಪಾರಿವಾಳಗಳು ಇನ್ನೂ ಸೂಕ್ಷ್ಮ ಹಾಗೂ ಚಾಣಾಕ್ಷ. ತಮ್ಮ ಮೂಲ ವಾಸಸ್ಥಳವನ್ನು ಮರೆಯುವುದೇ ಇಲ್ಲ. ಅದಕ್ಕಾಗಿಯೇ ಇವು ವಿಶೇಷ. ನಾವು ಹವ್ಯಾಸಕ್ಕಾಗಿ ಮಾಡುವ ರೇಸ್‌ನಲ್ಲಿ ಇದು ಬಹಳಷ್ಟು ಸಲ ಸಾಬೀತಾಗಿದೆ. ನನ್ನ ಬಳಿ ಇರುವ 65 ಪಾರಿವಾಳಗಳೂ ಇದೇ ರೀತಿ ತರಬೇತಿಗೊಂಡಿವೆ’ ಎಂದು ಶಂಕರ್ ಹೇಳುತ್ತಾರೆ.

ಬಾಲ್ಯದ ಹವ್ಯಾಸ

ಶಂಕರ್ 12 ವರ್ಷದ ಬಾಲಕನಾಗಿದ್ದಾಗ ಪಾರಿವಾಳದ ನಂಟು ಬೆಳೆದಿತ್ತು. ಬೆನ್ಸನ್‌ಟೌನ್‌ನ ಅವರ ಮನೆಯ ಅಂಗಳದಲ್ಲಿ ಬಿಳಿ ಬಣ್ಣದ ಪಾರಿವಾಳದ ಮರಿಯೊಂದು ನಿತ್ರಾಣಗೊಂಡು ಬಿದ್ದಿತ್ತು. ಶಂಕರ್ ಅವರ ತಾಯಿ ಅದನ್ನು ರಕ್ಷಿಸಿ ಮನೆಗೆ ತಂದು ನೀರು ಹಾಗೂ ಕಾಳು ಹಾಕಿದರು. ಕೆಲವು ದಿನ ಶಂಕರ್ ಕೂಡ ಆರೈಕೆ ಮಾಡಿದರು. ಸಂಪೂರ್ಣ ಗುಣಮುಖವಾದ ಪಾರಿವಾಳವನ್ನು ಹೊರಗೆ ಹಾರಿಬಿಟ್ಟರು. ಆದರೆ ಕೆಲಹೊತ್ತಿನ ನಂತರ ಅದು ಮನೆಗೆ ಮರಳಿತು. ಇದರಿಂದ ಪುಳಕಗೊಂಡ ಶಂಕರ್ ತಮ್ಮ ಗೆಳೆಯನೊಂದಿಗೆ ಸೇರಿ ಪಾರಿವಾಳವನ್ನು ಮನೆಯಿಂದ ಬಹಳ ದೂರ ಹೋಗಿ ಬಿಟ್ಟುಬಂದರು.

ಆದರೂ ಅದು ಮರಳಿಬಂತು. ಆಗ ಶಂಕರ್ ನಂದಿಬೆಟ್ಟಕ್ಕೆ (ಸುಮಾರು 50 ಕಿ.ಮೀ) ಅದನ್ನು ತೆಗೆದುಕೊಂಡು ಹೋಗಿ ಬಿಟ್ಟರು. ಅವರು ತಮ್ಮ ವಾಹನದಲ್ಲಿ ಮರಳುವ ಮುನ್ನವೇ ಪಾರಿವಾಳ ಮನೆ ಸೇರಿತ್ತು!

ಆಗ ಬೆಳೆದ ಪಾರಿವಾಳ ಪ್ರೀತಿ ಇಂದಿಗೂ ಬೆಸೆದುಕೊಂಡಿದೆ. ತಮ್ಮ ಮನೆಯಲ್ಲಿ ಉತ್ತಮ ತಳಿಯ ಪಾರಿವಾಳ ಸಾಕಲು ಆರಂಭಿಸಿದರು. 2011ರಲ್ಲಿ ತಮ್ಮದೇ ಸ್ವಂತ ಮನೆ ನಿರ್ಮಿಸಿದಾಗ ಮಹಡಿಯಲ್ಲಿ ಪ್ರೀತಿಯ ಹಕ್ಕಿಗಳಿಗಾಗಿಯೇ ವಿಶೇಷ ವಾಸಸ್ಥಳ ನಿರ್ಮಿಸಿದರು.

‘ಇವು ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಹಾರಾಟದ ಟ್ರೇನಿಂಗ್ ನೀಡುವುದು, ಆಹಾರ ಹಾಕುವುದು, ಅವುಗಳ ವಾಸಸ್ಥಳ ಸ್ವಚ್ಛಗೊಳಿಸುವುದು ನನ್ನ ಹಾಗೂ ತಮ್ಮನ ಕೆಲಸವಾಗಿದೆ’ ಎಂದು ಶಂಕರ್ ಹೇಳುತ್ತಾರೆ.

ಪಾರಿವಾಳ ರೇಸ್ ಹೇಗೆ?

ಭೂಮಿಯಿಂದ ಹೊರಹೊಮ್ಮವ ಆಯಸ್ಕಾಂತೀಯ ಸೂಕ್ಷ್ಮ ತರಂಗಗಳನ್ನು ಗ್ರಹಿಸುವ ಸೂಕ್ಷ್ಮವಾದ ಗುಣ ಪಾರಿವಾಳಗಳಿಗಿದೆ. ಆದ್ದರಿಂದ ಅವುಗಳು ಎಷ್ಟೇ ದೂರ ಹೋದರೂ ತಮ್ಮ ಮೂಲಸ್ಥಾನಕ್ಕೆ ಮರಳುತ್ತವೆ. ಅವುಗಳ ಈ ಗುಣದಿಂದಾಗಿ ಅವುಗಳನ್ನು ರೇಸ್‌ಗೆ ಬಳಸಲಾಗುತ್ತದೆ. ಇದು ಮೊಘಲ್‌ ಕಾಲದಿಂದಲೂ ಇದೆ ಎನ್ನಲಾಗುತ್ತದೆ. ಈಗ ತಮಿಳುನಾಡಿನಲ್ಲಿ ಈ ಹವ್ಯಾಸ ಜೋರಾಗಿದೆ.

‘ಇದರಲ್ಲಿ ಎರಡು ಬಗೆ ಇವೆ. ಕೆಲವರು ಬೆಟ್ಟಿಂಗ್‌ಗಾಗಿ ಇದನ್ನು ಮಾಡುತ್ತಾರೆ. ಅದು ಕಾನೂನುಬಾಹಿರ. ಆದರೆ ನಮ್ಮಂತ ಹವ್ಯಾಸಿ ಕ್ಲಬ್‌ಗಳು ದೇಶದಲ್ಲಿ ಬಹಳಷ್ಟಿವೆ. ಇಲ್ಲಿ ವೈಜ್ಞಾನಿಕವಾಗಿ ಹಾಗೂ ಶಿಸ್ತುಬದ್ಧವಾಗಿ ರೇಸ್ ನಡೆಸಲಾಗುತ್ತದೆ. ಪಾರಿವಾಳಗಳನ್ನು ಗುರುತಿಸಲು ಅವುಗಳ ರೆಕ್ಕೆಗಳಿಗೆ ಮುದ್ರೆಯೊತ್ತಲಾಗುತ್ತದೆ. ಅದರಲ್ಲಿ ಅವುಗಳನ್ನು ಹಾರಿಬಿಟ್ಟ ದಿನಾಂಕ, ಊರು ಮತ್ತಿತರ ವಿವರಗಳಿರುತ್ತವೆ. ರಬ್ಬರ್ ಉಂಗುರಗಳನ್ನು (ಬೇರೆ ಬೇರೆ ವರ್ಣ) ಕಾಲಿಗೆ ಹಾಕಲಾಗುತ್ತದೆ. ಅದರಲ್ಲಿ ಅವುಗಳಿಗೊಂದು ರಹಸ್ಯ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ದೆಹಲಿ, ಜೈಪುರದಂತಹ ದೂರ ಊರುಗಳಿಗೆ ಬೇರೆ ಬೇರೆ ಕ್ಲಬ್‌ನವರು ಸೇರಿಕೊಂಡು ಪಾರಿವಾರಗಳನ್ನು ವಿಶೇಷ ಪಂಜರಗಳಲ್ಲಿ ವಿಮಾನ ಮೂಲಕ ಕಳಿಸುತ್ತೇವೆ. ಅದಕ್ಕೊಬ್ಬರು ಉಸ್ತುವಾರಿ ಇರುತ್ತಾರೆ. ಅವರು ಅಲ್ಲಿ ಹೋಗಿ ಅವುಗಳನ್ನು ನಿಗದಿತ ದಿನ ಹಾಗೂ ಸಮಯಕ್ಕೆ ಬಿಡುಗಡೆಮಾಡ್ತಾರೆ. 200–300 ಕಿಲೋಮೀಟರ್‌ಗಳ ದೂರವಾದರೆ ನಾವೇ ನಮ್ಮ ವಾಹನದಲ್ಲಿ ತೆಗೆದುಕೊಂಡು ಹೋಗುತ್ತೇವೆ. ಇದಕ್ಕೆಲ್ಲ ನಮ್ಮ ಜೇಬಿಂದಲೇ ಖರ್ಚು ಮಾಡಬೇಕಾಗುತ್ತದೆ. ಇಲ್ಲಿ ಲಾಭ ನಷ್ಟದ ಲೆಕ್ಕಾಚಾರವಿಲ್ಲ. ಪ್ರತಿವರ್ಷ ಇವುಗಳನ್ನು ಸಾಕಲು ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ’ ಎಂದು ಶಂಕರ್ ವಿವರಿಸುತ್ತಾರೆ.

ಉತ್ತಮ ತಳಿಯ ಪಾರಿವಾಳಗಳನ್ನು ಸಾಕಲಾಗುತ್ತದೆ. ಮೂರರಿಂದ ಏಳು ವರ್ಷದೊಳಗಿನ ಮರಿಗಳನ್ನು ಮೊದಲು ಅವುಗಳಿಗೆ ತಮ್ಮ ವಾಸಸ್ಥಾನದ ಅರಿವು ಮೂಡಿಸಲು ಕೆಲವು ದಿನಗಳ ತರಬೇತಿ ನೀಡಲಾಗುತ್ತದೆ. ಪ್ರತಿನಿತ್ಯವೂ 15–16 ಬಗೆಯ ಧಾನ್ಯಗಳ ಮಿಶ್ರಣದ ಆಹಾರವನ್ನು ನೀಡಲಾಗುತ್ತದೆ. ಇದರಿಂದಾಗಿ ಅವುಗಳ ಶಕ್ತಿವರ್ಧನೆಯಾಗುತ್ತದೆ. ಹಕ್ಕಿಜ್ವರ ಮತ್ತಿತರ ಕಾಯಿಲೆಗಳು ಬರದಂತೆ ಲಸಿಕೆ ಹಾಗೂ ಟಾನಿಕ್‌ಗಳನ್ನೂ ನೀಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 45 ನಿಮಿಷಗಳ ಕಾಲ ಮುಕ್ತವಾಗಿ ಹಾರಾಡಲು ಬಿಡಲಾಗುತ್ತದೆ. ತಮಗೆ ತಿಳಿದಷ್ಟು ದೂರ ಹೋಗಿ ಮತ್ತೆ ಗೂಡಿಗೇ ಮರಳುತ್ತವೆ. ಕೆಲವು ಬಾರಿ ಗಾಳಿಯ ರಭಸಕ್ಕೋ, ಹದ್ದುಗಳ ದಾಳಿಯನ್ನು ತಪ್ಪಿಸಿಕೊಳ್ಳುವುದಕ್ಕೋ ದಿಕ್ಕು ತಪ್ಪಿ ಬೇರೆಲ್ಲೋ ಹೋಗುತ್ತವೆ. ಕೆಲವು ದಿನಗಳ ನಂತರ ಸ್ವಸ್ಥಾನಕ್ಕೆ ಮರಳುತ್ತವೆ. ಆರು, ಏಳು ವರ್ಷದವರೆಗೂ ಗಂಡು–ಹೆಣ್ಣು ಹಕ್ಕಿಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗುತ್ತದೆ. ಈ ವಯಸ್ಸು ದಾಟಿದ ನಂತರ ಅವುಗಳನ್ನು ಒಂದೇ ಗೂಡಿನಲ್ಲಿ ಬಿಟ್ಟು ಸಂತಾನೋತ್ಪತ್ತಿಗೆ ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಅವುಗಳ ವಂಶವೃಕ್ಷವನ್ನು ದಾಖಲಿಸುವ ಕೆಲಸವೂ ನಡೆಯುತ್ತದೆ.

‘ರೇಸ್ ಸುಲಭವಲ್ಲ. ಪಾರಿವಾಳಗಳು ಹಲವಾರು ಸವಾಲುಗಳನ್ನು ಎದುರಿಸುತ್ತವೆ. ದೆಹಲಿಯಿಂದ ಇಲ್ಲಿಯವರೆಗೆ ಬರಲು ಐದಾರು ರಾಜ್ಯಗಳ ಗಡಿ ದಾಟಬೇಕು. ನದಿ, ಸಮುದ್ರ, ಗುಡ್ಡಬೆಟ್ಟ, ಕಾಡುಗಳನ್ನು ಹಾದು ಬರುತ್ತವೆ. ಈ ಮಾರ್ಗಗಳಲ್ಲಿ ಕೆಲವೆಡೆ ಬೇಟೆಗಾರ ಪಕ್ಷಿಗಳು ದಾಳಿ ಮಾಡುತ್ತವೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇವು ಗಾಯಗೊಂಡು ನೆಲಕ್ಕುರುಳುತ್ತವೆ. ಕೆಲವು ಬಾರಿ ಚೇತರಿಸಿಕೊಂಡು ಅಥವಾ ಸ್ಥಳೀಯರು ನೋಡಿ ಆರೈಕೆ ಮಾಡಿದರೆ ಬರುವ ಸಾಧ್ಯತೆ ಇರುತ್ತದೆ. ಬಿರುಗಾಳಿ, ಮಳೆ ಮತ್ತು ಸಿಡಿಲುಗಳಿಂದ ರಕ್ಷಿಸಿಕೊಳ್ಳುವ ಸವಾಲೂ ಇರುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಈ ರೇಸ್‌ ಹಕ್ಕಿಗಳನ್ನೇ ಅಪಹರಿಸುವ ತಂಡಗಳಿವೆ. ಪಾರಿವಾಳಗಳನ್ನು ಸೆರೆ ಹಿಡಿದು ಅವುಗಳ ಮಾಹಿತಿ ಸಂಗ್ರಹಿಸಿ ಮಾಲೀಕರಿಗೆ ಕರೆ ಮಾಡಿ ದುಡ್ಡು ಕೊಡುವಂತೆ ಬೆದರಿಕೆಯೊಡ್ಡುತ್ತಾರೆ. ಕೊಡದಿದ್ದರೆ ಹಕ್ಕಿಗಳನ್ನು ಕೊಂದುಹಾಕುತ್ತಾರೆ’ ಎಂದು ಶಂಕರ್ ಹೇಳುತ್ತಾರೆ.

ಎಷ್ಟೇ ಅಡೆತಡೆಗಳು ಬಂದರೂ ಕೊನೆಯ ಉಸಿರಿರುವವರೆಗೂ ತಮ್ಮ ಸ್ವಸ್ಥಾನದತ್ತ ಸಾಗುವ ಪ್ರಯತ್ನವನ್ನು ಪಾರಿವಾಳಗಳು ಬಿಡುವುದಿಲ್ಲ. ತಮ್ಮ ಮೈದಡವಿ, ಕಾಳು, ನೀರು, ಆಶ್ರಯ ಕೊಟ್ಟವರನ್ನು ಮರೆಯುವುದಿಲ್ಲ.

‘ನಾನು ಹಲವು ವರ್ಷದಿಂದ ಕ್ರಿಕೆಟ್‌ ತರಬೇತಿ ನೀಡುತ್ತಿದ್ದೇನೆ. ಕೆಲವರು ಒಂದು ಹಂತದ ಸಾಧನೆ ಮಾಡಿದ ನಂತರ ಮರಳಿ ಅಕಾಡೆಮಿಗೆ ಬರುವುದಿಲ್ಲ. ಆದರೆ ಪಾರಿವಾಳಗಳು ಹಾಗಲ್ಲ. ಎಷ್ಟೇ ದೊಡ್ಡದಾಗಿ ಬೆಳೆಯಲಿ, ಸಾವಿರಾರು ಕಿಲೋಮೀಟರ್ ದೂರ ಹೋಗಿರಲಿ. ಮರಳಿ ಬಂದೇ ಬರುತ್ತವೆ. ನಾವು ಕೊಟ್ಟಿದ್ದಕ್ಕಿಂತ ಹೆಚ್ಚು ಪ್ರೀತಿ ಕೊಡುತ್ತವೆ’ ಎಂದು ಭಾವುಕರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.