ADVERTISEMENT

ಪ್ರತಿಕ್ರಿಯೆ | ಧೀಮಂತರಾಗದ ‘ಬುದ್ಧಿಜೀವಿ’ಗಳು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:30 IST
Last Updated 17 ಸೆಪ್ಟೆಂಬರ್ 2022, 19:30 IST

ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಪುರುಷೋತ್ತಮ ಬಿಳಿಮಲೆ ಅವರ ಲೇಖನದ ಕುರಿತು ಚರ್ಚೆ ನಡೆಯುತ್ತಿದೆ. ನಮ್ಮ ಸಂದರ್ಭದಲ್ಲಿ ಬುದ್ಧಿಜೀವಿ ಎಂಬ ಪದವೇ ವಿವಾದಾಸ್ಪದವಾಗಿದೆ. ತನ್ನ ಬುದ್ಧಿಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡವನು ಎಂಬ ಅರ್ಥವೂ ಅದರಿಂದ ಹೊರಡುವ ಕಾರಣದಿಂದಲೋ ಏನೋ ಅಡಿಗರು ಅದರ ಬದಲಿಗೆ ‘ಧೀಮಂತ’ ಎಂಬ ಪದವನ್ನು ಬಳಕೆಗೆ ತಂದರು. ಆದರೆ ಇಂದಿನ ಬುದ್ಧಿಜೀವಿಗಳು ತಾವೇ ಹಾಕಿಕೊಂಡ ಲಕ್ಷ್ಮಣ ರೇಖೆಗಳಿಂದಾಗಿ ಧೀಮಂತರಾಗದೆ ‘ಬುದ್ಧಿಜೀವಿ’ಗಳಾಗಿಯೇ ಉಳಿದದ್ದು ನಮ್ಮ ಸಮಾಜದ ದುರ್ದೈವವೆಂದೇ ಹೇಳಬೇಕು.

ಬಿಳಿಮಲೆ ಅವರು ಹೇಳುವ/ ತಿಳಿದಿರುವ ಬುದ್ಧಿಜೀವಿಗಳೆಂದರೆ ತಾವು ಮೆಚ್ಚುವ ರಾಜಕೀಯ ಪಕ್ಷವೊಂದರ ಜೊತೆ ಢಾಳವಾಗಿ ಗುರುತಿಸಿಕೊಂಡ, ಬಹುಸಂಖ್ಯಾತ ಜನಸಮುದಾಯ ಸರಿಯಿದ್ದಾಗಲೂ ಅದನ್ನು ಬಹಿರಂಗವಾಗಿ ಹೇಳಿದರೆ ಎಲ್ಲಿ ತಮ್ಮನ್ನು ಕೋಮುವಾದಿಗಳೆಂದು, ಪ್ರತಿಗಾಮಿಗಳೆಂದು ಬ್ರ್ಯಾಂಡ್ ಮಾಡಿಬಿಡುತ್ತಾರೋ ಎಂಬ ಆತಂಕದಲ್ಲಿರುವ, ಆ ಕಾರಣದಿಂದಾಗಿಯೇ ತಾವು ಮೆಚ್ಚಿಕೊಂಡ ಅಥವಾ ತಮ್ಮ ಒಲವಿನ, ಧೋರಣೆಯ ಪಕ್ಷದ ಆಡಳಿತದ ಪಡಸಾಲೆಯಲ್ಲಿಯೇ ವಿರಾಜಮಾನರಾಗುವುದನ್ನೇ ಧ್ಯೇಯವಾಗುಳ್ಳವರು ಎನಿಸುತ್ತದೆ. ತಮಗೆ ಮೆಚ್ಚುಗೆಯಾದ ರಾಜಕಾರಣಿಗಳು ಚುನಾವಣೆಗೆ ನಿಂತಾಗ ಅವರು ಕರುಣಿಸಿದ ಹುದ್ದೆಗೋ ಮತ್ತಿನ್ನಾವುದಕ್ಕೋ ಋಣ ತೀರಿಸುವ ಸಲುವಾಗಿಯೋ ಇಲ್ಲವೆ ಮತ್ತೆ ಅಧಿಕಾರಕ್ಕೆ ಬಂದಾಗ ತಮ್ಮನ್ನು ಮರೆಯದಿರಲೆಂದೋ ಅವರ ಪರವಾಗಿ ಪ್ರತ್ಯಕ್ಷವಾಗಿಯೇ ಚುನಾವಣಾ ಪ್ರಚಾರ ನಡೆಸುವುದರಲ್ಲಿ ಕೃತಾರ್ಥತೆಯ ಭಾವ ಅನುಭವಿಸುವವರನ್ನಷ್ಟೇ ಅವರು ದೃಷ್ಟಿಯಲ್ಲಿಟ್ಟುಕೊಂಡಂತಿದೆ.

ಈಗ ಆಡಳಿತ ನಡೆಸುತ್ತಿರುವ ಪಕ್ಷವೇನೂ ಮೇಲಿನಿಂದ ಇಳಿದುಬಂದದ್ದಲ್ಲ; ಇಲ್ಲವೇ ದೋಷರಹಿತವೂ ಅಲ್ಲ. ಆದರೆ ಹಿಂದೆ ಆಡಳಿತ ನಡೆಸಿದ ಪಕ್ಷವೂ ಢಾಳವಾಗಿಯೇ ತಪ್ಪಿ ನಡೆದಾಗಲೂ ಜಾಣಕುರುಡ ಮತ್ತು ಜಾಣಕಿವುಡರಂತಿದ್ದು ಟೀಕಿಸುವ ಗೋಜಿಗೇ ಹೋಗದೆ ತಮಗೆ ಒಪ್ಪಿಗೆಯಿಲ್ಲದ ಸರ್ಕಾರವೆಂಬ ಕಾರಣಕ್ಕೆ ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತೆ’ ಈಗಿನ ಕೇಂದ್ರ/ರಾಜ್ಯ ಸರ್ಕಾರದ ಪ್ರತಿ ನಡೆಯಲ್ಲೂ ದೋಷ ಕಾಣುವುದು ಬುದ್ಧಿಜೀವಿಗಳ ರೀತಿಯೆ? ಹೀಗೆ ಸಮತೋಲನದ ದೃಷ್ಟಿ ಕಳೆದುಕೊಂಡ ಕಾರಣದಿಂದಲೇ ಇಂದು ಜನ ಇವರು ಹೇಳುವ ‘ಬುದ್ಧಿಜೀವಿ’ಗಳ ವಿಷಯಕ್ಕೆ ಒಂದು ಬಗೆಯ ಅವಜ್ಞೆ ಅಥವಾ ಅಲರ್ಜಿ ಬೆಳೆಸಿಕೊಂಡಿದ್ದರೆ ಆಶ್ಚರ್ಯವಿಲ್ಲ. ಜನರೇ ಹೀಗಿದ್ದಾಗ ಇನ್ನು ಆಳುವ ಸರ್ಕಾರಕ್ಕೆ ಪಕ್ಷಪಾತ ಪೂರಿತರಾದವರ ಬಗ್ಗೆ ಧೂಮ್ರ ವರ್ಣ ಕವಿದಿದ್ದರೆ ಅದನ್ನು ಅಷ್ಟೊಂದು ಆಶ್ಚರ್ಯವೆನ್ನಲು ಸಾಧ್ಯವೆ?

ADVERTISEMENT

ನವೋದಯ ಕಾಲದ, ಪ್ರಗತಿಶೀಲ ಕಾಲದ ಕುವೆಂಪು, ಕಾರಂತ, ಅನಕೃ, ನಿರಂಜನ ಇವರು ಆಡಳಿತ ನಡೆಸುವಪಕ್ಷದ ಸರ್ಕಾರದ ಜೊತೆ ಗುರುತಿಸಿಕೊಂಡಿರದೆ ಇದ್ದ ಕಾರಣಕ್ಕೆ ಅವರು ಯಾರನ್ನೇ ಟೀಕಿಸಿದರೂಅದರಲ್ಲಿ ಪಕ್ಷಪಾತತನ ಗುರುತಿಸುವಂತಿರುತ್ತಿರಲಿಲ್ಲ. ಮತ್ತು ಅವರ ಮಾತಿಗೆ ಬೆಲೆ ಇರುತ್ತಿತ್ತು. ಬಿಳಿಮಲೆಯವರು ಹೇಳುವ ಬುದ್ಧಿಜೀವಿಗಳಿಗೆ ಅಂಥ ಸಮತೋಲನ ದೃಷ್ಟಿ ಇದೆಯೆ? ಪ್ರಭುತ್ವವನ್ನು ಪ್ರಶ್ನಿಸುತ್ತಲೇ ಬಂದ ಸಾಹಿತಿಗಳು ಪ್ರಭುತ್ವದ, ಅಧಿಕಾರದ ಪಡಸಾಲೆಗಳಲ್ಲೇ ವಿರಾಜಮಾನರಾದ ಬದಲಾವಣೆ ಬಂದದ್ದು ಯಾವಾಗ ಎಂಬ ಸಂಶೋಧನೆ ಮಾಡಿದರೆ ಕುತೂಹಲಪೂರ್ಣ ಫಲಿತಾಂಶಗಳು ಹೊರಹೊಮ್ಮಬಹುದು.

–ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.