ADVERTISEMENT

ಕನ್ನಡವನ್ನು ಕಟ್ಟುವ ಕ್ರಿಯಾಶೀಲ ಹಾದಿ ಯಾವುದು?

ಅಕ್ಷರ ಕೆ.ವಿ.
Published 16 ಏಪ್ರಿಲ್ 2022, 19:30 IST
Last Updated 16 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದಲ್ಲಿ ಹಿಂದಿ ಸಂಪರ್ಕ ಭಾಷೆಯಾಗಬೇಕೆಂಬ ಕೇಂದ್ರ ಗೃಹ ಸಚಿವರ ಹೇಳಿಕೆ ಈಗ ವಿವಾದದ ಕಿಡಿಯನ್ನು ಹೊತ್ತಿಸಿದೆ.‘ಕನ್ನಡಮ್ಮನ ಕುಡಿ’ಗಳು ಮತ್ತೆ ಪ್ರತಿಕ್ರಿಯಾಶೀಲತೆಯನ್ನು ಮೆರೆದಿದ್ದಾರೆ. ಇಂತಹ ಭಾವುಕ ನಿಲುವುಗಳ ಮೂಲಕ ಭಾಷೆ ಭಾಷೆಗಳನ್ನು ಪರಸ್ಪರ ಎದುರಾಳಿಗಳಾಗಿ ಹೂಡುವ ರಾಜಕೀಯ ಚದುರಂಗದಾಟ ಲಾಗಾಯ್ತಿನಿಂದಲೂ ನಡೆಯುತ್ತಲೇ ಇದೆ. ಇಷ್ಟಕ್ಕೂ ಬರಿ ಪ್ರತಿಕ್ರಿಯಾಶೀಲತೆಯಿಂದ ಕನ್ನಡ ಕಟ್ಟಲು ಸಾಧ್ಯವೇ? ಹಾಗಾದರೆ ನಿಜಕ್ಕೂ ಕನ್ನಡವನ್ನು ಕಟ್ಟುವ ಕ್ರಿಯಾಶೀಲ ಹಾದಿ ಯಾವುದು?

***

ಇವತ್ತಿನ ಕಾಲದಲ್ಲಿ ಕ್ರಮೇಣ, ನಾವೆಲ್ಲರೂ ಕ್ರಿಯಾಶೀಲರಾಗಿ ಇರುವುದಕ್ಕಿಂತ ಹೆಚ್ಚಾಗಿ ‘ಪ್ರತಿಕ್ರಿಯಾಶೀಲ’ರಾಗುತ್ತಿದ್ದೇವೋ ಎಂಬೊಂದು ಅನುಮಾನ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಕ್ರಿಯಾಶೀಲತೆಯೆಂಬುದು ನಮ್ಮ ಸುತ್ತಲಿನ ಸಮಾಜಕ್ಕೆ ಮಾನಸಿಕವಾಗಿ ಸ್ಪಂದಿಸುತ್ತ, ಹೊಸ ಆಲೋಚನೆಗಳನ್ನು ರೂಪಿಸಿಕೊಳ್ಳುವ ಮತ್ತು ಅಂಥ ಆಲೋಚನೆಗಳ ಫಲವಾಗಿ ಬೇರೆಬೇರೆ ರೀತಿಯ ಕೆಲಸಗಳಲ್ಲಿ ತೊಡಗಿಕೊಳ್ಳುವ ವಿಧಾನ. ಆದರೆ, ‘ಪ್ರತಿಕ್ರಿಯಾಶೀಲತೆ’ ಎಂಬುದು ಅದಕ್ಕೆ ವಿರುದ್ಧವಾದದ್ದು. ಅದು, ಸದಾ ಬೇರೊಬ್ಬರ ಆಲೋಚನೆಗಳಿಗೂ ಅವರು ಮಾಡುತ್ತಿರುವ ಕೆಲಸಗಳಿಗೂ ಪ್ರತಿಕ್ರಿಯೆ ಮಾತ್ರ ಕೊಡುತ್ತ ಹೋಗುವ ಕೆಲಸ. ಇಂಥ ಪ್ರತಿಕ್ರಿಯಾ ಮಾರ್ಗದಿಂದ ಹೆಚ್ಚಾಗಿ ಬೆಂಕಿ ಹೊತ್ತುತ್ತದೆಯೇ ಹೊರತು ಬೆಳಕು ಹುಟ್ಟುವುದಿಲ್ಲ.

ADVERTISEMENT

ನಿಜ, ಪ್ರಜಾಸತ್ತೆಯು ಆರೋಗ್ಯಕರವಾಗಿರಬೇಕೆಂದಾದರೆ, ಪ್ರಜ್ಞಾವಂತ ನಾಗರಿಕರೆಲ್ಲರೂ ಸುತ್ತಮುತ್ತ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುತ್ತ ನಿಷ್ಕ್ರಿಯರಾಗದೆ ವರ್ತಮಾನದಲ್ಲಿ ಪಾಲ್ಗೊಳ್ಳಬೇಕು. ಆದರೆ, ಅಂಥ ಸ್ಪಂದನೆಯೆಂಬುದು ಕೇವಲ ಪ್ರತಿಸ್ಪಂದನೆಗೂ ಮತ್ತು ಆಲೋಚನೆ ಹಾಗೂ ಕ್ರಿಯೆಗಳು ಪ್ರತ್ಯಾಲೋಚನೆ-ಪ್ರತಿಕ್ರಿಯೆಗಳಿಗೂ ಮಾತ್ರ ಸೀಮಿತವಾಗತೊಡಗಿದಾಗ, ಸ್ವತಃ ಕ್ರಿಯಾಶೀಲತೆಗೆ ಅಪಾಯ ಒದಗುತ್ತದೆ. ಅಂಥ ಕಾಲದಲ್ಲಿ ಜನರು ಸದಾ ಬೇರೆಯವರ ಆಲೋಚನೆಗಳಿಗೂ ಮಾತುಗಳಿಗೂ ನಿಲುವುಗಳಿಗೂ ಪ್ರತ್ಯುತ್ತರವನ್ನು ಮಾತ್ರ ಕೊಡುತ್ತ ತಾವು ಮಾಡಲೇಬೇಕಾದ ಕೆಲಸಗಳನ್ನು ನಿರ್ಲಕ್ಷಿಸುತ್ತಾರೆ. ಮಾತ್ರವಲ್ಲ, ಇಂಥ ಕಾಲದಲ್ಲಿ ಪ್ರಬಲಿಸುವ ಖೂಳರು ತಮ್ಮ ವಿರೋಧಿಗಳ ಪ್ರತಿಯೊಂದು ಕ್ರಿಯೆಯೂ ತಮ್ಮ ಕ್ರಿಯೆಗೆ ಪ್ರತಿಕ್ರಿಯೆ ಮಾತ್ರವೇ ಆಗಿ ಉಳಿದಿರುವಂತೆ ಉಪಾಯ ಮಾಡುವ ಮೂಲಕ ಅಗೋಚರ ಕ್ರಮದಲ್ಲಿ ವಿರೋಧಿಗಳನ್ನೂ ನಿಯಂತ್ರಿಸಿಬಿಡುತ್ತಾರೆ. ಇದರಿಂದಾಗಿ ಒಂದೆಡೆ, ಪ್ರತಿಕ್ರಿಯಾಶೀಲರು ಪ್ರತಿಕ್ರಿಯೆ ಕೊಡುವುದರಲ್ಲೇ ತಮ್ಮ ಶಕ್ತಿಯೆಲ್ಲವನ್ನೂ ವ್ಯಯಿಸಿ ಕ್ರಿಯೆಗೆ ಪುರಸೊತ್ತು ಇಲ್ಲದವರಾಗುತ್ತಾರೆ; ಇನ್ನೊಂದೆಡೆ, ಕ್ರಿಯೆಯಿಲ್ಲದ ಹೊಟ್ಟು ಮಾತುಗಳ ಕಾರಣದಿಂದ ಖೂಳ ಕೆಲಸಗಳಿಗೆ ಯಾವುದೇ ತಡೆಯಾಗುವ ಬದಲು ಇನ್ನಷ್ಟು ಪ್ರಚಾರವೇ ಸಿಕ್ಕು ಅಂಥವರಿಗೆ ಅನುಕೂಲವೇ ಆಗುತ್ತದೆ.

ಭಾರತದ ಗೃಹ ಸಚಿವರು ಹಿಂದಿ ಭಾಷೆಯ ಸ್ಥಾನಮಾನಗಳನ್ನು ಕುರಿತಂತೆ ಮೊನ್ನೆ ಆಡಿದ ಮಾತು ಮತ್ತು ಆಮೇಲೆ ಅದಕ್ಕೆ ಬಂದ ಪ್ರತಿಕ್ರಿಯೆಗಳು - ಈ ವಿದ್ಯಮಾನದಲ್ಲೂ ಇಂಥದೇ ಸಮಸ್ಯೆ ಉಂಟಾಗಿದೆಯೆಂಬ ಸಂಶಯದೊಂದಿಗೆ ನಾನು ಈ ಪ್ರಸ್ತಾಪ ಎತ್ತಿದ್ದೇನೆ. ಈ ದೇಶದಲ್ಲಿ ಹಿಂದಿ ಭಾಷೆಯು ರಾಜ್ಯಗಳ ನಡುವಿನ ಸಂಪರ್ಕದ ವಾಹಕವಾಗಬೇಕು ಎಂಬ ಗೃಹ ಸಚಿವರ ಮಾತು ಹಲವು ಕಾರಣಗಳಿಗಾಗಿ ತಪ್ಪು ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಮೊದಲನೆಯದಾಗಿ, ಎಲ್ಲ ಭಾಷೆಗಳೂ ಸಂಪರ್ಕದ ಸಾಧನಗಳೇ ಆಗಿರುವಾಗ, ಅದರಲ್ಲಿ ಒಂದಕ್ಕೆ ಮಾತ್ರ ಸಂಪರ್ಕದ ಭಾಷೆಯೆಂದು ಪಟ್ಟಗಟ್ಟುವುದು ಅತಾರ್ಕಿಕ. ಮಾತ್ರವಲ್ಲ, ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೆಂದು ನಂಬುವ ಬದಲು ಒಂದು ಭಾಷೆಯನ್ನು ಪ್ರಧಾನವೆಂದು ಕರೆದರೆ ಅದರ ಹಿಂದೆ ಅಧಿಕಾರದ ಮೇಲಾಟ ಇದೆಯೆಂದೇ ಅರ್ಥ. ಇಷ್ಟರಮೇಲೆ, ಭಾರತದಂಥ ದೇಶದಲ್ಲಿ ಒಂದೇ ಸಂಪರ್ಕ ಭಾಷೆ ಇರಬೇಕೆಂಬುದೇ ಕೇಂದ್ರೀಕೃತ ಸಂರಚನೆಗಳನ್ನು ನೆಚ್ಚುವ ಒಂದು ಮನೋವ್ಯಾಧಿ. ಆಯಾ ಸನ್ನಿವೇಶ-ಸಂದರ್ಭಗಳಲ್ಲಿ ಆಯಾ ಸಂಪರ್ಕವು ತನ್ನ ವಾಹಕವಾಗಿ ಯಾವ ಭಾಷೆಯು ಹೆಚ್ಚು ಉಪಯುಕ್ತವೆಂದು ಭಾವಿಸುತ್ತದೋ ಅದನ್ನೇ ಬಳಸುವುದು ಉಪಯುಕ್ತ. ಅಂಥ ಸಂಪರ್ಕ ಭಾಷೆಯು ಸಾಂದರ್ಭಿಕವಾಗಿ ಹಿಂದಿ ಇಂಗ್ಲಿಷುಗಳೇ ಆಗಿರಲಿ ಅಥವಾ ಇನ್ನಾವುದೇ ಭಾಷೆಯೂ ಆಗಿರಲಿ, ಸಂಪರ್ಕವು ಸರಿಯಾಗಿ ನಡೆಯುವುದಷ್ಟೇ ಮುಖ್ಯ ಎಂಬ ನಿಲುವು ಪ್ರಾಯೋಗಿಕ ಮಾತ್ರವಲ್ಲ ಪ್ರಜಾಸತ್ತಾತ್ಮಕವೂ ಹೌದು. ಬದಲಿಗೆ ಇಂಥ ಭಾಷೆಯನ್ನೇ ಬಳಸಿ ಎಂದು ಒತ್ತಾಯ ಮಾಡುವುದು ಭಾಷೆಯ ಜಾಯಮಾನಕ್ಕೂ ಒಕ್ಕೂಟ ವ್ಯವಸ್ಥೆಯ ಪ್ರಜಾಸತ್ತೆಗೂ ವಿರುದ್ಧವಾದ ಕೆಲಸ. ಆದ್ದರಿಂದ ಇದನ್ನು ಖಂಡಿಸುವುದು ಸರಿಯೇ.

ಆದರೆ, ಈ ಖಂಡನೆಯ ಮುಂದುವರಿಕೆಯಾಗಿ ಕಳೆದ ಕೆಲವು ದಿನಗಳಲ್ಲಿ ನಮ್ಮ ಸುತ್ತಮುತ್ತ ಕೇಳಿಸುತ್ತಿರುವ ಅನೇಕ ಪ್ರತಿಕ್ರಿಯಾತ್ಮಕ ಧೋರಣೆಗಳನ್ನು ನಾನು ತೀವ್ರ ಸಂಶಯದಿಂದ ನೋಡುತ್ತೇನೆ. ಉದಾಹರಣೆಗೆ, ಹಿಂದಿಯನ್ನು ಪ್ರಧಾನ ಸಂಪರ್ಕದ ಭಾಷೆಯಾಗಿಸುವುದೇನಿದೆ, ಅದು ಕನ್ನಡವನ್ನು ದಮನಿಸುವ ಕೆಲಸ ಎಂದು ಚಿತ್ರಿಸುವುದು ಅನುಪಯುಕ್ತ ಮತ್ತು ಅನಗತ್ಯ ಭಾವುಕತೆ ಎಂದು ನನಗೆ ತೋರುತ್ತದೆ. ಇಂಥ ನಿಲುವಿನ ಮೂಲಕ ಕಲ್ಪಿತ ಶತ್ರುವೊಂದನ್ನು ನಮ್ಮೆದುರಿಗೆ ಹೂಡಿಕೊಂಡು ಈ ಕಲ್ಪಿತ ಹೋರಾಟವನ್ನು ಆಕರ್ಷಕ ಮತ್ತು ರೋಚಕಗೊಳಿಸಬಹುದೆ ಹೊರತು ಅದರಿಂದ ನಮ್ಮ ಭಾಷೆಗೇನೂ ಪ್ರಯೋಜನವಾಗದು. ಅಲ್ಲದೆ, ಇಂಥ ಭಾವುಕ ನಿಲುವುಗಳ ಮೂಲಕ ನಾವು ಭಾಷೆಭಾಷೆಗಳನ್ನು ಪರಸ್ಪರ ಎದುರಾಳಿಗಳಾಗಿ ಹೂಡಿ ರಾಜಕೀಯದ ಚದುರಂಗದ ಆಟ ಕಟ್ಟುತ್ತೇವೆ; ಮತ್ತು ಈ ಪರ-ವಿರೋಧದ ವ್ಯರ್ಥ ಕಸರತ್ತಿನಲ್ಲಿ ಮಾಡಬೇಕಾದ ಕೆಲಸ ಮರೆಯುತ್ತೇವೆ. ಉದಾಹರಣೆಗೆ, ಹಿಂದಿನ ದಿನಮಾನಗಳಲ್ಲಿ ನಡೆದ ಕನ್ನಡ ವರ್ಸಸ್ ಹಿಂದಿ, ಕನ್ನಡ ವರ್ಸಸ್ ತಮಿಳು ಮತ್ತು ಕನ್ನಡ ವರ್ಸಸ್ ಸಂಸ್ಕೃತ - ಮೊದಲಾದ ಇಂಥ ಹಲವು ರೀತಿಯ ಜಿದ್ದಾಜಿದ್ದಿಗಳನ್ನೇ ನೆನಪಿಸಿಕೊಳ್ಳಬಹುದು. ತಾತ್ಕಾಲಿಕ ರಾಜಕೀಯ ಲಾಭದಿಂದ ಪ್ರೇರಿತವಾಗುವ ಇಂಥ ತಿಕ್ಕಾಟಗಳ ಫಲವಾಗಿ ಬರಿಯ ಸಂಘರ್ಷ ಹುಟ್ಟಿದ್ದು ಕಾಣಿಸಿತೆ ಹೊರತು ಸಮಾನತೆ ಸಾಧಿತವಾಗಿದ್ದು ಕಾಣುವುದಿಲ್ಲ.‌

ಎರಡನೆಯದಾಗಿ, ಇಂಥ ಹಿಂದಿ ವಿರೋಧಿ ನಿಲುವು ನಮ್ಮನ್ನು ಅವ್ಯಕ್ತವಾಗಿ ಇಂಗ್ಲಿಷ್ ಪರ ಧೋರಣೆಯತ್ತ ಕೊಂಡೊಯ್ಯುತ್ತದೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಪ್ರತಿಕ್ರಿಯೆಗಳನ್ನೇ ನೋಡಿದರೆ, ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಹೇರಬಾರದು ಎನ್ನುವ ಬಹುತೇಕರು ಸದ್ಯಕ್ಕೆ ಇಂಗ್ಲಿಷ್ ಭಾಷೆಯೇ ಅಂಥ ಕೆಲಸ ಮಾಡಲಿ ಎಂದು ಸೂಚಿಸುತ್ತಿರುವುದು ಕಾಣಸಿಗುತ್ತದೆ. ಇದು ರಾಷ್ಟ್ರೀಯ ಸಾಂಸ್ಕೃತಿಕ ರಾಜಕಾರಣದ ಬಾಣಲೆಯಿಂದ ಅಂತರರಾಷ್ಟ್ರೀಯ ಆರ್ಥಿಕ ಹುನ್ನಾರಗಳ ಬೆಂಕಿಗೆ ನಮ್ಮನ್ನು ಹಾರಿಸುವ ತಂತ್ರವೆಂದು ನಾನು ಭಾವಿಸುತ್ತೇನೆ. ಎರಡು ಅಪಾಯಗಳಲ್ಲಿ ಯಾವುದು ಉತ್ತಮ ಎಂದು ಆಯ್ಕೆ ಮಾಡುವಂತೆ ನಮ್ಮನ್ನು ಒತ್ತಾಯಿಸುವ ಈ ಹಾದಿಯು ಖಂಡಿತವಾಗಿಯೂ ನಮ್ಮನ್ನು ಕ್ರಿಯಾಶೀಲತೆಯ ಹಾದಿಗೆ ಹಚ್ಚುವುದಿಲ್ಲ. ಬದಲು, ‘ಒಂದು ಭಾಷೆ, ಒಂದು ದೇಶ’ ಎಂಬ ಸಾಂಸ್ಕೃತಿಕ ರಾಜಕಾರಣದಿಂದ ಪಾರಾಗುವ ಭರಾಟೆಯಲ್ಲಿ ನಾವು ಒಂದೇ ಭಾಷೆ, ಒಂದೇ ಜಗತ್ತು ಎಂಬ ಮಾತುಗಳ ಮೂಲಕ ಜಗತ್ತನ್ನೇ ನಿಯಂತ್ರಣಕ್ಕೆ ಒಳಪಡಿಸುವ ವಸಾಹತುಶಾಹಿ ಬಂಡವಾಳದ ತೆಕ್ಕೆಗೆ ಪಕ್ಕಾಗುತ್ತೇವೆ, ಅದು ಮೊದಲನೆಯ ಅಪಾಯಕ್ಕಿಂತ ಹೆಚ್ಚು ವಿನಾಶಕಾರಿ.

ಈ ‘ಪ್ರತಿಕ್ರಿಯಾಶೀಲತೆ’ಯ ಹಿಂದಿರುವ ಇನ್ನೂ ಹಲವು ಕಣ್ಕಟ್ಟುಗಳನ್ನು ನಾವು ಎಚ್ಚರದಿಂದ ಗಮನಿಸಬೇಕು. ಉದಾಹರಣೆಗೆ, ಇವತ್ತು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಘೋಷಿಸುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಗಟ್ಟಿದನಿಯಲ್ಲಿ ವಿರೋಧಿಸುವ ನಮ್ಮ ನಾಡಿನ ಪ್ರತಿಕ್ರಿಯಾಶೂರ ರಾಜಕಾರಣಿಗಳು, ಕೆಲವೇ ವರ್ಷಗಳ ಮೊದಲು, ಪಕ್ಷ ಮತ್ತು ಸಿದ್ಧಾಂತಗಳೆಲ್ಲವನ್ನೂ ಮೀರಿ ಒಗ್ಗಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದನ್ನು ನಾವು ಮರೆಯಬಾರದು. ಮತ್ತು, ಕನ್ನಡ ನಾಡಿನಲ್ಲಿ ದುಬಾರಿ ಇಂಗ್ಲಿಷ್ ಶಾಲೆಗಳನ್ನು ಸ್ಥಾಪಿಸಿ, ಪ್ರಾಥಮಿಕ ಶಿಕ್ಷಣವನ್ನು ವಾಣಿಜ್ಯಗೊಳಿಸುವ ಪಾಪದಲ್ಲಿ ಅವರೆಲ್ಲ ಪಾಲುದಾರರಾಗಿರುವುದು ಆಕಸ್ಮಿಕವಲ್ಲ. ಆ ಪುಢಾರಿಗಳೀಗ ತಾನೇತಾನಾಗಿ ಒದಗಿಬಂದ ಕನ್ನಡ ಪರ ಭಂಗಿಯನ್ನು ಪ್ರದರ್ಶಿಸುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ; ಆ ಮೂಲಕ ತಮ್ಮದೇ ಹಳೆಯ ಪಾಪಗಳನ್ನು ತೊಳೆದುಕೊಂಡು ಸಜ್ಜನರಾಗಲಿಕ್ಕೆ ಹೊರಟಿದ್ದಾರೆ. ಅವರ ಪ್ರತಿಕ್ರಿಯೆಗಳಿಗೆ ನಾವಿವತ್ತು ಬೆಂಬಲಿಸುತ್ತೇವಾದರೆ, ಆ ಮೂಲಕ ನಾವು ಇಂಗ್ಲಿಷಿನ ದಾಸ್ಯಕ್ಕೆ ಅಧಿಕೃತತೆಯ ಮುದ್ರೆ ಹಾಕುತ್ತೇವೆ; ಶಿಕ್ಷಣವನ್ನು ಕೊಳ್ಳುಮಾರುವ ಉದ್ಯೋಗವಾಗಿ ಮಾಡುವ ಲಾಭಕೋರತನಕ್ಕೆ ಕುಮ್ಮಕ್ಕು ಕೊಡುತ್ತೇವೆ; ಹಾಗೂ, ಪರೋಕ್ಷವಾಗಿ ಕನ್ನಡದೊಳಗೆ ಆಗಬೇಕಿರುವ ಕ್ರಿಯಾಶೀಲ ಕೆಲಸಗಳನ್ನು ಇನ್ನಷ್ಟು ಮುಂದಕ್ಕೆ ಹಾಕುತ್ತೇವೆ.

ಹಾಗಾದರೆ, ಕನ್ನಡದ ಕ್ರಿಯಾಶೀಲತೆಯ ದಾರಿ ಯಾವುದು? ಇದಕ್ಕೆ ಉತ್ತರವಾಗಿ ಬಹಳಷ್ಟನ್ನು ಉಲ್ಲೇಖಿಸಬಹುದು. ತಕ್ಷಣಕ್ಕೆ ನೆನಪಾಗುವ ಒಂದೆರಡು ಸಂಗತಿಗಳನ್ನು ಮಾತ್ರ ಹೇಳುತ್ತೇನೆ. ಮೊದಲನೆಯದಾಗಿ, ಹಿಂದಿಯ ಹೇರಿಕೆ ಇರಲೋ ಅಥವಾ ಇಂಗ್ಲಿಷಿನ ದಾಸ್ಯ ಮುಂದುವರೆಯಲೋ ಎಂಬ ಎರಡೂ ಕಡೆಯಿಂದ ಸೋಲುವ ಆಯ್ಕೆಗೆ ಕೈಹಚ್ಚುವ ಬದಲು, ಕನ್ನಡವನ್ನೇ ಇನ್ನಷ್ಟು ಸಮರ್ಥಗೊಳಿಸುವ ಸಂಕಲ್ಪವನ್ನು ನಾವು ಮಾಡಬೇಕಾಗಿದೆ. ಹಾಗೆ ಮಾಡುವುದು ಸಾಧ್ಯವಾದರೆ ಈ ದೇಶದ ಸಂಪರ್ಕ ಭಾಷೆ ಯಾವುದೇ ಆದರೂ ಅದರಿಂದ ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯಾಗದು. ಇದನ್ನೇ ಉತ್ಪ್ರೇಕ್ಷಿಸಿ ಹೇಳುವುದಾದರೆ, ಕನ್ನಡವನ್ನು ಕೇವಲ ಭಾರತದ ರಾಜ್ಯರಾಜ್ಯಗಳ ಸಂಪರ್ಕಭಾಷೆಯಾಗಿ ಮಾತ್ರವಲ್ಲ, ಜಾಗತಿಕ ಮಟ್ಟದ ಒಂದು ಸಂಪನ್ಮೂಲ ಭಾಷೆಯಾಗಿಯೂ ಬೆಳೆಸುವ ಕೆಲಸಕ್ಕೆ ನಾವು ಸಂಕಲ್ಪಿಸುವ ಅಗತ್ಯವಿದೆ.

ಇದು ಅಸಾಧ್ಯವಾದ ಹಗಲುಗನಸು ಖಂಡಿತಾ ಅಲ್ಲ. ಕನ್ನಡ ಭಾಷೆಗೆ ಅಂಥ ಸಾಮರ್ಥ್ಯವಿದೆ ಎಂಬುದನ್ನು ಈ ನಾಡಿನ ಸಾಹಿತ್ಯ ಕಲೆಗಳ ಪರಿಚಯವಿರುವ ಯಾರೂ ಹೇಳಬಲ್ಲರು. ಅಷ್ಟೇ ಅಲ್ಲ, ಕನ್ನಡ ನಾಡಿಗಿಂತಲೂ ಕಿರಿದಾದ ಐರೋಪ್ಯ ಪ್ರಾಂತ್ಯದ ಹಲವು ದೇಶಗಳು –ತಮ್ಮ ನಡುವೆ ಇಂಗ್ಲಿಷಿನಂಥ ಒಂದು ಜಾಗತಿಕ ದೈತ್ಯನನ್ನು ಇಟ್ಟುಕೊಂಡೂ- ತಮ್ಮ ಭಾಷೆಗಳನ್ನು ಇಂಗ್ಲಿಷಿಗೆ ಸರಿಸಾಟಿಯಾಗುವಂತೆ ಬೆಳೆಸಿಕೊಂಡಿರುವ ಪರಿಯನ್ನು ನಾವು ಗಮನಿಸಬಹುದು. ಕೆಲವು ವರ್ಷಗಳ ಹಿಂದೆ ಇಸ್ರೇಲಿನ ಜೆರುಸಲೇಮ್ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ಹೋಗಿಬಂದ ಹಿರಿಯರೊಬ್ಬರು ಹಂಚಿಕೊಂಡ ಅನುಭವ ನನಗಿಲ್ಲಿ ನೆನಪಾಗುತ್ತದೆ. ಹೊಸತಾಗಿ ಸ್ಥಾಪಿತವಾದ ಆ ವಿಶ್ವವಿದ್ಯಾಲಯವು, ತನ್ನ ನಾಡಿನ ಗಡಿಗಳಲ್ಲಿ ಸತತವಾಗಿ ಸಂಘರ್ಷ ನಡೆಯುತ್ತಿದ್ದರೂ, ಬೆರಳೆಣಿಕೆಯ ವರ್ಷಗಳಲ್ಲೇ ಹೇಗೆ ಜಾಗತಿಕ ಗುಣಮಟ್ಟದ ಒಂದು ಅಧ್ಯಯನ ಕೇಂದ್ರವಾಗಿದೆ ಎಂಬುದನ್ನು ನನ್ನ ಮಿತ್ರರು ಅಲ್ಲಿಯ ಗ್ರಂಥಾಲಯ, ಅಧ್ಯಾಪಕರು, ತರಗತಿಗಳು ಮೊದಲಾದ ಉದಾಹರಣೆಗಳ ಸಮೇತ ವಿವರಿಸಿದರು. ಕೇರಳದ ಕೂಡಿಯಾಟ್ಟಂ ರಂಗಪ್ರಕಾರವನ್ನು ಕುರಿತು ಭಾರತದಲ್ಲಿ ಎಲ್ಲೂ ನಡೆಯದಿರುವಂಥ ಅಭ್ಯಾಸ ಮತ್ತು ಸಂಶೋಧನೆಗಳನ್ನು ಆ ವಿವಿಯಲ್ಲಿ ವಿಖ್ಯಾತ ವಿದ್ವಾಂಸರಾದ ಡೇವಿಡ್ ಷುಲ್ಮನ್ ಅವರ ನೇತೃತ್ವದಲ್ಲಿ ಮಾಡಲಾಗುತ್ತಿರುವ ಪರಿಯನ್ನು ನನ್ನ ರಂಗಭೂಮಿಯ ಮಿತ್ರರ ಬಾಯಲ್ಲಿ ಕೇಳಿದ್ದೇನೆ. ಕೆಲವೇ ದಶಕಗಳಷ್ಟು ಹಳೆಯದಾದ ಇಸ್ರೇಲಿನಂಥ ಒಂದು ಸಣ್ಣ ದೇಶಕ್ಕೆ ಸಾಧ್ಯವಾಗಿರುವ ಈ ಕೆಲಸವು ಒಂದು ಸಹಸ್ರಮಾನಕ್ಕೂ ಮಿಕ್ಕು ಇತಿಹಾಸವಿರುವ ಕನ್ನಡನಾಡಿಗೆ ಅದೇಕೆ ಸಾಧ್ಯವಿಲ್ಲ?

ಕನ್ನಡದ ಇಂಥ ದುಸ್ಥಿತಿಗೆ ಕಾರಣ, ನನ್ನ ಪ್ರಕಾರ, ನಮ್ಮ ಕ್ರಿಯಾಶೀಲತೆಯ ಕೊರತೆಯೇ ಹೊರತು, ಅನ್ಯ ಭಾಷೆಗಳ ಆಕ್ರಮಣವಲ್ಲ. ನಮ್ಮ ಸುತ್ತಮುತ್ತಲಿನ ಸಂಗತಿಗಳನ್ನು ಮೇಲುಮೇಲಕ್ಕೆ ನೋಡಿದರೂ ಇದಕ್ಕೆ ಸಾಕ್ಷ್ಯಗಳು ಸಿಗುತ್ತವೆ. ಕೆಲವು ದಿನಗಳ ಹಿಂದೆ ನಮ್ಮ ನಾಡಿನ ಪತ್ರಿಕೆಯೊಂದು ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರಕಟಿಸುತ್ತಿರುವ ಶಿಕ್ಷಣ ಮಾರ್ಗದರ್ಶಿ ಅಂಕಣದ ಮೇಲೆ ನನ್ನ ಕಣ್ಣು ಹರಿಯಿತು. ಲೋಕಾಭಿರಾಮವಾಗಿ ಓದುತ್ತ ಹೋದಾಗ, ನಡುವೆ, ಈ ವಾಕ್ಯವು ನನಗೆ ಎದುರಾಗಿ ಗಾಬರಿ ಹುಟ್ಟಿಸಿತು -

‘ವಾಹಕದ ಒಳಗೆ ಇ=0 ಮತ್ತು ಅದರ ಮೇಲ್ಮೈ ಮೇಲೆ ಯಾವುದೇ ಸ್ಪರ್ಷರೇಖೆಯ ಘಟಕವಿರುವುದಿಲ್ಲ. ಆದ್ದರಿಂದ ಇದರ ಒಳಗೆ ಮತ್ತು ಮೇಲ್ಮೈ ಮೇಲೆ ಯಾವುದೇ ಸಣ್ಣ ಆವೇಶವನ್ನು ಚಲಿಸುವಂತೆ ಮಾಡಲು ಯಾವುದೇ ಕೆಲಸವಾಗುವುದಿಲ್ಲ. ವಾಹಕದ ಒಳಗೆ ಅಥವಾ ಅದರ ಮೇಲ್ಮೈ ಮೇಲಿನ ಎರಡು ಬಿಂದುಗಳ ಮಧ್ಯೆ ಯಾವುದೇ ವಿಭವಾಂತರವಿರುವುದಿಲ್ಲ. ಇದೇ ಇಚ್ಛಿತ ಪರಿಣಾಮ.'

ಹತ್ತಾರು ಬಾರಿ ಇದನ್ನೋದಿದರೂ ನನ್ನ ಗಾಬರಿ ಕಡಿಮೆಯಾಗಲಿಲ್ಲ. ನಾನೂ ಪಿಯುಸಿಯವರೆಗೆ ವಿಜ್ಞಾನವನ್ನು ಓದಿದವನೇ. ಆದರೆ ಮೇಲ್ಕಂಡ ವಾಕ್ಯವನ್ನು ಮಾತ್ರ ತಿಪ್ಪರಲಾಗ ಹಾಕಿದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕನ್ನಡದಲ್ಲೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇಂಥ ವಾಕ್ಯಗಳನ್ನು ಉರು ಹೊಡೆದು ಪರೀಕ್ಷೆಯಲ್ಲಿ ಮಕ್ಕಿಕಾಮಕ್ಕಿ ಬರೆದು ಬಿಸಾಡುವುದು ಬಿಟ್ಟು ಬೇರೇನು ಮಾಡಲು ಸಾಧ್ಯ? ಪಿಯುಸಿಯ ಕನ್ನಡ ಪಠ್ಯಪುಸ್ತಕಗಳೂ ಹೀಗೆ ಇವೆಯಾದರೆ, ಕನ್ನಡ ಭಾಷೆ, ಕನ್ನಡದ ವಿಜ್ಞಾನ ಮತ್ತು ಕನ್ನಡ ನಾಡಿನ ಶಿಕ್ಷಣ – ಇವೆಲ್ಲವನ್ನೂ ದೇವರೇ ಕಾಪಾಡಬೇಕು. ಜಾಗತಿಕ ಖ್ಯಾತಿಯ ವಿಜ್ಞಾನಿಗಳನ್ನು ಪಡೆದಿರುವ ಕನ್ನಡ ನಾಡಿನಲ್ಲಿ ಹೀಗೆ, ಪಿಯುಸಿ ವಿಜ್ಞಾನದ ಪಠ್ಯದಲ್ಲೇ ಕನ್ನಡಕ್ಕೆ ಸಂಪರ್ಕ ಭಾಷೆಯಾಗುವ ಯೋಗ್ಯತೆ ಬಂದಿಲ್ಲವೆಂದಾದರೆ, ಇಂಗ್ಲಿಷೋ ಹಿಂದಿಯೋ ರಾಷ್ಟ್ರದ ಸಂಪರ್ಕ ಭಾಷೆಯಾಗಬಾರದು ಎಂದು ಪ್ರತಿಭಟಿಸುವ ಹಕ್ಕು ನಮಗೆಲ್ಲಿದೆ?

ಕೊರೊನಾ ಕಾಲದಲ್ಲಿ ಕಲಿತಿರುವ ಒಂದು ಪಾಠವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ರೋಗವೊಂದು ನಮ್ಮನ್ನು ಆಕ್ರಮಿಸುವುದು ವೈರಾಣುವಿನ ಸಾಮರ್ಥ್ಯದಿಂದಲ್ಲ, ನಮ್ಮದೇ ನಿರೋಧ ಶಕ್ತಿಯ ಕೊರತೆಯಿಂದ – ಎಂಬ ಆ ಪಾಠ ನಿಜವೇ ಆಗಿದ್ದರೆ, ಕನ್ನಡ ಭಾಷೆಯ ಮೇಲೆ -ಅಥವಾ ಇನ್ನಾವುದೇ ಕ್ಷೇತ್ರದ ಮೇಲೆ- ಎರಗಬಹುದಾದ ಅಪಾಯಗಳನ್ನು ಎದುರಿಸಲಿಕ್ಕೂ ಸಮರ್ಥವಾದ ನಿರೋಧ ಶಕ್ತಿಯನ್ನು ವರ್ಧಿಸಿಕೊಳ್ಳದೆ ಬೇರೆ ಯಾವ ಸುಲಭದ ದಾರಿಗಳಿಲ್ಲ. ಕ್ರಿಯಾಶೀಲತೆಯೊಂದೇ ಅದಕ್ಕಿರುವ ದಾರಿ, ‘ಪ್ರತಿಕ್ರಿಯಾಶೀಲತೆ’ಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.