ADVERTISEMENT

‘ಡ್ರೈಫ್ರೂಟ್ಸ್‌’ಗೆ ಎದುರಾಗಿದ್ದ ಕೋವಿಡ್ ಸವಾಲು

ಎಂ.ಶ್ರೀನಿವಾಸ
Published 13 ಜನವರಿ 2021, 20:46 IST
Last Updated 13 ಜನವರಿ 2021, 20:46 IST
ಹೇಮಂತ್‌ ಭಾರಧ್ವಾಜ್
ಹೇಮಂತ್‌ ಭಾರಧ್ವಾಜ್   

‘ಡ್ರೈಫ್ರೂಟ್ಸ್‌ ಆರೋಗ್ಯಕ್ಕೆ ಒಳ್ಳೆಯದು’ ಎಂಬ ಮಾತನ್ನು ನಾವು ಬಾಲ್ಯದಿಂದಲೂ ಕೇಳುತ್ತಿದ್ದೇವೆ. ಆದರೆ ಒಬ್ಬ ಗ್ರಾಹಕರಾಗಿ, ಆರೋಗ್ಯ ವರ್ಧನೆಯ ಉದ್ದೇಶದಿಂದ ಸೇವಿಸುವ ಡ್ರೈಫ್ರೂಟ್ಸ್‌ ಗುಣಮಟ್ಟ ಹೇಗಿರುತ್ತದೆ ಎಂಬುದನ್ನು ಗಮನಿಸಿದ್ದೀರಾ? ಬಹುತೇಕರು ಈ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುವುದಿಲ್ಲ. ಆದರೆ ಮನ್‌ಭಾವಕ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸ್ಥಾಪಿಸಿದ ಹೇಮಂತ್‌ ಭಾರದ್ವಾಜ್‌ ಅವರ ಆಲೋಚನೆಗಳು ಬೇರೆಯೇ ಆಗಿದ್ದವು.

‘ಸುಶಿಕ್ಷಿತರು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಗ್ರಾಹಕರೇ ಡ್ರೈಫ್ರೂಟ್ಸ್‌ ಗುಣಮಟ್ಟದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂತು. ಎಲ್ಲ ಮಳಿಗೆಗಳಲ್ಲಿಯೂ ಗುಣಮಟ್ಟದಡ್ರೈಫ್ರೂಟ್ಸ್‌ ಸಿಗುತ್ತವೆ ಎಂದು ಎಲ್ಲರೂ ಭಾವಿಸುತ್ತಾರೆ. ಈ ಬಗ್ಗೆ ಗ್ರಾಹಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಅಲ್ಲದೆ, ಉತ್ಕೃಷ್ಟ ಗುಣಮಟ್ಟದ ಡ್ರೈಫ್ರೂಟ್ಸ್‌ ಅವರಿಗೆ ಪೂರೈಸಬೇಕು ಎಂದು ನಾವು ನಿರ್ಧರಿಸಿದೆವು’ ಎಂದು ಹೇಮಂತ್‌ ಹೇಳುತ್ತಾರೆ.

ಕೈಗೆಟಕುವ ಬೆಲೆಯಲ್ಲಿ ಶುದ್ಧ ಮತ್ತು ರುಚಿಕರವಾದ ಡ್ರೈಫ್ರೂಟ್ಸ್‌ ಹಾಗೂ ಡ್ರೈಫ್ರೂಟ್ಸ್‌ ಆಧರಿಸಿದ ಉತ್ಪನ್ನಗಳನ್ನು ಒದಗಿಸುವ ಉದ್ದೇಶದೊಂದಿಗೆ ಮನ್‌ಭಾವಕ್‌ ಫುಡ್ಸ್‌ 2019ರ ಮೇ ತಿಂಗಳಲ್ಲಿ ಆರಂಭವಾಯಿತು. ಐದು ತಿಂಗಳ ಬಳಿಕ ಕಂಪನಿಯು 2019ರ ದೀಪಾವಳಿಯ ಸಂದರ್ಭದಲ್ಲಿ ‘ಮೆಲ್ಟಿಂಗ್‌ ಹಾರ್ಟ್ಸ್‌’ ಬ್ರ್ಯಾಂಡ್‌ನಡಿ ಪ್ರೀಮಿಯಂ ಗುಣಮಟ್ಟದ ಡ್ರೈಫ್ರೂಟ್ಸ್‌ ಪರಿಚಯಿಸಿತು. 2020ರ ಫೆಬ್ರುವರಿಯಲ್ಲಿ ಬೆಂಗಳೂರಿನ ಒಂದು ಮಾಲ್‌ನಲ್ಲಿ ತನ್ನ ಮೊದಲ ಮಳಿಗೆ ತೆರೆಯಿತು. ಹಾಲು, ಸಕ್ಕರೆ ಮತ್ತು ರಾಸಾಯನಿಕಗಳಿಂದ ಮುಕ್ತವಾದ ವಿನೂತನವಾದ ಡ್ರೈಫ್ರೂಟ್ಸ್‌ ಪಂಚ್‌ ಪಾನೀಯವೂ ಕಂಪನಿಯ ಕೊಡುಗೆಗಳಲ್ಲಿ ಸೇರಿದೆ. ಇಂದು ‘ಮೆಲ್ಟಿಂಗ್‌ ಹಾರ್ಟ್ಸ್‌’ ಎಲ್ಲ ಪ್ರಮುಖ ಇ–ವಾಣಿಜ್ಯ ತಾಣಗಳಲ್ಲಿ ದೊರೆಯುತ್ತಿದೆ. 2023ರ ವೇಳೆಗೆ ಅಗ್ರಮಾನ್ಯ ಡ್ರೈಫ್ರೂಟ್ಸ್‌ ಬ್ರ್ಯಾಂಡ್‌ ಅನ್ನಿಸಿಕೊಳ್ಳುವ ಗುರಿಯನ್ನು ಕಂಪನಿ ಇಟ್ಟುಕೊಂಡಿದೆ.

ADVERTISEMENT

ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವಾಗ ಕೋವಿಡ್‌–19 ಬಿಕ್ಕಟ್ಟು ಎದುರಾಯಿತು. ಮಾರ್ಚ್‌ ಕೊನೆಯ ವೇಳೆಗೆ ಸರ್ಕಾರವು ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದ್ದರಿಂದ ಈ ನವೋದ್ಯಮಕ್ಕೆ ಬಹುದೊಡ್ಡ ಏಟು ಬಿತ್ತು. ಸರ್ಕಾರದ ಸೂಚನೆಯಂತೆ ಅಗತ್ಯ ವಸ್ತುಗಳನ್ನಷ್ಟೇ ಪೂರೈಸಬೇಕಾದ ನಿರ್ಬಂಧ ಇದ್ದುದ ರಿಂದಾಗಿ, ಡ್ರೈಫ್ರೂಟ್ಸ್‌ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲದ ಕಾರಣ ಪ್ರಮುಖ ಇ–ವಾಣಿಜ್ಯ ತಾಣಗಳು ಮನ್‌ಭಾವಕ್‌ ಬ್ರ್ಯಾಂಡ್‌ಅನ್ನು ಕೈಬಿಟ್ಟವು. 2020ರ ಏಪ್ರಿಲ್‌ನಲ್ಲಿ ಕಂಪನಿಯ ಆದಾಯ ಶೂನ್ಯವಾಗಿತ್ತು. ಹೇಮಂತ್‌ ಅವರಿಗೆ ಮಾಡು ಇಲ್ಲಬೇ ಮಡಿ ಎಂಬಂತಹ ಸಂದರ್ಭ ಎದುರಾಯಿತು. ಆದರೆ ಸವಾಲುಗಳಿಗೆ ಸೋಲದೇ ಕೋವಿಡ್‌–19ರ ಬಿಕ್ಕಟ್ಟನ್ನೇ ಒಂದು ಅವಕಾಶವನ್ನಾಗಿ ಮನ್‌ಭಾವಕ್‌ ಫುಡ್ಸ್‌ ಪರಿವರ್ತಿಸಿಕೊಂಡಿತು. ತನ್ನದೇ ಆದ meltinghearts.co ಇ–ವಾಣಿಜ್ಯ ತಾಣವನ್ನು ರೂಪಿಸಿತು. ಅದರ ಮೂಲಕ ರಾಷ್ಟ್ರದಾದ್ಯಂತ ಗ್ರಾಹಕ ನೆಲೆ ವಿಸ್ತರಿಸಿಕೊಂಡಿತು. ಫಲವಾಗಿ ಮೆಲ್ಟಿಂಗ್‌ ಹಾರ್ಟ್ಸ್‌ ಇಂದು ಕೇವಲ ಬೆಂಗಳೂರಿನ ಬ್ರ್ಯಾಂಡ್‌ ಆಗಿ ಉಳಿದಿಲ್ಲ; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಸ್ತಿತ್ವ ಹೊಂದಿದೆ.

ಮನುಕುಲವು ಶತಮಾನಗಳ ಅವಧಿಯಲ್ಲಿ ಎದುರಿಸಿದ ಅತಿ ಕಠಿಣವಾದ ಸವಾಲನ್ನು ಮೆಟ್ಟಿ ನಿಂತ ಹೇಮಂತ್‌ ಅವರು ತಮ್ಮ ಸಹ ಉದ್ಯಮಿಗಳಿಗೆ ಹೇಳುವ ಕಿವಿಮಾತಿದು: ‘ಬಿಕ್ಕಟ್ಟು, ಅಡೆತಡೆಗಳು ಮತ್ತು ಸವಾಲುಗಳು ಸದಾ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತವೆ. ಅವುಗಳನ್ನು ಬಳಸಿಕೊಂಡು, ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದನ್ನು ಮರೆಯಬೇಡಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.