ADVERTISEMENT

ಪೂಜಾ ಪದ್ದತಿ | ನಮ್ಮೂರ ಮಾನವಮಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 19:30 IST
Last Updated 30 ಸೆಪ್ಟೆಂಬರ್ 2022, 19:30 IST
ಚಿತ್ರ: ತಾಜುದ್ದಿನ್‌ ಅಜಾದ್‌
ಚಿತ್ರ: ತಾಜುದ್ದಿನ್‌ ಅಜಾದ್‌   

ನವದುರ್ಗೆಯರೊಂದಿಗೆ ಸಿರಿದೇವಿ, ಭೂದೇವಿಯರನ್ನೂ ಪೂಜಿಸುವ ಪದ್ದತಿ ಉತ್ತರ ಕರ್ನಾಟಕದಲ್ಲಿದೆ. ಕಲ್ಯಾಣ ಕರ್ನಾಟಕದಲ್ಲಿಯೂ ಇದಕ್ಕೆ ಘಟಸ್ಥಾಪನೆ, ದೀಪ ಹಾಕುವುದು ಎಂದು ಕರೆಯುತ್ತಾರೆ. ಮನೆಯ ದೇವರ ಜಗುಲಿಯ ಮೇಲೆ ಭೂತಾಯಿಯನ್ನು ಮಣ್ಣಿನ ರೂಪದಲ್ಲಿಯೂ, ಸಿರಿದೇವಿಯನ್ನು ಧಾನ್ಯದ ರೂಪದಲ್ಲಿಯೂ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಈ ಆಚರಣೆಯ ಕುರಿತು ವಿಜಯಪುರದ ಲೇಖಕಿ ಹೇಮಲತಾ ವಸ್ತ್ರದ ಇಲ್ಲಿ ವಿವರಿಸಿದ್ದಾರೆ.

***

ಮಹಾಲಯ ಅಮಾವಾಸ್ಯೆಯಮೊದಲಿಗೆ ಮನೆ ಶುಚಿಗೊಳಿಸಿ,ಮಡಿ ಮಾಡುವುದರೊಂದಿಗೆ ನಮ್ಮಲ್ಲಿ ನವರಾತ್ರಿ ಸಂಭ್ರಮ ಶುರುವಾಗುತ್ತದೆ. ಹೀಗೆ ನಮ್ಮೂರ ಮಾನವಮಿ(ಮಹಾನವಮಿ) ಶುರುವಾಗ್ತದೆ.

ADVERTISEMENT

ಸುಣ್ಣದಿಂದ ದೇವರ ಜಗಲಿ ಸಾರಿಸಿ, ಅದಕ್ಕೆ ಹುರಮುಂಜಿ ಪಟ್ಟಿ ಬಳಿದು ಗಟ್ಟ (ಘಟ ಸ್ಥಾಪನೆಯನ್ನು ಆಡುಭಾಷೆಯಲ್ಲಿ ಗಟ್ಟ ಅಂತ ಕರೀತಾರೆ) ಸಿದ್ಧ ಮಾಡಿ, ನವರಾತ್ರಿಯ ಮೊದಲ ದಿನ ದೇವರ ಜಗುಲಿಯ ಮೇಲೆ ಬಾಳೆ ಎಲೆ ಇಲ್ಲವೇ ಔಡಲದ ಎಲೆ ಅಥವಾ ಮುತ್ತುಗದ ಎಲೆಗಳಿಂದ (ಈ ಎಲೆಗಳು ಔಷಧೀಯ ಮತ್ತು ತಂಪು ಗುಣ ಹೊಂದಿರುವುದರಿಂದ ಮನೆಯನ್ನು ತಂಪಾಗಿರಿಸುತ್ತವೆ) ಪತ್ರೋಳಿ ಹೆಣೆಯುತ್ತೇವೆ. ಸೋಸಿದ ಮಣ್ಣನ್ನು ಚಚ್ಚೌಕವಾಗಿ ಹರಡಿ, ನಡುವೆ ನೀರು ತುಂಬಿದ ಮಣ್ಣಿನ ಕುಳ್ಳಿ ಇಡಲಾಗುತ್ತದೆ. ಮಡಕೆ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಕುಳ್ಳಿ ಎನ್ನುತ್ತಾರೆ. ಇದಕ್ಕೂ ವಿಭೂತಿ, ಕುಂಕುಮದ ಉದ್ದುದ್ದ ಪಟ್ಟಿ ಬರೆಯಲಾಗುತ್ತದೆ.

ಜೋಳ, ಗೋಧಿ, ಕಡಲೆ, ಅಗಸಿ, ಹೆಸರುಗಳಂತಹ ಏಳು ಅಥವಾ ಒಂಬತ್ತು ಬಗೆಯ ದ್ವಿದಳ ಧಾನ್ಯಗಳನ್ನು ಹರಡುತ್ತೇವೆ. ಮೇಲೆ ಮತ್ತೆ ಮಣ್ಣಿನ ಹೊದಿಕೆ ಹೊದಿಸುತ್ತೇವೆ. ಮಣ್ಣನ್ನು ಕಳಸದ ಸುತ್ತ ಗೋಪುರದಂತೆ ಎತ್ತರಿಸಿ, ಮಣ್ಣು ಒದ್ದೆಯಾಗುವಷ್ಟು ನೀರು ಚಿಮುಕಿಸುತ್ತೇವೆ. ನೀರು ತುಂಬಿದ ಕುಳ್ಳಿಯ ಕಂಠದೊಳಗೆ ವೀಳ್ಯದೆಲೆ ಅಥವಾ ಮಾವಿನೆಲೆ ಇರಿಸಿ, ನಡುವೆ ತೆಂಗಿನ ಕಾಯಿಯನ್ನು ಇಡಲಾಗುತ್ತದೆ. ಇದನ್ನು ಗಣಪನೆಂದೇ ಪರಿಗಣಿಸಲಾಗುತ್ತದೆ. ಕುಡಿಕೆಗೆ ಅರಿಶಿಣ, ಕುಂಕುಮ ಹೂ ಇರಿಸಿ,ಎರಡೂ ಬದಿಯಲ್ಲಿ ನಂದಾದೀಪ ಹಚ್ಚಿಡುತ್ತೇವೆ. ಇವು ಶಾಂತವಾದಂತೆ ನಿರಂತರವಾಗಿ ಬೆಳಗುವಂತೆ ನೋಡಿಕೊಳ್ಳುವುದೇ ‘ದೀಪ ಹಾಕುವ’ ವ್ರತ ಎಂದು ಕರೆಯಲಾಗುತ್ತದೆ.

ಆಯುಧ ಪೂಜೆಯ ದಿನ ಮನೆಯಲ್ಲಿನ ಈಳಿಗೆಮಣೆ ಆದಿಯಾಗಿ (ಒಕ್ಕಲುತನದ ಮನೆಯಾಗಿದ್ದರೆ) ಗುದ್ದಲಿ, ಸಲಿಕೆ ಸೇರಿದಂತೆ ಎಲ್ಲ ಕೃಷಿ ಪರಿಕರಗಳಿಗೂ ಪೂಜೆ. ನಾವು ಪುಸ್ತಕ, ಪೆನ್ನನ್ನೂ ಪೂಜೆಗೆ ಇಡುತ್ತೇವೆ.

ನಂತರ ಗೋದಿಹಿಟ್ಟು, ಅರಿಶಿಣ ಮತ್ತು ಚೂರು ಬೆಲ್ಲ ಹಾಕಿ ಲಟ್ಟಿಸಿ ಕರಿದ ಗಾರಿಗೆಗಳನ್ನು ಪೋಣಿಸಿ ತರಗ ತಯಾರಿಸುತ್ತೇವೆ. ತರಗ ಎಂದರೆ ಮಕ್ಕಳ ತೊಟ್ಟಿಲ ಮೇಲೆ ಕಟ್ಟುವ ಗುಬ್ಬಿಚಟ್ಟದಂತೆ ಇರುವ ಇದು ಗಾರಿಗೆಗಳಿಂದ ಅಲಂಕೃತಗೊಂಡು ಗಟ್ಟದ ಮೇಲೆ ತೂಗಿಬಿಡುವಂಥದ್ದು. ಗಾರಿಗೆಗಳ ಜೊತೆಗೆ ಈ ಹಿಟ್ಟಿನಿಂದ ಕಾಲುಂಗುರ, ತಾಳಿ, ಬಳೆ, ಎಲೆ, ಅಡಿಕೆ,ಜಡೆ, ಬಾಚಣಿಕೆ ಇತ್ಯಾದಿ ಮಾಡಿ ಎಣ್ಣೆಯಲ್ಲಿ ಕರಿದು ಪೂಜಾ ಸ್ಥಳದ ಮೇಲೆ ಕಟ್ಟಲಾಗುತ್ತದೆ. ಬೆಳೆದ ಪೈರಿನ ಸುತ್ತಾ,ನೂಲು ಸುತ್ತಿ, ಪೂಜೆ ಮಾಡಲಾಗುತ್ತದೆ.

ಒಂಬತ್ತನೆಯ ದಿನ,ಪೂಜೆ, ನೈವೇದ್ಯ ನಂತರ ಗಟ್ಟವನ್ನು ತುಸು ಜರುಗಿಸಿದ ಮೇಲೆ ಪೂಜೆ ಸಂಪನ್ನ. ಬೆಳೆದ ಸಸಿಗಳು ಮನೆ ಸಮೃದ್ಧವಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಇವನ್ನು ನವಮಿಯ ದಿನ ಒಂದು ಪರಾತದಲ್ಲಿಟ್ಟುಕೊಂಡು ಹತ್ತಿರದ ಹಳ್ಳ ಅಥವಾ ಬಾವಿ ಬಳಿ ಇರಿಸಲಾಗುತ್ತದೆ. ಅದರೆದುರು ತೊಳೆದ ಐದು ಕಲ್ಲುಗಳನ್ನಿಟ್ಟು ಪೂಜಿಸಿ, ನಂತರ ಸಸಿಗಳನ್ನು ನೀರಿನಲ್ಲಿ ಬಿಡುತ್ತೇವೆ. ಕುಡಿಕೆಯಲ್ಲಿನ ನೀರನ್ನೂ ಹಾಕಿ, ಅದನ್ನು ತೊಳೆದು, ನೀರು ತುಂಬಿಕೊಂಡು, ಪೂಜಿಸಿದ ಕಲ್ಲ ಹರಳುಗಳನ್ನೂ ಜೊತೆಗೆ ತೆಗೆದುಕೊಂಡು ಬರುತ್ತೇವೆ. ಬಂದು, ತಲೆಬಾಗಿಲ ಅಕ್ಕಪಕ್ಕದಲ್ಲಿ ಅವನ್ನಿಟ್ಟು ಒಳ ಬಂದರೆ ಅಲ್ಲಿಗೆ ಈ ವ್ರತ ಸಂಪೂರ್ಣ. ಇದು ದೀಪ ಇರುವ ಮನೆಯ ವಿಶೇಷ ಆಚರಣೆ.

ದಸರಾ ಅಥವಾ ವಿಜಯದಶಮಿಯಂದು ಊರಿನ ಎಲ್ಲ ಮನೆಗಳಲ್ಲೂ ಸಾಮಾನ್ಯವಾದ ಆಚರಣೆ. ಗಂಡು ಮಕ್ಕಳಿಗೆ ಎಣ್ಣೆ ಮಜ್ಜನ, ಸುಡು ನೀರಿನಲ್ಲಿ ಮೀಯುವ ಸಡಗರ. ಹೆಣ್ಣುಮಕ್ಕಳಿಗೆ ಅಡುಗೆಯ ಗಡಿಬಿಡಿ. ಮಕ್ಕಳಿಗೋ ಉಣ್ಣುವ, ಹೊಸಬಟ್ಟೆ ಉಡುವ ಸಂಭ್ರಮ. ಗಂಡಸರು ಮಕ್ಕಳು ಸಂಜೆ ಬಾಜಾ ಬಜಂತ್ರಿಯೊಂದಿಗೆ ಊರಾಚೆಗಿನ ಬನ್ನಿಮರದ ಹತ್ತಿರ ಹೋಗಿ, ಬನ್ನಿ ಮರ ಪೂಜಿಸಿ, ಮರದ ಗೆಲ್ಲುಗಳನ್ನು ಕತ್ತರಿಸಿ ಊರೊಳಗೆ ತರುತ್ತಾರೆ. ತಂದುದರಲ್ಲಿ ಎಲ್ಲರೂ ತಮಗೆ ಬೇಕಾದಷ್ಟನ್ನು ತಮ್ಮ ತಮ್ಮ ಮನೆಗೆ ಬನ್ನಿ ಒಯ್ಯುತ್ತಾರೆ, ಪರಸ್ಪರ ಹಂಚಿ ‘ನಾವು ನೀವು ಬಂಗಾರದಂಗ ಇರೋಣು‘ ಎಂದು ಹೇಳುತ್ತ ಶುಭ ಕೋರುತ್ತಾರೆ. ನಮ್ಮೂರಿನ ಮಾನವಮಿ ಕತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.