ADVERTISEMENT

ಕಲ್ಲಿನ ತಲೆದಿಂಬು & ಡೈನೊಸಾರ್‌ ಮೊಟ್ಟೆ...

ಗುರುರಾಜ್ ಎಸ್.ದಾವಣಗೆರೆ
Published 18 ಏಪ್ರಿಲ್ 2021, 1:49 IST
Last Updated 18 ಏಪ್ರಿಲ್ 2021, 1:49 IST
ಮಲ್ಪೆಯ ಸೇಂಟ್‌ ಮೇರೀಸ್‌ ದ್ವೀಪದ ಕಲ್ಲುಗಳು
ಮಲ್ಪೆಯ ಸೇಂಟ್‌ ಮೇರೀಸ್‌ ದ್ವೀಪದ ಕಲ್ಲುಗಳು   

ಭೂಚೈತನ್ಯ ಹಾಗೂ ಜೀವ ವಿಕಾಸದ ಹಲವು ಚಾರಿತ್ರಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿ ಪುರಾತನ ಅವಶೇಷಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನಮ್ಮ ನೆಲ, ಜಗತ್ತಿನ ಭೂಪ್ರದೇಶಗಳಲ್ಲೇ ಅತ್ಯಂತ ಕ್ರಿಯಾತ್ಮಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಲ್ಕೂವರೆ ಸಾವಿರ ಕೋಟಿ ವರ್ಷ ವಯಸ್ಸಿನ ಭೂಮಿಯ ವಿಕಾಸಯಾತ್ರೆಯ ಅನೇಕ ಘಟನೆಗಳಿಗೆ ಸಂಬಂಧಿಸಿದಂತೆ ಕೋಟ್ಯಂತರ ವರ್ಷ ಹಳೆಯದಾದ ಉಡುಪಿಯ ಸೇಂಟ್ ಮೇರೀಸ್ ದ್ವೀಪದ ಷಡ್ಭುಜಾಕೃತಿಯ ಬಸಾಲ್ಟ್ ಕಲ್ಲುಕಂಬಗಳು, ರೈಯೋಲಿಯ ಡೈನೊಸಾರ್ ಮೊಟ್ಟೆಗಳು, ರಾಮಗಡದ ಬೃಹತ್ ಕ್ರೇಟರ್, ಚಿತ್ರದುರ್ಗದ ಪಿಲ್ಲೊ ಲಾವಾಗಳು, ಮಹಾರಾಷ್ಟ್ರದ ಲೋನಾರ್ ಕುಳಿಗಳೆಲ್ಲ ನಮ್ಮ ಭೂರಾಶಿಯಲ್ಲಿ (land mass) ಇವೆ.

ಜೀವವಿಕಾಸದ ಕುರುಹುಗಳಾಗಿ ವಿಶ್ವದ ಅತ್ಯಂತ ಪುರಾತನ ಜೀವಿ ಸಯನೋ ಬ್ಯಾಕ್ಟೀರಿಯಗಳಿಂದಾದ ಸ್ಟ್ರೊಮಾಟೊಲೈಟ್‍ಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಇದ್ದುದಕ್ಕೆ ಪಳೆಯುಳಕೆಗಳು ದೊರೆತಿವೆ. ಬೆನ್ನುಮೂಳೆಯ ಪ್ರಾಣಿಗಳು, ಸಾಗರ ಜೀವಿಗಳು ಕೋಟ್ಯಂತರ ವರ್ಷಗಳಿಂದ ನಮ್ಮ ಭೂಪ್ರದೇಶದಲ್ಲೂ ಇದ್ದವು ಎಂಬುದಕ್ಕೆ ಶಿವಾಲಿಕ್ ಪರ್ವತ ಪ್ರದೇಶ, ಕಛ್ ಮತ್ತು ಸ್ಪಿತಿಗಳಲ್ಲಿ ಪುರಾವೆಗಳಿವೆ. ನಾಗರಿಕತೆಯ ನೆನಪಾಗಿ ರಾಜಸ್ಥಾನ, ಆಂಧ್ರಪ್ರದೇಶಗಳಲ್ಲಿ ಸೀಸ, ಬಂಗಾರ, ಸತುಗಳ ಗಣಿಗಾರಿಕೆ ನಡೆಯುತ್ತಿದ್ದುದಕ್ಕೆ ದಾಖಲೆಗಳಿವೆ. ಇವಷ್ಟೇ ಅಲ್ಲದೆ ಲಾಲ್‍ಬಾಗ್‍ನ ಪೆನಿನ್ಸುಲಾರ್ ನೈಸ್ ಶಿಲೆ, ಮೇಕೆದಾಟು, ಉಳವಿಯ ಸಣ್ಣಶಿಲಾಗುಹೆಗಳು, ವಿಶಾಖಪಟ್ಟಣದ ಬೊರ‍್ರ ಗುಹೆ, ಎರ‍್ರಮಟ್ಟಿ ದಿಬ್ಬಗಳು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಗಳಾಗಿವೆ.

ಇಷ್ಟೆಲ್ಲ ಪಳೆಯುಳಿಕೆಗಳು (fossil) ಮತ್ತು ಭೂವೈವಿಧ್ಯಗಳಿದ್ದರೂ, ಯುನೆಸ್ಕೊದಿಂದ ಇದುವರೆಗೂ ಇಲ್ಲಿನ ಒಂದೇ ಒಂದು ಸ್ಥಳಕ್ಕೂ ಗ್ಲೋಬಲ್ ಜಿಯೊಪಾರ್ಕ್ ಮಾನ್ಯತೆ ಸಿಕ್ಕಿಲ್ಲ. ಯುನೆಸ್ಕೊದ ವ್ಯಾಖ್ಯೆಯ ಪ್ರಕಾರ ಅನನ್ಯ ಮತ್ತು ಏಕರೀತಿಯ ವಿನ್ಯಾಸ ಹೊಂದಿರುವ ಭೂರಾಶಿಯು ಚಾರಿತ್ರಿಕ ಭೂವೈಜ್ಞಾನಿಕ ಘಟನೆಗಳಿಗೆ ಸಂಬಂಧ ಹೊಂದಿ, ಒಂಟಿಯಾಗಿದ್ದು, ವಿಶೇಷವಾಗಿ ರಕ್ಷಿಸಲ್ಪಟ್ಟು, ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆ ಅದು ‘ಜಿಯೊ ಪಾರ್ಕ್’ ಎನ್ನಿಸಿಕೊಳ್ಳುತ್ತದೆ.

ADVERTISEMENT

ಕಲ್ಲಿನ ತಲೆದಿಂಬು!
ಚಿತ್ರದುರ್ಗಕ್ಕೆ ಪ್ರವಾಸ ಹೋಗುವವರೆಲ್ಲ ಕಲ್ಲಿನ ಕೋಟೆ, ತುಪ್ಪದ ಕೊಳ, ಓಬವ್ವನ ಕಿಂಡಿಗಳನ್ನು ನೋಡಿಯೇ ಇರುತ್ತಾರೆ. ಹತ್ತಿರದಲ್ಲೇ ಐಮಂಗಲದ ಬಳಿಯ ಮರಡಿಹಳ್ಳಿಗೆ ಹೋಗುವುದಿಲ್ಲ. ಅಲ್ಲೇನಿದೆ ವಿಶೇಷ ಅಂತೀರಾ? 250 ಕೋಟಿ ವರ್ಷಗಳಷ್ಟು ಹಳೆಯ ತಲೆದಿಂಬಿನಾಕಾರದ ಕಲ್ಲುಬಂಡೆಗಳ ರಾಶಿಯೇ ಅಲ್ಲಿದೆ! ಸಮುದ್ರ ತಳದಲ್ಲಿ ಸಿಡಿದ ಜ್ವಾಲಾಮುಖಿಯ ಶಿಲಾರಸ, ಮೇಲೆ ಬರುತ್ತಿದ್ದಂತೆ ದಿಢೀರನೆ ತಣ್ಣಗಾಗಿ ಚಿಕ್ಕ ಚಿಕ್ಕ ತಲೆದಿಂಬಿನ ರೂಪ ಪಡೆದ ಸಾವಿರಾರು ಶಿಲೆಗಳು ಅಲ್ಲಿವೆ. ಪ್ರಕೃತಿಯಲ್ಲಿ ಏಕಕೋಶ ಜೀವಿಗಳು ಹುಟ್ಟಿ, ಫೋಟೋಸಿಂಥೆಸಿಸ್ ಕ್ರಿಯೆ ನಡೆದು ಆಮ್ಲಜನಕದ ಮೊದಲ ಅಣುಗಳು ಸೃಷ್ಟಿಯಾದಾಗ ಈ ಕಲ್ಲಿನ ತಲೆದಿಂಬುಗಳು ರಚನೆಯಾದವಂತೆ!

ಇಡೀ ಜಗತ್ತಿನಲ್ಲಿ ಅತ್ಯಂತ ಸುರಕ್ಷಿತವಾಗಿರುವ ಶಿಲಾರಚನೆ ಇದು ಎನ್ನುವ ಭೂವಿಜ್ಞಾನಿಗಳು ಹಿಂದೆ ಆ ಜಾಗದಲ್ಲಿ ವಿಶಾಲ ಸಾಗರವೇ ಇತ್ತು ಎನ್ನುವುದಕ್ಕೆ ಪುರಾವೆ ನೀಡುತ್ತಾರೆ.

ಸ್ಥಳೀಯರಿಗೇ ಗೊತ್ತಿರದ ಈ ಜಾಗಕ್ಕೆ ಹೊರಗಿನ ಅನೇಕರು ಭೇಟಿ ನೀಡಿ ಭೂಮಿಚರಿತ್ರೆಯ ಅನೇಕ ರಹಸ್ಯಗಳನ್ನು ಅರಿಯಲು ಪ್ರಯತ್ನಿಸುತ್ತಾರೆ. ಇದರ ಮಹತ್ವವನ್ನರಿತ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ, ಮರಡಿಹಳ್ಳಿಯ ದಿಂಬಿನಾಕಾರದ ಕಲ್ಲುಗಳನ್ನು ‘ಪಿಲ್ಲೊಲಾವ’ ಎಂದು ಕರೆದು, ಅವುಗಳಿರುವ ಪ್ರದೇಶಕ್ಕೆ ಭೂವೈಜ್ಞಾನಿಕ ವಿಸ್ಮಯ ತಾಣ ಎಂಬ ಮಾನ್ಯತೆಯನ್ನು ನೀಡಿದೆ.

ಡೈನೊಸಾರ್ ಮೊಟ್ಟೆ: ಅವು ಎಂಬತ್ತರ ದಶಕದ ಆರಂಭದ ದಿನಗಳು. ಗುಜರಾತ್‍ನ ಮಹಿಸಾಗರ್ ಜಿಲ್ಲೆಯ ರೈಯೋಲಿಯಲ್ಲಿ ಉತ್ಖನನಕ್ಕೆ ಬಂದ ಭೂ ವಿಜ್ಞಾನಿಯೊಬ್ಬ ಬಾಯಾರಿಕೆ ನೀಗಿಕೊಳ್ಳಲು ಹತ್ತಿರದ ಗುಡಿಸಲಿನ ಬಳಿ ಹೋಗಿ ಕುಡಿಯಲು ನೀರು ಕೇಳಿದ. ಕಟ್ಟೆಯ ಕಲ್ಲಿನ ಮೇಲೆ ಕೆಂಪು ಮೆಣಸಿನ ಚಟ್ನಿ ಅರೆಯುತ್ತಿದ್ದ ಕಾಶೀಬಾಯಿ ‘ಇದೋ ಬಂದೆ’ ಎಂದು ಒಳಗಿನಿಂದ ನೀರು ತಂದು ಕೊಟ್ಟಳು. ಅಷ್ಟರಲ್ಲಿ ವಿಜ್ಞಾನಿಯ ಗಮನ ಚಟ್ನಿ ರುಬ್ಬಲು ಬಳಸುತ್ತಿದ್ದ ರುಬ್ಬು ಕಲ್ಲಿನ ಮೇಲೆ ಹರಿದಿತ್ತು. ಅದರ ಆಕಾರ, ಗಾತ್ರಗಳು ಸಾಮಾನ್ಯ ರುಬ್ಬುಗುಂಡಿಗಿಂತ ಭಿನ್ನವಾಗಿತ್ತು. ಇದೆಲ್ಲಿ ಸಿಕ್ಕಿತು? ಎಂದಾಗ ಊರ ದೇವಸ್ಥಾನದ ಹತ್ತಿರ ಬಾವಿ ಅಗೆಯುತ್ತಿದ್ದಾಗ ಇಂಥ ಅನೇಕ ಗುಂಡುಗಳು ಸಿಕ್ಕಿದ್ದವು, ಚಟ್ನಿ ಅರೆಯಲು ಸರಿಯಾಗಿದೆ ಎಂದು ನಾನೂ ಎರಡನ್ನು ತಂದೆ’ ಎಂದಳು. ಅದನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿದಾಗ, ಮೇಲುನೋಟಕ್ಕೆ ಅದು ಸಾಮಾನ್ಯ ಕಲ್ಲಲ್ಲ ಎಂದು ವಿಜ್ಞಾನಿಗೆ ತಿಳಿಯಿತು. ಒಂದನ್ನು ಲ್ಯಾಬಿಗೆ ತಂದು ಪರೀಕ್ಷಿಸಿದಾಗ ಗೊತ್ತಾಗಿದ್ದು ಅದು ಎಂಟೂವರೆ ಕೋಟಿ ವರ್ಷಗಳ ಹಳೆಯ ಡೈನೋಸಾರ್ ಮೊಟ್ಟೆ ಎಂದು!

ಬೆರಗಾದ ಕಾಶೀಬಾಯಿ, ‘ಇದು ನಮ್ಮ ಹಳ್ಳಿಯ ಪ್ರತೀ ಮನೆಯಲ್ಲೂ ಇದೆ, ಕೆಲವರು ಇದನ್ನು ದೇವರಂತೆ ಪೂಜಿಸುತ್ತಾರೆ’ ಎಂದಳು. ದಂಗಾಗುವ ವಿಜ್ಞಾನಿ, ಭೂ ವಿಜ್ಞಾನಿಗಳ ದೊಡ್ಡ ತಂಡವನ್ನೇ ಕರೆಸಿಕೊಂಡು ವ್ಯವಸ್ಥಿತವಾಗಿ ವರ್ಷಗಟ್ಟಲೇ ನೆಲ ಅಗೆದು ಡೈನೊಸಾರ್‌ನ ಅಸ್ಥಿಪಂಜರ, ಎಲುಬು, ಮೊಟ್ಟೆಗಳನ್ನು ಸಂಗ್ರಹಿಸಿದ. ಸತತ ಸಂಶೋಧನೆಯ ನಂತರ, ದೊರೆತ ಮೊಟ್ಟೆಗಳು ಮಾಂಸಾಹಾರಿ ಜಾತಿಯ ರಾಜಾಸಾರಸ್ ನಾರ್ಮಡೆನ್ಸಿಸ್ ಎಂಬ ಡೈನೊಸಾರಸ್‍ನವು ಎಂದು ಖಚಿತಗೊಂಡಿತು.

30 ಅಡಿ ಎತ್ತರದ ದೈತ್ಯ ಸರೀಸೃಪದ 8.5 ಕೋಟಿ ವರ್ಷಗಳಷ್ಟು ಹಳೆಯ ಒಂದು ಸಾವಿರ ಮೊಟ್ಟೆಗಳು ಇದುವರೆಗೆ ಸಿಕ್ಕಿವೆ. ಹಿಂದೆ ಆ ಭಾಗವನ್ನಾಳುತ್ತಿದ್ದ ನವಾಬ್ ಮೊಹಮದ್ ಸಲಾಬತ್‌ ಖಾನ್‍ರ ಮಗಳು ಆಲಿಯಾಳ ಒತ್ತಾಯದಿಂದ ಈಗ ರೈಯೋಲಿಯಲ್ಲಿ 25 ಸಾವಿರ ಚದರ ಅಡಿಯ ಡೈನೋಸಾರ್ ಪಳೆಯುಳಿಕೆ ಪಾರ್ಕ್ ತಲೆ ಎತ್ತಿದೆ. ಹತ್ತು ಗ್ಯಾಲರಿಗಳಿವೆ. ಟೈಂ ಮೆಶೀನ್ ಕೂಡಾ ಇದ್ದು ನೀವು ಕೋಟ್ಯಂತರ ವರ್ಷ ಹಿಂದಕ್ಕೆ ಚಲಿಸಿ, ಡೈನೋಸಾರ್‌ಗಳನ್ನು ನೋಡಿದ ಕಾಲ್ಪನಿಕ ಅನುಭವ ಪಡೆದುಕೊಳ್ಳುವ ವಿಶೇಷ ವ್ಯವಸ್ಥೆಯೂ ಇದೆ.

ರಾಮಗಡದ ಮಹಾಕುಳಿ: 16.5 ಕೋಟಿ ವರ್ಷಗಳ ಹಿಂದೆ ರಾಜಸ್ಥಾನದ ವಿಂಧ್ಯ ಪರ್ವತ ಪ್ರದೇಶದ ಬರನ್ ಜಿಲ್ಲೆಯಲ್ಲಿ ಬಿದ್ದ ಉಲ್ಕಾಶಿಲೆಯೊಂದು ಮೂರೂವರೆ ಕಿಲೋ ಮೀಟರ್ ವ್ಯಾಸ ಮತ್ತು 200 ಮೀಟರ್ ಆಳದ ಕುಳಿಯೊಂದನ್ನು ಸೃಷ್ಟಿಸಿತ್ತು. 1869ರಲ್ಲಿ ಪ್ರಥಮವಾಗಿ ಇದನ್ನು ಪತ್ತೆಮಾಡಿದ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯ ವಿಜ್ಞಾನಿಗಳು ಈ ಜಾಗಕ್ಕೆ 2016ರಲ್ಲಿ ಭೂವೈಜ್ಞಾನಿಕ ಸ್ಮಾರಕ ಎಂಬ ಮಾನ್ಯತೆ ನೀಡಿದ್ದಾರೆ. ಈ ಜಾಗದಲ್ಲೀಗ ಒಂದು ಕಿಲೋಮೀಟರ್ ಉದ್ದ ಮತ್ತು 250 ಮೀಟರ್ ಅಗಲದ ವಿಶಾಲ ಕೆರೆ ಮತ್ತು ಹತ್ತನೆಯ ಶತಮಾನದಲ್ಲಿ ನಿರ್ಮಾಣಗೊಂಡ ಖಜುರಾಹೊ ಶಿಲ್ಪ ಮಾದರಿಯ ಶಿವನ ದೇವಾಲಯವೂ ಇದೆ. ರಾಜಸ್ಥಾನ ರಾಜ್ಯದ ಉದಯಪುರ ಜಿಲ್ಲೆಯ ಝವರ್‌ನಲ್ಲಿ ಪ್ರಪಂಚದ ಅತ್ಯಂತ ಹಳೆಯ ಸತುವಿನ ಕುಲುಮೆಗಳಿದ್ದವು ಎಂಬುದಕ್ಕೆ ಖಚಿತ ಪಳಯುಳಿಕೆ ಸಿಕ್ಕಿವೆ.

ಜಿಯೋಪಾರ್ಕ್ ಉಗಮ: ಯುನೆಸ್ಕೊ ತನ್ನ ನೇತೃತ್ವದಲ್ಲಿ 2004ರಲ್ಲಿ ಯುರೋಪ್ ಸಮುದಾಯದ 17 ಮತ್ತು ಚೀನಾದ ಎಂಟು ಭೂಪ್ರದೇಶಗಳಿಗೆ ಜಿಯೋಪಾರ್ಕ್ ಮಾನ್ಯತೆ ನೀಡಿ ಗ್ಲೋಬಲ್ ಜಿಯೊಪಾರ್ಕ್ ನೆಟ್‍ವರ್ಕ್ (ಜಿಜಿಎನ್) ಸ್ಥಾಪಿಸಿದೆ. ಅದು ಗುರುತಿಸಿರುವ 25 ಭೂಪ್ರದೇಶಗಳು ಗ್ಲೋಬಲ್ ಜಿಯೋ ಪಾರ್ಕ್ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ ಹಾಗೂ ಅಲ್ಲಿರುವ ವ್ಯವಸ್ಥೆ, ನಿರ್ವಹಣೆ ಮತ್ತು ಗುಣಮಟ್ಟಗಳು ಬೇರೆ ಭೂರಚನೆಗಳಿಗೂ ಇದ್ದರೆ ಅವುಗಳನ್ನು ‘ಗ್ಲೋಬಲ್ ಜಿಯೋಪಾರ್ಕ್’ ಎಂದು ನಾಮಕರಣ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದಾದ ಹನ್ನೊಂದು ವರ್ಷಗಳ ನಂತರ ಯುನೆಸ್ಕೊದ 195 ಸದಸ್ಯ ರಾಷ್ಟ್ರಗಳು ಸಭೆ ಸೇರಿ, ಒಮ್ಮತದ ನಿರ್ಣಯ ಮಾಡಿ ಜಿಯೊಪಾರ್ಕ್‍ಗಳನ್ನು ‘ಯುನೆಸ್ಕೊ ಗ್ಲೋಬಲ್ ಜಿಯೊ ಪಾರ್ಕ್’ (ಯುಜಿಜಿಪಿ) ಎಂದು ಕರೆದವು.

ಗುಜರಾತಿನ ರೈಯೋಲಿಯಲ್ಲಿ ಸಿಕ್ಕ ಡೈನೊಸಾರ್ ಮೊಟ್ಟೆಗಳ ಅವಶೇಷಗಳು

ಈಗ ಜಗತ್ತಿನಾದ್ಯಂತ 44 ದೇಶಗಳ 161 ಭೂರಚನೆಗಳಿಗೆ ಯುನೆಸ್ಕೊ ಗ್ಲೋಬಲ್ ಜಿಯೊಪಾರ್ಕ್ ಸ್ಥಾನ ನೀಡಲಾಗಿದೆ. ಚೀನಾದ 41 ಜಾಗಗಳು, ಸ್ಪೇನ್‍ನ 15, ಇಟಲಿ, ಜಪಾನ್‍ನ ತಲಾ 9, ಫ್ರಾನ್ಸ್‌ನ 7, ಕೊರಿಯಾದ 4 ಮತ್ತು ಚಿಕ್ಕ ದೇಶಗಳಾದ ವಿಯೆಟ್ನಾಂ, ಥಾಯ್ಲೆಂಡ್‍ಗಳ ಕೆಲ ಜಾಗಗಳಿಗೂ ಜಿಯೋಪಾರ್ಕ್ ಮಾನ್ಯತೆ ದೊರಕಿದೆ.

ಆದರೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಕಾರ ನಮ್ಮಲ್ಲಿ ಜಿಯೊಪಾರ್ಕ್ ಮಾನ್ಯತೆ ಪಡೆಯಬಲ್ಲ 32 ವಿವಿಧ ಭೂವೈಜ್ಞಾನಿಕ ಸ್ಮಾರಕಗಳಿವೆ. ಇದುವರೆಗೆ ಒಂದಕ್ಕೂ ಸಿಕ್ಕಿಲ್ಲ.

ಯಾವುದೇ ದೇಶದ ವಿಶೇಷ ಭೂರಚನೆಗೆ ವಿಶ್ವ ಮಾನ್ಯತೆ ಪಡೆಯಲು ಕೆಲವು ಕಟ್ಟುನಿಟ್ಟಿನ ನಿಬಂಧನೆಗಳಿವೆ. ಅದರ ನಿರ್ವಹಣೆಗೆ ಕಾನೂನಾತ್ಮಕವಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆ ಇರಬೇಕು. ಪ್ರತ್ಯೇಕ ವೆಬ್‍ಸೈಟ್ ಇದ್ದು ಕಾರ್ಪೊರೇಟ್ ಗುರುತು ಹೊಂದಿರಬೇಕು. ರಕ್ಷಣೆ - ಸಂರಕ್ಷಣೆಗೆ ಪ್ರತ್ಯೇಕವಾಗಿ ಹಣ ಎತ್ತಿಟ್ಟಿರಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇಡೀ ವ್ಯವಸ್ಥೆಯಲ್ಲಿ ಸ್ಥಳೀಯ ಜನ - ಸಮುದಾಯದ ಸಹಭಾಗಿತ್ವ ಇರಲೇಬೇಕು. ಪ್ರದೇಶಕ್ಕೆ ಹೊಂದಿಕೊಂಡ ಬುಡಕಟ್ಟು, ಸಮುದಾಯಗಳ ಪಾರಂಪರಿಕ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಇರಬೇಕು. ಉಸ್ತುವಾರಿಗೆ ಸ್ಥಳೀಯ ಶಾಲೆ, ಉದ್ಯಮ, ವಿಶ್ವವಿದ್ಯಾಲಯವನ್ನು ಒಳಗೊಂಡ ಸಮಿತಿ ರಚಿಸಿಕೊಂಡು ಪ್ರವಾಸಿಗರಿಂದ ಬರುವ ಹಣವನ್ನು ಜಿಯೋಪಾರ್ಕ್‍ನ ಅಭಿವೃದ್ಧಿಗೆ ಬಳಸಬೇಕು. ಆಯಾಸ್ಥಳದ ಪ್ರತಿರೂಪದ ಮಿನಿಯೇಚರ್‌ಗಳನ್ನು ತಯಾರಿಸಿ ಮಾರಬೇಕು. ಸಾಧ್ಯವಿರುವ ಜಾಗಗಳಲ್ಲಿ ಮ್ಯೂಸಿಯಂ ಸ್ಥಾಪಿಸಬೇಕು.

ಇದನ್ನು ಕಾರ್ಯರೂಪಕ್ಕೆ ತರಲು ಲಖನೌದಲ್ಲಿರುವ ಸೊಸೈಟಿ ಆಫ್ ಅರ್ಥ್ ಸೈಂಟಿಸ್ಟ್ಸ್‌ ಸಂಸ್ಥೆ ವಿಸ್ತೃತ ಕಾರ್ಯಯೋಜನೆ ಸಿದ್ಧಪಡಿಸಿ ಕಳೆದ ವರ್ಷವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಭೂವೈಜ್ಞಾನಿಕ ವೈವಿಧ್ಯದ ಅರಿವಿನ ಕೊರತೆಯಿಂದ ಅನೇಕ ಪ್ರಾಕೃತಿಕ ಅದ್ಭುತಗಳು ಅಭಿವೃದ್ಧಿಯ ಹೊಡೆತಕ್ಕೆ ಸಿಕ್ಕು ನಾಶವಾಗಿವೆ. ಅಪರೂಪದ ಪುರಾತನ ಅವಶೇಷಗಳ ಪ್ರಾಮುಖ್ಯತೆಯನ್ನು ಅರಿತು,ರಕ್ಷಿಸಿ ಅವುಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಪಡೆಯಲು ಸಶಕ್ತ ಶಾಸನವನ್ನು ರೂಪಿಸಬೇಕಿದೆ. ಇವುಗಳಿಂದ ಭೂಮಿ ವಿಕಾಸದ ಚರಿತ್ರೆಯನ್ನು ಪುನರ್ ಸೃಷ್ಟಿಸಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.