ADVERTISEMENT

ಸೂರ್ಯ ಇವರೊಬ್ಬರೇ...

ಗಿರಿಜಾ ಶಾಸ್ತ್ರಿ
Published 23 ಏಪ್ರಿಲ್ 2022, 19:30 IST
Last Updated 23 ಏಪ್ರಿಲ್ 2022, 19:30 IST
ಎ.ವಿ. ಸೂರ್ಯನಾರಾಯಣ ಸ್ವಾಮಿ ತರೀಕೆರೆ
ಎ.ವಿ. ಸೂರ್ಯನಾರಾಯಣ ಸ್ವಾಮಿ ತರೀಕೆರೆ   

‘ತರೀಕೆರೆನಲ್ಲಿ ನಾವಿದ್ದಾಗ ಅಲ್ಲೊಬ್ಬ ಯಾಕೂಬ್ ಸಾಹೇಬರು ಅಂತಿದ್ದರು, ವ್ಯಾಪಾರಿ. ಅವರು, ಕ್ಷತ್ರಿಯರ ಸಮಾಜ, ವೀರಶೈವರ ಸಮಾಜ, ಕುರುಬರ ಸಮಾಜ, ಮುಸ್ಲಿಮರ ಸಮಾಜ, ಬ್ರಾಹ್ಮಣರ ಸಮಾಜ ಹೀಗೆ ಎಲ್ಲಾ ಸಮಾಜದವರ ಮನೆಗೂ ಅವರಾಗಿಯೇ ಹೋಗಿ ‘ನಿಮ್ಮ ಮನೇನಲ್ಲಿ ಮದುವೆ ಇದೆಯಂತೆ, ಮುಂಜಿ ಇದೆಯಂತೆ, ಗೃಹಪ್ರವೇಶ ಇಟ್ಟುಕೊಂಡಿದ್ದೀರಂತೆ. ನೀವೇನೂ ಯೋಚ್ನೆ ಮಾಡಬೇಡಿ. ನಮ್ಮ ಅಂಗಡಿಯಿಂದ ಸಾಮಾನು ಸರಂಜಾಮು ತೊಗೊಂಡು ಹೋಗಿ. ಅಕ್ಕಿಬೇಕಾ ತಗೊಳ್ಳಿ, ರಾಗಿ ಬೇಕಾ, ಸಕ್ಕರೆ ಬೇಕಾ? ಏನು ಬೇಕಾದರೂ ತೊಗೊಂಡು ಹೋಗಿ. ಈ ತಿಂಗಳು ಆಗದಿದ್ದರೆ, ಮುಂದಿನ ಆರು ತಿಂಗಳು... ಅದೂ ಆಗದಿದ್ದರೆ ವರುಷ ಆದಮೇಲೆ ದುಡ್ಡು ಕೊಡಿ. ನಾನೇನು ದುಡ್ಡು ಕೇಳಿದೆನೆ’ ಎಂದು ಹೇಳುತ್ತಿದ್ದರು.

ಈ ಮಾತುಗಳನ್ನು ಹೇಳಿದವರು ಮೈಸೂರಿನ ಎ.ವಿ. ಸೂರ್ಯನಾರಾಯಣ ಸ್ವಾಮಿ‌ಯವರು. ಅವರು ಮೂಲತಃ ತರೀಕೆರೆಯವರು. ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು. ಕಟ್ಟಾ ಸಂಪ್ರದಾಯಸ್ಥ ಮನೆಯಲ್ಲಿ ಹುಟ್ಟಿದ ಅವರಿಗೆ ಮುಸ್ಲಿಂ ಜನರ ಜೊತೆ ಇರುವ ಒಡನಾಟ ಬಹಳ ಆಶ್ಚರ್ಯಕರವಾದುದು. ಅಧಿಕ ಸಂಖ್ಯೆಯಲ್ಲಿ ಅವರಿಗೆ ಮುಸ್ಲಿಂ ಗೆಳೆಯರಿದ್ದಾರೆ. 83 ವರುಷದ ವೃದ್ಧರಾದ ಅವರು ಹಾಕಿಕೊಳ್ಳುವುದೂ ಒಂದು ಕಲ್ಲಿ‌ ಜುಬ್ಬಾ ಮತ್ತು ಪೈಜಾಮ. ಅದನ್ನು ಹೊಲಿದು ಕೊಡುವವರೂ ಮುಸ್ಲಿಮರೇ!

ಎರಡೂ ಧರ್ಮಗಳ ಸಮನ್ವಯ ಸೇತುವಿನಂತೆ ದೃಢವಾಗಿ ನಿಂತಿರುವ ಅವರನ್ನು ಕಾಣಲೆಂದೇ ಸೀತಾರಾಮ ನಮ್ಮನ್ನು ಲಿಂಗಾಂಬುಧಿ ಪಾರ್ಕ್‌ನ ಬಳಿ ಇರುವ ಅವರ ಮನೆಗೆ ಕರೆದುಕೊಂಡು ಹೋಗಿದ್ದರು.

ADVERTISEMENT

ಸೂರ್ಯನಾರಾಯಣ ಸ್ವಾಮಿಯವರ ಮನೆಯಲ್ಲಿ ಕುಳಿತಿದ್ದೆವು. ಸ್ವಲ್ಪ ಹೊತ್ತಿನ ನಂತರ ಅಸ್ಲಾಮ್ ಎನ್ನುವ ವ್ಯಕ್ತಿಗೆ ಫೋನ್ ಮಾಡಿ, ‘ಇಲ್ಲಿ ಯಾರೋ ಒಬ್ಬರು ಬಂಧುಗಳು ಬಂದಿದ್ದಾರೆ, ಮಾತನಾಡಿ. ನಮ್ಮ ಸಂಬಂಧದ ಬಗ್ಗೆ ನೀವೇ ಹೇಳಿ, ನಾನು ಹೇಳೋದಲ್ಲ’ ಎಂದು ಮೊಬೈಲನ್ನು ನನ್ನ ಕೈಗೆ ಕೊಟ್ಟರು. ಗುರುತು ಪರಿಚಯವಿಲ್ಲದವರ ಬಳಿ ಏನು ಮಾತನಾಡುವುದು? ಆದರೂ ಹಿರಿಯರ ಆದೇಶ ತಿರಸ್ಕರಿಸಬಾರದೆಂದು ಫೋನ್ ತೆಗೆದುಕೊಂಡೆ. ಆ ವ್ಯಕ್ತಿ ಅಪಘಾತದಲ್ಲಿ ಗಾಯಗೊಂಡು ಕಾಲಿಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದರು. ಅಲ್ಲಿಂದಲೇ ಮಾತು. ಸೂರ್ಯನಾರಾಯಣ ಸ್ವಾಮಿಯವರ ಉಪಕಾರ ಸ್ಮರಣೆ ಮಾಡುತ್ತಾ, ‘ಅವರು ನನಗೆ ನನ್ನ ತಾಯಿ, ತಂದೆ ಇದ್ದಂತೆ... ಪೈಗಂಬರ್ ತರಾ. ಇಲ್ಲಿಗಂಟ ಅಂಥಾ‌ ಮನ್ಶಾನನ್ನೇ ನೋಡಿಲ್ಲ. ನಾನು ಅವರ ಹತ್ತಿರ ಮಾತನಾಡಿದರೆ ಒಂದು ರೀತಿಯ ಸುಕೂನ್ (ಸಮಾಧಾನ) ಸಿಗ್ತದೆ’ ಎಂದು ಹೇಳುತ್ತಾ ಭಾವುಕರಾಗಿ ಅತ್ತುಬಿಟ್ಟರು. ಅಪರಿಚಿತಳಾದ ನಾನು ಅವರಿಗೆ ಸಮಾಧಾನ ಮಾಡುವಾಗ ನನ್ನ ಗಂಟಲೂ ಗದ್ಗಿತವಾಯಿತು.

ಸೂರ್ಯನಾರಾಯಣರ ಬಳಿ ಹೀಗೆ ಅಸಂಖ್ಯಾತ ಅನುಭವ ಕಥನಗಳಿವೆ. ಅವುಗಳನ್ನು ಅಷ್ಟೇ ಸ್ವಾರಸ್ಯಕರವಾಗಿ ಅವರು ಹೇಳುತ್ತಾರೆ. ಅದರ ಒಂದು ಮಾದರಿಯನ್ನು‌ ನಾನು ಅಲ್ಲಲ್ಲಿ ಅವರ ಮಾತುಗಳಲ್ಲೇ ಇಲ್ಲಿ ಹೇಳಿದ್ದೇನೆ. ಅವರ ನೆನಪಿನ ಪ್ರವಾಹ ಎಷ್ಟು ರಭಸವಾದುದೆಂದರೆ ಒಂದು ಕತೆಯನ್ನು ಹೇಳುತ್ತಾ ಇನ್ನೇನೋ ನೆನಪಾಗಿ ಮತ್ತೊಂದು ಕತೆಗೆ ಜಿಗಿಯುವುದು, ಅಲ್ಲಿಂದ ಮತ್ತೊಂದಕ್ಕೆ ಜಿಗಿತ. ‘ಯಾಕೂಬ್ ಕತೆ ಹೇಳ್ತಿದ್ರಿ, ಆಮೇಲೇನಾಯಿತು ಮುಂದುವರೆಸಿ’ ಎಂದು ಸೀತಾರಾಮ ಅವರನ್ನು‌ ಮತ್ತೆ ಟ್ರ್ಯಾಕಿಗೆ ತರುವುದು. ಹೀಗೆ ಸುಮಾರು ಒಂದೂವರೆ ಗಂಟೆ ಅವರು ಉತ್ಸಾಹದ ಬುಗ್ಗೆಯಾಗಿದ್ದರು. ಆ ಪುಸ್ತಕ, ಈ ಪುಸ್ತಕ ನಮಗೆ ತೋರಿಸಲು ಒಳ ಹೊರಗೆ ಓಡಾಟ. ನಾನು ಕುಳಿತಿದ್ದೆ. ಅವರು ನಿಂತು ಈ ಪುಟ ನೋಡಿ... ಇಲ್ಲಿ ನೋಡಿ... ಇದು ತುಂಬಾ‌ ಮಹತ್ವದ್ದು ಇಲ್ಲಿ’ ಎನ್ನುತ್ತಿದ್ದರು. ಈ ಹಿರಿಯಜೀವ ಕನ್ನಡಕವಿಲ್ಲದೆಯೇ ಓದುವುದನ್ನು ಕಂಡಾಗ ಪರಮಾಶ್ಚರ್ಯ. ಇದುವರೆಗೆ ಕಣ್ಣಿಗೆ ಯಾವ ಪೊರೆಯೂ ಹತ್ತಿಲ್ಲ. ತುಂಬಾ ನಿರ್ಮಲ‌ನೋಟ!

‘ನೀವು ನಿಂತಿದ್ದೀರ ನಾನು ಹೀಗೆ ಕುಳಿತು ಕೇಳುವುದು ನನಗೆ ಹಿಂಸೆಯಾಗುತ್ತೆ’ ಎಂದಾಗ, ‘ಇಲ್ಲ, ನೀವು ಕೂತ್ಕೊಳ್ಳಿ’ ಎಂದು ಬಲವಂತವಾಗಿ ನನ್ನ ಕೂರಿಸಿ, ತಾವು ಬಾಗಿ ನಿಂತು ತಮ್ಮ ಪುಸ್ತಕದ ಮೇಲೆ ಬೆರಳಾಡಿಸುತ್ತಾ ನೆನಪಿನ‌ ಹೊತ್ತಿಗೆಗಳನ್ನು ಬಿಚ್ಚುತ್ತಿದ್ದರು. ಸಾವಿರಾರು ಪುಟಗಳ ಕನ್ನಡ ಕಾವ್ಯವನ್ನು ಅವರು ಸಂಪಾದಿಸಿ ಪ್ರಕಟಿಸಿದ ಕೃತಿ ‘ಗೆಜ್ಜೆ ನಾದ’. ಹಾಗೆಯೇ ಮಹತ್ವದ ಕೃತಿಗಳ ಉಲ್ಲೇಖಗಳಿಂದ ಹಿಡಿದು ಆಟೊರಿಕ್ಷಾಗಳ ಮೇಲೆ ದಾಖಲಾಗಿರುವ ಉಲ್ಲೇಖಗಳವರೆಗೆ ಸಂಗ್ರಹವನ್ನು ಗ್ರಂಥದ ರೂಪದಲ್ಲಿ ಹೊರತಂದಿದ್ದಾರೆ.

‘ಯಾಕೂಬ್ ಸಾಹೇಬರಿಗೆ ಅವರ ತವರಾದ ಕೇರಳದಲ್ಲಿ ಏನೋ ಸಮಸ್ಯೆ. ತರೀಕೆರೆ ಬಿಡಬೇಕಾಯಿತು. ‘ನೋಡ್ರಪ್ಪಾ ಊರಿನಲ್ಲಿ ಏನೋ ಸಮಸ್ಯೆ ಇದೆ. ನಾವು ಊರು ಬಿಡಬೇಕು. ಮುಂದಿನ ತಿಂಗಳಿಂದ ನಾವು ಇರೋದಿಲ್ಲ. ನಿಮ್ಮದೇನಾದರೂ ದುಡ್ಡಿನ ವ್ಯವಹಾರ ಇದ್ರೆ ಮುಗಿಸಿಕೊಂಡುಬಿಡಿ. ನಾನೇನಾದರೂ ಕೊಡಬೇಕಾಗಿದ್ರೆ ಹೇಳಿ ಕೊಡ್ತೀನಿ, ನೀವೇನಾದ್ರೂ ಕೊಡಬೇಕಾಗಿದ್ರೂ ಹೇಳಿ ಎಂದಾಗ, ಬ್ರಾಹ್ಮಣರು ಅತ್ತರು, ಕುರುಬರು ಅತ್ತರು, ಕ್ಷೌರಿಕರು ಅತ್ತರು, ಕ್ರಿಶ್ಚಿಯನ್ನರು ಅತ್ತರು, ಲಿಂಗಾಯಿತರು ಅತ್ತರು, ಮುಸ್ಲಿಮರು ಅತ್ತರು,‌ ಎಲ್ಲಾರೂ ಪ್ರೀತಿಯಿಂದ ಅತ್ತರು.

ಯಾಕೂಬ್ ಸಾಹೇಬರು ಊರು ಬಿಡಬಾರದೆಂದು ಆಗ್ರಹಿಸಿ ಅವರ ಅಂಗಡಿಯ ಮುಂದೆ ಊರಿನ ನಾನೂರು–ಐನೂರು ಜನ ಜಮಾಯಿಸಿದರು. ಅವರ ಪ್ರೀತಿಯನ್ನು ನೋಡಿ ಯಾಕೂಬರೂ ಅತ್ತರು. ಆದರೆ, ಅವರು ಹೋಗಲೇ ಬೇಕಾಯಿತು. ಆಗ ಅವರನ್ನು ಕಳುಹಿಸಲು ರೈಲು ನಿಲ್ದಾಣದಲ್ಲಿ ಸಾವಿರದೈನೂರು ಜನ ನೆರೆದಿದ್ದರು. ರಾಮಭಟ್ಟರ ವೇದಮಂತ್ರ, ನರಸಿಂಹ ಭಟ್ಟರ ಭಾಷಣ ಎಲ್ಲಾ ಇತ್ತು. ಬ್ರಾಹ್ಮಣ ಹೆಂಗಸರೂ ಬಂದಿದ್ದರು. ಅವರ ಹೆಂಡತಿಗೆ ನಮ್ಮೂರ ಹೆಂಗಸರ ಕುಂಕುಮ! ಕುಂಕುಮಾನೂ ಕೊಟ್ಟರು. ಅವರು ಇಟ್ಕೊಳ್ಳೊ ಹಾಗಿಲ್ಲ. ಆದ್ರೂ ಇಟ್ಕೊಂಡರು. ಅವರ ಕುತ್ತಿಗೆಯಂತೂ ನೂರಾರು ಹಾರಗಳ ಭಾರದಿಂದ ಬಾಗಿತ್ತು. ಇದು ಸುಮಾರು 1952–53ರ ಕತೆ. ಇದೆಲ್ಲಾ ಯಾರಿಗೂ ಗೊತ್ತಿಲ್ಲ. ಈಗ ಇಂತಹ ಪರಿಸ್ಥಿತಿಯಲ್ಲಿ ಗೊತ್ತಾಗಿ ತಾನೇ ಏನು ಮಾಡತಾರೆ? ಇದನ್ನು ನಾನು ಕಿವಿಯಿಂದ ಕೇಳಿರುವುದಲ್ಲ. ಕಣ್ಣಾರೆ ನೋಡಿದ್ದೀನಿ’ ಈ ಹಿರಿಯ ಜೀವ ಹೀಗೆ ಹೇಳುತ್ತಿದ್ದಾಗ ನಮಗೂ ಕಣ್ಮುಂದೆಯೇ ಎಲ್ಲ ಘಟನೆಗಳು ನಡೆದ ಅನುಭವ.

ಬ್ರಾಹ್ಮಣರ ಮನೆಯಲ್ಲಿ ಅನಂತ ಚತುರ್ದಶಿ ಹಬ್ಬದ ಆಚರಣೆ ಎಂದರೆ ಘನಘೋರ ಮಡಿ. ಬಹಳ ಕಟ್ಟುನಿಟ್ಟು. ಮನೆಯ ಸದಸ್ಯರೇ ಒಬ್ಬರಿಗೊಬ್ಬರು ಅಸ್ಪೃಶ್ಯರು ಇಲ್ಲಿ! ಸೂರ್ಯನಾರಾಯಣ ಸ್ವಾಮಿಯವರು ಅದಕ್ಕೆ ಸಂಬಂಧಿಸಿದ ಪ್ರಸಂಗವೊಂದನ್ನು ಹೇಳಿ ನಮ್ಮೆಲ್ಲರನ್ನೂ ದಂಗುಗೊಳಿಸಿದರು. ‘ಅನಂತಚತುರ್ದಶಿಗೆ ಒಂದು ವಾರವಿದೆ ಎನ್ನುವಾಗಲೇ ಅನಂತನ ದಾರಾ... ಎಂದು ಬೀದಿಯಲ್ಲಿ ಮಾರಿಕೊಂಡು ಬರುವವರು ಮುಸ್ಲಿಮರೇ ಆಗಿದ್ದರು. ಅವರು ನಮ್ಮ ಮನೆಗೆ ಅನಂತನ ದಾರ ಕೊಡಲು ಬಂದಾಗ ಅವರಿಗೆ ಮಣೆ ಹಾಕಿ ವಿಶೇಷ ಮರ್ಯಾದೆ ಮಾಡಲಾಗುತ್ತಿತ್ತು. ಮಡಿಯಲ್ಲಿದ್ದ ನಮ್ಮ ಮಹಿಳೆಯರು ಒಳಗಿನಿಂದ ಬಂದು ಅವರ ಕೈಯಿಂದ ದಾರವನ್ನು ತೆಗೆದುಕೊಳ್ಳುತ್ತಿದ್ದರು. ಅದನ್ನು ಹಾಗೆಯೇ ತೆಗೆದುಕೊಂಡು ಹೋಗಿ ದೇವರ ಕೋಣೆಯಲ್ಲಿ ಇಡುತ್ತಿದ್ದರು. ನೀರನ್ನು ಪ್ರೋಕ್ಷಣೆ ಮಾಡಿ ಅದನ್ನೇನೂ ಮಡಿ ಮಾಡುತ್ತಿರಲಿಲ್ಲ. ಹಬ್ಬದ ದಿನ ಅದನ್ನು ಹಾಗೆಯೇ ತೆಗೆದು ಪುರೋಹಿತರಿಂದ ಕೈಗೆ ಕಟ್ಟಿಸಿಕೊಂಡು ಪೂಜೆ ಮಾಡುತ್ತಿದ್ದರು. ಅಂದಿನ ದಿನ ಅವರೆಲ್ಲರಿಗೂ ಊಟದ ಆಹ್ವಾನ ಕಳುಹಿಸಲಾಗುತ್ತಿತ್ತು. ಸಂಜೆ‌ ಬಂದು ಅವರು ಊಟವನ್ನು ಮಾಡಿಕೊಂಡು ಹೋಗುತ್ತಿದ್ದರು.’

‘ಎಷ್ಟೋ ಮುಸಲ್ಮಾನರ ಮದುವೆಗಳಿಗೆ ಹೋಗಿದ್ದೀನಿ. ಭಾನುವಾರ ಬರಬೇಡಿ, ಆಗ ನಮ್ಮ ಊಟ ಇರುತ್ತದೆ. ನೀವು ಶನಿವಾರವೇ ಬನ್ನಿ ಎಂದು ಹೇಳತಾ ಇದ್ರು. ನಿಮಗಾಗಿ ಮಾಡಿಸಿದ ವಿಶೇಷ ಖೀರು ಎಂದು ಮುಂದಿಟ್ಟಾಗ ಏನು ರುಚಿ ಅಂತೀರಾ’ ಎಂದು ನೆನಪನ್ನು ಸವಿಯುತ್ತಾರೆ. ‘ತರೀಕೆರೆನಲ್ಲಿದ್ದಾಗ ನಮ್ಮನೇಲಿ ಏನು ಕಾರ್ಯಕ್ರಮ ಆದರೂ ಅವರು ಬರಬೇಕು. ಅವರ ಮನೆಯಲ್ಲಿ ಏನು ಕಾರ್ಯಕ್ರಮಗಳಾದರೂ ನಾವು ಹೋಗಬೇಕು. ಅಸ್ಲಾಮ್ ಅವರ ಮನೆ ಮದುವೆಗೆ ಹೋಗಿದ್ದಾಗ, ನಮ್ಮ ಮನೆ ಮಂದಿಗೆಲ್ಲಾ ಉಡುಗೊರೆ ಕೊಟ್ಟು ಮರ್ಯಾದೆ ಮಾಡಿದರು. ಎಷ್ಟು ಪ್ರೀತಿ ತೋರಿಸಿದ್ರು ಅಂದ್ರೆ ನಮ್ಮವರು ನಮಗೆ ತೋರಿಸುವಷ್ಟೇ ಸಮಾನವಾದ ಪ್ರೀತಿಯನ್ನು ತೋರಿಸಿದರು. ಹೀಗೆ ಒಬ್ಬರು ನಡಕೊಂಡರೆ ಪ್ರಯೋಜನ ಇಲ್ಲ. ಹಿಂದೂ-ಕ್ರಿಶ್ಚಿಯನ್ನರು, ಹಿಂದೂ-ಮುಸಲ್ಮಾನರು, ಸವರ್ಣೀಯರು-ದಲಿತರು ಎಲ್ಲರೂ ಪರಸ್ಪರ ಹೀಗೇ ನಡಕೋಬೇಕು.

‘1948–49ರ ಸಮಯ. ಮಹಮದ್ ಪೈಗಂಬರ್ ಜಯಂತಿಯ ದಿನ ಸೈಯದ್ ಮೌಲ್ವಿ ಖಾಸಿಮ್ ಎನ್ನುವವರು ನಮ್ಮೂರಿಗೆ ಬಂದು, ಎರಡು ದಿನ ಸಂಜೆ 6ರಿಂದ 8ರವರೆಗೆ ಉಪನ್ಯಾಸ ಮಾಡಿದರು. ಸುಮಾರು 1500 ಜನ ಸೇರಿದ್ದರು. ಅವರಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಲ್ಲಾ ಇದ್ದರು. ಅಂದು ಅವರು ಮಾತನಾಡಿದ್ದು ಕುರಾನ್, ವೇದ ಮತ್ತು ಉಪನಿಷತ್ತುಗಳ ಬಗೆಗೆ - ಸಂಸ್ಕೃತ ಉಲ್ಲೇಖಗಳ ಸಮೇತ! ಬಾಲಕನಾದ ನನಗೆ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬರುವ ಆಸೆಯಾಯಿತು. ನಮ್ಮ ತಂದೆ ಅಂಚೆ ವೆಂಕಟರಾಮಯ್ಯ ಅಂತಾ, ಅವರು ಒಪ್ಪಿಕೊಂಡರು. ಮಾರನೆಯ ದಿನವೇ ಸಂಜೆ ನಾಲ್ಕು ಗಂಟೆಗೆ ಮೌಲ್ವಿಯವರು ಬಂದರು. ಅಲ್ಲಿ ವೇದ ವಿದ್ಯಾಪಾರಂಗತರಾದ ಇಪ್ಪತ್ತು ಇಪ್ಪತೈದು ಜನ ನೆರೆದಿದ್ದರು. ರಾಮಾಯಣ, ಮಹಾಭಾರತ, ಭಗವದ್ಗೀತೆಯ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಮೌಲ್ವಿಯವರು ಮಾತನಾಡಿದರು. ಅಂದು ಅವರು ನಮ್ಮ ಮನೆಯ ಜಗಲಿಯ ಮೇಲೆಯೇ ನಮಾಜು ಮಾಡಿದರು. ಅದೇ ಸಂದರ್ಭದಲ್ಲಿ ಬಿ.ಎಸ್. ಕೃಷ್ಣಮೂರ್ತಿಯವರು ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ಮಾಡಿದರು. ಮೌಲ್ವಿಯವರಿಗೆ ರೋಮಾಂಚನವಾಯಿತು. ಕೆಲವು ಕಗ್ಗಗಳನ್ನು ಅವರು ಬರೆದುಕೊಂಡರು ಕೂಡ. ಆಗ ಅವರಿಗೆ ಸಲ್ಲಿಸಿದ ಗೌರವಧನ‌ ಐದು ರೂಪಾಯಿ. ಅದು ಆಗಿನ‌ ಕಾಲಕ್ಕೆ ಬಹಳ ಒಳ್ಳೆಯ ಮೊತ್ತವೇ ಆಗಿತ್ತು.

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಅಬ್ದುಲ್ ಶಕಾಬ್ ಎಂಬ ಒಬ್ಬ ಶಿಕ್ಷಕರ ಬಗ್ಗೆ ಹೇಳುತ್ತಾ ‘ಬಹಳಾ ದೊಡ್ಡ ಪಂಡಿತರು. ಏನು ಇಂಗ್ಲಿಷ್ ಅಂತೀರಾ? ಅದ್ಭುತ, ಶೇಕ್ಸ್‌ಪಿಯರ್ ಕೂಡ ತಲೆಮೇಲೆ ಕೈ ಇಟಗೋಬೇಕು, ಹಂಗೆ! ವಿದ್ಯಾರ್ಥಿ ವಿದಾಯಕೂಟದಲ್ಲಿ ನಾವು ಅವರಿಗೆ ಪ್ರವರವನ್ನು ಹೇಳುತ್ತಾ ಎರಡೂ ಕಿವಿಗಳನ್ನು ಮುಟ್ಟಿಕೊಂಡು, ‘ವಸಿಷ್ಟ ಗೋತ್ರಃ ಆಶ್ವಾಲಾಯನ ಸೂತ್ರಃ ಸೂರ್ಯನಾರಾಯಣ ಶರ್ಮನ್ ಅಹಂ ಭೋ ಅಭಿವಾದಯೇ’ ಎನ್ನುತ್ತಾ ನಮಸ್ಕಾರ ಮಾಡಿದೆವು. ಆಗ ಅವರು ತಮ್ಮ ಬೂಟುಗಳನ್ನೇ ತೆಗೆದುಬಿಟ್ಟರು! ನಿಮಗೆಲ್ಲಾ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದರು. ಇದಕ್ಕೇನು ಹೇಳ್ತೀರಿ? ಹ್ಞೂಂ ಇದು ನಿಜಾನಮ್ಮಾ ಎನ್ನುವಂತೆ ದೃಢವಾದ ಮಾತುಗಳು ಪುಂಖಾನುಪುಂಖವಾಗಿ ಹೊಮ್ಮುತ್ತಿದ್ದವು. ನಾವು ಮಂತ್ರಮುಗ್ಧರಾಗಿದ್ದೆವು.

‍‘ರಾಷ್ಟ್ರಗೀತೆಗೆ ಮೊದಲು ನಮ್ಮ ಮುನಿಸಿಪಲ್ ಶಾಲೆಯಲ್ಲಿ ಪ್ರತೀ ಶುಕ್ರವಾರ ‘ಕುರಾನ್’ ಪಠಣವಿರುತ್ತಿತ್ತು- ಹಾಗೆಯೇ ‘ಸರ್ಮನ್ ಆನ್ ದ ಮೌಂಟನ್’ ಪಠಣವೂ. ಕುರಾನ್ಅನ್ನು ರೆಹಮಾನ್ ಖಾನ್ ಪಠಿಸುತ್ತಿದ್ದ. ಅದು ನಮಗೆಲ್ಲಾ ಬಾಯಿಪಾಠವಾಗಿ ಬಿಟ್ಟಿರೋದು’ ಎಂದು ಬಿಸ್ಮಿಲ್ಲಾಹ್ ಅಲ್-ರಹಮಾನ್ ಅಲ್-ರಹೀಮ್... ಎನ್ನುತ್ತಾ ಅವರ ನೆನಪಿನಲ್ಲಿದ್ದ ಕುರಾನಿನ ನಾಲ್ಕು ಸಾಲುಗಳನ್ನು ನಿರರ್ಗಳವಾಗಿ ಹೇಳಿಯೇ ಬಿಟ್ಟರು- ಜೊತೆಗೆ ವೇದ ಮಂತ್ರವನ್ನೂ.

‘ಮಗನಿಗೆ ಮುಂಜಿಯಾದಾಗ ಧಾರ್ಮಿಕ ಕಾರ್ಯಕ್ರಮಕ್ಕೆ ಬರಲು ದಲಿತರು ಹಿಂಜರಿದರು. ಆದರೆ, ನಾನು ಆಶ್ವಾಸನೆ ನೀಡಿ ಆಗ್ರಹಪೂರ್ವಕ‌ ಕರೆದಾಗ ಎಳೆ ಆಗುವ ಸಮಯಕ್ಕೆ ಸರಿಯಾಗಿ ಬಂದರು. ಆಶೀರ್ವಾದ ಕೂಡ ಮಾಡಿದರು. 2012ರಲ್ಲಿ ತರೀಕೆರೆಯ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮಗನ ಮದುವೆ ನಡೆಯಿತು. ದಲಿತರು, ಮುಸ್ಲಿಮರು ಎಲ್ಲಾ ಜನರನ್ನು ಕರೆದಿದ್ದೆವು. ಎಲ್ಲರೂ ಎಲ್ಲರ ಜೊತೆಯಲ್ಲಿ ಕುಳಿತಿದ್ದರು. ಊಟ ಮಾಡಿಕೊಂಡು ಸಂತೋಷವಾಗಿ ಹೋದರು’ ಎಂದು‌ ಹಳೆಯ ನೆನಪುಗಳನ್ನು‌ ಹಂಚಿಕೊಳ್ಳುವಾಗ ಅವರ ಮೊಗದ ಮೇಲೆ ವಿಶೇಷವಾದ ಸಂತೋಷ ಕಾಣುತ್ತಿತ್ತು.

ಅಬ್ದುಲ್ ರೆಹಮಾನ್ ಎಂಬ ಗೆಳೆಯನ ಬಗ್ಗೆ ಹೇಳುತ್ತಾ, ‘ಅವನು ಮೌಲ್ವಿಯಾಗಿದ್ದ. ಪ್ರತೀ ಭಾನುವಾರ ಬೆಳಿಗ್ಗೆ ಬಂದರೆ‌ ಮಧ್ಯಾಹ್ನದವರೆಗೂ ಇದ್ದು ಊಟ ಮಾಡಿಕೊಂಡು ಹೋಗೋನು. ಅವನು ಒಂದು ವರುಷದ ಕೆಳಗೆ ಹೋಗಿಬಿಟ್ಟ. ಆ ಸಂದರ್ಭದಲ್ಲಿ ಅವನ ಹೆಂಡತಿಯಿಂದ ಮಧ್ಯರಾತ್ರಿ ಮೂರು ಗಂಟೆಗೆ ಫೋನ್ ಬಂತು. ಯಜಮಾನರು ತೀರಿಕೊಂಡಿದ್ದನ್ನು ನಾನೇ ನಿಮಗೆ ತಿಳಿಸಬೇಕೆಂದು ಕರೆ ಮಾಡಿದ್ದೇನೆ. ಮಗನಿಗೂ ತಿಳಿಸಿಲ್ಲ. ಆದರೆ ನೀವು ದಯವಿಟ್ಟು ಬರಬೇಡಿ (ಕೋವಿಡ್ ಕಾಲ), ಬೆಳಿಗ್ಗೆಯೂ ಬರಬೇಡಿ. ನೀವು ಬಾರದಿದ್ದರೇನೇ ನನಗೆ ಸಂತೋಷ’ ಎಂದ ಸಬೀನಾರ ಸಜ್ಜನಿಕೆ‌ ಮತ್ತು ಇವರ ಬಗೆಗಿನ ಅವರ ಕಾಳಜಿಯ ಬಗ್ಗೆ ಮನದುಂಬಿ ಮಾತನಾಡುತ್ತಾರೆ. ‘ಕೋವಿಡ್ ಪ್ರಕರಣಗಳು ತಣ್ಣಗಾದ ಮೇಲೆ ಸಬೀನಾ ಅವರನ್ನು ಕಾಣಲು ಹೋದಾಗ ನನ್ನ ಎರಡೂ ಕೈಗಳನ್ನು ಭದ್ರವಾಗಿ ಹಿಡಿದುಕೊಂಡು ಗಳಗಳ ಅತ್ತುಬಿಟ್ಟಳು, ನನ್ನ ಮತ್ತು ಅಬ್ದುಲ್ ರೆಹಮಾನ್ ಸ್ನೇಹ ಹಾಗಿತ್ತು’ ಎಂದು ಆರ್ದ್ರರಾಗುತ್ತಾರೆ.

‘ಇವೊತ್ತು ಒಳ್ಳೆಯವರು ಕೇಡಿಗಳ ಹಾಗೆ ಕಾಣಿಸ್ತಿದ್ದಾರೆ, ಕೇಡಿಗಳು ಒಳ್ಳೆಯವರ ಹಾಗೆ ಕಾಣಿಸ್ತಿದ್ದಾರೆ, ಏನು‌ ಮಾಡೋದು...?’ ಅಸಹಾಯಕತೆಯೊಂದು ಅವರ ದನಿಯಲ್ಲಿತ್ತು. ಪ್ರಸಕ್ತ ಸಂದರ್ಭ ಸೃಷ್ಟಿಸಿರುವ ಒತ್ತಡಗಳಿಗೆ ಉತ್ತರ ರೂಪವಾಗಿ ‘ಬರೆಯಬೇಕಾದರೆ, ಬೆರೆಯಬೇಕಾದರೆ, ಕರೆಯಬೇಕಾದರೆ, ಅರಿಯ ಬೇಕಾದರೆ, ನುರಿಯಬೇಕಾದರೆ, ಎಚ್ಚರಿಕೆಯಿಂದ (provoke ಮಾಡಬಾರದು) ಇರಬೇಕು’ ಎಂಬ ಕಿವಿಮಾತನ್ನೂ ಹೇಳಿದರು. ಉಪಾಧ್ಯಾಯರುಗಳು ಉದಾರಿಗಳಾಗಿರಬೇಕು ಎಂಬ ಮಹತ್ವದ ಮಾತನ್ನೂ ಒತ್ತಿ ಹೇಳಿದರು. ನಾವು ಹೊರಟಾಗ ಅವರ ಮಗನ ಕೈಲಿ ನನಗೆ ಕುಂಕುಮ ತಾಂಬೂಲವನ್ನು ಕೊಡಿಸಿದರು! (ಅವರ ಸೊಸೆ ಊರಿಗೆ ಹೋಗಿದ್ದರು. ಅವರ ಶ್ರೀಮತಿಯವರು ಗತಿಸಿ ಬಹಳ ಕಾಲವಾಗಿದೆಯಂತೆ). ನೀವು ಊಟ ಮಾಡಿಕೊಂಡೇ ಹೋಗಬೇಕು ಎಂದು ಆಗ್ರಹಿಸಿದರು. ನಿಮ್ಮ ಮಾತುಗಳೇ ನಮಗೆ ಭೂರಿ ಭೋಜನವೆಂದು ಅವರನ್ನು ಬೀಳ್ಕೊಂಡು ಹೊರಗೆ ಬಂದಾಗ, ಚಪ್ಪಲಿ ಮೆಟ್ಟಿಕೊಂಡು ನಮ್ಮ ಜೊತೆಗೆ ಬಿಸಿಲಿನಲ್ಲಿ ಸ್ವಲ್ಪ ದೂರದವರೆಗೆ ಸಾಗಿಬಂದರು.‌ ಇಂತಹ ಮಾಗಿದ ಜೀವಿಗಳ ಅನುಭವದ ಮಾತುಗಳು ನಮ್ಮ ಸಾವಿನಗುಂಟ ಸಾಗಿಬರಲಿ. ಅವೇ ನಮಗೆ ಶ್ರೀರಕ್ಷೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.