ADVERTISEMENT

ದೀಪಾವಳಿ: ಇರುಳು ಸರಿದು.. ಬೆಳಕು ಹರಿದು..

ಸದಾಶಿವ ಸೊರಟೂರು
Published 22 ಅಕ್ಟೋಬರ್ 2022, 5:13 IST
Last Updated 22 ಅಕ್ಟೋಬರ್ 2022, 5:13 IST
Deepavali, Darkness
Deepavali, Darkness   

ಅಮ್ಮ ಮನೆ ಒಪ್ಪಗೊಳಿಸಿದ್ದಾಳೆ.‌ ಅಪ್ಪ ಎಲ್ಲಾ ತಂದುಕೊಡುವ ಭರದಲ್ಲಿ ಓಡಾಡುತ್ತಿದ್ದಾನೆ.‌ ಪತ್ರಿಕೆಯ ಪುಟಗಳು ಒಂದು ಖುಷಿಯನ್ನು ಸ್ವಾಗತಿಸಲು ಅಣಿಯಾಗಿವೆ. ಕೆಲವರಿಗೆ ಊರಿಗೆ ಹೋಗುವ ಧಾವಂತ, ಕೆಲವರಿಗೆ ಇದ್ದಲ್ಲೆ ಆ ದಿನಕ್ಕೊಂದು ತೋರಣ ನೇಯುವ ಹಿತ.‌ ಬೆಳಗಲು ಕಾದ ಬಗೆಬಗೆಯ ದೀಪಗಳು ಈಗಾಗಲೇ ಮನೆ ಸೇರಿವೆ. ಮಕ್ಕಳ ಕಣ್ಣಲ್ಲಿ ಸುರುಸುರು ಬತ್ತಿಯ ಹೊಳಪು. ಎಲ್ಲರೂ ಒಂದು ಹಿತವೆನಿಸುವ ಸಡಗರಕ್ಕೆ ಎದುರಾಗಿ ನಿಂತಿದ್ದೇವೆ. ದೀಪವಾಳಿಯೊಂದು ಮೆಲ್ಲಗೆ ಎದೆಯೊಳಗೆ ಹೆಜ್ಜೆ ಇಟ್ಟಿದೆ.

ಒಂದು ಹಿಡಿ ಮೋಹಕ ಇಳಿ ಸಂಜೆ, ಬೊಗಸೆ ತುಂಬಾ ಕಡು ಕತ್ತಲು, ಅದರ ಮಧ್ಯೆ ಒಂದು ಪುಟ್ಟ ಹಣತೆ, ಆಕಾಶಕ್ಕೆ ಚಾಚಿ ಉಭಯಕುಶಲೋಪರಿಗೆ ಇಳಿದ ಒಂದು ಆಕಾಶ ದೀಪ. ಮನದೊಳಗೆ ಒಂದು ನಿಚ್ಚಳ ಶಾಂತಿ, ಸಡಗರ. ಎದೆಯೊಳಗೆ ಒಂದಷ್ಟು ಪ್ರೀತಿ, ಭಕ್ತಿ.‌ ನಮ್ಮನ್ನು ಒಮ್ಮೊಮ್ಮೆ ಬದುಕಿನ ಕಡೆ ಎಚ್ಚರಿಸಲೊ ಎಂಬಂತೆ ರಸ್ತೆಯ ಬದಿಯಲಿ ಡಮಗುಟ್ಟುವ ಪಟಾಕಿ. ಹೊಟ್ಟೆಯನ್ನಷ್ಟಲ್ಲದೆ ಮನಸನ್ನೂ ತುಂಬುವ ಊಟ.. ಎಲ್ಲಾ ಸೇರಿದರೆ ಅದು ದೀಪಾವಳಿ.

ಇದು ಬೆಳಕಿನ ಹಬ್ಬ. ದೀಪಾವಳಿ ಬರುವುದು ಕತ್ತಲು-ಬೆಳಕಿನ ಪಾಠ ಹೇಳಲು. ಯಾವ ದೀಪಾವಳಿಯೂ ಹುಣ್ಣಿಮೆಯಲ್ಲಿ ಬರುವುದಿಲ್ಲ. ಅಮವಾಸ್ಯೆ ಕಡು ಕತ್ತಲ ದಿನಗಳಲ್ಲಿ ದೀಪಾವಳಿಯ‌ ಆಗಮನ. ಬೆಳಕಿನ ಬಗ್ಗೆ ಹೇಳುವವನಿಗೆ ಕತ್ತಲ ಬಗ್ಗೆ ಗೊತ್ತಿರಬೇಕು. ಅದಕ್ಕೆ ದೀಪಾವಳಿಯ ಪಾಲಿಗೆ ಕಡು ಕತ್ತಲು. ಬೆಳಕನ್ನು ಆನಂದಿಸುವ ನಮಗೆ ಕತ್ತಲೆಯ ಅರಿವಿರಬೇಕು. ಬೆಳಕು ಪ್ರೀತಿಸುವ ನಮಗೆ ಕತ್ತಲಿನ ಗೆಳೆತನವಾದರೂ ಇರಬೇಕು. ಹಬ್ಬ ಬೆಳಕಿನದು. ಕತ್ತಲಿಗೆ ಹಬ್ಬವಿಲ್ಲ. ನಾವು ಬೆಳಕನ್ನು ಸಂಭ್ರಮಿಸುವಾಗ ಕೇವಲ ಆ ಬೆಳಕಷ್ಟೇ ಖುಷಿ ಪಡುವುದಿಲ್ಲ, ಕತ್ತಲು ಕೂಡ ಸದ್ದಿಲ್ಲದೆ ಆನಂದಿಸುತ್ತದೆ. ಕತ್ತಲ ಒಡಲಿನೊಳಗಿನಿಂದಲೇ ಬೆಳಕಿನ ಹುಟ್ಟು. ಬೆಳಕಿನ ಆಯಸ್ಸು ಮುಗಿದ ಮೇಲೆ ಅದು ಒಂದಾಗುವುದು ಕೂಡ ಕತ್ತಲಿನ ಆತ್ಮದೊಳಗೆ.

ADVERTISEMENT

ಕತ್ತಲೆ ನಿಗೂಢ, ಎಲ್ಲವನ್ನೂ ಮುಚ್ಚಿಡುತ್ತದೆ. ಕುತೂಹಲ ಉಳಿಸುತ್ತದೆ. ಬೆಳಕು ಎಲ್ಲವನ್ನೂ ತೆರೆದಿಡುತ್ತದೆ. ಎಲ್ಲವನ್ನು ಕಾಣಿಸುತ್ತಾ ಹೋಗುತ್ತದೆ. ಅದಕ್ಕೆ ಬೆಳಕು ಬದುಕಿಗೆ ಹತ್ತಿರ. ಎಲ್ಲವೂ ತಿಳಿದ ಮೇಲೆ ಏನಿದೆ ಬದುಕಿಗೆ? ಎಲ್ಲವೂ ನಿಸ್ಸಾರ. ಹಬ್ಬ ಬರೀ ಬೆಳಕಿನ ಪಾಠವಲ್ಲ; ಕತ್ತಲು ಹುದುಗಿಟ್ಟುಕೊಂಡ ನಿಗೂಢತೆಯ ಸಾರ. ಬರೀ ಬೆಳಕಿನೊಂದಿಗೆ ಬದುಕಲಾಗುವುದಿಲ್ಲ. ಕಣ್ಮುಚ್ಚಿದರೆ ಕತ್ತಲು ಅದೇ ಜೀವನ.

ಬೆಳಕಿನಲ್ಲಿ ತೆಗೆದ ಪೋಟೊಗಳು ಡಾರ್ಕ್ ರೂಮಿನಲ್ಲಿ ತಾನೇ ಜೀವ ಪಡೆಯುವುದು.

ಕತ್ತಲು ಪ್ರೀತಿಸುವವನಿಗೆ ಬೆಳಕು ಉಡುಗೊರೆಯಾಗಿ ಸಿಕ್ಕೀತು. ಕತ್ತಲು ದೂರ ಬೇಡ ಬೆಳಕು ಮುನಿಸಿಕೊಂಡೀತು. ಕತ್ತಲು ಪರಿಯವಿಲ್ಲದಿದ್ದರೆ ನಿನಗೆ ಬೆಳಕಿನ ವಿಳಾಸವೂ ದುರ್ಲಭ. ಕತ್ತಲಲ್ಲಿ ನಡೆದವನಿಗೆ ಬೆಳಕು ಶರಣಾಗುತ್ತದೆ. ಕತ್ತಲ ಗೆಳೆತನ ಮಾಡಿದವನನ್ನು ಬದುಕೆಂಬ ಹಗಲು ಪೊರೆಯುತ್ತದೆ. ಎಂತಹ ಬೆಳಕಲ್ಲೂ ನಿನ್ನೊಳಗೆ ಕತ್ತಲು ಇದ್ದರೆ ಹಾದಿ ತಪ್ಪುವೆ. ಕಡು ಕತ್ತಲಲ್ಲೂ ನಿನ್ನೊಳಗೊಂದು ತುಂಡು ಬೆಳಕಿದ್ದರೆ ಸಾಕು ನೀನು ನಿನ್ನ ಗಮ್ಯ ತಲುಪುವೆ. ನಾಳೆ ಕತ್ತಲೆ ಇಲ್ಲ ಎಂದರೆ ಇವತ್ತು ಬೆಳಕೂ ಇಲ್ಲ.

ಬೆಳಕೆಂದರೆ ದೇವರು, ಬೆಳಕೆಂದರೆ ಜ್ಞಾನ, ಬೆಳಕೆಂದರೆ ಬಣ್ಣ, ಬೆಳಕೆಂದರೆ ಶಕ್ತಿ, ಬೆಳಕೆಂದರೆ ಧೈರ್ಯ, ಬೆಳಕೆಂದರೆ ಬದುಕು, ಬೆಳಕೆಂದರೆ ದಾರಿತಪ್ಪಿದವನಿಗೆ ಸಿಕ್ಕ ಹೊಳವು. ಬೆಳಕು ಅನಂತ, ಅಗಾಧ ಅದಕ್ಕೆ ನಮಗೆ ಬೆಳಕಿದ್ದರೆ ಇಷ್ಟ. ನಾವು ಬೆಳಕನ್ನು ಆರಾಧಿಸುತ್ತೇವೆ. ತಮಸೋಮ ಜ್ಯೋರ್ತಿಗಮಯ.

ದೀಪ ಆರಿಸಿ ಜೆನ್ ಗುರು ಕೇಳುತ್ತಾನೆ 'ಮಗು ಬೆಳಕು ಎಲ್ಲಿಗೆ ಹೊಯಿತು?' ಮಗುವಿನ ಉತ್ತರ ಸ್ಪಷ್ಟ 'ಅದು ಎಲ್ಲಿಂದ ಬಂದಿತ್ತೊ ಅಲ್ಲಿಗೆ ಹೊಯಿತು' ಗುರುವಿಗೆ ಯೋಚನೆ. 'ಅರೇ ಬೆಳಕು ಎಲ್ಲಿಂದ ಬಂತು?' ಆಗ ಗುರುವಿನೊಳಗೆ ಹುಟ್ಟಿದ್ದು ಬದುಕಿನ ಸತ್ಯ. ಬರುವವರು ಹೋಗುವವರು ಮನುಷ್ಯರು ಮಾತ್ರ. ಬೆಳಕಲ್ಲ. ಅದು ಬರುವುದಿಲ್ಲ, ಹೋಗುವುದಿಲ್ಲ. ಬೆಳಕು ಕತ್ತಲಲ್ಲಿ ಅಡಗಿ ಕೂತಿರುತ್ತದೆ. ಕತ್ತಲು ಬೆಳಕಿನೊಳಗೆ ಅಡಗಿರುತ್ತದೆ. ಬದುಕು ಪಾಂಗಿತವಾಗಿ ಸಾಗುತ್ತದೆ.

ಕತ್ತಲು ಬೆಳಕು ಎಂದೂ ಜಗಳಕ್ಕಿಳಿಯುವುದಿಲ್ಲ. ಬೆಳಕಿಗೆ ಕತ್ತಲು ದಾರಿ ಬಿಡುತ್ತದೆ. ಕತ್ತಲನು ಬೆಳಕು ಗೌರವಿಸುತ್ತದೆ. ನಾವು ಅವುಗಳನ್ನು ನೋಡಿ ಕಲಿಯಬೇಕು.

ನಿಮ್ಮೊಳಗೊಂದು ಅಂಧಕಾರವಿದ್ದರೆ ಒಂದು ಹಣತೆ ಹಚ್ಚಿಕೊಳ್ಳಿ. ಕಣ್ಣು ಚುಚ್ಚುವ ಢಾಳ ಬೆಳಕಲ್ಲಿ ಬದುಕಲಾಗುವುದಿಲ್ಲ ಕಣ್ಣಿಗೆ ಚೂರು ಅರೆ ಕತ್ತಲ ಮರೆಮಾಡಿಕೊಳ್ಳಿ. ತುಸು ಕತ್ತಲು, ಹೆಚ್ಚೆ ಬೆಳಕು ನಮಗಿರಲಿ. ಎರಡೂ ಕೂಡ ನಮ್ಮನ್ನು ಕೈಹಿಡಿದು ನಡೆಸಲಿ.

ಎದೆಯಿಂದ ಎದೆಗೆ ದೀಪ ಹಚ್ಚಿಕೊಳ್ಳಲು ಕೈ ಚಾಚೋಣ. ಯಾರಿಗೊ ಚಾಚಿದ ಕೈಗಳು ನಿಮ್ಮ ಬದುಕನ್ನು ಹಿಡಿದು ನಡೆಸಬಹುದು. ಕತ್ತಲು-ಬೆಳಲು ಎರಡೂ ಕೂಡ ನಿಮ್ಮನ್ನು ಪೊರೆಯುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.