ADVERTISEMENT

ದೇಶದಲ್ಲೇ ಪ್ರಥಮ ಸ್ವತಂತ್ರ ಗ್ರಾಮ: ಏಸೂರ ಕೊಟ್ಟರೂ ಈಸೂರು ಬಿಡೆವು

ಎಚ್.ಎಸ್.ರಘು
Published 14 ಆಗಸ್ಟ್ 2021, 6:32 IST
Last Updated 14 ಆಗಸ್ಟ್ 2021, 6:32 IST
ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗೆ ನಿರ್ಮಿಸಿರುವ ಸ್ಮಾರಕ
ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗೆ ನಿರ್ಮಿಸಿರುವ ಸ್ಮಾರಕ   

ಶಿಕಾರಿಪುರ: ದೇಶದಲ್ಲಿ ಪ್ರಥಮ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಗ್ರಾಮ ಈಸೂರು.

ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್‌ ತಿಂಗಳಲ್ಲಿ ತಕ್ಷಣ ನೆನಪಾಗುವ ಹೆಸರು ಈಸೂರು ಗ್ರಾಮ. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ದೇಶದಲ್ಲಿ ಹಚ್ಚುವ ಕಾರ್ಯವನ್ನು ಈಸೂರು ಸ್ವಾತಂತ್ರ್ಯ ಹೋರಾಟಗಾರರುಮಾಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಅವರು 1942ರಲ್ಲಿ ಬ್ರಿಟಿಷರ ವಿರುದ್ಧ ಕರೆ ನೀಡಿದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಗೆ ಈಸೂರು ಗ್ರಾಮದಲ್ಲಿ ಗಂಡು, ಹೆಣ್ಣು ಭೇದವಿಲ್ಲದೇ ಜನರು ಧುಮುಕಿದರು. ಕಂದಾಯ ನೀಡಲು ನಿರಾಕರಿಸಿದ್ದ ಗ್ರಾಮಸ್ಥರು ಬ್ರಿಟಿಷ್‌ ಅಧಿಕಾರಿಗಳ ವಿರುದ್ಧ ನಡೆಸಿದ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು.

ADVERTISEMENT

‘ಏಸೂರ ಕೊಟ್ಟರೂ ಈಸೂರು ಬಿಡೆವು’ ಎಂಬ ಘೋಷಣೆಯನ್ನು ಹೇಳುತ್ತಾ ನಾಯಕತ್ವವಿಲ್ಲದೇ ಸ್ವಯಂ ಪ್ರೇರಿತರಾಗಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕೀರ್ತಿ ಈಸೂರು ಗ್ರಾಮಸ್ಥರಿಗೆ ಸಲ್ಲುತ್ತದೆ. ಗ್ರಾಮಸ್ಥರು 1942ರಲ್ಲಿ ಸೆಪ್ಟೆಂಬರ್‌ 26ರಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಪ್ರತ್ಯೇಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಂಡರು. ಗ್ರಾಮದ 12 ವರ್ಷದ ಮಲ್ಲಪ್ಪ ಅವರನ್ನು ಸರ್ವಾಧಿಕಾರಿಯಾಗಿ ಹಾಗೂ 10 ವರ್ಷದ ಜಯಪ್ಪ ಅವರನ್ನು ಅಮಲ್ದಾರರನ್ನಾಗಿ ಆಯ್ಕೆ ಮಾಡಿ ಆಡಳಿತ ನಡೆಸಿದರು.

ಆದರೆ ಸ್ವತಂತ್ರ ಸರ್ಕಾರ ರಚಿಸಿಕೊಂಡ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬ್ರಿಟಿಷ್‌ ಆಡಳಿತ ಅಧಿಕಾರಿಗಳನ್ನು ಕಳಿಸುತ್ತದೆ. ಗ್ರಾಮಕ್ಕೆ ಬಂದ ಅಧಿಕಾರಿಗಳಿಗೆ ಖಾದಿ ಟೋಪಿ ಧರಿಸುವಂತೆ ಗ್ರಾಮಸ್ಥರು ಆಜ್ಞೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಪೊಲೀಸರು ಗ್ರಾಮಸ್ಥರ ಮೇಲೆ ಮೇಲೆ ಹಲ್ಲೆ ನಡೆಸುತ್ತಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸಬ್‌ ಇನ್‌ಸ್ಪೆಕ್ಟರ್ ಕೆಂಚನಗೌಡ, ಅಮಲ್ದಾರ್‌ ಚನ್ನಕೃಷ್ಣಪ್ಪ ಅವರನ್ನು ಕೊಲೆ ಮಾಡುತ್ತಾರೆ. ನಂತರ ಬ್ರಿಟಿಷ್‌ ಅಧಿಕಾರಿಗಳು ಈಸೂರಿನ ಮೇಲೆ ದಾಳಿ ನಡೆಸಿ ಲೂಟಿ ಮಾಡಿ, ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೆ ಹಲ್ಲೆ ನಡೆಸುತ್ತಾರೆ. ಹೋರಾಟಕ್ಕೆ ಬೆಂಬಲ ನೀಡಿದ ಕಾರಣಕ್ಕೆ ಸಾಹುಕಾರ್‌ ಬಸವಣ್ಯಪ್ಪ ಅವರ ಮನೆಯನ್ನು ಸುಟ್ಟು ಹಾಕುತ್ತಾರೆ.

ಗ್ರಾಮದ ಹಲವು ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಿ ಅಧಿಕಾರಿಗಳು ಶಿಕ್ಷೆಗೊಳಪಡಿಸುತ್ತಾರೆ. 1943ರ ಮಾರ್ಚ್‌ 8ರಂದು ಗ್ರಾಮದ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಮಾರ್ಚ್‌ 9ರಂದು ಸೂರ್ಯನಾರಾಯಣಾಚಾರ್‌, ಬಡಕಳ್ಳಿ ಹಾಲಪ್ಪ ಹಾಗೂ ಮಾರ್ಚ್‌ 10ರಂದು ಗೌಡ್ರು ಶಂಕರಪ್ಪ ಅವರನ್ನು ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ಗಲ್ಲಿಗೇರಿಸುತ್ತಾರೆ.

ಈಸೂರಿನ ಈ ಸ್ವಾತಂತ್ರ್ಯ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

‘ಈಸೂರಿನ ಸ್ವಾತಂತ್ರ್ಯ ಹೋರಾಟ ರೋಮಾಂಚನಕಾರಿಯಾಗಿದ್ದು, ಹಲವು ಹೋರಾಟಕ್ಕೆ ಸ್ಫೂರ್ತಿಯಾಗಿದೆ. ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಆವರಣ ಅಭಿವೃದ್ಧಿಗೆ ಸರ್ಕಾರ ಗಮನ ನೀಡಬೇಕು’ ಎಂದು ಒತ್ತಾಯಿಸುತ್ತಾರೆಈಸೂರು ಗ್ರಾಮದ ಶಿವಪ್ಪ.

ಪ್ರಸ್ತುತ ಈಸೂರು ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಹಲವು ಸಂಘ–ಸಂಸ್ಥೆಗಳ ಜನಪರ ಹೋರಾಟಗಳ ಪ್ರೇರಣೆಯ ಕೇಂದ್ರವಾಗಿದೆ. ಹಲವು ಚಳವಳಿ ಹಾಗೂ ಪಾದಯಾತ್ರೆಗಳು ಈ ಸ್ಮಾರಕದ ಮುಂಭಾಗ ಆರಂಭಗೊಂಡಿರುವುದು ಸ್ಮರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.