ADVERTISEMENT

ಸರ್ ಪೇ ಲಾಲ್ ಟೋಪಿ ಪಾರ್ಸಿ

ಹೊಶಾಂಗ್ ಮರ್ಚೆಂಟ್‌
Published 17 ಜುಲೈ 2021, 19:30 IST
Last Updated 17 ಜುಲೈ 2021, 19:30 IST
ಹೊಶಾಂಗ್‌ ಮರ್ಚೆಂಟ್‌
ಹೊಶಾಂಗ್‌ ಮರ್ಚೆಂಟ್‌   

ಗೇ ಎಂದು ಬಹಿರಂಗವಾಗಿ ಘೋಷಿಸಿಕೊಂಡ ಭಾರತದ ಮೊದಲ ಕವಿ ಹೊಶಾಂಗ್ ಮರ್ಚೆಂಟ್‌. ಅವರ ಬರಹಗಳ ಸಂಗ್ರಹ ‘ರೆಬೆಲ್ ಏಂಜೆಲ್’ನ ಒಂದು ಅನುವಾದಿತ ಬರಹ ಇದು. ಅಕ್ಷಯ ಕೆ. ರಥ್ ಅವರು ಸಂಪಾದಿಸಿದ ಈ ಸಂಗ್ರಹವನ್ನು ಧೌಲಿ ಬುಕ್ಸ್ ಇತ್ತೀಚೆಗಷ್ಟೆ ಹೊರತಂದಿದೆ. ಮೂಲತಃ ಕವಿಯಾದ ಮರ್ಚೆಂಟ್‌ ಅವರ ಗದ್ಯವೂ ಕಾವ್ಯಾತ್ಮಕ ಶೈಲಿಯಲ್ಲಿದೆ.

**

ಭಾರತದ ಐವತ್ತನೇ ವರ್ಷದ ಸಂದರ್ಭದಲ್ಲಿ ಸಲಿಂಗಿ –ಗೇ– ಮಂದಿಯ ಕೊಡುಗೆಯನ್ನು ಪರಿಗಣಿಸಲಿಲ್ಲವೆಂಬ ನೋವು ನನಗಿದೆ.

ADVERTISEMENT

ನಾನೊಬ್ಬ ಭಾರತೀಯ ಹೌದೇ?! ಮಧ್ಯವಯಸ್ಸಿನ, ಬಾಂಬೆಯಲ್ಲಿ ಹುಟ್ಟಿದ, ಅಮೆರಿಕದಿಂದ ಹಿಂದಿರುಗಿದ, ಹೈದರಾಬಾದ್‌ನಲ್ಲಿ ಇಂಗ್ಲಿಷ್ ಕಲಿಸುತ್ತಿರುವ, ಒಬ್ಬ ಪಾರ್ಸಿ, ಗೇ ತಾನೇ? ಹಾಗಂತ ನಾನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿದ್ದೆ. ಯಾಕೋ ಏನೋ, ಅಲ್ಲಿ ನನಗೆ ಒಂದೂ ಸರಿಹೋಗುವಂತೆ ಕಾಣಲಿಲ್ಲ. ಯಾರೂ ಆ ಜಾಗಕ್ಕೆ ಸೇರಿದವರಂತೆ ತೋರುತ್ತಿರಲಿಲ್ಲ – ಇಟಲಿ, ಸಿರಿಯಾ, ಗ್ರೀಸ್, ಬ್ರಿಟನ್, ಅಮೆರಿಕ – ಈ ಎಲ್ಲ ದೇಶಗಳಿಂದ ಆಮದಾದವರಂತೆ ಕಾಣುತ್ತಿದ್ದರು ಅಲ್ಲಿನ ಜನ. ಮೈಲುಗಟ್ಟಲೆ ಶಾಪಿಂಗ್ ಮಾಲ್‌ಗಳು, ಆದರೆ ಹಣ?! ಮೈಲುಗಟ್ಟಲೆ ಅಗಲಗಲ ರಸ್ತೆಗಳು, ಆದರೆ ಟ್ರಾಫಿಕ್?! ಸ್ಮಶಾನ ಮೌನ! ಪರಿಣಾಮ: ದ್ವಿತೀಯ ದರ್ಜೆಯ ಅಮೆರಿಕ, ಪ್ರಪಂಚದ ಎರಡನೇ ಉತ್ತಮ ದೇಶ!

ನನ್ನ ಭಾರತದ ಮನೆಯಲ್ಲಾದರೆ? ಹೌದು, ನಾನು ನಿರಾಳ! ನಾನು ಕೊಸರಾಡುತ್ತೇನೆ; ನುಗ್ಗುತ್ತೇನೆ; ಹೆಣಗಾಡುತ್ತೇನೆ; ಗದ್ದಲ ಮಾಡುತ್ತೇನೆ. ಉರ್ದುವಿನಲ್ಲಿ ಮಾತಾಡುತ್ತೇನೆ. ಹೈದರಾಬಾದ್ ಬಗ್ಗೆ ಬರೆಯುತ್ತೇನೆ. ಕವಿಗಳು, ಕಲಾಕಾರರು ತಮ್ಮ ಮನೆಗಳಿಗೆ ಕರೆಯುತ್ತಾರೆ. ವಿದ್ಯಾರ್ಥಿಗಳು ನನ್ನನ್ನು ಪ್ರೀತಿಸುತ್ತಾರೆ, ನನಗೆ ಗುರುದಕ್ಷಿಣೆಯನ್ನು ಕಳಿಸುತ್ತಾರೆ, ಗುರುಭಕ್ತಿಯ ಮಳೆಗರೆಯುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲೋ?! ನನ್ನ ಸ್ವಂತ ಅಕ್ಕನೇ ಅವಳ ಸಿಡ್ನಿಯ ಮನೆ ಬಾಗಿಲನ್ನು ನನಗಾಗಿ ತೆರೆಯುವುದಿಲ್ಲ. ನನ್ನ ಹೋಟೆಲ್ ವಾಸಕ್ಕಾಗಿ ಅವಳು ನಲವತ್ತು ಡಾಲರ್‍‌ಗಳ ಗಿಫ್ಟ್ ಕೊಟ್ಟಳು. ಸಭ್ಯ ಪಾಶ್ಚಾತ್ಯಳೊಬ್ಬಳು ಮಾಡುವಂತೆ! ಆದರೆ ನನ್ನ ಭಾರತೀಯ ಮನಸ್ಸು ಗಾಸಿಗೊಂಡಿತು. ಸಿಡ್ನಿ ನಗರದ ದರ್ಶನ ಮಾಡದೆ ಹಾಗೇ ಆಸ್ಟ್ರೇಲಿಯಾದಿಂದ ಹಿಂತಿರುಗಿ ಬಂದೆ.

ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿದ್ದ ಫಿಜಿಯ ಶಿಕ್ಷಣವೇತ್ತನೊಬ್ಬ ನನಗಂದ: ‘ಕೈಸೆ ಹೋ ಮೇರೆ ದೋಸ್ತ್? ಮಜ಼ೇ ಮೇ ಹೋ?’ ನನ್ನ ದೋಸ್ತಿ, ನನ್ನ ಮಜಾ, ನಾನಂದುಕೊಂಡೆ! ಆದರೆ ಹೈದರಾಬಾದಿನ ದೃಶ್ಯಗಳು, ಅಲ್ಲಿನ ವಾಸನೆ ಮತ್ತು ಆ ಶಬ್ದಗಳು ನನ್ನನ್ನು ಮತ್ತೆ ಮನೆಗೆ ಕರೆಯುತ್ತಿದ್ದವು; ನನ್ನ ಕನಸುಗಳನ್ನು ಮತ್ತು ಕವನಗಳನ್ನು ಆವರಿಸುತ್ತಿದ್ದವು; ಕವನಗಳನ್ನಂತೂ ಭಾರತೀಯವೆಂದೇ ಅನ್ನಬೇಕು. ದೆಹಲಿಯ ಒಬ್ಬ ಪ್ರಕಾಶಕ ನನ್ನ ಹಸ್ತಪ್ರತಿಯನ್ನು ತೆರೆಯದೆ ಹಾಗೇ ಹಿಂದಿರುಗಿಸಿದಾಗ ನಾನವರಿಗೆ ಬೈದು ಹೇಳಿದೆ: ‘ಇದು ಗಾಲಿಬ್‌ನ ಭೂಮಿ. ನೀವು ಒಂದು ತಿರಸ್ಕಾರ ಪತ್ರವನ್ನಾದರೂ ಬರೆಯಬೇಕು’ ಎಂದು. ಅವರು ಬರೆದರು!

ಆದರೆ ಆದರೆ, ಅಪೇಕ್ಷೆಯಿಲ್ಲದೆ ಕೆಲಸ ಮಾಡುವುದು ಕೂಡ ಭಾರತೀಯ ಅಸ್ಮಿತೆಯೇ. ಅಮೆರಿಕದಲ್ಲಿದ್ದ ನಾನು ಆ ದೇಶ ಬಿಟ್ಟೆ, ಯಾಕೆಂದರೆ ಅಲ್ಲಿ ನಾನೊಬ್ಬ ‘ಫಾರಿನ್ ಫೇರಿ’ ಆಗಿದ್ದೆ! ನನ್ನ ಅಮೆರಿಕನ್ ಶಿಕ್ಷಕರೊಬ್ಬರು ಹೇಳಿದರು: ‘ಮೇಲ್ನೋಟಕ್ಕೆ ನೀನೊಬ್ಬ ಪಾಶ್ಚಾತ್ಯನಂತೆ ಕಂಡರೂ ಹೃದಯದಲ್ಲಿ ನೀನೊಬ್ಬ ಇಂಡಿಯನ್’. ನಾನು ನನ್ನಪ್ಪನಿಂದ ಬರಬೇಕಾದ ಆಸ್ತಿಯನ್ನೆಲ್ಲಾ ಬಿಟ್ಟುಕೊಟ್ಟೆ – ಯಾಕೆಂದರೆ ಕವಿತೆ ಮತ್ತು ದೊಡ್ಡಸ್ತಿಕೆ ಜೊತೆಜೊತೆಯಾಗಿ ಹೋಗುವುದಿಲ್ಲ; ಕವಿತೆ ಮತ್ತು ತ್ಯಾಗವಾದರೋ ಒಳ್ಳೆಯ ಜೋಡಿ. ಇಂದಿನವರೆಗೂ ನಾನು ಲಕ್ಷ್ಮಿಯ ಆರಾಧಕನಾಗಲು ಒಪ್ಪಿಲ್ಲ. ಆದರೆ ವ್ಯಂಗ್ಯವೆಂಬಂತೆ ಬಹುಶಃ ಇಡೀ ಪ್ರಪಂಚದಲ್ಲಿ ‘ಮರ್ಚೆಂಟ್’ ಎಂಬ ಕೊನೆ ಹೆಸರಿರುವ ಕವಿ ನಾನೊಬ್ಬನೆ ಇರಬೇಕು!

ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ‘ಹೊಶಾಂಗ್’ ಎಂಬ ನನ್ನ ಮೊದಲ ಹೆಸರಲ್ಲಿ ಬರೆಯುವಂತೆ ಮುಲ್ಕ್‌ರಾಜ್ ಆನಂದ್ ಗಂಭೀರ ಸಲಹೆ ನೀಡಿದ್ದರು. ಪರ್ಶಿಯನ್ ಕಾವ್ಯದಲ್ಲಿ ‘ಹೊಶಾಂಗ್’ ಅಂದರೆ ‘ಮಗ’ ಎಂದರ್ಥ. ಹೀಗಿರುವಾಗ ಪಾರ್ಸಿ ಗೇ ಮನುಷ್ಯನೊಬ್ಬ ‘ಮಗ’ನೆಂಬ ಹೆಸರು ಹೊಂದುವುದು ನನಗಂತೂ ವ್ಯಂಗ್ಯವಾಗಿತ್ತು! ಹಾಗಂತ ನಮಗ್ಯಾರಿಗೂ ಅನ್ವರ್ಥನಾಮ ಇರುವುದಿಲ್ಲ ಎಂಬುದೂ ಸರಿ! ಪ್ರತೀ ರಾಮನೂ ಹೀರೊ ಆಗುವನೇನು?! ಪ್ರತೀ ಸೀತೆ ಒಬ್ಬಳು ಸತಿಯೆ? ನಮ್ಮಪ್ಪ ನಮ್ಮನ್ನು ಕಾನ್ವೆಂಟ್‍ಗೆ ಸೇರಿಸಬೇಕೆಂದು ಬಯಸಿದಾಗ ನಮ್ಮಮ್ಮ ಅಡ್ಡಬಂದಳು. ಗುಜರಾತಿ ಗ್ರಾಜುವೇಟ್ ಆಗಿದ್ದ ಆಕೆ ‘ನನ್ನ ಮಕ್ಕಳು ಇಂಗ್ಲಿಷ್ ಕಲಿಯುವ ಮುಂಚೆ ಗುಜರಾತಿ ಕಲೀತಾರೆ’ ಅಂದಳು. ಮಾನವಶಾಸ್ತ್ರಜ್ಞೆಯಾದ ನನ್ನ ಅಮೆರಿಕದ ಸಹೋದರಿ ಬಾಂಬೆಯಲ್ಲಿ ಪಾರ್ಸಿ ಹುಡುಗಿಯಾಗಿ ಕಳೆದ ಆ ದಿನಗಳ ಬಗ್ಗೆ ಹಿಮವತ್ತಾದ ಷಿಕಾಗೊದಲ್ಲಿ ತಣ್ಣಗೆ ಕೂತು ಬರೆದಳು.

ಬಿಳಿವರ್ಣದ ಸಮಾಜದಲ್ಲಿ ನೋಡಲು ನಾನು ಬಿಳಿಯರಂತೆಯೆ ಕಾಣುತ್ತಿದ್ದೆ. ಆದರೆ ನನ್ನ ಅಂತರಂಗ ಮಾತ್ರ ಕಂದುಬಣ್ಣದ್ದಾಗಿತ್ತು! ‘ನಾನು ಇಂಗ್ಲಿಷಿನಲ್ಲಿ ಕನಸು ಕಾಣಬಲ್ಲೆನಾದರೆ ಗುಜರಾತಿಯಲ್ಲಿ ಅಷ್ಟೇ ಚೆನ್ನಾಗಿ ಬಯ್ಯಬಲ್ಲೆ’ ಎಂದು ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ (‘ಕುತ್ರೀ’ ಎನ್ನುವುದು ನನ್ನ ತುಂಬ ಇಷ್ಟದ ಬೈಗುಳವಾಗಿತ್ತು!). ಸರ್ ಪೇ ಲಾಲ್ ಟೋಪಿ ರೂಸೀ ಫಿರ್ ಭೀ ದಿಲ್ ಹೇ ಹಿಂದುಸ್ತಾನೀ!

ನಾನು ಬಾಂಬೆಯ ಪಾಲೀಹಿಲ್‌ನಲ್ಲಿ ಬೆಳೆದವನು. ರಾಜ್‌ಕಪೂರನ ‘ಅನಾಡಿ’ ಚಿತ್ರದ ಜನಪ್ರಿಯ ‘ಕಿಸೀಕಿ ಮುಸ್ಕುರಾಹಟೊ ಪೆ’ ಹಾಡನ್ನು ನಮ್ಮ ‘26, ಪಾಲೀಹಿಲ್’ನ ಗೇಟಿನ ಮುಂದೆ ಚಿತ್ರೀಕರಿಸಿದ್ದರು.

ದೊಡ್ಡ ತಾರೆಯಾಗಿದ್ದ ಮೀನಾಕುಮಾರಿ ನಮ್ಮ ನೆರೆಯಲ್ಲಿದ್ದ ಅಚಲಾ ಸಚ್‌ದೇವಳನ್ನು ಭೇಟಿಯಾಗಲು ಬರುತ್ತಿದ್ದಳು. ಅಚಲಾ ಅಲ್ಲಿಂದ ಹೋದಮೇಲೆ ಅರವತ್ತರ ದಶಕದ ತಾರೆಯಾದ ಕಲ್ಪನಾ ಅಲ್ಲಿಗೆ ಬಂದಳು. ಹದಿನಾರರ ಪ್ರಾಯಕ್ಕೆ ನಾನು ಒಬ್ಬ ಗೇಯಾಗಿ ಬೆಳೆಯುತ್ತಿದ್ದೆ. ಕಲ್ಪನಾಳ ನಡಿಗೆಯ ಶೈಲಿ, ಆಕೆಯ ಸ್ವರ ಹಾಗೂ ಅದುವರೆಗಿನ ಸಿನೆಮಾಗಳಲ್ಲಿ ಆಕೆ ಅಭಿನಯಿಸಿದ ರೀತಿ, ಇವೆಲ್ಲವನ್ನು ಕನ್ನಡಿ ನೋಡಿಕೊಂಡು ಕರಗತ ಮಾಡಿಕೊಂಡಿದ್ದೆ. ಮೀನಾಕುಮಾರಿಯಂತೆ ತೇಲುತ್ತಾ ನಡೆಯಲು ಕಲಿತಿದ್ದೆ. ಸ್ಕೂಲಿನಿಂದ ಹಿಂದಿರುಗುವಾಗ ಕೆಲವೊಮ್ಮೆ ಸಾಧನಾಳ ಮನೆಯೆದುರಿನ ತೆರೆದ ಗೇಟಿನಿಂದ ಆಕೆಯನ್ನು ನೋಡುತ್ತಾ ನಿಲ್ಲುತ್ತಿದ್ದೆ. ಹೆಚ್ಚುಹೊತ್ತು ನಿಂತಾಗ ಒಮ್ಮೊಮ್ಮೆಯಂತೂ ಆಕೆ ತನ್ನ ಪೊಮೇರಿಯನ್‍ಗಳನ್ನು ನನ್ನತ್ತ ಛೂ ಬಿಡುತ್ತಿದ್ದಳು. ನರ್ಗೀಸಳು ಇತರ ಹೆಂಗಸರಂತೆ ಕೆಂಪ್ಸ್ ಕಾರ್ನರಿನಲ್ಲಿ ಶಾಪಿಂಗ್ ಮಾಡುತ್ತಿದ್ದುದನ್ನೂ ನೋಡಬಹುದಾಗಿತ್ತು.

ಇವತ್ತಿಗೂ ನಾನು ಐವತ್ತರ ದಶಕದ ಹೀರೋಯಿನ್ನುಗಳಂತೆ ಪ್ರೀತಿಯಲ್ಲಿ ಎಲ್ಲವನ್ನೂ ತ್ಯಾಗಮಾಡಬಲ್ಲೆ. ಹಾಗೆನ್ನಲು ನನಗೆ ಹೆಮ್ಮೆಯೆನಿಸುತ್ತೆ ಕೂಡಾ. ನನ್ನ ಅಮ್ಮ ಮೀನಾಳಂತೆ ಅಳುತ್ತಿದ್ದಳು. ಹಾಗಂತ ಮೀನಾ ಅತ್ತಿದ್ದಕ್ಕೆ, ಬದುಕಿದ್ದಕ್ಕೆ, ಸತ್ತಿದ್ದಕ್ಕೆ ಬೇರೆ ಸಾಟಿ ಇಲ್ಲ.

–ಹೊಶಾಂಗ್‌ ಮರ್ಚೆಂಟ್‌

ಇವತ್ತು ಹೈದರಾಬಾದಿನ ಚಿತ್ರಕಾರರು ನನ್ನನ್ನು ಅವರ ಚಿತ್ರಕ್ಕೋಸ್ಕರ ಕುಳಿತುಕೊಳ್ಳಲು ವಿನಂತಿಸುತ್ತಾರೆ. ಲಕ್ಷ್ಮಾಗೌಡ್ ನನ್ನನ್ನು ವಿಲಕ್ಷಣವಾಗಿ ಅಂಗ ಊನಗೊಂಡಂತೆ ಚಿತ್ರಿಸುತ್ತಾರೆ – ಕಣ್ಣಿಲ್ಲದವನಂತೆ, ಕೈ ಅಥವಾ ಶಿಶ್ನಹೀನನಂತೆ... ಗಾಂಡೂಸ್ವರ್ಗದ ಪಾರ್ಸಿ ದೇವದೂತನಂತೆ! ತರುವಾಯ, ಆತ ನನ್ನನ್ನು ಅಮೆರಿಕನ್ ಟಿ-ಶರ್ಟ್ ಮತ್ತು ಹೈದರಾಬಾದಿ ಲುಂಗಿಯಲ್ಲಿ ಚಿತ್ರಿಸುತ್ತಾರೆ – ಗಾಳಿಪಟ ಹಾರಿಸುತ್ತಿರುವ ನನ್ನ ನೆರೆಯ ಹುಡುಗನಿಗೆ ಆತುಕೊಂಡಂತೆ. ತೆಲುಗು ಗಂಡಸೊಬ್ಬನನ್ನು ಮದುವೆಯಾದ ಬ್ರಿಟಿಷ್ ಚಿತ್ರಕಾರ್ತಿ ನಿಕೋಲಾ ದುರ್ವಾಸುಲ ನನ್ನನ್ನು ಕೈಯಲ್ಲಿ ಹೂ ಹಿಡಿದುಕೊಂಡು ಬೆಳ್ಳಗಿನ ಪಾನಿಟೇಲ್ ಹೊಂದಿದ ಷಾಜಹಾನನಂತೆ ಚಿತ್ರಿಸುತ್ತಾರೆ.

ಅದು ಇಂಡಿಯನ್ ಇರಬಹುದೋ? ಆ ಮಹಾ ಮೊಗಲರು ಭಾರತೀಯರೆ? ತಾಜ್ ಮಹಲ್ ಎಂಬುದು ಭಾರತೀಯ ಕಟ್ಟಡವೊ ಅಥವಾ ಪರ್ಶಿಯನ್ ಕಟ್ಟಡವೋ? ನೀವು ಖಂಡಿತ ಇದೆಲ್ಲ ಭಾರತೀಯ ಅನ್ನುತ್ತೀರಿ. ಒಂದೇ ಶಬ್ದದಲ್ಲಿ ಹೇಳಬೇಕಾದರೆ ಇದೆಲ್ಲ ‘ಕಸಿ’. ಗಾಲಿಬ್ ಹೇಳಿದಂತೆ ‘ನಾಮ್ ನಹೀ ತೋ ಬದ್‌‌ನಾಮ್ ತೋ ಹುವೇ’ (ಖ್ಯಾತರಲ್ಲದಿದ್ದರೂ ಅಪಖ್ಯಾತರಂತೂ ಆದೆವಲ್ಲ!). ನಾನೂ ಖ್ಯಾತಿಗೋಸ್ಕರ ಬರೆಯಲ್ಲಿಲ್ಲ; ಅಪಖ್ಯಾತಿಗೇ ಬರೆದೆ. ನಾನು ಭಾರತದಲ್ಲಿ ಮುಚ್ಚುಮರೆಯಿಲ್ಲದೆ ಗೇ ಎಂದು ಘೋಷಿಸಿಕೊಂಡ ಮೊದಲ ಕವಿ; ಲಿಂಗಾಧಾರಿತ ಸಾಮಾನ್ಯ ತಿಳಿವಳಿಕೆಗಳನ್ನು ಡಿಕನ್ಸ್ಟ್ರಕ್ಟ್ ಮಾಡಲು ಕಲಿಸಿದ ಅಮೆರಿಕಕ್ಕೂ, ನೈಜ ಭಾರತೀಯತೆಯಿಂದ ನನಗೆ ಆಶ್ರಯ ನೀಡಿದ ಹೈದರಾಬಾದ್ ವಿಶ್ವವಿದ್ಯಾಲಯಕ್ಕೂ ನಾನು ಧನ್ಯ. ಪರ್ದೇ ಮೇ ರೆಹೆನೆ ದೋ, ಪರ್ದಾ ನಾ ಉಠಾವೋ? ಭಾರತದ ಐವತ್ತನೇ ವರ್ಷದ ಸಂದರ್ಭದಲ್ಲಿ ಗೇ ಮಂದಿಯ ಕೊಡುಗೆಯನ್ನು ಪರಿಗಣಿಸಲಿಲ್ಲವೆಂಬ ನೋವಿದೆ. ನಾನೊಂದು ಮಧ್ಯರಾತ್ರಿಯ ಮಗು (ಮಿಡ್ ನೈಟ್ಸ್ ಚೈಲ್ಡ್). ಇಂಡಿಯಾಕ್ಕೆ ನನ್ನ ಕೊಡುಗೆಯೆಂದರೆ ಭಾರತೀಯ ಗೇ ಬರಹಗಳ ಸಂಗ್ರಹ – ಯಾರಾನಾ.
ನಮಗೋಸ್ಕರ ಆ ಪಾರ್ಸಿ ತಾಯಂದಿರು ಏನೆಲ್ಲ ಮಾಡಿಲ್ಲ?! ನಮಗೋಸ್ಕರ ಆ ಮದರ್ ಇಂಡಿಯಾ ಏನೆಲ್ಲ ಮಾಡಿಲ್ಲ?!

ಕನ್ನಡಕ್ಕೆ: ಶಶಿಕಾಂತ ಕೌಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.