ADVERTISEMENT

ಸಾಂಸ್ಕೃತಿಕ ಸಂಪತ್ತಿನ ‘ಅಕ್ಷಯ ನಿಧಿ’; ಕಾಡುಗೊಲ್ಲರ ದೈವದ ಗುಬ್ಬ

ಜಿ.ವಿ.ಆನಂದಮೂರ್ತಿ
Published 8 ಅಕ್ಟೋಬರ್ 2022, 19:30 IST
Last Updated 8 ಅಕ್ಟೋಬರ್ 2022, 19:30 IST
ಚಿತ್ರದೇವರ ಪೌಳಿ ಮತ್ತು ವೀರಗಾರನ ಪೌಳಿ
ಚಿತ್ರದೇವರ ಪೌಳಿ ಮತ್ತು ವೀರಗಾರನ ಪೌಳಿ   

ಕಾಡುಗೊಲ್ಲರ ಸಾಂಸ್ಕೃತಿಕ ಸಂಪತ್ತಿನ ‘ಅಕ್ಷಯ ನಿಧಿ’ಗಳಂತಿರುವ ಗುಬ್ಬಗಳು ಆ ಸಮುದಾಯದ ನೈತಿಕ ಸ್ವಚ್ಛತೆ ಮತ್ತು ಸಾತ್ವಿಕ ಗುಣದ ಪ್ರತಿನಿಧಿಗಳಂತಿವೆ. ಈ ಗುಬ್ಬಗಳೂ ನಾಗರಿಕ ಜಗತ್ತಿನ ರೂಪಾಂತರದ ಪ್ರಕ್ರಿಯೆಗೆ ಒಡ್ಡಿಕೊಂಡ ಪರಿಯಾದರೂ ಹೇಗಿದೆ? ಒಂದು ನೋಟ ಇಲ್ಲಿದೆ

***

ಕಾಲ ಮತ್ತು ನಾಗಾಲೋಟದ ಆಧುನಿಕತೆಯ ಒತ್ತಡವನ್ನು ತಾಳಿಕೊಂಡು ಉಳಿದು ಬಂದಿರುವ ಕೆಲವೇ ಬುಡಕಟ್ಟುಗಳಲ್ಲಿ ಕಾಡಗೊಲ್ಲ ಸಮುದಾಯವೂ ಒಂದು. ಬಹುಸಂಖ್ಯಾತರ ಧಾರ್ಮಿಕ ಮತ್ತು ಸಾಮಾಜಿಕ ದಮನಗಳಿಗೆ ತುತ್ತಾಗದೆ, ತಮ್ಮ ಪ್ರಾಚೀನ ನಂಬಿಕೆ, ಜೀವನಶೈಲಿ ಮತ್ತು ಆಚರಣೆಗಳನ್ನು ಬಿಟ್ಟುಗೊಡದೆ, ಇಂದಿಗೂ ತಮ್ಮದೇ ಸಂಸ್ಕೃತಿಯೊಂದಿಗೆ ಬೆಸೆದುಕೊಂಡು ಕಾಡುಗೊಲ್ಲರು ಬದುಕುತ್ತಿದ್ದಾರೆ. ಚರಿತ್ರೆಯೇ ಇಲ್ಲದ ತಮ್ಮ ಹಟ್ಟಿಗಳಲ್ಲಿ, ತಮ್ಮ ಹಿರಿಯರು ಕಟ್ಟಿಕೊಟ್ಟಿದ್ದ ‘ದೇವರ ಗುಬ್ಬ’, ‘ಆವಿನ ಗೂಡು’ ಹಾಗೂ ‘ವಲಸೆ’ ಬದುಕನ್ನು ಜತನದಿಂದ ಕಾಪಾಡಿಕೊಂಡು ಬಾಳುತ್ತಿದ್ದಾರೆ.

ADVERTISEMENT

ಕಾಡುಗೊಲ್ಲರು ನಿರಾಕಾರ ಪೂಜಕರು. ತಮ್ಮ ಸಮುದಾಯದ ಹಿತಕ್ಕಾಗಿ ಹೊರಗಿನವರೊಂದಿಗೆ ಹೋರಾಡಿ ಮಡಿದ ಅಥವಾ ತಮ್ಮ ಅವುಗಳ (ದನ-ಕರುಗಳು) ರಕ್ಷಣೆಗಾಗಿ ಕಾಡುಪ್ರಾಣಿಗಳೊಂದಿಗೆ ಹೋರಾಡಿ ಮಡಿದ ತಮ್ಮ ಪೂರ್ವಿಕರನ್ನು ಇವರು ಈ ಗುಬ್ಬಗಳಲ್ಲಿ ದೈವವನ್ನಾಗಿ ಪೂಜಿಸುತ್ತಾರೆ. ಹೀಗೆ ಮಡಿದವರನ್ನು ವೀರಗಾರರೆಂದು ಕರೆಯುತ್ತಾರೆ. ಪ್ರಾಚೀನ ಬುಡಕಟ್ಟುಗಳು ರೂಪಿಸಿಕೊಂಡ ಸಂರಚನೆಗಳಲ್ಲಿ ಈ ಸಂಪ್ರದಾಯವೂ ಒಂದು. ಕಾಲದ ಬದಲಾವಣೆಗಳನ್ನು ದಾಟಿಬಂದಿರುವ ಕಾಡುಗೊಲ್ಲರ ಸಂಸ್ಕೃತಿಯಲ್ಲಿ ಇದು ಇಂದಿಗೂ ಬಲಯುತವಾಗಿಯೇ ಉಳಿದುಕೊಂಡು ಬಂದಿದೆ. ಎತ್ತಪ್ಪ, ಜುಂಜಪ್ಪ, ಸಿರಿಯಣ್ಣ, ವೀರಚಿಕ್ಕಣ್ಣ, ಹೊನ್ನೆಮರದ ಈರಣ್ಣ, ಕಾಟುಂ ದೇವರು, ಹಾಲುಗುಡದಪ್ಪ, ಕ್ಯಾತಪ್ಪ ಹೀಗೆಯೇ ಇನ್ನೂ ಕೆಲವು ಸ್ಥಳೀಯ ವೀರಗಾರರು ಕರ್ನಾಟಕದಾದ್ಯಂತ ಕಾಡುಗೊಲ್ಲರ ಹಟ್ಟಿಗಳಲ್ಲಿ ನೆಲೆಗೊಂಡಿದ್ದಾರೆ.

ವಿಶೇಷವಾಗಿ ಹೀಗೆ ಪೂಜೆಗೆ ಅರ್ಹರಾದ ಪೂರ್ವಜರೆಲ್ಲ ಬಹುಪಾಲು ಪುರುಷರೇ ಆಗಿದ್ದಾರೆ! ಇದು ಸಹಜವೇ ಇರಬಹುದು. ಏಕೆಂದರೆ, ಬೇಟೆ ಮತ್ತು ಅಲೆಮಾರಿ ಬದುಕಿನ ಹಂತದಲ್ಲಿ ಪುರುಷರಿಗೇ ಬೇಟೆ ಮತ್ತು ಅನ್ಯರ ಮೇಲಿನ ಆಕ್ರಮಣಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಹೆಚ್ಚು. ಆದ್ದರಿಂದ ಕಾಡುಪ್ರಾಣಿಗಳೊಂದಿಗಿನ ಕಾದಾಟದಲ್ಲಿ ಪ್ರಾಣ ತೆರುವವರು, ಮತ್ತು ಅನ್ಯ ಸಮುದಾಯವರ ಜತೆ ಕಾದಾಡಿ ಮಡಿಯುವವರೂ ಹೆಚ್ಚಿನ ಪ್ರಮಾಣದಲ್ಲಿ ಪುರುಷರೇ ಆಗಿರುತ್ತಾರೆ. ಈ ಕಾರಣವಾಗಿ ಕಾಡುಗೊಲ್ಲರ ವೀರಗಾರರಲ್ಲಿ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ!

ಕರ್ನಾಟಕದಲ್ಲಿರುವ ಯಾವುದೇ ಕಾಡುಗೊಲ್ಲರ ಹಟ್ಟಿಗೆ ಹೋದರೆ, ಅಲ್ಲಿ ಕಡ್ಡಾಯವಾಗಿ ಎರಡು ಗುಬ್ಬಗಳಿರುತ್ತವೆ. ಒಂದು ಚಿತ್ರದೇವರ ಪೌಳಿ, ಮತ್ತೊಂದು ಅಲ್ಲಿನ ಸ್ಥಳೀಯ ವೀರಗಾರನ ಪೌಳಿ. ಕೆಲವು ಕಡೆ ಜುಂಜಪ್ಪನ ಪೌಳಿಯೂ ಸೇರಿ ಮೂರು ಪೌಳಿಗಳಿದ್ದರೆ, ಇನ್ನೂ ಕೆಲವು ಹಟ್ಟಿಗಳಲ್ಲಿ ಸ್ಥಳೀಯ ವೀರಗಾರನ ಒಂದೇ ಪೌಳಿ ಸಹ ಇರುತ್ತದೆ. ‘ಚಿತ್ರದೇವರು’ ಕಾಡುಗೊಲ್ಲರ ಮೂಲ ದೈವವಾದ್ದರಿಂದ ಚಿತ್ರದೇವರ ಪೌಳಿಯು ಕರ್ನಾಟಕದ ಎಲ್ಲ ಕಾಡುಗೊಲ್ಲರ ಹಟ್ಟಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

‘ಪೌಳಿ’ ಎಂದರೆ, ಗುಬ್ಬಗಳ ಸುತ್ತಲೂ ಕಟ್ಟಿದ ಒಂದು ಕಳ್ಳೆಬೇಲಿ. ಹೊರಗಿನ ಯಾವುದೇ ಕೆಡುಕಿನ ನೆರಳು ಹಾಗೂ ‘ಅಂಟು-ಮುಂಟು’ ದೈವದ ಗುಬ್ಬಗಳ ಮೇಲೆ ಬೀಳದಂತೆ ಕಳ್ಳೆಬೇಲಿ ತಡೆವೊಡ್ಡುತ್ತದೆ ಎಂಬುದು ಕಾಡುಗೊಲ್ಲರ ನಂಬಿಕೆ. ಕೆಲವು ಗುಬ್ಬಗಳಲ್ಲಿ ದೈವದ ಜೊತೆಗೆ ಕಾಡುಗೊಲ್ಲರ ಪಾರಂಪರಿಕ ವಾದ್ಯವಾದ ‘ಗಣೆ’ಯನ್ನೂ ಇಟ್ಟು ಪೂಜಿಸುವ ಸಂಪ್ರದಾಯವಿದೆ. ಕಾಡುಗೊಲ್ಲರ ಉತ್ಕೃಷ್ಟ ಅಭಿರುಚಿ ಸೃಷ್ಟಿಸಿದ ಈ ಗುಬ್ಬಗಳು ಅವರ ಪ್ರಾಚೀನ ಕೌಶಲಕ್ಕೆ ಸಾಕ್ಷಿಯಾಗಿವೆ. ತಮ್ಮ ಬುಡಕಟ್ಟಿನ ವೀರಗಾರರ ಬಗ್ಗೆ ಕಾಡುಗೊಲ್ಲರಿಗೆ ಅಪಾರವಾದ ಹೆಮ್ಮೆಯಿದೆ. ಈ ಕಾರಣವಾಗಿಯೇ ವೀರಗಾರರನ್ನು ಕುರಿತ ನೂರಾರು ಮೌಖಿಕ ಸಾಹಿತ್ಯವೂ ಕಾಡುಗೊಲ್ಲರಲ್ಲಿದೆ.

ಹಟ್ಟಿಯ ಒಂದು ಭಾಗದಲ್ಲಿ ಅಥವಾ ದೊಡ್ಡ ಮರವೊಂದರ ಕೆಳಗೆ ಸಾಮಾನ್ಯವಾಗಿ ಈ ಗುಬ್ಬಗಳು ನೆಲೆಕಂಡಿವೆ. ನಾಲ್ಕು ಅಡಿಯ ಹಸಿಮಣ್ಣಿನ ಗೋಡೆ, ಅದರ ಮೇಲೆ ಸ್ಥಳೀಯವಾಗಿ ತಮಗೆ ಲಭ್ಯವಾಗುವ ಕಾಮ್ಸಿಹುಲ್ಲು ಅಥವಾ ಮುತ್ತುಗದ ಎಲೆ ಅಥವಾ ಬಾಳೆಪಟ್ಟೆ ಅಥವಾ ಕೆಲವು ಕಡೆ ಆಪಿನ ದಂಟುಗಳಿಂದಲೂ ಈ ಗುಬ್ಬಗಳ ಮಾಡು ನಿರ್ಮಾಣವಾಗಿರುತ್ತದೆ. ಕೆಲವು ಹಟ್ಟಿಗಳಲ್ಲಿ ಮಣ್ಣಿನ ಗೋಡೆಗೆ ಬದಲಾಗಿ ಹುಲ್ಲಿನ ಗೋಡೆ ಇದೆ. ಒಬ್ಬರು ಮಾತ್ರ ಮೈ ಕುಗ್ಗಿಸಿಕೊಂಡು ಒಳಗೆ ನುಸುಳಿಕೊಂಡು ಹೋಗುವಷ್ಟು ಕಿರಿದಾದ ಕಲಾತ್ಮಕ ಬಾಗಿಲು ಇರುತ್ತದೆ. ಗುಬ್ಬದ ಪೂಜಾರಪ್ಪನನ್ನು ಹೊರತುಪಡಿಸಿ ಬೇರೆ ಯಾರೂ ಗುಬ್ಬದ ಒಳಗೆ ಹೋಗುವಂತಿಲ್ಲ!

ಈ ಗುಡಿಗಳಿಗೆ ಹೊದೆಸಿರುವ ಹುಲ್ಲನ್ನು ಎರಡು-ಮೂರು ವರ್ಷಗಳಿಗೊಮ್ಮೆ ಬದಲಿಸುತ್ತಾರೆ. ಕಾಡುಗೊಲ್ಲರ ಪ್ರಾಚೀನ ಕೌಶಲ ಮತ್ತು ಅಂದಿನ ಅವರ ಅಲೆಮಾರಿ ಬದುಕಿನ ಅವಸ್ಥೆಗೆ ಅನುಗುಣವಾಗಿ ಈ ಗುಬ್ಬಗಳು ನಿರ್ಮಾಣಗೊಂಡಿವೆ ಎನ್ನುವುದನ್ನು ಅವುಗಳ ವಿನ್ಯಾಸವೇ ಹೇಳುತ್ತದೆ. ಸೊಬಗು, ಪ್ರಸನ್ನತೆ ಮತ್ತು ಸರಳತೆಯಿಂದ ಕೂಡಿರುವ ಈ ಗುಬ್ಬಗಳು ಕಾಡುಗೊಲ್ಲರ ವಿವೇಕ ರೂಪಿಸಿದ ಅಮರ ಕೃತಿಗಳು. ನೈತಿಕ ಸ್ವಚ್ಛತೆ ಮತ್ತು ಸಾತ್ವಿಕ ಗುಣದ ಈ ಬುಡಕಟ್ಟು ಸಮುದಾಯವು ತಮ್ಮ ಪೂರ್ವಜರಿಗೆ ಅರ್ಪಿಸಿದ ಪರಿಶುದ್ಧ ‘ಎಡೆ’ಯಂತಿವೆ ಈ ಗುಬ್ಬಗಳು. ತಮ್ಮ ಬುಡಕಟ್ಟು ಸಮುದಾಯದ ಒಡವೆಗಳಂತಿರುವ ಈ ಗುಬ್ಬಗಳನ್ನು ಕಾಡುಗೊಲ್ಲರು ಇಂದಿಗೂ ಅಪಾರವಾದ ದೈವಿಕ ಭಾವನೆಯಿಂದ ಗೌರವಿಸುತ್ತಾರೆ.

ಇದರ ಜೊತೆಗೆ ಕಾಡುಗೊಲ್ಲರ ಗುಬ್ಬಗಳ ಬಳಿ ಧೂಪದ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಗಂಧದ ಕಡ್ಡಿ (ಊದುಬತ್ತಿ) ಇಲ್ಲದಿರುವ ಕಾಲದಲ್ಲಿ, ಕಾಡುಗೊಲ್ಲರು ತಂಗಟೆ ಮರದ ಒಣ ಕಡ್ಡಿಗಳಿಂದ ಕೆಂಡ ಮಾಡಿ, ಈ ಕೆಂಡದಲ್ಲಿ ಧೂಪದ ಮರದ ಚೆಕ್ಕೆಯಿಂದ ಧೂಪ ಹಾಕುವ ಸಂಪ್ರದಾಯವಿತ್ತು. ಈಗಲೂ ಕಾಡುಗೊಲ್ಲರು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಕರ್ನಾಟಕದಲ್ಲಿರುವ ಹಲವಾರು ಕಾಡುಗೊಲ್ಲರ ಗುಬ್ಬಗಳ ಬಳಿ ಪುರಾತನ ಧೂಪದ ಮರಗಳು ಈಗಲೂ ಉಳಿದುಕೊಂಡು ಬಂದಿರುವುದನ್ನು ನಾವು ಕಂಡಿದ್ದೇವೆ. ಚಿತ್ರದೇವರ ಕಾವ್ಯದಲ್ಲೂ ಧೂಪದ ಮರದ ಉಲ್ಲೇಖವಿದೆ.

ಬುಡಕಟ್ಟು ಸಮುದಾಯವಾದ ಕಾಡುಗೊಲ್ಲರದ್ದು ಮೂಲತಃ ದೇವಾಲಯ ಸಂಸ್ಕೃತಿಯಲ್ಲ. ‘ಗರ್ಭಗುಡಿ’, ‘ಯಜ್ಞ-ಹೋಮ’, ‘ಪುರೋಹಿತ’ ಹಾಗೂ ‘ಮಂತ್ರ’ಗಳ ಸಂಪ್ರದಾಯವದವರಲ್ಲ! ಹಾಗೆಯೇ ಅವರು ಮೂರ್ತಿ ಪೂಜಕರೂ ಅಲ್ಲ. ತಮ್ಮ ಪೂರ್ವಿಕರನ್ನು ನಿರಾಕಾರ ಸ್ಥಿತಿಯಲ್ಲಿ ಪೂಜಿಸುವ ಕಾಡುಗೊಲ್ಲರ ದೈವದ ಕಲ್ಪನೆಯೆಂದರೆ, ಅಲುಗು, ಈಟಿ, ಮುಸ್ತಾಫ್‍ಗಳನ್ನು ಪೂರ್ವಿಕರಿಗೆ ಸಂಕೇತವಾಗಿ ಪೂಜಿಸುತ್ತಾರೆ. ಬಿದಿರಿನ ಪೆಟ್ಟಿಗೆಗಳ ಮೇಲೆ ಕೆಂಪುವಸ್ತ್ರ ಸುತ್ತಿ, ಅದರ ಮೇಲೆ ‘ನಾಗರ’ಗಳನ್ನು ಇಟ್ಟು ಪೂಜಿಸುವುದು ಇವರಲ್ಲಿರುವ ಸಂಪ್ರದಾಯ. ಹೀಗಾಗಿ ಕಾಡುಗೊಲ್ಲರು ಕನ್ನಡ ಜಿಲ್ಲೆಯ ‘ಮೇರ’ರಂತೆ ನಾಗಾರಾಧಕರೂ ಹೌದು ಎನ್ನುವುದನ್ನು ಅವರ ಬಹುಪಾಲು ಆಚರಣೆಗಳು ದೃಢಪಡಿಸುತ್ತವೆ. ಚರಿತ್ರೆಯ ಯಾವ ಹಂತದಲ್ಲಿ ಇವರು ನಾಗಾರಾಧನೆಗೆ ತೊಡಗಿದರೋ ತಿಳಿಯದು! ಇವೆಲ್ಲವೂ ಲಿಖಿತ ಇತಿಹಾಸವೇ ಇಲ್ಲದ ಕಾಡುಗೊಲ್ಲರಲ್ಲಿ ಮುಚ್ಚಿಹೋಗಿರುವ ಸಂಗತಿಗಳು. ‘ಶೈವ’ರೂ ಅಲ್ಲದ, ‘ವೈಷ್ಣ’ವರೂ ಅಲ್ಲದ ಕಾಡುಗೊಲ್ಲರು ಮೂಲತಃ ಬುಡಕಟ್ಟು ಸಂಪ್ರದಾಯದವರು. ಕಾಡುಗೊಲ್ಲರ ಬದುಕಿನಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಇಂತಹ ಸಾಂಸ್ಕೃತಿಕ ಬದುಕಿನ ದಟ್ಟ ವಿವರಗಳು ಹೆಚ್ಚಿನ ಶೋಧನೆಗೆ ದಾರಿ ತೋರುತ್ತವೆ.

ಕಾಡುಗೊಲ್ಲರನ್ನು ಒಂದಾಗಿ ಕೂಡಿಸಿರುವುದೇ ಅವರ ಸಂಸ್ಕೃತಿಯ ವೈವಿಧ್ಯಮಯ ಆಚರಣೆಗಳು. ಒಂದು ಬುಡಕಟ್ಟಿನ ಸ್ವಭಾವ ಲಕ್ಷಣಗಳನ್ನು ಸೂತ್ರೀಕರಿಸಿ, ಅದೇ ಎಲ್ಲ ಬುಡಕಟ್ಟುಗಳ ಸಾಮಾನ್ಯ ಲಕ್ಷಣಗಳು ಎಂದು ಹೇಳುವ ಹಾಗಿಲ್ಲ! ಪ್ರತಿಯೊಂದು ಬುಡಕಟ್ಟಿಗೂ ಅದರದೇ ಆದ ಸ್ವಭಾವ ಲಕ್ಷಣಗಳು, ಧಾರ್ಮಿಕ ಕಟ್ಟುಪಾಡುಗಳು, ಸಂಪ್ರದಾಯ ನಂಬಿಕೆಗಳು ತಾಳಿನಿಂದ ತುದಿತನಕ ಭಿನ್ನವಾಗಿರುತ್ತವೆ. ಆದ್ದರಿಂದ ಪ್ರತಿಯೊಂದು ಬುಡಕಟ್ಟನ್ನೂ ಪ್ರತ್ಯೇಕವಾಗಿಯೇ ಅಧ್ಯಯನ ಮಾಡಬೇಕು. ಮಾನವಶಾಸ್ತ್ರಜ್ಞ ರೂತ್ ಬೆನಡಿಕ್ಟ್ ಹೇಳುವುದು ಇದನ್ನೇ.

‘ನಮ್ಮ ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾದ ಗುಬ್ಬಗಳು ಮತ್ತು ತಮ್ಮ ಬುಡಕಟ್ಟಿಗೆ ಮಾತ್ರ ಮೀಸಲಾದ ಧಾರ್ಮಿಕ ಆಚರಣೆಗಳನ್ನು ಕಳೆದುಕೊಂಡರೆ, ನಾವು ಭವಿಷ್ಯದಲ್ಲಿ ದಬ್ಬಾಳಿಕೆಯ ಧರ್ಮದ ಅಡಿಯಾಳಾಗುತ್ತೇವೆ’ ಎಂಬ ಅರಿವು ಕಾಡುಗೊಲ್ಲರಲ್ಲಿ ಆಳವಾಗಿ ಬೇರೂರಿದೆ. ಕಾಲ ಕಾಲಕ್ಕೆ ಸಂಸ್ಕೃತಿಯಲ್ಲಾಗುವ ರೂಪಾಂತರದ ಪ್ರಕ್ರಿಯೆಗಳು ಸಹಜವಾಗಿರುತ್ತವೆ. ಕಾಡುಗೊಲ್ಲರ ದೈವದ ಗುಬ್ಬಗಳೂ ಈ ರೂಪಾಂತರದ ಪ್ರಕ್ರಿಯೆಗೆ ಕ್ರಮೇಣ ಒಡ್ಡಿಕೊಳ್ಳುತ್ತಿವೆ.

ಗುಬ್ಬಗಳ ಜಾಗದಲ್ಲಿ ‘ದೇವಾಲಯ’ಗಳು ತಲೆಯೆತ್ತುತ್ತಿವೆ. ಈ ಸಂಬಂಧವಾಗಿ ಚಿತ್ರದುರ್ಗಕ್ಕೆ ಸಮೀಪದ ಚಿಕ್ಕೋನಹಳ್ಳಿ ಗೊಲ್ಲರಹಟ್ಟಿಯ ಹಿರಿಯ ಪೂಜಾರಪ್ಪನನ್ನು ನಾನು ಮತ್ತು ನಿಸರ್ಗ ಗೋವಿಂದರಾಜು ಮಾತನಾಡಿಸಿದಾಗ ‘ಕಲ್ಲಿನ ಗುಡಿ ಕಲ್ಲಿನಂಗಿರ್ತದೆ; ಹುಲ್ಲಿನ ಗುಡಿ ಹೂವಿನಂಗೆ ಇರ್ತದೆ’ ಎಂದು ನಿಭಾರ್ವುಕರಾಗಿ ಹೇಳಿದರು. ಇದೇ ಪ್ರಶ್ನೆಗೆ ರಾಯದುರ್ಗ ಗಡಿಭಾಗದ ಹೊಸೂರು ಗೊಲ್ಲರಹಟ್ಟಿಯ ಹಿರಿಯ ಮಹಿಳೆ ಹೇಳಿದ ಮಾತು ಇನ್ನೂ ಕುತೂಹಲಕರವಾಗಿತ್ತು ‘ದೀಪ ಹಳೆಯದಾಯಿತು ಅಂತ ಎಸೆಯಕ್ಕಾದೀತೆ?’ ಎಂದು ನಮಗೇ ಮರು ಪ್ರಶ್ನಿಸಿದರು! ಈ ಮಾತು ಹೆಚ್ಚು ಅಲಂಕಾರಿಕವಾಗಿಯೂ ಮತ್ತು ರೂಪಾತ್ಮಕವಾಗಿಯೂ ಇತ್ತು. ಅವರಿಬ್ಬರ ಮಾತುಗಳು ವ್ಯಕ್ತಿಯೊಬ್ಬನ ಮಾತೋ ಅಥವಾ ಕಾಡುಗೊಲ್ಲ ಸಮುದಾಯದ ಅಂತರಾಳದ ಮಾತೋ ನನಗೆ ತಿಳಿಯಲಿಲ್ಲ! ಆದರೆ ದೈವದ ಗುಬ್ಬಗಳನ್ನು ಕುರಿತ ಅವರ ಅಲಂಕಾರಿಕವಾದ ಮಾತು ಹೆಚ್ಚು ಭಾರವಾಗಿತ್ತು.
ಗೋವಿಂದರಾಜು ಅವರು ಕಳೆದ ಕೆಲವು ವರ್ಷಗಳಿಂದ ನಾಡಿನಾದ್ಯಂತ ಸಾವಿರಾರು ಕಿಲೋಮೀಟರ್‌ ಸುತ್ತಿ, ಕರ್ನಾಟಕದಲ್ಲಿರುವ ಕಾಡುಗೊಲ್ಲರ ಗುಬ್ಬಗಳನ್ನು ಕುರಿತು ಅರಿವು ಮೂಡಿಸುತ್ತಾ ಫೋಟೊ ದಾಖಲೀಕರಣ ಮಾಡುತ್ತಿದ್ದಾರೆ. ಅವರ ಬಳಿ ಈಗ ನೋಡಲೂ ಸಿಗದ ನೂರಾರು ಗುಬ್ಬಗಳ ಅಪೂರ್ವ ಛಾಯಾಚಿತ್ರಗಳಿವೆ.
ಈ ಬಗೆಯ ಅರಿವಿನಿಂದಾಗಿಯೇ ಕಾಡುಗೊಲ್ಲರ ಸಾಂಸ್ಕೃತಿಕ ಸಂಪತ್ತಿನ ‘ಅಕ್ಷಯ ನಿಧಿ’ಗಳಂತಿರುವ ಗುಬ್ಬಗಳು ಇನ್ನೂ ಹಟ್ಟಿಗಳಲ್ಲಿ ಉಳಿದುಕೊಂಡುಬಂದಿವೆ. ‘ಬದಲಾವಣೆ’ ನಾಗರಿಕತೆಯ ಸಹಜ ಸ್ಥಿತಿ ಎಂದು ಹೇಳುವಾಗಲೂ, ಈ ಬದಲಾವಣೆ ಎಂಬುದು ಸಿಹಿ ಲೇಪನದ ವಿಷ ಎಂಬುದನ್ನು ಕಾಡುಗೊಲ್ಲರು ಮರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.