ADVERTISEMENT

ಮಳೆ ನೆನಪಿನ ಹನಿಗಳು: ಕಣ್ಣಲ್ಲೂ ಹನಿ ಜಿನುಗಿಸುವ ಮಳೆ ನೆನೆದ ಶೀತಲ್‌ ಶೆಟ್ಟಿ

ಶೀತಲ್‌ ಶೆಟ್ಟಿ
Published 15 ಜುಲೈ 2022, 19:30 IST
Last Updated 15 ಜುಲೈ 2022, 19:30 IST
ಶೀತಲ್‌ ಶೆಟ್ಟಿ
ಶೀತಲ್‌ ಶೆಟ್ಟಿ   

ಮಳೆಗಾಲದ ಹನಿಗಳು ಒಬ್ಬೊಬ್ಬರಿಗೆ ಒಂದೊಂದು ತರಹ. ಬೆಳ್ಳಿ ತೆರೆಯ ಮೇಲೆ ಮಳೆಯಲ್ಲಿ ನೆನೆದವರು, ತಮ್ಮ ಬದುಕಿನ ಮಳೆಯಲ್ಲಿ ಮಿಂದದ್ದು ಹೇಗೆಲ್ಲಾ ಇದೆ. ಬಣ್ಣ, ಬೆಳಕಿನಾಚೆಯ ನಿಜಮಳೆಯ ಸೊಬಗು, ಬದುಕಿನ ಅರ್ಥ ಕಲಿಸಿದ ಮಳೆಯ ಪಾಠಗಳ ಪುಟ್ಟ ಝರಿ ಇಲ್ಲಿದೆ. ನಿಮ್ಮಲ್ಲೂ ಇಂಥ ಕಥೆಗಳಿರಬಹುದಲ್ವಾ... ಓದುತ್ತಾ ನೆನಪಿಸಿಕೊಳ್ಳಿ

ಶಾಲೆ ಮುಗಿಸಿ ಬರೋ ಸಂಜೆಗಳಲ್ಲಿ ಎದೆಹರಿದು ಕಿರುಚಿದ್ರು ‘ಏನಾಯ್ತು’ ಅಂತ ಕೇಳಲು ಒಬ್ಬರಿರದ ಹಸಿರೇರಿದ ಬತ್ತದ ಗದ್ದೆ ಬದುವಿನಲ್ಲಿ ದಿನ ನಾನು ನಡೆದು ಮನೆಗೆ ಬರುತ್ತಿದ್ದೆ. ಕೆಲವೊಮ್ಮೆ ತಡವಾದಾಗ ಅದೇ ಗದ್ದೆಯಂಚಲ್ಲಿ ಸೈಕಲ್‌ ಓಡಿಸಿ ಹೋದ ದಿನಗಳು ಇವೆ. ಅಂತಲ್ಲಿ ಮಳೆಯಾದ್ರೆ ಅದರ ಮಜವೇ ಬೇರೆ. ಚಿಟಿ ಪಿಟಿ ಮಳೆ ಕೊಡೆಯ ಮೇಲೆ ಬಿದ್ದಾಗ ಅದೊಂತರ ಪದ್ಯ. ಹಾಗೆ ಅದಕ್ಕೆ ಗಾಳಿಯ ಕೋರಸ್, ಒದ್ದೆಯಾದ ಚಪ್ಪಲಿಯಿಂದ ಎದ್ದೆದ್ದು ಕೇಳೋ ಚರಪರ ಮ್ಯೂಸಿಕ್‌. ಪ್ರಕೃತಿ ತನ್ನಷ್ಟಕ್ಕೆ ತಯಾರು ಮಾಡಿಕೊಂಡ ಸಂಗೀತ ಕಚೇರಿ ಅಂದ್ರೆ ಓವರ್ ಆಗಿ ಹೇಳ್ತಿದಾಳೆ ಅಂದ್ಕೊತೀರೇನೋ. ಆದ್ರೂ ಆಗಿನ ಮಳೆ ಹಾಗೆಯೇ...

ಮನೆ ಸೇರುತ್ತಿದ್ದ ಹಾಗೆಯೇ ಅಜ್ಜಿ ಕೊಡುತ್ತಿದ್ದ ಎಣ್ಣೆಯಲ್ಲಿ ಹುರಿದ ಗೆಣಸಿನ ಹಪ್ಪಳ. ಮತ್ತು ಬೆಚ್ಚಗೆ ಒಂದಷ್ಟು ಹಾಲು. ಹೀಗೆ ಆವತ್ತಿನ ಆ ಮುಗ್ದ ಮನಸ್ಸಿಗೆ, ಮಳೆಗೆ ತಾಗಿ ಬರೋ ಒಂದಷ್ಟು ಸವಲತ್ತುಗಳು ಮಜಾ ಕೊಡ್ತಿದ್ವು. ಅದಿಕ್ಕೆ ಅವುಗಳನ್ನ ಮರೆಯೋಕಾಗಲ್ಲ .. ಆದ್ರೆ ನಾವು ಬೆಳೆದಂತೆ ಬಹುಶಃ ಮಳೆಯನ್ನು ನೋಡುವ ರೀತಿ ಅದನ್ನು ಆಸ್ವಾದಿಸುವ ರೀತಿ ಎಲ್ಲವೂ ಬದಲಾಗ್ತಾಗುತ್ತಾ ಹೋಗುತ್ತವೆ. ತಣ್ಣನೆ ಹನಿಗಳು ಯಾವ ಮನಸ್ಸಿಗೆ ಮುದ ಕೊಡುತ್ತಿದ್ವೋ ಅದೇ ಹನಿಗಳು ಸಾಕನ್ನಿಸಿ ಬಿಡುತ್ತವೆ.

ADVERTISEMENT

ನಾನು ಮಲೆನಾಡ ಮಳೆ, ಕರಾವಳಿಯ ಮಳೆ ಇವತ್ತಿಗೆ ಕಾಂಕ್ರೀಟ್ ಕಾಡಾದ ಬೆಂಗಳೂರಿನ ಮಳೆ.. ಎಲ್ಲವನ್ನು ಜೀವಿಸಿದ್ದೇನೆ, ಅನುಭವಿಸಿದ್ದೇನೆ. ವ್ಯತ್ಯಾಸವಿಷ್ಟೇ, ಮಲೆನಾಡಿನ ಮಳೆಗೆ ಶಾಲೆಗೆ ಹೋಗೋ ಪುಟ್ಟ ಹುಡುಗಿ ಶೀತಲ್‌ಳ ಕಂದು ಬಣ್ಣದ ಸ್ಕೂಲ್ ಯುನಿಫಾರ್ಮ್ ನೆನೆಯುತಿತ್ತು, ಕರಾವಳಿಯ ಮಳೆಗೆ ಕಾಲೇಜಿಗೆ ಹೋಗೋ ಶೀತಲ್‌ಳ ಚೂಡಿದಾರದ ದುಪಟ್ಟಾ ನೆನೆಯುತಿತ್ತು. ಈಗ ಬೆಂಗಳೂರಿನ ಕಿಟಕಿಯಾಚೆಗೆ ನೋಡುವ ಮಳೆ ಹಳೇ ಮಳೆಗಳನ್ನ ನೆನಪಿಸಿ ಕಣ್ಣಾಲಿಗಳನ್ನು ನೆನೆಸುತ್ತಿದೆ...ಒಟ್ಟಿನಲ್ಲಿ ಮಳೆ ನನಗೆ ಒಂದೊಳ್ಳೆ ಸಂಗೀತ. ಭಾವ... ಮಳೆ ಸುರಿಯುವ ಆ ಕ್ಷಣಕ್ಕೆ ಸ್ವಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.