ADVERTISEMENT

ಜೀನ್ಸ್‌ ವ್ಯಾಮೋಹಿಗಳ ನಡುವೆ ಖಾದಿ ಮೋಹಿಗಳು!

ಇ.ಎಸ್.ಸುಧೀಂದ್ರ ಪ್ರಸಾದ್
Published 27 ಆಗಸ್ಟ್ 2022, 19:30 IST
Last Updated 27 ಆಗಸ್ಟ್ 2022, 19:30 IST
ಧಾರವಾಡದ ಬಾಲಬಳಗ ಶಾಲೆಯ ಆವರಣದಲ್ಲಿ ನೂಲಲು ಚರಕ ಹೊತ್ತು ತರುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ ಬಾಲಬಳಗ ಶಾಲೆಯ ಆವರಣದಲ್ಲಿ ನೂಲಲು ಚರಕ ಹೊತ್ತು ತರುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚಿತ್ರ: ಬಿ.ಎಂ. ಕೇದಾರನಾಥ   

ಆನ್‌ಲೈನ್‌ ಶಿಕ್ಷಣದ ಗುಂಗಿನಿಂದ ಮೆಲ್ಲನೆ ಹೊರಬರಲು ಯತ್ನಿಸುತ್ತಿರುವ ಮಕ್ಕಳು ಮತ್ತೆ ಅಂಕಗಳಿಕೆಯ ಓಟಕ್ಕೆ ಧುಮುಕಿದ್ದಾರೆ. ಅದೇ ಸ್ಕೂಲು, ಅದೇ ಪರೀಕ್ಷೆ ಎನ್ನುವ ಈ ಮಕ್ಕಳ ಬದುಕಿನ ಓಟದಲ್ಲಿ ಸುಸ್ಥಿರ ಬದುಕಿನ ಪಾಠ ಖಾದಿ ನೂಲಿನ ಎಳೆಯಷ್ಟೇ ಅದೃಶ್ಯವಾಗಿದೆ. ಇದಕ್ಕೆ ಪರಿಹಾರವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಕೊಂಡು ಹೊರಟ ಧಾರವಾಡದ ಬಾಲಬಳಗ ಶಾಲೆಯ ಮಕ್ಕಳಿಗೆ ಉತ್ತರವಾಗಿ ದೊರಕಿದ್ದು ಇದೇ ಖಾದಿ!

ಅಂಕದೋಟದೊಳಗೆ ಕಳೆದುಹೋದ ಎಳೆಯ ಮಕ್ಕಳ ಕೈಗೆ, ಖಾದಿ ಎಳೆಯನ್ನಿಟ್ಟು ಖಾದಿ ಉಳಿಸುವ ಪ್ರಯತ್ನದ ಜೊತೆಗೆ ಸುಸ್ಥಿರ ಬದುಕಿನ ಪಾಠವನ್ನೂ ಕಲಿಸಿದವರ, ಕಲಿತವರ ಕಥೆ ಇದು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣ ಪಕ್ಕದಲ್ಲಿರುವ ಸಸ್ಯಕಾಶಿಯಲ್ಲಿರುವ ಬಾಲಬಳಗ ಶಾಲೆಯ ಆವರಣವೀಗ ಖಾದಿ ಭಂಡಾರ! ಜೀನ್ಸ್‌, ಟಿಶರ್ಟ್‌ ಆಕರ್ಷಣೆಯಿಂದ ಕೊಂಚ ದೂರ ಉಳಿದು ಇಲ್ಲಿನ ಮಕ್ಕಳು ಇದೀಗ ಖಾದಿ ಮೋಹಿಗಳು. ಈ ಕಪ್ಪು ಭೂಮಿಯಲ್ಲಿ ಚಿಗುರೊಡೆದು, ಹೂವು ಬಿಟ್ಟ ಜವಾರಿ ಜೈಧರ್ ಹತ್ತಿಯನ್ನೇ ಬಳಸಿ, ಚರಕ ತಿರುವುತ್ತಾ ನೂಲುತ್ತಿದ್ದಾರೆ. ಅದರಿಂದ ಸಿದ್ಧಗೊಂಡ ಲಡಿಯನ್ನು ಸಿದ್ಧಪಡಿಸುವ ಮೂಲಕ ತಮ್ಮ ಬಟ್ಟೆಯನ್ನು ತಾವೇ ತಯಾರಿಸುವ ಕ್ರಿಯೆಯಲ್ಲಿ ನಿತ್ಯ ಒಂದು ಹೆಜ್ಜೆ ಮುಂದಡಿ ಇಡುತ್ತಿದ್ದಾರೆ.

ADVERTISEMENT

‘ಬೀಜದಿಂದ ಬಟ್ಟೆಯವರೆಗೆ’ ಎಂಬ ಪರಿಕಲ್ಪನೆಯ ಈ ಕಾರ್ಯಕ್ರಮದಲ್ಲಿ ಈ ಶಾಲೆಯ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಹತ್ತಿ ಬೀಜವನ್ನು ಬಿತ್ತುವುದರಿಂದ ಹಿಡಿದು ಬಟ್ಟೆ ತಯಾರಿಕೆಯವರೆಗಿನ ಎಲ್ಲಾ ಪ್ರಕ್ರಿಯೆಯಲ್ಲೂ ಪಾಲ್ಗೊಂಡು ಸುಸ್ಥಿರ ಬದುಕಿನ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹತ್ತಿ ಬೀಜದ ಬಿತ್ತನೆ, ಬೆಳೆದ ಹತ್ತಿಯನ್ನು ಸ್ವಚ್ಛಗೊಳಿಸಿ ಹಂಜಿ ಮಾಡಿ, ನೂಲು ತೆಗೆಯುವುದು, ಲಡಿ ಸಿದ್ಧಪಡಿಸಿ ಅದನ್ನು ಖಾದಿ ಕೇಂದ್ರಕ್ಕೆ ಕಳುಹಿಸುವವರೆಗೂ ಎಲ್ಲಾ ಜವಾಬ್ದಾರಿಯನ್ನೂ ಪುಟಾಣಿ ಕೈಗಳೇ ನಿಭಾಯಿಸುತ್ತಿವೆ. ಈ ಹಂತದಲ್ಲಿ ರೈತ, ಕಮ್ಮಾರ, ಕುಂಬಾರ, ಬಡಗಿ, ನೇಕಾರ ಹೀಗೆ ಶ್ರಮಜೀವಿಗಳೊಂದಿಗೆ ವ್ಯವಹಾರ ನಡೆಸುವ ಕೌಶಲವನ್ನು ಎಳೆಮನಸ್ಸುಗಳು ಬೆಳೆಸಿಕೊಳ್ಳುತ್ತಿವೆ. ಮಣ್ಣು, ಬೇರಿನಿಂದ ದೂರ ಸರಿಯುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಪ್ರಯತ್ನ ಈ ಶಾಲೆಯದ್ದು. ಶಾಲೆ ಆವರಣದಲ್ಲಿ ಹೆಚ್ಚು ಹತ್ತಿ ಬೆಳೆಯಲು ಸ್ಥಳಾವಕಾಶವಿಲ್ಲದ ಕಾರಣ, ಗದಗ, ಹುಲುಕೋಟಿ, ಅಥಣಿಯ ರೈತರಿಗೆ ಜೈಧರ್ ಹತ್ತಿ ಬೀಜ ನೀಡಿ ಹತ್ತಿ ಬೆಳೆಸುತ್ತಿದ್ದಾರೆ. ಹತ್ತಿ ಗಿಡಗಳ ಬೆಳವಣಿಗೆಯ ಪ್ರತೀ ಹಂತವನ್ನೂ ದಾಖಲಿಸುವ ಪ್ರಕ್ರಿಯೆಯೂ ಈ ಮಕ್ಕಳದ್ದೇ.

‘ಇದು ಸ್ವಾವಲಂಬನೆ, ಸರಳತೆ, ಶರೀರ ಶ್ರಮ ಸೇರಿದ ಒಂದು ಪ್ರಯತ್ನ. ಒಂದು ಗಂಟೆ ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಲಿ ನೇರವಾಗಿ ಕೂತು, ನೂಲನ್ನು ಶ್ರದ್ಧೆಯಿಂದ ತುಂಡಾಗದಂತೆ ನೂಲುವ ಪ್ರಕ್ರಿಯೆ ಕಲಿಸುವ ಶಿಸ್ತು ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲ ನಮ್ಮ ಬಟ್ಟೆಯನ್ನು ನಾವೇ ಸಿದ್ಧಪಡಿಸಿಕೊಂಡೆವು ಎಂಬ ಅಭಿಮಾನ ಮೂಡುತ್ತದೆ ಅಲ್ಲವೇ? ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎನ್ನುವುದು ಈ ಶಾಲೆಯ ಮುಖ್ಯಸ್ಥ ಡಾ. ಸಂಜೀವ ಕುಲಕರ್ಣಿ ಮಾತು.

ಧಾರವಾಡದ ಬಾಲಬಳಗ ಶಾಲೆಯಲ್ಲಿ ಚರಕ ಬಳಸಿ ನೂಲುತ್ತಿರುವ ವಿದ್ಯಾರ್ಥಿಗಳು

‘ಇಷ್ಟು ಮಾತ್ರವಲ್ಲ, ಚರಕ ನೂಲುವುದರಲ್ಲಿ ಗಣಿತವಿದೆ. ಚರಕ ತಿರುಗಿಸುವುದರಲ್ಲಿ ಭೌತವಿಜ್ಞಾನ, ಹತ್ತಿ ಬೆಳೆಯುವುದರಲ್ಲಿ ಜೀವವಿಜ್ಞಾನ, ಎಲ್ಲಿ ಬೆಳೆಯುತ್ತದೆ ಎಂಬುದರಲ್ಲಿ ಭೂಗೋಳ, ರೈತರೊಂದಿಗೆ ವ್ಯವಹರಿಸುವ ಕೌಶಲ, ಶರೀರ ರಚನೆ, ಕಣ್ಣು ಹಾಗೂ ಕೈಗಳ ಸಂಯೋಜನೆ ಮತ್ತು ಏಕಾಗ್ರತೆ ಇಷ್ಟನ್ನೂ ಈ ಒಂದು ಕಾಯಕ ಕಲಿಸುತ್ತದೆ’ ಎನ್ನುತ್ತಾರೆ ಅವರು.

‘ನೂತನ ಶಿಕ್ಷಣ ನೀತಿಯ ಆಶಯವೇ ಸುಸ್ಥಿರತೆ. 2030ರ ಹೊತ್ತಿಗೆ ಸುಸ್ಥಿರತೆಗೆ ಹೋಗಬೇಕೆಂಬ ಅಭಿಯಾನದಲ್ಲಿ ಬಾಲಬಳಗದ ಮಕ್ಕಳು ಈಗಲೇ ಹೆಜ್ಜೆ ಇಟ್ಟಿದ್ದಾರೆ. ಇದಕ್ಕಾಗಿ ಮೈಸೂರಿನವರಾದ ಸಚ್ಚಿದಾನಂದ ಅವರಲ್ಲಿ 15 ಚರಕ ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಯ ಎಲ್ಲಾ ಮಕ್ಕಳು ಚರಕ ಕಲಿಯಬೇಕು ಎಂಬುದು ನಮ್ಮ ಗುರಿ’ ಎನ್ನುತ್ತಾರೆ ಕುಲಕರ್ಣಿ.

ಸ್ವತಃ ನೂಲಿದ ಲಡಿಯಿಂದ ಸಿದ್ಧಗೊಂಡ ಅಂಗಿಯನ್ನು ತೊಡುವ ಕುಲಕರ್ಣಿಯವರು, ಮಕ್ಕಳಿಗೆ ಮಾದರಿಯಾಗಿದ್ದಾರೆ. ‘ಕಳೆದ ನ. 14ರಿಂದ ನಿತ್ಯಸುಮಾರು ಒಂದು ಗಂಟೆ ನೂಲು ತೆಗೆದು 10 ಮೀಟರ್‌ಗೆ ಆಗುವಷ್ಟು ನೂಲು ಸಿದ್ಧಪಡಿಸಿದೆ. ಅದನ್ನು ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿಯಲ್ಲಿರುವ ಖಾದಿ ಕೇಂದ್ರಕ್ಕೆ ನೀಡಿದೆ. ಹಾಸುಗೆ ಹಾಕಿದ ನೂಲು ಖಾದಿ ಕೇಂದ್ರದ್ದು, ನಾನು ತೆಗೆದ ನೂಲು ಹೊಕ್ಕಾಗಿ ಬಳಸಿ ಅಂಗಿ ಸಿದ್ಧಪಡಿಸಿಕೊಟ್ಟಿದ್ದಾರೆ. ಇದರಿಂದ 2 ಮೀಟರ್‌ನ ಎರಡು ಅಂಗಿ ಸಿದ್ಧಪಡಿಸಿಕೊಂಡಿದ್ದೇನೆ. ಇನ್ನೂ ಒಂದಷ್ಟು ಬಟ್ಟೆ ಉಳಿದಿದೆ. ನಾನು ನೂಲು ತೆಗೆದ ಬಟ್ಟೆಯನ್ನು ತೊಡುವುದೇ ದೊಡ್ಡ ಸಂಭ್ರಮ’ ಎಂದಾಗ ಅವರ ಮುಖದಲ್ಲೊಮ್ಮೆ ಸಾರ್ಥಕತೆ ಮಿಂಚುತ್ತದೆ.

ಧಾರವಾಡದ ಬಾಲಬಳಗ ಶಾಲೆಯಲ್ಲಿ ಚರಕ ಬಳಸಿ ನೂಲುತ್ತಿರುವ ಡಾ. ಸಂಜೀವ ಕುಲಕರ್ಣಿ ಹಾಗೂ ಶಾಲಾ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.