ADVERTISEMENT

ಧರಂಪಾಲ್ ಚಿತ್ತ-ಮನಗಳ ಸಂಶೋಧಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 19:30 IST
Last Updated 20 ಫೆಬ್ರುವರಿ 2021, 19:30 IST
ಧರಂಪಾಲ್‌
ಧರಂಪಾಲ್‌   

ಒಬ್ಬ ವ್ಯಕ್ತಿ ಹೇಗೋ ಹಾಗೇ ಒಂದು ರಾಷ್ಟ್ರ ಕೂಡ, ತನ್ನ ಅಸ್ಮಿತೆಯನ್ನೂ ಕಾಲಿಕತೆಯನ್ನೂ ಒಟ್ಟೊಟ್ಟಿಗೇ ಪೊರೆದುಕೊಳ್ಳಬೇಕಾಗುತ್ತದೆ. ಅಸ್ಮಿತೆ ಸಹಜವಾಗಿ ನಿನ್ನೆಗಳತ್ತ ಮುಖ ಮಾಡಿದ್ದರೆ, ಕಾಲಿಕ ಅಗತ್ಯಗಳು ಅನಿವಾರ್ಯವಾಗಿ ನಾಳೆಗಳನ್ನು ನೋಡುತ್ತಿರುತ್ತವೆ. ಯಾವುದೇ ಕಾಲದ ಇತಿಹಾಸವೆಂಬುದು ಈ ಎರಡು ತುದಿಗಳ ನಡುವಿನ ತೂಗುನಡಿಗೆಯಷ್ಟೇ. ಹಾಗೆ ನೋಡಿದರೆ, ಸ್ವಾತಂತ್ರ್ಯೋತ್ತರ ಭಾರತವು ತನ್ನ ಕಾರ್ಯರಂಗದಲ್ಲಿ ಸ್ವಾಯತ್ತತೆಯನ್ನು ಗಳಿಸಿತಾದರೂ ತನ್ನ ರಾಷ್ಟ್ರೀಯ ಮೌಲ್ಯಗಳನ್ನು ಕಂಡುಕೊಳ್ಳುವಲ್ಲಿ, ಎಂದರೆ ತನ್ನ ನೈಜ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅರಿತು ತನ್ಮೂಲಕ ತನ್ನ ವೈಶ್ವಿಕ ದೃಷ್ಟಿಯನ್ನು ರೂಪಿಸಿಕೊಳ್ಳುವಲ್ಲಿ ಸ್ವೋಪಜ್ಞತೆಯನ್ನು ಸಾಧಿಸಲಿಲ್ಲ.

ಇಂದಿನ ಸಾಮಾಜಿಕ ಮತ್ತು ರಾಜಕೀಯ ವಿಪ್ಲವಗಳ ಸಂದರ್ಭದಲ್ಲಂತೂ ಈ ಕೊರತೆಯ ವಿಶ್ವರೂಪವನ್ನೇ ಕಾಣುತ್ತಿದ್ದೇವೆ. ಈ ಸಮಸ್ಯೆಯು ಮೇಲುನೋಟಕ್ಕೆ ಬಹಳ ಸರಳವಾಗಿ ಕಾಣಿಸಿದರೂ ಇದರ ಗಹನತೆ ಈ ಕಾರ್ಯಕ್ಕೆ ಬದ್ಧಸಂಕಲ್ಪರಾಗಿ ದುಡಿದವರಿಗಷ್ಟೇ ತಿಳಿದೀತು. ಇದು ಬರಿಯ ತಾತ್ತ್ವಿಕ ಪ್ರಗಲ್ಭತೆಯಲ್ಲ, ಬರಿಯ ಕಾಲಿಕವಾದ ಕ್ರಿಯಾಶೀಲತೆಗೂ ದಕ್ಕುವುದಿಲ್ಲ. ಇಡಿಯ ಜನಾಂಗದ ಜೀವಂತ ಸ್ಪಂದವನ್ನು, ನಾಡಿಮಿಡಿತವನ್ನು ಸಂವೇದನಾಶೀಲವಾಗಿ ಅರಿಯಬೇಕಾದರೆ ಬುದ್ಧಿಯು ಪ್ರಜ್ಞೆಯಾಗಿಯೂ ಬದುಕು ಯಜ್ಞವಾಗಿಯೂ ಮಾರ್ಪಡಬೇಕಾಗುತ್ತದೆ. ಇಂತಹ ತಪಸ್ಸನ್ನು ಆಜೀವ ಪರ್ಯಂತ ನಡೆಸಿದ ಮಹನೀಯರಲ್ಲಿ ಧರಂಪಾಲ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಧರಂಪಾಲರಿಗೆ ಈ ದೃಷ್ಟಿ ಮಹಾತ್ಮ ಗಾಂಧಿಯವರಿಂದ ಬಂದದ್ದು ಆಶ್ಚರ್ಯವೇನಲ್ಲ. ಸ್ವತಃ ಗಾಂಧಿಜೀಯವರೂ ತಮ್ಮ ಇಡೀ ಜೀವನ ಇದೇ ಕಾರ್ಯವನ್ನಲ್ಲವೇ ಮಾಡಿದ್ದು? ‘ತಾನು ಶ್ರೀಸಾಮಾನ್ಯರ ದನಿಯಾಗಬೇಕು’ ಎಂಬುದು ಅವರ ಹೃದಯದ ದನಿಯೇ ಆಗಿತ್ತಷ್ಟೆ. ಚಿಕ್ಕ ವಯಸ್ಸಿನಲ್ಲಿಯೇ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಧರಂಪಾಲ್ ಮುಂದೆ ಕಮಲಾದೇವಿ ಚಟ್ಟೋಪಾಧ್ಯಾಯ, ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ ಅಂತಹವರೊಂದಿಗೆ ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡಿದರು. ಮೀರಾ ಬೆನ್‌ ಅವರೊಂದಿಗೆ ಗಾಂಧೀಜಿಯವರ ಕಲ್ಪನೆಯ ಆದರ್ಶಗ್ರಾಮವನ್ನು ಕಟ್ಟಲೂ ಶ್ರಮಿಸಿದರು. ಕಡೆಗೆ ಆ ಆದರ್ಶದ ಅವ್ಯಾವಹಾರಿಕತೆಯನ್ನು ಅರಿತು ಹೊರಗೆ ಬಂದರು. ಇರುವ ಗ್ರಾಮ ವ್ಯವಸ್ಥೆಗಳನ್ನು ದೃಢಗೊಳಿಸಲು AVARD ಎಂಬ ಸಂಸ್ಥೆಯ ಕಾರ್ಯದರ್ಶಿಯಾಗಿ ಬಹಳ ಕಾಲ ಕೆಲಸ ಮಾಡಿದರು. ಮುಂದೆ ಅಖಿಲ ಭಾರತ ಪಂಚಾಯತ್ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ADVERTISEMENT

ಈ ಅನುಭವದ ಹಿನ್ನೆಲೆಯಲ್ಲಿಯೇ ಅವರು ಮೊದಲು ಮದ್ರಾಸ್ ಪಂಚಾಯತ್ ವ್ಯವಸ್ಥೆಯ ಬಗ್ಗೆ ಸಂಶೋಧನೆ ಮಾಡಿದರು. ತಮ್ಮಷ್ಟಕ್ಕೇ ಸ್ವತಂತ್ರವೂ ಸ್ವಾವಲಂಬಿಯೂ ಆಗಿದ್ದ ಪಂಚಾಯತ್ ವ್ಯವಸ್ಥೆಯನ್ನು ಬ್ರಿಟಿಷರು ವ್ಯವಸ್ಥಿತವಾಗಿ ಹೇಗೆ ಮುರಿಯುತ್ತ ಬಂದರು ಎಂಬುದನ್ನು ಸರ್ಕಾರಿ ದಾಖಲೆಗಳಿಂದಲೇ ಶೋಧಿಸಿದರು ಮತ್ತು ಇದನ್ನು ಸ್ವತಂತ್ರ ಭಾರತದ ಸಂವಿಧಾನ ಕರಡು ಚರ್ಚೆಯ ಹಿನ್ನೆಲೆಯಲ್ಲಿಯೂ ಪರಾಮರ್ಶಿಸಿದ್ದರು. ಸ್ವತಂತ್ರ ಭಾರತ ಅಜ್ಞಾನದಿಂದಲೂ ಅಹಂಕಾರದಿಂದಲೂ ಬ್ರಿಟಿಷರ ಅದೇ ನೀತಿಯನ್ನು ಅನುಸರಿಸುತ್ತಾ ಇಡೀ ಪಂಚಾಯತ್ ವ್ಯವಸ್ಥೆಯನ್ನು ನೆಲಸಮ ಮಾಡಿದ್ದನ್ನು ಕಂಡು ಮರುಗಿದರು ಕೂಡ.

ಅಧಿಕಾರದ ವಿಕೇಂದ್ರೀಕರಣವೆಂಬ ಸೂತ್ರದಲ್ಲಿ ಪಂಚಾಯತ್ ವ್ಯವಸ್ಥೆಯನ್ನು ನೋಡಿದ ಸ್ವತಂತ್ರ ಭಾರತದ ರಾಜನೀತಿಜ್ಞರು ಮತ್ತು ಅಧಿಕಾರಿಗಳು, ಪಂಚಾಯತ್ ವ್ಯವಸ್ಥೆಯೆಂದರೆ ಹಳ್ಳಿಹಳ್ಳಿಗೆ ದಿಲ್ಲಿಯನ್ನು ತಂದಿಡುವುದು ಎಂದೇ ಭಾವಿಸಿದರು, ಅದು ಅವರಿಗೆ ಅನುಕೂಲಕರವೂ ಆಗಿತ್ತು. ಇದು ಇಂದಿಗೂ ಎಳ್ಳಷ್ಟೂ ಬದಲಾಗಿಲ್ಲ. ಇದಕ್ಕೆ ತೀರಾ ಹಸಿ ಉದಾಹರಣೆಗಳೂ ನಮ್ಮ ಕಣ್ಮುಂದೆಯೇ ಇವೆ.

ನಾವು ಜನರು ಹಳ್ಳಿಗಳನ್ನು ತೊರೆದು ನಗರ
ಗಳನ್ನು ಸೇರುವ ವಲಸೆ ಪ್ರಕ್ರಿಯೆಯನ್ನು ನಮ್ಮ ಪಾಪ್ಯುಲರ್ ಕಥನಗಳ ಮೂಲಕ ಎಷ್ಟು ಸಾಮಾನ್ಯ ಮಾಡಿಬಿಟ್ಟಿದ್ದೇವೆಂದರೆ, ಕೋವಿಡ್ ಸಮಯದಲ್ಲಿ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆ
ಯಲ್ಲಿ ನಡೆದು ಹೊರಟ ದಾರುಣ ದೃಶ್ಯವೂ ನಮ್ಮನ್ನು ನೈತಿಕವಾಗಿ ಕಾಡಲಿಲ್ಲ. ಇದರರ್ಥ ನಾಗರಿಕರಾಗಿ ನಾವು ಇದಕ್ಕಾಗಿ ಮರುಗಲಿಲ್ಲ ಎಂದಲ್ಲ; ಆದರೆ ನಮ್ಮ ಮರುಕ ನಮ್ಮ ಏಳು ದಶಕಗಳ ತಪ್ಪನ್ನು ತಿದ್ದುವಷ್ಟು ನೈತಿಕವಾಗಿ ಕ್ರಿಯಾಶೀಲವಾಗಲು ಸಾಲದಾಯಿತೋ ಏನೋ! ಧರಂಪಾಲ್ ಗಾಂಧೀಜಿಯವರಂತೆಯೇ ತಳಸಮುದಾಯಗಳ ದೃಷ್ಟಿಯಿಂದ ಸಮಾಜರಚನೆಯನ್ನು ನೋಡಲು ಪ್ರಯತ್ನಿಸಿದ್ದು ಈ ಮಾನವೀಯ ಕಾರಣಕ್ಕಾಗಿಯೇ ಅಲ್ಲವೇ?

ಮುಖ್ಯವಾಗಿ ‘ಪ್ರಗತಿ’ ಎಂಬ ಆಧುನಿಕರ ಸರಳರೇಖಾತ್ಮಕವಾದ ತಾತ್ತ್ವಿಕ ಆಕೃತಿಯಿಂದ ಬಿಡಿಸಿಕೊಳ್ಳಬೇಕಾದ ಅನಿವಾರ್ಯ ನಮಗೆ 21ನೆಯ ಶತಮಾನದಲ್ಲಾದರೂ, ಇಷ್ಟೆಲ್ಲಾ ವೈಶ್ವಿಕ ಬಿಕ್ಕಟ್ಟುಗಳ ನಂತರವಾದರೂ ಅರ್ಥವಾಗಬೇಕಿದೆ. ಇದಕ್ಕಿರುವ ಮಾರ್ಗ ದಮನಿತರ ಲೋಕದೃಷ್ಟಿಯನ್ನು ಅರ್ಥಮಾಡಿಕೊಳ್ಳುವುದು. ಇದಕ್ಕಾಗಿ ಧರಂಪಾಲ್ ಲಂಡನ್ನಿನ ಇಂಡಿಯಾ ಆಫೀಸಿನ ಆರ್ಕೈವ್‌ಗಳನ್ನು ಸಂಶೋಧಿಸಿದರು. ವಾಸ್ತವವಾಗಿ ಧರಂಪಾಲರಿಗೆ ತಮ್ಮ ಕೌಟುಂಬಿಕ ಕಾರಣಗಳಿಂದ 1966ರಿಂದ 1982ರವರೆಗೆ ಲಂಡನ್ನಿನಲ್ಲಿ ಇರಬೇಕಾಗಿ ಬಂದಿತು. ಅದೇ ಸಮಯವನ್ನು ಅವರು ಈ ಬ್ರಿಟಿಷ್ ದಾಖಲೆಗಳ ಸಂಶೋಧನೆಗೆ ಬಳಸಿಕೊಂಡರು. ಆಗಿನ ಕಾಲಕ್ಕೆ ನಕಲು ಪ್ರತಿ ಮಾಡಿಸುವುದು ದುಬಾರಿಯೂ ಇತ್ತು, ಜೊತೆಗೆ ಇವರಿಗೆ ಆದಾಯವೂ ಇರಲಿಲ್ಲ. ಹಾಗಾಗಿ ಆ ಸಾವಿರಾರು ದಾಖಲೆಗಳನ್ನು ಪ್ರತಿಶಬ್ದವನ್ನೂ ಲಾಂಗ್ ಹ್ಯಾಂಡಿನಲ್ಲಿ ಪ್ರತಿ ಬರೆದುಕೊಂಡು, ನಂತರ ಅವನ್ನು ಟೈಪು ಮಾಡಿಸಿಕೊಂಡು ಭಾರತಕ್ಕೆ ತಂದರು. ಹಾಗೆ ತಂದ ದಾಖಲೆಗಳ ಗಾತ್ರವೇ ಅನೇಕ ಟ್ರಂಕುಗಳಷ್ಟು ತುಂಬಿತ್ತು. ಈ ಕಥೆಗೇ ಒಂದು ರೋಚಕತೆಯಿದೆಯಷ್ಟೇ, ಹಾಗೆಂದು ಇದು ಭಾವುಕ ದೇಶಭಕ್ತಿಯ ಅಭಿವ್ಯಕ್ತಿ ಮಾತ್ರ ಎಂದು ತಿಳಿದರೆ ಅದರಿಂದ ಧರಂಪಾಲರಿಗೂ ಅವರು ನಂಬಿದ ವಿಶಾಲ ಜೀವನತತ್ತ್ವಕ್ಕೂ ಅಪಮಾನ ಮಾಡಿದಂತಾಗುತ್ತದೆ. ಇದು ಧರಂಪಾಲರಿಗೆ ನಿಜವಾದ ಅರ್ಥದಲ್ಲಿ ತಪಸ್ಸಾಗಿತ್ತು. ಮುಂದೆ ಅವರು ಜೀವನದುದ್ದಕ್ಕೂ ಭಾರತವನ್ನು ಹೇಗೆ ಅನುಸಂಧಾನಿಸಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ.

ಸುಮಾರು ಎರಡು ದಶಕಗಳು ಈ ದಾಖಲೆಗಳನ್ನು ಆಳವಾಗಿ ಸಂಶೋಧಿಸಿ, ಮೂರು ಸಂಪುಟಗಳಲ್ಲಿ ಅವನ್ನು ಪ್ರಕಟಿಸಿದರು. ಇಲ್ಲಿ ಧರಂಪಾಲರ ಸಂಶೋಧನಾ ದೃಷ್ಟಿಯೇ ಬಹಳ ಗಮನಾರ್ಹವಾಗಿದೆ. ಈ ಎಲ್ಲ ಅಧ್ಯಯನವನ್ನು ಅವರು ಮಾಡಿದ್ದು ಬ್ರಿಟಿಷರ ಆಳ್ವಿಕೆಗೆ ಮೊದಲು ಭಾರತೀಯ ಸಮಾಜ ಹೇಗಿತ್ತು? ಅದರ ಸಹಜ ಚಿಂತನಕ್ರಮವೇನಿತ್ತು? ಅದರ ಸಾಮಾಜಿಕ ಸಂರಚನೆಗಳ ಪದರಗಳೇನು ಇತ್ಯಾದಿ ಸಂಗತಿಗಳನ್ನು ಅರಿಯುವುದಕ್ಕಾಗಿಯೇ. ಈ ಪ್ರಕ್ರಿಯೆಯನ್ನು ಅವರು ಪ್ರಾರಂಭಿಸಿದ್ದೇ ಬ್ರಿಟಿಷರು ತಮ್ಮ ಅನುಕೂಲಗಳಿಗಾಗಿ ಭಾರತದ ಬಗ್ಗೆ ಹುಟ್ಟುಹಾಕಿದ್ದ, ಮುಂದೆ ಸ್ವತಂತ್ರ ಭಾರತದ ಶಿಕ್ಷಿತರೂ ನಂಬಿಕೊಂಡು ಬಂದಿದ್ದ ಮುಖ್ಯ ಗೃಹೀತಗಳ ಬೆನ್ನುಹತ್ತಿಯೇ.

17ನೇ ಶತಮಾನದ ಕಾಲಕ್ಕಾಗಲೇ ಭಾರತ ಪೂರ್ಣ ಅವನತ ಸ್ಥಿತಿಯಲ್ಲಿತ್ತು, ನಮ್ಮೆಲ್ಲ ಸಾಮಾಜಿಕ ಸಾಂಸ್ಕೃತಿಕ ಕಲ್ಪಗಳೂ ಜಡ್ಡುಗಟ್ಟಿ ಹೋಗಿದ್ದವು ಎಂಬುದೇ ಆ ಗೃಹೀತ. ಇದರ ವಿಸ್ತರಣೆಯಾಗಿ ಭಾರತ
ದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೇ ಇರಲಿಲ್ಲ, ಇದ್ದರೂ ಅದು ಬರಿಯ ಮೇಲ್ಜಾತಿಯವರಿಗೆ ಮಾತ್ರ ಮೀಸಲಾ
ಗಿತ್ತು ಎಂದೆಲ್ಲಾ ಭಾರತೀಯ ಶಿಕ್ಷಿತರೂ ನಂಬಿಕೊಂಡಿದ್ದರಷ್ಟೇ (ಇವತ್ತಿಗೂ ಇದನ್ನು ನಂಬುವವರಿದ್ದಾರೆ ಎಂಬುದು ಬೇರೆ ಮಾತು).

ಭಾರತದಲ್ಲಿ ಸುವ್ಯವಸ್ಥಿತವಾಗಿ ನಡೆಯುತ್ತಿದ್ದ ಶಿಕ್ಷಣ ವ್ಯವಸ್ಥೆಯ ವಿವರಗಳನ್ನು ಧರಂಪಾಲರು ಬ್ರಿಟಿಷ್ ದಾಖಲೆ
ಗಳ ಮೂಲಕವೇ ಬಿಚ್ಚಿಟ್ಟರು. ಜೊತೆಗೆ ಹೇಗೆ ಬಹುತೇಕ ಪ್ರಾಂತಗಳಲ್ಲಿ ಈ ವ್ಯವಸ್ಥೆ ಎಲ್ಲ ಜಾತಿಗಳವರನ್ನೂ ಒಳಗೊಂಡಿತ್ತು, ಕೆಲವು ಕಡೆ ಬ್ರಾಹ್ಮಣರಿಗಿಂತಲೂ ಉಳಿದ ಅನೇಕ ಜಾತಿಗಳವರದೇ ಮೇಲುಗೈ ಕೂಡ ಆಗಿತ್ತು ಎಂಬುದನ್ನೂ ತೆರೆದಿಟ್ಟರು. ಬಹುಶಃ ಜಾತಿ ಎಂಬುದನ್ನು ನಮ್ಮ ಶಿಕ್ಷಿತ ವರ್ಗ ಅರ್ಥ
ಮಾಡಿಕೊಂಡಂತೆ ಅಭಿಜಾತ ಭಾರತ ನೋಡುತ್ತಿರಲಿಲ್ಲ ಎಂಬುದನ್ನೂ ಸೂಚಿಸಿದರು.

ಇನ್ನೊಂದು ಮುಖ್ಯ ಗೃಹೀತವೆಂದರೆ ಭಾರತದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಬೆಳೆದಿರಲೇ ಇಲ್ಲ. ಇದ್ದದ್ದೆ
ಲ್ಲವೂ ಪ್ರೋಟೋ-ಸೈನ್ಸ್ ಅಷ್ಟೇ ಎಂದು. ಧರಂಪಾಲ್ ಒಂದಿಡೀ ಸಂಪುಟದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಭಾರತ
ದಲ್ಲಿ ಪ್ರಚಲಿತವಿದ್ದ ಜ್ಯೋತಿಶ್ಶಾಸ್ತ್ರ, ಆಯುರ್ವೇದ, ಶಸ್ತ್ರಚಿಕಿತ್ಸೆ, ಲೋಹಶಾಸ್ತ್ರ, ಕುಲುಮೆಯ ಬಳಕೆ, ಉಕ್ಕು ಉತ್ಪಾದನೆ, ಕೈಮಗ್ಗ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿನ ವಾಸ್ತವಾಂಶಗಳನ್ನು ಸಂಶೋಧಿಸಿ ದಾಖಲಿಸಿದರು. ಈವತ್ತಿನ ಸಂಶೋಧನೆಗಳಂತೂ ಈ ಎಲ್ಲ ಕ್ಷೇತ್ರಗ
ಳಲ್ಲಿ ಭಾರತ ಅಂದಿನ ಇಂಗ್ಲೆಂಡಿಗಿಂತ ಸಾಕಷ್ಟು ಮುಂಚೂಣಿಯಲ್ಲಿತ್ತು ಎಂಬುದನ್ನು ವಿವರವಾಗಿ ದಾಖಲಿಸಿವೆ. ಧರಂಪಾಲ್ ಅವರು ಅಸಹಕಾರ ಚಳವಳಿಯ ಮೂಲಸ್ರೋತಸ್ಸು ಭಾರತದಲ್ಲಿ ಇದ್ದದ್ದರ ಬಗ್ಗೆ
ಸಂಶೋಧಿಸಿದ್ದು ಆಗಿನ ಭಾರತೀಯರ
ಸ್ವಾಭಿಮಾನೀ ಜೀವನದೃಷ್ಟಿಗೆ ಹಿಡಿದ
ಕನ್ನಡಿಯೂ ಹೌದು. ಈ ದೃಷ್ಟಿಯಲ್ಲಿ ಭಾರತೀಯ ಸಮಾಜ
ವನ್ನು ಅರ್ಥಮಾಡಿಕೊಳ್ಳುವ ದೊಡ್ಡವ್ಯಾಪ್ತಿಯ ಪ್ರಯತ್ನಗಳು ಇಂದಿಗೂ ತಮ್ಮ ಶೈಶವವನ್ನು ದಾಟಿಲ್ಲ ಎಂಬುದನ್ನೂ ನಾವು ಗಮನಿಸಿಕೊಳ್ಳುವುದು ಒಳಿತು.

ಆದರೆ ಇದು ‘ಜಗತ್ತಿನಲ್ಲಿ ಇದ್ದದ್ದೆಲ್ಲವೂ ನಮ್ಮಲ್ಲಿಯೂ ಇತ್ತು’ ಎಂದು ಸಾಧಿಸಹೊರಡುವ ಕೀಳರಿಮೆಯ ಅಥವಾ ಮೇಲರಿಮೆಯ ಮಾನಸಿಕ ಕ್ಲೇಷದ ವಿದ್ವತ್ತೆಯಲ್ಲ ಎಂಬುದನ್ನೂ ನಾವು ಮರೆಯಬಾರದು. ಸ್ವತಃ ಧರಂಪಾಲ್ ಈ ಸಂಶೋಧನೆಗಳ ಉದ್ದೇಶವನ್ನು ಆಳವಾಗಿ ಪ್ರಶ್ನಿಸಿಕೊಂಡಿದ್ದಾರೆ. ಈ ಬಗೆಯ ಫಾಸಿಲೈಸ್ಡ್ ಅಧ್ಯಯನಗಳಿಂದ ನೈಜ ಭಾರತೀಯ ಚಿತ್ತವನ್ನು ಅರಿಯಲು ಸಾಧ್ಯವಿಲ್ಲ ಎಂದೂ ಅವರೇ ಹೇಳಿದ್ದಾರೆ. ಅವರ ಉದ್ದೇಶ ನಮ್ಮನ್ನು ನಾವು ನಮ್ಮದೇ ದೃಷ್ಟಿಯಿಂದ ನೋಡಿಕೊಳ್ಳಲು ಸಾಧ್ಯವಾಗಬೇಕು ಎಂಬುದೇ ಆಗಿತ್ತು. ಒಬ್ಬ ಸಾಮಾನ್ಯ ಭಾರತೀಯ ತನ್ನನ್ನು ತಾನು ಹೇಗೆ ಗ್ರಹಿಸುತ್ತಾನೆ? ಅವನ ಲೋಕದೃಷ್ಟಿಯೇನು ಎಂಬುದನ್ನು ಅರಿಯುವುದು ಅವರಿಗೆ ಅತ್ಯಂತ ಮುಖ್ಯವಾಗಿ ಕಂಡಿತ್ತು. ಇದಕ್ಕಾಗಿ ಅವರು ತಮ್ಮ ಶಿಕ್ಷಿತ ಗ್ರಹಿಕೆಗಳನ್ನು ಬದಿಗಿಟ್ಟು, ತಮ್ಮ ಸಂಶೋಧಕನ ಅಹಂಕಾರವನ್ನೂ ತೆಗೆದಿಟ್ಟು, ಸಮಾಜದ ಆಳಕ್ಕೆ ಮುಳುಗು ಹಾಕಿದರು, ಅದನ್ನೇ ಧ್ಯಾನಿಸಿದರು ಕೂಡ.

ಇಂದು ಎಲ್ಲರೂ ತಾವು ಶ್ರೀಸಾಮಾನ್ಯರ ದನಿಯಾಗುತ್ತಿದ್ದೇವೆ ಎಂದು ಘೋಷಿಸಿಕೊಳ್ಳುವವರೇ. ಆದರೆ ಯಾರಿಗೂ ತಮ್ಮ ಗ್ರಹಿಕೆಯ ಕ್ರಮಗಳನ್ನು ಪ್ರಶ್ನಿಸಿಕೊಳ್ಳುವ ವ್ಯವಧಾನ ಮಾತ್ರ ಕಾಣುವುದಿಲ್ಲ. ‘ಭಾರತೀಯರು ಇನ್ನೂ ಪೌರಾಣಿಕವಾದ ಕಲಿಯುಗದ ಕಲ್ಪನೆಯಲ್ಲಿಯೇ ಬದುಕುತ್ತಿದ್ದಾರೆ ಎಂದಾದರೆ, ನಾವು 21ನೆಯ ಶತಮಾನವನ್ನೂ ಅವರ ಕಲಿಯುಗದ ಮೂಲಕವೇ ಅರ್ಥಮಾಡಿಕೊಳ್ಳಬೇಕಷ್ಟೇ’ ಎನ್ನುತ್ತಾರೆ
ಧರಂಪಾಲ್. ಈ ಮುಕ್ತತೆ ನಮ್ಮ ಶಿಕ್ಷಣದ ಅಹಂಕಾರ
ವನ್ನು ಪ್ರಶ್ನಿಸುತ್ತಿಲ್ಲವೇ? ತಮಗಿಷ್ಟವಾದ ಸಿದ್ಧಾಂತಗಳನ್ನೇ ನಂಬುವ, ತಮ್ಮಂಥವರದೇ ಅಭಿಪ್ರಾಯಗಳ ‘ಎಕೊ ಚೇಂಬರಿ’ನಲ್ಲಿ ಬದುಕುವುದೇ ತಮ್ಮ ಬದ್ಧತೆ ಎಂದುಕೊಂಡಿರುವ ಈ ಕಾಲದಲ್ಲಿ ಈ ನಿರ್ಮಲ ದೃಷ್ಟಿ ದಿಗ್ದರ್ಶಕವಾಗಿ ನಿಲ್ಲುತ್ತದೆ.

ಇದು ಧರಂಪಾಲರ ಜನ್ಮಶತಮಾನೋತ್ಸವ ವರ್ಷ.
ಅವರು ಹುಟ್ಟಿದ್ದು ಫೆಬ್ರುವರಿ 19, 1922ರಲ್ಲಿ. ಅವರು
ಧ್ಯಾನಿಸಿದ ಭಾರತೀಯ ಚಿತ್ತ, ಮಾನಸಿಕತೆ ಮತ್ತು
ಕಾಲಗಳು ಇನ್ನಾದರೂ ನಮ್ಮ ಪ್ರಜ್ಞೆಯಲ್ಲಿ ಜಾಗೃತವಾಗ
ಬೇಕು, ಹಾಗಲ್ಲದೇ ನಿಜವಾದ ಭಾರತದ ಆತ್ಮ ನಮಗೆ
ಪರಕೀಯವಾಗಿಯೇ ಉಳಿದುಬಿಡುವ ಅಸಂಗತತೆ
ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಷ್ಟೇ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.