ADVERTISEMENT

ಕಡಲ್ಗಾಲುವೆ ನೋಡ ಕೂಡಿದ್ದವು ದಡ!

ಸೂಯಜ್‌ ಕಾಲುವೆ ಬಿಕ್ಕಟ್ಟು ಜಗತ್ತಿನ ಆರ್ಥಿಕತೆಗೆ ಪೆಟ್ಟು

ಬಿ.ಆರ್‌.ಗುರುಪ್ರಸಾದ್‌
Published 3 ಏಪ್ರಿಲ್ 2021, 19:30 IST
Last Updated 3 ಏಪ್ರಿಲ್ 2021, 19:30 IST
ಸೂಯಜ್‌ ಕಾಲುವೆಯಲ್ಲಿ ಸಿಕ್ಕಿಕೊಂಡ ದೈತ್ಯ ಹಡಗು ‘ಎವರ್‌ ಗಿವನ್‌’ –ಉಪಗ್ರಹ ಚಿತ್ರ
ಸೂಯಜ್‌ ಕಾಲುವೆಯಲ್ಲಿ ಸಿಕ್ಕಿಕೊಂಡ ದೈತ್ಯ ಹಡಗು ‘ಎವರ್‌ ಗಿವನ್‌’ –ಉಪಗ್ರಹ ಚಿತ್ರ   

ಏಷ್ಯಾ ಹಾಗೂ ಯುರೋಪ್‌ ಖಂಡಗಳ ನಡುವಿನ ಶಾರ್ಟ್‌ಕಟ್‌ ಎನಿಸಿದ ಸೂಯಜ್‌ ಕಾಲುವೆಯಲ್ಲಿ ‘ಎವರ್‌ ಗಿವನ್‌’ ಎಂಬ ದೈತ್ಯ ಹಡಗು ಸಿಕ್ಕಿಬಿದ್ದಿದ್ದು ಗೊತ್ತು ತಾನೇ? ಜಗತ್ತಿನ ಅರ್ಥ ವ್ಯವಸ್ಥೆಯೂ ಆಗ ಉಸಿರು ಬಿಗಿಹಿಡಿದು ಒದ್ದಾಡಿತು. ಕೊಳ್ಳುಬಾಕತನ ಮಿತಿಮೀರಿರುವ ಈ ದಿನಗಳಲ್ಲಿ ‘ಎವರ್‌ ಗಿವನ್‌’ ಪ್ರಸಂಗ ನಮಗೆ ಮರೆಯಲಾದ ಪಾಠವೊಂದನ್ನು ಕಲಿಸಿದೆ. ಆ ಪಾಠ ಯಾವುದು ಗೊತ್ತೆ?

ಕೊರೊನಾದಿಂದ ತತ್ತರಿಸಿರುವ ಜಗತ್ತು ಸ್ವಲ್ಪ ಚೇತರಿಸಿಕೊಳ್ಳಲು ಪ್ರಾರಂಭಿಸಿದ ವೇಳೆಯಲ್ಲೇ ಮತ್ತೆ ಚಿಂತೆಗೀಡುಮಾಡಿದ ಪ್ರಸಂಗವೊಂದು ಜಗತ್ತಿನ ಮಾಧ್ಯಮಗಳ ಗಮನವನ್ನು ಸೆಳೆಯಿತು. ಸೂಯಜ್‌ ಕಾಲುವೆಯಲ್ಲಿ ಸಿಕ್ಕಿಕೊಂಡ ದೈತ್ಯ ಹಡಗೊಂದು ಆ ಪ್ರಮುಖ ಜಲಮಾರ್ಗಕ್ಕೆ ಅಡಚಣೆ ತಂದು ಜಗತ್ತಿನ ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹಾನಿಯನ್ನು ಉಂಟುಮಾಡಿದ್ದೇ ಆ ಪ್ರಸಂಗ. ಜಾಗತೀಕರಣದ ಈ ದಿನಗಳಲ್ಲಿ ಜಲ ಸಾರಿಗೆ ಜಾಲವು ಜಗತ್ತಿನ ಆರ್ಥಿಕ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುವಲ್ಲಿ ಎಂತಹ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ಇಡೀ ಜಗತ್ತಿಗೆ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿದ ಪ್ರಸಂಗವೂ ಇದಾಗಿದೆ.

ಜೊತೆಗೇ ಅದರ ಅಸ್ತಿತ್ವದ ಬಗ್ಗೆ ತಿಳಿದಿದ್ದರೂ ಶಾಲೆಯ ನಂತರ ನಾವು ಮರೆತಿದ್ದ ಸೂಯಜ್‌ ಕಾಲುವೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. ಇಷ್ಟೇ ಅಲ್ಲದೆ ಮಾನವ ಪ್ರಯತ್ನಕ್ಕೆ ನಿಸರ್ಗದ ನೆರವೂ ದೊರೆತರೆ ಎಲ್ಲವೂ ಸುಗಮವಾಗುತ್ತದೆ ಎಂಬುದನ್ನೂ ಈ ಪ್ರಸಂಗ ಜ್ಞಾಪಿಸಿದೆ.

ADVERTISEMENT

200 ಕಿಲೊಮೀಟರ್ ಉದ್ದವಿದ್ದು ಕೇವಲ 300 ಮೀಟರ್ ಅಗಲವಿರುವ ಸೂಯಜ್‌ ಕಾಲುವೆ ಕೆಂಪು ಸಮುದ್ರ ಹಾಗೂ ಮೆಡಿಟರೇನಿಯನ್ ಸಮುದ್ರಗಳನ್ನು ಜೋಡಿಸುತ್ತದೆ. ಹೀಗಾಗಿ ಏಷ್ಯಾ ಹಾಗೂ ಯುರೋಪ್‌ ಖಂಡಗಳ ನಡುವೆ ಇದು ಒಂದು ‘ಕಿರು ದಾರಿ (ಶಾರ್ಟ್ ಕಟ್)’ ಅನ್ನು ನಿರ್ಮಿಸಿದೆ. ಸಾಗರಗಳ ಮೂಲಕ ಸಾಗುವ ಜಗತ್ತಿನ ವಾಣಿಜ್ಯ ವಹಿವಾಟಿನ ಶೇಕಡ 13ರಷ್ಟು ಭಾಗ ಸೂಯಜ್‌ ಕಾಲುವೆಯ ಮೂಲಕ ಸಾಗುತ್ತದೆ.

1869ರಲ್ಲಿ ಈ ಕೃತಕ ಜಲಮಾರ್ಗವು ಯಾನಕ್ಕೆ ಸಿದ್ಧವಾಗುವ ಮೊದಲು ಹಡಗೊಂದು ಏಷ್ಯಾದಿಂದ ಯುರೋಪ್‌ಗೆ ತೆರಳಲು ಆಫ್ರಿಕಾದ ದಕ್ಷಿಣ ತುದಿಗೆ ಸಾಗಿ ಅಲ್ಲಿಂದ ಉತ್ತರಕ್ಕೆ ತಿರುಗಿ ನಂತರ ಯುರೋಪಿನತ್ತ ಸಾಗಬೇಕಿತ್ತು. ಕ್ರಿ.ಶ. 1498ರಲ್ಲಿ ವಾಸ್ಕೊ ಡ ಗಾಮಾ ಯುರೋಪಿನ ಪೋರ್ಚುಗಲ್‌ನಿಂದ ದೂರದ ಭಾರತಕ್ಕೆ ಬಂದದ್ದು ಆಫ್ರಿಕಾದ ದಕ್ಷಿಣ ಭಾಗದ ಮಾರ್ಗವಾಗಿಯೇ. ಆದರೆ, ಸೂಯಜ್‌ ಕಾಲುವೆಯನ್ನು ತೋಡಿದ ಬಳಿಕ ಅರಬ್ಬಿ ಸಮುದ್ರ ಹಾಗೂ ಯುರೋಪ್‌ ಖಂಡ, ಇವುಗಳ ನಡುವಿನ ದೂರ ಕ್ರಾಂತಿಕಾರಕವಾಗಿ ಸುಮಾರು ಒಂಬತ್ತು ಸಾವಿರ ಕಿಲೊಮೀಟರ್‌ಗಳಷ್ಟು ಕಡಿಮೆಯಾಯಿತು. ಇದರಿಂದ ಹಡಗುಗಳ ಯಾನದಲ್ಲಿ ಎಂಟರಿಂದ ಹತ್ತು ದಿನಗಳಷ್ಟು ಕಡಿತವಾಯಿತು.

1859ರಲ್ಲಿ ಪ್ರಾರಂಭವಾಗಿ ಒಂದು ದಶಕದ ಆವಧಿಯಲ್ಲಿ ಪೂರ್ಣಗೊಂಡ ಸೂಯಜ್‌ ಕಾಲುವೆಯ ಇತಿಹಾಸ ಕುತೂಹಲಕಾರಿ. ಅದು ನಿರ್ಮಾಣವಾದ 19ನೇ ಶತಮಾನದಲ್ಲಿ ಯುರೋಪಿನ ದೇಶಗಳದ್ದೇ ಜಗತ್ತಿನಲ್ಲಿ ದರ್ಬಾರು. ಹೀಗಾಗಿ ಫರ್ಡಿನೆಂಡ್ ಡಿ ಲಿಸೆಪ್ಸ್ ಎಂಬ ಫ್ರಾನ್ಸ್‌ನ ರಾಜತಾಂತ್ರಿಕ ಅಂದು ಈಜಿಪ್ಟನ್ನು ಆಳುತ್ತಿದ್ದ ಆಟೋಮನ್ (ಟರ್ಕ್) ಅರಸನ ಪ್ರತಿನಿಧಿಯ ಮನವೊಲಿಸಿ ಸೂಯಜ್‌ ಕಾಲುವೆಯ ನಿರ್ಮಾಣಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದ. ಆ ಬಳಿಕ ಕಾಲುವೆಯಲ್ಲಿ ಸಂಚರಿಸುತ್ತಿದ್ದ ಹಡಗುಗಳು ತೆರುತ್ತಿದ್ದ ಸುಂಕ ಬ್ರಿಟನ್ ಹಾಗೂ ಫ್ರಾನ್ಸ್‌ ನಿಯಂತ್ರಣಕ್ಕೆ ಒಳಪಟ್ಟ ಆ ಸಂಸ್ಥೆಗೇ ಸೇರುತ್ತಿತ್ತು.

1952ರಲ್ಲಿ ನಡೆದ ಕ್ಷಿಪ್ರಕ್ರಾಂತಿಯ ನಂತರ ಅಧಿಕಾರ ವಹಿಸಿಕೊಂಡ ಈಜಿಪ್ಟ್‌ನ ಜನಪ್ರಿಯ ರಾಷ್ಟ್ರೀಯವಾದಿ ನಾಯಕ ಗೆಮಾಲ್ ಅಬ್ದುಲ್ ನಾಸರ್ 1956ರಲ್ಲಿ ಸೂಯಜ್‌ ಕಾಲುವೆಯನ್ನು ರಾಷ್ಟ್ರೀಕರಣ ಮಾಡಿದ. ಇದರಿಂದ ರೊಚ್ಚಿಗೆದ್ದ ಬ್ರಿಟನ್ ಮತ್ತು ಫ಼್ರಾನ್ಸ್ ಇವೆರಡೂ ಇಸ್ರೇಲ್‌ನ ಸಹಕಾರದೊಂದಿಗೆ ಈಜಿಪ್ಟ್‌ನ ಮೇಲೆ ದಾಳಿ ಮಾಡಿದವು.

ಆಗ ಈಜಿಪ್ಟಿಯನ್ನರು ಸೂಯಜ್‌ ಕಾಲುವೆಯೊಳಗೆ ಬೇಕಾಗಿಯೇ ತಮ್ಮ ಹಡಗುಗಳನ್ನು ಮುಳುಗಿಸಿ ಅದು ಕೆಲವು ತಿಂಗಳುಗಳ ಕಾಲ ಉಪಯೋಗಕ್ಕೆ ಬಾರದಂತೆ ಮಾಡಿದರು. ನಂತರ 1967ರಲ್ಲಿ ನಡೆದ ಅರಬ್-ಇಸ್ರೇಲಿ ಯುದ್ಧದ ವೇಳೆಯಲ್ಲಿ ಮುಚ್ಚಲಾದ ಕಾಲುವೆ ಸುಮಾರು ಎಂಟು ವರ್ಷಗಳ ಕಾಲ ಮತ್ತೆ ಯಾನಕ್ಕೆ ತೆರೆಯಲಿಲ್ಲ. ಇದರಿಂದಾಗಿ ಹಡಗುಗಳು ಕಾಲ ಹಾಗೂ ಹಣ, ಈ ಎರಡು ದೃಷ್ಟಿಯಿಂದಲೂ ದುಬಾರಿಯಾದ ದಕ್ಷಿಣ ಆಫ್ರಿಕಾದ ಮಾರ್ಗದಲ್ಲಿ ಸಂಚರಿಸಬೇಕಾಯಿತು. ಸರಕು ಸಾಗಣೆಯ ವೆಚ್ಚವನ್ನು ಕಡಿಮೆಮಾಡಲು ಬೃಹತ್ ಹಡಗುಗಳನ್ನು ನಿರ್ಮಿಸುವ ಕಾರ್ಯ ಆರಂಭವಾಯಿತು. ಇಂದು ಸೂಯಜ್‌ ಕಾಲುವೆಯಲ್ಲಿ ಸಂಚರಿಸುವ ಹಡಗುಗಳ ಪೈಕಿ ಕೆಲವು ತುಂಬಾ ದೊಡ್ಡ ಹಡಗುಗಳಾಗಿರುತ್ತವೆ. 2020ರಲ್ಲಿ ಸುಮಾರು 20 ಸಾವಿರ ಹಡಗುಗಳು ಸೂಯಜ್‌ ಕಾಲುವೆಯಲ್ಲಿ ಸಂಚರಿಸಿವೆ. ಇದು ಸೂಯಜ್‌ ಕಾಲುವೆಯ ಪೀಠಿಕೆಯಾಯಿತು. ಆದರೆ ಜಗತ್ತಿನಾದ್ಯಂತ ಹಾಹಾಕಾರವನ್ನು ಇತ್ತೀಚೆಗೆ ಉಂಟುಮಾಡಿದ ಸೂಯಜ್‌ ಕಾಲುವೆಯಲ್ಲಿ ನಡೆದ ಪ್ರಸಂಗದ ಸ್ವರೂಪವಾದರೂ ಎಂತಹದು?

ಎವರ್ ಗಿವನ್‌ನ ನತದೃಷ್ಟ
ಚೀನಾದಿಂದ ಹಾಲೆಂಡ್‌ಗೆ ಸಾಗುತ್ತಿದ್ದ ‘ಎವರ್ ಗಿವನ್’ ಎಂಬ ಹೆಸರಿನ ಒಂದು ದೈತ್ಯ ಹಡಗು ಮಾರ್ಚ್ 23ರಂದು ಸೂಯಜ್‌ ಕಾಲುವೆಯನ್ನು ಪ್ರವೇಶಿಸಿತು. ಆ ಹಡಗಿನಲ್ಲಿ ವಿವಿಧ ಬಗೆಯ ಸರಕುಗಳಿದ್ದ ಇಪ್ಪತ್ತು ಸಾವಿರ ಕಂಟೈನರ್‌ಗಳನ್ನು (20 ಇಲ್ಲವೆ 40 ಅಡಿ ಉದ್ದ, ಎಂಟು ಅಡಿ ಅಗಲ ಹಾಗೂ ಎಂಟೂವರೆ ಅಡಿ ಅಗಲ ಆಯತಾಕಾರದ ದೊಡ್ಡ ಲೋಹದ ಬಾಕ್ಸ್‌ಗಳು) ಇಟ್ಟಿಗೆಗಳಂತೆ ಒಂದರ ಮೇಲೊಂದು ಪೇರಿಸಿ ಇಡಲಾಗಿತ್ತೆನ್ನುವುದು ಆ ಹಡಗಿನ ದೈತ್ಯತೆಯನ್ನು ಹೇಳುತ್ತದೆ! ಅದರಲ್ಲಿದ್ದ ಸರಕು ಸರಂಜಾಮುಗಳನ್ನೂ ಸೇರಿಸಿದರೆ ಆ ಹಡಗಿನ ತೂಕ ಎರಡು ಲಕ್ಷ ಟನ್!

ಇನ್ನು ಆ ಹಡಗಿನ ಉದ್ದ 400 ಮೀಟರ್‌ಗಳಷ್ಟು (ಅಂದರೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ನೇತಾಜಿ ಸುಭಾಷ್‌ಚಂದ್ರ ಬೋಸ್ ಬಹುಮಹಡಿ ಕಟ್ಟಡದ ಸುಮಾರು ಆರು ಪಟ್ಟು ಎತ್ತರಕ್ಕೆ ಸರಿಸಮವಾದ ಉದ್ದ) ಇದ್ದು, ಅಗಲ 59 ಮೀಟರ್‌. ಎವರ್ ಗಿವನ್, ಕೆಂಪು ಸಮುದ್ರದ ಕಡೆಯಿಂದ ಸೂಯಜ್‌ ಕಾಲುವೆಯನ್ನು ಪ್ರವೇಶಿಸಿದಾಗ ಎಲ್ಲವೂ ಸರಿಯಾಗಿಯೇ ಇತ್ತು. ಆ ದೈತ್ಯ ಹಡಗನ್ನು ಬೀಸುವ ಗಾಳಿ ಅತ್ತಿತ್ತ ತಿರುಗಿಸುತ್ತಿತ್ತು. ಅದನ್ನು ತಡೆಯಲು ಹಡಗು ಸ್ವಲ್ಪ ವೇಗವಾಗಿ (!) ಅಂದರೆ 13 ನಾಟ್ಸ್‌ (ಗಂಟೆಗೆ 24 ಕಿಲೊಮೀಟರ್ ) ವೇಗದಲ್ಲಿ ಚಲಿಸುತ್ತಿತ್ತು.

ಆದರೆ ಆ ನಡುವೆ ಅದರ ಯಂತ್ರ ವ್ಯವಸ್ಥೆ ವಿಫಲವಾಗಿ ಅದು ಮುಂದೆ ಚಲಿಸುವ ಹಾಗೂ ಅತ್ತಿತ್ತ ತಿರುಗುವ ಸಾಮರ್ಥ್ಯವನ್ನು ಕಳೆದುಕೊಂಡಿತು. ಈ ಕಾರಣದಿಂದಾಗಿ ಎವರ್ ಗಿವನ್ ಅಡ್ಡಡ್ಡವಾಗಿ ತಿರುಗಿ ಅದರ ಮುಂಭಾಗ ಹಾಗೂ ಹಿಂಭಾಗಗಳೆರಡೂ ಕಾಲುವೆಯ ದಡದ ಮರಳಿನಲ್ಲಿ ಸಿಲುಕಿಕೊಂಡವು. ಕುತೂಹಲವೆಂದರೆ ‘ಎವರ್ ಗಿವನ್’ ಹಡಗು ಜಪಾನಿನ ಒಂದು ಸಂಸ್ಥೆಗೆ ಸೇರಿದ್ದು ಅದರ ಯಾನದ ವಹಿವಾಟನ್ನು ತೈವಾನಿನ ‘ಎವರ್ ಗ್ರೀನ್’ ಸಂಸ್ಥೆ ನಡೆಸುತ್ತಿದೆ. ಮಧ್ಯ ಅಮೆರಿಕದ ಪನಾಮಾ ದೇಶದಲ್ಲಿ ನೋಂದಾಯಿಸಲ್ಪಟ್ಟ ಆ ಹಡಗಿನಲ್ಲಿದ್ದ ಸಿಬ್ಬಂದಿ ಭಾರತೀಯರು! ಆದರೆ, ಅವರೊಂದಿಗೆ ಸೂಯಜ್‌ ಕಾಲುವೆಯಲ್ಲಿ ಎವರ್ ಗಿವನ್ ಅನ್ನು ಜಾಗರೂಕತೆಯಿಂದ ನಡೆಸಿಕೊಂಡು ಹೋಗಲು ಈಜಿಪ್ಟ್‌ನ ಇಬ್ಬರು ಪೈಲಟ್‌ಗಳು ಸಹ ಅವರೊಂದಿಗೆ ಇದ್ದರು.

ಕಾರಣಗಳು ಏನೇ ಇರಲಿ, 300 ಮೀಟರ್ ಅಗಲದ ಸೂಯಜ್‌ ಕಾಲುವೆಯಲ್ಲಿ 400 ಮೀಟರ್ ಉದ್ದವಿರುವ ದೈತ್ಯ ಹಡಗೊಂದು ಅಡ್ಡಡ್ಡ ಸಿಲುಕಿಕೊಂಡು ಆ ಕಾಲುವೆಯ ಸಂಚಾರವನ್ನು ಸ್ಥಗಿತಗೊಳಿಸಿತು.

ಮುಚ್ಚಿದ ಸೂಯಜ್‌ ಕಾಲುವೆ
ಸೂಯಜ್‌ ಕಾಲುವೆಯಲ್ಲಿ ಪ್ರತಿನಿತ್ಯ 50 ಹಡಗುಗಳು ಸಂಚರಿಸಿ ಸುಮಾರು ಹತ್ತು ಬಿಲಿಯನ್ ಡಾಲರ್‌ಗಳಷ್ಟು ಸರಕನ್ನು ಕೊಂಡೊಯ್ಯುತ್ತವೆ. ಕಡಿದಾದ ಆ ಜಲಮಾರ್ಗವನ್ನು ದಾಟಲು ಅವಕ್ಕೆ ಸಾಮಾನ್ಯವಾಗಿ 12-16 ಗಂಟೆಗಳು ಬೇಕಾಗುತ್ತವೆ. ಹೀಗಾಗಿ ಆರು ದಿನಗಳ ಆವಧಿಯಲ್ಲಿ ಸೂಯಜ್‌ ಕಾಲುವೆಯ ಎರಡೂ ಕೊನೆಯಲ್ಲೂ ಒಟ್ಟು 350 ರಿಂದ 400 ಹಡಗುಗಳು ಅಸಹಾಯಕವಾಗಿ ನಿಂತವು.

ಸೂಯಜ್‌ ಕಾಲುವೆ ಈಗ ಸಂಪೂರ್ಣವಾಗಿ ಈಜಿಪ್ಟ್ ದೇಶಕ್ಕೆ ಸೇರಿದ್ದು, ಆ ಕಾಲುವೆಯಿಂದ ದಿನವೊಂದಕ್ಕೆ 14 ಮಿಲಿಯನ್ ಡಾಲರ್ ಆದಾಯವಿದೆ. ಎವರ್ ಗಿವನ್ ಆ ಕಾಲುವೆಯ ಸಂಚಾರಕ್ಕೆ ತಡೆಹಾಕಿದ್ದು ಆರು ದಿನಗಳಲ್ಲಿ ಆ ದೇಶಕ್ಕೆ ಸಾಕಷ್ಟು ನಷ್ಟವಾಯಿತು. ಆದರೆ, ನಷ್ಟ ಈಜಿಪ್ಟ್ ಒಂದಕ್ಕೇ ಆಗಲಿಲ್ಲ. ಎಲೆಕ್ಟ್ರಾನಿಕ್ ಬಿಡಿಭಾಗಗಳು, ಪೆಟ್ರೋಲಿಯಂ ಉತ್ಪನ್ನಗಳು, ಜಾನುವಾರುಗಳು ಹಾಗೂ ಪೀಠೋಪಕರಣಗಳಿಂದ ಹಿಡಿದು ಕಾಫಿ, ಧಾನ್ಯಗಳು, ಕೊನೆಗೆ ಟಾಯ್ಲೆಟ್ ಪೇಪರ್‌ನಂತಹ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಹಡಗುಗಳು ಒಂದೆಡೆ ಸುಮ್ಮನೆ ನಿಲ್ಲಲಾಗಿ ಆ ಹಡಗುಗಳ ಸಂಸ್ಥೆಗಳಿಗೆ ನಷ್ಟ ದಿನ ಕಳೆದಂತೆ ಏರಲಾರಂಭಿಸಿತು. ಜಾಗತಿಕ ಸರಬರಾಜು ಸರಪಳಿಗೆ ಬಲವಾದ ಪೆಟ್ಟು ಬಿದ್ದಿತು. ಇದರಿಂದ ಆ ವಸ್ತುಗಳ ಬೆಲೆ ಏರುವುದೇ? ಸೂಪರ್ ಮಾರ್ಕೆಟ್‌ಗಳ ಗೂಡುಗಳು ಖಾಲಿಯಾಗುವವೇ? ಹೀಗೆ ಅನಗತ್ಯವಾದ ಭೀತಿ ಕೊರೊನಾದ ದಾಳಿಯ ಅನುಭವದಿಂದ ಜರ್ಜರಿತವಾಗಿರುವ ಜಗತ್ತಿನ ವಿವಿಧೆಡೆಯಲ್ಲಿ ಉಂಟಾಯಿತು.

ಇದೆಲ್ಲಾ ಚರ್ಚೆಗೆ ಒಳಗಾಗುತ್ತಿದ್ದ ವೇಳೆಯಲ್ಲೇ ಕಾಲುವೆಯ ಅಂಚಿನಲ್ಲಿ ಹೂತುಹೋಗಿದ್ದ ಎವರ್ ಗಿವನ್ ಅನ್ನು ‘ಪಾರುಮಾಡುವ’ ಕೆಲಸ ಪ್ರಾರಂಭವಾಯಿತು. ಜೆಸಿಬಿ ಯಂತ್ರವನ್ನು ಹೋಲುವ ಯಂತ್ರಗಳು ಆ ಹಡಗಿನ ಚೂಪಾದ ಮುಂಭಾಗದ ಸುತ್ತಲಿನ ಮಣ್ಣು ಮರಳುಗಳನ್ನು ಅಗೆದು ತೆಗೆಯುವ ಕೆಲಸವನ್ನು ಪ್ರಾರಂಭಿಸಿದವು. ಎವರ್ ಗಿವನ್‌ನ ಮುಂಭಾಗದ ದೈತ್ಯತೆಗೆ ಹೋಲಿಸಿದಲ್ಲಿ ಮಕ್ಕಳಾಟಿಗೆಯಂತೆ ಕಾಣುವ ಅಂತಹ ಒಂದು ಯಂತ್ರ ಅಗೆದು ತೆಗೆಯುತ್ತಿದ್ದ ಮರಳಿನ ಪ್ರಮಾಣ ರಾವಣಾಸುರನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ಸಾಕೇ ಎಂಬಂತಿತ್ತು. ಇದರೊಂದಿಗೇ ಅನೇಕ ಪುಟ್ಟ ಆದರೆ ಶಕ್ತಿಯುತ ಯಾಂತ್ರಿಕ ದೋಣಿಗಳು ಆ ಹಡಗಿನ ಹಿಂಭಾಗವನ್ನು ನಾಲೆಯ ತುದಿಯಿಂದ ನೀರಿಗೆ ತಳ್ಳಿ ಎಳೆಯಲಾರಂಭಿಸಿದವು. ಇದು ಹೆಚ್ಚಿನ ಫಲಿತಾಂಶವನ್ನು ನೀಡಲಿಲ್ಲವಾಗಿ ಹೂಳೆತ್ತುವ ದೊಡ್ಡ ದೋಣಿಗಳು (ಡ್ರೆಡ್ ಜರ್ಸ್) ಬಂದು ಎವರ್ ಗಿವನ್‌ನ ಸುತ್ತಲಿನ ಹೂಳನ್ನು ಎತ್ತಲಾರಂಭಿಸಿದವು.

ಆ ದೈತ್ಯ ಹಡಗನ್ನು ಹೂತುಹೋಗಿದ್ದ ಸ್ಥಳದಿಂದ ಕದಲಿಸಿ ಮತ್ತೆ ಕಾಲುವೆಯ ಮಧ್ಯಭಾಗಕ್ಕೆ ತರುವುದಕ್ಕೆ ‘ಕೆಲವು ದಿನ ಅಗತ್ಯ, ಕೆಲವು ವಾರ ಅಗತ್ಯ’ ಹೀಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು. ಸೂಯಜ್‌ ಕಾಲುವೆಯನ್ನು ಪ್ರವೇಶಿಸಲು ಕಾದಿದ್ದ ಹಡಗುಗಳ ಸಹನೆ ಮೀರಲಾರಂಭಿಸಿತು. ಆ ಪೈಕಿ ಕೆಲವು ಹಡಗುಗಳು ಅನಿಶ್ಚಿತತೆಯ ಹಾಗೂ ಗೊಂದಲದ ತಾಣವಾದ ಸೂಯಜ್‌ ಕಾಲುವೆಯನ್ನು ಪ್ರವೇಶಿಸುವ ಗೊಡವೆಗೇ ಹೋಗದೆ ದೂರವಾದರೂ, ದುಬಾರಿಯಾದರೂ ಪರವಾಗಿಲ್ಲ ಯುರೋಪ್‌ಗೆ ಹೋಗಿಯೇ ತೀರುತ್ತೇವೆಂದು ಆಫ್ರಿಕಾ ಖಂಡವನ್ನು ಸುತ್ತುಹಾಕಿ ತಮ್ಮ ತಲುಪುದಾಣಗಳತ್ತ ಹೊರಟವು.

ಚಂದ್ರನ ಚಮತ್ಕಾರ
ಎವರ್ ಗಿವನ್ ಅನ್ನು ಪಾರುಮಾಡುವ ಪ್ರಯತ್ನಗಳು ಈ ರೀತಿ ನಡೆದಿದ್ದ ವೇಳೆಯಲ್ಲೇ ದೂರದ ಸೂರ್ಯ ಚಂದ್ರರು ಎವರ್ ಗಿವನ್‌ನ ನೆರವಿಗೆ ಬಂದರು. ಸೂಯಜ್‌ನ ಆಗಸದಲ್ಲಿ ಹುಣ್ಣಿಮೆ ಚಂದ್ರ ಮೂಡಿದಂತೆ ಆ ಆಕಾಶಕಾಯವು ಭೂಮಿಯ ಮೇಲೆ ಬೀರುವ ಗುರುತ್ವಾಕರ್ಷಣೆಯ ಫಲವಾಗಿ ಉಬ್ಬರವಿಳಿತಗಳು (ಟೈಡ್ಸ್) ಜನಿತವಾದವು. ಜೊತೆಗೇ ತನ್ನ ಕೋಳಿಮೊಟ್ಟೆಯಾಕಾರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ಚಂದ್ರ ಕಳೆದ ಸೋಮವಾರ (ಮಾರ್ಚ್ 28) ತನ್ನ ಕಕ್ಷೆಯಲ್ಲಿ ಭೂಮಿಗೆ ಬಹುಮಟ್ಟಿಗೆ ‘ಅತಿ’ ಹತ್ತಿರದಲ್ಲಿತ್ತು. ಅಂದು ಹುಣ್ಣಿಮೆಯಾದ್ದರಿಂದ ಸೂರ್ಯನ ಗುರುತ್ವಾಕರ್ಷಣ ಶಕ್ತಿಯೂ ಇದರೊಂದಿಗೆ ಸೇರಿ ಸಹಕರಿಸಿತು.

ಪರಿಣಾಮವಾಗಿ ಸೂಯಜ್‌ ಕಾಲುವೆಯ ನೀರಿನಮಟ್ಟ ಮೇಲೇರಿ ಎವರ್ ಗಿವನ್ ಅನ್ನು ಬಿಡಿಸಿಕೊಳ್ಳುವ ಹಾಗೂ ಮತ್ತೆ ತೇಲಿಬಿಡುವ ಕಾರ್ಯ ಸುಲಭವಾಯಿತು. ಈ ಪಾರು ಮಾಡುವ ಕಾರ್ಯದಲ್ಲಿ ಭಾಗವಹಿಸಿದ್ದ ಈಜಿಪ್ಟಿಯನ್ನರ ಸಂತಸಕ್ಕೆ ಪಾರವೇ ಇರಲಿಲ್ಲ. ಕೆಲಕಾಲದ ನಂತರ ಆ ದೈತ್ಯ ಹಡಗು ತನ್ನ ಯಂತ್ರ ವ್ಯವಸ್ಥೆಯ ನೆರವಿನೊಡನೆಯೇ ಮುಂದೆ ಚಲಿಸಿ ‘ಬೃಹತ್ ಕಹಿಯಾದ ಸರೋವರ (ಗ್ರೇಟ್ ಬಿಟ್ಟರ್ ಲೇಕ್) ಎಂಬ ದೊಡ್ಡ ಸರೋವರದಂತಹ ಪ್ರದೇಶವನ್ನು ತಲುಪಿತು. ಅಂತೂ ಕಳೆದ ಮಂಗಳವಾರ (ಮಾರ್ಚ್ 30) ಸೂಯಜ್‌ ಕಾಲುವೆ ಹಡಗುಗಳ ಸಂಚಾರಕ್ಕೆ ಮತ್ತೆ ತೆರವಾಯಿತು. ಆದರೆ, ಎವರ್ ಗಿವನ್‌ನ ಪ್ರಕರಣದಿಂದಾಗಿ ಜಾಗತಿಕ ಸರಬರಾಜು ಸರಪಣಿಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿಪಡಿಸಲು ತಿಂಗಳುಗಳೇ ಬೇಕಾಗಬಹುದು ಎನ್ನುವುದು ವಾಣಿಜ್ಯ ತಜ್ಞರ ಅನಿಸಿಕೆ.

ಜಾಗತೀಕರಣದ ಯುಗದಲ್ಲಿ ದೇಶಗಳು ಒಂದನ್ನೊಂದು ಹಾಗೂ ಜಲ ಸಾರಿಗೆಯನ್ನು ಎಷ್ಟರಮಟ್ಟಿಗೆ ಅವಲಂಬಿಸಿವೆ ಎಂಬು
ದನ್ನು ಲಭ್ಯವಿರುವ ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಕಷ್ಟವನ್ನೇ ಅರಿಯದೆ ಅವುಗಳನ್ನು ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಕೊಂಡು ಬೇಕಾಬಿಟ್ಟಿಯಾಗಿ ಬಳಸುವ ಬಳಕೆದಾರರಾದ ನಮಗೆ ಈ ಪ್ರಸಂಗ ತಿಳಿಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.